ಆಸ್ಟ್ರೇಲಿಯಾದ ಕತೆ: ರಾಜಕುಮಾರಿ ಲ್ಯಾಬಮ್
Team Udayavani, Feb 11, 2018, 8:15 AM IST
ಒಂದು ರಾಜ್ಯವನ್ನಾಳುತ್ತಿದ್ದ ರಾಜನಿಗೆ ಒಬ್ಬನೇ ಮಗನಿದ್ದ. ಒಂದು ಸಲ ಅವನು ಬೇಟೆಗೆ ಹೋಗಲು ಮುಂದಾದ. ಆಗ ರಾಜನು, “”ನೀನು ಕಾಡಿನಲ್ಲಿ ಮೂರು ದಿಕ್ಕುಗಳಲ್ಲಿ ಬೇಟೆಯಾಡಬಹುದು. ಆದರೆ ಉತ್ತರ ದಿಕ್ಕಿಗೆ ಮಾತ್ರ ಬೇಟೆಗೆ ಹೋಗಬಾರದು. ನನ್ನ ಸೂಚನೆಯನ್ನು ಯಾವುದೇ ಕಾರಣಕ್ಕೂ ಮೀರಬಾರದು” ಎಂದು ಹೇಳಿದ. ರಾಜಕುಮಾರ “”ಹಾಗೆಯೇ ಆಗಲಿ” ಎಂದು ಒಪ್ಪಿದ. ಕುದುರೆಯೇರಿಕೊಂಡು ಕಾಡಿಗೆ ಹೋಗಿ ಮೂರು ದಿಕ್ಕುಗಳಲ್ಲೂ ಬೇಟೆಯಾಡಿದ. ಬಳಿಕ ಉತ್ತರ ದಿಕ್ಕಿಗೆ ಹೋಗಬಾರದೆಂದು ತಂದೆ ಯಾಕೆ ಹೇಳಿದನೆಂದು ಅವನಿಗೆ ಕುತೂಹಲವಾಯಿತು. ತಂದೆಯ ಎಚ್ಚರಿಕೆಯನ್ನು ಕಡೆಗಣಿಸಿ ಆ ಕಡೆಗೆ ಕುದುರೆಯನ್ನು ತಿರುಗಿಸಿದ. ಅಲ್ಲಿ ತುಂಬ ಗಿಣಿಗಳನ್ನು ಬಿಟ್ಟರೆ ಬೇರೇನೂ ಕಾಣಿಸಲಿಲ್ಲ. ಅವುಗಳಲ್ಲಿ ದೊಡ್ಡದಾಗಿರುವ ರಾಜ ಗಿಣಿಯನ್ನು ಹಿಡಿದುಕೊಂಡ. ಗಿಣಿಯು, “”ನನ್ನನ್ನು ಬಿಡು. ಇಲ್ಲವಾದರೆ ರಾಜಕುಮಾರಿ ಲ್ಯಾಬಮ್ ಬಳಿ ದೂರು ಹೇಳುತ್ತೇನೆ” ಎಂದು ಹೇಳಿತು. “”ರಾಜಕುಮಾರಿ ಲ್ಯಾಬಮ್! ಯಾರವಳು?” ಎಂದು ರಾಜಕುಮಾರ ಕೇಳಿದ.
“”ನಿನಗೆ ಗೊತ್ತಿಲ್ಲವೆ? ನಿನ್ನ ರಾಜ್ಯದ ಎಷ್ಟೋ ಮಂದಿ ಅವಳನ್ನು ಹುಡುಕಲು ಹೋಗಿ ಜೀವ ಕಳೆದುಕೊಂಡರು. ಏಳು ಸಮುದ್ರಗಳಾಚೆ ಒಂದು ಸುಂದರವಾದ ಅರಮನೆ ಇದೆ. ಅಲ್ಲಿ ನೆಲೆಸಿರುವ ಪರಮ ಸುಂದರಿ ಅವಳು. ಅವಳ ಚೆಲುವಿನಿಂದ ಇಡೀ ರಾಜ್ಯವೇ ಬೆಳಗುವ ಕಾರಣ ಕತ್ತಲಲ್ಲಿ ದೀಪಗಳ ಅಗತ್ಯವಿಲ್ಲ” ಎಂದಿತು ಗಿಣಿ. ರಾಜಕುಮಾರ ಗಿಣಿಯನ್ನು ಬಿಟ್ಟು ಅರಮನೆಗೆ ಹಿಂತಿರುಗಿದ. ತಂದೆ ಉತ್ತರ ದಿಕ್ಕಿಗೆ ಹೋಗಬಾರದೆಂದು ತಡೆದ ಕಾರಣ ಅವನಿಗೆ ಗೊತ್ತಾಯಿತು. ಸುಂದರಿ ರಾಜಕುಮಾರಿಯನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ಅವನು ನಿರ್ಧರಿಸಿದ. ಮರುದಿನ ಎರಡು ರೊಟ್ಟಿಗಳನ್ನು ಬುತ್ತಿ ಕಟ್ಟಿಕೊಂಡು ಯಾರಿಗೂ ಹೇಳದೆ ಕಾಡಿನ ದಾರಿ ಹಿಡಿದು ಮುಂದೆ ಸಾಗಿದ.
ಮಧ್ಯಾಹ್ನ ರಾಜಕುಮಾರ ಊಟ ಮಾಡಲು ಬುತ್ತಿ ಬಿಡಿಸಿದಾಗ ಒಂದು ಇರುವೆಗಳ ದಂಡು ಹಸಿದುಕೊಂಡು ಅವನ ಬಳಿಗೆ ಬಂದಿತು. ಅವನು ದಯೆ ತೋರಿ ಒಂದು ರೊಟ್ಟಿಯನ್ನು ಅವುಗಳಿಗೆ ನೀಡಿ ಒಂದನ್ನು ತಾನು ತಿಂದ. ಇರುವೆಗಳ ರಾಜ ಕೃತಜ್ಞತೆಯಿಂದ ಕೈ ಮುಗಿದು, “”ನಿನ್ನ ಕರುಣೆಗೆ ಪ್ರತಿಫಲ ಕೊಡುವುದು ನಮ್ಮ ಕರ್ತವ್ಯ. ಬೇಕಾದಾಗ ನಮ್ಮನ್ನು ಸ್ಮರಿಸಿಕೋ” ಎಂದು ಹೇಳಿತು. ರಾಜಕುಮಾರ ಇನ್ನೂ ಮುಂದೆ ಬಂದಾಗ ಗಂಡುಹುಲಿಯೊಂದು ನರಳುತ್ತ ಮಲಗಿರುವುದನ್ನು ನೋಡಿ ಅದರ ಬಳಿಗೆ ಹೋದ. ಹುಲಿಯ ಮುಂಗಾಲಿಗೆ ಒಂದು ಮುಳ್ಳು ಚುಚ್ಚಿಕೊಂಡಿತ್ತು. ಗಾಯದಲ್ಲಿ ಕೀವು ಆಗಿ ನಡೆದಾಡಲು ಕಷ್ಟವಾಗಿರುವುದು ಅವನಿಗೆ ತಿಳಿಯಿತು. ಇನ್ನೊಂದು ಮುಳ್ಳು ತಂದು ಅದರ ಕಾಲಿನಿಂದ ಮುಳ್ಳು ತೆಗೆದು ಕೀವನ್ನು ಶುಚಿಗೊಳಿಸಿದ. ಹಸಿರೆಲೆಗಳನ್ನು ಕೊಯಿದು ಅರೆದು ಗಾಯಕ್ಕೆ ಹಚ್ಚಿದ. ಹುಲಿಯ ನೋವು ಉಪಶಮನಗೊಂಡಿತು. ಅದು, “”ಕಷ್ಟಕಾಲದಲ್ಲಿ ನನ್ನನ್ನು ನೆನೆದುಕೋ. ಸಹಾಯ ಮಾಡುತ್ತೇನೆ” ಎಂದು ಹೇಳಿ ಹೊರಟುಹೋಯಿತು.
ರಾಜಕುಮಾರ ಮುಂದೆ ಸಾಗಿದಾಗ ಇಬ್ಬರು ಯುವಕರು ಒಂದು ಹಾಸಿಗೆಯನ್ನು ಮುಂದಿಟ್ಟುಕೊಂಡು ಜಗಳವಾಡುವುದು ಕಾಣಿಸಿತು. “”ಯಾಕೆ ಜಗಳವಾಡುತ್ತೀರಿ?” ಎಂದು ಕೇಳಿದ. “”ಇದು ನಮ್ಮ ತಂದೆ ಕೊಟ್ಟ ಹಾಸಿಗೆ. ಇದರ ಮೇಲೆ ಕುಳಿತುಕೊಂಡು ಎಲ್ಲಿಗಾದರೂ ಹೋಗಬೇಕೆಂದು ನೆನೆದರೆ ಸಾಕು. ಆಕಾಶ ಮಾರ್ಗದಲ್ಲಿ ಅರೆಕ್ಷಣದೊಳಗೆ ಅಲ್ಲಿಗೆ ಹೋಗಬಹುದು. ಇದು ಯಾರಿಗೆ ಸೇರಬೇಕೆಂದು ಜಗಳವಾಡುತ್ತಿದ್ದೇವೆ” ಎಂದರು ಅವರು. ರಾಜಕುಮಾರನು, “”ಜಗಳಕ್ಕಿಂತ ಸುಲಭವಾದ ಉಪಾಯ ನಾನು ಹೇಳುತ್ತೇನೆ. ನಾನೊಂದು ಕಲ್ಲು ಎಸೆಯುತ್ತೇನೆ. ಅದನ್ನು ಮೊದಲು ಹೆಕ್ಕಿ ತಂದವರಿಗೆ ಈ ಹಾಸಿಗೆ ಸೇರಬೇಕು” ಎಂದನು. ಯುವಕರು ಈ ಮಾತಿಗೆ ಒಪ್ಪಿ$ಅವನು ಎಸೆದ ಕಲ್ಲನ್ನು ಆರಿಸಿ ತರಲು ಓಡಿದರು. ಆಗ ರಾಜಕುಮಾರ ಹಾಸಿಗೆಯ ಮೇಲೆ ಕುಳಿತು ತನಗೆ ರಾಜಕುಮಾರಿ ಲ್ಯಾಬಮ್ ಇರುವ ಜಾಗಕ್ಕೆ ಹೋಗಬೇಕೆಂದು ಸ್ಮರಿಸಿದ. ಅರೆಕ್ಷಣದಲ್ಲಿ ಅವನು ಅವಳಿರುವಲ್ಲಿಗೆ ತಲುಪಿದ. ಅವನನ್ನು ನೋಡಿ ಲ್ಯಾಬಮ್ ಇಷ್ಟಪಟ್ಟು ಮದುವೆಯಾಗಲು ಒಪ್ಪಿದಳು.
ಅಷ್ಟರಲ್ಲಿ ಲ್ಯಾಬಮ್ ತಂದೆ ವಿಷಯ ತಿಳಿದು ರಾಜಕುಮಾರನನ್ನು ಬಂಧಿಸಿದ. “”ನನ್ನ ಮಗಳನ್ನು ಮದುವೆಯಾಗಬೇಕಿದ್ದರೆ ಈ ಕೋಣೆಯ ತುಂಬ ಇರುವ ಎಳ್ಳಿನಿಂದ ರಾತ್ರೆ ಬೆಳಗಾಗುವ ಮೊದಲು ಎಣ್ಣೆ ಹಿಂಡಿ ತೋರಿಸಬೇಕು” ಎಂದು ಆಜಾnಪಿಸಿ ಎಳ್ಳು ತುಂಬಿದ ಕೋಣೆಯೊಳಗೆ ಅವನನ್ನು ಸೇರಿಸಿದ. ರಾಜಕುಮಾರ ವಿಧಿಯಿಲ್ಲದೆ ಇರುವೆಗಳ ರಾಜನನ್ನು ಸ್ಮರಿಸಿದ. ಇರುವೆಗಳ ಸಾಲು ಅಲ್ಲಿ ಪ್ರತ್ಯಕ್ಷವಾಯಿತು. ಬೆಳಗಾಗುವಾಗ ಎಲ್ಲ ಎಳ್ಳುಗಳಿಂದ ಎಣ್ಣೆ ಹಿಂಡಿ ಮಾಯವಾಯಿತು. ಲ್ಯಾಬಮ್ ತಂದೆ ಇದನ್ನು ಕಂಡ ಮೇಲೂ ಸುಮ್ಮನಿರಲಿಲ್ಲ. ಇಬ್ಬರು ರಾಕ್ಷಸರನ್ನು ತೋರಿಸಿ ಅವರೊಂದಿಗೆ ಏಕಾಂಗಿಯಾಗಿ ಹೋರಾಡಿ ಗೆಲ್ಲುವಂತೆ ಹೇಳಿದ. ಆಗ ರಾಜಕುಮಾರ ತಾನು ಉಪಕಾರ ಮಾಡಿದ ಹುಲಿಯನ್ನು ನೆನೆದುಕೊಂಡ. ಮರುಕ್ಷಣವೇ ಹತ್ತಾರು ಹುಲಿಗಳು ಎಲ್ಲಿಂದಲೋ ಬಂದು ರಾಕ್ಷಸರನ್ನು ಸೀಳಿ ಮಾಯವಾದವು.
ಲ್ಯಾಬಮ್ ತಂದೆ ರಾಕ್ಷಸರ ಅಂತ್ಯವನ್ನು ಕಂಡು ರಾಜಕುಮಾರನನ್ನು ಮೆಚ್ಚಿಕೊಂಡ. “”ನಿನ್ನಿಂದಾಗಿ ರಾಜ್ಯವನ್ನು ಕಾಡುತ್ತಿದ್ದ ರಾಕ್ಷಸರ ಅಂತ್ಯವಾಯಿತು. ಕಡೆಯದಾಗಿ ಒಂದು ಪರೀಕ್ಷೆಯಲ್ಲಿ ನೀನು ಗೆದ್ದರೆ ನನ್ನ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡುತ್ತೇನೆ. ನೋಡು, ಇಲ್ಲೊಂದು ಮೇಣದ ಕತ್ತಿಯಿದೆ. ಇದರಿಂದ ಅಲ್ಲಿ ಕಾಣುತ್ತಿರುವ ದೊಡ್ಡ ಮರವನ್ನು ನಾಳೆ ಬೆಳಗಾಗುವ ಮೊದಲು ಬುಡದಿಂದಲೇ ಕತ್ತರಿಸಬೇಕು. ಇದರಲ್ಲಿ ನೀನು ಗೆಲ್ಲದಿದ್ದರೆ ನಿನ್ನನ್ನು ಕೊಂದು ಹಾಕುತ್ತೇನೆ” ಎಂದು ಹೇಳಿದ.
ರಾಜಕುಮಾರನಿಗೆ ಚಿಂತೆಯಾಯಿತು. ತಾನು ಈ ಪರೀಕ್ಷೆಯಲ್ಲಿ ಗೆಲ್ಲುವುದು ಕಷ್ಟವೆಂದು ತಿಳಿದು ದುಃಖೀಸುತ್ತ ಕುಳಿತುಕೊಂಡ. ಆಗ ಲ್ಯಾಬಮ್ ಅವನ ಸನಿಹಕ್ಕೆ ಬಂದಳು. ತನ್ನ ಒಂದು ಕೂದಲನ್ನು ಕಿತ್ತು ತೆಗೆದು ಅವನ ಕೈಗೆ ಕೊಟ್ಟಳು. “”ಚಿಂತಿಸಬೇಡ. ಈ ಕಡೆಯ ಪರೀಕ್ಷೆಯಲ್ಲಿ ನೀನು ಗೆಲ್ಲಲೇಬೇಕು. ಇಲ್ಲವಾದರೆ ನನಗಾಗಿ ಬಂದು ಇನ್ನೆಷ್ಟು ಮಂದಿ ಜೀವ ಕಳೆದುಕೊಳ್ಳಬೇಕೋ ನನಗೇ ಗೊತ್ತಿಲ್ಲ. ನನ್ನ ಈ ಕೂದಲನ್ನು ಮೇಣದ ಕತ್ತಿಯೊಳಗೆ ಸೇರಿಸು. ಅದರಿಂದ ಕತ್ತಿ ವಜ್ರಕ್ಕಿಂತ ಕಠಿನವಾಗುತ್ತದೆ. ಸುಲಭವಾಗಿ ಮರವನ್ನು ಕತ್ತರಿಸಬಹುದು” ಎಂದು ಹೇಳಿದಳು. ಮೇಣದ ಕತ್ತಿಯಿಂದ ರಾಜಕುಮಾರ ಮರವನ್ನು ಕತ್ತರಿಸಿದ. ಲ್ಯಾಬಮ್ ತಂದೆ ಸಂತೋಷದಿಂದ ಅವಳನ್ನು ಅವನಿಗೆ ಮದುವೆ ಮಾಡಿಕೊಟ್ಟ. ರಾಜಕುಮಾರನು ಹಾಸಿಗೆಯ ಮೇಲೆ ಕುಳಿತು ಹೆಂಡತಿಯೊಂದಿಗೆ ತನ್ನ ಅರಮನೆಗೆ ಬಂದಿಳಿದ.
ಮಗನ ಸಾಹಸ ಕಂಡು ರಾಜನಿಗೆ ಆನಂದವಾಯಿತು. “”ಈ ಸುಂದರಿಯನ್ನು ತರಲೆಂದು ನಮ್ಮ ರಾಜ್ಯದಿಂದ ತೆರಳಿದ ಯಾರೂ ಮರಳಿ ಬಂದಿಲ್ಲ. ಆದರೆ ನೀನು ಅವಳನ್ನು ಗೆದ್ದುಕೊಂಡು ಬಂದಿರುವುದರಿಂದ ನನಗೆ ತುಂಬ ಹೆಮ್ಮೆಯಾಗಿದೆ. ನೀನು ಈಗಲೇ ನಮ್ಮ ರಾಜ್ಯದ ರಾಜನಾಗಿ ಅಧಿಕಾರ ವಹಿಸಿಕೋ” ಎಂದು ಹೇಳಿ ಅವನಿಗೆ ರಾಜ್ಯದ ಪಟ್ಟವನ್ನೊಪ್ಪಿಸಿದ.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.