ಶ್ರದ್ಧೆ ಎಂಬ ಅಜ್ಞಾತ ಶಕ್ತಿ ಪ್ರವಾಹ
ಉಪನಿಷತ್ತುಗಳ ಹತ್ತಿರದಿಂದ
Team Udayavani, Jun 23, 2019, 5:00 AM IST
ದೊಡ್ಡದೊಂದು ಮಥನವಿಲ್ಲದೆ “ಸತ್ಯ’ವು ಪ್ರಕಟವಾಗಲಾರದು ಎಂಬುದು ಉಪನಿಷತ್ತಿನ ತಿಳಿವಳಿಕೆಯಾಗಿದೆ. “ಸತ್ಯ’ವು ಇಲ್ಲಿ ಅಡಗಿ ಇರುವುದು ಎಂಬ ಕಾಣ್ಕೆಯ ಮುಂದಿನ ಮಜಲು ಈ ತಿಳಿವಳಿಕೆ. ಅಡಗಿ ಇರುವುದೇ ಪ್ರಕಟವಾಗುವುದಲ್ಲವೆ? ಅದೇ ಪ್ರಕಟವಾಗಬೇಕಾದುದಲ್ಲವೆ? ಆದರೆ, ಅಡಗಿರುವುದು- ಸ್ವಇಚ್ಛೆಯಿಂದಲೇ ಎಂಬಂತೆ ಅಡಗಿರುವುದು- ಪ್ರಕಟವಾಗಬೇಕಾದರೆ ಒಂದು ಜೀವನ್ಮರಣ ಪ್ರಶ್ನೆ ಎದುರಾಗಬೇಕು. ಒಂದು ಉಲ್ಲೋಲಕಲ್ಲೋಲ ಉಂಟಾಗಬೇಕು. ವ್ಯವಸ್ಥೆ ಒಮ್ಮೆ ಅಡಿಮೇಲಾಗಬೇಕು. ಏಕೆಂದರೆ, ಯಾವುದೇ ವ್ಯವಸ್ಥೆಗೆ ಅಡಗಿರುವ ಸತ್ಯ ಹೊರಬರುವುದು ಬೇಕಿಲ್ಲ. “ಸತ್ಯ’ವನ್ನು ನಮಗೆ ಬೇಕಾದಂತೆ ವ್ಯವಸ್ಥಿತ ಮಾಡಲು ಬರುವುದಿಲ್ಲವಾಗಿ “ಸತ್ಯ’ದಿಂದ ವ್ಯವಸ್ಥೆಗೆ ಅಪಾಯವಿದೆ; ಹಾಗೆಂದು ವ್ಯವಸ್ಥೆ ಭಾವಿಸುತ್ತದೆ. ವ್ಯವಸ್ಥೆ ಎಂದರೆ ಲೋಕಜೀವನದ ತೋರಿಕೆಯ ರೀತಿನೀತಿಗಳು, ತೋರಿಕೆಯ ಆಗುಹೋಗುಗಳು, ತೋರಿಕೆಯ ನಡಾವಳಿಗಳು. ಆದುದರಿಂದಲೇ ಇರಬೇಕು- “ಸತ್ಯ’ವು ಈ ತೋರಿಕೆಯ ಲೋಕಜೀವನವು ತನ್ನ ಅಡಗುದಾಣ ಎಂದು ಭಾವಿಸಿರುವುದು! ಇದು ಉಪನಿಷತ್ಕಾಲದಲ್ಲೂ ಹೀಗೆಯೇ ಇತ್ತು! ಅಡಗಿದ್ದುದು ಹೊರಬರುವಾಗ ಮಾತ್ರ ಒಂದು ಕಲ್ಲೋಲ!
ಆಶ್ಚರ್ಯವೆಂದರೆ, ಹಾಗೆ ಒಂದು ಜೀವನ್ಮರಣ ಪ್ರಶ್ನೆಯುಂಟಾಗದೆ ನಮ್ಮ ಶಕ್ತಿಯೇ ನಮಗೆ ತಿಳಿದುಬರದು. ಒಂದು crisis ಸಂಭವಿಸಿದಾಗ- ಪ್ರಾಣಾಪಾಯದಂಥ ಸಂದರ್ಭವೊಂದರಲ್ಲಿ ನಾವೋ ನಮ್ಮ ತೀರ ಆಪ್ತರೋ ಸಿಕ್ಕಿದಾಗ- ನಮ್ಮೊಳಗಿನಿಂದ ಅದೆಲ್ಲಿಂದಲೋ ಶಕ್ತಿಯೊಂದು ಸ್ಫೋಟಗೊಂಡಂತೆ ಚಿಮ್ಮಿ ಬರುವ ಅನುಭವ ಯಾರಿಗೆ ಆಗಿಲ್ಲ? ಸಾಮಾನ್ಯ ಸಂದರ್ಭಗಳಲ್ಲಿ ಇದು ಪ್ರಕಟವಾಗುವುದಿಲ್ಲ. ಅಸಾಮಾನ್ಯ-ಅನಿರೀಕ್ಷಿತ ಸಂದರ್ಭಗಳಲ್ಲಿ ಮಾತ್ರ ಪ್ರಕಟವಾಗುವುದು. crisis ಅನ್ನು ನಿರೀಕ್ಷೆ ಮಾಡಲಾಗುವುದಿಲ್ಲ. ಆದುದರಿಂದ ಅದಕ್ಕೆ ಪೂರ್ವಭಾವಿಯಾಗಿ ಸಿದ್ಧರಾಗಿರಲಾಗುವುದಿಲ್ಲ. ನಿರೀಕ್ಷಿಸಿಕೊಂಡಿದ್ದರೆ ಅದೇ ಕಾರಣದಿಂದ ಸಂಭವಿಸುವುದೇ ಇಲ್ಲ. ಏಕೆಂದರೆ, ಇವೆಲ್ಲ ತಿಳಿದು-ಪ್ರಜ್ಞಾಪೂರ್ವಕವಾಗಿ- ನಡೆಯುವುದಲ್ಲ. ಇದೇ ಆಶ್ಚರ್ಯ! ಪ್ರಜ್ಞಾಪೂರ್ವಕತೆಯು ದುರ್ಬಲವಾಗಿ ಕಂಡುಬಂದು ಅಪ್ರಜ್ಞಾಪೂರ್ವಕವಾಗಿ ನಡೆಯುವುದು ಪ್ರಬಲ ಎನ್ನುವ ಸತ್ಯ. ಜೀವನ್ಮರಣ ಪ್ರಶ್ನೆಯೊಂದು ಎದುರಾದಾಗ ಇಂಥ ಶಕ್ತಿಯೊಂದು- ಅದನ್ನು ಪ್ರಾಣಶಕ್ತಿ ಎನ್ನುವೆವು- ಬಿಡುಗಡೆಯಾಗುವುದು. ಉಪನಿಷತ್ತಿಗೆ ಇವೆಲ್ಲ ಗೊತ್ತು. ಜೊತೆಗೆ ಇನ್ನಷ್ಟು ಕೂಡಾ ಗೊತ್ತು!
ನಮ್ಮ ಎಂದರೆ ಮನುಷ್ಯ ಜೀವಿಗಳ ಅಪ್ರಜ್ಞೆಯ ಸ್ಥಿತಿಯೇ ತನ್ನ ಪ್ರಜ್ಞಾಸ್ಥಿತಿಯಾಗಿರುವ ತಣ್ತೀ ಒಂದಿದೆ ಎಂದು ಉಪನಿಷತ್ತಿಗೆ ಗೊತ್ತು! ಅದನ್ನು “ಸತ್ಯ’ ಎನ್ನಿ , ದೇವರೆನ್ನಿ , “ಪರ’ ಎನ್ನಿ- ಉಪನಿಷತ್ತು ಅದನ್ನು ಬಹು ಗಂಭೀರವಾಗಿ “ಸತ್ಯಸ್ಯ ಸತ್ಯಂ’ ಎನ್ನುವುದು. ಸತ್ಯದ ಸತ್ಯ, ನಿಜದ ನಿಜ- ಎನ್ನುವುದು. ಅಂದರೆ ಈ ಲೋಕದಲ್ಲಿ ನಮ್ಮ ಪ್ರಜ್ಞಾಪೂರ್ವಕ ವ್ಯವಹಾರಗಳಿಂದ ನಿಬಿಡವಾದ ಈ ಬದುಕನ್ನು-ನಮ್ಮ ಪ್ರಜ್ಞಾಪೂರ್ವಕತೆಯನ್ನು “ಸತ್ಯ’ ಎಂದು ನಾವು ಭಾವಿಸುವುದಾದರೆ, ಈ ಪ್ರಜ್ಞಾಪೂರ್ವಕತೆಯನ್ನು ಮೀರಿ ನಮ್ಮೊಳಗೇ ಅಡಗಿರುವ ಅಪ್ರಜ್ಞೆಯ ಸ್ಥಿತಿಯನ್ನು- ಇದೇ ದೊಡ್ಡ ಶಕ್ತಿಯೆಂದು ಚಿಮ್ಮುವ ಜಾಗವೂ ಹೌದು- “ಸತ್ಯದ ಸತ್ಯ’ ಎಂದು ಉಪನಿಷತ್ತು ಕರೆಯುವುದು. ಪ್ರಜ್ಞಾವಂತರಾದ ನಾವು crisis ಅನ್ನು ನಿರೀಕ್ಷೆ ಮಾಡಲಾರೆವು. ಇನ್ನೊಬ್ಬರಿಗೆ ಅದು ಉಂಟಾಗಲಿ ಎಂದು ಬಯಸಬಹುದು. ಅದು ವಿಕಾರ. ಆ ಮಾತು ಬೇರೆ. ಅನಿರೀಕ್ಷಿತತೆಯೇ crisisನ ಲಕ್ಷಣ. ಇದು ನಮ್ಮ ಸತ್ಯವಾದರೆ ನಮ್ಮೊಳಗಿನ ಅಪ್ರಜ್ಞೆಯು crisis ಅನ್ನು ನಿರೀಕ್ಷೆ ಮಾಡಿಕೊಂಡೇ ಇರುತ್ತದೆ ಎನ್ನಬಹುದು! ಏಕೆಂದರೆ ಜೀವನ್ಮರಣ ಪ್ರಶ್ನೆಯೊಂದು ಉಂಟಾದಾಗಲೇ ಅದು ಪ್ರಕಟಗೊಳ್ಳುವ ಸಾಧ್ಯತೆ. ಅದು ಪ್ರಕಟಗೊಂಡಾಗಲೇ ಇನ್ನೊಂದು ಸತ್ಯ ಇದೆ ಎಂಬ ಅರಿವು. ಆ ಅರಿವಿನಿಂದಲೇ ಇಲ್ಲಿ ಹೇಗೆ ಬದುಕಬೇಕು ಎಂಬ ಮೌಲ್ಯ ವಿವೇಚನೆ. ಎಂಥ ಅಚ್ಚರಿ!
ಖನ್ನತೆ ಎಂಬ ಸಂವೇದನೆಯ ಸೂಕ್ಷ್ಮತೆ
ಗೀತೆಯಲ್ಲಿ ಕೃಷ್ಣನ ಒಂದು ಮಾತು- ಬಹು ಪ್ರಸಿದ್ಧವಾದದ್ದು. ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ… ತದಾ ಆತ್ಮಾನಂ ಸೃಜಾಮ್ಯಹಂ ಎಂಬ ಮಾತು. ಧರ್ಮವು ಗ್ಲಾನಿಗೊಳಗಾದಾಗ, ಅಧರ್ಮವು ಆವೇಶದಿಂದ ವಿಜೃಂಭಿಸುವಾಗ, ಈ ವಿಜೃಂಭಣೆಯೇ ಧರ್ಮವಿರಬಹುದೆಂದು ಜನ ವಿವಂಚನೆಗೆ ಒಳಗಾದಾಗ, ಇವೆಲ್ಲದರಿಂದ ಧರ್ಮವು ಮತ್ತಷ್ಟು ಖನ್ನವಾದಾಗ- ನಾನು ನನ್ನನ್ನೇ ಪ್ರಕಟಿಸಿಕೊಳ್ಳುತ್ತೇನೆ. ಯುಗಯುಗಗಳಲ್ಲೂ ಈ ಮಾತು ನಿಜ ಎಂಬ ಕೃಷ್ಣನ ಮಾತು. ಈ ಮಾತು ನಮ್ಮೊಳಗಿನ ಅಪ್ರಜ್ಞೆಯ ಮಾತು! ಸ್ವ-ಇಚ್ಛೆಯಿಂದಲೆಂಬಂತೆ ನಮ್ಮೊಳಗೆ ಅಡಗಿರುವ “ಸತ್ಯ’ವು ಸ್ವಇಚ್ಛೆಯಿಂದಲೇ ತನ್ನ ಇರವನ್ನು ಹೊರಗೆಡಹಿದ ಮಾತು! ಜೀವನ್ಮರಣ ಪ್ರಶ್ನೆಯೊಂದು ನಿಮಗೆ ಎದುರಾಗುವುದನ್ನು ನಾನು ಕಾಯುತ್ತಿದ್ದೇನೆ ಎಂಬ ಸೂಚನೆಯ ಮಾತು. ಕೇವಲ ವೈಯಕ್ತಿಕ ಬದುಕಿನ ಪ್ರಶ್ನೆಗಳಿಗೆ- ಸಂದರ್ಭಗಳಿಗೆ ಅನ್ವಯಿಸಿ ಜೀವನ್ಮರಣ ಪ್ರಶ್ನೆಗಳೆಂದು ನೋಡಬೇಡಿ- ವಿಶಾಲವಾದ ಮಾನವ ಸಮುದಾಯದ ಬದುಕಿಗೆ ಅನ್ವಯಿಸಿ ನೋಡಿ- ಇದನ್ನೇ “ಧರ್ಮ’ ಎನ್ನುವುದು- ಹಾಗೆ ನೋಡಿದಾಗಲೆಲ್ಲ ಅಧರ್ಮದ ಮೆರೆದಾಟ, ಧರ್ಮಗ್ಲಾನಿ ಕಂಡುಬರುತ್ತಲೇ ಇದೆಯಾಗಿ- ನೀವು ಈ ಎಲ್ಲ ಕಾರಣಗಳಿಂದ ಚಿತ್ತಗ್ಲಾನಿಗೆ ಒಳಗಾದರೆ- ನಿಜಕ್ಕೂ ಒಳಗಾದರೆ- ಆ ಗ್ಲಾನಿಯ ಮೂಲಕ ನಾನೇ ಪ್ರಕಟಗೊಳ್ಳುವೆನೆನ್ನುವ ಮಾತು! ಲೋಕದ ಕಾರಣದಿಂದ ಮನುಷ್ಯ ಜೀವ ನಿಜವಾಗಿ ಖನ್ನತೆಗೆ ಒಳಗಾಗುವುದನ್ನು ಆ ಮೂಲಕ ಸಂವೇದನೆಯ ಸೂಕ್ಷ್ಮತೆಯನ್ನು ಪಡೆಯುವುದನ್ನು ನಮ್ಮೊಳಗಿನ ದೊಡ್ಡ ಜೀವವೊಂದು ಕಾಯುತ್ತಿದೆ! ನಾವು ಖನ್ನರಾದಂತೆ ಅದಕ್ಕೆ ಹೊರಹೊಮ್ಮುವ ಹುಮ್ಮಸ್ಸು. ನಾವು ಬಳಲಿದರೆ ಅದಕ್ಕೆ ಶಕ್ತಿ. ನಾವು ಕಂಗೆಟ್ಟರೆ ಅದಕ್ಕೆ ಜ್ಞಾನೋದಯ! ಎಂಥ ವಿಚಿತ್ರವಿದು. ನಮ್ಮೊಳಗೇ ನಡೆವ ವಿಚಿತ್ರವಿದು. ಈ ಲೋಕಕ್ಕೆ ನಮ್ಮ ನಡುವೆ ದೇವರು ಕೆಳಗಿಳಿದು ಬರುತ್ತಾನೆ ಎನ್ನುತ್ತದೆ ಹಲವು ಭಾರತೀಯ ವಾಗ್ಮಿಯ. ಇದಕ್ಕೆ “ಅವತರಣ’ ಎಂದು ಹೆಸರು. ಅಂದರೆ ಕೆಳಗಿಳಿದು ಬರುವುದು. ಹಾಗೆ ಬಂದವನು ಅವತಾರ ಅಥವಾ ಅವತಾರಿ. ಇಳಿದು ಬರುವುದು ಏಕೆ? ನಮ್ಮನ್ನು ಉದ್ಧರಿಸಲಿಕ್ಕೆ. ಅಂದರೆ ನಾವು ಮೇಲೇರುವುದಕ್ಕೆ. ನಾವು ಏರುವುದಕ್ಕೆ ಅದು ಇಳಿಯುವುದು. ಒಂದು ಬದಿಯಲ್ಲಿ ಏರಿಕೆ. ಇನ್ನೊಂದು ಬದಿಯಲ್ಲಿ ಇಳಿಕೆ! The way up is the way down ಎಂದವನು ಕವಿ ಎಲಿಯಟ್! ಪತನ- ಉತ್ಥಾನೇರ್ ಬಂಧುರ ಪಂಥಾ ಎಂದವರು ರವೀಂದ್ರರು. ಪ್ರಜ್ಞೆ-ಅಪ್ರಜ್ಞೆಗಳ ಸಂಬಂಧ ಹೀಗೆ ಇದೆ. ಇದು ಉಪನಿಷತ್ತಿಗೆ ಗೊತ್ತು.
ಆದುದರಿಂದಲೇ ನಚಿಕೇತನಲ್ಲಿ “ಶ್ರದ್ಧೆ’ಯು ಎಚ್ಚರಗೊಂಡಿತು ಎನ್ನುವಾಗ ಹುಡುಗನ ಅಪ್ರಜ್ಞೆಯು ಎಚ್ಚರಗೊಂಡಿತು ಎನ್ನಬೇಕು. ಅದರ ಜೊತೆಗೆ ದೊಡ್ಡ ಶಕ್ತಿಯೊಂದು- ಭಿನ್ನ ರೀತಿಯ ಶಕ್ತಿಯೊಂದು ಬಿಡುಗಡೆಗೊಂಡಿತು. ಭಿನ್ನ ರೀತಿ ಎಂದಾಗ ಇದುವರೆಗೆ ಪರಿಚಿತವಲ್ಲದ, ಆಕ್ರಾಮಕವಲ್ಲದ, ಸಂವೇದನೆಯನ್ನು ಮುಟ್ಟಲುದ್ದೇಶಿಸುವ, ಯುಗದ ಮನೋಧರ್ಮವನ್ನೇ ಬದಲಿಸಬಲ್ಲ ಶಕ್ತಿ. ತಂದೆ ವಾಜಶ್ರವಸನನ್ನು ನಿಜವಾಗಿ ಪ್ರೀತಿಸುವ ಶಕ್ತಿ. ಅವನ ಉದ್ಧಾರಕ್ಕಾಗಿ ತನ್ನನ್ನೇ ಒಪ್ಪಿಸಬಲ್ಲ ಶಕ್ತಿ! ಈ ಶಕ್ತಿಗೆ ಮತ್ತು ಶ್ರದ್ಧೆಗೆ ನಿರಂತರ ಒಡನಾಟವಿದೆ ಎಂದು ಉಪನಿಷತ್ತು ಸೂಚಿಸಿರುವುದು ಮಾರ್ಮಿಕವಾಗಿದೆ.
ಸೃಷ್ಟಿಯಲ್ಲಿ “ಶ್ರದ್ಧೆ’ಯ ಜಾಗ ಎಲ್ಲಿದೆ? “ಶ್ರದ್ಧೆ’ಯ ಮೊದಲು ಏನಿತ್ತು? ಶ್ರದ್ಧೆಗೆ ಮೊದಲು “ಪ್ರಾಣ’ವಿತ್ತು. ಪ್ರಾಣ ತರಂಗಗಳಿದ್ದುವು. ಪ್ರಾಣದಿಂದಲೇ “ಶ್ರದ್ಧೆ’ ಒಡಮೂಡಿತು. “ಪ್ರಾಣಾತ್ ಶ್ರದ್ಧಾಂ’ ಎಂದು ಪ್ರಶ್ನೋಪನಿಷತ್ತಿನ ಮಾತು. ಆದುದರಿಂದಲೇ ಶ್ರದ್ಧೆಯು ಎಚ್ಚರಗೊಂಡಾಗ ಅಜ್ಞಾತ ಶಕ್ತಿಪ್ರವಾಹವೊಂದು ಹೊಮ್ಮುವುದು! ಶ್ರದ್ಧೆಯ ಮೂಲಕವೇ ಪ್ರಾಣ ತರಂಗಗಳು ಕ್ರಿಯಾಪರವಾಗುವುವು. ಈ ಅನುಭವದ ಮೇಲಿನಿಂದಲೇ ಪ್ರಾಣಶಕ್ತಿ ಮತ್ತು ಶ್ರದ್ಧೆ- ಒತ್ತೂತ್ತಿಗೆ ಇವೆ ಎಂಬ ಕಾಣ್ಕೆ ಉಂಟಾಯಿತು. ಶ್ರದ್ಧೆಗೆ ಮೊದಲು ಪ್ರಾಣವಿದ್ದರೆ ಶ್ರದ್ಧೆಯ ಅನಂತರ “ಆಕಾಶ’ ಇದೆ. ಪಂಚಭೂತಗಳಲ್ಲಿ ಮೊದಲನೆಯದು ಮತ್ತು ಅತಿಸೂಕ್ಷ್ಮವಾದದ್ದು. ಆಕಾಶವೆಂದರೆ ಎಡೆ-ಬಯಲು- ಎಲ್ಲ ಮೂರ್ತಾಮೂರ್ತ ವಸ್ತುಗಳಿಗೆ ಆಸ್ಪದವಾಗಿರುವುದು. ನಿಜ. ಆದರೆ ಶ್ರದ್ಧೆಯು ಆಕಾಶಕ್ಕಿಂತ ಸೂಕ್ಷ್ಮವಾದ ಸಂವೇದನೆಯಾಗಿದೆ! ಆದುದರಿಂದಲೇ ಶ್ರದ್ಧೆಯು ಜಾಗ್ರತವಾದಾಗ ಅದು ಎಲ್ಲವನ್ನೂ ಒಳಗೊಳ್ಳುವ ಕಾಣೆRಯಾಗಿ ಅರಳಿಕೊಳ್ಳುತ್ತದೆ. “ನನ್ನನ್ನು ಯಾರಿಗೆ ಕೊಡುತ್ತೀಯೆ?’ ಎಂದು ಕೇಳುವಾಗ ತನಗೆ ತಿಳಿದಿರದ-ಯಾರಿಗೂ ತಿಳಿದಿರದ ಭವಿಷ್ಯವನ್ನು ಒಳಗೊಳ್ಳುವುದಕ್ಕೆ ಅದು ಸಜ್ಜಾಗಿದೆ ! ಆಕಾಶದಂಥ ಆಕಾಶವು ಶ್ರದ್ಧೆಯಲ್ಲಿಯೇ ಸೇರಿಕೊಳ್ಳಬೇಕು !
ನಿಜ. ಎಲ್ಲವನ್ನೂ ಒಪ್ಪೋಣ. ಆದರೆ ನನ್ನನ್ನು ಯಾರಿಗೆ ಕೊಡುತ್ತೀಯೆ? ಎಂಬ ಎದೆ ಕರಗಿಸುವ ಮಾತಿಗೆ ತಂದೆ ವಾಜಶ್ರವಸ ಉರಿದೆದ್ದು “”ನಿನ್ನನ್ನು ಮೃತ್ಯುವಿಗೆ ಕೊಟ್ಟಿದ್ದೇನೆ” ಎಂದನಲ್ಲ- ಈ ಮೂಲಕ ಶ್ರದ್ಧೆಯ ಪರೀಕ್ಷೆ- ಅಗ್ನಿ ಪರೀಕ್ಷೆಯೇ ನಡೆಯಬೇಕೆನ್ನುವುದು ಉಪನಿಷತ್ತಿನ ಕೆಚ್ಚು. ಶ್ರದ್ಧೆಯ ಪರೀಕ್ಷೆ ನಡೆಯುವಾಗ ಅಹಂಕಾರದ ಪರೀಕ್ಷೆಯೂ ನಡೆದುಹೋಗುತ್ತದೆ. ಯಾವ ಬಗೆಯಲ್ಲೂ ಸರಳೀಕರಣ ಉಪನಿಷತ್ತಿಗೆ ಇಷ್ಟವಲ್ಲ. ಅದು ಉಪನಿಷತ್ತಿನ ಶ್ರದ್ಧೆ !
ರೇಖಾಚಿತ್ರ : ಎಂ. ಎಸ್. ಮೂರ್ತಿ
ಲಕ್ಷ್ಮೀಶ ತೋಳ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.