ಹೀಗೂ ಉಂಟು: ಇಮೋಜಿಗಳು ಸಾರ್ ಇಮೋಜಿಗಳು
Team Udayavani, Aug 13, 2017, 6:30 AM IST
ಇಮೋಜಿ ಗಂಡಾ ಹೆಣ್ಣಾ?” ಅಂತ ಕೇಳಿದೆ.
ತಕ್ಷಣ ಜೊತೆಯಲ್ಲಿದ್ದವರು ಆಕಾಶ ಬಿರಿಯುವ ಹಾಗೆ ನಕ್ಕರು.
ಇಮೋಜಿ ಅಂದ್ರೆ ನಗು, ಅಳು, ಚೇಷ್ಟೆ ಅಷ್ಟೇ… ಅದಕ್ಕೆ ಗಂಡು ಹೆಣ್ಣು ಅಂತ ಉಂಟಾ?
“”ಹೌದಪ್ಪಾ, ನೀನೇನೋ ಇಮೋಜಿ ಗಂಡಾ ಹೆಣ್ಣಾ ಅಂದುಬಿಟ್ಟೆ , ಎರಡೂ ಅಲ್ಲದವರು ಏನು ಮಾಡ್ತಾರೆ” ಅಂತ ಇನ್ನೊಬ್ಬರು ಬಾಣ ತೂರಿಬಿಟ್ಟರು.
ಇದೇ ಪ್ರಶ್ನೆಯನ್ನ ಇಮೋಜಿಗಳನ್ನು ರೂಪಿಸುವ, ಆರಿಸುವ, ಜನರ ಮುಂದಿಡುವ “ಯುನಿಕೋಡ್’ ಸಂಸ್ಥೆಯ ಮುಂದೆ ಹಿಡಿದು ನಿಂತದ್ದು ಇಡೀ ಜಗತ್ತು.
“”ಅದು ಸರಿ, ನೀವೇನೋ “ಹಾಯ…’ ಅನ್ನೋಕೆ, “ಬಾಯ…’ ಅನ್ನೋಕೆ, “ಹೈ ಫೈವ್’ಗೆ ಅಂತ ಬೇಕಾದಷ್ಟು ಇಮೋಜಿ ರೂಪಿಸಿದ್ದೀರಲ್ಲಾ ಅದರಲ್ಲಿ ಯಾಕೆ ಸ್ವಾಮಿ ಹೆಣ್ಣು ಮಕ್ಕಳಿಲ್ಲ? ಅವರಿಗೆ ಹಾಯ…, ಬಾಯ್ ಅನ್ನೋಕೆ ಬರಲ್ವಾ, ಅಥವಾ ಅವರು ಗಂಡಸರ ಥರಾ ಕೆಲಸ ಮಾಡ್ತಿಲ್ವಾ?” ಅಂತ ಒಂದಷ್ಟು ಸಂಘಟನೆಗಳು ಎದ್ದು ನಿಂತೇ ಬಿಟ್ಟವು. ಆದರೆ, ಇನ್ನಷ್ಟು ಮಹಿಳೆಯರು ಇದ್ದರು- ಇಂಜಿನಿಯರ್‌ಗಳು, ನರ್ಸ್‌ಗಳು, ಸಂಶೋಧಕರು- ಅವರಿಗೆ ತಮ್ಮ ವೃತ್ತಿ ಸೂಚಿಸುವ ಇಮೋಜಿ ಬಳಸಬೇಕು ಅಂದ್ರೆ ಆಯ್ಕೆಯೇ ಇಲ್ಲ. ಯಾಕೆಂದರೆ, ಇರುವುದೆಲ್ಲ ಗಂಡಸರ ಚಿತ್ರವೇ. ಇಮೋಜಿ ಪ್ರಪಂಚಕ್ಕೆ ಕಾಮಾಲೆ ಕಣ್ಣು. ಹಾಗಾಗಿ, ಅದು ನೇರಾ ನೇರ ಲಿಂಗ ವಿರೋಧಿಯಾಗಿ, ವರ್ಣಭೇದ ಮಾಡುವ, ಜಗತ್ತು ಅತಿ ವೇಗದಲ್ಲಿ ಓಡುತ್ತಿದೆ ಎನ್ನುವುದನ್ನು ಅರಗಿಸಿಕೊಳ್ಳಲಾಗದ ಒಂದು ಮನಸ್ಸನ್ನೇ ಬಿಂಬಿಸುತ್ತಿತ್ತು. ಜಗತ್ತಿನ ಎಲ್ಲಾ ಸಂಕುಚಿತ ನೋಟ ಅಲ್ಲಿತ್ತು.
ಆದರೆ, ಇಮೋಜಿ ಎಂದರೆ ಅದೊಂದು ಚಿತ್ರ ಅಷ್ಟೇ ಎಂದು ಒಪ್ಪಿಕೊಳ್ಳಲು ಜಗತ್ತಿನ ಅನೇಕರು ಸಿದ್ಧರಿರಲಿಲ್ಲ. ಏಕೆಂದರೆ, ಇಮೋಜಿ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎನ್ನುವುದು ಅವರಿಗಿತ್ತು. ಭಾಷೆ ಎಂದರೆ ಅಕ್ಷರ ಎನ್ನುವ ನೋಟವನ್ನೇ ಈ ಇಮೋಜಿ ಆಗಮನ ನಿವಾಳಿಸಿಹಾಕುತ್ತಿತ್ತು. ಭಾಷೆ ಎನ್ನುವುದು ಅಕ್ಷರದಿಂದ ಕ್ರಮೇಣ ಚಿತ್ರಗಳಾಗುವತ್ತ ವಾಲಿಕೊಳ್ಳುತ್ತಿತ್ತು. ಹೊಸ ಪೀಳಿಗೆಗೆ, ಧಾವಂತದ ಪೀಳಿಗೆಗೆ ಅಕ್ಷರವೇ ಶತ್ರು ಎನ್ನುವ ಕಾಲ ಬಂದುಹೋಗಿತ್ತು. ಆ ಕಾರಣಕ್ಕೆ ಒಂದು ಬೆರಳ ಸ್ಪರ್ಶದಲ್ಲಿ ಒಂದು ವಾಕ್ಯವನ್ನೋ, ಒಂದು ಭಾವನೆಯನ್ನೋ, ಒಂದು ಪ್ರಶ್ನೆಯನ್ನೋ, ಒಂದು ಮನೋಲೋಕವನ್ನೋ ಬಿಚ್ಚಿಟ್ಟುಬಿಡುವ ಇಮೋಜಿಗಳನ್ನು ಆ ಜನಾಂಗ ಬಾಚಿಕೊಳ್ಳಲು ಶುರುವಾಗಿತ್ತು.
ಕಾಮಿಕ್ಸ್‌ಗಳನ್ನು ನೀವು ಓದಿದ್ದರೆ ಸ್ವಲ್ಪ ಯೋಚಿಸಿ ಅದರಲ್ಲಿ, “ವಾಹ್! ಐಡಿಯಾ’ ಅನ್ನುವುದನ್ನು ಹೇಗೆ ತೋರಿಸುತ್ತಾರೆ. ಸಿಂಪಲ್. ಒಂದು “ಝಗ್’ ಎಂದು ಹತ್ತಿರುವ ಬಲ್ಬ್ ಮೂಲಕ. ಅದೇ ಒಂದು ರೀತಿಯಲ್ಲಿ ಈ ಇಮೋಜಿಗಳು ಹುಟ್ಟಿಬಿಡಲು ಕಾರಣವಾಗಿ ಹೋಯಿತು. ಶಿಗೇತಕ ಕುರಿಟ ಎನ್ನುವ ಕಲಾವಿದ ಜಪಾನ್‌ನಲ್ಲಿ ಅತ್ಯಂತ ಜನಪ್ರಿಯವಾಗಿರುವ “ಮಂಗಾ’ ಕಾಮಿಕ್ಸ್ ನೋಡುತ್ತಾನೆ. ಅಲ್ಲಿ, ಒಂದಲ್ಲ ಎರಡಲ್ಲ ಈ ರೀತಿ ಎಷ್ಟೊಂದು ಸಿಂಬಲ್‌ಗಳಿದ್ದವು, ಚೀನೀ ಅಕ್ಷರಗಳೂ ಚಿತ್ರಗಳೇ, ಜೊತೆಗೆ ಜಗತ್ತಿನ ಎಲ್ಲೆಡೆ ಆ ವೇಳೆಗಾಗಲೇ ಹವಾಮಾನ ವರದಿ ನೀಡಲು ಬಳಸುತ್ತಿದ್ದುದು ಚಿತ್ರಗಳನ್ನೇ. ಆಗ ಅವನಿಗೆ ಮಾತಿಗೆ ಚಿತ್ರವನ್ನೇ ಕೊಡಬಹುದಲ್ಲ ಎನಿಸಿತು. ಅಲ್ಲಿಂದ ಶುರುವಾಯಿತು ನೋಡಿ, ಅವನ ಹೊಸ ವರಸೆ. ಆತ ಜಪಾನಿನ ಬೀದಿ ಬೀದಿ ಅಲೆದ. ಮಾರುಕಟ್ಟೆಯಲ್ಲಿ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ, ಶಾಲೆ-ಕಾಲೇಜು ಬಳಿ ನಿಂತ. ಕಣ್ಣಿಗೆ ಕಂಡ ಅಷ್ಟನ್ನೂ ಮನಸ್ಸಿನೊಳಗೆ ಸೇರಿಸುತ್ತ ಹೋದ. ಆ ನಂತರ ಇಡೀ ನಗರದಲ್ಲಿ ಸರ್ವೇಸಾಮಾನ್ಯವಾಗಿ ಜನ ಬಳಸುವ ಹಾವಭಾವಗಳಿಗೆ ಚಿತ್ರದ ರೂಪು ಕೊಟ್ಟ. ಮೊದಲ ಕಂತಾಗಿ 180 ಇಮೋಜಿಗಳು ರೂಪುಗೊಂಡವು.
ಹೊಸ ಭಾಷೆಯ ಆಗಮನ
ಅದು 1999. ಶುರುವಾಯಿತು ನೋಡಿ ಹೊಸ ಭಾಷೆಯ ಆಗಮನ. ಅದಾದ ಒಂದು ವರ್ಷಕ್ಕೇ ಭಾಷೆಗೆ ಭಾಷ್ಯ ಬರೆಯುವ “ಯುನಿಕೋಡ್’ ಸಂಸ್ಥೆಗೆ ಇದು ಮುಂದಿನ ದಿನಗಳಲ್ಲಿ ಇಡೀ ಜಗತ್ತನ್ನು ಹೇಗೆ ಮೋಡಿ ಮಾಡಿಬಿಡುತ್ತದೆ ಎನ್ನುವುದರ ಸುಳುಹು ಸಿಕ್ಕಿಹೋಯಿತು. ಒಂದು ವರ್ಷ ಆಗುವಷ್ಟರಲ್ಲೇ ಯುನಿಕೋಡ್ ತಜ್ಞರು ಕುಳಿತು ಜಪಾನಿಗೆ ಮಾತ್ರ ಸೀಮಿತವಾಗಿದ್ದ ಈ ಚಿತ್ರ ಭಾಷೆಗೆ ಜಾಗತಿಕ ಸ್ಪರ್ಶ ನೀಡಲು ಶುರು ಮಾಡಿದರು. “ಆಪಲ…’ ಮೊಬೈಲ್‌ನಲ್ಲಿ ಆನಂತರ ಆಂಡ್ರಾಯ… ಮೊಬೈಲ್‌ಗಳಲ್ಲಿ ಇಮೋಜಿಗಳು ಕ್ಯಾಟ್‌ವಾಕ್ ಮಾಡಲು ವೇದಿಕೆ ಸಜ್ಜಾಯಿತು. ಆದರೆ, ಇಲ್ಲೊಂದು ಸಮಸ್ಯೆ ಇತ್ತು. ಜಪಾನಿನಲ್ಲಿ ಬದನೇಕಾಯಿ ಅಂದರೆ ಅಮೆರಿಕದಲ್ಲಿ ಅದಕ್ಕೆ ತೀರಾ ತೀರಾ ಕೆಟ್ಟ ಅರ್ಥ. ಇಂತಹ ದೇಶದಿಂದ ದೇಶಕ್ಕೆ ಬದಲಾಗಿಬಿಡುವ ಅರ್ಥಗಳನ್ನು ನೀಡುವ ಚಿತ್ರಗಳಿಗೆ ಕೊಕ್ ನೀಡಲಾಯಿತು. ಇನ್ನೊಂದೆಡೆ ಜಪಾನಿನಲ್ಲಿ ಶಿರಬಾಗಿ ನಮಸ್ಕರಿಸುವ ಪದ್ಧತಿ ಇದೆ. ಅಂತಹ ಜಪಾನೀ ಸಂಸ್ಕಾರಕ್ಕೆ ಮಾತ್ರ ಒಗ್ಗುವಂತಿದ್ದ ಇಮೋಜಿಗಳಿಗೆ ವಿದಾಯ ಹೇಳಲಾಯಿತು.
ಜಗತ್ತಿನಲ್ಲಿ ಅತಿ ವ್ಯಾಪಕವಾಗಿ ಬಳಸುವ ಆಪರೇಟಿವ್ ಸಿಸ್ಟಮ್‌ಗಳಿಗೆ ಹೊಂದಿಕೆಯಾಗಲು, ಎಲ್ಲರಿಗೂ ಸಲ್ಲುವ ಭಾಷೆ ರೂಪಿಸುವುದೇ ಯುನಿಕೋಡ್ ಸಂಸ್ಥೆ. ಆ ಸಂಸ್ಥೆಯೇ ಬೆರಳು ಕಚ್ಚುವಂತೆ ಇಮೋಜಿಗಳು ಮಿಡತೆಯ ಧಾಳಿಯಂತೆ ಜಗತ್ತನ್ನು ಆಕ್ರಮಿಸಿಕೊಂಡುಬಿಟ್ಟವು.
ಆಗಲೇ ಆಕ್ಸ್‌ಫರ್ಡ್ ಡಿಕ್ಷನರಿ ಸಹ ರಂಗಪ್ರವೇಶ ಮಾಡಿದ್ದು. ಯಾವಾಗಲೂ ಪದಗಳನ್ನು ಮಾತ್ರ ಗಮನಿಸಿ ಅದನ್ನು ತನ್ನ ನಿಘಂಟಿಗೆ ಸೇರಿಸಿಕೊಳ್ಳುವ ಮೂಲಕ ಅದಕ್ಕೆ ಮಾನ್ಯತೆ ಕೊಡುತ್ತಿದ್ದ ಆಕ್ಸ್‌ಫರ್ಡ್ ನಿಘಂಟು 2015ರಲ್ಲಿ ಒಂದು ಇಮೋಜಿಯನ್ನು ತನ್ನ ನಿಘಂಟಿನ ಒಳಗೆ ಭಾಷೆಯಾಗಿ ಬಿಟ್ಟುಕೊಂಡಿತು. ಅದು ಕಣ್ಣಲ್ಲಿ ನೀರು ಬರುವಂತೆ ನಗು ಉಕ್ಕಿಸುತ್ತಿರುವ ಇಮೋಜಿ. ಆಗಲೇ ಆಕ್ಸ್‌ಫರ್ಡ್‌ನ ಭಾಷಾ ಪಂಡಿತರು ಹೇಳಿದ್ದು, “ಕಾಲ ಬದಲಾಗುತ್ತಿದೆ. ಹಾಗೆಯೇ ಭಾಷೆಯೂ. ಭಾಷೆ ಬದಲಾಗುತ್ತಿರುವುದನ್ನು ಮಡಿವಂತಿಕೆಯಿಂದ ನೋಡಬೇಡಿ’ ಎಂದು.
ಸರಿಬಿಡಪ್ಪಾ, ಇಮೋಜಿ ಏನೋ ಭಾಷೆ ಆಯಿತು. ಆದರೆ ಈ ಗಂಡು, ಹೆಣ್ಣು, ಉಭಯಲಿಂಗಿಗಳು ಇವೆಲ್ಲ ಯಾಕೆ ಎನ್ನುವ ಬಾಣವನ್ನು ಹಿಡಿದು ನನ್ನ ಗೆಳೆಯರು ಇನ್ನೂ ಕುಳಿತಿದ್ದರು. ಆಗಲೇ ನಾನು ಈ ಇಮೋಜಿ ಹಾಗೂ ಸಾಂಸ್ಕೃತಿಕ ವೈವಿಧ್ಯದ ಬಗ್ಗೆ ಭಾಷಣ ಮಾಡಬೇಕಾಗಿ ಬಂದದ್ದು. “ನೋಡಿ, ಇಮೋಜಿ ಎನ್ನುವುದು ಒಂದು ಭಾಷೆ ಆಗಿಬಿಟ್ಟಾಗ ಅದು ಸಂಸ್ಕೃತಿಯನ್ನೂ ಪ್ರತಿನಿಧಿಸಬೇಕು’ ಅಂದೆ. “ಗೊತ್ತಾಗಲಿಲ್ಲ’ ಎನ್ನುವಂತೆ ಮೂತಿ ತಿರುವಿದರು. ಆಗಲೇ ನಾನು ಈ ಇಮೋಜಿಗಳ ಬಳಕೆಯ ಬಗ್ಗೆ ಮಿಶಿಗನ್ ವಿಶ್ವವಿದ್ಯಾಲಯ ಇತ್ತೀಚೆಗೆ ತಾನೇ ನಡೆಸಿದ ಸಮೀಕ್ಷೆಯನ್ನು ಬಿಚ್ಚಿಡಬೇಕಾಗಿ ಬಂತು. ನೋಡಿ ಯಾವ ದೇಶ ಯಾವ ಇಮೋಜಿಯನ್ನು ಬಳಸುತ್ತಿದೆ ಎನ್ನುವುದರಲ್ಲಿಯೇ ಆ ದೇಶದ ಅಂತರಂಗವನ್ನು ಅರ್ಥ ಮಾಡಿಕೊಂಡುಬಿಡಬಹುದು. ಫ್ರಾನ್ಸ್‌ನಲ್ಲಿ ಲವ್ ಸಿಂಬಲ್‌ಗಳು ಇರುವ ಎಲ್ಲಾ ಇಮೋಜಿ ಪಾಪ್ಯುಲರ್. ಆಸ್ಟ್ರೇಲಿಯಾ, ಜೆಕೊಸ್ಲೊವಾಕಿಯಾ ಇಲ್ಲೆಲ್ಲಾ ಖುಷ್ ಖುಷಿಯಾಗಿರುವ ಇಮೋಜಿಗಳ ಬಳಕೆ ಜಾಸ್ತಿ. ಆದರೆ, ಅದೇ ದಕ್ಷಿಣ ಅಮೆರಿಕದ ದೇಶಗಳಲ್ಲಿ ನೆಗೆಟಿವ್ ಇಮೋಜಿಗಳು ಹೆಚ್ಚು. ಅಳು, ಬೇಸರ ಹತಾಶೆ… ಹೀಗೆ.
ಅದಕ್ಕೇ “ಇಮೋಜಿ ಅಂದ್ರೆ ಬರೀ ಇಮೋಜಿ ಅಲ್ಲ; ಅದು ಒಂದು ನೋಟ’ ಅಂದೆ. ಕೇಳುತ್ತಿರುವವರ ಮುಖದಲ್ಲಿ ಗೊಂದಲದ ಒಂದು ರೇಖೆಯೂ ಅಲುಗಿರಲಿಲ್ಲ. “”ಸರಿ ಬಿಡಿ, ಬಾರ್ಬಿ ಡಾಲ್ ಬಂತಲ್ವಾ, ಅದು ಒಂದು ಗೊಂಬೆ ಅಷ್ಟೇ. ಆದರೆ, ಆ ಗೊಂಬೆ ವಿರುದ್ಧ ಜಗತ್ತಿನ ಎಲ್ಲಾ ಕಡೆ ಜೋರು ಅಪಸ್ವರ ಬಂತಲ್ಲ ಯಾಕೆ?” ಎಂದೆ. ಆಗ ಎದುರಿಗಿದ್ದ ಮುಖಗಳಲ್ಲಿ ಒಂದಿಷ್ಟು ಭಾವ ಬದಲಾಯಿತು. ಬಾರ್ಬಿ ಬಂದಾಗಲೇ ಚರ್ಚೆ ಶುರುವಾಯಿತು. “ಕೆಂಚು ಕೂದಲು, ಬೆಕ್ಕಿನ ಕಣ್ಣು, ಸಣ್ಣ ಸೊಂಟ ಇದ್ದರೆ ಮಾತ್ರ ಮಹಿಳೇನಾ ನಾವೇನು ಮನುಷರಲ್ವೇ ಅಂತಾ…’ ಆ ಸಮಸ್ಯೆ ಮಹಿಳೆಯರದ್ದು ಮಾತ್ರವೇ ಆಗಿರಲಿಲ್ಲ ಗಂಡಸರಿಗೂ ಮಕ್ಕಳಿಗೂ ಇದೇ ಬಣ್ಣದ ಸಮಸ್ಯೆ ಕಾಡಲು ಶುರುವಾಯ್ತು. ಬಾರ್ಬಿ ಡಾಲ್ ಯಾವಾಗ ಮಾರುಕಟ್ಟೆಗೆ ಬಂತೋ ಅವಳ ಸೊಂಟ ಬಣ್ಣ ನೋಡಿಯೇ ಜಗತ್ತಿನಾದ್ಯಂತ ಅಪಸ್ವರದ ಅಲೆಗಳು ಎದ್ದಿತು. ಇದು ಬಿಳಿ ಬಣ್ಣದವರು ಬೇಕೆಂದೇ ನಮ್ಮ ಮೇಲೆ ಹೇರುತ್ತಿರುವ ವರ್ಣ ಬೇಧ ಅಂತ. ಬಿಳಿ ಮಾತ್ರ ಶ್ರೇಷ್ಠ ಅನ್ನೋ ಪರೋಕ್ಷ ಹುನ್ನಾರದ ವಿರುದ್ಧ ಬರೀ ಬೀದಿ ಮೆರವಣಿಗೆ ಮಾತ್ರವೇ ನಡೆಯಲಿಲ್ಲ, ಅನೇಕ ಕಂಪೆನಿಗಳು ಬಾರ್ಬಿಗೆ ಪ್ರತಿಯಾಗಿ ಬಿಳಿ ಅಲ್ಲದ ಬಾರ್ಬಿಗಳನ್ನು ಮಾರುಕಟ್ಟೆಗೆ ಬಿಟ್ಟವು.
ಈಗಲೂ ಅದೇ ದನಿ ಎದ್ದಿತು. ಇಮೋಜಿಗಳ ವಿರುದ್ಧ. ಒಂದೆಡೆ ಮಹಿಳೆಯರ ಬಗ್ಗೆ ತಾರತಮ್ಯವನ್ನ ತೋರಿಸ್ತಿದೆ ಅಂತ ಜೋರು ದನಿ, ಇನ್ನೊಂದೆಡೆ ವರ್ಣಬೇಧಕ್ಕೆ ಅಡಿಪಾಯ ಹಾಕ್ತಿ¨ªಾರೆ. ಜನ ಸುಮ್ಮನೆ ಕೂಡಲಿಲ್ಲ. ಈ ಇಮೋಜಿ ಮಾಡೋರು ಯಾರು ಅಂತ ಹುಡುಕಿದರು. ಅವರ ಮುಂದೆ ಸಲಹೆಗಳ ರಾಶಿಯೇ ಬಿತ್ತು. ಆಗಲೇ ಯೂನಿಕೋಡ್ ಸಂಸ್ಥೆ ಎಚ್ಚೆತ್ತುಕೊಂಡಿದ್ದು. ಯುನಿಕೋಡ್ ಕನ್ಸೋರ್ಟಿಯಂ ಅಂತ ಇದೆ. ಅದು ಸಭೆ ಕೂತು ಜಗತ್ತಿನ ಎಲ್ಲೆಡೆಯಿಂದ ಬರುವ ಸಲಹೆಗಳನ್ನು ಪರಿಶೀಲಿಸುತ್ತೆ. ಅದು ಯಾಕೆ, ಅದರ ಪರಿಣಾಮ ಏನು, ಜನ ಬಳಸ್ತಾರಾ ಈ ಎÇÉಾ ಲೆಕ್ಕ ಇಟ್ಟುಕೊಂಡು ಒಂದಷ್ಟು ಹೊಸ ಇಮೋಜಿಗಳನ್ನು ಆಯ್ಕೆ ಮಾಡುತ್ತೆ. ಏನಿಲ್ಲಾ ಅಂದ್ರೂ ಎರಡು ವರ್ಷ ಬೇಕು, ಹೊಸ ಇಮೋಜಿ ನಮ್ಮ ಮೊಬೈಲ್‌ನಲ್ಲೋ, ಕಂಪ್ಯೂಟರ್‌ನಲ್ಲೋ ಇಣುಕೋಕೆ.
“ನೀವು ಇಮೋಜಿ ಬಳಸ್ತಾ ಇದ್ದೀರಾ?’ ಹಾಗಂತ ಪ್ರಶ್ನೆ ಕೇಳ್ಳೋದೇ ಮೂರ್ಖತನ. ಇರಲಿ ಬಿಡಿ, ನೀವು ಬಳಸ್ತಾ ಇರೋ ಇಮೋಜಿಗಳಲ್ಲಿ ಒಂದಷ್ಟು ಬದಲಾವಣೆ ಆಗಿದೆ ಗಮನಿಸಿದ್ದೀರಾ? ಮೊದಲು ಫೇಸ್‌ಬುಕ್‌ನಲ್ಲಿ ಲೈಕ್ ಸಿಂಬಲ್ ಒತ್ತುವಾಗ ಒಂದೇ ಸಿಂಬಲ್ ಬರ್ತಿತ್ತು. ಈಗ ಏನಿಲ್ಲಾ ಅಂದ್ರೂ ಐದು ಸಿಂಬಲ್ ಇರುತ್ತೆ. ಯಾಕೆ ಕೇಳಿ. ಅದು ಬರೀ ಕೆಂಚು, ಬಿಳಿ ಅಲ್ಲ, ಈಗ ಕಂದು, ಕಪ್ಪು, ಅರೆಗಪ್ಪು ಹೀಗೆ ಬದಲಾಗಿದೆ. ಇಮೋಜಿಗಳು ಜಗತ್ತಿನಲ್ಲಿ ಬರೀ ಬಿಳಿಯರು ಇಲ್ಲ ಅನ್ನೋದನ್ನ ಅರ್ಥ ಮಾಡಿಕೊಳ್ತಾ ಇವೆ.
ಅಷ್ಟೇ ಅಲ್ಲ, ಈಗ ಸುಮ್ಮನೆ ವಾಟ್ಸಾಪ್‌ನ ಇಮೋಜಿ ಲಿಸ್ಟ್ ಗೆ ಹೋಗಿ ನೋಡಿ. ಅಲ್ಲೂ ಏನೇನೋ ಚೇಂಜ್ ಆಗಿದೆ. ಮೊದಲು ಗಂಡಸರೇ ಇದ್ದ ಜಾಗದಲ್ಲಿ ಎಷ್ಟೊಂದು ಹೆಂಗಸರೂ ಬಂದಿದ್ದಾರೆ. ಹೆಣ್ಣು ಅಂದ್ರೆ ಬರೀ ಮನೆಕೆಲಸದವಳು ಅಂದುಕೊಂಡಿದ್ದ ಇದೇ ಇಮೋಜಿ, ಈಗ ಸಮಾಜವನ್ನ ಮುನ್ನಡೆಸುವವಳಾಗಿ ಅವಳನ್ನು ಬದಲು ಮಾಡಿದೆ. ಅಷ್ಟೇ ಅಲ್ಲ, ಆ ಹೆಂಗಸರ ಬಣ್ಣ, ಭಾವನೆಗಳಲ್ಲೂ ವೆರೈಟಿ ಬಂದಿದೆ. ಇಷ್ಟಕ್ಕೆ ಕೊನೆ ಮಾಡಬಹುದಿತ್ತೇನೋ. ಆದರೆ ಇಮೋಜಿ ಗಂಡಾ ಹೆಣ್ಣಾ..ಅಂತ ಕೇಳಿದಾಗ “ಗೊಳ್’ ಅಂತ ನಕ್ಕಿದ್ರಲ್ಲಾ ಅದು ನನ್ನ ತಲೆಯಲ್ಲಿ ಕೊರೀತಾ ಇತ್ತು. “ಇಮೋಜಿ ಅಂದ್ರೆ ಬರೀ ಗಂಡು ಹೆಣ್ಣು ಮಾತ್ರ ಅಲ್ಲಾ ಮಚ್ಚಾ. ಉಭಯಲಿಂಗಿಗಳೂ ಸಹಾ. ಬೇಕಾದ್ರೆ ಮತ್ತೆ ವಾಟ್ಸಾಪ್ ನೋಡು’ ಅಂದೆ. ಗೆಳೆಯರು ತಕ್ಷಣ ಸ್ಮಾರ್ಟ್ ಫೋನ್ ಸವರಲು ಶುರು ಮಾಡಿದರು. ಅರೆ, ಎಂಬ ಉದ್ಗಾರ ತೆಗೆದರು. ಯಾಕೆಂದರೆ, ಈಗ ಎಮೋಜಿಗಳಲ್ಲಿ “ಗೇ’ಗಳಿದ್ದಾರೆ “ಲೆಸಿºಯನ್’ಗಳಿದ್ದಾರೆ. ಅವರು ಸಂಸಾರ ಮಾಡುವ ಕಲ್ಪನೆಗೂ ಚಿತ್ರ ರೂಪ ಬಂದಿದೆ.
ಈ ಎಲ್ಲಾ ಬದಲಾವಣೆ ಆಗಿದ್ದು ಯಾಕೆ ಗೊತ್ತಾ? ಎಮೋಜಿಗಳು ಅಪ್ಪ ಹಾಕಿದ ಆಲದ ಮರಕ್ಕೆ ನೇತು ಹಾಕಿಕೊಂಡಿಲ್ಲ ಅವು. ಈಗಿನ ಲಿಂಗ ರಹಿತ ಸಮಾಜದ ಭಾಷೆಯನ್ನೂ ಮಾತನಾಡುತ್ತಿದೆ. ಈಗಿನ ಆಲೋಚನೆಗಳನ್ನು ಒಳಗೊಳ್ಳುತ್ತಿದೆ. ಹೀಗೆ ಹೇಳುತ್ತಿರುವಾಗಲೇ ಆ ಕಡೆಯಿಂದ ಫೋನ್, “ಏನು ಗೊತ್ತಾ? ಈ ಬಾರಿ ಮೊಲೆ ಊಡಿಸುತ್ತಿರುವ ಮಹಿಳೆಯ ಚಿತ್ರ ಎಮೋಜಿ ಆಗಿ ಆಯ್ಕೆ ಆಗಿದೆಯಂತೆ’ಅಂತ. ಹೌದಲ್ಲಾ ! ಮೊನ್ನೆ ಮೊನ್ನೆ ತಾನೇ ಮೊಲೆ ಊಡಿಸುತ್ತ ಆಸ್ಟ್ರೇಲಿಯಾದ ಸೆನೆಟ್‌ನಲ್ಲಿ ಭಾಷಣ ಮಡಿದ ಲಾರೀಸಾ ವಾಟರ್ಸ್ ನೆನಪಾದರು. ಜನ ಛೇಂಜ್ ಕೇಳ್ತಾರೆ. “ಎಮೋಜಿ’ ಚೇಂಜ್ ಆಗ್ತಿದೆ.
ಜಿ. ಎನ್. ಮೋಹನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chhattisgarh: ನಕ್ಸಲರು ಇಟ್ಟಿದ್ದ ಐಇಡಿ ಸ್ಫೋ*ಟ, ವ್ಯಕ್ತಿ ಸಾ*ವು
Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ
Industrial production ಕಳೆದ ನವೆಂಬರ್‌ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.