ಆ ಮೂಲ ಬೆಳಕೊಂದು ಬೇರೆಯೇ ಇದೆ !
ಈ ಬೆಳಕುಗಳೆಲ್ಲ ನಿಜಕ್ಕೂ ಬರಿಯ ಪ್ರತಿಫಲನಗಳು!
Team Udayavani, Aug 18, 2019, 5:00 AM IST
ಸುಖಾಂತ್ಯ’ವೆಂಬುದು- ಎಲ್ಲವೂ ಸುಖಾಂತ್ಯಗೊಳ್ಳುವುದೆಂಬುದು- ಸಾಂಸಾರಿಕವಾದ ಒಂದು ಕಲ್ಪನೆ ಅಥವಾ ಎಣಿಕೆಯಾಗಿದೆ. ಮನೆಬಿಟ್ಟುಹೋದ ಮಗ, ಮರಳಿ ಮನೆಗೆ ಬಂದೇ ಬರುವನೆಂಬ ಎಣಿಕೆ, ಗಾಯವಾಗುವುದು ಎಷ್ಟು ಸಹಜವೋ ಎಂಥ ಗಾಯವೂ ಮಾಯುತ್ತದೆ, ಮಾಯುವುದೂ ಅಷ್ಟೇ ಸಹಜ ಎಂಬ ಎಣಿಕೆ, ಮೈಯಲ್ಲಿ ಉಳಿದುಕೊಂಡ ಗಾಯದ ಕಲೆಯು ನೋವನ್ನು ನೆನಪಿಸುವುದಕ್ಕಿಂತ ಹೆಚ್ಚಾಗಿ ಕಾಲವು ಎಲ್ಲವನ್ನೂ ಮಾಯಿಸುತ್ತದೆ ಎಂಬ ನಿಜವನ್ನೇ ಸೂಚಿಸುವ ಕುರುಹಾಗಿದೆ ಎಂಬ ಎಣಿಕೆ, ಕಾಲದ ಗತಿಯಲ್ಲಿ- ಶಾಪವು ವರವೇ ಆಗಿ ಪರಿಣಮಿಸಬಹುದು ಎಂಬ ಎಣಿಕೆ, ಒಗರು ಚೊಗರು ರಸಗಳೆಲ್ಲ ಮಾಗಿ ಮಧುಮಧುರವಾಗುವಂತೆ, ಬಾಳಿನ ಕಹಿ, ಕಟು ಅನುಭವಗಳೆಲ್ಲ ಕೊನೆಯಲ್ಲಿ ವಿಶೇಷವಾದ ಒಂದು ರೀತಿಯಲ್ಲಿ ಆಸ್ವಾದ್ಯವಾಗುವವು ಎಂಬ ಎಣಿಕೆಗಳೆಲ್ಲ- ಸುಖಾಂತ್ಯದ ಕನಸು ಕಾಣುವ ಸಾಂಸಾರಿಕವಾದ ಮನಸ್ಸಿನ ಗ್ರಹಿಕೆಗಳಾಗಿವೆ. ಈ ಗ್ರಹಿಕೆಯಾದರೋ ಕಾಲದ ನಡೆಯನ್ನು ಒಂದು ಚಕ್ರಗತಿಯಲ್ಲಿ ವೃತ್ತಾಕಾರವಾಗಿ ನೋಡುತ್ತದೆ. ಅಂದರೆ ಎಲ್ಲವೂ ಮರಳಿ ಬರುವ, ಹೊರಟ ಬಿಂದುವಿಗೆ ಮತ್ತೆ ಬಂದು ಮುಟ್ಟುವ ಗ್ರಹಿಕೆ. ಸಂಭವಿಸಿದ್ದೇ ಮತ್ತೆ ಮತ್ತೆ ಸಂಭವಿಸುವುದು ಎನ್ನುವ ಗ್ರಹಿಕೆ. ಆದುದರಿಂದಲೇ ಎಂಥ ದುರ್ಭರವೆನ್ನಿಸುವ ಅನುಭವಗಳಿಗೆ ಈಡಾದರೂ- ಇದು ಸಾಕೋಸಾಕು ಎಂದು ಒಮ್ಮೆಗೆ ಅನ್ನಿಸಿದರೂ- ಈ ತಿರುವುಗಳೆಲ್ಲ ತಾತ್ಕಾಲಿಕವೂ ಹೌದೆನ್ನುವ- ಈ ಸಂಕಟಗಳನ್ನೆಲ್ಲ ದಾಟಿ ಕೊನೆಗೆ ಎಲ್ಲವೂ ಸುಖಾಂತ್ಯಗೊಳ್ಳುವುದೆನ್ನುವ ಎಣಿಕೆಯು ಸಾಂಸಾರಿಕ ಮನಸ್ಸಿಗೆ ಇಷ್ಟವಾದುದಾಗಿದೆ.
ಕಲಾನುಭವಕ್ಕೂ ಈ ಪರಿಯ ಸುಖಾಂತ್ಯದ ಕಲ್ಪನೆಗಳಿಗೂ ಬಹು ಹತ್ತಿರದ ನಂಟಿದೆ. ರಸವಾಗಿ ಪರಿಣಮಿಸದ ಭಾವಗಳೇ ಇಲ್ಲ ಎನ್ನುವುದು ಕಲೆಯ ವಿಶೇಷವಾದ ಒಂದು ಗ್ರಹಿಕೆ ಯಾಗಿದೆ. ಔಚಿತ್ಯ, ಅನೌಚಿತ್ಯಗಳ ಅರಿವು ಇಲ್ಲದಿದ್ದಾಗ ಮಾತ್ರ ರಸಭಂಗವಾಗುವುದಲ್ಲದೆ, ಇಲ್ಲವಾದರೆ, ಭಾವದ ನಡೆಯು ಯಾವ ತಿರುವನ್ನೇ ತೆಗೆದುಕೊಂಡರೂ, ಕೊನೆಯಲ್ಲಿ ಎಲ್ಲವೂ ರಸಪರ್ಯವಸಾಯಿಯೇ ಎಂಬುದಿದು ಕಲೆಯ ಮನೋ ಧರ್ಮವೆನ್ನಬಹುದು. ಈ ಅರ್ಥದಲ್ಲಿ ಸಾಂಸಾರಿಕ ಮನಸ್ಸಿನ ಪರಿಷ್ಕೃತ, ಸುಸಂಸ್ಕೃತ, ರೂಪವೇ ಕಲೆಯ ಮನಸ್ಸು ಎನ್ನಬಹುದು.
ಆದರೆ, ಆಧ್ಯಾತ್ಮಿಕವಾದ ಗ್ರಹಿಕೆಯು ಈ ಎರಡು ಬಗೆಯ ಗ್ರಹಿಕೆಗಳಿಂದಲೂ ಬೇರೆಯಾಗಿದೆ. ಅದು ಬೇರೆಯೇ ಒಂದು ಅತಿ ವಿಶಿಷ್ಟವಾದ ತಿರುವನ್ನು ಎದುರು ನೋಡುತ್ತದೆ. ಮಾಮೂಲು ನಡೆ ಬೇಸರ ಬಂದು ತಾತ್ಕಾಲಿಕವಾಗಿ ಈ ಬೇಸರವನ್ನು ಹೋಗಲಾಡಿಸಿಕೊಳ್ಳುವುದಕ್ಕೆ ಅನುಕೂಲವಾಗುವಂಥ ತಿರುವುಗಳನ್ನಲ್ಲ. ರಸವಾಗಿ ಪರಿಣಮಿಸದ ಭಾವಗಳಿಲ್ಲ ಎಂದು ಕಲಾನುಭವವು ಸೂಚಿಸುವಾಗ ಆ ರಸ ಪರಿಣಾಮವು ಪರ್ಯವಸಾನದಲ್ಲಿ ಮಾತ್ರವಲ್ಲ- ಭಾವದ ಪೂರ್ವಾವಸ್ಥೆಗಳಲ್ಲಿಯೂ ರಸಾನುಭವದ ಕಿಂಚಿತ್ ಹೊಳಹುಗಳು ಇದ್ದೇ ಇರುತ್ತದೆ. ಇಲ್ಲದೇ ಇದ್ದದ್ದು ಹೊಸತಾಗಿ ಸೃಷ್ಟಿಯಾಗುವುದಿಲ್ಲವಲ್ಲ ! ಆದುದರಿಂದಲೇ ಬಾಳಿನಲ್ಲಿ ಕಷ್ಟ-ಸಂಕಟಗಳ ವಿಕಟ ತಿರುವುಗಳು ಎದುರಾದಾಗ ಎಷ್ಟು ಗಾಬರಿಯಾದರೂ ಈ ತಿರುವುಗಳು ಒಂದಿಷ್ಟಾದರೂ ಪೂರ್ವಪರಿಚಿತವೆಂಬಂತೆಯೂ ಇರುತ್ತವೆ! ಹೀಗೆ ಪೂರ್ವ ಪರಿಚಯ ಮಾಡಿಸುವುದೇ ಕಲೆ-ಕಾವ್ಯ-ಇತಿಹಾಸಗಳಲ್ಲಿ ಹರಿದುಬಂದ ಸಂಸ್ಕೃತಿಯ ಲಕ್ಷಣವೂ ಆಗಿದೆ. ಇವೆಲ್ಲ ನಿಜ. ಒಪ್ಪಿಕೊಳ್ಳೋಣ. ಆಧ್ಯಾತ್ಮಿಕತೆಗೆ ಈ ಸಂಸ್ಕೃತಿಯೊಡನೆ ಒಂದು ಬಗೆಯ ನಿಕಟತೆ ಇರುವುದೂ ನಿಜವೇ. ಆದರೆ ಆಧ್ಯಾತ್ಮಿಕತೆಯ ಕೇಂದ್ರ ಗ್ರಹಿಕೆಯು ಮಾತ್ರ ಮತ್ತೆ ಇಲ್ಲಿಗೆ ಮರಳಿ ಬರುವ ಗ್ರಹಿಕೆಯಲ್ಲ. ತುಳಿದ ದಾರಿಯನ್ನೇ ತುಳಿಯುವ, ಸುತ್ತಿ ಸುಳಿದಲ್ಲೇ ಮತ್ತೆ ಸುಳಿದು ಸುತ್ತುವ, ಕೆಲವು ಸಂಕಟಮಯ ತಿರುವುಗಳಲ್ಲಿ ಹಾಯುವಾಗಲೂ ಪರಿಚಿತವೆಂಬಂತೆ ಭಾವಿಸಿ ಸ್ವ-ಸಾಂತ್ವನಗೊಳ್ಳುವ, ಇವೆಲ್ಲ ತಾತ್ಕಾಲಿಕವೆಂದು ಭಾವಿಸಿ ತಾತ್ಕಾಲಿಕತೆಯ ಹಂಗಿನಲ್ಲಿರುವ- ಸುಖಾಂತ್ಯ ಗ್ರಹಿಕೆಯಲ್ಲ. ಅಧ್ಯಾತ್ಮದ ಗ್ರಹಿಕೆಯಾದರೋ ಈ ಎಲ್ಲವನ್ನೂ ಮೀರಬೇಕೆಂಬ ಗ್ರಹಿಕೆ. ಇಹದ ಚರ್ವಿತಚರ್ವಣದಿಂದ ಪಾರಾಗಬೇಕೆಂಬ ಗ್ರಹಿಕೆ. ಚಕ್ರಗತಿಯನ್ನು ಒಮ್ಮೆಲೇ ಬಿಟ್ಟು ಮೇಲೆ ಗೆಯಬೇಕೆಂಬ ಗ್ರಹಿಕೆ. ಊಧ್ವìಗ್ರಹಿಕೆ. ಅನುಭವಿಸಿದ್ದನ್ನೇ ಮರಳಿ ಅನುಭವಿಸಬೇಕೇಕೆ ಎಂದು ದಿಟ್ಟವಾಗಿ ಯೋಚಿಸುವ ಗ್ರಹಿಕೆ. ಮರಳಿ ಮರಳಿ ಮರಳುವ ಗ್ರಹಿಕೆಯೇ ಬೇರೆ. ಮೀರಬೇಕೆನ್ನುವ ಗ್ರಹಿಕೆಯೇ ಬೇರೆ. ಆದರೆ, ಇಂಥ ಗ್ರಹಿಕೆಯು ಹೊತ್ತು ತರುವ ಸಂಕಟವಾದರೋ ಅನೂಹ್ಯವಾದದ್ದು !
ಸಾಂಸಾರಿಕವಾದ ನಡೆಯಲ್ಲಿಯೇ ಸಂಕಟಗಳೂ ದಿವ್ಯಗಳೂ ಇಡಿಕಿರಿದಿವೆ. ಕೊನೆಯಲ್ಲಿ ಇವೆಲ್ಲ ಆಸ್ವಾದ್ಯವಾಗುವವು ಎಂಬ ಮಾತು ಬೇರೆ. ಹೀಗಿರುವಲ್ಲಿ ಸಾಂಸಾರಿಕ ಗತಿಯನ್ನೇ ಬಿಟ್ಟುಕೊಟ್ಟು, ರಸಾನುಭವದ ಎಣಿಕೆಯನ್ನೇ ಒಲ್ಲದೆ, ಉಪನಿಷತ್ತು ಊಧ್ವìಗತಿ ಎಂದು ಬಣ್ಣಿಸಿರುವ ಬೇರೆಯೇ ಒಂದು ಗತಿಗೆ ಹೊರಳಿಕೊಳ್ಳುವ ಸಂಕಟವಾದರೋ- ಅನೂಹ್ಯವಾದದ್ದು ; ಅಪರಿಚಿತವಾದದ್ದು. ಎಂಥವರನ್ನೂ ಉಲ್ಲೋಲ-ಕಲ್ಲೋಲ ಮಾಡಬಲ್ಲ, ಹುಚ್ಚೆಬ್ಬಿಸುವಂಥ ಈ ಆಂತರಿಕ ಸಂಕಟವನ್ನು ಖುದ್ದು ಅನುಭವಿಸಿದ್ದಲ್ಲದೆ ಚಕ್ರಗತಿಯ ಸುಳಿಯಿಂದ ಪಾರಾಗಲಾರೆವು. ಆಧ್ಯಾತ್ಮಿಕ ಸತ್ಯದ ಕಡೆಗೆ ಸಾಗಬೇಕಾದರೆ ಈ ಆಳದ ನೋವನ್ನು ಅನುಭವಿಸುವುದು ಅವಶ್ಯವಾಗಿ ಕೊಡಲೇಬೇಕಾದ ಬೆಲೆ ಎಂಬಂತೆ ತೋರಿಬರುವುದು!
ಸಾವೆಂಬುದು ಅನಿವಾರ್ಯವೆಂದು ಮೊದಲ ಬಾರಿಗೆ ತಿಳಿದಾಗ ಸಿದ್ಧಾರ್ಥನಲ್ಲಿ ಉಂಟಾದ ಹುಚ್ಚಿನಂಥ ತೀವ್ರ ತಲ್ಲಣವನ್ನು ನೆನೆಯಬಹುದು. ಯಾರ-ಯಾವ ಬಗೆಯ ಸಾಂತ್ವನಗಳನ್ನೂ ಸಿದ್ಧಾರ್ಥ ಕೇಳಬಯಸಲಿಲ್ಲ. ಸಾಂತ್ವನಗಳೇನೋ ಇದ್ದವು. ಅವೆಲ್ಲ ಹುಟ್ಟು-ಸಾವುಗಳ ಚಕ್ರಗತಿಯನ್ನು ಹೇಳುವ ಚರ್ವಿತಚರ್ವಣಗಳಾಗಿದ್ದವು. ಅಲ್ಲದೆ ಸಂತೈಕೆಯ ಮಾತು ಬಲ್ಲವರೆಂಬವರು ಸಾವಿನ ತಲ್ಲಣವನ್ನು ಅನುಭವಿಸಿ ತಾವು ದಾರಿ ಕಂಡುಕೊಂಡವರಾಗಿರಬೇಕಿಲ್ಲ , ಇವರೆಲ್ಲ ಮಾತಿನ ಗಿಳಿಗಳು ಎಂಬ ವ್ಯಾವಹಾರಿಕ ಸತ್ಯವೂ ಸಿದ್ಧಾರ್ಥನಿಗೆ ತಿಳಿದಿತ್ತು. ತನ್ನ ತಲ್ಲಣವನ್ನು ತಾನೇ ಎದುರಿಸಿದ. ಆದುದರಿಂದಲೇ ಬುದ್ಧ ತಾನು ಕಂಡುಕೊಂಡ ಸತ್ಯವನ್ನು ಹೇಳುವಲ್ಲಿ ಬಳಸಿದ ನುಡಿಗಟ್ಟುಗಳೂ ಹೊಸತಾಗಿದ್ದವು. ಹೊಸ ಅರ್ಥದಿಂದ ಕೂಡಿದ್ದವು. ಬುದ್ಧ, “ನಿರ್ವಾಣ’ ಎಂಬ ಪದವನ್ನು ಬಳಸಿದ. “ನಿರ್ವಾಣ’ವೆಂದರೆ ದೀಪವು ಆರಿಹೋಗುವುದು! ಬೆಳಕು ನಂದುವುದು! ಬುದ್ಧನಿಗೆ ಜ್ಞಾnನೋದಯವಾಗಿದೆ ಎಂದು ತಿಳಿದೆವಾದರೆ ಜ್ಞಾನದ “ಉದಯ’ಕ್ಕೆ ಇಂಥದೊಂದು ಪದವನ್ನು ಯಾರಾದರೂ ಬಳಸುತ್ತಾರೆಯೆ? ಕತ್ತಲೆಯಿಂದ ಬೆಳಕಿನೆಡೆಗೆ ನನ್ನನ್ನು ನಡೆಸು- ತಮಸೋಮಾ ಜ್ಯೋತಿರ್ಗಮಯ- ಎನ್ನುವ ವೈದಿಕ ಪ್ರಾರ್ಥನೆಗಿಂತ, ಬೆಳಕು ನಂದುವುದು ಎನ್ನುವ ಈ ಅರ್ಥ- ತೀರ ಭಿನ್ನವಾಗಿ ಕೇಳಿಸುವುದು. ವಿಲಕ್ಷಣವಾಗಿ ಕೇಳಿಸುವುದು. ಆದರೆ, ಬುದ್ಧನ ಈ ನುಡಿಗಟ್ಟಿಗೆ- ಅಚ್ಚರಿ ಎಂಬಂತೆ- ಉಪನಿಷತ್ ಸಂವಾದವಿದೆ. ಒಂದೆಡೆ, ನಮಗೆ ಇಲ್ಲಿ ಪರಿಚಿತವಾದ ಬೆಳಕಿನ ಮೂಲಗಳ ಬಗ್ಗೆ ಹೇಳುತ್ತ- ಅಗ್ನಿ, ಮಿಂಚು, ಚಂದಿರ, ತಾರಾಗಣ, ಸೂರ್ಯರ ಬಗ್ಗೆ ಹೇಳುತ್ತ- ಈ ಬೆಳಕಿನ ಗೋಲಗಳು ಬೆಳಗದ ಜಾಗ ಒಂದಿದೆ ಎನ್ನುತ್ತದೆ ಉಪನಿಷತ್ತು. ನ ತತ್ರ ಸೂರ್ಯೋ ಭಾತಿ ನ ಚಂದ್ರ ತಾರಕಂ ನೇಮಾ ವಿದ್ಯುತೋ ಭಾಂತಿ ಕುತೋ—ಯಮಗ್ನಿಃ… ತಸ್ಯ ಭಾಸಾ ಸರ್ವಮಿದಂ ವಿಭಾತಿ- ಎಂದಿದೆ. ನಮಗೆ ಪರಿಚಿತವಾದ ಈ ಬೆಳಕುಗಳೆಲ್ಲ ನಿಜಕ್ಕೂ ಬರಿಯ ಪ್ರತಿಫಲನಗಳು- ಆ ಮೂಲ ಬೆಳಕೊಂದು ಬೇರೆಯೇ ಇದೆ- ಎಂದಿದೆ. ಗೀತೆಯಲ್ಲಿ ಈ ಮಾತು ಮತ್ತೆ ಕೇಳಿಸುತ್ತದೆ. ಅಲ್ಲಿ ಇನ್ನಷ್ಟು ಸ್ಪಷ್ಟವಾಗಿ- ಸೂರ್ಯಚಂದ್ರರು ಬೆಳಗದ ಆ ನೆಲೆ ನನ್ನ ನಿಜವಾದ ನೆಲೆ. ಅಲ್ಲಿಗೆ ಹೋದವರು ಮರಳಿ ಇಲ್ಲಿಗೆ ಬರುವುದಿಲ್ಲ- ನ ನಿವರ್ತಂತೇ- ಎಂದು ಕೃಷ್ಣನಾಡಿದ ಮಾತು! ದೀಪ ಆರುವುದೆನ್ನುವ ಮಾತು, ಸೂರ್ಯ ಬೆಳಗುವುದಿಲ್ಲವೆನ್ನುವ ಮಾತು, ಮತ್ತೆ ಮರಳುವ ನೆಲೆಗಿಂತ ಭಿನ್ನವಾಗಿ ಎಂದೂ ಹಿಮ್ಮರಳದ ನೆಲೆ ಅದು ಎನ್ನುವ ಮಾತುಗಳೆಲ್ಲ ಪರಸ್ಪರ ಸಂವಾದದಲ್ಲಿವೆ.
ಆದರೆ, ಮತ್ತ ಮರಳುವ ಆಕರ್ಷಣೆಯಿಂದ, ನಡೆದ ದಾರಿಯಲ್ಲಿ ನಡೆಯುವ ಆಕರ್ಷಣೆಯಿಂದ, ಇದು ತನಗೆ ಪರಿಚಿತವೆಂಬ, ಪರಿಚಿತವಾದುದರಿಂದ ಇದು ತನ್ನದೇ ಎಂಬ ಭಾವವು ಉಂಟುಮಾಡುವ ಆಕರ್ಷಣೆಯಿಂದ ಪಾರಾಗುವುದು ಎಂದೂ ಸುಲಭದ ಮಾತಲ್ಲ. ತನ್ನ ಪರಿಚಯವನ್ನು ಮಾಡಿಕೊಟ್ಟು ಆ ಮೂಲಕ ತನ್ನ ಸರಹದ್ದಿನಲ್ಲಿಯೇ ಜೀವವು ಸುಳಿಯುವಂತೆ ಮಾಡುವುದು ಪ್ರಕೃತಿಯೇ ಆಡುವ ಆಟವಾಗಿರುವಂತಿದೆ. ಅದಕ್ಕನುಗುಣವಾಗಿ, ಈ ಲೋಕದಲ್ಲಿ ಕಟ್ಟುವ ಆಕರ್ಷಣೆಯೊಂದು ಅದಮ್ಯವಾದ ಆಕರ್ಷಣೆಯಾಗಿದೆ. ಕಟ್ಟುವಿಕೆಗೆ ನೂರು ರೂಪಗಳಿವೆ. ಕಟ್ಟುವುದೆಂದರೆ - ಮಾತಿಗೆ ಮಾತು ಜೋಡಿಸುತ್ತ ವಾಗಾjಲವೊಂದನ್ನು ಕಟ್ಟುವೆವು. ವಿಚಾರಗಳಲ್ಲಿ, ಪರ-ವಿರೋಧ ಸಂವಾದವನ್ನು ನಡೆಸುತ್ತ, ವಿರೋಧವನ್ನು ಖಂಡಿಸುತ್ತ, ಪರವನ್ನು ಸಮರ್ಥಿಸುತ್ತ, ಮನದಲ್ಲೇ ವಿಚಾರ ಪ್ರಪಂಚವೊಂದನ್ನು ಕಟ್ಟುವೆವು. ಸ್ವರಗಳಿಗೆ ಸಂವಾದಿ ಸ್ವರಗಳನ್ನು ಹಚ್ಚುತ್ತ, ಕೆಲವನ್ನು ಜೀವಸ್ವರವೆಂದು ಕರೆಯುತ್ತ, ಸ್ವರಗ್ರಾಮವೊಂದನ್ನು ರೂಪಿಸುತ್ತ, ರಾಗ ಪ್ರಪಂಚವನ್ನೇ ಕಟ್ಟುವೆವು. ಕೇಳಿದಾಗ ಭಾವ ಪ್ರಪಂಚವೇ ಸೃಷ್ಟಿಯಾಗುವುದು. ಇಟ್ಟಿಗೆಗಳ ಮೇಲೆ ಇಟ್ಟಿಗೆ ಇಡುತ್ತ, ನಮ್ಮ ನೋಟವೇ ಬೆರಗಾಗುವಂತೆ ಕಟ್ಟಡವೊಂದು ಮೇಲೇರುವುದು! ಆಲಯವು ಕಂಗೊಳಿಸುವುದು. ಬಯಲು ಮರೆಯಾಗುವುದು. ಕಟ್ಟುವುದೆಂದರೆ ಅದು ಸದೃಶ ವಸ್ತುಗಳ ಜೋಡಣೆ! ವಿದೃಶ ವಸ್ತುಗಳನ್ನು ಮರೆಯಾಗಿರಿಸುವಿಕೆ! ಆದರೆ ಮತ್ತೆ ಇಲ್ಲಿಗೆ ಮರಳುವುದಿಲ್ಲವೆನ್ನುವುದು ಒಂದು ವಿದೃಶಧ್ವನಿ! ಆ ಧ್ವನಿಯನ್ನು ಕೇಳಿಸದೆ ಉಪನಿಷತ್ತಿಗೆ ನಿರಾಳವಿಲ್ಲ. ಅದನ್ನು ಕೇಳಿಸುವುದಕ್ಕಾಗಿಯೇ ಉಪನಿಷತ್ತು ಹೊರಟಿರುವುದು !
-ಲಕ್ಷ್ಮೀಶ ತೋಳ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.