ಅನುದಾನವೆಂಬ ವ್ಯವಹಾರ
Team Udayavani, Aug 18, 2019, 5:00 AM IST
ಸರಕಾರದ ಅನುದಾನ ಪಡೆದು ಕಾರ್ಯಕ್ರಮ ನಡೆಸುವುದೇ ಒಂದು ಕೌಶಲ. ಇಂಥ ಕೌಶಲವಿಲ್ಲದೆಯೂ ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ನಡೆಸುವ ಎಷ್ಟೋ ಸಂಸ್ಥೆಗಳಿಲ್ಲವೆ? ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯ.
ನಮ್ಮೂರಿನ ವೆಂಕಟೇಶ ದೇವರಿಗೆ ಪ್ರತಿವರ್ಷ ಆಷಾಢದಲ್ಲಿ ರಥೋತ್ಸವ ನಡೆಯುತ್ತೆ. ಮುಜರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನದ ಆದಾಯ ನೇರ ಸರಕಾರಕ್ಕೆ ಹೋಗು ತ್ತದೆ. ಆದರೆ, ಜಾತ್ರೆಗೆಂದು ಸರ್ಕಾರ ಬಿಡುಗಡೆ ಮಾಡುವ ಹಣ ಆದಾಯದ ಒಂದಂಶ ಮಾತ್ರ! ಅದು ದೇಗುಲದ ಸುಣ್ಣಬಣ್ಣಕ್ಕೂ ಸಾಕಾಗುವುದಿಲ್ಲ. ಆದರೂ ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಸೇರುವ ಜನರ ಸಂಖ್ಯೆ ಏರುತ್ತಲೇ ಇದೆ. ಹೇಗೋ ಏನೋ ಇಲ್ಲಿರುವ ಎಲ್ಲ ಸಮುದಾಯಗಳ ಛತ್ರಗಳಲ್ಲಿ ಭಕ್ತರಿಗೆ ಊಟ ತಿಂಡಿಗಳ ವ್ಯವಸ್ಥೆ ನಡೆಯುತ್ತೆ. ಆಯಾ ಸಮುದಾಯದ ಉಳ್ಳವರು ಇಲ್ಲದವರೂ ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಹಾಯ ಮಾಡುತ್ತಾರೆ. ಸರ್ಕಾರ ಕೊಡುವುದಿಲ್ಲ ಎಂದು ಅವರು ಯಾರೂ ದೂರುವು ದಿಲ್ಲ ಅಥವಾ ಜಾತ್ರೆಯನ್ನು ನಿಲ್ಲಿಸುವುದಿಲ್ಲ.
ಇನ್ನು ನನ್ನ ಹುಟ್ಟೂರು ತರೀಕೆರೆಯ ಸುಬ್ರಹ್ಮಣ್ಯ ದೇವರಿಗೂ ಘಾಟಿ ಸುಬ್ರಹ್ಮಣ್ಯದ ರಥೋತ್ಸವದಂದೇ ತೇರು ನಡೆಯುತ್ತದೆ. ಮುಜರಾಯಿ ಇಲಾಖೆ ಆದಾಯವೇ ಇಲ್ಲದ ಈ ದೇಗುಲಕ್ಕೆ ಕಾಲಿಟ್ಟಿಲ್ಲ. ಆದರೂ ಪ್ರತಿವರ್ಷ ರಥೋತ್ಸವದ ಅದ್ದೂರಿತನ ಏರುತ್ತಲೇ ಹೋಗುತ್ತಿದೆ.
ಅರಸೀಕೆರೆಯ ಸಮೀಪದ ಜೇನುಕಲ್ಲು ಸಿದ್ದೇಶ್ವರ ಬೆಟ್ಟದಲ್ಲಿ ಪ್ರತಿ ಹುಣ್ಣಿಮೆಗೆ ಹತ್ತು-ಹದಿನೈದು ಸಾವಿರ ಜನಸೇರುತ್ತಾರೆ. ನಿತ್ಯವೂ ದಾಸೋಹ ಇದ್ದೇ ಇರುತ್ತದೆ. ಸರ್ಕಾರದ ನಯಾಪೈಸೆ ಈ ದಾಸೋಹಕ್ಕೆ ಸಿಕ್ಕುತ್ತಿಲ್ಲವಾದರೂ ಸುತ್ತಲಿನ ಹಳ್ಳಿಯವರು ಪ್ರತಿ ಹುಣ್ಣಿಮೆಗೆ ಸರದಿಯಂತೆ ಊಟೋಪಚಾರದ ವ್ಯವಸ್ಥೆ ಮಾಡುತ್ತಾರೆ. ಇವರು ಯಾರಿಗೂ
ಸರ್ಕಾರದ ಧನ ಸಹಾಯ ಕೇಳಬೇಕು ಅಂತ ಗೊತ್ತೇ ಇಲ್ಲ!
ಹಂಗಿಲ್ಲದೆ ನಡೆಯುವ ಸಂಗೀತೋತ್ಸವ
ಇನ್ನು ಪ್ರತಿವರ್ಷ ಕುಂದಗೋಳದಲ್ಲಿ ನಡೆಯುವ ಅಹೋರಾತ್ರಿ ಸಂಗೀತ ಸಭೆಗೆ ದೊಡ್ಡ ಇತಿಹಾಸವೇ ಇದೆ. ಕುಂದಗೋಳ ಭಾರತದ ಸಂಗೀತ ನಕ್ಷೆಯಲ್ಲಿ ತನ್ನ ಹೆಸರನ್ನು ನಿಚ್ಚಳವಾಗಿಸಿದೆ. ಹಿಂದೂಸ್ತಾನೀ ಸಂಗೀತಜ್ಞ ಸವಾಯಿ ಗಂಧರ್ವರು ಇಲ್ಲಿದ್ದಾಗ ಅವರು ಭೀಮಸೇನ ಜೋಷಿ ಮತ್ತು ಗಂಗೂಬಾಯಿ ಹಾನಗಲ್ಲರಂಥ ಅಖೀಲಭಾರತ ಖ್ಯಾತಿಯ ಶಿಷ್ಯರನ್ನು ತಯಾರಿಸಿದರು. ಸವಾಯಿಗಂಧರ್ವರ ಸಂಗೀತದಿಂದಾಗಿ ಕುಂದಗೋಳ ಪಟ್ಟಣ ಸಂಗೀತದ ನೆಲೆವೀಡಾಗಿ ಪರಿಣಮಿಸಿತು. ಇಲ್ಲಿಯ ನಾನಾಸಾಹೇಬ ನಾಡಗೀರರು ಅವರ ಶಿಷ್ಯರಲೊಬ್ಬರು. ಅವರ ಕುಟುಂಬದವರು ಪ್ರತಿವರ್ಷ ತಮ್ಮ ಗುರುಗಳ ಪುಣ್ಯತಿಥಿಯಂದು ಕುಂದಗೋಳದಲ್ಲಿ ಸಂಗೀತ ಸಮಾರೋಹ ಜರುಗಿಸುತ್ತಾರೆ. ಭಾರತದ ನಾನಾ ಮೂಲೆಗಳಿಂದ ಬರುವ ಸಂಗೀತಗಾರರ ಕಛೇರಿಗಳಿಗೆ ಈ ಊರಿನ ಸಂಗೀತಾರಾಧನೆ ಜನಾಕರ್ಷಕವಾಗಿ ಪರಿಣಮಿಸಿದೆ. ಮೂರು ರಾತ್ರಿ ನಿರಂತರ ನಡೆಯುವ ಈ ಸಂಗೀತೋತ್ಸವಕ್ಕೆ ಸರ್ಕಾರದಿಂದ ದಮ್ಮಡಿ ಪಡೆಯದೇ ನಡೆಸುತ್ತಿರುವ ವಾಡೆಯ ಖ್ಯಾತಿ ಅಷ್ಟಿಷ್ಟಲ್ಲ. ಇಲ್ಲಿ ಹಾಡದಿದ್ದರೆ ತಮಗೆ ಸವಾಯಿ ಗಂಧರ್ವರ ಆಶೀರ್ವಾದ ಸಿಕ್ಕುವುದಿಲ್ಲವೆಂದು ಬಹುತೇಕ ಹಿಂದೂಸ್ತಾನಿ ಕಲಾವಿದರು ತಮ್ಮ ಖರ್ಚಲ್ಲೇ ಬಂದು ಹಾಡುವುದು ಇಲ್ಲಿನ ವಿಶೇಷ. ಪಂಡಿತ್ ಭೀಮಸೇನ ಜೋಷಿ ತಾವು ಬದುಕಿರುವವರೆಗೂ ಇಲ್ಲಿನ ಸಭೆಗೆ ಭೈರವ್ ಹಾಡುತ್ತಿದ್ದದ್ದು ಅಲ್ಲಿನ ಕಛೇರಿ ಕೇಳಿದ ಎಲ್ಲರ ನೆನಪು.
ಇನ್ನು ಸುಗ್ಗಿ ಕಳೆದ ಮೇಲೆ ಹಳ್ಳಿಹಳ್ಳಿಗಳಲ್ಲೂ ನಾಟಕದ ತಯಾರಿ ನಡೆಯುತ್ತದೆ. ಹಳ್ಳಿಯ ಪಾತ್ರಧಾರಿಗಳೇ ಖರ್ಚಷ್ಟನ್ನೂ ಹಂಚಿಕೊಂಡು ನಾಟಕದ ಮೇಷ್ಟ್ರಿಗೆ ತಿಂಗಳುಗಟ್ಟಲೆ ಸಂಬಳ ಕೊಟ್ಟು ಅದ್ದೂರಿ ಸೆಟ್ ತರಿಸಿ, ನಾಟಕ ಪ್ರದರ್ಶನ ಮಾಡುತ್ತಾರೆ. ಹಳ್ಳಿಯ ಆ ಕಲಾವಿದರಿಗೆ ಸ್ಥಳೀಯ ರಾಜಕಾರಣಿಗಳು ಅಷ್ಟೋ ಇಷ್ಟೋ ಸಹಾಯ ಮಾಡುತ್ತಾರಾದರೂ ಅವರ್ಯಾರಿಗೂ ಸರ್ಕಾರದ ಸಂಸ್ಕೃತಿ ಇಲಾಖೆಯ ಸಹಾಯಧನ ಸಿಕ್ಕುವುದಿಲ್ಲ.
ಯುಗಾದಿ ಕಳೆದ ರಾಮನವಮಿಗೆ ಬಹುತೇಕ ಎಲ್ಲ ಊರುಗಳಲ್ಲೂ ಒಂದೆರಡು ದಿನದಿಂದ ಹಿಡಿದು ತಿಂಗಳ ವರೆಗೂ ಸಂಗೀತನಾಟಕ ಉಪನ್ಯಾಸಗಳು ಜರುಗುತ್ತವೆ. ಸ್ಥಳೀಯ ಸಂಪನ್ಮೂಲದಿಂದಲೇ ನಡೆಯುವ ಆ ಸಮಾರಂಭ ಗಳ ವಿವರ ಇಲಾಖೆಗೆ ಗೊತ್ತೇ ಇರುವುದಿಲ್ಲ. ನಾಡಿನ ಖ್ಯಾತ ಸಂಗೀತ ವಿದ್ವಾಂಸರು ಇಲಾಖೆಯ ಓಚರ್‌ಗೆ ಸಹಿ ಹಾಕದೆಯೂ ಉತ್ತಮ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿರುತ್ತಾರೆ. ಇಂಥದೇ ಆವೃತ್ತಿಗಳು ಗಣೇಶೋತ್ಸವಗಳಲ್ಲೂ ನಡೆಯುತ್ತವೆ. ಊರಿನ ಜನರ ಚಂದಾ ಹಣದಿಂದಲೇ ನಡೆಸುವ ಆರ್ಕೆಸ್ಟ್ರಾ , ನಾಟಕ, ಹರಿಕಥೆಗಳಿಗೆ ಇರುವ ಇತಿಹಾಸ ದೊಡ್ಡದು. ಅರಸೀಕೆರೆ ಮತ್ತು ತಿಪಟೂರು ಗಣಪತಿ ಕಾರ್ಯಕ್ರಮಗಳಿಗೆ ಇರುವ ಜನಾಕರ್ಷಣೆಗೆ ದಶಕಗಳ ಚರಿತ್ರೆಯೇ ಇದೆ. ಇಲ್ಲೂ ಕೂಡ ಅಕಾಡೆಮಿ, ಪರಿಷತ್ತು, ಸಂಸ್ಕೃತಿ ಇಲಾಖೆಯ ಸಹಯೋಗ ಇರುವುದೇ ಇಲ್ಲ!
ಕೆ. ವಿ. ಸುಬ್ಬಣ್ಣನವರ ಕಾಲದಿಂದಲೂ ಹೆಗ್ಗೊàಡಿನಲ್ಲಿ ನಡೆಯುವ ಸಂಸ್ಕೃತಿ ಶಿಬಿರದ ಪರಿಚಯ ಇಲ್ಲದವರೇ ಇಲ್ಲ. ಈಗೆಲ್ಲೋ ಅಲ್ಪಸ್ವಲ್ಪ ಸಹಾಯಧನ ನೀಡುವ ಸರ್ಕಾರದ ಹಂಗಿಲ್ಲದೆಯೂ ಅನೇಕ ವರ್ಷ ಶಿಬಿರ ನಡೆಸಿದ ಕೀರ್ತಿ ಹೆಗ್ಗೊàಡಿನ ನೀನಾಸಂ ಸಂಸ್ಥೆಗೆ ಸೇರಿದೆ.
ಪುಸ್ತಕ ಪ್ರಕಟಿಸಿ, ಊರಿಂದ ಊರಿಗೆ ಅವನ್ನು ಹೊತ್ತೂಯ್ದು ಪುಸ್ತಕ ಪರಿಚಾರಿಕೆಯನ್ನೇ ಮಾಡಿಕೊಂಡಿದ್ದ ಅನೇಕ ಮಹನೀಯರ ಕಥೆ ನಮಗೆಲ್ಲ ಗೊತ್ತು. ಅವರ್ಯಾರಿಗೂ ಗ್ರಂಥಾಲಯ ಇಲಾಖೆಯ “ಬಲ್ಕ… ಪರ್ಚೇಸ್ ಸ್ಕೀಮ್’ ಗೊತ್ತೇ ಇರದಿದ್ದರೂ ಪುಸ್ತಕ ಪ್ರಕಟಿಸಿ ಓದುಗರ ಮನೆಗೂ ಮನಕ್ಕೂ ಮುಟ್ಟಿಸುತ್ತಿದ್ದರು.
ಈ ಮೇಲೆ ಹೇಳಿದ ಎಲ್ಲ ಕಾರ್ಯಗಳಲ್ಲಿ ಸಾರ್ವಜನಿಕರ ಪಾತ್ರ ಇರುತ್ತದೆ. ಎಲ್ಲರಿಗೂ ಮುಕ್ತ ಅವಕಾಶ ಇರುತ್ತದೆ. ಲೆಕ್ಕಪತ್ರಗಳು ಸರಿಯಾಗಿರುತ್ತವೆ. ಪಾರದರ್ಶಕತೆ ಇಲ್ಲದೇ ಹೋದರೆ ಸಂಘಸಂಸ್ಥೆಗಳನ್ನು ನಡೆಸುವುದು ಕಷ್ಟ ಅಂತ ಆ ಸಂಸ್ಥೆಗಳ ಪದಾಧಿಕಾರಿಗಳಿಗೆ ಗೊತ್ತಿರುತ್ತದೆ.
ಆದರೆ, ವರ್ಷವರ್ಷವೂ ನಡೆಯುವ ಸಾಹಿತ್ಯ ಸಮ್ಮೇಳನವೆಂಬ ಜನಜಾತ್ರೆಗೆ ಸಾಹಿತ್ಯ ಪರಿಷತ್ತು ಸರ್ಕಾರ ದಿಂದ ನೇರವಾಗಿ ಒಂದು ಕೋಟಿ ರೂಪಾಯಿ ಪಡೆಯುತ್ತದೆ. ಇನ್ನು ಸಮ್ಮೇಳನ ನಡೆಯುವ ಜಿಲ್ಲೆಯ ಸರ್ಕಾರೀ ನೌಕರರ ಒಂದು ದಿನದ ಸಂಬಳ ಸ್ಥಳೀಯ ಸಂಪನ್ಮೂಲ ಸೇರಿ ಹತ್ತಿರ ಹತ್ತಿರ ಆರೆಂಟು ಕೋಟಿ ಹಣಕ್ಕೆ ಲೆಕ್ಕಪತ್ರ ಕೊಡುವ ಗೋಜಿಗೆ ಪರಿಷತ್ತು ಹೋಗುವುದೇ ಇಲ್ಲ. ಈಗೀಗ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮ್ಮೇಳನಗಳಿಗೂ ಆರ್ಥಿಕ ಸಹಾಯ ಬರತೊಡಗಿದ್ದು ಸಮ್ಮೇಳನ ನಡೆಸುವುದನ್ನೇ ಉದ್ದಿಮೆ ಮಾಡಿ ಕೊಂಡು ನೆಮ್ಮದಿಯ ಜೀವನ ನಡೆಸುತ್ತಿರುವವರೂ ಇದ್ದಾರೆ !
ಅಕಾಡೆಮಿಗಳು, ಪ್ರಾಧಿಕಾರಗಳು
ಇನ್ನು ಕನ್ನಡ-ಸಂಸ್ಕೃತಿ ಇಲಾಖೆಯ ಕೆಳಗೆ ಲೆಕ್ಕಕ್ಕೆ ಸಿಕ್ಕದಷ್ಟು ಅಕಾಡೆಮಿಗಳಿವೆ. ಅವಕ್ಕೆ ಸರ್ಕಾರಕ್ಕೆ ಬೇಕಾದಅಧ್ಯಕ್ಷರಿದ್ದಾರೆ. ಆ ಅಧ್ಯಕ್ಷರು ನೇಮಿಸುವ ಸದಸ್ಯರಿದ್ದಾರೆ. ಅವರ ಖರ್ಚು ಕಾರ್ಯಕ್ರಮಗಳಿಗೆಂದು ಆ ಎಲ್ಲ ಅಕಾಡೆಮಿ ಗಳಿಗೆ ವರ್ಷಕ್ಕೆ ಇಂತಿಷ್ಟೆಂದು ಹಣ ಬಿಡುಗಡೆಯಾಗುತ್ತದೆ, ಕೋಟಿಗಳ ಮೊತ್ತದಲ್ಲಿ. ಸಾರ್ವಜನಿಕರಿಗೆ ನಯಾಪೈಸೆ ಉಪ ಯೋಗವಾಗದ ಕಾರ್ಯಕ್ರಮಗಳನ್ನು ಈ ಎಲ್ಲ ಸಂಸ್ಥೆಗಳೂ ನಡೆಸುತ್ತವೆ ಅಥವಾ ನಡೆಸಿದಂತೆ ಮಾಡುತ್ತವೆ. ಸರ್ಕಾರ ಬಿಡುಗಡೆ ಮಾಡಿದ ಹಣಕ್ಕೆ ಬಿಲ್ಲು ತೋರಿಸುತ್ತವೆ.
ಸರ್ಕಾರವೇ ಸೃಷ್ಟಿಸಿದ ಯಾವ ಯಾವುದೋ ಪ್ರಾಧಿಕಾರಗಳಿವೆ. ಯಥಾಪ್ರಕಾರ ಅವುಗಳ ಅಧ್ಯಕ್ಷರ ಆಯ್ಕೆಗೆ ಇಲ್ಲದ ಕಸರತ್ತು ನಡೆದು ರಾಜಕಾರಣ ಗೊತ್ತಿರುವ ತಜ್ಞರು ಆಯ್ಕೆಯಾಗುತ್ತಾರೆ. ಒಂದೊಂದು ಪ್ರಾಧಿಕಾರಕ್ಕೂ ರಿಜಿಸ್ಟ್ರಾರರು ಸಿಬ್ಬಂದಿ ಕಾರ್ಯಕ್ರಮಗಳು ಎಂದೆಲ್ಲ ಪಟ್ಟಿ ತೋರಿಸಿ ಸರ್ಕಾರದ ಅನುದಾನಕ್ಕೆ ದುಂಬಾಲು ಬೀಳುವುದು ಸಿಕ್ಕಾಗ ಅಂದಾದುಂದಿ ಖರ್ಚು ಮಾಡುವುದು, ಸಿಗದಿದ್ದಾಗ ಮಾಧ್ಯಮಗಳಲ್ಲಿ ಸುದ್ದಿ ಮಾಡುವುದು ಈ ಪ್ರಾಧಿಕಾರಿಗಳ ಕೆಲಸವಾಗಿದೆ. ಇನ್ನು ಗತಿಸಿ ಹೋದ ಖ್ಯಾತನಾಮರ ಹೆಸರಿನ ಪ್ರತಿಷ್ಠಾನಗಳೂ ಇಂಥದೇ ದಂಧೆಯಲ್ಲಿ ಮುಳುಗಿವೆ.
ಸಂಘ-ಸಂಸ್ಥೆಗಳು ನಡೆಸುವ ಕನ್ನಡಪರ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಜನರನ್ನು ತಲುಪುತ್ತಿವೆ? ಅವು ಅಷ್ಟೆಲ್ಲ ಕಾರ್ಯಕ್ರಮಗಳನ್ನು ನಡೆಸಿ ಕನ್ನಡದ ಮೇಲಿನ ಅಭಿಮಾನವನ್ನು ಮೆರೆದಿದ್ದರೆ ಕನ್ನಡ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತಿತ್ತೆ?
-ರಾಮಸ್ವಾಮಿ ಡಿ. ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.