ಸೆಲಬ್ರೇಟಿಂಗ್ ಕ್ಯಾನ್ಸರ್
Team Udayavani, Aug 13, 2017, 6:10 AM IST
ಲೇಖಕಿಯಾಗಿ ಕವಯತ್ರಿಯಾಗಿ ನಾಟಕಕಾರ್ತಿಯಾಗಿ ಸಾಕಷ್ಟು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ವಿಯಾಗಿರುವ ಮುಂಬೈಯ ವಿಭಾರಾಣಿ ಹೇಳಿದ ಸತ್ಯ ಕತೆ.
ಒಂದೆರಡು ದಿನಗಳ ನಂತರ ನಾನು ಕನ್ನಡಿಯ ಮುಂದೆ ಮತ್ತೆ ನಿಂತಿದ್ದೆ. ನಾನು ಮಿ. ಜಿನ್ನಾ ನಾಟಕ ಮಾಡುತ್ತಿದ್ದಾಗ ಹಲವಾರು ಬಾರಿ ಗಾಂಧಿ ಪಾತ್ರದ ಬಗ್ಗೆ ಯೋಚಿಸಿದ್ದೆ. ಆದರೆ, ಆ ಪಾತ್ರವನ್ನು ನಿರ್ವಹಿಸುವ ಧೈರ್ಯವಿರಲಿಲ್ಲ. ಆದರೆ ಈಗ ನನ್ನ ಬೋಳುತಲೆಯನ್ನು ಕಂಡು ಗಾಂಧಿ ಪಾತ್ರದ ನೆನಪಾಗಿ ನನಗೇ ಖುಷಿಯೆನಿಸಿತು. ಮನೆಯಲ್ಲಾಗಲಿ, ಹೊರಗಾಗಲಿ ಶಾಲಿನಿಂದ ಅದನ್ನು ಮುಚ್ಚಿಕೊಳ್ಳುವುದನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟೆ. ಅಂಥ ಆತ್ಮವಿಶ್ವಾಸ ನನ್ನದು. ನನ್ನನ್ನು ನೋಡಿ ಕೆಲವರು, “ಈ ಸ್ಟೈಲ್ ನಿಮಗೆ ಹೊಂದುತ್ತದೆ’ ಎಂದು ಹೇಳತೊಡಗಿದರು. ಇನ್ನೊಬ್ಬರು, “ಬೌದ್ಧ ಬಿಕ್ಕುವಿನಂತೆ ಕಾಣುತ್ತೀ’ ಅಂದರು. ಮತ್ತೂಬ್ಬರಂತೂ, “ನೀವು ವಾಟರ್ ಚಿತ್ರದಲ್ಲಿದ್ದ ಶಬಾನಾ ಆಜ್ಮಿ ಥರಾನೇ ಕಾಣುತ್ತಿದ್ದೀರಲ್ರಿ’ ಎಂದರು. ಮೊದಲಿನಿಂದಲೂ ಜನರು ಶಬಾನಾಳೊಂದಿಗೆ ನನ್ನನ್ನು ಹೋಲಿಕೆ ಮಾಡುತ್ತಲೇ ಬಂದಿರುವುದರಿಂದ ಈಗಂತೂ ನಾನು ಮತ್ತಷ್ಟು ಖುಷಿಯಾಗಿದ್ದೆ. “ನಾನು ಅವಳಂತಲ್ಲ, ಅವಳು ನನ್ನಂತೆ ಕಾಣುತ್ತಾಳೆ’ ಎಂದೇ ಕೊಚ್ಚಿಕೊಳ್ಳತೊಡಗಿದ್ದೆ. (ನನ್ನದೂ ಒಂದು ಸ್ಟೇಟಸ್ ಆಗಿಬಿಟ್ಟಿದೆಯಲ್ಲವೇ ಈಗ: ಲೇಖಕಿ, ಕವಯತ್ರಿ, ನಾಟಕಕಾರ್ತಿ, ರಂಗಭೂಮಿ ಕಲಾವಿದೆ… ಇನ್ನೂ ಏನೇನೋ!)
ಕೀಮೋ ಪೋರ್ಟ್ ನೀಡಲಿಲ್ಲವಾದ ಕಾರಣ ಇಂಟ್ರಾವೇನಸ್ ಕೀಮೋ ಅನ್ನು ನನಗೆ ನೀಡಲಾಯಿತು. ಆದರೆ ಮೂರನೇ ಕೀಮೋ ತಲುಪುವಷ್ಟರಲ್ಲೇ ಸೂಕ್ಷ್ಮನರಗಳು ಬೆಂಕಿಕಾರತೊಡಗಿದ್ದವು. ಆ ಜಾಗಗಳು ಕಪ್ಪಗಾಗಿ ನೋವು ಹೆಚ್ಚಾಗತೊಡಗಿತ್ತು. ಹೊಸಸುದ್ದಿಯೊಂದು ವೈದ್ಯರಿಂದ ನನಗಾಗಿ ಕಾದಿತ್ತು. “”ನಿಮ್ಮ ನರಗಳು ತುಂಬಾ ಸೂಕ್ಷ್ಮಅನಿಸುತ್ತೆ. ಸಾಮಾನ್ಯವಾಗಿ ಆರು ತಿಂಗಳ ನಂತರ ಆಗುವಂತಹ ಈ ಪರಿಣಾಮಗಳು ನಿಮಗೆ ಒಂದೂವರೆ ತಿಂಗಳಲ್ಲೇ ಆಗಿವೆ. ಇನ್ನೂ ಹದಿಮೂರು ಕೀಮೋಗಳು ಬಾಕಿಯಿವೆ. ಹೀಗಾಗಿ, ಕೀಮೋಪೋರ್ಟ್ ಅನ್ನು ಮಾಡಲೇಬೇಕು. ಇದಕ್ಕಾಗಿ ಮತ್ತು ಇನ್ನೊಂದು ಮಾರ್ಜಿನ್ ಟೆಸ್ಟ್‌ಗಾಗಿ ಮತ್ತೂಂದು ಶಸ್ತ್ರಚಿಕಿತ್ಸೆ ಮಾಡೋಣ.”
ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳು ಎಂಥವೆಂದರೆ ಇಲ್ಲಿ ಈ ಕ್ಷೇತ್ರದ ದಿಗ್ಗಜರಿಗೆ ಶರಣಾಗದೆ ವಿಧಿಯಿಲ್ಲ. ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾದ ಜಾಗದಿಂದಲೇ ಈ ಬಾರಿ ಮಾದರಿಯನ್ನು ತೆಗೆದು ಮಾರ್ಜಿನ್ ಟೆಸ್ಟ್ ಗಾಗಿ ಪರೀಕ್ಷಿಸಲಾಯಿತು. ಹೀಗೆ ಮಾಡಿದರಷ್ಟೇ ಕ್ಯಾನ್ಸರ್ ಕೋಶಗಳ ಆ ಕ್ಷಣದ ಸ್ಥಿತಿಯ ಅರಿವಾಗುತ್ತದಂತೆ. ಇದರ ರಿಪೋರ್ಟು ಕೂಡ ಬಂದಾಯಿತು. ಅಪಾಯದಿಂದ ದೂರಾಗಿದ್ದೇನೆ ಎಂಬ ಸಿಹಿಸುದ್ದಿಯನ್ನು ಈ ಬಾರಿ ವೈದ್ಯರು ನನಗೆ ನೀಡಿದರು. ಆದರೆ ಕೀಮೋ, ರೇಡಿಯೇಷನ್, ನಿಯಮಿತ ಆಹಾರ ಮತ್ತು ವಿಶ್ರಾಂತಿಗಳಿಗೆ ಯಾವುದೇ ವಿನಾಯಿತಿ ಇರಲಿಲ್ಲ. ಮೊದಲು ನಾಲ್ಕು ಕೀಮೋಗಳ ಒಂದು ಪಂಕ್ತಿಯ ನಂತರ ವಾರಕ್ಕೊಂದರಂತೆ ಹನ್ನೆರಡು ಕೀಮೋಗಳು. ಕೀಮೋ ಎಂದರೆ ಇಡೀ ದಿನವನ್ನೇ ತಿಂದುಹಾಕುವಂಥಾದ್ದು. ಮನೆಯಿಂದ ಆಹಾರವನ್ನೂ ಕೆಲವೊಮ್ಮೆ ಕದ್ದು ತರುತ್ತಿದ್ದೆ. ಪ್ರತೀ ಕೀಮೋದಲ್ಲೂ ಅದರದ್ದೇ ಆದ ಮುಗಿಯದ ತಾಪತ್ರಯಗಳು. ಒಮ್ಮೆ ಸಲೀಸಾಗಿ, ಆದರೆ ಇನ್ನೊಮ್ಮೆ ಮತ್ತೇನೋ ಸಮಸ್ಯೆ.
ಇವೆಲ್ಲವೂ ಕಮ್ಮಿಯೆಂಬಂತೆ ಈ ಮಧ್ಯೆ ಹೊಸ ಸೋಂಕಿಗೀಡಾಗಿ ಹತ್ತು ದಿನಗಳ ಮಟ್ಟಿಗೆ ಮತ್ತೆ ಆಸ್ಪತ್ರೆ ಸೇರಬೇಕಾಯಿತು. ಮತ್ತದೇ ಪರೀಕ್ಷೆಗಳು ಮತ್ತು ಉದ್ದುದ್ದ ಬಿಲ್ಲುಗಳು. “ಈ ಎಲ್ಲಾ ಪರೀಕ್ಷೆಗಳೂ ಬೇಕಿತ್ತೇ?’, ಎಂದು ಕೆಲವೊಮ್ಮೆ ನಾನು ದಂಗಾಗಿದ್ದೂ ಉಂಟು. ಆದರೆ ಮತ್ತದೇ ಮಾತುಗಳು ನೆನಪಾಗುತ್ತಿದ್ದವು. ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳು ಎಂಥವೆಂದರೆ ಇಲ್ಲಿ ಈ ಕ್ಷೇತ್ರದ ದಿಗ್ಗಜರಿಗೆ ಗುಲಾಮರಾಗದೆ ವಿಧಿಯಿಲ್ಲ. ಈ ಸೋಂಕು ಮತ್ತು ತತ್ಸಂಬಂಧಿ ಚಿಕಿತ್ಸೆಯ ಕಾರಣದಿಂದಾಗಿ ನನ್ನ ಕೀಮೋ ಮತ್ತೆ ಹದಿನೈದು ದಿನಗಳಿಗೆ ಮುಂದೂಡಲ್ಪಟ್ಟಿತು. ನನ್ನೊಂದಿಗಿದ್ದ ಉಳಿದ ಮಹಿಳೆಯರ ಕೀಮೋ ಮುಗಿದು ನಗುಮುಖದೊಂದಿಗೆ ಹೊರಹೋಗುತ್ತಿದ್ದುದನ್ನು ನೋಡುತ್ತಿದ್ದೆ. ಆ ಭರವಸೆಯ ನಗುವೇ ಉಳಿದ ರೋಗಿಗಳಿಗೆ ಆಶಾಕಿರಣ. ಮುಂದೆ ಈ ಅವಕಾಶವು ನನಗೂ ಬಂದಿತ್ತು ಮತ್ತು ನಾನೂ ಆ ಭರವಸೆಯ ನಗುವನ್ನು ಚೆಲ್ಲಿಯೇ ಹೊರಬಂದಿದ್ದೆ.
ಮುಂದೆ ಹದಿನಾರು ಕೀಮೋಗಳ ನಂತರ ರೇಡಿಯೇಷನ್. ಮತ್ತದೇ ಪ್ರೊಟೋಕಾಲ್‌ಗಳು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತೀದಿನವೂ ಮೂವತ್ತೈದು ಸಿಟ್ಟಿಂಗ್. ಇದಕ್ಕೆಂದೇ ಪ್ರತ್ಯೇಕವಾಗಿ ಕೌನ್ಸೆಲಿಂಗ್ ಬೇರೆ. ಜೊತೆಗೇ ಲೆಕ್ಕವಿಲ್ಲದಷ್ಟು ನಿಯಮಗಳು. ಆ ಜಾಗವು ತಪ್ಪಿಯೂ ನೀರು, ಸಾಬೂನು, ಕ್ರೀಮು ಇತ್ಯಾದಿಗಳ ಸಂಪರ್ಕಕ್ಕೆ ಬರುವಂತಿಲ್ಲ. ಕ್ಯಾನ್ಸರ್ ಸ್ತನಸಂಬಂಧಿಯಾದರೂ ಕೊಂಚ ದೂರದಲ್ಲಿದ್ದ ಕುತ್ತಿಗೆಯೂ ನರಳುವಂತಾಯಿತು. ನನ್ನ ದನಿಯು ಬಿದ್ದುಹೋಗಿತ್ತು. ರೇಡಿಯೇಷನ್ ಮಾಡಿದ ಜಾಗಗಳು ನಿಧಾನವಾಗಿ ಕಪ್ಪಗಿನ ಕಲೆಗಳನ್ನು ಉಳಿಸತೊಡಗಿದ್ದವು. ಒಂದು ಸುತ್ತು ಪೂರ್ಣವಾದ ನಂತರ ಮತ್ತದೇ ಒಂದು ತಿಂಗಳ ವಿಶ್ರಾಂತಿ.
ಕಾಯಿಲೆಗಿಂತಲೂ ಬಿಝಿ !
ಹೀಗೆ ಚಿಕಿತ್ಸಾ ಸಂಬಂಧಿ ಚಟುವಟಿಕೆಗಳೆಲ್ಲವೂ ನಿಗದಿತ ವೇಳಾಪಟ್ಟಿಯಂತೆಯೇ ಮುನ್ನಡೆಯುತ್ತಿದ್ದವು. ಆದರೆ, ತನ್ನ ವೈಯಕ್ತಿಕ ಜೀವನದ ವೇಳಾಪಟ್ಟಿಯು ನೆಲಕಚ್ಚಿತ್ತು. ಹೀಗಾಗಿ, ತನ್ನನ್ನು ತಾನು ಯಾವುದಾದರೊಂದು ಚಟುವಟಿಕೆಯಲ್ಲಿ ವ್ಯಸ್ತಗೊಳಿಸದೇ ಬೇರೆ ದಾರಿಯಿರಲಿಲ್ಲ. ಆದರೆ ಕೀಮೋ ನಡೆದ ಎರಡು ವಾರಗಳ ಬಳಿಕವೂ ನೆಟ್ಟಗೆ ಎದ್ದು ನಿಂತುಕೊಳ್ಳುವ ಸ್ಥಿತಿಯಲ್ಲೂ ನಾನಿರಲಿಲ್ಲ. ಅನಂತರ ಕೊಂಚ ವಾಸಿ ಎಂಬ ಸ್ಥಿತಿ. ವಾರಕ್ಕೊಮ್ಮೆ ಕೀಮೋ ಮಾಡುವ ದಿನಗಳಲ್ಲಿ ನಾನು ಮತ್ತಷ್ಟು ಸೋತುಹೋಗುತ್ತಿದ್ದೆ. ಆರೋಗ್ಯವು ಕೊಂಚ ಸುಧಾರಿಸುತ್ತಿದೆ ಎನ್ನುವಷ್ಟರಲ್ಲಿ ಮತ್ತೂಂದು ಕೀಮೋ ನನ್ನನ್ನು ಎದುರಾಗಲು ಕಾಯುತ್ತಿತ್ತು. ಆದರೆ ಈ “ಕೊಂಚ ವಾಸಿ’ ಎನ್ನುವ ದಿನಗಳನ್ನು ನಾನು ಮೂರು ಚಟುವಟಿಕೆಗಳಿಗಾಗಿ ವಿಭಾಗಿಸಿದ್ದೆ: ಓದು, ಬರಹ ಮತ್ತು ವೀಡಿಯೋ ಚಿತ್ರಣ. ಹಿಂದಿ, ಇಂಗ್ಲಿಷ್ ಮತ್ತು ಮೈಥಿಲೀ ಭಾಷೆಗಳ ಬಹಳಷ್ಟು ಪುಸ್ತಕಗಳನ್ನು ಈ ಅವಧಿಯಲ್ಲೇ ಓದಿ ಮುಗಿಸಿದೆ. ಕೆಲ ಕಥೆಗಳನ್ನೂ, ಕವಿತೆಗಳನ್ನೂ ಮತ್ತು ಮಟನ್ ಮಸಾಲಾ ಚಿಕನ್ ಚಿಲ್ಲಿ ಎಂಬ ನಾಟಕವನ್ನೂ ಬರೆದೆ. ಮುಂದೆ ಈ ನಾಟಕದ ನಿರ್ಮಾಣವನ್ನೂ ಮಾಡಿದೆ. ಈ ಅವಧಿಯಲ್ಲಿ ಬರೆದ ಕವಿತೆಗಳ ಸಂಗ್ರಹವು “ಕ್ಯಾನ್’ ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ತಯಾರಿವೆ. ಸದ್ಯಕ್ಕೆ ಸೆಲೆಬ್ರೇಟಿಂಗ್ ಕ್ಯಾನ್ಸರ್ ಎಂಬ ಆತ್ಮಕಥನವೊಂದನ್ನು ಬರೆಯುತ್ತಿರುವೆ. ಸಾಹಿತ್ಯಿಕ ಶೈಲಿಯಲ್ಲಿ ಕ್ಯಾನ್ಸರ್ ಬಗ್ಗೆ ಮಾಹಿತಿಯನ್ನೊದಗಿಸುವ, ಕ್ಯಾನ್ಸರ್ ಎಂಬ ಹೆಸರಿನಿಂದಲೇ ಹೆದರದಂತೆ ಧೈರ್ಯ ಹೇಳುವ, ರೋಗದೊಂದಿಗೆ ಸೆಣಸಾಡುವ ಮತ್ತು ಧನಾತ್ಮಕ ಚಿಂತನಾಕ್ರಮಗಳನ್ನು ಈ ಅವಧಿಯಲ್ಲಿ ಅಳವಡಿಸಿಕೊಳ್ಳುವಂತಹ ಅಂಶಗಳನ್ನು ಈ ಕೃತಿಯು ಹೇಳಲಿದೆ. ಇನ್ಸಾಗ್ರಾಮಿನಲ್ಲಿ ಹದಿನೈದು ಸೆಕೆಂಡುಗಳ ವೀಡಿಯೋ ತಯಾರು ಮಾಡಲೂ ಸಹ ಅವಕಾಶವಿದ್ದುದರಿಂದ ಭೋಜಪುರಿ ಹಾಡುಗಳು ಮತ್ತು ಮಕ್ಕಳ ಮಾತುಗಳ ಕೆಲ ವೀಡಿಯೋಗಳನ್ನು ಮಾಡಿ ಯೂಟ್ಯೂಬಿನಲ್ಲಿ ಹರಿ ಯಬಿಟ್ಟಿದ್ದೆ. ನಂತರ ಅವುಗಳನ್ನು ಎಡಿಟ್ ಮಾಡಿ ಮಿನಿಚಿತ್ರಗಳನ್ನು ತಯಾರು ಮಾಡಿದ್ದೂ ಆಯಿತು. ಡಯಟ್ ಆಗಿ ನಿತ್ಯವೂ ಹಣ್ಣುಗಳನ್ನು ಹೇರಳವಾಗಿ ತಿನ್ನಬೇಕಿತ್ತು. “ಸತ್ಯಮೇವ ಜಯತೇ’ ಕಾರ್ಯಕ್ರಮದಲ್ಲಿ ಹೊಸಹೊಸ ಖಾದ್ಯಗಳನ್ನು ತಯಾರಿಸುವ ಬಗ್ಗೆ ಒಮ್ಮೆ ಹೇಳಿದ್ದರು. ಅದನ್ನು ನೋಡಿಕೊಂಡು ಹಣ್ಣುಗಳ ಸಿಪ್ಪೆಗಳನ್ನೇ ಬಳಸಿ ಕೆಲವೊಂದು ಖಾದ್ಯಗಳನ್ನು ತಯಾರಿಸುವುದನ್ನು ಕಲಿತೆ. ಆಗೊಮ್ಮೆ ಈಗೊಮ್ಮೆ ಗಾರ್ಡನಿಂಗ್ ಕೂಡ ಮಾಡುತ್ತಿದ್ದೆ. ಬಸಳೆಸೊಪ್ಪಿನ ದಂಟುಗಳು ಆರೋಗ್ಯವಾಗಿ ಮೇಲಕ್ಕೆದ್ದಾಗ ನನ್ನ ಖುಷಿಗಂತೂ ಪಾರವೇ ಇರಲಿಲ್ಲ.
“ಅವಿತೋಕೋ ಕ್ರಿಯೇಟಿವ್ ಈವನಿಂಗ್’ ಎಂಬ ಅದ್ಭುತ ಸಂಜೆಗಳು ಈ ಅವಧಿಯಲ್ಲೇ ಜನ್ಮತಾಳಿದವು. “ರೂಮ್ ಥಿಯೇಟರ್’ ಎಂಬ ಕಲ್ಪನೆಯ ಕೂಸಿದು. ಸೋಂಕಿನ ಭಯದಿಂದಾಗಿ ಮನೆಯ ಹೊಸ್ತಿಲು ದಾಟುವ ಅನುಮತಿಯಿಲ್ಲದಿದ್ದುದರಿಂದ ಮನೆಯೊಳಗೇ ಎಲ್ಲವನ್ನೂ ಮಾಡಬೇಕಿತ್ತು. ಶನಿವಾರದ ಕೀಮೋ ಆದ ನಂತರ ಆ ರಾತ್ರಿಯಿಡೀ ನಿದ್ರೆಯೇ ಇಲ್ಲದ ಪರಿಸ್ಥಿತಿ. ಆದರೆ, ರವಿವಾರದ ರೂಮ್ ಥಿಯೇಟರ್‌ಗಾಗಿ ನಾನು ಲವಲವಿಕೆಯಿಂದ ತಯಾರಾಗುತ್ತಿದ್ದೆ. ಬರೋಬ್ಬರಿ ಮೂವತ್ತಾರು ಗಂಟೆಗಳ ನಂತರ ನಿದ್ದೆಯು ಹತ್ತಿರ ಸುಳಿಯುತ್ತಿತ್ತು. ಎಲ್ಲರೂ ತುಂಬುಹೃದಯದಿಂದ ನನಗೆ ಸಹಕಾರವನ್ನು ಕೊಟ್ಟರು. ಹೀಗಾಗಿಯೇ “ಎಕ್ಸ್‌ಪೆರಿಮೆಂಟಲ್ ಥಿಯೇಟರ್’ನಿಂದ ಹಿಡಿದು “ಮಂಟೋ’ ಸೇರಿದಂತೆ ನಾಟಕಗಳ ಹಲವು ಪ್ರಯೋಗಗಳು, ಪ್ರಸ್ತುತಿಗಳು ಮನೆಯೊಳಗೇ ನಡೆದವು. ಇಪ್ಪತ್ತೈದರಿಂದ ಮೂವತ್ತು ಜನರು ಕುಳಿತುಕೊಳ್ಳಬಹುದಾದ ಮನೆಯಲ್ಲಿ ಐವತ್ತರಿಂದ ಎಪ್ಪತ್ತರಷ್ಟು ಜನ ಬರತೊಡಗಿದರು.
ಎಂದೆಂದೂ ಜೀವಂತವಿದ್ದ ನಗು
ಈ ನಡುವೆ 2013 ರಲ್ಲಿ ಗೀತಾಶ್ರೀಯವರ ಸಂಪಾದಕತ್ವದಲ್ಲಿ ಮೂಡಿಬರುತ್ತಿದ್ದ ಬಿಂದಿಯಾ ಎಂಬ ಹಿಂದಿಭಾಷೆಯ ಖ್ಯಾತ ಪತ್ರಿಕೆಯಲ್ಲಿ ನನ್ನ ಲೇಖನವೊಂದು ಪ್ರಕಟವಾಯಿತು. ಆ ಲೇಖನವನ್ನು ಅವರೇ ಬರೆಸಿದ್ದಾದರೂ ಮುಂದೆ ಅವರೇ ಇಕ್ಕಟ್ಟಿಗೆ ಸಿಲುಕುವಂತಾಗಿದ್ದು ವಿಪರ್ಯಾಸ. ಲೇಖನವು ಪ್ರಕಟಗೊಂಡು ಫೇಸ್‌ಬುಕ್ ಗೋಡೆಗಳಿಗೆ ಬರುತ್ತಲೇ ಆಗಿದ್ದು ಅಲ್ಲೋಲಕಲ್ಲೋಲ. ಫೋನು, ಇ-ಮೇಲ್, ಎಸ್ಸೆಮ್ಮೆಸ್ಸುಗಳಿಂದೆಲ್ಲಾ ಸಂದೇಶಗಳದ್ದೇ ಮಹಾಪೂರ. ಎಲ್ಲರೂ ಯಾವ ರೀತಿ ಮೆಸೇಜು ಮಾಡುತ್ತ, ಕರೆ ಮಾಡುತ್ತ ಕಣ್ಣೀರಿಡುತ್ತಿದ್ದರೆಂದರೆ ನಾನು ಸತ್ತೇಹೋಗಿರುವೆನೋ ಎಂಬಂತೆ! ಈ ಕರೆಗಳು, ಸಂದೇಶಗಳು ನನ್ನಲ್ಲಿ ಮಾನಸಿಕ ಸ್ಥೈರ್ಯವನ್ನು ತುಂಬುವ ಬದಲಾಗಿ ಮತ್ತಷ್ಟು ನಕಾರಾತ್ಮಕ ಪ್ರಭಾವಳಿಯನ್ನೇ ಸೃಷ್ಟಿಸಿತು. ನನ್ನ ಪತಿ ಅಜಯ್ ಅಂತೂ ನಾನು ಯಾವುದೇ ಫೋನ್ ಕರೆಗಳನ್ನೂ ಸ್ವೀಕರಿಸುವಂತಿಲ್ಲವೆಂದು ಅಪ್ಪಣೆ ಹೊರಡಿಸಿದ್ದ. ಇನ್ನು ಕೆಲವರು ಬಂದು ಭೇಟಿ ಮಾಡಲಿಚ್ಛಿಸುತ್ತಿದ್ದರು. ಆದರೆ ಆರೋಗ್ಯವನ್ನು ವಿಚಾರಿಸುವುದಕ್ಕಿಂತಲೂ ನನ್ನ ಕುರೂಪಗೊಂಡ ಮುಖವನ್ನು ನೋಡಲೆಂದೇ ವಿಚಿತ್ರ ಕುತೂಹಲದೊಂದಿಗೆ ಬರುತ್ತಿದ್ದರು ಎಂದು ನನಗೆ ಅನ್ನಿಸುತ್ತಿತ್ತು. ಇವರೆಲ್ಲರೂ ಕ್ಯಾನ್ಸರ್ ಬಗ್ಗೆ ಕೇಳಿದ್ದರೇ ಹೊರತು, ಹತ್ತಿರದಿಂದ ನೋಡಿದವರಲ್ಲ. ಇವರೆಲ್ಲರಿಗೂ ನಾನೊಬ್ಬಳು ರೆಡಿಮೇಡ್ ಮಾದರಿಯಾಗಿದ್ದೆ. ಬಂದವರೆಲ್ಲರಿಗೂ ನನ್ನ ಬೋಳುತಲೆಯನ್ನು, ಇಲ್ಲದ ಹುಬ್ಬು-ರೆಪ್ಪೆಗಳನ್ನು ತೋರಿಸುತ್ತ¤, ಜೀವನಪ್ರೀತಿಯನ್ನೇ ಉಸಿರಾಡುತ್ತಿರುವೆಯೆಂಬಂತೆ ತನ್ನನ್ನು ತಾನು ಪ್ರಸ್ತುತಪಡಿಸುತ್ತಿದ್ದೆ. ಏನೇ ಆದರೂ ನನ್ನ ಮುಖದಲ್ಲಿ ನಗುವು ಇನ್ನೂ ಜೀವಂತವಾಗಿತ್ತು ಎಂಬುದಂತೂ ಸತ್ಯ.
ಇವೆಲ್ಲಾ ಜಂಜಾಟಗಳಿಂದ ಈಗ ಹೊರಬಂದಿರುವೆ. ಕೀಮೋ, ರೇಡಿಯೇಷನ್‌ಗಳ ಪ್ರೊಟೋಕಾಲ್‌ಗಳು ಮತ್ತು ನಂತರದ ಒಂದು ತಿಂಗಳ ವಿಶ್ರಾಂತಿಯ ನಂತರ ಆಫೀಸಿಗೆ ಮರಳಿದೆ. ಕೆಲಸಗಳು ನನಗಾಗಿ ಸದಾ ಕಾದಿರುತ್ತವೆಯೋ ಅಥವಾ ಚಟುವಟಿಕೆಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲವೆಂಬ ನನ್ನ ಹುಟ್ಟುಗುಣವೋ ಗೊತ್ತಿಲ್ಲ. ಆಫೀಸಿನ ಪ್ರವಾಸಗಳ ಜೊತೆಗೇ ಸಾಹಿತ್ಯ ಮತ್ತು ರಂಗಭೂಮಿಯ ಎಡೆಬಿಡದ ಚಟುವಟಿಕೆಗಳೂ ಎಂದಿನಂತೆ ಶುರುವಾದವು. 2014 ರ ಸಪ್ಟೆಂಬರಿನಲ್ಲಿ ಎಸ್‌ಆರ್‌ಎಮ್‌ನ ಸಾರಥ್ಯದ ಕಾರ್ಯಕ್ರಮವೊಂದಕ್ಕಾಗಿ ಮುಖ್ಯ ಅತಿಥಿಯಾಗಿ ಚೆನ್ನೈಗೆ ಧಾವಿಸಿದೆ. 2014 ರ ಡಿಸೆಂಬರಿನಲ್ಲಿ ಭಿಕಾರಿನ್ (ಭಿಕ್ಷುಕಿ) ನಾಟಕದ ಪ್ರಥಮ ಪ್ರದರ್ಶನವು ಆಜಂಗಢದಲ್ಲಿ ಯಶಸ್ವಿಯಾಗಿ ನೆರವೇರಿತು. ಆಫೀಸಿನ ಮಹತ್ತರ ಜವಾಬ್ದಾರಿಗಳ ಜೊತೆಗೇ ರಾಯಪುರದ ಸಾಹಿತ್ಯ ಮಹೋತ್ಸವವನ್ನು ಮುನ್ನಡೆಸುವ ಜವಾಬ್ದಾರಿಯೂ ಕೂಡ.
ಅಂತೂ ನನ್ನ ಜೀವನದ ಎರಡನೇ ಇನ್ನಿಂಗ್ಸ್ ಭರ್ಜರಿಯಾಗಿಯೇ ಶುರುವಾಗಿದೆ. ಔಷಧಿಗಳ ದಿನಚರಿಯು ಮುಂದುವರಿದಿದೆ. ಆಹಾರ ಮತ್ತು ವಿಶ್ರಾಂತಿಯ ಬಗ್ಗೆಯೂ ಹೆಚ್ಚಿನ ಗಮನವನ್ನು ಕೊಡಬೇಕಾಗಿ ಸೂಚನೆಗಳು ಬಂದಿವೆ. ನಿಶ್ಶಕ್ತಿಯು ಇನ್ನೂ ಇದ್ದರೂ ಚಟುವಟಿಕೆಗಳಿಂದ ಕೂಡಿದ ದೇಹ, ಮನಸ್ಸು ಎಲ್ಲವನ್ನೂ ಮರೆಸಿಬಿಡುತ್ತದೆ. ಅಜಯ್, ಮಕ್ಕಳಾದ ಕೋಶಿ ಮತ್ತು ತೋಶಿ ನನಗೆ ಯಾವಾಗಲೂ ಏನಾದರೊಂದು ತಿಳಿಹೇಳುತ್ತಿರುತ್ತಾರೆ. ಅಂತೆಯೇ ನಾನು ಅವರಿಗೂ, ತನಗೂ ಏನಾದರೊಂದು ತಿಳಿಹೇಳುತ್ತಿರುತ್ತೇನೆ. ತನ್ನೊಂದಿಗೇ ಸೆಣಸಾಡಲು, ತನ್ನನ್ನು ತಾನು ಅಣಿಗೊಳಿಸಲು ಸ್ವಲ್ಪ ಕಾಲಾವಧಿಯು ಬೇಕಾಗುತ್ತದೆಂಬುದಂತೂ ಸತ್ಯ. ಆದರೆ ಮಾನಸಿಕ ಸ್ಥೈರ್ಯ ಮತ್ತು ಕುಟುಂಬದ ಸದಸ್ಯರ ಪ್ರೀತಿ, ಸಹಕಾರಗಳು ಕ್ಯಾನ್ಸರ್ ಅಥವಾ ಅದಕ್ಕಿಂತ ಭಯಾನಕ ಮಹಾರೋಗಗಳಿಗೂ ಸಡ್ಡುಹೊಡೆಯಬಲ್ಲ ಸಂಜೀವಿನಿಗಳು. ಈ ಅನುಭವಗಳು ಹಲವು ದಾರಿಗಳನ್ನು ನಮಗಾಗಿ ತೆರೆದಿಡುವುದಂತೂ ಸತ್ಯ. ಅವುಗಳೆಂದರೆ ಆತ್ಮಮಂಥನ, ಆತ್ಮಚಿಂತನೆ, ವಿಶ್ರಾಂತಿಯ ಅಗತ್ಯತೆ, ಆಹಾರದಲ್ಲಿನ ಶಿಸ್ತು, ಮತ್ತು ಎಲ್ಲರ ಅನುಕಂಪವನ್ನು ಎಂಜಾಯ್ ಮಾಡಬಲ್ಲ ಅದೃಷ್ಟ (ತಮಾಷೆಗಂದೆ ಅಷ್ಟೇ). ಕ್ಯಾನ್ಸರ್ ನಿಮಗಾಗಿದ್ದರೆ ನನ್ನ ದೇಹಸೌಂದರ್ಯವು ಕಳೆಗುಂದುತ್ತಿದೆ ಎಂಬ ಆತಂಕದಲ್ಲಿ ಇರಬೇಡಿ. ಜೀವನವನ್ನು ಜೀವಿಸಲು ಮತ್ತೂಂದು ಅವಕಾಶವು ನಿಮಗಾಗಿ ಒಲಿದುಬಂದಿದೆ ಎಂಬುದನ್ನು ನೆನಪಿನಲ್ಲಿಡಿ. ಈ ಅವಕಾಶವು ನೂರಕ್ಕೆ ನೂರು ಪ್ರತಿಶತವೂ ನಿಮ್ಮದೇ. ಈ ಜೀವನವನ್ನು ಕುಂದದ ಜೀವನಪ್ರೀತಿ ಮತ್ತು ಭರಪೂರ ಆತ್ಮವಿಶ್ವಾಸದಿಂದ ಜೀವಿಸಿ, ನಿನ್ನೊಡನೆ ಕಾದಾಡಲು ನನಗೇನೂ ಭಯವಿಲ್ಲ ಎನ್ನುತ್ತಾ ಕ್ಯಾನ್ಸರಿನಂತಹ ಕ್ಯಾನ್ಸರಿಗೇ ಸವಾಲೆಸೆಯಿರಿ. ಬನ್ನಿ, ನನ್ನೊಂದಿಗೆ ಕೈಜೋಡಿಸಿ, ಲೆಟ್ಸ್ ಸೆಲಬ್ರೇಟ್ ಕ್ಯಾನ್ಸರ್.
ಅವೇನು ದೊಡ್ಡ ಸಂಗತಿಗಳಲ್ಲ,
ಎದೆಯು ಉಬ್ಬಿದೆಯೋ, ಸಪಾಟಾಗಿದೆಯೋ,
ಮುಖದಲ್ಲಿ ಸೌಂದರ್ಯವಿದೆಯೋ ಇಲ್ಲವೋ
ತಲೆಯಲ್ಲಿ ಕೂದಲಿದೆಯೋ ಬಕ್ಕತಲೆಯೋ
ಇವೆಲ್ಲಕ್ಕಿಂತಲೂ ದೊಡ್ಡದೀ ಜೀವನ…
ಸ್ಫೂರ್ತಿಯಿರಲಿ ತಾಜಾತನವಿರಲಿ
ಕ್ಷಣಗಳು ಯೌವನಮಯವಾಗಿರಲಿ
ಜೀವನವನ್ನೇ ಆಚರಿಸೋಣ ಬನ್ನಿ
ಇನ್ನಿಲ್ಲದಂತೆ ಜೀವಿಸೋಣ ಬನ್ನಿ…
ಪ್ರಸಾದ್ ನಾೖಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.