ನಂಬಿ ಕೆಟ್ಟವರಿಲ್ಲವೋ!


Team Udayavani, Apr 29, 2018, 6:00 AM IST

11.jpg

ನನ್ನ ಅಕ್ಕ-ಭಾವ ಉತ್ತರಕರ್ನಾಟಕದಲ್ಲಿ ನೆಲೆಸಿದ್ದಾರೆ. ಆದ್ದರಿಂದ ಅವರು ಬೆಂಗಳೂರಿನಲ್ಲಿ ಖರೀದಿಸಿದ ಅಪಾರ್ಟ್‌ಮೆಂಟ್‌ ಒಂದರ ಬಾಡಿಗೆಯ ಉಸ್ತುವಾರಿಯನ್ನು ನನಗೆ ವಹಿಸಿದ್ದಾರೆ. ಇತ್ತೀಚೆಗೆ, ಆ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಒಬ್ಬ ಒರಿಸ್ಸಾದ ಹುಡುಗ ಆಸಕ್ತಿ ತೋರಿಸಿದ. ಅವನು ಮತ್ತವನ ಹೆಂಡತಿ – ಇಬ್ಬರಿಗೂ ನಾಲ್ಕನೆಯ ಅಂತಸ್ತಿನ ಆ ಮನೆ ಇಷ್ಟವಾಯ್ತು. ಸಾಕಷ್ಟು ಗಾಳಿ-ಬೆಳಕಿನಿಂದ ಕೂಡಿದ, ವಾಹನದ ಗಲಾಟೆಯಿಲ್ಲದಂಥ ನಿಶ್ಯಬ್ದತೆ ಅವರಿಬ್ಬರ ಮನಸ್ಸಿಗೆ ಬಂದಿತು. ಆ ಅಪಾರ್ಟ್‌ಮೆಂಟ್‌ ಪಕ್ಕವೇ ಒಂದು ಸರ್ಕಾರಿ ಸ್ವಾಮ್ಯದ ದೊಡ್ಡ ಜಾಗವಿದ್ದು, ಅದರಲ್ಲಿ ಸಾಕಷ್ಟು ಮರಗಳು ಬೆಳೆದಿದ್ದವು. ಕಿಟಕಿಯಿಂದ ನೋಡಿದರೆ ಕಾಣುವ ಆ ಹಸಿರು ಅವರ ಆಸಕ್ತಿಯನ್ನು ಹಿಗ್ಗಿಸಿತ್ತು. ಆದರೆ, ಆತ ತತ್‌ಕ್ಷಣವೇ ನಿರ್ಧಾರ ಮಾಡುವ ಸ್ಥಿತಿಯಲ್ಲಿರಲಿಲ್ಲ. ನನಗೆ ಮನೆ ತುಂಬಾ ಇಷ್ಟವಾಯಿತು. ಆದರೆ, ನಮ್ಮ ಮನೆಯಲ್ಲಿ ನಮ್ಮಪ್ಪ ಒಪ್ಪಿಕೊಳ್ಳದೆ ಯಾವುದೇ ನಿರ್ಧಾರ ಮಾಡುವ ಹಾಗಿಲ್ಲ. ಅವರನ್ನು ನಾಳೆ ಕರೆದುಕೊಂಡು ಬಂದ ನಂತರವೇ ನಿಮಗೆ ನನ್ನ ನಿರ್ಧಾರವನ್ನು ತಿಳಿಸಬಲ್ಲೆ ಎಂದು ಸಂಕೋಚದಿಂದ ಹೇಳಿದ. “ಹಾಗೇ ಆಗಲಿ’ ಎಂದು ಒಪ್ಪಿಕೊಂಡೆ.

ಸುಮಾರು ಎಪ್ಪತ್ತೈದು ವಯಸ್ಸಿನ, ಚುರುಕು ಕಂಗಳ, ತೆಳು ದೇಹದ, ಕಡಿಮೆ ಮಾತಿನ ಅವರ ತಂದೆ ಆ ಮನೆಯನ್ನು ನಿರಾಕರಿಸಿಬಿಟ್ಟರು. ಅದರಿಂದಾಗಿ ಬಹಳಷ್ಟು ಮುಜುಗರಗೊಂಡ ಆ ಹುಡುಗ ತನ್ನ ಕೈಗಳನ್ನು ಹಿಚುಕಿಕೊಳ್ಳುತ್ತ, ದೇಹವನ್ನು ಕುಗ್ಗಿಸಿಕೊಂಡು ಅಪ್ಪನಿಗೆ ಮನೆ ಇಷ್ಟವಾಗಲಿಲ್ಲ ಎಂದು ಅಪರಾಧದ ಭಾವದಲ್ಲಿ ಹೇಳಿದ. ಒಬ್ಬೊಬ್ಬರದು ಒಂದೊಂದು ಆಯ್ಕೆಯಾಗಿರುತ್ತದೆಯಾದ ಕಾರಣ ನನಗೆ ಬೇಸರವೇನೂ ಆಗಲಿಲ್ಲ. ಆದರೆ, ಮಗ-ಸೊಸೆಗೆ ಅಷ್ಟೊಂದು ಇಷ್ಟವಾದ ಮನೆಯೊಂದು ಆ ಹಿರಿಯರಿಗೇಕೆ ಬೇಡವಾಯ್ತು? ಎಂಬುದು ನನ್ನ ಕುತೂಹಲವನ್ನು ಕೆರಳಿಸಿತು. ಬಹುಶಃ ವಾಸ್ತುವಿಗೆ ಸಂಬಂಧಿಸಿದ ವಿಷಯವಾಗಿರಬಹುದು ಎಂದು ಮನಸ್ಸು ಹೇಳುತ್ತಿತ್ತು. ಆದರೂ ಅನುಮಾನ ಪರಿಹರಿಸಿಕೊಳ್ಳಲು ಆ ಹುಡುಗನನ್ನು ಕೇಳಿದೆ. ಅವನು ಕೊಟ್ಟ ವಿವರಣೆ ಅತ್ಯಂತ ವಿಶಿಷ್ಟವಾಗಿತ್ತು.

“”ನಿಮ್ಮ ಮನೆಯ ಕಿಟಕಿಯಿಂದ ಕೆಳಕ್ಕೆ ನೋಡಿದರೆ ಸಾಕಷ್ಟು ಮರಗಳು ಕಾಣುತ್ತವಲ್ಲವೆ? ಆ ಸಂಗತಿ ನಮ್ಮಪ್ಪನಿಗೆ ಇಷ್ಟವಾಗಲಿಲ್ಲ. ಮನುಷ್ಯನಿಗೆ ಯಾವತ್ತೂ ತಾನು ಮರಗಳಿಗಿಂತಲೂ ಎತ್ತರದಲ್ಲಿದ್ದೇನೆ ಎಂಬ ಭಾವ ಬರಬಾರದಂತೆ. ದಿನನಿತ್ಯ ಕಾಣುವ ಅಂತಹ ನೋಟ ಮನುಷ್ಯನ ಅಹಂಕಾರವನ್ನು ಹೆಚ್ಚಿಸುತ್ತದಂತೆ. ಆದ್ದರಿಂದಲೇ ನಿಮ್ಮ ಮನೆ ಬೇಡ” ಎಂದು ಹೇಳಿದ. “”ಆತ ಹಳೆಯ ಕಾಲದ ಮನುಷ್ಯ; ಮೌಡ್ಯಗಳು ಜಾಸ್ತಿ. ತಪ್ಪು ತಿಳಿಯಬೇಡಿ” ಎಂದು ಕ್ಷಮೆ ಯಾಚಿಸಿದ. ಆ ಹಿರಿಯರ ಆಲೋಚನೆ ಕ್ಷಣಕಾಲ ನನ್ನನ್ನು ದಂಗು ಬಡಿಸಿತು. ಆದರೂ ಸಾವರಿಸಿಕೊಂಡು, “ಅವರ ಮಾತಿನಲ್ಲಿಯೂ ಸತ್ಯವಿದೆ ಅನ್ನಿಸುತ್ತೆ. ನಿಮ್ಮ ತಂದೆಯ ಸಂವೇದನೆಯನ್ನು ನಾನು ಗ್ರಹಿಸಬಲ್ಲೆ’ ಎಂದು ಉತ್ತರಿಸಿದೆ.

ವರ್ತಮಾನದ ಘಟನೆಯೊಂದು ನಮ್ಮನ್ನು ತಲ್ಲಣಕ್ಕೆ ಒಡ್ಡಿದೆಯೆಂದರೆ, ಅದಕ್ಕೆ ಗತಬದುಕಿನ ಕೆಲವು ನೆನಪುಗಳ ಹೆಣಿಗೆಯಿದೆ ಎಂದೇ ಅರ್ಥ. ಈ ನಿರಾಕರಣೆಯ ಪ್ರಸಂಗದ ನಂತರ ನಮ್ಮಪ್ಪ ನನ್ನ ಮನಸ್ಸನ್ನು ಆಕ್ರಮಿಸಿಕೊಂಡು ಬಿಟ್ಟ. ಆತನಿಗೂ ಹಲವಾರು ಮೌಡ್ಯಗಳಿದ್ದವು. ನಾನು ಕಾಲೇಜು ಪ್ರವೇಶಿಸಿ ಆಧುನಿಕವಾದ ನಂತರ ಆತನ ಮೌಡ್ಯಗಳನ್ನು ವಿಪರೀತವಾಗಿ ವಿರೋಧಿಸುತ್ತಿ¨ªೆ. ಎದುರು ಮಾತನಾಡದೆ ಆತ ತನ್ನ ಮೌಡ್ಯಕ್ಕೆ ಇನ್ನಷ್ಟು ಅಂಟಿಕೊಳ್ಳುತ್ತಿದ್ದ. ನಮ್ಮ ಮನೆಯ ಹಿತ್ತಲಿನ ದಾಳಿಂಬೆ ಗಿಡದ ಕತೆಯನ್ನು ಹೇಳಿದರೆ ನಿಮಗೆ ಆತನ ಹಠಮಾರಿ ಸ್ವಭಾವ ಅರ್ಥವಾಗುತ್ತದೆ.

ನಮ್ಮೂರು ಬಳ್ಳಾರಿ ಜಿಲ್ಲೆಯಲ್ಲಿದೆ. ವಿಪರೀತ ಬಿಸಿಲಿನ, ಕುಡಿಯುವ ನೀರಿಗೂ ಕಷ್ಟಪಡುವ, ಬಡತನದಿಂದ ಕಂಗೆಟ್ಟ ಊರದು. ಇಂತಹ ಊರಿನಲ್ಲಿ ನಮ್ಮಪ್ಪನಿಗೆ ಮನೆಯ ಹಿತ್ತಲನ್ನು ಕಾಪಾಡುವ ವಿಪರೀತ ಮೋಹವಿತ್ತು. ಮನೆಗೆ ಅಂಟಿಕೊಂಡಂತೆ ಎಡಬದಿಗೆ ಸಾಕಷ್ಟು ಜಾಗವಿತ್ತು. ಅಲ್ಲೊಂದು ದೊಡ್ಡ ಬೇವಿನ ಮರವಿತ್ತು; ಅದಕ್ಕೆ ನೂರಕ್ಕೂ ಹೆಚ್ಚು ವಯಸ್ಸಾಗಿತ್ತು. ಅದರ ಜೊತೆಯಲ್ಲಿ ಮಲ್ಲಿಗೆ, ಕನಕಾಂಬರ, ಕರಿಬೇವು, ಉತ್ತರಾಣಿ ಇತ್ಯಾದಿ ಗಿಡಗಳನ್ನು ಬೆಳೆಸಿದ್ದವು. ಅವೆಲ್ಲದರ ಜೊತೆಗೆ ಒಂದು ಸೊಗಸಾಗಿ ಬೆಳೆದ ದಾಳಿಂಬೆ ಗಿಡವೂ ಇತ್ತು. ಈ ದಾಳಿಂಬೆ ಗಿಡ ಸಾಕಷ್ಟು ನೀರನ್ನು ಬೇಡುತ್ತಿತ್ತು.

ಮನೆಗೆ ನೀರನ್ನು ಹೊಂದಿಸುವುದು ಅಂತಹ ಸುಲಭದ ಕೆಲಸವಂತೂ ಆಗಿರಲಿಲ್ಲ. ನಮ್ಮ ಮನೆಯ ನಲ್ಲಿಯಲ್ಲಿ ಯಾವತ್ತೂ ನೀರು ಬರುತ್ತಿರಲಿಲ್ಲ. ದೂರದಲ್ಲಿ ಯಾರದೋ ಮನೆಯ ನಲ್ಲಿಯಲ್ಲಿ ನೀರು ಹಿಡಿದುಕೊಂಡು ಬಂದು ಮನೆಯ ಹಂಡೆಗಳನ್ನು ತುಂಬಿಸಬೇಕಿತ್ತು. ಆಳವಾಗಿ ತೋಡಿದ ಕುಣಿಗಳಲ್ಲಿ ಇಳಿದು, ಈ ನೀರನ್ನು ಸಂಗ್ರಹಿಸಬೇಕಿತ್ತು. ರಣರಣ ಬಿಸಿಲಿನಲ್ಲಿ ತುಂಬಿದ ಕೊಡಗಳನ್ನು ಹೆಗಲ ಮೇಲಿಟ್ಟುಕೊಂಡು ತರಬೇಕಿತ್ತು. ದಿನಕ್ಕೆ ಒಂದು ಗಂಟೆ ಮಾತ್ರ ನಲ್ಲಿಯಲ್ಲಿ ನೀರು ಬರುತ್ತಿತ್ತು. ಆದ್ದರಿಂದ ನಲ್ಲಿಯ ಯಜಮಾನರ ಕೃಪಾಕಟಾಕ್ಷಕ್ಕೆ ಒಳಗಾದ ನಂತರವೇ ನಮಗೆ ನೀರು ದಕ್ಕುತ್ತಿತ್ತು. ಮನೆಯ ನೀರಿನ ಅಗತ್ಯವನ್ನೇನೋ ನಿಭಾಯಿಸಲು ನಾವು ಸಿದ್ಧರಿದ್ದೆವು. ಆದರೆ, ಹಿತ್ತಲಿನ ಗಿಡಗಳಿಗೆ ನೀರನ್ನು ತಂದು ಹಾಕುವುದು ನಮಗೆ ಒಪ್ಪಿಗೆಯಾಗುತ್ತಿರಲಿಲ್ಲ. ಹಿತ್ತಲು ಯಾಕಾದರೂ ಬೇಕು? ಎಂಬುದು ನನ್ನ ಮತ್ತು ನನ್ನಕ್ಕನ ವಾದವಾಗಿತ್ತು. 

ಹಿತ್ತಲಿನ ಗಿಡಗಳಿಗೆ ನೀರು ಹಾಕಲು ಯಾರೂ ನಲ್ಲಿಯಲ್ಲಿ ನೇರವಾಗಿ ಬರುತ್ತಿದ್ದ ಸ್ವತ್ಛವಾದ ನೀರನ್ನು ಕೊಡುತ್ತಿರಲಿಲ್ಲ. ಕೊಡಗಳಲ್ಲಿ ನೀರನ್ನು ಹಿಡಿಯುವಾಗ ಸಾಕಷ್ಟು ನೀರು ಕುಣಿಯಲ್ಲಿ ಚೆಲ್ಲಿ ಹೋಗಿರುತ್ತಿತ್ತು. ಹೀಗೆ ಸಂಗ್ರಹವಾದ ಕೆಂಪು ಬಣ್ಣದ, ನೋಡಲು ಅಸಹ್ಯವಾದ ನೀರನ್ನು ನಾವು ಹೊತ್ತು ತಂದು ಗಿಡಗಳಿಗೆ ಹಾಕುತ್ತಿದ್ದೆವು. ಸಾಮಾನ್ಯವಾಗಿ ನಲ್ಲಿಯಲ್ಲಿ ನೀರು ಬರುವುದು ನಿಂತ ಮೇಲೆ ಈ ಕೆಲಸವನ್ನು ಮಾಡುತ್ತಿದ್ದೆವು. ಹೊಲಸು ನೀರನ್ನು ಹೆಗಲ ಮೇಲೆ ಹೊತ್ತು ತಂದು ಹಿತ್ತಲನ್ನು ಬೆಳೆಸುವುದರಲ್ಲಿ ಯಾವ ಸಂತೋಷವಿದೆ ಎಂಬುದು ನನ್ನ ಮತ್ತು ಅಕ್ಕನ ವಾದವಾಗಿರುತ್ತಿತ್ತು.

ಹಿತ್ತಲಿನ ಉಳಿದೆಲ್ಲ ಗಿಡಗಳಿಗೆ ನೀರು ಹಾಕಲು ಅಂತಹ ಬೇಸರವೇನೂ ಆಗುತ್ತಿರಲಿಲ್ಲ. ಆದರೆ, ದಾಳಿಂಬೆ ಗಿಡಕ್ಕೆ ನೀರು ಹಾಕಲು ಮಾತ್ರ ನಾವಿಬ್ಬರೂ ಸುತಾರಾಂ ಒಪ್ಪುತ್ತಿರಲಿಲ್ಲ. ಅತ್ಯಂತ ನಿಬಿಡವಾಗಿ ಬೆಳೆದ ಈ ದಾಳಿಂಬೆ ಗಿಡದ ಒಂದೇ ಒಂದು ಹಣ್ಣನ್ನೂ ನಾವು ತಿನ್ನುವುದಕ್ಕೆ ಸಾಧ್ಯವಿರಲಿಲ್ಲ. ನಮ್ಮ ಹಿತ್ತಲಿನಲ್ಲಿದ್ದ ಬೇವಿನ ಮರದಲ್ಲಿ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಕೋತಿಗಳಿದ್ದವು. ಇವು ಎಲ್ಲಾ ಹಣ್ಣುಗಳನ್ನೂ ಹರಿದು ತಿನ್ನುತ್ತಿದ್ದವು. ಒಂದೇ ಒಂದು ಹಣ್ಣನ್ನೂ ನಮ್ಮ ರುಚಿಗೆಂದು ಬಿಡುತ್ತಿರಲಿಲ್ಲ. ಅವುಗಳನ್ನು ಓಡಿಸಿ, ಹಣ್ಣುಗಳನ್ನು ರಕ್ಷಿಸಿಕೊಳ್ಳುವುದು ಸಾಧ್ಯವಿಲ್ಲದ ಸಾಹಸವಾಗಿತ್ತು. ಆದ್ದರಿಂದಲೇ ಆ ಗಿಡಕ್ಕೆ ನೀರು ಹಾಕಲು ನಾವು ಒಪ್ಪುತ್ತಿರಲಿಲ್ಲ. ಅದನ್ನು ಆದಷ್ಟು ಬೇಗ ಕಡಿಸಿ, ಅಲ್ಲಿ ಬೇರೆ ಉಪಯುಕ್ತ ಗಿಡವನ್ನು ನೆಡಬೇಕೆಂದು ನಾವು ಅಪ್ಪನಿಗೆ ಸಲಹೆ ನೀಡುತ್ತಿ¨ªೆವು.

ಅಪ್ಪ ಮಾತ್ರ ಈ ಮರವನ್ನು ಕಡಿಸುವುದಕ್ಕೆ ಒಪ್ಪುತ್ತಿರಲಿಲ್ಲ. ಕೋತಿಗಳು ಸಾಕ್ಷಾತ್‌ ಹನುಮಂತನ ರೂಪ. ಅವುಗಳಿಗೆ ಸಿಟ್ಟು ತರಿಸಿದರೆ ಹನುಮಂತನು ಮುನಿಸಿನಿಂದ ಶಾಪ ಕೊಡುತ್ತಾನೆ ಎಂಬ ಭಯ ಆತನಿಗಿತ್ತು. ಜೊತೆಗೆ ಊರಿನ ಕೋತಿಗಳ ಯೋಗಕ್ಷೇಮ ನೋಡಿಕೊಳ್ಳುವುದು ಊರ ಜನಗಳ ಕರ್ತವ್ಯ ಎಂದು ಆತ ವಾದಿಸುತ್ತಿದ್ದ. ಊರಿನ ಗಿಡಗಳ ಮೇಲೆ, ಅಲ್ಲಿ ಅರಳುವ ಹೂವು-ಹಣ್ಣುಗಳ ಮೇಲೆ ಆ ಕೋತಿಗಳಿಗೂ ಸಮಾನ ಹಕ್ಕಿದೆ ಎಂಬುದು ಅವನ ಮೊಂಡುವಾದವಾಗಿತ್ತು. ಬಿಸಿಲಿನಲ್ಲಿ ಹೊಲಸು ನೀರನ್ನು ಹೊರುವ ನಮ್ಮ ಕಷ್ಟವು ನಿನಗೆ ಕೋತಿಗಳ ಯೋಗಕ್ಷೇಮಕ್ಕಿಂತಲೂ ಕೀಳಾಯೆ¤àನು ಎಂದು ಮಕ್ಕಳಾದ ನಾವು ವಾದಿಸುತ್ತಿದ್ದೆವು. ನಿಮಗೆ ಕಷ್ಟವಾದರೆ ನಾನೇ ನೀರು ತಂದು ಆ ಗಿಡಕ್ಕೆ ಸುರುವುತ್ತೇನೆ ಎಂದು ಆತ ಹೇಳುತ್ತಿದ್ದ. ಕೊನೆಗೂ ಆತನ ಹಟವೇ ಗೆಲ್ಲುತ್ತಿತ್ತು. ನಮಗೆ ತಿನ್ನಲು ಒಂದೂ ಹಣ್ಣನ್ನು ಕೊಡದ ದಾಳಿಂಬೆ ಗಿಡಕ್ಕೆ ನಾವು ಬಾಲ್ಯವೆಲ್ಲಾ ನೀರು ಹೊರುತ್ತಲೇ ಇ¨ªೆವು. ಕೊನೆಗೂ ಆ ದಾಳಿಂಬೆ ಗಿಡ ಉಳಿದುಕೊಂಡಿತು.

ಈ ಎರಡೂ ಘಟನೆಗಳಿಗೂ ಥಳುಕು ಹಾಕಿಕೊಂಡ ಮಹಾಭಾರತದ ಒಂದು ಪ್ರಸಂಗವನ್ನು ಇಲ್ಲಿ ನೆನೆಯಲೇ ಬೇಕು. ಪಾಂಡವರು ಹನ್ನೆರಡು ವರ್ಷ ವನವಾಸವನ್ನು ಮಾಡುತ್ತಾರಲ್ಲವೆ? ಅವರು ದ್ವೆ„ತವನದಲ್ಲಿ ಸಾಕಷ್ಟು ವರ್ಷ ಕಳೆಯುತ್ತಾರೆ. ವನವಾಸವಾದರೂ ಪಾಂಡವರ ಜೊತೆಯಲ್ಲಿ ಸಾಕಷ್ಟು ಬ್ರಾಹ್ಮಣರು, ಸೇವಕರು, ಅತಿಥಿಗಳು ಇರುತ್ತಿದ್ದರು. ಇವರೆಲ್ಲರಿಗೂ ಊಟದ ವ್ಯವಸ್ಥೆಗಾಗಿ ಪಾಂಡವರು ಬೇಟೆಯಾಡುತ್ತಿದ್ದರು. ಸಂಹರಿಸಿದ ಪ್ರಾಣಿಗಳನ್ನೇ ಆಹಾರವಾಗಿ ಸೇವಿಸುತ್ತಿದ್ದರು. ನಿಧಾನಕ್ಕೆ ಅವುಗಳ ಸಂತತಿ ಕರಗುತ್ತಾ ಬಂದಿತು. ಆ ಹೊತ್ತಿನಲ್ಲಿ ಒಂದು ದಿನ ಯುಧಿಷ್ಠಿರನಿಗೆ ಸ್ವಪ್ನವಾಗುತ್ತದೆ. ಚಿಕ್ಕ ಜಿಂಕೆಯೊಂದು ಕನಸಿನಲ್ಲಿ ಬಂದು, “ನಿಮ್ಮ ಬೆೇಟೆಯಿಂದಾಗಿ ನಮ್ಮ ಸಂತತಿ ನಶಿಸುತ್ತಾ ಬರುತ್ತಿದೆ. ದಯವಿಟ್ಟು ಬೇರೆ ಕಾಡಿಗೆ ನೀವು ಹೊರಟು ಹೋಗಿ. ನಮ್ಮ ಸಂತತಿಯನ್ನು ಉಳಿಸಿ’ ಎಂದು ಬೇಡಿಕೊಳ್ಳುತ್ತದೆ. ಯುಧಿಷ್ಠಿರ ಈ ಕನಸಿಗೆ ಸಾಕಷ್ಟು ಮಹತ್ವವನ್ನು ಕೊಡುತ್ತಾನೆ. ಮರುದಿನ ಎದ್ದ ತಕ್ಷಣ ತನ್ನೆಲ್ಲಾ ಪರಿವಾರವನ್ನು ಹೊರಡಿಸಿಕೊಂಡು ಕಾಮ್ಯಕವನಕ್ಕೆ ಪ್ರಯಾಣ ಬೆಳೆಸುತ್ತಾನೆ. ಅನಂತರ ಯಾವುದೇ ವನದಲ್ಲಿಯೂ ಹೆಚ್ಚು ಕಾಲ ಇರದಂತೆ ನೋಡಿಕೊಳ್ಳುತ್ತಾನೆ. ಅತ್ಯಂತ ಸಣ್ಣ ಘಟನೆಯೆಂಬಂತೆ ನಮೂದಿಸಲ್ಪಟ್ಟ ಈ ಕನಸಿನ ವಿವರ, ಯುಧಿಷ್ಠಿರನ ಘನವಾದ ಯೋಗ್ಯತೆಯನ್ನು ಪರಿಚಯಿಸುವಷ್ಟು ಸಶಕ್ತವಾಗಿದೆ. “ಖಾಂಡವ’ ಎನ್ನುವ ದೊಡ್ಡ ಕಾಡನ್ನು, ಅದರದಲ್ಲಿಯ ಪಶು-ಪಕ್ಷಿ-ಉರಗ-ಬುಡಕಟ್ಟು ಜನಾಂಗದ ಸಮೇತವಾಗಿ ಸುಟ್ಟು ಹಾಕಿ ವೀರಾವೇಶ ಮೆರೆದು, ಅತ್ಯಾಧುನಿಕ ಇಂದ್ರಪ್ರಸ್ಥ ನಗರವನ್ನು ಕಟ್ಟಿದ ಅರ್ಜುನ ಮತ್ತು ಕೃಷ್ಣನ ಪುಂಡಾಟವು ಬಹು ದೊಡ್ಡ ಅಧ್ಯಾಯವಾಗಿ ಮಹಾಭಾರತದಲ್ಲಿ ವೈಭವೀಕರಿಸಲ್ಪಟ್ಟಿದೆ. ಆದರೆ ಅವರಿಬ್ಬರ ಪೌರುಷಕ್ಕಿಂತಲೂ ಯುಧಿಷ್ಠಿರನ ಕನಸಿನ ಮೌಡ್ಯವು ಹೆಚ್ಚು ಮೌಲ್ಯಯುತವಾದ¨ªೆಂದು ನನಗನ್ನಿಸುತ್ತದೆ.

ನಮ್ಮ ಹಿರಿಯರ ಮೌಡ್ಯಗಳು ಹಸಿರನ್ನು ರಕ್ಷಿಸಿದಷ್ಟು, ನಮ್ಮ ಆಧುನಿಕತೆ ಖಂಡಿತ ರಕ್ಷಿಸಿಲ್ಲ ಎಂದು ಮಾತ್ರ ನಿಸ್ಸಂಶಯವಾಗಿ ಹೇಳಬಹುದೆನ್ನಿಸುತ್ತದೆ. ಯಾವುದೋ ದೇವಿಯ ಕಾಡೆಂದೋ, ನಾಗನ ಬನವೆಂದೋ, ಭೂತದ ಮೆಳೆಯೆಂದೋ – ಹೇಗೋ ಕಾಡನ್ನು ರಕ್ಷಿಸುವ ಮೌಡ್ಯಗಳು ಜನಪದರಲ್ಲಿ ಹಾಸುಹೊಕ್ಕಾಗಿದ್ದವು. ಈಗ ಒಂದು ಕಾಡಿನ ಮಾತಂತಿರಲಿ, ಒಂದು ಬೀದಿಬದಿಯ ಮರವನ್ನು ಉಳಿಸಿಕೊಳ್ಳುವುದೂ ದೊಡ್ಡ ಸಾಹಸವಾಗಿ ಬಿಟ್ಟಿದೆ. ಎಲ್ಲರೂ ಓದಿ, ಕಲಿತು ಆಧುನಿಕರಾಗುತ್ತಿರುವ ಹೊತ್ತಿನಲ್ಲಿ, ಮರ-ಗಿಡಗಳಿಗೆ ನಿಜಕ್ಕೂ ಕಂಟಕ ಪ್ರಾಪ್ತವಾಗಿದೆ.

ವಸುಧೇಂದ್ರ

ಟಾಪ್ ನ್ಯೂಸ್

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

POLICE-5

Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್‌ ವಶ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.