ಏಪ್ರಿಲ್ ಫೂಲ್: ಹೂಂ ಅಂತೀಯಾ,ಉಹೂಂ ಅಂತೀಯಾ..!?
Team Udayavani, Mar 31, 2024, 4:25 PM IST
ಹಿರಿಯರು, ಕಿರಿಯರು, ಪರಿಚಿತರು, ಗೆಳೆಯರು, ಬಂಧುಗಳು – ಹೀಗೆ ಎಲ್ಲರನ್ನೂ ಬೇಸ್ತು ಬೀಳಿಸಿ “ಏಪ್ರಿಲ್ ಫೂಲ್’ ಎಂದು ಕೂಗುತ್ತಾ ಸಂಭ್ರಮಿಸುವ ದಿನವೇ ಏಪ್ರಿಲ್ 1. ನಾಳೆ ಯಾರ್ಯಾರನ್ನು ಹೇಗೆಲ್ಲಾ ಫೂಲ್ ಮಾಡಬಹುದು ಎಂದು ನಾವೆಲ್ಲಾ ಲೆಕ್ಕಾಚಾರ ಹಾಕುತ್ತಿರುವಾಗಲೇ, ಹಿಂದೊಮ್ಮೆ ತಾವು ಫೂಲ್ ಆದ ಮೋಜಿನ ಪ್ರಸಂಗಗಳನ್ನು ಕೆಲವರು ನೆನಪಿಸಿಕೊಂಡಿದ್ದಾರೆ…
ಕಲ್ಲಿನಿಂದ ವರೆದು ಕೊಲ್ಲಿರಿ!
ಅದು ಕಪ್ಪು-ಬಿಳುಪು ಟಿವಿಗಳ ಕಾಲ. ಯಾವುದೋ ಕ್ವಿಜ್ ಪೋ›ಗ್ರಾಮ್ ನೋಡುತ್ತಾ ಕೂತವಳಿಗೆ- “ನಾವು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಕಳುಹಿಸಿದವರಿಗೆ ಮೊದಲನೇ ಬಹುಮಾನ ಬಣ್ಣದ ಟಿವಿ’ ಎಂದು ನಿರೂಪಕಿ ಉಲಿದಿದ್ದು ಕೇಳಿಸಿತು. ಉತ್ತರ ಗೊತ್ತಿತ್ತು. ಹತ್ತಿರದ ಪೋÓr… ಆಫೀಸ್‌ಗೆ ಹೋಗಿ ಪೋಸ್ಟ್ ಕಾರ್ಡ್ ತಂದು ಉತ್ತರ ಬರೆದು ಹಾಕಿದೆ. ಕೆಲದಿನಗಳ ನಂತರ ಒಂದು ಪತ್ರ ಬಂತು. “ಕ್ವಿಜ್‌ನಲ್ಲಿ ನನಗೆ ಮೊದಲನೇ ಬಹುಮಾನ ಬಂದಿದೆಯೆಂದೂ, ಬಣ್ಣದ ಟಿವಿ ಕಳುಹಿಸುತ್ತಾರೆಂದೂ, ಅದರ ಸಾಗಾಣಿಕಾ ಖರ್ಚು ಎಂದು 300 ರೂಪಾಯಿ ಕಳಿಸಬೇಕೆಂದೂ’ ಬರೆದು ಒಂದು ವಿಳಾಸ ನೀಡಿದ್ದರು.
ಪತಿದೇವರಿಗೆ ವಿಷಯ ಹೇಳಿದಾಗ ಅವೆಲ್ಲ “ಟೊಪಿಗಿ ದಂಧೆ’ ಎಂದುಬಿಟ್ಟರು.ಸುಮ್ಮನಾದೆ. ಅಂದು ಟಿವಿಯಲ್ಲಿ ಮತ್ತದೇ ಕಾರ್ಯಕ್ರಮ! ಬಹುಮಾನ ಪಡೆದವರ ಹೆಸರು ಹೇಳತೊಡಗಿದರು. ಕರ್ಮಧರ್ಮ ಸಂಯೋಗದಿಂದ ಕರೆಂಟ್ ಹೋಗಿಬಿಟ್ಟಿತು. ಮರುದಿನ ಗೆಳತಿಯ ಜೊತೆಗೆ ಪೋÓr… ಆಫೀಸ್‌ಗೆ ಹೋಗಿ ಮನಿಯಾರ್ಡರ್ ಮಾಡಿ ಬಂದುಬಿಟ್ಟೆ. ಯಜಮಾನರಿಗೆ ಸಪ್ರೈìಸ್ ಕೊಡುವ ಘನಂದಾರಿ ಉದ್ದೇಶ ಬೇರೆ. 15 ದಿನ ಕಳೆದರೂ ಏನೂ ಸುದ್ದಿಯಿಲ್ಲ. ಮರುದಿನ ಯಾವುದೋ ಪತ್ರಿಕೆಯಲ್ಲಿ ಇಂಥ ಮೋಸದ ಬಗ್ಗೆ ಬರೆದದ್ದನ್ನು ಯಜಮಾನರು ಓದುತ್ತಿದ್ದರು. ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದಂತಾಯಿತು. ನಿಧಾನವಾಗಿ ಮನಿಯಾರ್ಡರ್ ಮಾಡಿ ಬಂದದ್ದನ್ನು ಉಸುರಿದೆ. ಬೈಯುತ್ತಾರೆಂದುಕೊಂಡಿದ್ದರೆ ಜೋರಾಗಿ ನಗುತ್ತ, ಒಂದು ಪೋÓr… ಕಾರ್ಡ್ ಕೊಟ್ಟರು. 300 ರೂಪಾಯಿ ಪಡೆದ ಖದೀಮರು, ಏಪ್ರಿಲ್ ಫೂಲ್ ಕಾರ್ಡ್ ಬೇರೆ ಕಳುಹಿಸಿದ್ದರು!
ಅಷ್ಟರಲ್ಲಿ ಪಕ್ಕದ ಮನೆಯ ಗೆಳತಿ ಬಂದಳು. ವಿಷಯ ಹೇಳುವಷ್ಟರಲ್ಲಿ ಆಕೆಯ ಪತಿ ಡಬ್ಬಿಯೊಂದನ್ನು ಹಿಡಿದು ಆಕೆಯನ್ನು ಕರೆಯುತ್ತ ಬಂದರು. ವಾರದ ಹಿಂದೆ ಪತ್ರಿಕೆಯೊಂದರಲ್ಲಿ ‘ತಗಣಿ ಕೊಲ್ಲುವ’ ಮಷೀನಿನ ಜಾಹೀರಾತು ನೋಡಿ 200 ರೂಪಾಯಿ ಕಳಿಸಿದ್ದ ಆಕೆಗೆ ಆ ಡಬ್ಬಿ ಪಾರ್ಸೆಲ್ ಬಂದಿತ್ತು. ಡಬ್ಬಿ ತೆಗೆದು ನೋಡಿದಾಗ ಎರಡು ಕಲ್ಲುಗಳಿದ್ದವು. “ತಗಣಿ ಸಿಕ್ಕರೆ ಒಂದು ಕಲ್ಲಿನ ಮೇಲೆ ಇಟ್ಟು, ಇನ್ನೊಂದು ಕಲ್ಲಿನಿಂದ ವರೆದು ಕೊಲ್ಲಿರಿ’ ಎಂಬ ಒಕ್ಕಣೆಯೊಂದಿಗೆ ಏಪ್ರಿಲ್ ಫೂಲ್ ಚೀಟಿ ಬೇರೆ!
ಇಬ್ಬರೂ ಮುಖ ಮುಖ ನೋಡಿಕೊಂಡೆವು. ಸಾಸಿವೆಡಬ್ಬದ ದುಡ್ಡು ಖದೀಮರ ಪಾಲಾದ ದುಃಖದ ಜೊತೆಗೆ ಏಪ್ರಿಲ್ ಫೂಲ್ ಆದ ನಾಚಿಕೆ. ಇಬ್ಬರೂ ತಡೆದಿಟ್ಟುಕೊಂಡ ನಗುವನ್ನು ಗಹಗಹಿಸುತ್ತ ಹೊರಗೆ ಹಾಕಿದೆವು.
-ದೀಪಾ ಜೋಶಿ, ಬೆಂಗಳೂರು
************************************************************************************************
ಕಾರ್ಡ್ ಬಂತು, ಬಹುಮಾನ ಬರಲಿಲ್ಲ!
ಎದೆಯ ಮಾತುಗಳನ್ನೆಲ್ಲಾ ಹಾಡಾಗಿಸುವ ವಯಸ್ಸು. ಕವಿತೆ, ಕತೆ ಸಿಕ್ ಸಿಕ್ಕ ಕಡೆ ಬರೆಬರೆದು ಬಿಸಾಕ್ತಿದ್ದೆ. ಗೆಳೆಯ ನಟರಾಜ ಅಲ್ಲಿ ಇಲ್ಲಿ ಚೆಂದ ಕಂಡ ಬರಹಗಳನ್ನೆಲ್ಲಾ ಆರಿಸಿ ಲೋಕಲ್ ಪತ್ರಿಕೆಗಳಿಗೆ ಕಳಿಸ್ತಿದ್ದ. ಅವು ಪ್ರಕಟವಾದಾಗ ನನಗಿಂತ ಹೆಚ್ಚಾಗಿ ಆತನೇ ಖುಷಿಪಡ್ತಿದ್ದ! ಬರೆಯುತ್ತಿದ್ದದ್ದು ನಾನಾದರೂ ತಾನೇ ಬರೆದೆ ಎಂಬ ಸಂತಸದಿಂದ ಬೀಗುತ್ತಿದ್ದ ನಟರಾಜನ ಸ್ನೇಹ ನನ್ನ ಪಾಲಿನ ಜೀವಾಮೃತವೇ ಆಗಿತ್ತು! ಆಗ ಮನೆಯಲ್ಲಿ ದಿನಪತ್ರಿಕೆ ತರಿಸುವ ತಾಕತ್ತೂ ಇರಲಿಲ್ಲ. ಹಂಗೇನಾದರೂ ದಿನಪತ್ರಿಕೆ ಓದಬೇಕೆನ್ನಿಸಿದರೆ ನಮ್ಮೂರಿನ ಹೇರ್ ಸಲೂನ್ ಹಾಲೇಶನ ಡಬ್ಟಾ ಅಂಗಡಿಯೇ ದಿಕ್ಕು. ಅದು ಹೇಗೋ ನಟರಾಜ ಒಂದು ಪತ್ರಿಕೆಯಲ್ಲಿನ ಕಾವ್ಯ ಸ್ಪರ್ಧೆಯ ಜಾಹೀರಾತು ಕತ್ತರಿಸಿ ತಂದ. ಪದ್ಯ ಬರಿ ಅಂತ ದುಂಬಾಲು ಬಿದ್ದ. ಅವನ ಒತ್ತಾಯಕ್ಕೆ ಪದ್ಯ ಬರೆದುಕೊಟ್ಟೆ. ಅವನೇ ಅಂಚೆಗೂ ಹಾಕಿದ. ದಿನಗಳು ಸರಿದವು. ಫಲಿತಾಂಶ ಬರಲೇ ಇಲ್ಲ.
ನಮ್ಮಬ್ಬರಿಗೂ ತುಂಬಾ ನಿರಾಸೆ ಆಯಿತು. 15 ದಿನ ಕಳೆದಿಲ್ಲ, ಆಗಲೇ ಮನೆಗೊಂದು ಕಾರ್ಡು ಬಂತು. ಅದರಲ್ಲಿ- ನಿಮ್ಮ ಕವಿತೆಗೆ ಎರಡನೇ ಬಹುಮಾನ ಬಂದಿದೆ. ಆದಷ್ಟು ಬೇಗ ಬಹುಮಾನವನ್ನು ನಿಮ್ಮ ಮನೆಗೇ ತಲುಪಿಸಲಾಗುತ್ತದೆ ಎಂದಿತ್ತು! ಅದನ್ನು ನೋಡಿ ನಮಗೆ ಸ್ವರ್ಗ ಒಂದೇ ಗೇಣು. ದಿನ, ವಾರ, ತಿಂಗಳು, ಆರು ತಿಂಗಳು ಕಳೆದರೂ ಬಹುಮಾನ ನಾಪತ್ತೆ! ನಂಗೆ ಸಣ್ಣ ಅನುಮಾನ ಬಂದು ಆ ಕಾರ್ಡಿನ ಇಹಪರ ವಿಚಾರಿಸಿದೆ. ಸೀಲ್ ನೋಡಿದರೆ…ನಮ್ಮೂರಿನ ಸೀಲ್ ಒತ್ತಿತ್ತು. ಅಳ್ಳೋದೊಂದೇ ಬಾಕಿ. ನಮ್ಮ ಊರಿನವರೇ ಯಾರೋ ನಮಗೆ ಫೂಲ್ ಮಾಡಿದ್ದರು! ಕ್ರಮೇಣ ಗೊತ್ತಾಗಿದ್ದು; ನಮ್ಮ ಚಡಪಡಿಕೆ ನೋಡದೇ ಕಟಿಂಗ್ ಶಾಪ್‌ನ ಹಾಲೇಶ ಈ ಕೆಲಸ ಮಾಡಿದ್ದ!!
-ಸಂತೆಬೆನ್ನೂರು ಫೈಜ್ನಟ್ರಾಜ್
************************************************************************************************
ಗೋಲ್ಡ್-ಉಮಾಗೋಲ್ಡ್
ಅವತ್ತು ಏಪ್ರಿಲ್ 1. ಒಂದು ಮದುವೆಗೆ ಹೋಗುವುದಿತ್ತು. ಇವಳನ್ನು ಮೂರ್ಖಳನ್ನಾಗಿ ಮಾಡುವ ಯೋಚನೆ ಬಂದು, ಕೆಲ ದಿನಗಳ ಹಿಂದೆ ತಂದಿದ್ದ ಬಂಗಾರದ ಓಲೆ ಬಚ್ಚಿಟ್ಟು ಹೊರಗೆ ಕುಳಿತೆ. ಅಂದುಕೊಂಡಂತೆ-“ರೀ, ನನ್ನ ಓಲೆ ನೋಡಿದ್ರಾ?’ ಅಂತ ಪ್ರಶ್ನೆ ಬಂತು. ಜೀವನ ಪೂರ್ತಿ ನನಗೆ ಮಂಜೂರಾದ ಅಭಿನಯದ ಅರ್ಧ ಕೋಟಾ ಆಗಲೇ ಖರ್ಚು ಮಾಡಿ ಅವಳ ಜೊತೆ ಹುಡುಕಿದೆ. ಅಭ್ಯಾಸವಿರಲಿಲ್ಲ, ಆದರೂ ಬೈದಂತೆ ನಟಿಸಿದೆ. ಗಾಬರಿ-ದುಃಖ ಎರಡೂ ಸೇರಿ ಅವಳ ಮುಖವೂ ಹೇಗೆ ಕಾಣಬೇಕೆಂದು ಕನ್‌ಫ್ಯೂಸ್ ಆಗಿತ್ತು. ಹತ್ತು ನಿಮಿಷದ ನಂತರ ಸತಾಯಿಸಿದ್ದು ಸಾಕೆನ್ನಿಸಿ, “ಏಪ್ರಿಲ್ ಫೂಲ್’ ಎನ್ನುತ್ತಾ ನಾನು ಬಚ್ಚಿಟ್ಟಿದ್ದ ಜಾಗೆಗೆ ಹೋಗಿ ಡಬ್ಬಿಯಲ್ಲಿ ಕೈ ಹಾಕಿದೆ!
ಅಲ್ಲೇನಿದೆ? ಏನಿಲ್ಲ.. ಏನೂ ಇರಲಿಲ್ಲ! ಆ ಮೇಲಿನ ಇಪ್ಪತ್ತು ನಿಮಿಷ ಅಕ್ಷರಶಃ ನಮ್ಮಿಬ್ಬರ ಪಾತ್ರ ಅದಲು- ಬದಲು ಆಗಿದ್ದವು. ಕೇಳಬಾರದ ಬೈಗುಳವನ್ನೆಲ್ಲ ಕೇಳಿದೆ. ಮನೆಯ ಇಂಚಿಂಚೂ ಹುಡುಕಿದೆ. ಸಿಗಲಿಲ್ಲ. ಆಮೇಲೆ ಅವಳಿಗೇ ನನ್ನ ಮೇಲೆ ಕನಿಕರ ಬಂದು ಏಪ್ರಿಲ್ ಫೂಲ… ಎಂದು, ಗೋಡೆಗೆ ನೇತುಹಾಕಿದ್ದ ನನ್ನ ಅಂಗಿಯ ಕಿಸೆಯಿಂದ ಆ ಓಲೆಗಳನ್ನು ತೆಗೆದಳು! “ನಾನು ಬೇರೆ ಕಡೆ ಬಚ್ಚಿಟ್ಟಿದ್ದೇ..’ ಅಂದೆ. “ಅದನ್ನು ಇಲ್ಲಿಗೆ ನಾನೇ ಶಿಫ್ಟ್ ಮಾಡಿದ್ದು,’ ಅಂದಳು. ಪಿತ್ತ ನೆತ್ತಿಗೆ ಏರಿದ್ದು ಯಾವಾಗೆಂದರೆ-“ಸರಿ ಬನ್ನಿ, ಮದುವೆಗೆ ಹೋಗೋಣ. ಅಕ್ಕನಿಗೆ ಆ ಬಂಗಾರದ ಓಲೆ ಕೊಟ್ಟಿದ್ದೆ. ಅವಳು ಅಲ್ಲಿಗೆ ಬರ್ತಾಳೆ. ಅಲ್ಲಿ ಅವಳ ಈ ರೋಲ್ಡ್-ಗೋಲ್ಡ್ ಓಲೆ ಕೊಟ್ಟು ಅದನ್ನ ಈಸ್ಕೊಂಡು ಬರಬೇಕು, ಅಂದಾಗ!
-ಹರ್ಷವರ್ಧನ,ಬಳ್ಳಾರಿ
************************************************************************************************
ಆಸ್ಪತ್ರೆಗೆ ಸೇರಿಸಬೇಕು!
ಶಾಲೆಗೆ ಹೊಸದಾಗಿ ಬಂದ ಹುಡುಗಿಯೊಬ್ಬಳು ನಮ್ಮ ಹಿಂದಿನ ಕಾಪೌಂಡಿನಲ್ಲಿದ್ದ ಮನೆಗೆ ಬಾಡಿಗೆಗೆ ಬಂದಳು. ಕೆಲವೇ ದಿನಗಳಲ್ಲಿ ಅವಳ ಮನೆಯವರೆಲ್ಲ ನಮಗೆಲ್ಲರಿಗೂ ಹತ್ತಿರವಾದರು. ಒಂದು ಬೆಳಿಗ್ಗೆ ಆರು ಗಂಟೆಗೆ ನನ್ನ ಗೆಳತಿ ದೊಡ್ಡ ಪ್ಲಾಸ್ಟಿಕ್ ಕೊಟ್ಟೆ ಹಿಡಿದುಕೊಂಡು ನಮ್ಮ ಮನೆಗೆ ಬಂದಳು. ಅಷ್ಟು ಬೆಳಿಗ್ಗೆಯೇ ಎಂತದ್ದು ತಂದಳಪ್ಪ ಎಂದು ನಮಗೆಲ್ಲ ಆಶ್ಚರ್ಯವಾಯಿತು. ನಿಂಗೆ ಬೇಕಂತ ಹೇಳಿದ್ದೆಯಂತಲ್ಲ, ಅದಕ್ಕೇ ತಂದೆ ಎಂದು ಕೊಟ್ಟು ಹೊರಟಳು. ಏನೇ ಇದು? ನಾನೇನು ಬೇಕು ಅಂದಿದ್ದೆ? ಎಂದು ಕೊಟ್ಟೆ ತೆಗೆದು ನೋಡಿದರೆ, ಒಂದು ರಾಶಿ ಕೋಕಂ ಹಣ್ಣುಗಳನ್ನು ತುಂಬಿಕೊಂಡು ಬಂದಿದ್ದಳು. ನಮ್ಮ ಮನೆಯಲ್ಲೇ ಕೋಕಂ ಮರ ಇದ್ದು ಹಣ್ಣುಗಳು ಹಾಸಿ ಬೀಳುತ್ತಿದ್ದವು. ಅವನ್ನು ಕೇಳುವವರೇ ಇರಲಿಲ್ಲ. ಹುಳಿಪಿತ್ತವೆಂದು ತಿನ್ನುತ್ತಲೂ ಇರಲಿಲ್ಲ.
ಇದೆಂತದೇ, ಕೋಕಂ ಹಣ್ಣು ನಮ್ಮನೇಲೇ ಇತ್ತಲ್ಲ, ನಾವ್ಯಾಕೆ ಕೇಳ್ತೀವಿ? ಎಂದು ಆಶ್ಚರ್ಯಗೊಂಡೆವು. ಅಷ್ಟು ಹೊತ್ತಿಗೆ ಸರಿಯಾಗಿ ಏಪ್ರಿಲ್ ಫೂಲ್, ಏಪ್ರಿಲ್ ಫೂಲ್ ಎಂದು ಜೋರಾಗಿ ಕೂಗುತ್ತ, ಪಕ್ಕದ ಮನೆಯ ಹುಡುಗಿಯೂ, ಅವಳ ಅಣ್ಣಂದಿರೂ ಅಲ್ಲಿಗೆ ಬಂದರು. ಎಲ್ಲರಿಲ್ಲೂ ನಗು ಉಕ್ಕಿ ಹರಿದು ಕಾರಂಜಿಯಾಯ್ತು.
ಗ್ರಹಚಾರ, ಅದೇ ದಿನ ಸಂಜೆಯ ವೇಳೆಗೆ ಇನ್ನೊಬ್ಬಳು ಗೆಳತಿ ಮಾಲಾಗೆ ಸೀರಿಯಸ್ಸಾಗಿದೆ, ಮಣಿಪಾಲಕ್ಕೆ ಸೇರಿಸುತ್ತಾರೆ ಎಂಬ ಸುದ್ದಿ ಬಂದು, ಸುಮಾರು 2 ಕಿಲೋಮೀಟರ್ ದೂರವಿದ್ದ ಅವರ ಮನೆಗೆ ಗಾಬರಿಯಿಂದ ಓಡಿ ಹೋದೆ. ಅವರ ಮನೆ ತಲುಪಿದವಳು, ನಿಲ್ಲಲಿಕ್ಕೆ ಸಾಧ್ಯವೇ ಆಗದೆ ಕುಸಿದೆ. ಅಷ್ಟು ಏದುಸಿರು ಬರುತ್ತಿತ್ತು. ಅವರ ಮನೆಯವರಂತೂ ನನ್ನ ಅವಸ್ಥೆ ನೋಡಿ ಕಂಗಾಲಾಗಿ- ಇವಳಿಗೇನೋ ಆಗಿಹೋಯ್ತು, ಉಸಿರೇ ಬರುತ್ತಿಲ್ಲ, ಇವಳನ್ನು ಮಣಿಪಾಲಕ್ಕೇ ಸೇರಿಸಬೇಕು’ ಎಂದು ಮಾತನಾಡಿಕೊಂಡರು. ಅಷ್ಟರಲ್ಲಿ ಮಾಲಾ ನಗುನಗುತ್ತ ಒಳಗಿನಿಂದ ಬಂದು, ಏಪ್ರಿಲ್ ಫೂಲ್ ಏಪ್ರಿಲ್ ಫೂಲ….. ಎಂದು ಚಪ್ಪಾಳೆ ತಟ್ಟಿ ಜಿಗಿಜಿಗಿದು ಹಾಡತೊಡಗಿದಳು! ಏನಂತೀರಿ? ಅಂದಿನಿಂದ ಏಪ್ರಿಲ್ ಬಂತೆಂದರೆ ಸಾಕು; ಎಲ್ಲಿಯಾದರೂ ಬಿಲವಿದ್ದರೆ ಅಡಗಿಬಿಡೋಣ ಅಂದುಕೊಳ್ಳುತ್ತೇನೆ.
– ಕವಿತಾ ಹೆಗಡೆ ಅಭಯಂ,ಹುಬ್ಬಳ್ಳಿ
************************************************************************************************
ಮೂರ್ಖರ ದಿನ: ಏನಿದರ ಇತಿಹಾಸ? :
ಏಪ್ರಿಲ್ 1ರಂದು ಮೂರ್ಖರ ದಿನವನ್ನು ಆಚರಿಲಾಗುತ್ತದೆ. ಈ ದಿನ ಆರಂಭವಾದದ್ದರ ಹಿಂದೆ ಒಂದು ತಮಾಷೆಯ ಕಥೆಯಿದೆ. 1381 ರಲ್ಲಿ ಇಂಗ್ಲೆಂಡ್‌ನ ರಾಜ ಎರಡನೇ ರಿಚರ್ಡ್ ಮತ್ತು ಬೊಹೆಮಿಯಾದ ರಾಣಿ ಅನ್ನಿ, ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಘೋಷಿಸಿದರು. 1381ರ ಮಾರ್ಚ್ 32ರಂದು ನಿಶ್ಚಿತಾರ್ಥ ನಡೆಯಲಿದೆ ಎಂದು ಅವರು ಹೇಳಿದ್ದರು. ಸುದ್ದಿ ತಿಳಿದ ಸಾರ್ವಜನಿಕರು ಖುಷಿಯಿಂದ ಸಂಭ್ರಮಿಸಲು ಶುರು ಮಾಡಿದ್ದರು. ಆದರೆ ನಂತರ ಅವರಿಗೆ- ಮಾರ್ಚ್ ತಿಂಗಳಿನಲ್ಲಿ 32ನೇ ತಾರೀಕು ಇರುವುದಿಲ್ಲವೆಂದು ತಿಳಿಯಿತು. ರಾಜನ ಮಾತನ್ನು ತಕ್ಷಣವೇ ನಂಬಿ ನಾವು ಮೂರ್ಖರಾಗಿದ್ದೇವೆ ಎಂದು ಅರಿತ ಜನರು, 1381ರ ಮಾರ್ಚ್ 31ರ ನಂತರದ ದಿನವಾದ ಏಪ್ರಿಲ್ 1 ಅನ್ನು ಮೂರ್ಖರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರು. ಭಾರತದಲ್ಲಿ 19ನೇ ಶತಮಾನದಿಂದ ಮೂರ್ಖರ ದಿನದ ಆಚರಣೆ ಶುರುವಾಯಿತು ಎಂಬ ಮಾತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.