Ankasamudra Bird Sanctuary: ಕೆರೆಯಲ್ಲಿ ಕೋಳಿ ಜಗಳ!
Team Udayavani, Jan 21, 2024, 5:37 PM IST
ನನಗೆ ಅತ್ಯಂತ ಖುಷಿ ಕೊಡುವ ಹವ್ಯಾಸವೆಂದರೆ ಛಾಯಾಗ್ರಹಣ. ಅದರಲ್ಲೂ ಪಕ್ಷಿಗಳ ಛಾಯಾಗ್ರಹಣ ನನ್ನ ಇಷ್ಟದ ಹವ್ಯಾಸ. ಇತ್ತೀಚೆಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಪಕ್ಷಿಧಾಮಕ್ಕೆ ಹೋಗಿದ್ದೆ. ಪಕ್ಷಿಗಳನ್ನು ಸೆರೆ ಹಿಡಿಯಬೇಕೆಂದೊಡನೆ ತಕ್ಷಣ ನೆನಪಾಗೋದೇ ಈ ಪಕ್ಷಿಧಾಮಬೆಳ್ಳಂಬೆಳಿಗ್ಗೆ ಅಂಕಸಮುದ್ರ ತಲುಪಿದೆ. ವಾತಾವರಣ ಹಿತವಾಗಿತ್ತು. ತಲೆಯ ಮೇಲಾಗಲೇ ಸಾವಿರಾರು ಪಕ್ಷಿಗಳು ಸ್ವಚ್ಛಂದವಾಗಿ “ಆಗಸವೆಲ್ಲ ನಮ್ಮದೇ…’ ಎಂಬಂತೆ ಹಾರಾಡುತ್ತಿದ್ದವು. ಕೆರೆಯ ಸಮೀಪವೇ ಪಕ್ಷಿಗಳ ವೀಕ್ಷಣೆಗಾಗಿ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ.
ಹಲವಾರು ಎಕರೆ ವ್ಯಾಪ್ತಿಯಲ್ಲಿ ಸಮೃದ್ಧವಾದ ಮುಳ್ಳುಗಳಿಂದ ಕೂಡಿದ ಗಿಡಮರಗಳು, ಕೆಳಗೆ ನೀರು- ಪಕ್ಷಿಗಳಿಗೆ ಹೇಳಿ ಮಾಡಿಸಿದ ತಾಣ. ವೀಕ್ಷಣಾ ಗೋಪುರವನ್ನೇರಿ ಸುತ್ತಲೂ ಗಮನಿಸಿದೆ. ವಿವಿಧ ಪಕ್ಷಿಗಳ ಕೂಗು ಇಡೀ ವಾತಾವರಣವನ್ನು ಉಲ್ಲಸಿತಗೊಳಿಸಿತ್ತು.
ವೀಕ್ಷಣಾ ಗೋಪುರದಲ್ಲಿ ನಿಂತು ಆಚೀಚೆ ನೋಡುವುದರೊಳಗೇ ಅಲ್ಲೊಂದು ಕಡೆ ನೇರಳೆ ಜಂಬುಕೋಳಿ (Grey headed swamphen) ಹಿಂಡು ಕಂಡುಬಂದವು. ಇವುಗಳ ದೇಹ ರಚನೆಯೆಲ್ಲ ಕೋಳಿಯ ಹಾಗೇ. ನೇರಳೆ ಮಿ]ತ ನೀಲಿ ಬಣ್ಣವನ್ನು ಇದು ಹೊಂದಿರುವುದರಿಂದಾಗಿ ಸ್ವಲ್ಪ ನವಿಲಿನ ಹೋಲಿಕೆಯೂ ಕಂಡುಬರುತ್ತದೆ. ಹಣೆಯ ಮೇಲೆ ಚಿಕ್ಕ ಕೆಂಪು ನಾಮ, ತಳದಲ್ಲಿ ಬಿಳಿ ಬಣ್ಣದ ಮೊಂಡು ನೀಲಿ ಬಾಲವನ್ನು ಇದು ಹೊಂದಿದೆ.
ಫೋಟೋ ತೆಗೆಯುವುದು ಕಷ್ಟದ ಕೆಲಸ :
ಪಕ್ಷಿಗಳ ಫೋಟೊ ಕ್ಲಿಕ್ಕಿಸುವುದು ಅಷ್ಟು ಸುಲಭದ ಕೆಲಸವಲ್ಲ. ಯಾಕೆಂದರೆ ಕೆಮರಾ ಮಾತ್ರ ನಮ್ಮ ನಿಯಂತ್ರಣದಲ್ಲಿರುತ್ತದೇ ಹೊರತು ಪಕ್ಷಿಗಳಲ್ಲ. ಅವು ಯಾವ ಸಂದರ್ಭದಲ್ಲಿ ಅಲ್ಲಿಂದ ಹಾರಿಹೋಗುತ್ತವೆಯೋ, ಕುತ್ತಿಗೆ ಹೊರಳಿಸುತ್ತವೆಯೋ, ರೆಕ್ಕೆ ಬಡಿಯುತ್ತವೋ ಗೊತ್ತಾಗದು. ನಾವು ತಾಳ್ಮೆಯಿಂದ ಸದಾ ಕೆಮರಾ ಸಿದ್ಧಪಡಿಸಿಕೊಂಡೇ ಎಷ್ಟೋ ಹೊತ್ತಿನವರೆಗೂ ಕಾಯಬೇಕಾಗುತ್ತದೆ. ಒಂದು ಸೆಕೆಂಡ್ ನಲ್ಲಿಯೇ ಏನೆಲ್ಲ ಘಟಿಸಬಹುದು. ನಮ್ಮ ಇರುವಿಕೆ ಗೊತ್ತಾದರೂ ಸಾಕು ಅವು ಅಲ್ಲಿಂದ ಮಾಯವಾಗುತ್ತವೆ.
ಫೋಟೋಗ್ರಫರ್ ಪಾಲಿನ ಬಂಗಾರದ ಕ್ಷಣ:
ಇಡೀ ದೇಹ, ಮನಸು, ಕಣ್ಣು ಎಲ್ಲವೂ ನಾವು ಕ್ಲಿಕ್ಕಿಸಬಯಸುವ ಪಕ್ಷಿಯ ಕಡೆಗೇ ಏಕಾಗ್ರತೆಯಿಂದ, ತಾಳ್ಮೆಯಿಂದ ಗಮನಿಸಬೇಕಾಗುತ್ತದೆ. ಅಷ್ಟರಲ್ಲಿಯೇ ಒಂದು ಕೋಳಿ ನೀರಲ್ಲಿ ಆಹಾರವನ್ನು ಹುಡುಕುತ್ತ, ಹೆಕ್ಕುತ್ತ ಮುಂದುವರಿಯಿತು. ಅದರ ಹಿಂದೆಯೇ ಮತ್ತೂಂದು ಬಂದೊಡನೆ ಈ ಕೋಳಿ ಅದನ್ನು ಬೆದರಿಸುವ ರೀತಿಯಲ್ಲಿ ಮುಂದುವರೆಯಿತು. ನಾನು ಇಡೀ ದೃಶ್ಯದ ಸಾಕ್ಷಿಯಾಗಿ ಗಮನಿಸುತ್ತಿದ್ದೆ. ನನ್ನ ಕಣ್ಣು, ಇಡೀ ಮೈಮನಸು ಕೆಮರಾದ ಕಿಂಡಿಯಲ್ಲಿ ಧ್ಯಾನಸ್ಥವಾಗಿತ್ತು. ಛಾಯಾಗ್ರಾಹಕರಿಗೆ ಅಪರೂಪಕ್ಕೆ ಬಂಗಾರದ ಸಮಯ (Golden Time) ಅಂತ ಸಿಗುತ್ತೆ. ಇದು ತುಂಬಾ ಅಪರೂಪದ ಕ್ಷಣ. ಅದೇ ರೀತಿಯಲ್ಲಿ ನನ್ನ ಛಾಯಾಗ್ರಹಣದ ಪಯಣದಲ್ಲಿಯೇ ಒಂದು ಬಂಗಾರದ ಸಮಯ ಅನ್ನಬಹುದು. ಅಂಥ ದೃಶ್ಯ ಕಂಡುಬಂತು.
ನೋಡ ನೋಡುವುದರೊಳಗೆ ಹಿಂದೆ ಸರಿದಿದ್ದ ಕೋಳಿ ಆಕ್ರಮಣ ಮಾಡುವ ರೀತಿಯಲ್ಲಿ ಮತ್ತೂಂದರ ಮೇಲೆ ಏರಿಬಂತು. ಇದಕ್ಕೂ ಕೋಪ ಬಂದು ಇದೂ ಸಹ ರೆಕ್ಕೆ ಬಡಿಯುತ್ತ ಬೆದರಿಸತೊಡಗಿತು. ಕ್ಷಣಾರ್ಧ ದಲ್ಲಿ ಅಲ್ಲೊಂದು ಕೆರೆಯ ನೀರಲ್ಲಿ ರಣಾಂಗಣ ಸೃಷ್ಟಿಯಾಗಿಬಿಟ್ಟಿತು. ವಾಹ್ ! ಅದೊಂದು ಅದ್ಭುತ ಕ್ಷಣ. ಎರಡೂ ರೆಕ್ಕೆಗಳನ್ನು ಕೆದರಿ ಗಾಳಿಯಲ್ಲಿ ನೆಗೆದು ಕಾಲುಗಳಿಂದ ಬಡಿದಾಡಿದವು. ಒಂದು ಮೇಲುಗೈ ಆಯಿತೆನ್ನುವುದರೊಳಗೆ ಮತ್ತೂಂದು. ಹೀಗೇ ಕೆಲವು ಕ್ಷಣಗಳವರೆಗೆ ಈ ಜಗಳ ನಡೆಯಿತು.. ಕೊನೆಗೆ ಹಿಂದಿನಿಂದ ಬಂದಿದ್ದ ಕೋಳಿ ಸೋತು ಅಲ್ಲಿಂದ ಕಾಲ್ಕಿತ್ತಿತು. ಹೆದರಿಸಿ ಓಡಿಸಿದ ಕೋಳಿ ಯಥಾ ರೀತಿ ಯಲ್ಲಿ ಆಹಾರವನ್ನು ಹೆಕ್ಕುತ್ತ ಮುಂದುವರೆಯಿತು. ಅಚ್ಚರಿಯ ಸಂಗತಿಯೊಂದು ಮತ್ತೂಂದಿತ್ತು. ಇದೆಲ್ಲ ವನ್ನೂ ಒಂದು ಕೋಳಿ ಸುಮ್ಮನೆ ಕುಳಿತು ಗಮನಿಸುತ್ತಿತ್ತು.
ಪ್ರಕೃತಿಗೆ ಕೃತಜ್ಞತೆ ಹೇಳಬೇಕು:
ಇದುವರೆಗೂ ಪ್ರಕೃತಿಯಲ್ಲಿಯೇ ವಿಭಿನ್ನ ಜಾತಿಯ ಕೋಳಿಗಳ ಕಾದಾಟವನ್ನು ನಾನು ನೋಡಿರಲೇ ಇಲ್ಲ. ಇದೇ ಮೊದಲ ಬಾರಿಗೆ ನಾನು ಅಲ್ಲೊಂದು ಸಾಕ್ಷಿಯಾಗಿ ನಿಂತಿದ್ದೆ. ಇಡೀ ದೃಶ್ಯ ಕೇವಲ ನನ್ನ ಕೆಮರಾದಲ್ಲಷ್ಟೇ ಅಲ್ಲ ನನ್ನ ಕಣ್ಣು, ಮನಸಿನಲ್ಲಿ ದಾಖಲಾಗಿಬಿಟ್ಟಿತ್ತು.
ಒಟ್ಟಿನಲ್ಲಿ ಅದೊಂದು ಅವಿಸ್ಮರಣೀಯ ದೃಶ್ಯ. ಇದು ನನ್ನ ಫೋಟೊಗ್ರಫಿ ಪಯಣದಲ್ಲಿ ತಾನಾಗಿಯೇ ಒದಗಿಬಂದ ಅವಕಾಶ. ಪಕ್ಷಿಗಳು ಕುಳಿತಿರುವ, ಹಾರುವ ಚಿತ್ರಗಳನ್ನು ಕ್ಲಿಕ್ಕಿಸಬಹುದು. ಆದರೆ ಹೀಗೆ ಕಾದಾಡುವ ದೃಶ್ಯ ಸಿಗೋದು ಅಪರೂಪ. ಮೊನ್ನೆ ಇಂಥ ಅಪರೂಪದ ದೃಶ್ಯಕ್ಕೆ ನಾನು ಸಾಕ್ಷಿಯಾಗಿದ್ದೆ. ಇಂಥ ಅವಕಾಶವನ್ನು ಒದಗಿಸಿದ ಪ್ರಕೃತಿಗೆ ಕೃತಜ್ಞತೆಗಳು.
ಚಿತ್ರ ಲೇಖನ :
ಸಿದ್ಧರಾಮ ಹಿರೇಮಠ ಕೂಡ್ಲಿಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.