ಬರ್ಮಾ ದೇಶದ ಕತೆ: ಮಣ್ಣಿನಿಂದ ಚಿನ್ನ
Team Udayavani, Sep 23, 2018, 6:00 AM IST
ಒಂದು ಗುಡ್ಡಗಾಡು ಪ್ರದೇಶದಲ್ಲಿ ಸುನೋಯ್ ಎಂಬ ಯುವಕನಿದ್ದ. ಅವನಿಗೆ ಪಿತ್ರಾರ್ಜಿತವಾಗಿ ಬಂದ ಹೊಲಗಳಿದ್ದವು. ಸುಂದರಿಯಾದ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದ. ಗಂಡನ ಮನೆಗೆ ಬಂದು ಕೆಲವು ದಿನಗಳಲ್ಲಿ ಅವನ ಹೆಂಡತಿ ಬಿನೋಯ್ ಗಂಡನ ವರ್ತನೆ ವಿಚಿತ್ರವಾಗಿದೆ ಎಂದುಕೊಂಡಳು. ಅವನು ಹೊಲದಲ್ಲಿ ದುಡಿಯುತ್ತಿರಲಿಲ್ಲ, ಬೇರೆ ಕೆಲಸಗಳನ್ನು ಮಾಡುತ್ತಿರಲಿಲ್ಲ. ಇಡೀ ದಿನ ಒಂದಿಷ್ಟು ಮಣ್ಣನ್ನು ಹರಡಿಕೊಂಡು ಏನೇನೋ ಪರೀಕ್ಷೆಗಳನ್ನು ಮಾಡುತ್ತ ಕುಳಿತುಕೊಳ್ಳುತ್ತಿದ್ದ. ಬಿನೋಯ್ ಗಂಡನೊಂದಿಗೆ, “”ನೀವು ಏನು ಮಾಡುತ್ತಿದ್ದೀರಾ? ಬರೇ ಮಣ್ಣನ್ನು ನೋಡುತ್ತ ಕುಳಿತುಕೊಂಡು ಏನು ಸಾಧಿಸಬೇಕೆಂದಿದ್ದೀರಿ?” ಎಂದು ಕೇಳಿದಳು. ಅವನು ತನ್ನ ಪರೀಕ್ಷೆಯ ಕೆಲಸದಿಂದ ತಲೆಯೆತ್ತಲಿಲ್ಲ. “”ಮಣ್ಣನ್ನು ಚಿನ್ನ ಮಾಡಲು ಸಾಧ್ಯವೆಂಬುದನ್ನು ಕೇಳಿ ತಿಳಿದುಕೊಂಡಿದ್ದೇನೆ. ಆದರೆ ಅದು ಹೇಗೆ ಎಂಬುದು ಗೊತ್ತಿಲ್ಲ. ಈ ಕಲೆಯನ್ನು ಕೈವಶ ಮಾಡಿಕೊಳ್ಳಲು ಪ್ರಯೋಗ ಮಾಡುತ್ತಿದ್ದೇನೆ” ಎಂದು ಹೇಳಿದ ಸುನೋಯ್.
ದಿನವೂ ಗಂಡ ಹೀಗೆಯೇ ಮಣ್ಣಿನ ಪರೀಕ್ಷೆಯಲ್ಲಿ ತಲ್ಲೀನನಾಗುವುದು ಕಂಡು ಬಿನೋಯ್ ಸಿಟ್ಟಾದಳು. “”ನಿಮಗೆ ತಲೆ ಸರಿ ಇಲ್ಲ. ಹೀಗೆ ಮಣ್ಣಿನ ಮುಂದೆ ಕುಳಿತುಕೊಂಡರೆ ಅದು ಚಿನ್ನವಾಗುತ್ತದೆಂದು ಭಾವಿಸುವುದು ಬರೇ ಬ್ರಾಂತು. ಹೊಲಗಳು ವ್ಯವಸಾಯ ಕಾಣದೆ ಹಾಳು ಬೀಳುತ್ತಿವೆ. ಊಟ ಸಂಪಾದನೆಯ ದಾರಿ ಇಲ್ಲ. ಹೀಗೆ ನೀವು ಹುಚ್ಚಾಟ ಮಾಡುತ್ತ ಕುಳಿತರೆ ಒಂದು ದಿನ ಉಪವಾಸ ಸತ್ತುಹೋಗುತ್ತೇವೆ” ಎಂದು ಅವನನ್ನು ಕಟುವಾದ ಮಾತುಗಳಿಂದ ಆಕ್ಷೇಪಿಸಿದಳು. ಆದರೂ ಸುನೋಯ್ ತನ್ನ ಕೆಲಸದಿಂದ ಎದ್ದು ಬರಲಿಲ್ಲ. “”ನೋಡುತ್ತ ಇರು, ಇಂದಲ್ಲ ನಾಳೆ ರಾಶಿ ರಾಶಿ ಮಣ್ಣನ್ನು ಚಿನ್ನವನ್ನಾಗಿ ಪರಿವರ್ತಿಸುತ್ತೇನೆ. ಎಲ್ಲಿ ನೋಡಿದರೂ ಚಿನ್ನವೇ ಕಾಣುತ್ತದೆ. ಚಿನ್ನದಿಂದಲೇ ಮನೆಯನ್ನೂ ಕಟ್ಟಿಸುತ್ತೇನೆ” ಎಂದು ಹೇಳಿದ.
ಗಂಡನನ್ನು ತಿದ್ದಲು ಸಾಧ್ಯವಿಲ್ಲ ಎನಿಸಿದಾಗ ಬಿನೋಯ್ ಬೇಸರದಿಂದ ಎದ್ದು ತವರುಮನೆಗೆ ಹೊರಟುಹೋದಳು. ಮಗಳೊಬ್ಬಳೇ ಬಂದುದನ್ನು ಕಂಡು ಅವಳ ತಂದೆ ಕಾರಣ ಕೇಳಿದ. ಅವಳು ತನ್ನ ಗಂಡನಿಗೆ ಮಣ್ಣನ್ನು ಚಿನ್ನವಾಗಿ ಪರಿವರ್ತಿಸಿ ಧನಿಕನಾಗುವ ಹುಚ್ಚು ಕನಸಿರುವುದನ್ನು ಹೇಳಿದಳು. “”ಅಂತಹ ಅವಿವೇಕಿಯ ಜೊತೆಗೆ ನಾನಿದ್ದರೆ ಹೊಟ್ಟೆಗೆ ಇಲ್ಲದೆ ಸಾಯುವ ಪರಿಸ್ಥಿತಿ ಬರಬಹುದು. ಅದಕ್ಕಾಗಿ ನಾನು ಅವನನ್ನು ತ್ಯಜಿಸಿ ಇಲ್ಲಿಗೆ ಬಂದುಬಿಟ್ಟೆ” ಎಂದಳು.
ಬಿನೋಯ್ ತಂದೆಗೆ ನಗು ಬಂತು. “”ಮಣ್ಣನ್ನು ಚಿನ್ನವಾಗಿ ಪರಿವರ್ತಿಸುವುದು ಅವಿವೇಕತನವೆಂದು ನಿನಗೆ ಯಾರು ಹೇಳಿದರು? ಇದು ಕನಸಲ್ಲವೇ ಅಲ್ಲ, ಖಂಡಿತ ಸಾಧ್ಯವಾಗುತ್ತದೆ. ಅವನ ವಯಸ್ಸಿನಲ್ಲಿ ನಾನೂ ಇಂತಹ ಕನಸು ಕಂಡಿದ್ದೆ. ಅದು ನನಸೂ ಆಯಿತು. ಈ ದೇಶದ ದೊರೆಗೆ ಹಣದ ಅಡಚಣೆ ತುಂಬ ಇತ್ತು. ಒಂದು ಗುಡ್ಡವನ್ನೇ ಚಿನ್ನವಾಗಿ ಬದಲಾಯಿಸಿ ಅವನಿಗೆ ಕೊಟ್ಟು ಸಹಾಯ ಮಾಡಿದೆ. ಆಮೇಲೆ ಚಿನ್ನದ ಮೇಲೆ ವಿರಕ್ತಿ ಬಂತು. ಅದನ್ನು ನಿಲ್ಲಿಸಿಬಿಟ್ಟೆ” ಎಂದು ಅವನು ಹೇಳಿದ.
“”ಇದು ನಿಜವೇನಪ್ಪ? ಹಾಗಿದ್ದರೆ ನೀನು ನನ್ನ ಮನೆಗೊಂದು ಸಲ ಬಂದುಬಿಡು. ಮಣ್ಣಿನಿಂದ ಚಿನ್ನ ತಯಾರಿಸುವ ಕಲೆಯನ್ನು ನನ್ನ ಗಂಡನಿಗೆ ಹೇಳಿಕೊಡು. ಅದರಿಂದ ನಾವಿಬ್ಬರೂ ಸುಖವಾಗಿ ಬಾಳುವೆ ಮಾಡಲು ಸಹಾಯವಾಗುತ್ತದೆ” ಎಂದು ಬಿನೋಯ್ ತಂದೆಯ ಬಳಿ ಕೇಳಿಕೊಂಡಳು. ಅವನು ಅದಕ್ಕೆ ಒಪ್ಪಿದ. ಮಗಳ ಮನೆಗೆ ಬಂದ. ಮಣ್ಣನ್ನು ಪರೀಕ್ಷಿಸುತ್ತ ಕುಳಿತಿದ್ದ ಅಳಿಯನೊಂದಿಗೆ, “”ಭೇಷ್, ಒಳ್ಳೆಯ ಕೆಲಸವನ್ನೇ ಮಾಡುತ್ತಿರುವೆ. ಮಣ್ಣಿನಿಂದ ಚಿನ್ನ ತಯಾರಿಸಲು ಪ್ರಯತ್ನಿಸುತ್ತ ಇರುವೆ ತಾನೆ?” ಎಂದು ಕೇಳಿದ.
“”ಹೌದು ಮಾವ, ನನಗೆ ಮಣ್ಣಿನಿಂದ ಚಿನ್ನ ತಯಾರಿಸಲು ಸಾಧ್ಯವಾಗುತ್ತದೆ ಎಂಬ ವಿಚಾರ ಗೊತ್ತಿದೆ. ಆದರೆ ಹೇಗೆ ಎನ್ನುವುದು ತಿಳಿದಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ ಕೊಡುತ್ತೀರಾ?” ಎಂದು ಕೇಳಿದ ಸುನೋಯ್. “”ಅಯ್ಯೊ ದೇವರೇ, ಅದು ಕಷ್ಟವೇ ಅಲ್ಲ. ಬಹು ಸುಲಭ. ಆದರೆ ಕೇವಲ ಮಣ್ಣನ್ನು ಚಿನ್ನವಾಗಿ ಬದಲಾಯಿಸಲು ಸುಲಭವಿಲ್ಲ. ಅದಕ್ಕೆ ಬಹು ಅಮೂಲ್ಯವಾದ ಒಂದು ವಸ್ತು ಬೇಕಾಗುತ್ತದೆ” ಎಂದ ಬಿನೋಯ್ ತಂದೆ.
“”ಹೇಳಿ ಮಾವ. ಅದು ಯಾವ ವಸ್ತುವಾದರೂ ಸಂಪಾದಿಸಿ ತರಬಲ್ಲೆ. ನನಗೆ ತುಂಬ ಚಿನ್ನ ತಯಾರಿಸಿ ಸುಖದಿಂದ ಜೀವನ ನಡೆಸಬೇಕು ಎನ್ನುವ ದೊಡ್ಡ ಆಸೆಯಿದೆ” ಸುನೋಯ್ ಕಣ್ಣರಳಿಸಿ ಹೇಳಿದ. “”ಆ ವಸ್ತುವನ್ನು ಎಲ್ಲಿಂದಲೋ ಹುಡುಕಿ ತರಬೇಕೆಂದರೆ ಸಿಗುವುದಿಲ್ಲ. ನೀನು ಇಲ್ಲಿಯೇ ತಯಾರಿಸಬೇಕಾಗುತ್ತದೆ. ಬಲಿತ ಬಾಳೆಯೆಲೆಗಳ ಕೆಳಗೆ ಬೂದಿಯಂತಹ ಪದಾರ್ಥ ಸಿಗುತ್ತದೆ. ಅದನ್ನು ಸಂಗ್ರಹಿಸಿ ಮಣ್ಣಿನೊಂದಿಗೆ ಬೆರೆಸಿ ಗೋಣಿಚೀಲ ಮುಚ್ಚಿಡಬೇಕು. ರಾತ್ರೆ ಬೆಳಗಾಗುವಾಗ ಅಷ್ಟು ಮಣ್ಣು ಚಿನ್ನವಾಗಿರುತ್ತದೆ” ಬಿನೋಯ್ ತಂದೆ ವಿವರಿಸಿದ.
“ಬಾಳೆಯೆಲೆಯ ಕೆಳಗಿನ ಬೂದಿಯೆ? ಅಷ್ಟು ಬೂದಿಯನ್ನು ಎಲ್ಲಿಂದ ಸಂಪಾದಿಸಲಿ?” ಎಂದು ಸುನೋಯ್ ಚಿಂತೆಯಿಂದ ಕೇಳಿದ. “”ಅದೇನೂ ಕಷ್ಟವಿಲ್ಲ. ನಿನ್ನ ಮನೆಯ ಮುಂದಿರುವ ಹೊಲದಲ್ಲಿ ಹೊಂಡಗಳನ್ನು ತೆಗೆದು ಸಾವಿರಾರು ಬಾಳೆಯ ಕಂದುಗಳನ್ನು ನೆಡು. ಬಾಳೆಗಿಡ ಬಲಿತಾಗ ಅದರ ಎಲೆಗಳ ಕೆಳಗೆ ಈ ಬೂದಿ ಹೆಪ್ಪುಗಟ್ಟುತ್ತದೆ. ಜೋಪಾನವಾಗಿ ಅದನ್ನು ಸಂಗ್ರಹಿಸಿದರೆ ಚಿನ್ನ ಸುಲಭವಾಗಿ ಕೈಸೇರುತ್ತದೆ. ಆದರೆ ಬಾಳೆಗಳಿಗೆ ನೀರು ಹೊಯಿದು, ಗೊಬ್ಬರ ಹಾಕಿ ಸಲಹದಿದ್ದರೆ ಬೇಕಾದಷ್ಟು ಬೂದಿ ಸಿಗುವುದಿಲ್ಲ. ಇದಕ್ಕಾಗಿ ಒಂದು ವರ್ಷ ದುಡಿದರೆ ಸಾಕು. ನಿನ್ನ ಕನಸು ಈಡೇರುತ್ತದೆ, ಚಿನ್ನದ ಒಡೆಯನಾಗುವೆ” ಎಂದು ಹೇಳಿದ ಅವನ ಮಾವ.
“”ಇಷ್ಟೇ ತಾನೆ? ಬಾಳೆ ಬೆಳೆದರಾಯಿತು, ಒಂದು ವರ್ಷ ಕಾದರಾಯಿತು’ ಎಂದು ಹೇಳಿ ಸುನೋಯ್ ಉತ್ಸಾಹದಿಂದ ಹೊಲದಲ್ಲಿ ದುಡಿಯಲು ಸಿದ್ಧನಾದ. ಹೊಂಡ ತೆಗೆದು ಬಾಳೆಗಿಡಗಳನ್ನು ನೆಟ್ಟು ಶ್ರದ್ಧೆಯಿಂದ ಸಾಕಿದ. ಅವನ ದುಡಿಮೆಗೆ ಭೂಮಿಯೂ ಒಲಿಯಿತು. ಬಾಳೆಗಳು ಬೆಳೆದು ಗೊನೆ ಹಾಕಿದವು. ಸಾವಿರಾರು ಗೊನೆಗಳನ್ನು ಹೊತ್ತು ಬಾಗಿದವು. ಆ ಹೊತ್ತಿಗೆ ಅವನ ಮಾವ ಮತ್ತೆ ಅಳಿಯನನ್ನು ನೋಡಲು ಬಂದ. ಗೊನೆಗಳನ್ನು ಕಂಡು ಅವನಿಗೆ ತುಂಬ ಸಂತಸವಾಯಿತು. “”ಭೇಷ್ ಸುನೋಯ್. ನಿನ್ನ ಕನಸು ಸುಲಭವಾಗಿ ನೆರವೇರುವ ಕಾಲ ಸನ್ನಿಹಿತವಾಗಿದೆ. ಮಣ್ಣಿನಿಂದ ಧಾರಾಳವಾಗಿ ಚಿನ್ನ ತಯಾರಿಸುವ ಕೌಶಲ ಕೈಸೇರಲಿದೆ” ಎಂದು ಹೇಳಿದ.
ಸುನೋಯ್ ಆನಂದದಿಂದ ಕುಣಿದಾಡಿದ. “”ಹಾಗಿದ್ದರೆ ಎಲೆಗಳಿಂದ ಬೂದಿಯನ್ನು ಸಂಗ್ರಹಿಸಬಹುದಲ್ಲವೆ?” ಎಂದು ಕೇಳಿದ. “”ನಿಲ್ಲು, ಗೊನೆಗಳನ್ನು ಜೋಪಾನವಾಗಿ ಕಡಿಯುತ್ತೇನೆ. ಆಗ ಎಲೆಗಳಿಂದ ಬೂದಿ ಸಂಗ್ರಹಿಸುವ ಕೆಲಸ ಮಾಡಲು ನಿನಗೂ ಸಲೀಸಾಗುತ್ತದೆ” ಎಂದು ಹೇಳಿ ಅವನ ಮಾವ ಗೊನೆಗಳನ್ನು ಕಡಿದು ಪಟ್ಟಣಕ್ಕೆ ಸಾಗಿಸಿದ. ಆ ರಾಜ್ಯದ ರಾಜನ ಮಗಳಿಗೆ ಮದುವೆ ನಿಶ್ಚಯವಾಗಿತ್ತು. ಖಾದ್ಯಗಳನ್ನು ತಯಾರಿಸಲು ಗೊನೆಗಳು ಬೇಕಾಗಿದ್ದವು. ರಾಜ ಭಟರು ಗೊನೆಗಳನ್ನು ಕೊಂಡು ಪ್ರತಿಯಾಗಿ ಚಿನ್ನದ ಗಟ್ಟಿಗಳನ್ನು ಕೊಟ್ಟರು.
ಕತ್ತಲಾಯಿತು. ಸುನೋಯ್ ಎಲೆಗಳಿಂದ ಸಂಗ್ರಹಿಸಿದ ಬೂದಿಯನ್ನು ಅವನ ಮಾವ ಮಣ್ಣಿನೊಂದಿಗೆ ಬೆರೆಸಿದ. ಗೋಣಿಚೀಲವನ್ನು ಮುಚ್ಚಿದ. “”ಮಾವ, ನಾನಿನ್ನು ಮಲಗಿಕೊಳ್ಳಬಹುದೆ? ಬೆಳಗಾಗುವಾಗ ಮಣ್ಣು ಚಿನ್ನವಾಗಿ ಬದಲಾಗುತ್ತದೆಯೆ?” ಎಂದು ಸುನೋಯ್ ಕೇಳಿದ. “”ಹೌದು, ನೀನು ನಿಶ್ಚಿಂತವಾಗಿ ಮಲಗಿಕೋ. ಬೆಳಗಾಗುವಾಗ ಎದ್ದು ನೋಡು, ನಿನ್ನ ಕನಸು ನನಸಾಗಿರುತ್ತದೆ” ಎಂದು ಹೇಳಿದ ಮಾವ. ಅಳಿಯ ನಿದ್ರೆ ಹೋದ ಕೂಡಲೇ ಅವನು ಮಣ್ಣನ್ನು ದೂರ ಎಸೆದುಬಂದು ಅಲ್ಲಿ ಚಿನ್ನದ ಗಟ್ಟಿಗಳನ್ನಿರಿಸಿದ.
ಬೆಳಗಾಯಿತು. ಸುನೋಯ್ ಚಿನ್ನದ ಗಟ್ಟಿಗಳನ್ನು ಕಂಡು ಹಿರಿಹಿರಿ ಹಿಗ್ಗಿದ. ತವರಿಗೆ ಹೋದ ಬಿನೋಯ್ ಕೂಡ ಗಂಡನ ಮನೆಗೆ ಬಂದಳು. ಮಣ್ಣನ್ನು ಚಿನ್ನ ಮಾಡಿದ ಗಂಡನ ಬುದ್ಧಿವಂತಿಕೆ ಕಂಡು ಹೆಮ್ಮೆಪಟ್ಟಳು. ಅವರ ಬಳಿ ಸತ್ಯ ಸಂಗತಿ ಹೇಳದೆ ಅವಳ ತಂದೆ ತನ್ನ ಮನೆಗೆ ಹಿಂತಿರುಗಿದ.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.