ಅಪ್ಪನ ಸಾರಥಿಯರು
Team Udayavani, Apr 29, 2018, 6:00 AM IST
ಚಿಕ್ಕಂದಿನಿಂದ ಸೈಕಲ್ಲು ಕೂಡ ಹತ್ತದ ನಮ್ಮಪ್ಪನಿಗೆ ಸ್ವಂತ ಕಾರನ್ನಿಡಬೇಕೆಂಬುದು ಮಹದಾಸೆಯಿತ್ತು. ಆ ಆಸೆ ಈಡೇರಿದ್ದು ಅವರ ಎಪ್ಪತ್ತನೆಯ ವಯಸ್ಸಿನಲ್ಲಿ. ಮಕ್ಕಳು ನಾವುಗಳು ದೇಶ ಬಿಟ್ಟು ಹೋದಮೇಲೆ ಹಡಗಿನಂತಹ ಕಾರಿನಲ್ಲಿ ನೈಸಾದ ಅಮೆರಿಕಾದ ರಸ್ತೆಗಳಲ್ಲಿ ಅಪ್ಪ-ಅಮ್ಮನನ್ನು ಓಡಾಡಿಸಿದ ಮೇಲೆ ನಾವು ಬೆಂಗಳೂರಿಗೆ ಬಂದಾಗ ನಮ್ಮನ್ನು ಆಟೋದಲ್ಲಿ ಓಡಾಡಿಸುವುದು ಹೇಗೆ? ನಾವಾದರೂ ಹಾಳಾಗಿಹೋಗಲಿ, ಸೊಸೆ-ಮೊಮ್ಮಕ್ಕಳು ಬೆಂಗಳೂರಿನ ಧೂಳಿನಲ್ಲಿ ಆಟೋ ಹಿಡಿದು ಹೋಗುವುದನ್ನು ನೋಡಲಾಗದೇ ಒಂದೂವರೆ ಲಕ್ಷ ರೂಪಾಯಿ ಕೊಟ್ಟು ಒಂದು ಹಳೆಯ ಮಾರುತಿ ಝೆನ್ ಕಾರನ್ನು ಕೊಂಡಿದ್ದರು. ಆ ಕಾರು ಪಕ್ಕಾ ಕನ್ನಡ ಮೀಡಿಯಮ್ಮು. ಅದರ ಏರಿಯಾ ಏನಿದ್ದರೂ ದಕ್ಷಿಣ ಬೆಂಗಳೂರು ಮಾತ್ರ. ಗಿರಿನಗರ, ಚಿಕ್ಕಲಸಂದ್ರ, ಗಾಂಧಿಬಜಾರ್, ಪದ್ಮನಾಭನಗರದಲ್ಲಿ ಕುಂಟುಕೊಂಡು ಹೋಗುತ್ತಿತ್ತು. ಡಬಲ್ ರೋಡ್, ಡೈರಿ ಸರ್ಕಲ್, ಶಿವಾಜಿನಗರ, ಇಸ್ಕಾನ್ ದೇವಸ್ಥಾನದ ಪರಿಧಿ ಅದರ ಕಾರ್ಯಾಗಾರ. ಲಕ್ಷ್ಮಣರೇಖೆ ಹಾಕಿದ ಹಾಗೆ ಇಸ್ಕಾನ್ ದೇವಸ್ಥಾನ ದಾಟಿ ಒರಿಯಾನ್ ಮಾಲ್ ಹತ್ತಿರ ಹೋಗಬೇಕೆಂದರೂ ರೋಡು ದಾಟುತ್ತಿರಲಿಲ್ಲ. ಅದೇ ವಾಡಿಯಾ ಹಾಲಿನ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಎರಡು-ಮೂರು ಟ್ರಿಪ್ಪು ಆರಾಮಾಗಿ ಹೊಡೆಯುತ್ತಿತ್ತು.
ಕಾರು ಕೊಂಡರಾಯಿತೇ, ಅದನ್ನು ಓಡಿಸುವವರು ಒಬ್ಬರು ಬೇಕಲ್ಲ. ಅಪ್ಪ ಕಾರನ್ನು ಓಡಿಸುವುದು ಆಗದ ಮಾತು. ಇನ್ನು ನಾನೊಮ್ಮೆ ಬೆಂಗಳೂರಿನಲ್ಲಿ ಡ್ರೈವ್ ಮಾಡಲು ಪ್ರಯತ್ನಪಟ್ಟು ಗಿರಿನಗರ ಸರ್ಕಲ್ಲಿಗೆ ಬರುವ ಹೊತ್ತಿಗೆ ಹೃದಯದ ಬಡಿತ, ರಕ್ತದೊತ್ತಡ ಎಲ್ಲ ಏರಿಸಿಕೊಂಡಾಗ ನಾವು ಬಾಡಿಗೆ ಡ್ರೈವರುಗಳ ಮೇಲೆ ಅವಲಂಬಿತವಾಗುವುದು ಅನಿವಾರ್ಯವಾಗಿತ್ತು.
ಅಪ್ಪನಿಗೊಂದಿಷ್ಟು ಶಿಷ್ಯರಿದ್ದರು. ಹೈಬೀಮ್ ವಿಜಯ, ಸಿಮ್ ರಾಜು, ಸಿಸ್ಟಮ್ ಶಂಕರ, ಚಪ್ಪರದ ಶೆಟ್ಟಿ, ಪೈಪ್ ನಾಗ, ಸ್ವಿಚ್ ಕುಮಾರ, ಸ್ಕೆಚ್ ರಾಜ, ಇತರೆ. ದುನಿಯಾ ಸೂರಿ ಸಿನೆಮಾದ ಪಾತ್ರಗಳಂತೆ ಕಾಣುವ ಇವರ ವಿಶೇಷಣಗಳ ಮೇಲೆ ಅವರ ಕೆಲಸವನ್ನು ನೀವೇ ಊಹೆ ಮಾಡಿಕೊಳ್ಳಿ. ಆದರೆ, ಈ ಶಿಷ್ಯಂದಿರಿಲ್ಲದಿದ್ದರೆ ನಮ್ಮ ಭಾರತ ಪ್ರವಾಸ ನಿರ್ವಿಘ್ನವಾಗಿ ನಡೆಯಲು ಸಾಧ್ಯವೇ ಆಗುತ್ತಿರಲಿಲ್ಲ.
ಅಂದು ಹೆಂಡತಿ-ಮಕ್ಕಳಿಗೆ ಹೊಸ ಅಲೆಯ ಕನ್ನಡ ಸಿನೆಮಾ ತೋರಿಸಲೇಬೇಕು ಎಂದು ಗೋಪಾಲನ್ ಮಾಲ್‌ನಲ್ಲಿ “ತಿಥಿ’ ನೋಡಲು ಹೋಗುವ ಕಾರ್ಯಕ್ರಮವಿತ್ತು. ಮನೆಯಲ್ಲಿ ಕಾರಿತ್ತು, ಡ್ರೈವರ್ ಇರಲಿಲ್ಲ. ನಮ್ಮ ಮನೆಯಲ್ಲಿ ಆಗ ಡ್ರೈವರುಗಳ ಟರ್ನೋವರು ಈಗಿನ ಡೊನಾಲ್ಡ್ ಟ್ರಂಪಿನ ಕ್ಯಾಬಿನೆಟ್ಟಿಗಿಂತಲೂ ಬಿರುಸಾಗಿ ನಡೆದಿತ್ತು. ಪ್ರತಿ ಬಾರಿ ಬೆಂಗಳೂರಿಗೆ ಬಂದಾಗಲೂ ಹೊಸ ಡ್ರೈವರುಗಳು. ಈ ಬಾರಿ ಬಂದಾಗ ಮನೆಯ ಕಾರಿಗೆ ಡ್ರೈವರ್ ಇರಲಿಲ್ಲ ಎಂದು ಅಪ್ಪ ಹೈ-ಬೀಮ್ ವಿಜೀಗೆ ಫೋನ್ ಮಾಡಿ ಒಬ್ಬ ಡ್ರೈವರನ್ನು ಮನೆಗೆ ಕರೆಸಿದ್ದರು. ಹೆಚ್ಚೆಂದರೆ ಇಪ್ಪತ್ತು ವರ್ಷ ವಯಸ್ಸಿರಬಹುದು ಆತನಿಗೆ. ಅದು ನಾನು ಮೊತ್ತಮೊದಲ ಬಾರಿಗೆ ನೋಡಿದ ನಮ್ಮಪ್ಪ ಮಾಡಿದ ಸಂದರ್ಶನ. ಕೇವಲ ಹತ್ತು ನಿಮಿಷದಲ್ಲಿ ಸಂದರ್ಶನ, ಬ್ಯಾಕ್‌ಗ್ರೌಂಡ್ ಚೆಕ್ ಎಲ್ಲ ಮುಗಿದಿತ್ತು.
ಸಂದರ್ಶನಕ್ಕೆ ನಮ್ಮಪ್ಪ ಕೇಳುತ್ತಿದ್ದುದು ಯಾವಾಗಲೂ ಒಂದೇ ಪ್ರಶ್ನೆ, “”ಲೈಸೆನ್ಸ್‌ದು ಜೆರಾಕ್ಸ್ ಇದೆಯೇನೊ?” ಬ್ಯಾಕ್‌ಗ್ರೌಂಡ್ ಚೆಕ್‌ಗೆ ಇನ್ನೊಂದು ಪ್ರಶ್ನೆ, “”ನಮ್ಮನೇಗೆ ಬರಕು¾ಂಚೆ ಎಲ್ಲಿ ಕೆಲ್ಸ ಮಾಡಿದ್ದೀಯ? ಅವರ ಫೋನ್ ನಂಬರ್ ಕೊಡು” ಆತ ಯಾವುದೋ ಒಂದು ಫೋನ್ ನಂಬರ್ ಕೊಟ್ಟ. ಆ ನಂಬರಿಗೆ ಫೋನು ಮಾಡಿದಾಗ ಇವನಂಥ ಒಳ್ಳೆ ಡ್ರೈವರು ಇಡೀ ಬೆಂಗಳೂರಲ್ಲೇ ಇಲ್ಲ ಎನ್ನುವ ಶಿಫಾರಸು ಬಂತು. ನಮ್ಮನೇಗೆ ಬರೋ ಡ್ರೈವರುಗಳೆಲ್ಲ ಇಂಥ ಶಿಫಾರಸು ಇಟ್ಟುಕೊಂಡೇ ಬರುತ್ತಿದ್ದರು. ಯಾಕೆಂದರೆ ಫೋನಿನ ಆ ತುದಿಯಲ್ಲಿರುವ ಈ ಡ್ರೈವರುಗಳ ರೆಫರೆನ್ಸ್ ಯಾರು ಎಂದು ಕಂಡುಹಿಡಿಯೋದಾದರೂ ಯಾರು?
ಈ ಸಂದರ್ಶನ, ಬ್ಯಾಕ್‌ಗ್ರೌಂಡ್ ಚೆಕ್ ಎಲ್ಲ ಆದಮೇಲೆ ಆ ಡ್ರೈವರನ ರೆಸುಮೆ ಅಂದರೆ ಡ್ರೈವಿಂಗ್ ಲೈಸೆನ್ಸಿನ ಒಂದು ಜೆರಾಕ್ಸ್ ಪ್ರತಿ ಮಾಡಿಸಿ ಇಸಕೊಂಡು, ಅವನ ಮೊಬೈಲ್ ನಂಬರನ್ನು ತಮ್ಮ ಮೊಬೈಲಲ್ಲಿ ಸೇವ್ ಮಾಡಿಕೊಂಡರೆ ಆತನ ಕೆಲಸ ಗಟ್ಟಿ ಎಂದರ್ಥ. ನನ್ನ ಇಬ್ಬರು ಮಕ್ಕಳೂ ಅಜ್ಜನ ಈ ರಿಕ್ರೂಟ್‌ಮೆಂಟನ್ನು ಹೇಗೆ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದರೆಂದರೆ ಅವರಿಗೆ ಐದು ನಿಮಿಷದಲ್ಲಿ ಕೆಲಸ ಸಿಗಬಹುದೆಂಬ ಈ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲೂ ಅವರಿಗಾಗುತ್ತಿರಲಿಲ್ಲ.
ಒಂದೇ ಒಂದು ಸಮಸ್ಯೆಯೆಂದರೆ ಆ ಹೊಸ ಡ್ರೈವರು, “”ಸರ್ ಸಂಬಳ” ಎಂದ ತತ್‌ಕ್ಷಣ, “”ಏನ್ ಪುಗಸಟ್ಟೆ ಕೆಲಸ ಮಾಡಿಸ್ತೀವೇನೋ. ಈಗ ಹುಡುಗರೆಲ್ಲ ಸಿನೆಮಾ ನೋಡಲಿಕ್ಕೆ ತಯಾರಾಗಿ¨ªಾರೆ. ನೀನು ಸುಮ್ಮನೆ ಕರಕೊಂಡು ಹೋಗಿ ಬಾ. ಸಂಬಳ ಆಮೇಲೆ ಮಾತಾಡೋಣ” ಎಂದು ನನ್ನ ಕಡೆ ನೋಡಿ ಹತ್ತೂ ಬೆರಳನ್ನು ಐದು ಬಾರಿ ತೆರೆದು, ಮಡಿಸಿ ತೋರಿಸಿದರು.
ಇದೊಂಥರ ನನ್ನ ಮತ್ತು ನಮ್ಮಪ್ಪನ ನಡುವಿನ ಒಂದು ರಹಸ್ಯ ಸಂಜ್ಞೆ. ನಮ್ಮಪ್ಪನಿಗೆ ನಾವು ಅಮೆರಿಕಕ್ಕೆ ಹೋಗಿ ಅಲ್ಲಿಯೇ ನೆಲೆಯಾಗಿದ್ದು ಎಷ್ಟೇ ಬೇಜಾರಾದರೂ ಮಗ ಅಮೆರಿಕದಿಂದ ಬಂದಿದ್ದಾನೆ ಎಂಬ ತೆಳುವಾದ ದರ್ಪವನ್ನು ತೋರಿಸಲು ಬಹಳ ಆಸೆಯಿತ್ತು. ಮನೆಗಿಬ್ಬರು ಅಮೆರಿಕದಲ್ಲಿರುವ ಈ ಕಾಲದಲ್ಲಿ ಎನ್ನಾರೈಗಳಿಗೆ ಸ್ಕೋಪು ಸಿಗುತ್ತಿದ್ದುದು ಡ್ರೈವರುಗಳು, ಮನೆಗೆಲಸದವರು, ಮೆಣಸಿನಪುಡಿ ಮಾಡುವವರು ಅಥವಾ ಮನೆಗೆ ಬರುವ ಪುರೋಹಿತರ ಬಳಿ ಮಾತ್ರ. ಅಪ್ಪನಿಗೆ ಈ ಡ್ರೈವರು ಅಥವಾ ಮನೆಗೆಲಸದವರಿಗೆ ನಮ್ಮ ಕೈಯಲ್ಲಿ ಭಕ್ಷೀಸು ಕೊಡಿಸಲು ಮಹಾ ಇಷ್ಟ. ಅವರೇ ಕೊಡಬಹುದಾದ ಎಷ್ಟೋ ಸನ್ನಿವೇಶಗಳಲ್ಲಿ ಬೇಕಂತ ನಮ್ಮ ಕೈಯಲ್ಲಿ ಕೊಡಿಸುತ್ತಿದ್ದರು. ಅದರ ಹಿಂದಿನ ಅಜೆಂಡಾ ಏನಿತ್ತೋ ಹೇಳುವುದು ಬಹಳ ಕಷ್ಟ. ಅಮೆರಿಕಕ್ಕೆ ಹೋದ ಮಕ್ಕಳ ಕೈಯಿಂದ ಭಕ್ಷೀಸು ಕೊಡಿಸಿದರೆ ಅವರ ಪ್ರತಿಷ್ಠೆ ಇನ್ನೂ ಹೆಚ್ಚುತ್ತಿತ್ತು ಎಂಬ ನಂಬಿಕೆಯಿದ್ದಿರಬಹುದು. ಆದರೆ, ನಾವು ಮನಸ್ಸಿಗೆ ಬಂದ ಹಾಗೆ ಭಕ್ಷೀಸು ಕೊಟ್ಟು ಡ್ರೈವರುಗಳ ನಿರೀಕ್ಷೆಯನ್ನು ಏರಿಸುವುದು ಅವರಿಗಿಷ್ಟವಾಗುತ್ತಿರಲಿಲ್ಲ. ಅವರೆಷ್ಟು ಕೊಡಬೇಕೆಂದುಕೊಳ್ಳುತ್ತಿದ್ದರೋ ಅಷ್ಟನ್ನೇ ನಮ್ಮ ಕೈಯಿಂದ ಕೊಡಿಸುತ್ತಿದ್ದರು. ಈ ಹತ್ತು ಬೆರಳನ್ನು ಐದು ಬಾರಿ ಮಡಚಿ ಬಿಡಿಸಿದರೆಂದರೆ ಆ ಡ್ರೈವರಿಗೆ ಊಟಕ್ಕೆ ಐವತ್ತು ರೂಪಾಯಿ ಕೊಡು ಎಂದರ್ಥ. ಐವತ್ತೆಂದರೆ ಐವತ್ತು ಮಾತ್ರ. ಕಮ್ಮಿ ಕೊಟ್ಟರೆ ನನ್ನ ಮರ್ಯಾದೆ ಹೋಗುತ್ತೆ, ಜಾಸ್ತಿ ಕೊಟ್ಟರೆ ಅವರ ಮರ್ಯಾದೆ ಹೋಗುತ್ತೆ. ಇದೊಂಥರ ತಂತಿ ಮೇಲೆ ನಡೆದ ಹಾಗೆ. ನಮ್ಮಪ್ಪ ಬದುಕಿರುವವರೆಗೂ ಇದನ್ನು ನಾನು ನಡೆಸಿಕೊಂಡೇ ಬಂದಿದ್ದೆ.
ಇರಲಿ, ಆವತ್ತು ತಿಥಿ ಸಿನೆಮಾಕ್ಕೆ ಹೋಗಲಿಕ್ಕಂತೂ ಕಾರಿಗೆ ಡ್ರೈವರು ಸಿಕ್ಕಿದ್ದ. ಮಾಲಿನಲ್ಲಿ ನಮ್ಮನ್ನು ಬಿಟ್ಟು ಸಿನೆಮಾ ಬಿಡುವ ಹತ್ತು ನಿಮಿಷ ಮೊದಲು ಒಂದು “ಮಿಸ್ಡ್ ಕಾಲ್ ಕೊಡಿ ಸಾರ್’ ಎಂದು ಹೇಳಿ ನನ್ನ ಹತ್ತಿರ ಐವತ್ತು ರೂಪಾಯಿ ಇಸಕೊಂಡು, “ಕಾರÇÉೇ ಕೂತಿರ್ತೀನಿ’ ಎಂದು ಹೇಳಿದ್ದ. ನನ್ನ ಹೆಂಡತಿ-ಮಕ್ಕಳ ಅಭಿರುಚಿಗೆ ಸರಿಬರೋಲ್ಲ, ತಿಥಿಯಂಥ ಸಿನೆಮಾ. ಗಡ್ಡಪ್ಪ ತನ್ನ ಕಥೆಯನ್ನು ಉದ್ದಕ್ಕೂ ಹೇಳುತ್ತ ಇದ್ದರೆ ನನ್ನ ಸಂಸಾರ ಆಕಳಿಸತೊಡಗಿತು. ನನ್ನ ಮಗ ಗೊರಕೆ ಹೊಡೆಯುತ್ತ ಮಲಗಿಬಿಟ್ಟ. “ಕೆನ್ ವಿ ಗೋ ನೌ’ ಎಂದು ಮಗಳು ಪೀಡಿಸಹತ್ತಿದಳು. ಸಿನೆಮಾ ಮುಗಿಯಲು ಇನ್ನೇನು ಹತ್ತು ನಿಮಿಷ ಇದೆ ಎಂದಾಗ ನಾನು ನಮ್ಮ ಡ್ರೈವರನಿಗೆ ಮಿಸ್ಡ್ ಕಾಲು ಕೊಟ್ಟೆ. ಆದರೆ, ಕಾಲ್ ಮಿಸ್ ಆಗಲಿಲ್ಲ. ಆತ ಥಟ್ ಅಂತ ಫೋನ್ ಎತ್ತಿದ. ನಾನು, “”ಇನ್ನು ಹತ್ತು ನಿಮಿಷಕ್ಕೆ ಹೊರಗೆ ಬರುತ್ತೇವೆ, ಕಾರು ಗೇಟ್ ಹತ್ತಿರ ತಂದಿರು” ಎಂದು ಹೇಳಿದಾಗ “”ಇಲ್ಲ ಸರ್, ನಾನು ಕೆಲಸ ಬಿಟ್ಟುಬಿಟ್ಟೆ” ಎಂದು ಆತ ಫೋನು ಕಟ್ ಮಾಡಿದ. ನನಗೆ ಆತ ಏನು ಮಾತನಾಡುತ್ತಿದ್ದಾನೆ ಎಂದು ಅರ್ಥವಾಗಲಿಲ್ಲ. ಮತ್ತೆ ಫೋನು ಮಾಡಿದರೆ ಆತ ಫೋನ್ ಎತ್ತುತ್ತ¤ ಇಲ್ಲ. ಅಷ್ಟು ಹೊತ್ತಿಗೆ ಸಿನೆಮಾ ಮುಗಿಯಿತು. ಹೊರಗೆ ಬಂದು ಇನ್ನೂ ಒಂದೈದಾರು ಬಾರಿ ಆ ಡ್ರೈವರನಿಗೆ ಫೋನು ಮಾಡಿದರೂ ಆ ಕಡೆಯಿಂದ ಉತ್ತರವಿಲ್ಲ. ಮನೆಗೆ ಫೋನು ಮಾಡಿದರೆ ಅಪ್ಪ ಹೇಳುತ್ತಾರೆ, “”ನೀವೊಂದು ಓಲಾ ಮಾಡಿಕೊಂಡು ಬಂದುಬಿಡಿ. ಅವನಿಗೆ ಸೊಕ್ಕು. ಇಪ್ಪತ್ತು ಸಾವಿರ ಸಂಬಳ ಕೇಳುತ್ತಾನೆ. ಕೊಡಲ್ಲ ಅಂದಿದ್ದಕ್ಕೆ ಸೀದಾ ಮನೆಗೆ ಕಾರು ಬಿಟ್ಟು ಕೀ ಎಸೆದು ಹೋದ, ದುರಹಂಕಾರ ಮಕ್ಕಳಿಗೆ” ಎಂದು ಆ ಡ್ರೈವರನ್ನು ಬೈದರು.
ಆದದ್ದಿಷ್ಟೇ. ಆತ ಬೆಳಿಗ್ಗೆ ಕೆಲಸಕ್ಕೆ ಬಂದಾಗ ಸಂಬಳ ಮಾತಾಡಿಲ್ಲ. ನಮ್ಮನ್ನು ಗಿರಿನಗರದಿಂದ ರಾಜರಾಜೇಶ್ವರಿ ನಗರಕ್ಕೆ ಬಿಟ್ಟಾದ ಮೇಲೆ ಅಪ್ಪನಿಗೆ ಫೋನ್ ಮಾಡಿ ಸಂಬಳದ ವಿಷಯ ಮಾತಾಡಿ¨ªಾನೆ. ಆತ ಕೇಳಿದ್ದು ಒಂದು, ಅಪ್ಪ ಹೇಳಿದ್ದು ಇನ್ನೊಂದು. ಇಬ್ಬರಿಗೂ ಈ ಸಂಬಳದ ವಿಷಯದಲ್ಲಿ ಹೊಂದಾಣಿಕೆಯಾಗದೇ ಆತ ತಕ್ಷಣ ಕೆಲಸಬಿಟ್ಟು ಹೋಗಿ¨ªಾನೆ. ಅರ್ಧ ಗಂಟೆಗೆ ನಾನು ಕೊಟ್ಟ ಐವತ್ತು ರೂಪಾಯಿ ಪುಕ್ಕಟೆ ಸಿಕ್ಕ ಕಾಸು. ಪುಣ್ಯಾತ್ಮ ಕಾರನ್ನು ವಾಪಸು ಮನೆಗೆ ತೆಗೆದುಕೊಂಡು ಬಂದು ಬಿಟ್ಟು ಹೋಗಿ¨ªಾನೆ. ಮಗಳಿಗೆ ಏನಾಯ್ತು ಎಂದು ಅರ್ಥ ಮಾಡಿಸಿ ಹೇಳಿದಾಗ, “”ಗಾಶ್, ದಿಸ್ ಈಸ್ ವರ್ಸ್ಡ್ ದೆನ್ ಟೆಕ್ಸ್ಟ್ ಡಂಪಿಂಗ್” ಎಂದು ನಿರ್ವಿಕಾರವಾಗಿ ಹೇಳಿದಾಗ ನಾನೂ, ನನ್ನವಳೂ ಈ ನಡುನೀರಿನಲ್ಲಿ ಕೈಬಿಟ್ಟ ಡ್ರೈವರನು ಇದಕ್ಕಿಂತ ಹೆಚ್ಚಿನ ಸವಾಲುಗಳಿಗೆ ನಾವು ತಯಾರಾಗಬೇಕು ಎಂದುಕೊಂಡೆವು.
ಸಮಸ್ಯೆ ಏನೆಂದರೆ ನಮ್ಮಪ್ಪನ ಲೆಕ್ಕದಲ್ಲಿ ಮನೆಯಲ್ಲಿ ನಮ್ಮಪ್ಪ ಅಮ್ಮ ಇಬ್ಬರೇ ಇರೋದು, ಅಮ್ಮನಿಗೆ ಹತ್ತಿರದ ರಾಯರ ಮಠ, ಅಪ್ಪನಿಗೆ ಗಿರಿನಗರದ ಸರ್ಕಲ್ ಇಷ್ಟು ಬಿಟ್ಟರೆ ವಾರಕ್ಕೊಂದು ಬಾರಿ ನಮ್ಮ ಚಿಕ್ಕಲಸಂದ್ರದಲ್ಲಿರುವ ನಮ್ಮ ದೊಡ್ಡಪ್ಪನ ಮನೆಗೆ ಹೋಗುವುದು ಬಿಟ್ಟರೆ ಡ್ರೈವರಿಗೆ ಬೇರೇನೂ ಕೆಲಸವಿಲ್ಲ. ಡ್ರೈವರನ ಪ್ರೊಡಕ್ಟಿವ್ ಅವಧಿಗೆ ಮಾತ್ರ ಸಂಬಳ ಕೊಡುತ್ತೇನೆ ಎಂಬ ಹಠ ಅಪ್ಪನದು. ಹೆಚ್ಚು ಸಮಯ ಖಾಲಿ ಕೂತಿರುತ್ತಿದ್ದರಿಂದ ಸಿಕ್ಕ ಸಿಕ್ಕ ಪೇಪರ್ ಓದಿ ಅಕ್ಕಪಕ್ಕದವರ ಜತೆ ಮಾತಾಡಿ, ಮಲಗಿ, ಆಕಳಿಸಿ ಏನೇ ಮಾಡಿದರೂ ಹೊತ್ತು ಹೋಗದೇ ಕೊಡುವ ಸಂಬಳವೂ ಸಾಲದೇ ಬೇಜಾರಿಗೆ ಅರ್ಧ ಕೆಲಸ ಬಿಟ್ಟು ಹೋಗುತ್ತಿದ್ದರು. ಆದ್ದರಿಂದ, ನಮ್ಮನೆಗೆ ಸಿಗುತ್ತಿದ್ದವರೆಲ್ಲ ಒಂಥರ ಅಡ್ಡಕಸಬಿಗಳು ಇಲ್ಲವೇ ನಮ್ಮಪ್ಪನಿಗಿಂತ ಹೆಚ್ಚು ಸಂಬಳ ಕೊಡುವ ಓನರುಗಳು ಯಾರೂ ಸಿಗದೇ ಇದ್ದದ್ದರಿಂದ ಅನಿವಾರ್ಯವಾಗಿ ಬರುವವರು.
ಇಂಥ ಅನುಭವಗಳು ನಮಗೆ ಒಂದಲ್ಲ ಎರಡಲ್ಲ. ಇನ್ನೊಬ್ಬ ಡ್ರೈವರಿದ್ದರು. ಅವರಿಗೆ ಕೊಂಚ ಮಧ್ಯವಯಸ್ಸು , ಅಮ್ಮ-ಅಪ್ಪನ ಮೇಲೆ ಅಪಾರ ಅಭಿಮಾನ. ಬಾಗಿಲು ತೆಗೆದು ಸೀಟು ಒರೆಸಿ ಒಳಗೆ ಕೂರಿಸಿ ಕಾರು ಡ್ರೈವ್ ಮಾಡುವುದಲ್ಲದೇ ಮನೆಗೆಲಸಕ್ಕೂ ಸಹಾಯ ಮಾಡುತ್ತಿದ್ದರು. ಆದರೆ, ಆತ ಅಪ್ಪಟ ಕನ್ನಡಾಭಿಮಾನಿ. ಬರೇ ಕನ್ನಡಾಭಿಮಾನಿ ಅಲ್ಲ, ತಮಿಳರನ್ನು ಕಂಡರಾಗುತ್ತಿರಲಿಲ್ಲ. ಅಮ್ಮ ಪಕ್ಕದಂಗಡಿಯಿಂದ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಇಂತಹ ಸಾಮಾನು ತೆಗೆದುಕೊಂಡು ಬಾ ಎಂದು ಕಳಿಸಿದರೆ ಅಂಗಡಿಯಾಕೆ ತಮಿಳಿನಲ್ಲಿ ಮಾತಾಡಿದಳು ಎಂದು ಆಕೆಗೆ ಮನಸ್ಸಿಗೆ ಬಂದಹಾಗೆ ಬೈದು ಬರುತ್ತಿದ್ದನಂತೆ. ನಮಗೆ ಇವನ ತಮಿಳು ದ್ವೇಷ ಎಷ್ಟು ಎಂದು ನಮಗೆ ಗೊತ್ತಾದದ್ದು ಪಕ್ಕದ ಮನೆ ಸಂಪತ್ತಯ್ಯಂಗಾರು ಮನೆ ಬಾಗಿಲಲ್ಲಿ ತಲೆಸುತ್ತು ಬಂದು ಬಿ¨ªಾಗ. ಅಲ್ಲಿಯೇ ಪಕ್ಕದಲ್ಲಿಯೇ ನಿಂತಿದ್ದ ಈತ ಏನು ಮಾಡಿದರೂ ಸಹಾಯಕ್ಕೆ ಹೋಗಲಿಲ್ಲ. ಅಮ್ಮ ಸಿಟ್ಟಿನಿಂದ ವಿಚಾರಿಸಿದಾಗ, “”ಬೇಕಾದರೆ ಕೆಲಸ ಬಿಟ್ಟುಬಿಡ್ತೀನಿ, ಆದರೆ ತಮಿಳು ತಲೆಗಳ ಜೀವ ಉಳಿಸೊಲ್ಲ” ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದನಂತೆ.
ಒಂದು ದಿನ ಆ ಡ್ರೈವರನ ಅಣ್ಣನೂ ಮನೆಗೆ ಬಂದಿದ್ದ. ಬಂದವನೇ, “”ಸರ್ ನೀವು ಅಮೆರಿಕದಲ್ಲಿ ಡಾಕ್ಟರಂತೆ, ನಮ್ಮ ತಮ್ಮನ ರಿಪೋರ್ಟುಗಳನ್ನು ಕೊಂಚ ನೋಡಿ” ಎಂದು ತಂದು ತೋರಿಸಿದ. ರಿಪೋರ್ಟುಗಳನ್ನು ಓದಿದಾಗ ಆತನಿಗೆ ಪ್ಯಾರನಾಯ್ಡ ಸ್ಕಿಜೋಫ್ರೀನಿಯಾ ಇದೆ ಎಂದು ಗೊತ್ತಾಯಿತು. ಆ ಕಾರಣಕ್ಕಾಗಿ ಆತನಿಗೆ ವಿಸ್ಮತಿ, ಭ್ರಮೆ ಇತ್ಯಾದಿ ಉಂಟಾಗುತ್ತವೆ. ಎಲ್ಲಿಯೂ ಕೆಲಸ ಸಿಗದೇ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಅಪ್ಪನ ಬ್ಯಾಕ್‌ಗ್ರೌಂಡ್ ಚೆಕ್‌ನಲ್ಲಿ ಇದು ಅನುಕೂಲಕ್ಕೆಂದು ಮಿಸ್ ಆಗಿತ್ತು. ಆತ ಎಷ್ಟೇ ಒಳ್ಳೆಯ ವ್ಯಕ್ತಿಯಾದರೂ ಕಾಸೊಪಾಲಿಟನ್ ನೆರೆಹೊರೆಯ ನಾವು ಈ ಡ್ರೈವರನ ಸಲುವಾಗಿ ಒಂದು ಭಾಷಿಕರನ್ನೇ ದ್ವೇಷಿಸುವುದು ಹೇಗೆ? ಆತ ಕೂಡ ಔಟ್. ಇನ್ನೊಬ್ಟಾತ ಇದ್ದ. ಬರೇ ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದ. ಅಷ್ಟೇ ಅಲ್ಲ. ಅತೀ ವಿನಯ.
ಬಂದ ತಕ್ಷಣ ಒಂದು ಮಿಲಿಟರಿ ಸೆಲ್ಯೂಟ್ ಹೊಡೆದು, “ವೆನ್ ಯು ರೆಡಿ ಸರ್’ ಎಂದು ಕಾರು ಒರೆಸಿ ಒಳಗೆ ಕೂತು ಕನ್ನಡ ಪೇಪರ್ ಓದುತ್ತಿದ್ದ. ನಾವು ಮನೆಯಿಂದ ಹೊರಟ ತಕ್ಷಣ ಬಂದು ಕಾರಿನ ಬಾಗಿಲು ತೆಗೆದು ಇನ್ನೊಮ್ಮೆ ಸೀಟು ಒರೆಸಿ, “ವೆಲ್ಕಮ್ ಸರ್, ವೆಲ್‌ಕಮ್ ಮೇಡಂ. ಐ ಆಮ್ ಗ್ಲಾಡ್ ಟು ಬಿ ವರ್ಕಿಂಗ್ ಫಾರ್ ಯು’ ಎನ್ನುತ್ತಿದ್ದ. ನನಗೆ ಆತನನ್ನು ನೋಡಿದಾಗಲೆಲ್ಲ ಕ್ಷಣ ಕ್ಷಣಂ ಚಿತ್ರದ ಕಿಂಗುಲಾ ಕನಪಿಸ್ತುನ್ನಾಡು ಹಾಡು ನೆನಪಿಗೆ ಬರುತ್ತಿತ್ತು. ಬರೇ ಇಂಗ್ಲಿಷ್ ಮಾತಾಡಿದರೆ ಪರವಾಗಿಲ್ಲ. ನಾವೇನಾದರೂ ಸಾಮಾನು ತೆಗೆದುಕೊಳ್ಳಬೇಕೆಂದು ಹೊರಟರೆ ಪ್ರತಿಯೊಂದಕ್ಕೂ ಆತನ ಸಲಹೆ, ಸಹಕಾರ. ನನ್ನ ಮಗಳಿಗೆ ಒಂದು ಪೆನ್‌ಡ್ರೈವ್ ಬೇಕಿತ್ತು. ಹನುಮಂತನಗರದ ಐವತ್ತಡಿ ರಸ್ತೆಯಲ್ಲಿ ಕೊಂಡೆ. ನಾನು ಆರುನೂರು ರೂಪಾಯಿ ಕೊಟ್ಟೆ ಎಂದ ತತ್‌ಕ್ಷಣ ಆತನಿಗೆ ಅಡಿಯಿಂದ ಮುಡಿಯ ತನಕ ಕೋಪ. ದಟ್ ಬಗ್ಗರ್ ಸೂðಡ್ ಯು ಎಂದ. ನಾನು ಬೆಪ್ಪಾಗಿ ಬಾಯಿಬಿಟ್ಟು ನೋಡುತ್ತ ಇ¨ªೆ. ಕಾರಿನ ಡ್ರೈವರಿನ ಸೀಟಿನಿಂದ ಇಳಿದವನೇ ಅಂಗಡಿ ಒಳಗೆ ಹೋಗಿ ಪಕ್ಕಾ ಚಾಮರಾಜಪೇಟೆ ಕನ್ನಡದಲ್ಲಿ ಆತನಿಗೆ ಬೈದು ನನಗೆ ಆ ಪೆನ್‌ಡ್ರೈವ್ ಅನ್ನು ವಾಪಸ್ ಕೊಟ್ಟು ದುಡ್ಡನ್ನು ವಾಪಸ್ ಪಡೆದು ಡಬಲ್ ರೋಡಿನ ತನಕ ಕಾರಲ್ಲಿ ಕರಕೊಂಡು ಹೋಗಿ ಅಲ್ಲಿ ಯಾವುದೋ ಗುಜರಿ ಅಂಗಡಿಯಲ್ಲಿ ನೂರಾಐವತ್ತು ರೂಪಾಯಿಗೆ ಪೆನ್‌ಡ್ರೈವ್ ಕೊಡಿಸಿ ನನ್ನನ್ನು ಮತ್ತೆ ಪವಿತ್ರಗೊಳಿಸಿದ್ದ.
ನನ್ನ ಹೆಂಡತಿ ಒಮ್ಮೆ ಆತನ ಜತೆ ಶಾಪಿಂಗ್ ಹೋಗಿದ್ದಾಳೆ. “ಮೇಡಂ, ಯು ಗಿವ್ ಲಿಸ್ಟ್’ ಎಂದು ಲಿಸ್ಟನ್ನು ಕೇಳಿದನಂತೆ. ಭವಾನಿ ಕಂಗನ್ಸ್, ಲೇಡೀಸ್ ವೇರ್‌ಹೌಸ್, ರತನ್ ಕಟ್ ಪೀಸ್ ಸೆಂಟರ್‌ನ ಲಿಸ್ಟನ್ನು ಅವನಿಗೆಂತ ಕೊಡುವುದು ಎಂದು ನನ್ನ ಹೆಂಡತಿ ಗ್ರಂಧಿಗೆ ಅಂಗಡಿ, ಕಾಫಿಪುಡಿ ಇಂಥ ಜೆನೆರಿಕ್ ಲಿಸ್ಟನ್ನು ಮಾತ್ರ ಕೊಟ್ಟಿದ್ದಾಳೆ. ಅದನ್ನು ತರೋಕೆ ಗಾಂಧಿಬಜಾರಿಗೆ ಯಾರು ಹೋಗ್ತಾರೆ ಮೇಡಂ ಎಂದು ಸೀತಾ ಸರ್ಕಲ್ಲಿನಲ್ಲಿ ಬಲಕ್ಕೆ ತಿರುಗಿಸಿ. ಬಿಗ್ ಬಜಾರಿನ ಮಾರ್ಗವಾಗಿ ಕಾಮಾಕ್ಯ ಕಡೆ ತಿರುಗಿ ಹಾದಿಯಲ್ಲಿ “ದಿಸ್ ಈಸ್ ದುನಿಯಾ ವಿಜೀಸ್ ಸೆಕೆಂಡ್ ವೈಫ್ ಹೌಸ್’ ಎಂದು ಒಂದು ಮನೆ ತೋರಿಸಿದ್ದಾನೆ. ದುನಿಯಾದಲ್ಲಿ ವಿಜಿ ಇದ್ದಾನೆ ಅನ್ನುವುದೇ ನನ್ನ ಹೆಂಡತಿಗೆ ತಾಜಾ ಜ್ಞಾನ. ಸುಮ್ಮನೆ “ಹೂ’ ಎಂದು ಸುಮ್ಮನಾಗಿದ್ದಾಳೆ. ಅಲ್ಲಿ ಯಾವುದೋ ಗ್ರಂಧಿಗೆ ಅಂಗಡಿ ತೋರಿಸಿದಾಗ, “ಬೇಡ, ಗಾಂಧಿಬಜಾರಿಗೆ ಹೋಗೋಣ’ ಎಂದಳಂತೆ. ಆಗ “ಐ ಗೋ ವಯ ಇಟಡು. ದೇವೇಗೌಡ ಪೆಟ್ರೋಲ್ ಬಂಕ್ ಫುಲ್ ಟ್ರಾಫಿಕ್’ ಎಂದು ಇಟ್ಟಮಡುವಿನ ಇಕ್ಕಟ್ಟಾದ ರಸ್ತೆಗಳಲ್ಲಿ ತಿರುಗಿ ಉತ್ತರಹಳ್ಳಿಯ ಕಡೆಯಿಂದ ಪದ್ಮನಾಭನಗರದ ಮೇಲೆ ರಿಂಗ್ ರೋಡಿಗೆ ವಾಪಸ್ ಬಂದು ಇಸ್ರೋ ಲೇಔಟಿಗೆ ಬಂದು, “ಯು ನೋ ಅಗ್ನಿ ಶ್ರೀಧರ್?’ ಎಂದು ಕೇಳಿದಾಗ ನನ್ನಾಕೆ, “ಇಲ್ಲ’ ಎಂದು ತಲೆಯಾಡಿಸಿ¨ªಾಳೆ. ಪೊಲಿಟಿಕಲಿ ಸರಿಯಾಗಿರಲಿಕ್ಕೇನೋ, “ವೆರಿ ಫೇಮಸ್ ಫೆಲೋ, ಬಿಗ್ ಬಿಗ್ ವಾಲ್ಸ್. ಫುಲ್ ಪ್ರೊಟೆಕ್ಷನ್’ ಎಂದು ಶ್ರೀಧರ್ ಮನೆ ತೋರಿಸಿ ಮತ್ತೆ ರಿಂಗ್ ರೋಡಿಗೆ ವಾಪಸ್ ಬಂದು ಯು ಟರ್ನ್ ಮಾಡಿ ಹಿರಣ್ಣಯ್ಯನ ಮನೆಯ ಮಾರ್ಗವಾಗಿ ಗಾಂಧಿಬಜಾ‚ರಿಗೆ ಬಂದನಂತೆ. ನನ್ನವಳಿಗೆ ಇಡೀ ದಕ್ಷಿಣ ಬೆಂಗಳೂರಿನ ಟೂರು ಹೊಡಿಸಿದ್ದಲ್ಲದೆ ಆಕೆಯ ವರ್ತನೆಯ ಸೀರೆಯ ಫಾಲ್ಸ್, ಬಳೆ ಅಂಗಡಿಗೂ ಹೋಗಲು ಬಿಡದೆ ಅವನ ಗುರುತಿನವರ ಅಂಗಡಿಗೆ ಕರಕೊಂಡು ಹೋದನಂತೆ. ನನ್ನವಳಿಗೆ ಫುಲ್ ಪ್ರೊಟೆಕ್ಷನ್ ಅಂದಾಗಲೇ ಅರವಿಂದ ಅಡಿಗರ ವೈಟ್ ಟೈಗರ್ ನೆನಪಿಗೆ ಬಂದು ಗಡಗಡ ನಡುಗಿ ನನಗೆ ಫೋನ್ ಮಾಡಿ¨ªಾಳೆ. ನಾನು ಫೋನ್ ಎತ್ತದೇ ಇ¨ªಾಗ ಗಾಂಧಿ ಬಜಾರಿಗೆ ಹೋದ ತತ್‌ಕ್ಷಣ ಕಾರಿನಿಂದ ಇಳಿದು ಸೀದಾ ಅಂಕಿತ ಪುಸ್ತಕಕ್ಕೆ ನಡಕೊಂಡು ಹೋಗಿ ನನ್ನನ್ನು ಹುಡುಕಿದಳಂತೆ. ಅಲ್ಲಿಯೂ ನಾನಿಲ್ಲದಿಲ್ಲವಾಗಿ ಮನೆಗೆ ಫೋನ್ ಮಾಡಿದ್ದಾಳೆ. ನಮ್ಮಪ್ಪನಿಗೆ ಫೋನು ಸಿಕ್ಕಿ ಅವರು ಒಂದು ಆಟೋ ಹಿಡಿದು ಬಂದು ಕನ್ನಡ ಪುಸ್ತಕದಂಗಡಿಯ ಮುಂದೆಯೇ ಇಂಗ್ಲಿಷ್‌ನಲ್ಲಿ ಅವನನ್ನು ಫೈರ್ ಮಾಡಿದ್ದಾರೆ. ವಾಡಿಯಾ ಹಾಲ್‌ನಲ್ಲಿ ನಾನೂ ಅಂಕಿತದ ಪ್ರಕಾಶ್ ಕಂಬತ್ತಳ್ಳಿಯವರೂ ಇಬ್ಬರೂ ಇದ್ದಿದ್ದರಿಂದ ಬಚಾವ್. ಅಂಕಿತ ಪುಸ್ತಕದಲ್ಲಿ ನಾನು ಮಾಲು ಸಮೇತ ಸಿಕ್ಕಿ ಬಿದ್ದಿದ್ದಲ್ಲಿ ಆ ಇಂಗ್ಲಿಷ್ ಡ್ರೈವರನ ಥರ ನಾನೂ ನನ್ನ ಖಾಯಂ ಕೆಲಸವನ್ನು ಕಳೆದುಕೊಳ್ಳುತ್ತಿದ್ದೆನೇನೋ.
ಕಡೆಕಡೆಗೆ ಅಪ್ಪನಿಗೆ ನಡೆಯಲಿಕ್ಕೇ ಆಗದೇ ಇದ್ದಾಗ ಸುಮಾರು ಒಂದು ವರ್ಷದಿಂದ ನಮ್ಮನೆಗೆ ಖಾಯಂ ಆಗಿ ಡ್ರೈವರಾಗಿದ್ದ ರಾಮು ಎನ್ನುವವರು ನನ್ನ ತಮ್ಮನ ಸಹಾಯದಿಂದ ಗಾಲಿಖುರ್ಚಿಯಿಂದಲೇ ಕಾರಿನಲ್ಲಿ ಕೂರಿಸಿಕೊಂಡು ಒಂದು ಸುತ್ತು ಕರಕೊಂಡು ಹೋಗಿಬರುತ್ತಿದ್ದರಂತೆ. ತೀರ ಹಾಸಿಗೆ ಹಿಡಿದಾಗ, ಡ್ರೈವರ್ ರಾಮು ಅವರ ಆವಶ್ಯಕತೆ ಇಲ್ಲವೆಂದು ಅವರೇ ಕೆಲಸ ಬಿಟ್ಟಿದ್ದರು. ಅವರು ಕೆಲಸ ಬಿಟ್ಟು ಎರಡೇ ದಿನಕ್ಕೆ ನಮ್ಮಪ್ಪ ತೀರಿಕೊಂಡರು. ಅಷ್ಟೇ ಅಲ್ಲ, ನಮ್ಮ ರಾಮು ಅಷ್ಟು ಹೊತ್ತಿಗೆ ಅವರೇ ಇನ್ನೋವಾ ಕೊಂಡು ಅದನ್ನು ಬಾಡಿಗೆ ಬಿಟ್ಟಿದ್ದರಂತೆ. ನಮ್ಮಪ್ಪನ ಅಸ್ಥಿಯನ್ನು ಶ್ರೀರಂಗಪಟ್ಟಣಕ್ಕೆ ತೆಗೆದುಕೊಂಡು ಹೋಗಲಿಕ್ಕೆ ಅವರದೇ ಇನ್ನೋವಾ ಬಾಡಿಗೆಗೆ ಪಡೆದವು. ಕಾರಣಾಂತರದಿಂದ ರಾಮು ಅವರಿಗೆ ಬರಲಿಕ್ಕಾಗದೆ ಇನ್ನೊಬ್ಬರು ಡ್ರೈವರನ್ನು ಹುಡುಕಿಕೊಳ್ಳಬೇಕಾಯಿತು. ಸಾರಥಿಯ ಸಾರಥಿಯ ಜತೆ ಅಪ್ಪ ಅಂತಿಮ ಪಯಣವನ್ನು ಮುಗಿಸಿದರು.
ಗುರುಪ್ರಸಾದ್ ಕಾಗಿನೆಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.