ಪ್ರಕಾಶನದ ಪಥದಲ್ಲಿ ಸದಾ ಪ್ರಕಾಶಿಸುವ ಅನುಭವಗಳು
Team Udayavani, Dec 16, 2018, 6:00 AM IST
ಪ್ರಕಾಶನ ಎಂದರೆ ನನಗೆ ಧರ್ಮ. ನಾನು ಹುಟ್ಟುವ ಮೊದಲೇ ನನ್ನ ಅಪ್ಪ-ಅಮ್ಮ ನಾನು ಪ್ರಕಾಶಕನಾಗಲಿ ಎಂದು ಹಂಬಲಿಸಿದವರಲ್ಲ. ದೇವರಿಗೆ ಹರಕೆ ಹೊತ್ತವರಲ್ಲ. ನಾನೂ ಯಾವುದೇ ಅರ್ಜಿ ಹಾಕದೇ ಪ್ರಕಾಶಕನಾದವನು! ನಮ್ಮ ಮನೆಯಲ್ಲಿ ಕುಮಾರವ್ಯಾಸ ಭಾರತ ಮತ್ತು ತೊರವೆ ರಾಮಾಯಣದಂಥ ಪುಸ್ತಕಗಳು ಇದ್ದವು. ನಮ್ಮ ತಂದೆ ಮರಳಿನ ಮೇಲೆ ಅ ಆ ಇ ಈ ಕಲಿತು ಪ್ರಾಥಮಿಕ ಶಾಲೆಯ ಮೇಷ್ಟ್ರರಾಗಿದ್ದರು. ರೇಡಿಯೋದಲ್ಲಿ ಬರುತ್ತಿದ್ದ ಕಾವ್ಯವಾಚನ, ಯಕ್ಷಗಾನ, ಕರಪಾಲಮೇಳಗಳಂಥ ಕಾರ್ಯಕ್ರಮಗಳನ್ನು ಕೇಳಲು ಹುರಿದುಂಬಿಸುತ್ತಿದ್ದರು. ತುಂಡು ಪತ್ರಿಕೆಗಳಲ್ಲಿರುತ್ತಿದ್ದ ಸ್ವಾರಸ್ಯಕರವಾದ ಸಂಗತಿಗಳನ್ನು ಅಮ್ಮ ಓದಿ ಹೇಳುತ್ತಿದ್ದರು. ನಮ್ಮ ಚಿಕ್ಕಪ್ಪ ಲಕ್ಷ್ಮೀನಾರಾಯಣರಾವ್ ಆ ಸೀಮೆಯಲ್ಲೇ ಶಕುನಿ ಪಾತ್ರವನ್ನು ಸಮರ್ಥವಾಗಿ ಮಾಡಬಲ್ಲವರೆಂದು ಹೆಸರುವಾಸಿಯಾಗಿದ್ದರು. ಅವರ ಜೊತೆಗೆ ಇಡೀ ರಾತ್ರಿ ನಡೆಯುತ್ತಿದ್ದ ಪೌರಾಣಿಕ ನಾಟಕಗಳನ್ನು ನೋಡಲು ಹೋಗುತ್ತಿದ್ದೆ. ಇವೆಲ್ಲ ನಾನು ಸಾಹಿತ್ಯವನ್ನು ಒಳಗು ಮಾಡಿಕೊಳ್ಳಲು ಕಾರಣವಾದ ಸಂಗತಿಗಳು.
ಬೆಂಗಳೂರಿನ ಹಾದಿ ಹಿಡಿದು…
1982ರಲ್ಲಿ ನಾನು ಬೆಂಗಳೂರಿಗೆ ಬಂದೆ. ನನ್ನ ಅಣ್ಣನ ಮನೆಯಲ್ಲಿದ್ದುಕೊಂಡು ಶೇಷಾದ್ರಿಪುರಂ ಬಾಲಕರ ಹೈಸ್ಕೂಲಿಗೆ ಸೇರಿದೆ. ಅಲ್ಲಿ ಜಿ. ಎಸ್. ಹೆಗಡೆಯವರು ಕನ್ನಡ ಮೇಷ್ಟ್ರು. ತುಂಬ ಸ್ವಾರಸ್ಯಕರವಾಗಿ ಪಾಠ ಹೇಳುತ್ತಿದ್ದರು. ಸಾಹಿತ್ಯದ ಓದಿನ ಕಡೆಗೆ ಗಮನ ಹರಿಸಲು ಕಾರಣರಾದವರೇ ಜಿ. ಎಸ್. ಹೆಗಡೆ. ಸಾರ್ವಜನಿಕ ಗ್ರಂಥಾಲಯಗಳಿಂದ ವಾರಕ್ಕೊಮ್ಮೆ ತಂದ ಬಾಣ ಭಟ್ಟ, ಕುವೆಂಪು, ಮಾಸ್ತಿ, ಕೆ. ಟಿ. ಗಟ್ಟಿ. ಶಿವರಾಮ ಕಾರಂತ ಮುಂತಾದವರ ಕೃತಿಗಳು ಆಸಕ್ತಿಯನ್ನು ಹೆಚ್ಚಿಸಿದವು. ಮನೆಯಲ್ಲಿ ತೀರಾ ಬಡತನವಿದ್ದುದರಿಂದ ಕಾಲೇಜಿಗೆ ಅರ್ಜಿ ತರಲೂ ಹೋಗಲಿಲ್ಲ. ಅಪ್ರಂಟಿಸ್‌ಷಿಪ್ ತರಬೇತಿಗೆಂದು ಜಿ. ಕೆ. ಡಬ್ಲೂ ಕಾರ್ಖಾನೆಗೆ ಸೇರಿದೆ. ಅಲ್ಲಿ ರಾಜೀವಲೋಚನಂ ಅವರ ಪರಿಚಯವಾಯಿತು. ಆ ಕಾರ್ಖಾನೆಯಲ್ಲಿ ವಿದ್ಯಾರ್ಥಿ ಕಾರ್ಮಿಕ ಸಂಘ (ವಿಕಾಸ)ಸ್ಥಾಪಿಸಿ ಹಲವಾರು ನಾಟಕಗಳನ್ನು ಬರೆದು, ಪ್ರದರ್ಶಿಸಿ ಬಹುಮಾನಗಳಿಸಿದ್ದರು ರಾಜೀವಲೋಚನಂ. ಅವರ ಮನೆಯಲ್ಲಿ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳಿದ್ದವು. ಅವರ ಜೊತೆಗೆ ವೆಂಕಟೇಶ ಶಾಸ್ತ್ರೀ, ಎ. ವಿ. ನಾಗೇಶ್, ಕೆಂಡೋಳೆ ಸುಬ್ರಹ್ಮಣ್ಯಂ ಅವರ ಪರಿಚಯವೂ ಆಯಿತು. ಸಾಹಿತ್ಯ ಕುರಿತ ಮಾತುಕತೆಗಳು ನನ್ನನ್ನು ಕ್ರಿಯಾಶೀಲಗೊಳಿಸಿದವು. ಇವರೆಲ್ಲರ ಒಡನಾಟ ನನ್ನ ಓರಗೆಯ ಕೆಲಗೆಳೆಯರನ್ನೆಲ್ಲ ಸೇರಿಸಿ “ಪ್ರತಿಭಾ ಯುವ ವೇದಿಕೆ’ಯನ್ನು ಆರಂಭಿಸುವಂತೆ ಮಾಡಿತು. ಕನ್ನಡದ ಕೆಲಸ ಮಾಡಬೇಕೆಂಬ ಉತ್ಸಾಹವಷ್ಟೇ ನಮ್ಮದು. ನಾಡು ನುಡಿಯ ಕುರಿತು ವಿಚಾರ ಸಂಕಿರಣ, ತ್ರೆçಮಾಸಿಕ ಪುಸ್ತಕ ಯೋಜನೆ, ಆರೋಗ್ಯ, ವ್ಯಕ್ತಿತ್ವ ವಿಕಸನ ಕಾರ್ಯಶಿಬಿರ, ಚಿತ್ರಕಲಾಗ್ರಹಣ ಕಾರ್ಯಾಗಾರ ಮುಂತಾದವುಗಳನ್ನು ನಡೆಸತೊಡಗಿದೆವು.
ನಮ್ಮ ಪುಸ್ತಕ ಯೋಜನೆಯ ಮೊದಲ ಪ್ರಯೋಗ ಹಕ್ಕಿ ನಡಿಗೆ ಎಂಬ ಪುಸ್ತಕ. ಅದನ್ನು ಎಚ್. ಎಸ್. ವೆಂಕಟೇಶಮೂರ್ತಿ ಬಿಡುಗಡೆಗೊಳಿಸಿದ್ದರು. ಚಿ. ಶ್ರೀನಿವಾಸರಾಜು ಪುಸ್ತಕದ ಬಗೆಗೆ ಮಾತನಾಡಿದ್ದರು. ಎಚ್. ಎಸ್. ರಾಘವೇಂದ್ರರಾವ್ ಮುನ್ನುಡಿ ಬರೆದಿದ್ದರು. ನಟರಾಜ್ ಹುಳಿಯಾರ್ ಅವರ ರಸ್ತೆ ಬದುವಿನಗುಂಟ ಕಾರ್ಲ್ಮಾರ್ಕ್ ಎಂಬೋನು ಕವಿತೆ ಪ್ರಕಟವಾಗಿದ್ದು ಆ ಸಂಕಲನದಲ್ಲಿಯೇ. ಕೆ. ವೈ. ನಾರಾಯಣಸ್ವಾಮಿ, ಡಿ. ಆರ್. ಚಂದ್ರ ಮಾಗಡಿ ಮುಂತಾದವರ ಕವಿತೆಗಳು ಆ ಸಂಕಲನದಲ್ಲಿದ್ದವು. ಮುಂದೆ ಕಥಾಸಂಕಲನದಲ್ಲಿ ಎಂ. ವೆಂಕಟೇಶ್ ಎಂಬ ಅಪೂರ್ವ ಕಥೆಗಾರನ ಕಥೆ ಮೊದಲ ಬಾರಿಗೆ ಪ್ರಕಟಗೊಂಡಿತು. ಆ ಸಂಕಲನವನ್ನು ರವೀಂದ್ರ ಕಲಾಕ್ಷೇತ್ರದ ಪಕ್ಕದ ಉದ್ಯಾನವನದಲ್ಲಿ ಕಾ. ತ. ಚಿಕ್ಕಣ್ಣ ಬಿಡುಗಡೆ ಮಾಡಿದ್ದರು. ನಟರಾಜ ಹುಳಿಯಾರ್ ಕಥೆಗಾರರನ್ನು ಪರಿಚಯಿಸಿದ್ದರು. ರವಿಕುಮಾರ್ ಕಾಶಿ ಮತ್ತು ರಮೇಶ ಚಂದ್ರರು ಚಿತ್ರಕಲೆ ಕುರಿತ ಬರೆದ ಲೇಖನಗಳ ಸಂಕಲನ ಆಕಾರ ಈ ಮಾಲಿಕೆಯ ಮೂರನೆಯ ಪುಸ್ತಕ. ಕಾದಂಬರಿ ಕಣ್ಣಲ್ಲಿ ಕಾರಂತರು ಈ ಮಾಲಿಕೆಯ ನಾಲ್ಕನೆಯ ಪುಸ್ತಕ. ಸಿ. ಎಸ್. ಸವಿತ, ಎಂ. ಆರ್. ಭಗವತಿ, ಸುಧಾ ಶರ್ಮ ಚವತ್ತಿ ಹೀಗೆ ಮೂವರು ಕವಿಯತ್ರಿಯರ ಸಂಯುಕ್ತ ಸಂಕಲನ ಐದನೆಯದು. ಅದಕ್ಕೆ ಬಿ. ಸಿ. ರಾಮಚಂದ್ರಶರ್ಮ ಮುನ್ನುಡಿ ಬರೆದಿದ್ದರು. ಸಂಚಯ ನಿಯತಕಾಲಿಕೆ ಏರ್ಪಡಿಸಿದ್ದ ಬೇಂದ್ರೆ ವಿಚಾರಸಂಕಿರಣದ ಪ್ರಬಂಧಗಳನ್ನು ಸಂಕಲಿಸಿ ಶ್ರಾವಣ ಹೊರಬಂತು. ಇವೆಲ್ಲ ನಮ್ಮ ಆರಂಭಕಾಲದ ಪ್ರಯತ್ನಗಳು. ಇವೆಲ್ಲಕ್ಕೂ ಪ್ರೇರೇಪಣೆ ಚಿ. ಶ್ರೀನಿವಾಸರಾಜು ಎಂದು ಬೇರೆ ಹೇಳಬೇಕಿಲ್ಲ. ಆಗ ನನ್ನ ಕೆಲಸಗಳಲ್ಲಿ ಜೊತೆಗಿದ್ದುದು ಸಂಚಯ ಪತ್ರಿಕೆಯ ಡಿ. ವಿ. ಪ್ರಹ್ಲಾದ್. ಮುಂದೆ ನಾನು ಎಸ್‌ಕೆಎಫ್ ಬೇರಿಂಗ್ಸ್ ಎಂಬ ಬಹುರಾಷ್ಟ್ರೀಯ ಕಾರ್ಖಾನೆ ಸೇರಿದೆ. ರಾತ್ರಿ ಪಾಳಿಯಲ್ಲಿ ಕೆಲಸ; ಹಗಲು ಪ್ರಕಾಶನ.
ಗೆಳೆಯ ಸುಗತ ಶ್ರೀನಿವಾಸರಾಜು ಪರಿಚಯಿಸಿದ ಸೆಮಿನಾರ್ ಎನ್ನುವ ಪತ್ರಿಕೆಯಿಂದ ಪ್ರೇರೇಪಣೆಗೊಂಡು ಕನ್ನಡದಲ್ಲಿಯೂ ಇಂಥ ಪತ್ರಿಕೆಯನ್ನು ಹೊರತರುವ ಉತ್ಸಾಹದಿಂದ ರೂಪುಗೊಂಡಿದ್ದು ಅಭಿನವ ಚಾತುರ್ಮಾಸಿಕ ಪತ್ರಿಕೆ. ಆ ಕಾಲದಲ್ಲಿ ತುಂಬ ಪ್ರಭಾವಿಯಾಗಿದ್ದ ಪರ್ಯಾಯ ಚಿಂತನೆ-ಉಪಭೋಗವಾದ ಮೊದಲ ಸಂಚಿಕೆಯ ವಿಷಯವಾಗಿತ್ತು ಗುಜರಾತಿನ ಕಾಂಜಿ ಪಟೇಲ್, ವಂದನಾ ಶಿವ ಮುಂತಾದವರ ಲೇಖನಗಳು ಆ ಸಂಚಿಕೆಯಲ್ಲಿದ್ದವು. ಎರಡನೆಯ ಸಂಚಿಕೆ ಸಿನಿಮಾದ ಕುರಿತು. ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಯುವ ಬರಹರಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತ ಬರುತ್ತಿತ್ತು. ಆಗ ಚಂದ್ರಿಕಾ ಕೂಡ ಬೇಂದ್ರೆ ಕಾವ್ಯಸ್ಪರ್ಧೆಯಲ್ಲಿ ಬಹುಮಾನ ಪಡೆಯಲು ಬಂದಿದ್ದರು. ಸಾಹಿತ್ಯ ನಮ್ಮನ್ನು “ಒಂದು’ ಮಾಡಿತು. ಮೂರನೆಯದು ವೋಲೆ ಷೋಯಿಂಕಾ ಸಂಚಿಕೆ. ನಮ್ಮ ವಿವಾಹದ ಆಹ್ವಾನ ಪತ್ರಿಕೆಯ ಜೊತೆಗೇ ಈ ಸಂಚಿಕೆಯೂ ಪೋಸ್ಟ್ ಆಗಿತ್ತು !
ನಮ್ಮ ಮದುವೆಯಾದ ಹೊಸತರಲ್ಲಿಯೇ ಅಭಿನವದ ಮೊದಲ ಪ್ರಕಟನೆಗಳಾಗಿ ನಾಲ್ಕು ಪುಸ್ತಕಗಳನ್ನು ಹೊರತಂದೆವು. ರವಿ ಬೆಳೆಗೆರೆ ಅವರ ಪಾವೆಂ ಹೇಳಿದ ಕಥೆ (ಕಥಾಸಂಕಲನ), ಸಿ. ಎನ್. ರಾಮಚಂದ್ರನ್ ಅವರ ಆಶಯ ಆಕೃತಿ (ವಿಮರ್ಶೆ), ಕೆ. ಸತ್ಯನಾರಾಯಣ ಅವರ ದಾಂಪತ್ಯಕ್ಕೊಂದು ಶೀಲ (ಲಲಿತ ಪ್ರಬಂಧಗಳು). ವೋಲೆ ಷೋಯಿಂಕಾ ಸಂಚಿಕೆಯ ಪುಸ್ತಕ ಇಚ್ಛಾಶಕ್ತಿಯ ನಿರೂಪ. ಉತ್ಸಾಹದಲ್ಲಿ ಪುಸ್ತಕಗಳನ್ನೇನೋ ಪ್ರಕಟಿಸಿದ್ದೆವು. ಪುಸ್ತಕಗಳ ಮಾರಾಟ ಅಷ್ಟು ಸುಲಭವಾಗಿರಲಿಲ್ಲ. ಎಷ್ಟಾದರೂ ಬಡತನವನ್ನೇ ಹೊದ್ದ ಬದುಕು. ರಶ್ಮಿ ಮುದ್ರಣದ ರಾಮಕೃಷ್ಣ ನಾಯ್ಡು ಪ್ರಸ್ ಬಿಲ್ ಹಿಡಿದು ಹಣ ವಸೂಲಿ ಮಾಡಲು ಮನೆ ಬಾಗಿಲಿಗೆ ಬಂದಾಗ ಆದ ಸಂಕಟ ಅಷ್ಟಿಷ್ಟಲ್ಲ. ಬರುತ್ತಿದ್ದ ಸಂಬಳ ಮನೆ, ಅತಿಥಿ- ಸ್ನೇಹಿತರ ಉಪಚಾರಕ್ಕೆ ಸಾಕಾಗುತ್ತಿತ್ತು. ಡಿಟಿಪಿ. ಮಾಡಿ, ಪುಸ್ತಕ ಹೊತ್ತು, ಮಾರಿ ಪ್ರಕಾಶನ ನಡೆಸಬೇಕಿತ್ತು.
ಮಹಾಪುರುಷನ ಸತ್ಸಂಗ
ಅಭಿನವದ ಐವತ್ತನೆಯ ಪುಸ್ತಕ ಬೆಳಗೆರೆ ಕೃಷ್ಣಶಾಸ್ತ್ರಿಗಳ ಮರೆಯಲಾದೀತೆ?. ಚಿತ್ರದುರ್ಗ ಸಮೀಪದ ಬೆಳೆಗೆರೆ ಗ್ರಾಮದಲ್ಲಿ ತಮ್ಮ ತಂದೆಯವರ ಕೊನೆಯ ಮಾತೊಂದನ್ನು ಸಾಕಾರಗೊಳಿಸಲು ಬಡ ಮಕ್ಕಳಿಗಾಗಿ ಶಾಲೆ ತೆರೆದು ತಮ್ಮ ಪಾಡಿಗೆ ತಾವು ಸಮಾಜ ಸೇವೆ ಮಾಡಿಕೊಂಡಿದ್ದರು. ಮುಕುಂದೂರುಸ್ವಾಮಿಗಳ ಜೊತೆಗಿನ ಒಡನಾಟ ಅವರನ್ನು ಬೇರೆಯೇ ಅನುಭವಕ್ಕೆ ಕರೆದೊಯ್ದಿತು. ಆ ಅನುಭವಗಳ ಕಂತೆಯೇ ಯೇಗ್ಧಾಗೆಲ್ಲ ಐತೆ. ಈ ಪುಸ್ತಕವನ್ನು ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಬಿಡುಗಡೆಗೊಳಿಸಲು ಚಳ್ಳಕೆರೆಯ ಮಾಕಂ ಶ್ರೀನಿವಾಸಲು ಬರೆಸಿದರು. ಶಾಸ್ತ್ರಿಗಳು ಹಸ್ತಪ್ರತಿಯೊಡನೆ ಮನೆಗೆ ಬಂದರು. ಅದನ್ನೆಲ್ಲ ಒಪ್ಪ ಓರಣಗೊಳಿಸಿದ್ದು ಚಂದ್ರಿಕಾ. ಆನಂತರ ರವಿಬೆಳಗೆರೆ ಅವರ ಸೂಚನೆಯ ಮೇರೆಗೆ ಶಾಸ್ತ್ರಿಗಳ ಎಲ್ಲ ನೆನಪುಗಳನ್ನು ಸಂಗ್ರಹಿಸಲು ಹೊರಟೆ. ಎಷ್ಟೋ ಸಲ ತಮ್ಮ ನೆನಪುಗಳನ್ನು ಹೇಳಿ, “ನಾಳೆ ರೆಕಾರ್ಡ್ ಮಾಡೋಣ ಮಲಗಿ ಸರ್’ ಎಂದುಬಿಡುತ್ತಿದ್ದರು. ಮಾರನೆಯ ದಿನ ನಾನು ಏಳುವುದಕ್ಕೆ ಮುನ್ನವೇ ತೋಟದ ಕೆಲಸದಲ್ಲಿ ಶಾಸ್ತ್ರಿಗಳು ತಲ್ಲೀರಾಗಿಬಿಡುತ್ತಿದ್ದರು. ಬಂದ ದಾರಿಗೆ ಸುಂಕವಿಲ್ಲ ಎಂದು ಬರಿಗೈಯಲ್ಲಿ ಹಿಂದಿರುಗುತ್ತಿದ್ದೆ. ಎಷ್ಟೋ ದಿನಗಳ ನಂತರ ಚಂದ್ರಿಕಾ, ನಾನು ಅವರನ್ನು ಭೇಟಿಯಾಗಲು ಬೆಳಗೆರೆಗೆ ಹೋದೆವು. ಇದ್ದಕ್ಕಿದ್ದಂತೆ ಶಾಸ್ತ್ರಿಗಳು “ರೆಕಾರ್ಡ್ ಮಾಡೋಣ’ ಎಂದರು. ಮೂರು ದಿನಗಳಲ್ಲಿ 13 ಕ್ಯಾಸೆಟ್‌ಗಳನ್ನು ರೆಕಾರ್ಡ್ ಮಾಡಿದೆವು. ಬೆಂಗಳೂರಿಗೆ ಬಂದಾಗ, ಹಿರಿಯೂರು, ತುಮಕೂರುಗಳಲ್ಲಿ ಸಿಕ್ಕಾಗ 42 ಕ್ಯಾಸೆಟ್ ಆದವು. ಅವೆಲ್ಲವನ್ನು ಬರಹರೂಪಕ್ಕಿಳಿಸಿ, ಅವರ ಮುಂದೆ ಓದಿ, ತಿದ್ದಿ ಮುದ್ರಣಕ್ಕೆ ಸಿದ್ದಪಡಿಸಿದೆವು. ಈ ಮಧ್ಯೆ ಅವರಿಗೆ ಹಾರ್ಟ್ ಅಟ್ಯಾಕ್ ಆಗಿ ಆಸ್ಪತ್ರೆ ಸೇರಿದರು. ಆಪರೇಷನ್ ಮಾಡಿದ ಡಾಕ್ಟರ್ ಹೇಳಿದರಂತೆ, “ಯಾರು ಅವರಿಗೆ 60 ವರ್ಷ ಎಂದು? ಇನ್ನೂ 6 ವರ್ಷ ಕೂಡ ಆಗಿಲ್ಲ’ಎಂದು. ಶಾಸ್ತ್ರಿಗಳು ಕೂಡ ಆಗಾಗ ತಮ್ಮ ಬೊಚ್ಚು ಬಾಯಿಯನ್ನು ತೋರಿಸಿ, “ಎಲ್ಲರೂ ನಿನಗೆ ವಯಸ್ಸಾಯ್ತು ಎನ್ನುತ್ತಾರೆ. ನೋಡಿ ನನಗೆ ಇನ್ನೂ ಹಲ್ಲು ಹುಟ್ಟಿಲ್ಲ ‘ ಎಂದು ನಗುತ್ತಿದ್ದರು -ತಮ್ಮ 22ನೆಯ ವಯಸ್ಸಿನಲ್ಲಿ-ಒಂದೇ ದಿನ ತನ್ನ ಎರಡು ಮಕ್ಕಳು, ಮಡದಿಯನ್ನು ಕಳೆದುಕೊಂಡ ಶಾಸ್ತ್ರಿಗಳು, ಆಸ್ತಿ ವಿಷಯಕ್ಕೆ ಬಂಧುಗಳು ಮರುಮದುವೆಗೆ ಒತ್ತಾಯಿಸಿದಾಗ ತಲೆ ಬೋಳಿಸಿಕೊಂಡು, ತಮ್ಮ ಎಲ್ಲ ಹಲ್ಲುಗಳನ್ನು ಕಿತ್ತಿಸಿಕೊಂಡಿದ್ದರು.
ಶಾಸ್ತ್ರಿಗಳ ಒಡನಾಟಕ್ಕೆ ಬಂದ ಗಾಂಧಿ, ರಮಣಮಹರ್ಷಿ, ಸಿದ್ದಯ್ಯ, ಹುಸೇನ್ ಸಾಬಿ, ಎಸ್. ಎಲ್. ಭೈರಪ್ಪ ಮುಂತಾದವರೆಲ್ಲರ ಜೊತೆಗಿನ ಅನುಭವವನ್ನು ಕಟ್ಟಿಕೊಟ್ಟ ಪುಸ್ತಕ ಮರೆಯಲಾದೀತೆ? ಪುಸ್ತಕ ಬಿಡುಗಡೆಯ ಹಿಂದಿನ ದಿನ ಅಧ್ಯಕ್ಷತೆ ವಹಿಸಬೇಕಿದ್ದ ನಿಟ್ಟೂರ ಶ್ರೀನಿವಾಸರಾಯರು ತೀರಿಕೊಂಡರು. ನಮ್ಮ ಕಷ್ಟವನ್ನು ಅರಿತ ಜಿ. ವೆಂಕಟಸುಬ್ಬಯ್ಯನವರು ಒಪ್ಪಿ ಕಾರ್ಯಕ್ರಮಕ್ಕೆ ಬಂದರು. ಚಂದ್ರಶೇಖರ ಕಂಬಾರರಂತೂ ಪುಸ್ತಕದಲ್ಲಿದ್ದ ಎಲ್ಲ ವಿಷಯವನ್ನೂ ಕಥಾ ಶೈಲಿಯಲ್ಲಿ ಪರಿಚಯಿಸಿದರು.
ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡಿ ಬೆಂಗಳೂರಿಗೆ ಬಂದು ನೆಲಸಿರುವ ಗೋಪಾಲಕೃಷ್ಣ ರಾಮನ್ ದಂಪತಿ “ಈ ಪುಸ್ತಕ ಓದಿದೆ. ತುಂಬಾ ಚೆನ್ನಾಗಿದೆ. ನೀವು ಶಾಸ್ತ್ರಿಗಳನ್ನು ಕಂಡವರು. ನಮಗೆ ಅಂಥ ಯೋಗ ಕೂಡಿ ಬರಲಿಲ್ಲ. ನಿಮ್ಮನ್ನಾದರೂ ನೋಡಿ ಹೋಗುತ್ತೇವೆ’ ಎಂದು ಮನೆ ಹುಡುಕಿಕೊಂಡು ಬಂದಾಗ ಏನು ಹೇಳುವುದು ಗೊತ್ತಾಗಲಿಲ್ಲ. ನಮ್ಮ ಬದುಕಿನ ಸಾರ್ಥಕ್ಯವಷ್ಟೆ.
(ಕನ್ನಡ ಸಾಹಿತ್ಯ ಪರಿಷತ್ತು ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ “ಅಂಕಿತ ಪುಸ್ತಕ ಪುರಸ್ಕಾರ’ ಸ್ವೀಕಾರ ಭಾಷಣದ ಆಯ್ದ ಭಾಗ)
ನ. ರವಿಕುಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.