ಮಾತ್ರೆ ದೇವೋ ಭವ
Team Udayavani, Oct 14, 2018, 6:00 AM IST
ಆಗ ನಾವು ಪ್ರೈಮರಿ ಶಾಲೆಗೆ ಹೋಗುತ್ತಿದ್ದ ದಿನಗಳು. “”ಅಮ್ಮೊರೆ ಮಾತ್ರೆ ಕವರ್ ಕೊಡಿ, ವಸಿ ಹೆಂಚು ಉಜ್ಜಕ್ಕೆ”- ಇದು ನಮ್ಮ ಮನೆ ಸಹಾಯಕಿ ಲಕ್ಷ್ಮಮ್ಮ ದಿನಂಪ್ರತಿ ಅಮ್ಮನಲ್ಲಿ ಇಡುತ್ತಿದ್ದ ಬೇಡಿಕೆ. ಅದೆಲ್ಲಿಂದ ಆಕೆಗೆ ಈ ಐಡಿಯಾ ಬಂದಿತ್ತೋ ಕಾಣೆ, ಕೊಂಚ ಕರಕಲಾಗಿದ್ದ ಚಪಾತಿ ಮಾಡುವ ಹಿಂಡಾಲಿಯಂ ಹಂಚನ್ನು ಮಾತ್ರೆಗಳ ಖಾಲಿ ಕವರ್‌ನಲ್ಲಿ ಗೆರೆ ಮೂಡುವಂತೆ ಉಜ್ಜಿ ಉಜ್ಜಿ ಬೆಳ್ಳಗಾಗಿಸಿಬಿಡುತ್ತಿದ್ದಳು.
“”ಅಯ್ಯೋ, ನಿನಗೆ ದಿನಾ ಮಾತ್ರೆ ಕವರ್ ಎಲ್ಲಿಂದ ತಂದು ಕೊಡಲಿ, ನಮ್ಮನೇಲಿ ದಿನಾ ಗುಳಿಗೆ/ಮಾತ್ರೆ ನುಂಗೋರು ಯಾರೂ ಇಲ್ಲ ಕಣೆ, ಹಂಗೆ ಕ್ಲೀನಾಗಿ ಸಬೀನಾ ಹಾಕಿ ಉಜ್ಜು” ಎಂದು ಅಮ್ಮ ಕೆಲವೊಮ್ಮೆ ಅವಳನ್ನು ಸುಮ್ಮನಾಗಿಸುತ್ತಿದ್ದರು. “”ಆರತಿ, ಅಕೀಗ್ ಯಾವದರೆ ಖಾಲಿ ಗುಳಗಿ ಕವರ್ ಇದ್ರೆ ಹುಡುಕಿ ಕೊಡವಾ” ಎಂದು ನನಗೆ ಇಂಥ ಚಿಲ್ಲರೆ ಕೆಲಸವನ್ನೂ ಆಗಾಗ ಅಂಟಿಸುತ್ತಿದ್ದರು. ಸರಿ, ಮನೆಯೆಲ್ಲ ಹುಡುಕಾಡಿ, ಅಮ್ಮ ಎಂದೋ ತಲೆನೋವು ಬಂದಾಗ ತೆಗೆದುಕೊಂಡ ಅನಾಲ್ಜಿನ್ ಮಾತ್ರೆ ಅಥವಾ ನಾವು ಮೂವರು ಹೆಣ್ಣು ಮಕ್ಕಳು ಎಂದಾದರೊಮ್ಮೆ ಹೊಟ್ಟೆನೋವೆಂದು ಒ¨ªಾಡಿದಾಗ ನುಂಗಿದ ಬರಲ್‌ಗಾನ್ ಟ್ಯಾಬ್ಲೆಟ್ ಖಾಲಿ ಕವರ್ ಅಥವಾ ನಮ್ಮ ತಂದೆಯವರು ತಮ್ಮ ಬೀಪೀ ಮಾತ್ರೆ ನುಂಗಿದ ನಂತರ ಬಿಸಾಡದೆ ನನಗೆ ಉಡುಗೊರೆ ಎಂಬಂತೆ ಕೊಡುತ್ತಿದ್ದ ಖಾಲಿ ಕವರ್‌ಗಳನ್ನು ಲಕ್ಷ್ಮಮ್ಮನಿಗೆ ಬೇಕು ಎಂದೇ ಜೋಪಾನವಾಗಿ ತೆಗೆದಿಟ್ಟ ನನ್ನ ಜಾಣ್ಮೆಗೆ ನಾನೇ ಭೇಷ್ ಎಂದು ನಿಧಿ ಸಿಕ್ಕವಳಂತೆ ಹುಡುಕಿ ಕೊಡುತ್ತಿದ್ದೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಮನೆಯೇ ಮಾತ್ರಾಲಯ, ಮನಸೇ ರೋಗಾಲಯ ಎಂದು ಹಾಡಿಕೊಳ್ಳುತ್ತ ದಿನಬೆಳಗಾದರೆ ಮಾತ್ರೆ ನುಂಗಣ್ಣರೇ ಮನೆಯಲ್ಲಿರುವಾಗ ಕೆಜಿಗಟ್ಟಲೆ ಮಾತ್ರೆ ಕವರ್ ಕೊಡಬಹುದಿತ್ತು !
ಆಗೆಲ್ಲ ಎಂದಾದರೊಮ್ಮೆ ಕಾಡುತ್ತಿದ್ದ ಸಾಮಾನ್ಯ ಕೆಮ್ಮು-ನೆಗಡಿ-ಜ್ವರ-ಗಂಟಲು ನೋವು ಹೀಗೆ ಸಣ್ಣ ಪುಟ್ಟ ಕಾಯಿಲೆಗಳು ನಮ್ಮ ರಸ್ತೆಯ ಮೂಲೆಯಲ್ಲಿರುವ ಭಟ್ ವೈದ್ಯರು ಬೆಳ್ಳನೆಯ ಕಾಗದದಲ್ಲಿ ಸುತ್ತಿ ಕೊಡುವ ಕೆಂಪು-ಹಳದಿ ಬಣ್ಣದ ಗುಳಿಗೆಗಳು, ದೊಡ್ಡ ಸೈಜಿನ ಬಿಳಿ ಪ್ಲಾಸ್ಟಿಕ್ ಕ್ಯಾನಿನಲ್ಲಿ ಬೀಟ್ರೂಟ್ ರಸದಂತಿದ್ದ ಕೆಂಪು ದ್ರವದ ಟಾನಿಕ್‌ನಿಂದಲೇ ಮೂರ್ನಾಲ್ಕು ದಿನದೊಳಗೆ ಸ್ಲೋಮೋಶನ್‌ನಲ್ಲಿ ಮಾಯವಾಗಿಬಿಡುತಿತ್ತು !
ಇನ್ನು ಶೀತಜ್ವರಗಳಂಥ ಚಿಕ್ಕಪುಟ್ಟ ರೌಡಿ ಬಾಧೆಗಳು ಅವರು ಕೊಡುವ ಸಾಮಾನ್ಯ ಗೋಲಿ ಅರ್ಥಾತ್ ಗುಳಿಗೆಗೆ ಹೆದರಿ ಕಾಲು ಕೀಳದಿದ್ದರೆ ಬೇರೆ ಎಲ್ಲಾದರೂ ದೊಡ್ಡ ಡಾಕ್ಟರ್ ಬಳಿ ತೋರಿಸಿ ಎಂದು ಕೈ ತೊಳೆದುಕೊಂಡು ಬಿಡುತ್ತಿದ್ದರು. ಒಮ್ಮೆ ನಾನು ಸಣ್ಣವಳಿದ್ದಾಗ ಆಟವಾಡುತ್ತ ಜಾರಿ ಬಿದ್ದು ಗದ್ದ ಹರಿದುಹೋಗಿತ್ತು. ಒಂದೆ ಸಮನೇ ದಳದಳ ರಕ್ತ ಸುರಿಯುತ್ತಿದ್ದ ನನ್ನ ಗದ್ದವನ್ನು ಅಮ್ಮ ತಮ್ಮ ಸೆರಗಿನಿಂದ ಒತ್ತಿ ಹಿಡಿದು ಓಡಿದ್ದು ನಮ್ಮ ಏರಿಯಾದಲ್ಲಿ ಏಕಚಕ್ರಾಧಿಪತ್ಯದಂತೆ ಮೆರೆಯುತ್ತಿದ್ದ ಇದೇ ಭಟ್ ವೈದ್ಯರ ಬಳಿ.
ಒಂದು ಲೋಕಲ್ ಅನೆಸ್ತೇಸಿಯಾ ಚುಚ್ಚುಮದ್ದನ್ನೂ ಕೊಡದೆ ವೈದ್ಯರಿಗೆ ಚೆಲ್ಲಾಟ, ರೋಗಿಗೆ ಪ್ರಾಣಸಂಕಟ ಎಂಬಂತೆ ನನ್ನ ಚೀರಾಟ-ಕೂಗಾಟಗಳ ನಡುವೆಯೇ ನನ್ನ ಗದ್ದವನ್ನು ದಬ್ಬಣದಂಥ ಸೂಜಿಯಿಂದ ಸರಸರನೆ ಹೊಲೆದು ಗಿನ್ನೆಸ್ ದಾಖಲೆ ಸೃಷ್ಟಿಸಿಬಿಟ್ಟರು. ಈಗಲೂ ವಕ್ರವಾಗಿ ಹೊಲಿಗೆ ಬಿದ್ದ ನನ್ನ ಗದ್ದ ಮುಟ್ಟಿ ನೋಡಿದಾಗಲೆಲ್ಲ ಭಟ್ ವೈದ್ಯರ ಸೂಜಿಯ ನೆನಪು ಚುಚ್ಚುತ್ತದೆ !
ಮತ್ತೂಂದು ಸಂದರ್ಭದಲ್ಲಿ ಅಮ್ಮನಿಗೆ ಒಂದು ವಾರದವರೆಗೆ ಕಾಡಿದ ಜ್ವರದ ತಾಪಕ್ಕೆ ಟೈಫಾಯ್ಡ ಮಾತ್ರೆಗಳ ಓವರ್‌ಡೋಸ್ ನೀಡಿ ಬಿಟ್ಟಿದ್ದರು. ಹೀಗೆ, ನಿರಂತರವಾಗಿ ನಮ್ಮಂಥ ಗಟ್ಟಿ ಜೀವಗಳ ಮೇಲೆ ತಮ್ಮ ಪ್ರಯೋಗಗಳನ್ನು ನಡೆಸುತ್ತಲೇ ತಮ್ಮ ವೈದ್ಯವೃತ್ತಿಯ ಅನುಭವ ಪಾಕವನ್ನು ಗಟ್ಟಿ ಮಾಡಿಕೊಂಡು, ನಂತರದ ದಿನಗಳಲ್ಲಿ ತಮ್ಮ ಕ್ಲಿನಿಕ್‌ನಲ್ಲಿ ತುಂಬಿ ತುಳುಕುತ್ತಿರುವ ರೋಗಿಗಳನ್ನು ನಿಭಾಯಿಸಲು ಚಂದನೆಯ ರಿಸೆಪ್ಶನಿಸ್ಟ್ ಒಬ್ಬಳನ್ನು ಕೂಡ ನೇಮಿಸಿ, “ಭಟ್ ಡಾಕ್ಟರ್ ಕೈಗುಣ ಬಹಳ ಚೆನ್ನಾಗಿದೆ’ ಎಂಬ ಕೀರ್ತಿ ಪಡೆದರು.
ನಾನು ಹತ್ತನೆಯ ತರಗತಿ ಓದುತ್ತಿದ್ದಾಗ ನನಗೆ ಮೈಗ್ರೇನ್ ಸಮಸ್ಯೆ ಕಾಣಿಸಿಕೊಂಡು ತಲೆಶೂಲೆಯಿಂದ ಬಹಳ ಭಾದೆ ಪಡುತ್ತಿದ್ದೆ. ನಮ್ಮ ತಂದೆಯವರು ಭಟ್ ವೈದ್ಯರನ್ನು ಬಿಟ್ಟು ಒಬ್ಬ ಇಎನ್‌ಟಿ ವೈದ್ಯರೊಬ್ಬರನ್ನು ಕಷ್ಟಪಟ್ಟು ಹುಡುಕಿ ಅವರ ಬಳಿಗೆ ಕರೆದೊಯ್ದಾಗ ಆ ಮಹಾನುಭಾವರು, ಪಕ್ಕಾ ಗುಳಿಗೆ ದ್ವೇಷಿಗಳೇ ಇರಬೇಕು, ಒಂದು ಮಾತ್ರೆಯನ್ನೂ ಕೊಡದೆ, “”ಸೂಜಿ ಚಿಕಿತ್ಸೆ ಮಾಡಿಸಿ ಸರಿ ಹೋಗುತ್ತದೆ” ಎಂಬ ಸಲಹೆ ನೀಡಿದಾಗ ಭಯದ ಜೊತೆಗೆ ಆಗ ಜನಪ್ರಿಯವಾದ ಮಹಾಭಾರತ ಸೀರಿಯಲ್ಲಿನ ಭೀಷ್ಮರ ಬಾಣಗಳ ಮಂಚವೂ ನೆನಪಾಗಿ, ಹೆದರಿ ಕಾಲ್ಕಿತ್ತಿದ್ದೆ !
ಈ ತಲೆಸಿಡಿತದ ಪರಿಹಾರಕ್ಕೆ ಹಣೆಗೆಲ್ಲ ಭಸ್ಮದಂತೆ ಅಮೃತಾಂಜನ ಬಳಿದು ದಿಂಬಿನ ಕೆಳಗಿಟ್ಟ ನನ್ನ ಕೆಂಪು ರಿಬ್ಬನ್ ಅನ್ನು ಹಣೆಗೆ ಬಿಗಿದು ಫೂಲನ್ ದೇವಿಯಂತೆ ಅಡುಗೆ ಕೊಣೆಯಲ್ಲಿ ಮುಂಜಾನೆ ಪ್ರತ್ಯಕ್ಷಳಾಗುತ್ತಿದ್ದೆ. ದೊಡ್ಡ ಕಪ್ಪಿನಲ್ಲಿ ಅಮ್ಮನ ಬಿಸಿ ಬಿಸಿ ಚಹಾ ಹೀರುತ್ತ ರಾತ್ರಿ ಓದಿಕೊಂಡರಾಯಿತು ಎಂದು ಸಮಾಧಾನ ಮಾಡಿಕೊಳ್ಳುವುದು, ನಸುಕು ಬೇಗ ಏಳ್ಳೋಣ ಎಂದು ಸ್ವಯಂ ಅನುಕಂಪದಿಂದ ರಾತ್ರಿ ಒಂಬತ್ತಕ್ಕೆ ಪವಡಿಸಿ ಮುಂಜಾನೆಯಾಗುತ್ತಲೇ ತಲೆಸಿಡಿತ ಎಂಬ ಕಾರಣಕ್ಕೆ ತಡವಾಗಿ ಎದ್ದು ಅಪರಾಧಿ ಭಾವದಿಂದ ನಿಧಾನವಾಗಿ ಚಹಾ ಹೀರುವುದು ನನ್ನ ನಿತ್ಯದ ದಿನಚರಿಯಾಗಿತ್ತು.
ಇನ್ನು ದಿನವೂ ನನ್ನ ಹಣೆಗೆಲ್ಲ ಅಮೃತಾಂಜನ ಬಳಿದುಕೊಳ್ಳುವ ಪರಿಗೆ ಈ ಅಮೃತಾಂಜನದ ಡಬ್ಬಿಗಳನ್ನು ನಮ್ಮ ದಿನಸಿ ಪಟ್ಟಿಯಲ್ಲಿ ಸೇರಿಸುವುದು ಮಾಮೂಲಿಯಾಯಿತು. ಪರಿಣಾಮ ತಲೆ ನೋವಿರುವವರು ನನ್ನ ಬಳಿ ಕೂತರೂ ಸಾಕು, ಅವರ ತಲೆಶೂಲೆ ಗಾಯಬ್! ಆದರೆ, ಮುಂದೆ ಒಂದೆರಡು ತಿಂಗಳಲ್ಲಿ ಯಾವ ಜನ್ಮದ ಪುಣ್ಯವೋ ಎಂಬಂತೆ ನನ್ನ ಮೈಗ್ರೇನ್ ಕಾಯಿಲೆ ನನ್ನ ಬಿಟ್ಟು ಬೇರೆ ದೇಶಕ್ಕೆ ಮೈಗ್ರೇಟ್ ಆಗಿ ಅಂತೂ ನಾನು ಒಳ್ಳೆಯ ಅಂಕಗಳಿಂದ ಪಾಸಾಗುವಂತೆ ಮಾಡಿ ಪುಣ್ಯಕಟ್ಟಿಕೊಂಡಿತು. ಬಾಲ್ಯದಲ್ಲಿ ಸಣ ಪುಟ್ಟ ಕಾಯಿಲೆಗೆ ಮನೆಮದ್ದೆ ನಡೆಯುತ್ತಿತ್ತು.ವಿಪರೀತ ನೆಗಡಿಯಾಗಿ ನನಗೆ ಸೈನಸ್ ಆದಾಗ ಶೀತ ಹೀರಿಕೊಳ್ಳಲು ಅಮ್ಮನ ಕೈಯಿಂದ ಶುಂಠಿ ತೇದು ಹಣೆಗೆಲ್ಲ ಹಚ್ಚಿಸಿಕೊಂಡಿದ್ದೆ, ಹೊಟ್ಟೆಗಳ ಹುಳಕ್ಕೆ ಬೇಗ ಎದ್ದು ಖಾಲಿ ಹೊಟ್ಟೆಯಲ್ಲಿ ಹರಳೆಣ್ಣೆ ಕುಡಿದಿದ್ದೆ. ಲೂಸ್‌ಮೋಶನ್ ಆದಾಗ ಮೆಂತ್ಯೆಕಾಳು ಮುಕ್ಕಿದ್ದೆ. ಆದರೆ, ಈಗ ಇಂಥ ಮನೆಮದ್ದುಗಳು ಈಗ ಎಲ್ಲಿ?
ಆಗೇನೋ ಮಾತ್ರೆಗಳ ಮಂತ್ರದಂಡ ಬಳಸದೆ ಕಾಯಿಲೆಗಳನ್ನು ವಾಸಿ ಮಾಡಿಕೊಂಡಿದ್ದಾಯಿತು. ಆದರೆ, ಇಂದಿನ ಕಾಲಮಾನದಲ್ಲಿ ನೂರೆಂಟು ಕಾಯಿಲೆಗಳು, ಕಂಪ್ಯೂಟರ್ ವೈರಸ್‌ನಂತೆ ಅಪ್‌ಡೇಟ್ ಆಗಿ ಹೊಸ ಹೊಸ ರೋಗಗಳನ್ನು ಹರಡುತ್ತಿವೆ. ಪಂಚಾಂಗದಲ್ಲಿ ರಾಹುಕಾಲ ಗುಳಿಕಕಾಲಗಳನ್ನು ನೋಡಿಕೊಂಡು ಮುಖ್ಯವಾದ ಕೆಲಸ ಆರಂಭ ಮಾಡಿದರೆ, ಕೆಲವರಿಗೆ ಮುಂಜಾನೆಯಿಂದ ರಾತ್ರಿಯವರೆಗೂ ಗುಳಿಗೆಕಾಲ ಮಾತ್ರ! ಮನೆ-ಮನೆಗಳಲ್ಲಿ ಅಧಿಕವಾಗುತ್ತಿರುವ ಮೆಡಿಕಲ್ ಕಿಟ್‌ಗಳೇ ಇದಕ್ಕೆ ಸಾಕ್ಷಿ !
ಈಗ ಜೆಡ್ಡುಜಾಪತ್ರೆಯೆಂದೆಲ್ಲ ಕ್ಲಿನಿಕ್ ಕಡೆ ಹೋದಾಗಲೆಲ್ಲ ಆರೋಗ್ಯ ವಿಮೆ- ಮೆಡಿಕಲ್ ಇನ್ಸೂರೆನ್ಸ್ ನೆಪದಲ್ಲಿ ರಾಶಿ ವಿಟಮಿನ್ ಮಾತ್ರೆಗಳು, ಮುಲಾಮುಗಳು, ನೋವುನಿವಾರಕಗಳು- ಎಂದೆಲ್ಲ ಚೀಲದಲ್ಲಿ ತರಕಾರಿ ತರುವಂತೆ ಮಾತ್ರೆಗಳನ್ನು ಹೊತ್ತು ತರುವುದುಂಟು. ಕಲಿಕೆಯ ದಿನಗಳಲ್ಲಿ ಎಂತೆಂಥ ಕೋರ್ಸ್‌ಗಳನ್ನು ಮುಗಿಸಿದರೂ ಈ ವಿಟಮಿನ್ ಕೋರ್ಸ್‌ಗಳನ್ನು ಮುಗಿಸುವುದು ಕಷ್ಟ. ಪ್ರತಿಬಾರಿ ವೈದ್ಯರ ಬಳಿ ಹೋಗುವಾಗಲೂ, “ಡಾಕೆó ! ನೋಡಿ ಕೂದಲು ಉದುರಿ ಇಲಿ ಬಾಲದ ಥರ ಆಗ್ತಾ ಇದೆ, ಉಗುರು ಯಾಕೋ ಬೆಳೀತಾನೆ ಇಲ್ಲ’ ಎಂದೋ, “ಮಧ್ಯಾಹ್ನ ಒಂದೆರಡು ಗಂಟೆ ಮಲಗಿ ಎದ್ದ ಮೇಲೆ ಯಾಕೋ ಸುಸ್ತು’ ಎಂದೋ ಬಣ್ಣ ಬಣ್ಣದ ವಿಟಮಿನ್ ಮಾತ್ರೆಗಳನ್ನು ಬರೆಸಿಕೊಂಡು ಬರುವುದು ನನ್ನ ಹುಚ್ಚು .
ಸಣ್ಣವಳಿದ್ದಾಗ ಅಮ್ಮ ಆಗಾಗ, “”ಅಯ್ಯೋ, ಸೊಂಟ ತುಂಬಾ ನೋವು ಕಣೆ’ ಎಂದು ಗೋಳಾಡುವುದನ್ನು ಕೇಳಿ ಪಾಪ ಅನ್ನಿಸಿ, “”ಅಮ್ಮ, ಸೊಂಟನೋವು ಹಾಗಂದ್ರೆ ಏನು?” ಎಂಬ ಮುಗ್ಧ ಪ್ರಶ್ನೆ ಕೇಳಿದ ತಪ್ಪಿಗೆ ಈಗ ಕೆಲವರ್ಷಗಳ ಹಿಂದೆ ಅದರ ಅನುಭವ ಸರಿಯಾಗಿಯೇ ಆಗಿತ್ತು. ಅಷ್ಟೇ ಅಲ್ಲದೆ, ಖೋ ಕೊಡುವಂತೆ ಅದರ ಕುಟುಂಬದಿಂದಲೇ ಮತ್ತೂಂದಿಷ್ಟು ಬೆನ್ನು ಹುರಿಯ ಸಮಸ್ಯೆ ಬೇಡದ ಅತಿಥಿಯಾಗಿ ಎಂಟ್ರಿ ಕೊಟ್ಟು ಬೀಡು ಬಿಟ್ಟಿದ್ದವು.
ಬಾಲ್ಯದಲ್ಲಿ ನನ್ನ ನಡಿಗೆಯ ಕಲಿಕೆಯಲ್ಲಿಯೇ ಏನೋ ಎಡವಟ್ಟು ಆಗಿದೆಯೋ ಎಂಬಂತೆ ಈಗಲೂ ಆಗಾಗ ಎಡವಿ ಬೀಳುತ್ತಿದ್ದೆ. ಪಾದ ಉಳುಕಿಸಿಕೊಳ್ಳುವುದು ಮಾಮೂಲಿ. ಹಾಗಾಗಿ, ನಮ್ಮ ಊರಿನ ಮೂಲೆಮೂಲೆಯಲ್ಲಿರುವ ಮೂಳೆ ವೈದ್ಯರ ಒಡನಾಟ ನನಗೆ ಚೆನ್ನಾಗಿಯೇ ಇತ್ತು.
ಆಗಾಗ ಯಜಮಾನರಿಗೆ ಮೊಣಕೈಯಿಂದ ತಿವಿಯುತ್ತಿದ್ದ ನನಗೆ ತಕ್ಕ ಶಾಸ್ತಿ ಎಂಬಂತೆ ಒಮ್ಮೆ ಸಿಕ್ಕಾಪಟ್ಟೆ ಟೆನಿಸ್ ಎಲ್ಬೋ ಸಮಸ್ಯೆ ಶುರುವಾಯಿತು. ನನ್ನ ಕೆಲವು ಸ್ವಯಂಚಿಕಿತ್ಸೆÕಗಳಿಗೆ ನನ್ನ ನೋವು ಬಾಗಲಿಲ್ಲ. ಮೊದಲು ಪತಿಯಿಂದ ಸಿಂಪತಿ, ನಂತರ ನಾಚುರೋಪತಿ, ಬಳಿಕ ಹೋಮಿಯೋಪತಿ ಪ್ರಯತ್ನಿಸಿ ಕೊನೆಗೆ ಸೀತಾಪತಿಗೇ ಮೊರೆಹೋದೆ. ಮೊಣಕೈ ನೋವು ಕಡಿಮೆಯಾದರೆ ಅದೇ ಕೈಯಿಂದ ರಾಮಕೋಟಿ ಬರೆಯುವ ಹರಕೆ ಹೊತ್ತುಕೊಳ್ಳುವ ಯೋಚನೆಯಲ್ಲಿದ್ದೆ. “”ಅಮ್ಮ, ನೀನು ಒಂದು ಪುಟ ಬರೀ, ಅದನ್ನೇ ಜೆರಾಕ್ಸ್ ಮಾಡಿಸಿಕೊಡ್ತೀನಿ” ಎಂದು ನನ್ನ ಮುದ್ದು ತರೆಲ ಮಗರಾಯ ಕೂಡ ಅದ್ಭುತವಾಗಿ ಸ್ಪಂದಿಸಿದ್ದ !
ನನ್ನ ಗೆಳತಿಯ ಪರಿಚಯದ ಹ್ಯಾರಿ ಎನ್ನುವ ಮೂಳೆ ವೈದ್ಯರೊಬ್ಬರ ಬಳಿ ತೋರಿಸಿ¨ªಾಯಿತು. ಅವರು ನನ್ನ ಟೆನಿಸ್ ಎಲ್ಬೋ ಕಡಿಮೆಯಾಗಲು ಒಂದು ಸ್ಟ್ರಾಂಗ್ ಇಂಜೆಕ್ಷನ್ ಕೊಟ್ಟು, “ಈ ಇಂಜೆಕ್ಷನ್ ಕೊಟ್ಟ ನೋವು ರಾತ್ರಿ ಕಾಡಿದರೆ ನುಂಗಲು ಮಾತ್ರೆ, ಆ ಸ್ಟ್ರಾಂಗ್ ಮಾತ್ರೆಗೆ ಅಸಿಡಿಟಿಯಾದರೆ ಮತ್ತೂಂದು ಗುಳಿಗೆ ತಗೊಳ್ಳಿ. ಈ ಮುಲಾಮು ನಿಮ್ಮ ಯಜಮಾನರಿಂದ ಹಚ್ಚಿಸಿಕೊಳ್ಳಿ. ಒಂದು ವಾರ ಕೆಲಸ ಮಾಡದೆ ಚೆನ್ನಾಗಿ ರೆಸ್ಟ್ ತೊಗೊಳ್ಳಿ’ ಎಂದು ಸಲಹೆ ನೀಡುವಾಗ “ವೈದ್ಯೋ ನಾರಾಯಣೋ ಹ್ಯಾರಿ’ ಎಂದು ಮನಸಿನಲ್ಲೇ ವಂದಿಸಿದ್ದೆ !
ಮಾತ್ರೆಗೂ ನನಗೂ ಎಲ್ಲಿಲ್ಲದ ನೆಂಟಸ್ತಿಕೆ ಎನ್ನುವುದನ್ನು ನಾನು ಆಗಾಗ ಮನೆಯವರ ಮುಂದೆ ಸಾಬೀತು ಪಡಿಸುತ್ತಲೆ ಇರುತ್ತೇನೆ. ಒಮ್ಮೆ ನಾವು ಕುಟುಂಬ ಸಮೇತ ತಿರುಪತಿಗೆ ಹೊರಟಿದ್ದೆವು. ನಮ್ಮ ಅತ್ತೆಯವರು ತಿಮ್ಮಪ್ಪನ ಹುಂಡಿಗೆ ಹಾಕಲು ಮುಡಿಪಿನ ಗಂಟು ಸಿದ್ಧ ಮಾಡಿಕೊಂಡರೆ ನಾನು ಮಾತ್ರೆಗಳ ಕಿಟ್‌ನೊಂದಿಗೆ ತಯಾರಾದೆ. ಬೆಟ್ಟ ಹತ್ತಿ ಕಾಲುಗಳು ಕಿರುಗುಟ್ಟಿದರೆ ನೋವುನಿವಾರಕಗಳು, ಅದರಿಂದ ಹೊಟ್ಟೆ ತೊಳಸಿದರೆ ಅಂಟಾಸಿಡ್‌ಗಳು, ಹೊರಗಿನ ಊಟ-ನೀರಿಗೆ ಹೊಟ್ಟೆ ಸ್ಟ್ರೈಕ್ ಮಾಡಿ ಲೂಸ್‌ಮೋಶನ್‌ಆದರೆ ಅದಕೂ ಸೊಲ್ಯೂಶನ್, ಇನ್ನು ಅಲ್ಲಿನ ಗೌಜುಗದ್ದಲ ಮತ್ತು ಅತ್ತೆಯವರ ಮಾತುಗಳಿಂದ ಕಿರಿಕಿರಿ ಆಗಿ ತಲೆ ನೋವಾದರೆ ಅದಕ್ಕೆ ಪರಿಹಾರೋಪಾಯ! ಹೀಗೆ, ನನ್ನ ಕಿಟ್ ನೋಡಿ ಗಾಬರಿಯಾದ ಅತ್ತೆಯವರು, “”ಆರತಿ, ಅಲ್ಲಿ ಏನೂ ತ್ರಾಸ್ ಆಗೂದಿಲ್ಲ, ಕಾಳಜಿ ಮಾಡಬ್ಯಾಡ, ನನ್ನ ರೊಕ್ಕದ ಗಂಟಿನ ಜೊತೆ ನಿನ್ನ ಗುಳಗಿ ಗಂಟನ್ನೂ ತಿಮ್ಮಪ್ಪನ ಹುಂಡಿಗೆ ಹಾಕಿಬಿಡೋನಂತ” ಎಂದು ತಮಾಷೆ ಮಾಡಿದ್ದರು!
ಏನೇ ಅನ್ನಿ, ಈಗಿನ ಮೊಬೈಲ್ ಯುಗದಲ್ಲಿ ಯಾವುದಾದರೊಂದು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಮನೆ ಮಂದಿಯೇ ದೂರವಾಗುತ್ತಿರುವ ಕಾಲದಲ್ಲಿ ರೋಗಿಗೂ ಸ್ಟೆತಾಸ್ಕೋಪಿಗೂ ಇರುವ ಅವಿನಾಭಾವ ಸಂಬಂಧ ಹೆಚ್ಚಾಗುತ್ತಲೇ ಇದೆ. ಏನೇ ಕಾಯಿಲೆ ಬಂದರೂ ಅನ್ಯಥಾ ಶರಣಂ ನಾಸ್ತಿ ಎಂದು ಬೇಗ ಗುಣವಾಗಲು ಆ ಭಗವಂತನ ಮುಂದೆ ಮಾತ್ರೆಗಳನ್ನು ಇಟ್ಟು ಬೇಡಿಕೊಳ್ಳುವ ಹಾಗಾಗಿದೆ. ಈಗ ಬುದ್ಧನೆಂಬ ತತ್ವಜ್ಞಾನಿ ಇದ್ದಿದ್ದರೆ ಕಿಸಾ ಗೌತಮಿಗೆ ಜೀವಮಾನದಲ್ಲಿ ಒಮ್ಮೆಯೂ ಮಾತ್ರೆ ನುಂಗದ ವ್ಯಕ್ತಿಯ ಮನೆಯಿಂದ ಸಾಸಿವೆ ತಾ ಎಂದು ಹೇಳುತ್ತಿದ್ದನೋ ಏನೋ ! ವೈದ್ಯರ “ಬೆಳಿಗ್ಗೆ ಒಂದು ರಾತ್ರಿ ಒಂದು’ ಎಂಬ ಘೋಷ ವಾಕ್ಯ, ತೂಕಕ್ಕೆ ಹಾಕಿದರೆ ಕೆಜಿಗಟ್ಟಲೆ ತೂಗುವ ಆರೋಗ್ಯ ತಪಾಸಣೆಯ ಫೈಲು, ನೂರೆಂಟು ರಿಪೋರ್ಟ್‌ಗಳು, ಪ್ರಿಸ್ಕ್ರಿಪ್ಶನ್‌ಗಳು, ಮನೆಪೂರ್ತಿ ಪುಟಾಣಿ ಮಾತ್ರೆಗಳದ್ದೇ ಸದ್ದುಗದ್ದಲದ ನಡುವೆ ನಾವು ಭಕ್ತಿಯಿಂದ ದಿನಬೆಳಗಾದರೆ ಹೇಳಬೇಕಾದ್ದು “ಮಾತ್ರೆ ದೇವೋ ಭವ’ ಎಂದಲ್ಲವೆ?
ಏನಂತೀರಿ?
ಆರತಿ ಘಟಿಕಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.