ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್
Team Udayavani, Aug 25, 2024, 7:03 PM IST
ಸಂತಸದ ಕ್ಷಣಗಳನ್ನು ನೆನಪಿಟ್ಟುಕೊಳ್ಳಲು ಹಾಗೂ ಹಂಚಿಕೊಳ್ಳಲು ಈಗಿನ ಕಾಲಕ್ಕೆ ಫೋಟೋ ಮತ್ತು ವಿಡಿಯೋ ಅತೀ ಮುಖ್ಯ. ಪ್ರಿ ವೆಡ್ಡಿಂಗ್, ಬೇಬಿ ಶಾವರ್‌ನಿಂದ ಡೈವೋರ್ಸ್‌ವರೆಗೂ ಫೋಟೋ ಶೂಟ್‌ಗಳು ನಡೆಯುವುದನ್ನು ಕಾಣಬಹುದು. ಸಾಮಾಜಿಕ ಮಾಧ್ಯಮ ವಿಸ್ತಾರಗೊಂಡಷ್ಟು, ಜನರು ತಮ್ಮ ಬದುಕಿನ ವಿಶೇಷ ಕ್ಷಣಗಳನ್ನು ಪ್ರದರ್ಶಿಸಲು ಹೆಚ್ಚು ಉತ್ಸುಕರಾಗಿರುತ್ತಾರೆ. ಇದೇ ವಿಚಾರವನ್ನು ಇಟ್ಟುಕೊಂಡು ಮಕ್ಕಳಿಗೆ ದೇವರ ವೇಷಗಳನ್ನು ಹಾಕಿ, ಕೆಲ ಸಮಯದ ಮಟ್ಟಿಗೆ ಅವರನ್ನು ದೇವರಂತೆಯೇ ಕೂರಿಸಿ ಅದನ್ನು ವಿಡಿಯೋ ಹಾಗೂ ಫೋಟೋ ರೂಪದಲ್ಲಿ ಸೆರೆ ಹಿಡಿಯುವ ಮೂಲಕ ಹೊಸದೊಂದು ಟ್ರೆಂಡನ್ನು ಬೆಂಗಳೂರಿನ ವಿದ್ಯಾ ನವೀನ್ ಆರಂಭಿಸಿದ್ದಾರೆ. ಏನಿದು ಹೊಸ ಟ್ರೆಂಡ್? ಬನ್ನಿ ತಿಳಿಯೋಣ.
ಕಲಾ ಕ್ಷೇತ್ರದಲ್ಲಿ ಸಾಕಷ್ಟು ಬಗೆಯ ವೃತ್ತಿ-ಪ್ರವೃತ್ತಿಗಳನ್ನು ಕಾಣಬಹುದು. ಆದರೆ, ಇದು ಕೊಂಚ ವಿಭಿನ್ನವೆನಿಸುತ್ತದೆ. ನಮ್ಮ ಧರ್ಮ, ಸಂಸ್ಕೃತಿಯ ಪ್ರತೀಕವಾಗಿರುವ ದೇವ, ದೇವತೆಯರ ವೇಷಗಳನ್ನು ಮಕ್ಕಳಿಗೆ ಹಾಕಿಸುವುದು ಸಹಜ. ಹಬ್ಬ-ಹರಿದಿನ, ಶಾಲೆಯ ಸಮಾರಂಭಗಳಲ್ಲಿ ಈ ಕಾರ್ಯ ಸಾಂದರ್ಭಿಕವಾದರೂ, ಇದನ್ನೇ ವೃತ್ತಿಯನ್ನಾಗಿ ಪರಿವರ್ತಿಸಿ ಅದರಲ್ಲಿ ತೊಡಗಿಕೊಂಡಿದ್ದಾರೆ ವಿದ್ಯಾ ನವೀನ್.
ಕಂಚಿಯಿಂದ ಬರುವ ವಸ್ತ್ರಗಳು : ಇವರು ಮಕ್ಕಳಿಗೆ ತೊಡಿಸುವ ದೇವರ ವೇಷಗಳನ್ನು ನೋಡಿದಾಗ ಅವರ ಕೈ ಚಳಕ, ಕಸರತ್ತು, ಶ್ರಮ ಕಣ್ಣಿಗೆ ರಾಚುತ್ತದೆ. ದೇವ, ದೇವತೆಗಳ ವೇಷ ಹಾಕುವಾಗ ಅದರ ಬಗ್ಗೆ ಸಂಪೂರ್ಣ ತಿಳುವಳಿಕೆ ಇರುವುದು ಅತೀ ಮುಖ್ಯ. ಇದು ದುಬಾರಿ ಖರ್ಚಿನ ವಿಷಯವೂ ಹೌದು. ಏಕೆಂದರೆ, ದೇವರಿಗೆ ಹಾಕುವ ವಸ್ತ್ರ, ಆಭರಣಗಳ ಮಾದರಿಯನ್ನೇ ಮಕ್ಕಳಿಗೂ ಹಾಕಬೇಕಾಗುತ್ತದೆ. ದೇವರ ವೇಷ ಹಾಕಲು ಅಗತ್ಯವಿರುವ ವಸ್ತ್ರ, ಆಭರಣ, ಇನ್ನಿತರ ಉಡುಗೆಗಳನ್ನು ವಿದ್ಯಾ ತಾವೇ ತರಿಸಿಕೊಳ್ಳುತ್ತಾರೆ. ದೇವರ ರೂಪದರ್ಶಿಗಳಿಗೆ ತಂಜಾವೂರಿನಿಂದ ಬಗೆಬಗೆಯ ಕಿರೀಟ, ಕಂಚಿಯಿಂದ ಮಗ್ಗದಲ್ಲಿ ನೇಯ್ದ ವಿಶೇಷ ರೇಷ್ಮೆ ವಸ್ತ್ರಗಳನ್ನು ತರಿಸುತ್ತಾರೆ. “ಹೆಚ್ಚಿನ ಪಾಲಕರು ತಮ್ಮ ಮಕ್ಕಳಿಗೆ ಕೃಷ್ಣ, ರಾಧೆಯ ವೇಷ ಹಾಕಿಸಲು ಇಷ್ಟಪಡುತ್ತಾರೆ. ಈ ವೇಷ ಹಾಕಿಸಲು ಹೆಚ್ಚಿನ ಖರ್ಚು ಇಲ್ಲ ಮತ್ತು ಈ ವೇಷಕ್ಕೆ ಮಕ್ಕಳನ್ನು ಒಗ್ಗಿಸುವುದು ಬಲು ಸುಲಭ. ಹಾಗಾಗಿ ಹೆಚ್ಚಿನ ಪೋಷಕರ ಆಯ್ಕೆ ಇದೇ ಆಗಿರುತ್ತದೆ’ ಎನ್ನುತ್ತಾರೆ ವಿದ್ಯಾ.
ತಾಳ್ಮೆ ಬೇಡುವ ಕೆಲಸ… “ಇಂಥ ವೇಷಭೂಷಣ ಮಾಡುವಾಗ ಮಕ್ಕಳ ತುಂಟಾಟ ನಿಯಂತ್ರಿಸುವುದು ಕಷ್ಟ. ಇರುವ ಒಂದೇ ಉಪಾಯವೆಂದರೆ ಅವರ ಆತ್ಮೀಯತೆ ಗಳಿಸುವುದು. ಮಕ್ಕಳ ಮನಸ್ಸನ್ನು ಗೆದ್ದಾಗ ಮಾತ್ರ ಕೆಲಸ ಸುಲಭವಾಗುತ್ತದೆ. ಒಂದು ಮಗುವಿಗೆ ಒಂದು ದೇವರ ವೇಷ ಹಾಕಿ ಕೂರಿಸಲು ಅಂದಾಜು ಎರಡು ಗಂಟೆ ಹಿಡಿಯುತ್ತದೆ. ಬಹಳ ತಾಳ್ಮೆ ಬೇಡುವ ಕೆಲಸ ಇದು. ಕೆಲವೊಮ್ಮೆ ಮಕ್ಕಳ ಹಠ ಮತ್ತು ಮೊಂಡುತನದಿಂದ ಐದಾರು ಗಂಟೆ ಆದದ್ದೂ ಇದೆ. ಇಲ್ಲಿ ಮಕ್ಕಳ ಸಹಕಾರ ಅತೀ ಮುಖ್ಯ’ ಎಂಬುದು ವಿದ್ಯಾ ಅವರ ಅನುಭವದ ಮಾತು. ಋತುಮತಿಯಾಗದ ಹೆಣ್ಣುಮಕ್ಕಳು ಹಾಗೂ 10-12 ವರ್ಷದೊಳಗಿನ ಗಂಡು ಮಕ್ಕಳಿಗೆ ಮಾತ್ರ ಈ ರೀತಿ ಸಿಂಗಾರ ಮಾಡುವ ಇವರು, ಕಳೆದ ಐದಾರು ವರ್ಷದಿಂದ ಈ ಕಾಯಕ ಮಾಡಿಕೊಂಡು ಬರುತ್ತಿದ್ದಾರೆ.
ದೇವರನ್ನಾಗಿಸುವ ಆ ಕ್ಷಣ… ಬೆಂಗಳೂರಿನ ರಾಜಾಜಿನಗರದ ನಾಲ್ಕನೇ ಬ್ಲಾಕ್‌ನಲ್ಲಿರುವ ರಾಮಮಂದಿರದ ಹತ್ತಿರ ವಿದ್ಯಾ ಅವರ ಮೇಕಪ್ ಸ್ಟುಡಿಯೋ ಇದೆ. ತಮ್ಮ ಮನೆಯ ದೇವ, ದೇವತೆಗಳ ವೇಷವನ್ನು ಮಕ್ಕಳಿಗೆ ಹಾಕಿಸಿ, ಮಕ್ಕಳು “ದೇವರಾಗಿ’ ಕುಳಿತ ಕ್ಷಣವನ್ನು ವಿಡಿಯೋ ಮಾಡಿಕೊಂಡು, ಕ್ಯಾಮರಾದಲ್ಲಿ ಸೆರೆ ಹಿಡಿದು, ನಂತರ ಆ ಫೋಟೋವನ್ನು ತಮ್ಮ ಮನೆಯ ಗೋಡೆಗೆ ಹಾಕುವ ಟ್ರೆಂಡ್ ಇತ್ತೀಚೆಗೆ ಹಲವು ಕಡೆಗಳಲ್ಲಿ ಚಾಲ್ತಿಯಲ್ಲಿದೆ. ಒಂದೊಂದು ದೇವರ ಅಲಂಕಾರಕ್ಕೆ ಒಂದೊಂದು ಬೆಲೆ. 5000 ರೂ. ನಿಂದ 15000 ರೂ. ವರೆಗೂ ಬೆಲೆ ನಿಗದಿಪಡಿಸಲಾಗಿದೆ. ಇವರೊಂದಿಗೆ ನಾಲ್ಕೈದು ಸಹಾಯಕರ ತಂಡವೂ ಇದೆ. ಅತೀ ಮುಖ್ಯ ಕೆಲಸಗಳಾದ ಸೀರೆ ಉಡಿಸುವುದು, ಕೇಶವಿನ್ಯಾಸ, ಮೇಕಪ್, ಆಭರಣದ ಸಿಂಗಾರವನ್ನು ಸ್ವತಃ ತಾವೇ ಮಾಡುತ್ತಾರೆ. ಒಂದು ಸಂಪೂರ್ಣ ಚಿತ್ರವನ್ನು ಸೆರೆಹಿಡಿಯುವಲ್ಲಿ ಬೇಕಾಗುವ ಸೂಕ್ಷ್ಮತೆ, ಅದನ್ನು ಪ್ರತಿಬಿಂಬಿಸುವ ಕಲಾತ್ಮಕತೆ ವಿದ್ಯಾ ಅವರಿಗೆ ಒಲಿದಿದೆ. ಮೇಕಪ್ ಅಷ್ಟೇ ಅಲ್ಲದೆ ಫ್ಲೋರಲ್ ಆರ್ಟ್, ಬಗೆಬಗೆಯ ವಿನ್ಯಾಸದ ಸೀರೆ ಉಡಿಸುವ ಕ್ಲಾಸ್‌ಗಳನ್ನೂ ಇವರು ನಡೆಸುತ್ತಾರೆ. ಯುವಜನತೆ ಆಧುನಿಕತೆಗೆ ಮಾರುಹೋಗುತ್ತಿರುವ ಈ ಸಂದರ್ಭದಲ್ಲಿ ವಿದ್ಯಾ(ಫೋನ್-9972878646) ಅವರ ದೇವರ ವೇಷಗಳ ಕಾಯಕ ಜನರನ್ನು ಆಕರ್ಷಿಸುತ್ತಿದೆ. ದೇವರನ್ನೇ ಕಂಡಂತೆ… ಕೃಷ್ಣ, ಸರಸ್ವತಿ, ಲಕ್ಷ್ಮೀ, ಸವದತ್ತಿ ಯಲ್ಲಮ್ಮ, ಮಧುರೈ ಮೀನಾಕ್ಷಿ, ಕಂಚಿ ಕಾಮಾಕ್ಷಿ, ಕೊಲ್ಹಾಪುರ ಮಹಾಲಕ್ಷ್ಮೀ… ಹೀಗೆ ವಿವಿಧ ದೇವ, ದೇವತೆಗಳ ವೇಷಗಳನ್ನು ಮಕ್ಕಳಿಗೆ ಹಾಕಿಸುವ ವಿದ್ಯಾ ಅವರ ಕಲಾ ಕೌಶಲ್ಯ ಅಮೋಘವಾದದ್ದು. ಒಂದು ಕ್ಷಣ ನೋಡಿದಾಗ ಸಾಕ್ಷಾತ್ ದೇವರೇ ಅವತರಿಸಿ ಬಂದಂತೆ ಭಾಸವಾಗುತ್ತದೆ.
-ಶೋಭಾ ದೇಸಾಯಿ, ಹುಬ್ಬಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.