Cycle Ride: ಸಾಗುತ ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್ ಸವಾರಿ
Team Udayavani, Oct 6, 2024, 6:39 PM IST
ಬೆಂಗಳೂರಿನಿಂದ ಗೋವಾದವರೆಗಿನ 600 ಕಿ.ಮೀ ದೂರವನ್ನು 40 ಗಂಟೆಗಳ ಅವಧಿಯಲ್ಲಿ ಸೈಕಲ್‌ನಲ್ಲಿ ಕ್ರಮಿಸುವ ಸಾಹಸವನ್ನು ಹಲವರು ಮಾಡಿದ್ದಾರೆ, ಮಾಡುತ್ತಿದ್ದಾರೆ. ವಿಶೇಷವೇನೆಂದರೆ, 40 ಗಂಟೆಗಳ ಅವಧಿಯಲ್ಲೇ ಸೈಕಲ್ ಸವಾರ ಊಟ, ನಿದ್ರೆ, ನಿತ್ಯಕರ್ಮವನ್ನೆಲ್ಲ ಮುಗಿಸಿಕೊಳ್ಳಬೇಕಿರುತ್ತದೆ! ಮತ್ತೂಂದು ವಿಶೇಷವೆಂದರೆ ಇಲ್ಲಿ ಪ್ರತಿಸ್ಪರ್ಧಿ ಇರುವುದಿಲ್ಲ! ಇಂಥ ಸಾಹಸ ಮಾಡಿದ ರಾಜೀವ್ ಭಿಡೆ ತಮ್ಮ ಅನುಭವವನ್ನಿಲ್ಲಿ ಹೇಳಿಕೊಂಡಿದ್ದಾರೆ.
ಆಡಕ್ಸ್ ಇಂಡಿಯಾ ರ್‍ಯಾಂಡೋನಿಯರ್ ಸಂಸ್ಥೆಯಿಂದ ಪ್ರತಿ ವರ್ಷ ಸೂಪರ್ ರ್‍ಯಾಂಡೋನಿಯರ್ ನಡೆಯುತ್ತದೆ. ಇದರಲ್ಲಿ 200, 300, 400, 600 ಕಿ.ಮೀ. ದೂರವನ್ನು ಕ್ರಮವಾಗಿ 13.5, 20, 27, 40 ಗಂಟೆಗಳಲ್ಲಿ ಬೇರೆ ಬೇರೆ ಇವೆಂಟ್‌ಗಳನ್ನು ಒಂದು ವರ್ಷದಲ್ಲಿ ಮುಗಿಸಬೇಕು. ನಾನು 2021ರಲ್ಲಿ ಸೂಪರ್ ರ್‍ಯಾಂಡೋನಿಯರ್ ಆಗಿದ್ದೆ. ಈ ವರ್ಷ ಮತ್ತೆ ಮಾಡಬೇಕೆಂದು 200 ಕಿ.ಮೀ. ನಂತರ 600 ಕಿ.ಮೀ. ಕ್ರಮಿಸಲು ಬೆಂಗಳೂರು-ಗೋವಾ ಈವೆಂಟ… ಆಯ್ಕೆ ಮಾಡಿಕೊಂಡೆ. ಇದು ನನ್ನ ನಾಲ್ಕನೇ 600 ಕಿ.ಮೀ. ಯಾತ್ರೆ.
ಇದಕ್ಕೊಂದು ಬಲವಾದ ಕಾರಣವಿದೆ. ನಾನು ಮೊದಲು ಅನೇಕ ವರ್ಷ ಗೋವಾದಲ್ಲಿ ಕೆಲಸ ಮಾಡಿದ್ದೆ ಎನ್ನುವ ಸೆಂಟಿಮೆಂಟ್ ಒಂದು ಕಡೆಯಾದರೆ, ಮಲೆನಾಡಿನವನಾದ ನಾನು ಮೊದಲು ಸಮುದ್ರವನ್ನು ನೋಡಿದ್ದು ಮುರುಡೇಶ್ವರದಲ್ಲಿ, ಅದೂ ಅಜ್ಜನ ಜೊತೆ. ಅಜ್ಜ ಸ್ವಭಾವತಃ ಸಾಹಸಿ. ನಾನೀಗ ಯಾವುದೇ ಸಾಹಸದ ಕೆಲಸದಲ್ಲಿ ತೊಡಗಿಕೊಂಡರೂ ಅದಕ್ಕೆ ಮೂಲ ಪ್ರೇರಣೆ ಅವರೇ. ಹಾಗಾಗಿ ಕಳೆದ ಮೂರು ಬಾರಿ ಮಿಸ್ ಆಗಿದ್ದ ಗೋವಾ ರೈಡ್ ಮಾಡಲು ಸಿದ್ಧನಾದೆ.
ಸೈಕಲ್ ತುಳಿಯುತ್ತ ಜ್ವರ ಬಂದಿತ್ತು…
ಸತತವಾಗಿ ಅಭ್ಯಾಸವಿದ್ದರೆ, ನೂರರಿಂದ ಇನ್ನೂರು ಕಿ.ಮೀ. ಸೈಕಲ್ ಓಡಿಸುವುದು ದೈಹಿಕವಾಗಿ ಸುಲಭ. ಅದಕ್ಕೂ ಮೀರಿದ ದೂರ ಕ್ರಮಿಸುವುದು ಮೆಂಟಲ್ ಗೇಮ್! ರಿಜಿಸ್ಟರ್ ಮಾಡಿಸಿದ ದಿನದಿಂದಲೇ ನೀವು ನಿಮ್ಮ ಮಿದುಳಿಗೆ ಸಂದೇಶ ಕಳಿಸುತ್ತಿರಬೇಕು. ನಾನು ಹೀಗೆ ಸೈಕಲ್ ಹೊಡೆಯುತ್ತೇನೆ, ಇಷ್ಟೇ ಸಮಯದಲ್ಲಿ ಮುಗಿಸುತ್ತೇನೆ, ಆ ನಂತರದ ಬದುಕು ಹೀಗಿರುತ್ತದೆ ಎಂಬ ಮಾನಸಿಕ ಸಿದ್ಧತೆಯ ಜೊತೆಗೆ ಪ್ರಯಾಣಕ್ಕೆ ಅಗತ್ಯವಾದ ಜೆಲ್, ತಿಂಡಿಗಳು, ದಾರಿಯುದ್ದಕ್ಕೂ ಟಾರ್ಚ್, ಪಂಚರ್ ಆದರೆ ಬೇರೆ ಟ್ಯೂಬ್, ಲೈಟಿಂಗ್ ಸ್ಟ್ರಾéಪ್, ರೇನ್‌ಕೋಟ್ ಮುಂತಾದವು ಜೊತೆಗಿರಬೇಕು. ದಾರಿಯಲ್ಲಿ ಹಿಂದೆ-ಮುಂದೆ ಯಾರೇ ಇದ್ದರೂ ಇದು ಸೆಲ್ಫ್… ಸಪೋರ್ಟ್ ರೈಡ್. ನಿಮ್ಮನ್ನು ಮಾತ್ರವೇ ನಂಬಿ ನೀವು ಮುಂದೆ ಸಾಗಬೇಕು. ಯಾರ ಸಹಾಯವನ್ನೂ ನಿರೀಕ್ಷಿಸುವಂತಿಲ್ಲ. ಕೇವಲ 40 ಗಂಟೆಗಳಲ್ಲಿ 600 ಕಿ. ಮೀ. ದೂರವನ್ನು ಕ್ರಮಿಸಬೇಕಾದರೆ ನಿದ್ದೆ, ಊಟ, ನಿತ್ಯಕರ್ಮ…ಈ ಎಲ್ಲಕ್ಕೂ ಅದರಲ್ಲೇ ಸಮಯ ಹೊಂದಿಸಿಕೊಳ್ಳಬೇಕು. ನಂಬಿ, ಈ ರೈಡ್‌ನಲ್ಲಿ ನಾನು ಮಲಗಿದ್ದು ಕೇವಲ 2 ಗಂಟೆಗಳು.
ನನ್ನ ಸೈಕಲ್ ಯಾತ್ರೆ ಶುರುವಾದಾಗಲೇ ಹೆಡ್ ವಿಂಡ್ ಇದ್ದಿದ್ದರಿಂದ ಮುಂದಿನ ದಾರಿ ಸುಲಭವಾಗಿರುವುದಿಲ್ಲ ಎಂದು ಮಾನಸಿಕವಾಗಿ ಸಿದ್ಧನಾಗತೊಡಗಿದ್ದೆ. ದಾರಿ ಮಧ್ಯೆ ಮಳೆ ಬಂದಾಗಲೂ ಮುಂದುವರೆದೆ. ಹಿಂದಿನ ದಿನವೇ ಇದ್ದ ಶೀತ ನಿಧಾನಕ್ಕೆ ಮೈಬಿಸಿಗೆ ತಿರುಗಿದಾಗ ಗತ್ಯಂತರವಿಲ್ಲದೆ, ಮಾತ್ರೆ ತೆಗೆದುಕೊಂಡು ಅರ್ಧ ಗಂಟೆ ನಿದ್ರಿಸಿ ಮತ್ತೆ ಶುರು ಮಾಡಿದೆ. ಜ್ವರ ಬಂದಾಗ ಹೀಗೆ ಮಾಡಿ ಎನ್ನುವ ಗೆಳತಿ ಗ್ರಿನಿ ಸಲಹೆ ಉಪಯೋಗಕ್ಕೆ ಬಂದಿತ್ತು. ಕರ್ನಾಟಕದ ರಸ್ತೆಗಳಲ್ಲಿ ಸೈಕ್ಲಿಂಗ್ ಸ್ವಲ್ಪ ಕಷ್ಟವೇ. ಕೆಲವರು ಮಾತ್ರವೇ ಸೈಕ್ಲಿಂಗ್ ಮಾಡುವವರಿಗೆ ದಾರಿ ಮಾಡಿಕೊಡುತ್ತಾರೆ, ಆದರೆ ಗೋವಾದಲ್ಲಿ ಒಂದು ಹಾರ್ನ್ ಕೂಡ ಮಾಡದೇ ಪಕ್ಕದಲ್ಲಿ ನಿಧಾನ ಸಾಗುತ್ತಾರೆ.
ನೋವು ಕ್ಷಣಿಕ, ಖುಷಿ ಶಾಶ್ವತ:
ದಾರಿಯುದ್ದಕ್ಕೂ ವಿಶೇಷವಾಗಿ ನೋಡುವವರಲ್ಲಿ ಕೆಲವರು ನಿಲ್ಲಿಸಿ “ಎಲ್ಲಿಗೆ?’ ಎಂದು ವಿಚಾರಿಸುತ್ತಾರೆ. “ಅಷ್ಟು ದೂರಾನಾ? ಇದು ಗೇರ್ ಸೈಕಲ…, ತುಳಿದ್ರೆ ಮುಂದೆ ಹೋಗತ್ತೆ ಬಿಡಿ’ ಅನ್ನುವವರು ಕೆಲವರಾದರೆ, ಕೈಮಾಡಿ ನಿಲ್ಲಿಸಿ, ಟಯರ್ ಒತ್ತಿ ನೋಡುವವರು ಕೆಲವರು. ಅದ್ಯಾಕೆ ಹೋಗ್ತಿàರಿ ಅನ್ನುವ ಪ್ರಶ್ನೆಗಳಿಗೂ ಉತ್ತರಿಸಬೇಕು. ಇದೆಲ್ಲವನ್ನು ಅನುಭವಿಸುತ್ತಲೇ ಸಾಗುವಾಗ ಆ ಉರಿ ತಾಪಮಾನಕ್ಕೆ, ಸಾಕು ನಿಲ್ಲಿಸು ಅಂತ ಕೂಗಿ ಹೇಳುವ ಮನಸ್ಸಿಗೆ ಬುದ್ಧಿ ಹೇಳಲು ಹಾಡು ಕೇಳುತ್ತಲೋ, ಮಾತಾಡುತ್ತಲೋ ಮುಂದೆ ಸಾಗಬೇಕು. ನಾನು ಹಾಗೆಯೇ ಸಾಗುತ್ತಿದ್ದೆ. ಈ ಮಧ್ಯೆ ಸಹಜವಾಗಿ ಗಾಬರಿಯಾಗುತ್ತಿದ್ದ ಮನೆಯವರಿಗೂ ವರದಿ ವಾಚನವಾಗುತ್ತಿತ್ತು.
ಈ ಸೈಕಲ್‌ಗಳ ಸೀಟು ಸಣ್ಣವಿದ್ದು ಆರಾಮಾಗಿ ಕೂರಲು ಸುಲಭವಲ್ಲ. ಈ ಕಾರಣದಿಂದಲೇ 500 ಕಿ.ಮೀ. ದಾಟುವಾಗಲೇ ಸ್ಯಾಡೆಲ್ ಸೊರ್ನೆಸ್ ಶುರುವಾಗಿತ್ತು. ಕಾಲುಗಳ ಸಂಧಿಯಲ್ಲಿ ಬೆವರಿಗೆ ಮತ್ತು ನಿರಂತರ ಚಲನೆಯಿಂದ ದಪ್ಪವಾಗುವುದರಿಂದ ಸೀಟ್ ಮೇಲೆ ಕೂರಲೂ ಆಗುತ್ತಿರಲಿಲ್ಲ. “ಇಂಥ ಸಮಯದಲ್ಲಿ ಎದ್ದು ನಿಂತು ಜೋರಾಗಿ ಪೆಡಲ್ ಮಾಡಿ, ಹಾಗೆಯೇ ನಿಂತು ಕ್ರಮಿಸುವ ಪ್ರಯತ್ನ ಮಾಡಬೇಕು’ ಎಂದು ಗೆಳೆಯ ವಿಶಾಲ್ ನೀಡಿದ್ದ ಸಲಹೆ ಪಾಲಿಸಿದೆ. ದೂರ 600 ಕಿ.ಮೀ. ಆದರೂ ಹೆಡ್ ವಿಂಡ್ ಮತ್ತು ಒಟ್ಟಾರೆ ಅದನ್ನು ಮುಗಿಸಲು ಬೇಡಿದ ಶಕ್ತಿ ಮಾತ್ರ 720 ಕಿ.ಮೀ. ದೂರವನ್ನು ಕ್ರಮಿಸಲು ಬೇಕಾಗುವಷ್ಟು.
ಇಂಥ ಯಾನದಲ್ಲಿ ಲಘು ಆಹಾರ, ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವುದು, ಗಮನ ಅತ್ತಿತ್ತ ಸಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಇಲ್ಲಿ ಯಾವುದೇ ಸ್ಪರ್ಧಿಗಳಿರುವುದಿಲ್ಲ, ಇಲ್ಲೇನಿದ್ದರೂ ನಮ್ಮ ಜೊತೆ ನಮ್ಮದೇ ಸ್ಪರ್ಧೆ. ನಮ್ಮ ಮನೋಬಲ, ಫಿಟೆ°ಸ್, ಏಕಾಗ್ರತೆ, ಛಲ ಮತ್ತು ಸತತ ಪ್ರಯತ್ನಗಳಷ್ಟೇ ಮುಖ್ಯವಾಗುತ್ತದೆ.
ನಿಯಮಗಳು ಹೀಗೆಲ್ಲಾ ಇವೆ…
200, 300, 400, 600 ಕಿ.ಮೀ. ದೂರವನ್ನು ಕ್ರಮವಾಗಿ 13.5, 20, 27, 40 ಗಂಟೆಗಳಲ್ಲಿ ಬೇರೆ ಬೇರೆ ಇವೆಂಟ್‌ಗಳನ್ನು ಒಂದು ವರ್ಷದಲ್ಲಿ ಮುಗಿಸುವ ಸವಾರರಿಗೆ ಆಡೆಕ್ಸ್ ಕಂಪನಿ ವತಿಯಿಂದ ಸೂಪರ್ ರ್‍ಯಾಂಡೋನಿಯರ್ ಮೆಡಲ್ ದೊರೆಯುತ್ತದೆ. ಪ್ರತಿ ರೇಡ್‌ನಲ್ಲಿ ರೈಡರ್ ಕಂಟ್ರೋಲ್ ಪಾಯಿಂಟ್ ತಲುಪಿ, ಟೈಮ್ ಸ್ಟ್ಯಾಂಪ್ ಇರುವ ಫೋಟೋ ತೆಗೆದು ಅಲ್ಲಿ ರಿಪೋರ್ಟ್ ಮಾಡಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಮುಗಿಸದಿದ್ದರೆ, ಅಥವಾ ಮಧ್ಯದಲ್ಲೇ ನಿಲ್ಲಿಸಿದರೆ ಅದು ಅನರ್ಹವಾಗುತ್ತದೆ. ಎಂಟಿಬಿ ಅಂದರೆ ಮೌಂಟೈನ್ ಬೈಕ್, ಗೇರ್ ಇರುವ ಕಾರ್ಬನ್ ಸೈಕಲ್‌ಗಳು, ಸ್ಟೀಲ್ ಸೈಕಲ್‌ಗಳು, ಟೂರಿಂಗ್ ಸೈಕಲ್‌ಗಳು, ಹೈಬ್ರಿಡ್, ಗ್ರಾವೆಲ್ ಹೀಗೆ ಅನೇಕ ಸೈಕಲ್‌ಗಳು ಬಳಕೆಯಾಗುತ್ತವೆ. ಇದರ ಬೆಲೆ 15-20 ಸಾವಿರದಿಂದ ಶುರುವಾಗಿ ಲಕ್ಷಾನುಗಟ್ಟಲೆ ಬೆಲೆ ಇರುತ್ತದೆ. ಸೈಕಲ್ ತೂಕ, ಟಯರ್ ಸಣ್ಣವಿದ್ದಷ್ಟೂ ಸೈಕಲ್‌ನ ವೇಗ ಹೆಚ್ಚು.
-ನಿರೂಪಣೆ: ಶ್ವೇತಾ ಭಿಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arrested: 1 ಕೋಟಿಗೆ 5 ಕೋಟಿ ರೂ. ಕೊಡುವುದಾಗಿ 5.75 ಕೋಟಿ ರೂ. ವಂಚನೆ; ಮೂವರ ಸೆರೆ
BJP: ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ಧ: ಬಿ.ವೈ.ವಿಜಯೇಂದ್ರ ತಿರುಗೇಟು
Kotekar Robbery Case: ದರೋಡೆ ಯೋಜನೆಯ ಹಿಂದೆ ಒಬ್ಬನಲ್ಲ; ಇಬ್ಬರು ಸೂತ್ರಧಾರರು?
Horoscope: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ
India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ