ಪುರಾಣವೂ ಇತಿಹಾಸವೂ ಸಂಧಿಸಿದ ಬಿಂದುವಿನಲ್ಲಿ…
Team Udayavani, Nov 25, 2018, 6:00 AM IST
ಅಯೋಧ್ಯೆ- ವಾಲ್ಮೀಕಿ ಮಹರ್ಷಿಗಳು ತಮ್ಮ ರಾಮಾಯಣ ಮಹಾಕಾವ್ಯದ ವರ್ಣಿಸಿದ, ಪ್ರಾತಃಸ್ಮರಣೀಯ ಏಳು ಮೋಕ್ಷಕಾರಕ ಕ್ಷೇತ್ರಗಳಲ್ಲಿ ಇದೂ ಒಂದು. ಸನಿಹದಲ್ಲೇ ಸದಾ ಹರಿಯುತ್ತಲೇ ಇರುವ ಸರಯೂ ನದಿಯಂತೆ ತ್ರೇತಾ, ದ್ವಾಪರ ಹಾಗೂ ಹಿಂದೂ ಶ್ರದ್ಧಾನುಸಾರ ಈ ಕಲಿಯುಗದ ಪ್ರಥಮ ಪಾದದಲ್ಲಿಯೂ ಸನಾತನ ನಂಬಿಕೆಯ ಪುಣ್ಯಭೂಮಿ. ಅದೇ ರೀತಿ ಐವರು ತೀರ್ಥಂಕರರು ಜನಿಸಿದ ಜೈನ ಪರಂಪರೆಯ ಪಾವನ ನೆಲವಿದು. ಗೌತಮ ಬುದ್ಧ ಧ್ಯಾನಗೈದ ಧಾವನ ಕುಂಡ, ಗುರುನಾನಕರು ಆಗಮಿಸಿದ ಕುರುಹು ಇರುವ ಬ್ರಹ್ಮಕುಂಡ ಗುರುದ್ವಾರ ಇಲ್ಲಿದೆ. ಮುಂದೆ ವಿದೇಶೀ ದಾಳಿಕೋರರ, ಪಾಶ್ಚಾತ್ಯರ ಆಳ್ವಿಕೆಯ ಎಲ್ಲಾ ಏರುಪೇರುಗಳನ್ನು ಸಹಿಸಿಕೊಂಡು ನಿಂತ ಐತಿಹಾಸಿಕ ನಗರಿ ಅಯೋಧ್ಯೆ. ಪ್ರಸ್ತುತ ನಮ್ಮ ಭಾರತದ ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯ ಪುಟ್ಟ ಪಟ್ಟಣ ಇದು. ಕೋನಾಕೃತಿಯ ಗೋಪುರಗಳು, ಸೀತಾ, ರಾಮ, ಲಕ್ಷ್ಮಣರ ನೂರಾರು ಮಂದಿರಗಳು, ಹನುಮಾನ್ ಗುಡಿಗಳು- ಸಾಲು ಸಾಲಾಗಿ ಈ ಅತ್ಯಂತ ಪ್ರಾಚೀನ ಪುರದಲ್ಲಿ ಭಾವುಕರನ್ನು ಕೈಬೀಸಿ ಕರೆಯುತ್ತಿವೆ.
ಸೂರ್ಯವಂಶದ ಮಹಾರಾಜರು ಆಳಿದ ಸಾಮ್ರಾಜ್ಯದ ರಾಜಧಾನಿ ಅಯೋಧ್ಯೆಯಲ್ಲಿ ಮಹಾವಿಷ್ಣುವಿನ ಏಳನೆಯ ಅವತಾರವಾದ ಶ್ರೀ ರಾಮಚಂದ್ರನ ಪ್ರಥಮ ಪಾದಸ್ಪರ್ಶವಾದ ಸ್ಥಳವಿದು. ಇದೇ “ಜನ್ಮಸ್ಥಾನ’ದಲ್ಲಿ ಮುಂದೆ ಕುಶ ಮಹಾರಾಜ ಕಟ್ಟಿಸಿದ ಭವ್ಯ ರಾಮ ದೇಗುಲವನ್ನು ಸಾಮ್ರಾಟ್ ವಿಕ್ರಮಾದಿತ್ಯ ಪುನರುತ್ಥಾನಗೈದ ಎಂಬಲ್ಲಿಂದ ಪೌರಾಣಿಕ ಹಾಗೂ ಐತಿಹಾಸಿಕ ಕೊಂಡಿಗಳು ಬೆಸೆದುಕೊಳ್ಳುತ್ತಿವೆ. ಮುಂದಿನದು ಅಗಾಧ ಏಳುಬೀಳುಗಳ ದಾಖಲಿತ ಇತಿಹಾಸ.
ಇತಿಹಾಸದ ಪುಟಗಳು
ಕ್ರಿ.ಶ. 1528- ಇಂದಿನಿಂದ ಸುಮಾರು 490 ವರ್ಷಗಳ ಹಿಂದೆ, ಈ ಹಿಂದೂ ಪ್ರಸ್ಥಭೂಮಿಯಲ್ಲಿ ಇಸ್ಲಾಂ ಇನ್ನೂ ತಳವೂರಿರದ ಆ ದಿನಗಳು. ವಿದೇಶೀ ದಾಳಿಕೋರ ಬಾಬರನ ಸೇನಾಧಿಪತಿ ಮೀರ್‌ಖಾಕಿ, ಈ “ಜನ್ಮಭೂಮಿ’ಯಲ್ಲಿದ್ದ ಏಳು ಅಂತಸ್ತಿನ ಭವ್ಯ ಮಂದಿರವನ್ನು ಕೆಡವಿದ; ಹಾಗೂ ಅದೇ ಸ್ಥಳದಲ್ಲಿ “ಜನ್ಮಸ್ಥಾನ್ ಮಸ್ಜಿದ್’ ನಿರ್ಮಿಸಿದ. ಈ ಅಗಾಧ ಮಂದಿರದ ತಳಭಾಗವನ್ನು ಹಾಗೆಯೇ ಉಳಿಸಿಕೊಂಡು, ಕೇವಲ ಮೂರು ಗುಂಬಜ್‌ಗಳನ್ನು ಮೇಲಿನಿಂದ ನಿರ್ಮಿಸಿದ. 1992ರ ಕಾರ್ಯಾಚರಣೆಯ ವೇಳೆ ದೊರೆತ ಅಪಾರ ಅವಶೇಷಗಳು, ಪುರಾತಣ್ತೀ ಇಲಾಖೆಯ ಉತನನ ದಾಖಲೆಗಳು ಇವೆಲ್ಲವೂ ಇಲ್ಲಿನ ಹಿಂದೂ ಮಂದಿರದ ಅಸ್ತಿತ್ವವನ್ನು ಎತ್ತಿ ಹಿಡಿಯುತ್ತವೆ. ಇಲ್ಲಿನ ಮಹತ್ವಪೂರ್ಣ ಅಂಶವೆಂದರೆ, ಬ್ರಿಟಿಶ್ ಕಾಲದ ಲಕ್ನೋ ಗಝೆಟಿಯರ್‌ನಲ್ಲೂ ದಾಖಲಿತಗೊಂಡ ಈ “ಜನ್ಮಸ್ಥಾನ್ ಮಸ್ಜಿದ್’ ಏಕಾಏಕಿ ಬಾಬ್ರಿ ಮಸೀದಿಯೆಂದು ಮರುನಾಮಕರಣ ಏಕಾಯಿತು? ಕಾರಣ ಸ್ಪಷ್ಟ- “ಜನ್ಮಸ್ಥಾನ್’ ಎಂಬ ಹೆಸರು, ಇಂದು ಇಲ್ಲವಾಗಿರುವ, ವಿವಾದಿತ ಕಟ್ಟಡ ಹೊಂದಿದ್ದರೆ, ಯಾರ ಜನ್ಮಸ್ಥಾನ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆಯಲ್ಲ. ಹಾಗಾಗಿ.
ಕಳಚಿ ಬಿತ್ತು ಸೌಹಾರ್ದತೆಯ ಕೊಂಡಿ
ಇನ್ನೂ ಒಂದು ಕುತೂಹಲದ ಸತ್ಯಸಂಗತಿಯಿದೆ. 1528ರಿಂದ 1934ರ ವರೆಗೆ 76 ಬಾರಿ ಜನ್ಮಭೂಮಿಗಾಗಿ ಹೋರಾಟ ನಡೆದು ಆ ಕಟ್ಟಡದ ಬಹುಭಾಗ ಜರ್ಝರಿತವಾಗಿತ್ತು. ಹಿಂದೂ-ಮುಸ್ಲಿಂ ಸಂಬಂಧ ಸದಾ ಬಿರುಕುಗೊಳ್ಳುತ್ತಲೇ ಇರಬೇಕು ಎಂದು ಬಯಸಿದ್ದ ಬ್ರಿಟಿಶ್ ಆಳ್ವಿಕೆಯಲ್ಲಿ 1934ರಲ್ಲಿ ದುರುದ್ದೇಶದಿಂದ ಫೈಜಾಬಾದ್ ಜಿಲ್ಲಾ ಕಲೆಕ್ಟರ್ ಜೆ.ವಿ. ನಿಕಲ್ಸನ್ ಆ ಕಟ್ಟಡವನ್ನು ದುರಸ್ತಿಗೊಳಿಸಿದ್ದ. ಹೀಗೆ ಈಗಲೂ ಬಾಬ್ರಿ ಮಸೀದಿ ಎಂದು ಕರೆಸಿಕೊಳ್ಳುತ್ತಲೇ ಇರುವ ಆ ಕಟ್ಟಡ ವಾಸ್ತವಿಕವಾಗಿ ಬ್ರಿಟಿಶ್ ನಿರ್ಮಿತ. ಊರಿನ ಮುಸ್ಲಿಮರು 1930ರ ಬಳಿಕ ಅಲ್ಲಿ ನಮಾಜು ಮಾಡಲು ಬಳಸದೆ ಆ ಕಟ್ಟಡ ಪಾಳು ಬಿದ್ದಿತ್ತು. ಮಾತ್ರವಲ್ಲ, ಸ್ವಯಂ ತಾವಾಗಿ ಹಿಂದೂಗಳಿಗೆ ಆರಾಧನೆಗೆ ಒಪ್ಪಿಸುವ “ಸುವರ್ಣ ಸಂಧಿ’ಗಳು ಸಾಕಷ್ಟು ಮಿಂಚಿದ್ದವು. ಅಂತಹವುಗಳ ಕೇವಲ ಒಂದು ಉದಾಹರಣೆಯಿದು. ಸ್ವಾಮಿ ರಾಮಚರಣದಾಸ್ ಹಾಗೂ ಅಮೀರ್ ಅಲೇ ಎಂಬವರು ಪರಸ್ಪರ ಒಪ್ಪಂದದ ಮೇರೆಗೆ ಜನ್ಮಭೂಮಿ ಹಸ್ತಾಂತರಕ್ಕೆ ಮುಂದಾದುದು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೊಸ್ತಿಲಲ್ಲಿ. ಅದರಿಂದ ದಿಗಿಲೆದ್ದ ಆಂಗ್ಲರ ಆಳ್ವಿಕೆ ಅವರೀರ್ವರನ್ನೂ ಬಂಧಿಸಿ, 1858 ಮಾರ್ಚ್ 18ರಂದು ಜನ್ಮಭೂಮಿಯ ಸಮೀಪ “ಕುಬೇರ್ ಟೇಲಾ’ ಎಂಬಲ್ಲಿ ಬಹಿರಂಗವಾಗಿ ಹುಣಸೇ ಮರಕ್ಕೆ ಗಲ್ಲಿಗೇರಿಸಿತು. ಎಂದೋ ಪರಿಹಾರ ಕಂಡುಕೊಳ್ಳುತ್ತಿದ್ದ ಬಂಧುರ ಸಂಧಿಯೊಂದು ಇತಿಹಾಸದಲ್ಲಿ ಕರಗಿ ಹೋಯಿತು!
ಯುದ್ಧಕಾಂಡದ ಅಧ್ಯಾಯಗಳು
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸೋಮನಾಥ ದೇಗುಲ ಮತ್ತೆ ತಲೆಯೆತ್ತಿತ್ತು. ಆ ಕಾಲಮಿತಿಯಲ್ಲೇ 1949 ದಶಂಬರ 23ರಂದು ಮಧ್ಯರಾತ್ರಿ ರಾಮಲಲ್ಲಾನ ಅರ್ಥಾತ್ ಬಾಲರಾಮನ ಪುಟ್ಟ ವಿಗ್ರಹವೊಂದು ಅಯೋಧ್ಯೆಯ ಈ ವಿವಾದಿತ ಕಟ್ಟಡದೊಳಗೆ ಪ್ರಕಟವಾಯಿತು! ಜತೆಗೇ ರಾಮಕೀರ್ತನೆ, ದರ್ಶನಾಕಾಂಕ್ಷಿಗಳ ಆಗಮನ ಎಲ್ಲಾ ಆರಂಭವಾಯಿತು. ಆಗಿನ ಮುಖ್ಯಮಂತ್ರಿ ಗೋವಿಂದ ವಲ್ಲಭ್ ಪಂತ್ ಹಾಗೂ ಜಿಲ್ಲಾಧಿಕಾರಿ ಕೆ. ಕೆ. ನಯ್ನಾರ್‌ರ ದೃಢ ನಿರ್ಧಾರದಿಂದಾಗಿ ಮೂರ್ತಿ ತೆಗೆಸುವ ಕೇಂದ್ರ ಸರಕಾರದ ಯತ್ನ ಫಲಿಸಲಿಲ್ಲ. ಅಂದಿನಿಂದ ಇಂದಿನವರೆಗೆ ಸರಕಾರದ ಖರ್ಚಿನಲ್ಲೇ ತೊಟ್ಟಿಲಲ್ಲಿ ಪವಡಿಸಿದ ಪುಟ್ಟರಾಮನಿಗೆ ನಿತ್ಯಪೂಜೆ ಜರಗುತ್ತಿದೆ. 1992 ದಶಂಬರ 6ರವರೆಗೆ ಮೂರು ಗುಂಬಜ್‌ಗಳ ಹಳೆಯ ಕಟ್ಟಡದ ಪ್ರಥಮ ಗುಂಬಜದಡಿ ಪೂಜೆಗೊಳ್ಳುತ್ತಿದ್ದ ಶ್ರೀರಾಮ ವಿಗ್ರಹಕ್ಕೆ ಇದೀಗ ಸುಪ್ರೀಂ ಕೋರ್ಟ್ ಆದೇಶದನ್ವಯ ತಾತ್ಕಾಲಿಕ ಮಂದಿರದಲ್ಲೇ ಪೂಜಾದಿಗಳು ನಡೆಯುತ್ತಿವೆ.
ಈಗ ಏನಿದ್ದರೂ ವಿವಾದಗ್ರಸ್ತ 2.77 ಎಕ್ರೆ ಸ್ಥಳದ ಒಡೆತನದ ಸಣ್ಣ ಪ್ರಶ್ನೆ. ಜತೆಗೆ ಸಮೀಪದ 67 ಎಕ್ರೆಯ ರಾಮಕಥಾ ಪಾರ್ಕ್ ಗಾಗಿ ರಾಜ್ಯ ಸರಕಾರ ಹೊಂದಿದ್ದ ವಿಶಾಲ ನಿವೇಶನದ ಪುನರ್ ಕಾರ್ಯಾರಂಭ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸಂಕಲ್ಪದ ಬೃಹತ್ ಶ್ರೀರಾಮ ಮೂರ್ತಿಯ ನಿರ್ಮಾಣವೂ ಇದರೊಂದಿಗೆ ಸೇರಿಕೊಂಡಿದೆ.
ಜನ್ಮಭೂಮಿ ಆಂದೋಲನದ ಸಿಂಹಾವಲೋಕನ ಮಾಡುವಲ್ಲಿ ಹಲವಾರು ಐತಿಹಾಸಿಕ ಘಟನಾವಳಿಗಳ ಸಂಕ್ಷಿಪ್ತ ಉಲ್ಲೇಖ ಅನಿವಾರ್ಯ. 1983 ಮಾರ್ಚ್ 6ರಂದು ಮುಜಾಪರ್ ನಗರದಲ್ಲಿನ ವಿರಾಟ್ ಹಿಂದೂ ಸಮ್ಮೇಳನದಲ್ಲಿ ದಾವೂ ದಾಯಾಳ್ ಖನ್ನಾ ಮುಂದಿಟ್ಟ ಕಾಶಿ, ಅಯೋಧ್ಯೆ ಹಾಗೂ ಮಥುರಾದ ವಿಮುಕ್ತಿ ಸಂಕಲ್ಪಕ್ಕೆ ಓಂಕಾರ ಘೋಷದ ಮುದ್ರೆ ಬಿತ್ತು. ಮುಂದೆ 1984 ಎಪ್ರಿಲ್ 7 ಹಾಗೂ 8ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಜರಗಿದ ಪ್ರಪ್ರಥಮ ಧರ್ಮ ಸಂಸತ್ತಿನಲ್ಲಿ ಅಯೋಧ್ಯೆ ಮುಕ್ತಿಗೇ ಪ್ರಥಮ ಆದ್ಯತೆ ನೀಡಲಾಯಿತು. 1984 ಅಕ್ಟೋಬರ 7ಂದು ಸರಯೂ ನದಿ ತೀರದಲ್ಲಿ ಶ್ರೀರಾಮ ಭೂಮಿ ಮುಕ್ತಿ ಸಂಕಲ್ಪ ಹಾಗೂ 14ರಂದು ಲಕ್ನೋಗೆ ಪಾದಯಾತ್ರೆ ನಡೆದು ಮನವಿ ಸಲ್ಲಿಸಲಾಯಿತು. 1985 ಮಾರ್ಚ್ 25ರಂದು ಆಗಿನ ಪ್ರಧಾನಿ ರಾಜೀವಗಾಂಧಿಯವರಿಗೆ ವಿಶ್ವ ಹಿಂದೂ ಪರಿಷತ್ತಿನ ನಿಯೋಗ ಮನವಿ ಸಲ್ಲಿಸಿತ್ತು. ಹಾಗೂ ಅದೇ ವರ್ಷ ವಿಜಯದಶಮಿಯಂದು ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ಒಂಬತ್ತು ಜನಜಾಗೃತಿ ರಾಮ -ಜಾನಕಿ ರಥ ಸಂಚರಿಸಿದವು.
1985ರಲ್ಲಿ ನವಂಬರ 31ರಂದು ಉಡುಪಿಯಲ್ಲಿ ಜರಗಿದ ಧರ್ಮ ಸಂಸತ್ತಿನಲ್ಲಿ ಶ್ರೀರಾಮ ಜನ್ಮಭೂಮಿಯಲ್ಲಿ ಭಕ್ತರಿಗೆ ಮುಕ್ತ ದೇವದರ್ಶನಕ್ಕೆ ಅವಕಾಶ ನೀಡಬೇಕೆಂಬ “ತಾಲೋ ಖೋಲೋ’ ಚಳವಳಿಗೆ ನಿರ್ದಿಷ್ಟ ತಿರುವು ದೊರಕಿತು. ಮುಂಬರುವ ಶಿವರಾತ್ರಿಯೊಳಗೆ (8-3-1986) ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡದಿದ್ದರೆ ಆತ್ಮಾಹುತಿಗೆ ಸಿದ್ಧ ಎಂಬುದಾಗಿ 50 ಮಂದಿ ಸಾಧುಸಂತರು ಪ್ರತಿಜ್ಞೆಗೈದರು. ಇವೆಲ್ಲದರ ಒಟ್ಟು ಫಲಶ್ರುತಿಯಾಗಿ 1949ರ ಬಳಿಕ ದಿನಕ್ಕೊಂದು ಬಾರಿ ಕೇವಲ ಅರ್ಚಕರಿಗೆ ಪ್ರವೇಶವಿದ್ದ ಹಳೆಯ ಕಟ್ಟಡದೊಳಗಿನ ಪುಟ್ಟ ರಾಮನ ದರ್ಶನಕ್ಕೆ ಜಿಲ್ಲಾ ನ್ಯಾಯಾಲಯ ಮುಕ್ತ ಅವಕಾಶ ನೀಡಿತು.
ಮುಂದೆ 1989ರ ನವೆಂಬರ್ 9ರಂದು ದೇವೋತ್ಥಾನ ಏಕಾದಶಿಯಂದು ಶ್ರೀರಾಮ ಮಂದಿರ ಶಿಲಾನ್ಯಾಸ ಹಾಗೂ ರಾಷ್ಟ್ರವ್ಯಾಪಿ ಶಿಲಾಪೂಜನದ ನಿರ್ಣಯ-ವಿಶ್ವ ಹಿಂದೂ ಪರಿಷತ್ ಕೈಗೊಂಡಿತು. ಒಟ್ಟು 2,97,705 ಸ್ಥಾನಗಳಲ್ಲಿ ಅಭೂತಪೂರ್ವ “ಶಿಲಾಪೂಜನ’ ಕಾರ್ಯಕ್ರಮ ಜರಗಿತು. 39 ವಿದೇಶಗಳಲ್ಲೂ ಒಟ್ಟು ಸುಮಾರು 11 ಕೋಟಿಗೂ ಮಿಕ್ಕಿ ಹಿಂದೂಗಳು ಈ ಸಂಕಲ್ಪ ಕಾಯಕದಲ್ಲಿ ಭಾಗಿಯಾದರು. ಈ ಉತ್ಸಾಹದ ಬೆನ್ನಲ್ಲೇ ಶ್ರೀರಾಮ ಜ್ಯೋತಿ ಪ್ರಸರಣ ಕಾರ್ಯ 1990ರಲ್ಲಿ ದೀಪಾವಳಿ ಸಂದರ್ಭ ರಂಗೇರಿಸಿತು. ಅದರೊಂದಿಗೇ 1990ರ ಸಪ್ಟೆಂಬರ 25ರಂದು ಎಲ್.ಕೆ. ಆಡ್ವಾಣಿಯವರ ಸೋಮನಾಥದಿಂದ ಅಯೋಧ್ಯೆವರೆಗಿನ ಬೃಹತ್ ಜಾಥಾ ಆರಂಭವಾಯಿತು. ಹೀಗೆ ಆರಂಭಗೊಂಡ ಅಯೋಧ್ಯೆಯ ವಿವಾದದ ಕುದಿಬಿಂದು 1990ರಲ್ಲಿ ಮುಲಾಯಂ ಸಿಂಗ್ ಮುಖ್ಯಮಂತ್ರಿತ್ವದಲ್ಲಿ ಹಿಂದೂ ವಿರಾಟ್ ಸಂಘರ್ಷದ ಕರಸೇವೆಯಲ್ಲಿ ಗರಿಷ್ಠ ಮಟ್ಟ ಮುಟ್ಟಿತು. ಕಾರ್ಯಾಚರಣೆಯಲ್ಲಿ 90 ಮಂದಿಯ ಬಲಿದಾನವಾಯಿತು.
ಯುದ್ಧಕಾಂಡದ ಅಧ್ಯಾಯಗಳು
ಈ ಕಾಲಘಟ್ಟದಲ್ಲೇ ಕೇಂದ್ರ ಹಾಗೂ ಉತ್ತರ ಪ್ರದೇಶ ರಾಜ್ಯ ಸರಕಾರಗಳೂ ಅಯೋಧ್ಯಾ ವಿವಾದದಲ್ಲಿ ವಿವಿಧ ಭಂಗಿಗಳಲ್ಲಿ ಸಿಲುಕಿಕೊಂಡವು. 1989ರಂದು ಪ್ರಧಾನಿ ರಾಜೀವಗಾಂಧಿಯವರ ಸರಕಾರ ಶಿಲಾನ್ಯಾಸ ಸ್ಥಳ ವಿವಾದಗ್ರಸ್ತವಾದುದಲ್ಲ ಎಂದು ಘೋಷಿಸಿತು. ಇದಾದ ಮರುದಿನ ಅಂದರೆ ನಿಗದಿತ ನವಂಬರ 9ರಂದು ಮಧ್ಯಾಹ್ನ 1.55ಕ್ಕೆ ಶ್ರೀರಾಮ ಮಂದಿರದ ಶಿಲಾನ್ಯಾಸ ಜರಗಿತು. ಹಳೆಯ ಕಟ್ಟಡ ಬೆರಗುಗಣ್ಣಿನಿಂದ ನೋಡುತ್ತಿತ್ತು. ಮುಂದಿನ ಪ್ರಧಾನಿ ವಿ. ಪಿ.ಸಿಂಗ್ ಗುಂಬಜ್‌ನ ನೆಳಲಲ್ಲಿ ಹಾಯಾಗಿ ಪವಡಿಸಿದ ರಾಮಲಲಾನ ದರ್ಶನಗೈದು, ತೀರ್ಥಪ್ರಸಾದ ಸ್ವೀಕರಿಸಿ, ತನ್ನ ಪತ್ನಿಗಾಗಿ ಇನ್ನೂ ಒಂದು ಕಟ್ಟು ಮಿಠಾಯಿ ಕೇಳಿ ಪಡೆದರು. ಹಾಗೂ ಆಶ್ಚರ್ಯದಲ್ಲೇ ಒಂದು ಪ್ರಶ್ನೆ ಕೇಳಿಯೇ ಬಿಟ್ಟರು- “”ಅರೆ ಭಾಯ್, ಮಸ್ಜಿದ್ ಹೈ ಕಹಾಂ?” ಈ 1990ರ ಅಂಕದ ಪರದೆ ಬಿದ್ದಾಗ ವಿ.ಪಿ. ಸಿಂಗ್ ಸರಕಾರ, ಮುಲಾಯಂ ಸಿಂಗ್ ಸರಕಾರ ಎಲ್ಲಾ ಪತನಗೊಂಡಿತು. ಕೇಂದ್ರದಲ್ಲಿ ವಿ.ಪಿ. ನರಸಿಂಹ ರಾವ್ ಸರಕಾರ, ರಾಜ್ಯದಲ್ಲಿ ಕಲ್ಯಾಣಸಿಂಗ್ ಸರಕಾರ ಪ್ರತಿಷ್ಠೆಗೊಂಡಿತು. ಈ ಅವಧಿಯಲ್ಲೇ 1992 ದಶಂಬರ 6ರ ಸೂರ್ಯಾಸ್ತಮಾನದ ವೇಳೆ ಪರಕೀಯ ದಾಳಿಯ ಕುರುಹು ಧರಾಶಾಹಿಯಾಯಿತು.
ನೂತನ ಮಂದಿರದ ಸುಂದರ ವಿನ್ಯಾಸ
ಸಮಗ್ರ ಮಂದಿರದ ನಿರ್ಮಾಣಕ್ಕೆ ರಾಜಸ್ಥಾನದ ತಿಳಿ ಗುಲಾಬಿಯ ಭರತ್‌ಪುರ್ ಯಾ ಬನ್ಸಿಪಹಾಡ್‌ಪುರ್ ಕಲ್ಲುಗಳ ಕೆತ್ತನೆಯ ಕೆಲಸ ಬಹುಪಾಲು ಮುಗಿದಿದೆ. 268 ಅಡಿ ಉದ್ದ, 140 ಅಡಿ ಅಗಲ, 128 ಅಡಿ ಎತ್ತರದ, ಎರಡು ಅಂತಸ್ತಿನ ಶ್ರೀರಾಮ ಮಂದಿರದ ಯೋಜನೆ ಸಿದ್ಧಗೊಂಡಿದೆ.
ಪಿ. ಅನಂತಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.