ಮರಳಿ ಮನೆಗೆ
Team Udayavani, Jul 14, 2019, 5:00 AM IST
ಹೊರಗಡೆ ಧೋ ಧೋ ಎಂದು ಮಳೆ ಸುರಿಯುತ್ತಿತ್ತು. ಜೋರು ಗಾಳಿ-ಮಳೆಗೆ ಕರೆಂಟ್ ಹೋದ ಕಾರಣ ಸೊಳ್ಳೆ ಕಾಟ ಬೇರೆ. ಸಾಲದ್ದಕ್ಕೆ ಸಿಗ್ನಲ್ ಸಿಗದ ಅಪ್ಪನ ರೇಡಿಯೋ “ಕುಯ್ಯೋ’, “ಮುರ್ರೋ’ ಎಂದು ಕರ್ಕಶವಾಗಿ ಕೂಗುತ್ತಿತ್ತು. ಆದ್ರೆ ಬೆಳಗ್ಗೆ ಆರರ ಮುಂಜಾನೆ ಸುಖನಿದ್ರೆಯಲ್ಲಿದ್ದ ವರುಣ್‌ಗೆ ನಿದ್ರಾಭಂಗ ಮಾಡಿದ್ದು ಇದ್ಯಾವುದೂ ಅಲ್ಲ. ಯಾವತ್ತಿನ ಅಮ್ಮನ ದೊಡ್ಡ ದನಿಯ ಸುಪ್ರಭಾತ.
“”ಯಾವ ಕರ್ಮಕ್ಕೆ ಕಾಲೇಜಿಗೆ ಸೇರಿಸಿದ್ರೋ ಗೊತ್ತಿಲ್ಲ. ಒಂದಿನಾನೂ ಕರೆಕ್ಟ್ ಟೈಮ್‌ಗೆ ಎದ್ದು ಕಾಲೇಜಿಗೆ ಹೋಗಲ್ಲ” ಗೊಣಗುತ್ತಲೇ ಮಾತು ಆರಂಭಿಸುವ ಅಮ್ಮನ ದನಿ ಒಮ್ಮೆಗೇ ಏರಿತು. “”ವರೂ… ವರೂ… ಗಂಟೆ ಆರಾಯ್ತು. ಮತ್ತೆ ಬಸ್ ಸಿಕ್ಕಿಲ್ಲ ಅಂತ ಒ¨ªಾಡ್ಬೇಡ. ಎಷ್ಟು ಸಾರಿ ಕರೀಬೇಕು ನಿನ್ನ. ಕರ್ಧು ಕರ್ಧು ನನ್ನ ಗಂಟಲೇ ನೋವು ಬಂದೋಯ್ತು” ಅಮ್ಮನ ಆ ಕಿರುಚಾಟ ಅದ್ಯಾವ ರೀತಿ ಇರುತ್ತೆ ಅಂದ್ರೆ… ಬಹುಶಃ ಅದನ್ನು ಮಾತಲ್ಲಿ ಹೇಳ್ಳೋದು ಕಷ್ಟ.
ಅರೆಬರೆ ನಿದ್ದೆಯಲ್ಲಿರುವ ನಾನು ಯಾರೋ ದಿಢೀರ್ ಕಪಾಳಕ್ಕೆ ಹೊಡೆದಂತೆ ಬೆಚ್ಚಿಬೀಳುತ್ತೇನೆ. ಅಮ್ಮ “”ವರೂ ವರೂ” ಅಂದಿದ್ದು ಕಿವಿಯ ಕರ್ಣ ತಮಟೆಯೊಳಗೆ ಹೋಗಿ ಹಾಗೆಯೇ ಪ್ರತಿಧ್ವನಿಸುತ್ತಿರುವಂತೆ ಭಾಸವಾಗುತ್ತೆ. ಮತ್ತೆ ಅದೆಷ್ಟು ಬಾರಿ ಹೊದಿಕೆ ಎಳೆದುಕೊಂಡರೂ ನಿದ್ದೆಯಂತೂ ಬಾರದು. “”ಯಾಕೆ ಬೆಳಬೆಳಗ್ಗೆ ಎದ್ದು ಹಾಗೆ ಕಿರುಚಿ ನೀನು. ನನೆಗೆ ಇವತ್ತು ಫಸ್ಟ್ ಅವರ್ ಕ್ಲಾಸ್ ಇಲ್ಲ. ಲೇಟಾಗಿ ಹೋದ್ರೂ ನಡೆಯುತ್ತೆ.” ಅಮ್ಮನಿಗೆ ನಾನು ಹಾಗೆ ಹೇಳಿದರೂ ಅಷ್ಟರಲ್ಲೇ ಅಪ್ಪನ ಗೊಣಗಾಟ ಶುರುವಾಗಿರುತ್ತೆ.
“”ಇವ್ರೆಲ್ಲಾ ನಮ್ಮ ಮುಂದಿನ ಕಾಲಕ್ಕೆ ಈ ತೋಟವನ್ನು ಹಾಗೆಯೇ ಉಳಿಸಿಕೊಂಡು ಹೋದಂಗೆ. ಜೀವನದಲ್ಲಿ ಒಂದು ಶಿಸ್ತಿಲ್ಲ. ರೀತಿ-ನೀತಿಯಿಲ್ಲ. ಬೆಳಗಾಗೋದೆ ಹೊತ್ತು ಮೀರಿದ ಮೇಲೆ” ಅಪ್ಪ ಗೊಣಗಾಟ ಶುರು ಮಾಡಿರುತ್ತಾರೆ. “ನೀವು ಬೆಳ್ಳಂಬೆಳಗ್ಗೆ ಎದ್ದು ಮಾಡೋದೇನು. ಆ ಹಳೆ ರೇಡಿಯೋವನ್ನು ಸುಮ್ಮನೆ ತಿರುಗಿಸಿ ತಿರುಗಿಸಿ ಎಲ್ರಿಗೂ ಡಿಸ್ಟರ್ಬ್ ಮಾಡೋದಲ್ವಾ’ ಅಂತ ಕೇಳ್ಳೋಣವೆನಿಸುತ್ತದೆ. ಆದ್ರೆ ಕಾಲೇಜಿಗೆ ಈಗಾಗ್ಲೆ ಲೇಟಾಗಿದೆ. ಸುಮ್ನೆ ಮಾತಿಗೆ ಮಾತು ಬೆಳೆಸಿದ್ರೆ ಮತ್ತೆ ಲೇಟಾಗೋದು ಖಂಡಿತ.
ವರುಣ್ ಬಚ್ಚಲು ಕೋಣೆಗೆ ಹೋಗಿ ಬ್ರಶ್ ಮಾಡಿ, ಸ್ನಾನ ಮಾಡಿ ಬಂದ ಮೇಲೂ ಅಪ್ಪನ ಗೊಣಗಾಟ ಮುಂದುವರಿದಿತ್ತು. “ಇನ್ನು ಒಂದೆರಡು ವರ್ಷ. ಮತ್ತೆ ತೋಟ ಮಾರೋದೆ. ಈ ಹುಡುಗರ ಕೈಗೆ ತೋಟ ಕೊಟ್ರೆ, ತೋಟ ಹೋಗಿ ಕಾಡಾಗಿ ಬಿಟ್ಟಿರುತ್ತೆ ಅಷ್ಟೆ’. ವರುಣ್ ಹಿಂತಿರುಗಿ ಬರೋ ಹೊತ್ತಿಗೆ ಮಾತು ಅಲ್ಲಿಗೆ ಬಂದು ನಿಂತಿತ್ತು. ಅಮ್ಮ ಇದ್ಯಾವುದೂ ಕೇಳಿಸಿಕೊಳ್ಳದೆ ಅಡುಗೆ ಕೋಣೆಯಲ್ಲೇ ಅದೇನೋ ಕೆಲಸ ಮಾಡ್ತಿದ್ರು. ಡೈನಿಂಗ್ ಟೇಬಲ್‌ನಲ್ಲಿ ಪಾತ್ರೆ ತೆರೆದರೆ ಅವಲಕ್ಕಿ. ಒಮ್ಮೆಲೇ ಪಿತ್ತ ನೆತ್ತಿಗೇರಿತು ವರುಣ್‌ಗೆ.
“ಅಮ್ಮಾ’ ಜೋರಾಗಿ ಕಿರುಚಿದ. ಒಮ್ಮೆ ಇತ್ತ ತಿರುಗಿ ನೋಡಿದರೂ ಏನೂ ಹೇಳಲಿಲ್ಲ. ವರುಣ್‌ಗೆ ನಖಶಿಖಾಂತ ಉರಿಯಿತು. “”ಇವತ್ತೂ ಅವಲಕ್ಕಿ ಮಾಡಿದ್ದೀಯಾ. ನಂಗೆ ಕ್ಲಾಸ್ ಮಧ್ಯೆ ಹಸಿವಾಗುತ್ತೆ. ನಿಂಗೆ ಹೇಳಿದ್ರೆ ಅರ್ಥವಾಗಲ್ವಾ? ನೀರುದೋಸೆ ಮಾಡೋಕೇನು ಕಷ್ಟ” ಅಸಹನೆಯಿಂದ ರೇಗಿದ.
ಅಷ್ಟು ಹೊತ್ತು ಮಾತು ಆಡದಿದ್ದವರು ಧುಮುಧುಮುಎಂದು ಹಾಲ್‌ಗೆ ಬಂದರು. “”ನಂಗೆ ಕಷ್ಟಾನೇ, ನಿಂಗೆ ಬೆಳಗಾಗೋದೆ ಹೊತ್ತು ಕಳೆದ್ಮೇಲೆ. ನಿನ್ನ ಅಪ್ಪಾನೋ ಅಷ್ಟು ಬೆಳಗ್ಗೆ ಎದ್ರೂ ಸುಮ್ನೆ ರೇಡಿಯೋ ತಿರುಗಿಸ್ತಾ ಕೂತಿರ್ತಾರೆ. ಒಂಚೂರು ಅಡುಗೆಕೋಣೆಗೆ ಬಂದು ಹೆಲ್ಪ್ ಮಾಡ್ತೀರಾ! ನೀರುದೋಸೆ ಚುಂಯ್ ಚುಂಯ್ ಅಂತ 8 ಗಂಟೆ ವರೆಗೆ ಎರೀತಾ ಕೂರ್ಬೇಕು. ನಂಗೂ ವಯಸ್ಸಾಯ್ತು ಕಾಣಿಸ್ತಿದ್ಯಾ” ಅಮ್ಮ ಕಿರುಚುತ್ತಲೇ ಮಧ್ಯೆ ಮಧ್ಯೆ ಮೂಗೊರೆಸಿಕೊಂಡರು.
ಎಮೋಶನಲ್ ಡ್ರಾಮಾ ಶುರುವಾಯ್ತು ಅಂದ್ರೆ ನೋ ಫುಲ್ ಸ್ಟಾಪ್. ಸುಮ್ಮನೇ ಅವಲಕ್ಕಿ ತಿಂದು ಎದ್ದುಬಿಡುವುದು ಒಳಿತು ಎಂದುಕೊಂಡ ವರುಣ್. ಅಮ್ಮ ಬೈದದ್ದು ಬೇಸರವಾಗಲ್ಲಿಲ್ಲ.ಅಪ್ಪನಿಗೆ ಬೈದಿದ್ದು ತುಂಬ ಖುಷಿಯಾಯಿತು. “”ಬೇಕಿದ್ರೆ ತಿನ್ನು, ಇಲ್ಲಾಂದ್ರೆ ಕಾಲೇಜ್ ಕ್ಯಾಂಟೀನ್‌ನಲ್ಲೇ ಮುಕ್ಕು’ ’ಅಮ್ಮ ಅಷ್ಟು ಹೇಳಿ ಅಡುಗೆ ಕೋಣೆ ಸೇರಿದರು. ವರುಣ್ ಅವಲಕ್ಕಿಯನ್ನು ಪ್ಲೇಟಿಗೆ ಹಾಕಿಕೊಂಡು ತಿಂದ ಅನಿವಾರ್ಯವಾಗಿ. ಅಮ್ಮನ ವರ್ತನೆ ವರುಣ್‌ಗೆ ಒಂದೊಂದು ಸಾರಿ ವಿಚಿತ್ರವೆನಿಸುತ್ತದೆ. ಅಮ್ಮ ತ್ಯಾಗಮಯಿ, ಕರುಣಾಮಯಿ, ಮಮತೆಯ ಕಡಲು ಅಂತಾರೆ. ನನ್ನಮ್ಮ ಮಾತ್ರ ಯಾಕೆ ಹೀಗೆ ಯೋಚಿಸುತ್ತಲೇ ಅವಲಕ್ಕಿ ತಿಂದು ಮುಗಿಸಿದ ವರುಣ್. ತಪ್ಪಲೆಯಲ್ಲಿದ್ದ ಬಿಸಿ ಬಿಸಿ ಚಹಾ ನಿಧಾನವಾಗಿ ಕುಡಿಯುವ ಹೊತ್ತಿಗೆ ಸಮಯ 8 ಗಂಟೆಗೆ 5 ನಿಮಿಷವಷ್ಟೇ ಬಾಕಿಯಿತ್ತು.
ಒಹ್! ಏಳು ಮುಕ್ಕಾಲರ ಕರ್ನಾಟಕ ಸಾರಿಗೆ ಅಂತೂ ಹೋಯ್ತು. ಇನ್ನೇನಿದ್ರೂ ಎಂಟೂ ಕಾಲರ ಮಲಬಾರ್ ಬಸ್ಸೇ ಗತಿ. ಕರ್ನಾಟಕ ಸಾರಿಗೆ ಬಸ್ ಆದ್ರೆ ಪಾಸ್‌ನಲ್ಲಿ ಹೋಗಬಹುದು. ಆದ್ರೆ ಮಲಬಾರ್ ಬಸ್‌ನಲ್ಲಿ ಪಾಸ್ ಇರಲ್ಲ. ಅಪ್ಪನ ಮುಂದೆ ನಿಂತು ಬಸ್‌ಗೆ ದುಡ್ಡು ಕೊಡಿ ಅಂತ ಕೇಳಬೇಕು. ಅದಕ್ಕಿಂತ ಹಿಂಸೆ ಅಪ್ಪ ದುಡ್ಡು ಕೊಡೋವರೆಗೂ ಗೊಣಗೋದನ್ನೆಲ್ಲಾ ಕೇಳಿಸಿಕೊಳ್ಳಬೇಕು. ಇನ್ನೂ ಲೇಟು ಮಾಡಿದರೆ ಮಲಬಾರ್ ಬಸ್ಸು ಸಹ ಸಿಗುವುದು ಕಷ್ಟ. ಆ ಬಸ್ ಡ್ರೈವರ್ ಅಂತೂ ಅರ್ಧ ದಾರಿಯಲ್ಲಿ ಬಸ್ ನಿಲ್ಲಿಸುವುದಿಲ್ಲ. ಎಲ್ಲಾದರೂ ಬಸ್‌ಸ್ಟ್ಯಾಂಡ್ ಹತ್ತಿರ ತಲುಪಿದ್ದರೆ ಮಾತ್ರ “ವೇಗ ವರಾನ್ ಎಂದಾ’ (ಬೇಗ ಬರಲು ಏನು) ಎಂದು ದೊಡ್ಡ ಕಣ್ಣು ಮಾಡಿಕೊಂಡು ಗೊಣಗುತ್ತ ಬಸ್ ನಿಲ್ಲಿಸುತ್ತಾನೆ. ಅವನೋ ಅವನ ಬೈಗುಳದ ಉರಿಮುಖ ನೋಡಿದ್ರೆ ಆ ದಿನವೆಲ್ಲಾ ಮೂಡ್ ಆಫ್ ಗ್ಯಾರಂಟಿ.
ಯೋಚಿಸುತ್ತಲೇ ಬೇಗ ಬೇಗನೇ ರೆಡಿಯಾದ ವರುಣ್. ಅವನು ರೆಡಿಯಾಗಿ ಬರುವ ಹೊತ್ತಿಗೆ ಅಪ್ಪ ರೇಡಿಯೋ ಆಫ್ ಮಾಡಿ ಒಳಗೆ ಬರುತ್ತಿದ್ದರು. ಅಪ್ಪ ಬಸ್‌ಗೆ ಎಂದಿದ್ದು ಅಷ್ಟೆ, “”ಇವತ್ತು ಮಿಸ್ ಆಯ್ತಲ್ಲಾ ಬಸ್. ದಂಡಕ್ಕೆ ಬಸ್‌ಪಾಸ್ ಇಟ್ಟುಕೊಂಡಿದ್ದೀಯಾ. ವಾರದಲ್ಲಿ ನಾಲ್ಕು ದಿನನಾದ್ರೂ ನೆಟ್ಟಗೆ ಪಾಸ್‌ನಲ್ಲಿ ಹೋಗಲ್ಲ” ಬೈಯೋಕೆ ಶುರು ಮಾಡಿದರು.
“ಅದಕ್ಕೇ ಹೇಳಿದ್ದು ಸ್ಕೂಟಿ ತೆಗೆದುಕೊಡಿ ಅಂತ’ ನಡುವೆ ಮಾತನಾಡಿದ ವರುಣ್. “”ನಿಮಗೆಲ್ಲಾ ಕಾಲೇಜಿಗೆ ಹೋಗೋಕೆ ಸ್ಕೂಟಿ, ಬೈಕ್. ನಮ್ಮ ಕಾಲದಲ್ಲಿ ಕಿಲೋಮೀಟರ್‌ಗಟ್ಟಲೆ ನಡ್ಕೊಂಡೇ ಹೋಗ್ತಿದ್ವಿ ಗೊತ್ತಾ” ಅಪ್ಪ ಯಾವತ್ತಿನಂತೆ ತಮ್ಮ ಕಾಲದ ಕಥೆ ಶುರುವಿಟ್ಟುಕೊಂಡರು. ಆ ಮಧ್ಯೆ ಬಸ್‌ಗೆ ನೂರು ರೂಪಾಯಿ ತೆಗೆದು ಕೈಗಿಟ್ಟರು.
“”ಸ್ಕೂಟಿ ತೆಗೆದ್ರೆ ಎಲ್ರಿಗೂ ಉಪಕಾರವಾಗ್ತಿತ್ತು” ಅಮ್ಮನೂ ಹೊರಬಂದು ಹೇಳಿದರು. ಅಮ್ಮ ಬಸ್‌ಸ್ಟಾಪ್‌ವರೆಗೂ ನಡ್ಕೊಂಡು ಹೋಗಿ ಬಂದು ಪ್ರತಿ ಸಾರಿಯೂ ಕಾಲು ನೋವು ಎಂದು ಕುಳಿತುಬಿಡುತ್ತಿದ್ದುದ್ದು ನೆನಪಾಯ್ತು. “”ಹೌದು ಸ್ಕೂಟಿ ಒಂದು ಬಾಕಿಯಿತ್ತು. ನಿನಗೆ ಗೊತ್ತಾ ಮೊನ್ನೆ ಟೌನ್‌ನಲ್ಲಿ ಬೈಕ್-ಟಿಪ್ಪರ್ ಆ್ಯಕ್ಸಿಡೆಂಟ್ ಆಗಿದ್ದು. ಆ ಹುಡುಗನ ಕಾಲು ಪ್ರಾಕ್ಚರ್ ಆಗಿ ಇನ್ನೂ ಹಾಸ್ಪಿಟಲ್‌ನಿಂದ ಡಿಸ್‌ಚಾರ್ಜ್ ಕೂಡಾ ಆಗಿಲ್ವಂತೆ” ಅಪ್ಪ , ಅಮ್ಮನಿಗೆ ವಿವರಿಸುತ್ತಿದ್ದರು. ಅಪ್ಪ ಹೀಗೇನೆ ಗಾಡಿ ತಗೊಳ್ಳೋಣ ಅಂದ್ರೆ ಸಾಕು, ಊರಲ್ಲಿ ನಡೆದಿರೋ ಆ್ಯಕ್ಸಿಡೆಂಟ್ ಹಿಸ್ಟರಿ ಎಲ್ಲ ತೆಗೆದುಬಿಡ್ತಾರೆ. ತಲೆ ಚಚ್ಚಿಕೊಳ್ಳುತ್ತ ಚಪ್ಪಲಿ ಮೆಟ್ಟಿ ಬ್ಯಾಗ್ ಹೆಗಲಿಗೇರಿಸಿದ ವರುಣ್.
ವರುಣ್ ಬಸ್‌ಸ್ಟಾಪ್ ತಲುಪಿದ್ದ ಕಾರಣ ಡ್ರೈವರ್ ಉರಿಮುಖ ನೋಡುವ ಪರಿಸ್ಥಿತಿ ಬರಲ್ಲಿಲ್ಲ. ಇಷ್ಟಕ್ಕೂ ಡ್ರೈವರ್ ಅಸಹನೆ ವರುಣ್‌ಗೆ ಹೊಸತೇನು ಅಲ್ಲ. ಮನೆಯಲ್ಲಿ ಅಪ್ಪ-ಅಮ್ಮನ ಜತೆ ದಿನನಿತ್ಯ ನಡೆಯುವ ಜಗಳದಂತೆ. ಒಂದು ದಿನ ಅಪ್ಪನ ಸಿಡುಕು ಮೂತಿ, ಅಮ್ಮನ ಗೊಣಗಾಟವಿಲ್ಲದೆ ಮನೆಯಲ್ಲಿ ಬೆಳಗಾಗುವುದಿಲ್ಲ. ಇನ್ನು ವರುಣ್ ದಿನ ಆರಂಭವಾಗುವುದು, ಕೊನೆಯಾಗುವುದು ಅವರಿಬ್ಬರ ಜತೆಗಿನ ಜಗಳದಲ್ಲೇ. ವರುಣ್‌ಗೆ ಇದೆಲ್ಲಾ ಒಂದೊಂದು ಸಾರಿ ತುಂಬ ಹಿಂಸೆಯೆನಿಸುತ್ತದೆ. ಎಲ್ಲಾ ಬಿಟ್ಟು ಹಾಸ್ಟೆಲ್ ಸೇರಿಬಿಡುವ ಎನ್ನುವಷ್ಟು.
ಪ್ರತೀ ದಿನ ಈ ಬೈಗುಳ, ಕಿರುಚಾಟ, ಅರಚಾಟ ಯಾರಿಗೆ ಬೇಕು. ಡೈಲಿ ಮೂಡ್ ಆಫ್ ತಪ್ಪಲ್ಲ. ಎಲ್ಲ ಇವ್ರ ಮೂಗಿನ ನೇರಕ್ಕೆ ಆಗ್ಬೇಕು ಅಂದ್ಕೊಂಡ್ರೆ ಹೇಗೆ ಎಂದುಕೊಂಡ ವರುಣ್. ಏನಾದರಾಗಲಿ, ಇವತ್ತು ಕ್ಲಾಸ್‌ಮೇಟ್ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳುವ ಅಜಯ್ ಜತೆ ಹಾಸ್ಟೆಲ್ ಫೀಸು, ಫೆಸಿಲಿಟಿ ಬಗ್ಗೆ ಕೇಳ್ಬೇಕು ಎಂದುಕೊಂಡ. ಆಮೇಲೆ ಮನಸ್ಸು ನಿರಾಳವಾಯ್ತು.
ಮಧ್ಯಾಹ್ನದವರೆಗಿನ ಕ್ಲಾಸ್ ಮುಗಿದ ಕೂಡಲೇ ಹಾಸ್ಟೆಲ್ ಕಡೆ ಹೆಜ್ಜೆ ಹಾಕಿದ ವರುಣ್. ಆದ್ರೆ ಅಷ್ಟರಲ್ಲಿ ಅಜಯ್ ಲೈಬ್ರರಿ ಕಡೆ ಹೆಜ್ಜೆ ಹಾಕುವುದು ಕಾಣಿಸಿತು. “”ಅಜಯ್, ಸ್ಪಲ್ಪ ಮಾತಾಡ್ಬೇಕಿತ್ತು ಫ್ರೀ ಇದ್ದೀಯಾ” ಎಂದ ವರುಣ್.
“ಹಾಂ’ ಎಂದ ಅಜಯ್ ಜತೆ ಕ್ಯಾಂಟೀನ್‌ನತ್ತ ಹೆಜ್ಜೆ ಹಾಕಿದ. “”ಏನಾದ್ರು ತಿಂತೀಯಾ?’ ’ ಕೇಳಿದ ವರು ಣ್. “ಇಲ್ಲ’ ಎಂದು ಸುಮ್ಮನೆ ತಲೆಯಾಡಿಸಿದ ಅಜಯ್. ಅವನು ಯಾವಾಗಲೂ ಹಾಗೆಯೇ ನೀರಸವಾಗಿರುತ್ತಾನೆ. ಯಾವುದರಲ್ಲೂ ಹೆಚ್ಚು ಆಸಕ್ತಿಯಿಲ್ಲ. ಹಾಸ್ಟೆಲ್, ಕಾಲೇಜು, ಲೈಬ್ರರಿ ಅಷ್ಟೆ. ಯಾರ ಜತೆಗೂ ಹೆಚ್ಚು ಮಾತನಾಡುವುದಿಲ್ಲ.
ತಾನೇ ಮಾತು ಆರಂಭಿಸಿದ ವರುಣ್. “”ಅಜಯ್, ನನೆಗೆ ಹಾಸ್ಟೆಲ್ ಫೀಸು, ಫೆಸಿಲಿಟಿ ಬಗ್ಗೆ ಸ್ಪಲ್ಪ ತಿಳ್ಕೊಬೇಕಿತ್ತು. ನಾನು ಮನೆಬಿಟ್ಟು ಹಾಸ್ಟೆಲ್ ಗೆ ಶಿಫ್ಟ್ ಆಗ್ಬೇಕೂಂತಿದ್ದೀನಿ” ಎಂದ ಅವನ ಮುಖ ನೋಡುತ್ತ. ತತ್‌ಕ್ಷಣ ಕಣ್ಣರಳಿಸಿದ ಅಜಯ್.
“”ಯಾಕೆ ಏನಾಯ್ತು. ಮನೆಯಲ್ಲಿ ಏನಾದ್ರೂ ಸಮಸ್ಯೆನಾ? ಇಲ್ಲ, ಮನೆಯಿಂದ ಕಾಲೇಜಿಗೆ ಹೋಗಿ ಬರೋಕೆ ದೂರ ಆಗ್ತಿದೆಯಾ?’ ’ ಅಜಯ್ ಸಾಲು ಸಾಲು ಪ್ರಶ್ನೆಗೆ ಕಣ್ಣರಳಿಸಿದ ವರುಣ್. “”ಹಾಗೇನಿಲ್ಲ, ಮನೆಯಲ್ಲಿ ಯಾವಾಗ್ಲೂ ಬೇಜಾರು, ಅಪ್ಪ-ಅಮ್ಮನ ಕಿರಿಕಿರಿ ತಪ್ಪಲ್ಲ. ನನೂ ಸಾಕಾಗಿಬಿಟ್ಟಿದೆ” ಬೇಸರದಿಂದ ನುಡಿದ ವರುಣ್. ಅಜಯ್ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದ.
“”ವರುಣ್, ನಿಮ್ಮ ಮನೆಯಲ್ಲಿ ಅಪ್ಪ-ಅಮ್ಮ ಇಲ್ಲದೆ ಇದ್ರೆ ಹೇಗಿರುತ್ತೆ ನಿನಗೆ” ದಿಢೀರ್ ಆಗಿ ಕೇಳಿದ ಅಜಯ್. ಒಮ್ಮೆಗೇ ಪೆಚ್ಚಾದ ವರುಣ್. “”ಅಪ್ಪ-ಅಮ್ಮ ಇಲ್ಲ ಅಂದ್ರೆ ಹೇಗೆ, ಅವ್ರು ಬೇಕಲ್ವಾ , ಅವರಿಲ್ಲದೆ ಜೀವನ ಹೇಗೆ ಸಾಧ್ಯ. ಒಂಚೂರು ಮಿಸ್ ಅಂಡರ್‌ಸ್ಟಾಂಡಿಂಗ್ ಇರೊದು ಅಷ್ಟೆ. ಹಾಗಂತ ಅವ್ರನ್ನು ಬೇಡ ಅನ್ನೋಕಾಗಲ್ಲ” ಸಿಟ್ಟಿನಿಂದ ನುಡಿದ ವರುಣ್. “”ಹೌದಲ್ವಾ, ಮತ್ಯಾಕೆ ಅವರ ಮೇಲೆ ಕೋಪ, ದ್ವೇಷ. ಅವರು ನಿನ್ನ ಶತ್ರುಗಳಲ್ಲ” ಶಾಂತವಾಗಿ ನುಡಿದ ಅಜಯ್.
ವರುಣ್ ಗೊಂದಲದಿಂದ ಅಜಯ್ ಮುಖವನ್ನೆ ನೋಡಿದ. ಮಾತು ಆರಂಭಿಸಿದ ಅಜಯ್, “”ನಿನೊತ್ತಾ ವರುಣ್.., ಎಲ್ಲರಿಗೂ ಅಪ್ಪ-ಅಮ್ಮ ಇರಲ್ಲ. ಅದಕ್ಕೂ ಅದೃಷ್ಟ ಬೇಕು. ಅಪ್ಪ-ಅಮ್ಮ ನಮ್ಮ ಮೇಲೆ ಅದೆಷ್ಟು ಸಿಟ್ಟು ತೋರಿದರೂ ನಮ್ಮ ಹಿತವನ್ನೇ ಬಯಸುತ್ತಾರೆ. ಜೀವನ ಪೂರ್ತಿ ನಮ್ಮ ಸಂತೋಷಕ್ಕಾಗಿಯೇ ಮುಡಿಪಾಗಿಡುತ್ತಾರೆ. ನಾವು ಗೆದ್ದಾಗ ಖುಷಿ ಪಡುತ್ತಾರೆ, ಸೋತಾಗ ನೊಂದುಕೊಳ್ಳುತ್ತಾರೆ. ನಮ್ಮ ನಗುವಿನಲ್ಲೂ ಅವರ ನಗುವಿದೆ. ಅವರಿಂದ ದೂರವಿದ್ದು ನಾವೇನಾದರೂ ಗಳಿಸುವುದಿದ್ದರೆ ಅವನತಿ ಮಾತ್ರ” ನಿಧಾನವಾಗಿ ನುಡಿದ.
ಅಜಯ್ ಮುಂದುವರಿಸಿದ, “”ನಿನಗೆ ಕಾಲೇಜು ಬಿಟ್ಟಾಗ ಹೋಗಲು ಮನೆಯಿದೆ, ಮನೆಯಲ್ಲಿ ನಿನ್ನ ದಾರಿ ಕಾಯುವ ಅಪ್ಪ-ಅಮ್ಮ ಇದ್ದಾರೆ. ಆದರೆ, ನಾನು ನೋಡು ನನಗೆ ಬುದ್ಧಿ ಬಂದಾಗಿನಿಂದಲೂ ಹಾಸ್ಟೆಲ್‌ನಲ್ಲೇ ಇದ್ದೇನೆ. ನನಗಾಗಿ ಕಾಯುವವರು ಯಾರೂ ಇಲ್ಲ. ಪ್ರೀತಿ ತೋರಿಸುವವರೂ ಇಲ್ಲ, ಜಗಳ ಮಾಡುವವರೂ ಇಲ್ಲ ” ಮುಖ ಮುಚ್ಚಿಕೊಂಡು ಅಳಲಾರಂಭಿಸಿದ ಅಜಯ್.
ಮಾತು ಬಾರದೆ ಮೌನವಾದ ವರುಣ್, ಅಜಯ್ ಹೆಗಲ ಮೇಲೆ ಕೈಯಿಟ್ಟು ಸಾಂತ್ವನಿಸಿದ. ಆವತ್ತು ಯಾವತ್ತಿಗಿಂತ ಮನೆಗೆ ಬೇಗ ತಲುಪಿದ. ಗೆಳೆಯರ ಜತೆ ಜಾಲಿಯಾಗಿ ತಿರುಗಾಡಲು ಹೋಗುವುದು ಬೇಕೆನಿಸಲಿಲ್ಲ. ಅವರ ಜತೆ ಹೋಗುವುದಕ್ಕೆ ನಿರಾಕರಿಸಿ ಕರ್ನಾಟಕ ಸಾರಿಗೆ ಬಸ್ ಹತ್ತಿ ಪಾಸ್‌ನಲ್ಲೇ ಮನೆಗೆ ಬಂದ. ಅಂಗಳದ ಬದಿಯಲ್ಲಿ ಮಳೆ ನೀರು ಹೋಗಲು ದಾರಿ ಮಾಡಿ ಕೊಡುತ್ತಿದ್ದ ಅಪ್ಪ, ಇತ್ತ ನೋಡಿ, “”ಓಹ್! ಏನು ಬಾರಿ ಅಪರೂಪಕ್ಕೆ ಬೇಗ ಬಂದಿದ್ದಾರೆ ಸಾಹೇಬ್ರು” ವ್ಯಂಗ್ಯವಾಡಿದರು. ಸುಮ್ಮನೆ ಅಪ್ಪನ ಮುಖ ನೋಡಿ ನಕ್ಕ ವರುಣ್. “”ನೋಡೇ, ನಿನ್ನ ಮಗನಿಗೆ ಏನೋ ಆಗಿದೆ. ಕಾಲೇಜಿಂದ ಬೇಗ ಬಂದಿದ್ದೂ ಅಲ್ದೆ , ನನ್ನನ್ನು ನೋಡಿ ಪೆಕರನ ಹಾಗೆ ಹಲ್ಲು ಬಿಡ್ತಿದ್ದಾನೆ” ಎಂದರು ಅಪ್ಪ. ನಾನು ಒತ್ತರಿಸಿ ಬರುತ್ತಿದ್ದ ನಗುವನ್ನು ತಡೆದುಕೊಂಡು ಒಳಹೋದೆ. ಅಪ್ಪನ ಬೈಗುಳವೂ ಹಿತವಾಗಿ ಕೇಳಿಸತೊಡಗಿತು.
ವಿನುತಾ ಪೆರ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.