ವಾರೀಸುದಾರರಿಲ್ಲದ ಕುರ್ಚಿ ಮತ್ತು ಖಾಲೀತನ !


Team Udayavani, Dec 29, 2019, 5:05 AM IST

79

ಕಚೇರಿಯಲ್ಲಿ ತನ್ನ ಬದಿಯ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದವರೊಬ್ಬರು ಇದ್ದಕ್ಕಿದ್ದಂತೆ ಬರುವುದನ್ನು ನಿಲ್ಲಿಸಿದರೆ ಏನಾಗುತ್ತದೆ? ಒಂದು ಬಗೆಯ ಖಾಲೀತನ ಕಾಡಲಾರಂಭಿಸುತ್ತದೆ ! ಭಾರತವಾದರೆ ಏನು, ಇಂಗ್ಲೆಂಡ್‌ ಆದರೇನು, ಮತ್ತೂಂದು ದೇಶವಾದರೇನು- ಖಾಲೀತನ ಎಂಬುದು ಒಂದು ಸಾರ್ವತ್ರಿಕ ಭಾವನೆ.

ಇಂಗ್ಲೆಂಡಿನ ಬ್ರಿಸ್ಟಲ್‌ನಲ್ಲಿರುವ ನಮ್ಮ ಕಚೇರಿಯ ಇವಳ ಬಗ್ಗೆ ಹೇಳು ವಾಗ ನಾವು ಕೂಡುವ, ಕೆಲಸ ಮಾಡುವ ಕೋಣೆಯ ಭಾಗವೊಂದು ಕಳೆದ ಎಂಟು ತಿಂಗಳು ಖಾಲೀತನದಲ್ಲಿದ್ದ ಬಗ್ಗೂ ಹೇಳಬೇಕು. ಎಲ್ಲೆಲ್ಲೂ ಇರುವ ಎದುರಾಗುವ ಖಾಲಿಗಳ ನಡುವೆ ಹೀಗೊಂದು ಖಾಲೀತನ ನಮ್ಮ ಮಧ್ಯೆ ಅಚಾನಕ್‌ ಉಂಟಾದದ್ದು ನಮಗೆಲ್ಲ ಅಹಿತಕರ ಅನುಭವವೇ ಆಗಿತ್ತು. ಬದುಕಿನ ಇಲ್ಲಿಯವರೆಗಿನ ಅಲೆದಾಟ-ಓಡಾಟಗಳೆಲ್ಲ ಏನನ್ನೋ ಒಳಗೆ ತುಂಬಿಸಿಕೊಳ್ಳುವುದಕ್ಕೆ ಎಂದು ತಿಳಿಯುವ ನನಗೆ ಹೊರಗಿನ ಈ ಖಾಲೀತನ ಎದುರು ಬಂದು ಮಾತನಾಡಿದಂತೆ ಅನಿಸುತ್ತಿತ್ತು. ಈ ಖಾಲಿಯೊಳಗೆ ಏನೆಲ್ಲ ಎಷ್ಟೆಲ್ಲ ವಿಷಯಗಳಿವೆ. ಖಾಲಿ ಕುರ್ಚಿ, ಅದರ ಎದುರಿರುವ ಮೇಜು, ಮೇಜಿನ ಮೇಲೆ ಗಣಕಯಂತ್ರ, ಸುತ್ತ ಚದುರಿದ ಕಾಗದಗಳು, ಕಾಗದಗಳ ನಡುವಿನ ಪೆನ್ನು ಎಲ್ಲವೂ ಬಹುಕಾಲದಿಂದ ವಾರೀಸುದಾರರಿಲ್ಲದೆ ತಮಗಿಷ್ಟ ಬಂದ ದಿಕ್ಕಿಗೆ ಮುಖ ಮಾಡಿಕೊಂಡಿದ್ದವು. ಖಾಲಿತನದ ಈ ಎಲ್ಲ ಸಾಕ್ಷಿದಾರರು ಕಕ್ಷಿದಾರರು ಅದೆಂದೋ ಒಂದು ಕ್ಷಣದಿಂದ ಹೀಗೆ ಚದುರಿಕೊಂಡು ಇದ್ದವು. ಇವರನ್ನು ಹೀಗೆ ಯಾರೋ ಎಂದೋ ಬಿಟ್ಟು ಹೋದ ಒಂದು ಕ್ಷಣವನ್ನು ಮತ್ತೆ ಮತ್ತೆ ನೆನಪಿಸುತ್ತ ಅಲ್ಲೊಂದು ಸ್ಮಾರಕದಂತೆ ಕುಳಿತಿದ್ದವು. ಮೇಜಿನ ಮೇಲಿನ ಧೂಳು ಹೊಡೆಯುವುದು, ಹರಡಿದ ಕಾಗದ ಪತ್ರಗಳನ್ನು ಜೋಡಿಸುವುದಕ್ಕೆ ಬೇಕಾದ ಎದೆಗಾರಿಕೆ ನಮಗ್ಯಾರಿಗೂ ಇರಲಿಲ್ಲ. ಮತ್ತೆ ನಮ್ಮ ಅಶಿಸ್ತು-ಅವ್ಯವಸ್ಥೆಗಳನ್ನು ಹದ್ದುಬಸ್ತಿನಲ್ಲಿಡುವ ಕಚೇರಿಯ ಕಸ ಹೊಡೆಯುವಾಕೆ ಈ ಖಾಲಿ ಕುರ್ಚಿಯ ಆಸುಪಾಸನ್ನು ನಿಷೇಧಿತ ಪ್ರದೇಶದಂತೆ ಮುಟ್ಟದೇ ದೂರದಿಂದಲೇ ಕೆಲಸ ಮುಗಿಸಿ ಹೋಗುತ್ತಿದ್ದಳು. ಕೆಲಸಕ್ಕೆ ಸಂಬಂಧಿಸಿದ ಸಣ್ಣ ಮಾತುಕತೆಗೆ ಹೊರಗಡೆಯಿಂದ ಅಂದರೆ ಕಚೇರಿಯ ಬೇರೆ ಭಾಗದಿಂದ ನಮ್ಮಲ್ಲಿಗೆ ಬಂದು ಹೋಗುವವರು ಈ ಮೂಲೆಯ ಖಾಲಿ ಕುರ್ಚಿಯನ್ನು ಬೇಕೆಂದಲ್ಲಿಗೆ ದರದರ ಎಳೆದುಕೊಂಡು ಹೋಗಿ ಬಳಸಿದ್ದುಂಟು ಅಥವಾ ಚರ್ಚೆ-ಮಾತುಕತೆಗಳಿಗೆ ಮೀಸಲಾದ ಕೊಠಡಿಗಳಲ್ಲಿ ಕುರ್ಚಿಗಳು ಕಡಿಮೆ ಬಿದ್ದರೆ ಈ ಕುರ್ಚಿಯನ್ನು ದೂಡಿಕೊಂಡು ಹೋದದ್ದೂ ಇದೆ. ಹೀಗೆ ಇಲ್ಲಿ ಖಾಲಿ ಎನಿಸುವ ಕುರ್ಚಿಯನ್ನು ಎಲ್ಲಿನದೋ ಖಾಲಿ ತುಂಬಿಸಲು ಬಳಸಿದಾಗ ಈ ಕುರ್ಚಿಯ ಪರಿಚಯಸ್ಥರಾದ ನಮಗೆ ಕಳವಳ-ಉದ್ವೇಗ ಆದದ್ದಿದೆ.

ಎಂಟು ತಿಂಗಳ ಹಿಂದಿನ ಐದು ವರ್ಷಗಳ ಕಾಲ ಇದೇ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದವಳು ನಮ್ಮ ಸಹೋದ್ಯೋಗಿ. ನಕ್ಷತ್ರ-ತಿಥಿಗಳ ಪ್ರಕಾರ ಅವಳು ಹುಟ್ಟಿದ್ದು ಈಸ್ಟರ್‌ ಹಬ್ಬದ ಆದಿತ್ಯವಾರದಂದು. ಅಂದರೆ, ಗುಡ್‌ಫ್ರೈಡೆ ಕಳೆದು ಎರಡು ದಿನಕ್ಕೆ. ಎಪ್ರಿಲ್‌ ತಿಂಗಳಲ್ಲಿ ಬರುವ ಈಕೆಯ ಹುಟ್ಟುಹಬ್ಬಕ್ಕೆ ನಮಗೆ ಪ್ರತಿ ವರ್ಷವೂ ಕೇಕುಗಳು ಸಿಕ್ಕಿವೆ. ಹದಿಹರೆಯ, ನಡುವಯಸ್ಸು, ಹಿರಿತನ, ಮುದಿತನ, ಬಡತನ ಸಿರಿತನ ಹೀಗೆ ಬದುಕಿನ ಘಟ್ಟ ಅಂತಸ್ತು ಹೇಗೆ ಇದ್ದರೂ ಹುಟ್ಟುಹಬ್ಬಕ್ಕೆ ಕೇಕು-ತಿನಿಸುಗಳನ್ನು ತರುವುದು ಈ ದೇಶದ ಜನಪ್ರಿಯ ಸಂಪ್ರದಾಯ. ಚಾಕಲೇಟು ಕೇಕು ಸಿಹಿತಿನಿಸುಗಳು ತಿನ್ನಲು ತಿನ್ನಿಸಲು ವಯಸ್ಸು ಇಲ್ಲಿ ಅಡ್ಡಬರುವುದಿಲ್ಲ; ಆಯುಸ್ಸು ಬರಬಹುದು. ಬಿಳಿ ಹಳದಿ ಕೆಂಪು ಬಣ್ಣಬಣ್ಣದ ಕೇಕುಗಳನ್ನು ಇವಳೂ ತರುವವಳು. ಜೋಡಿಸಿಟ್ಟ ಕೇಕುಗಳ ರಾಶಿಯಲ್ಲಿ ಬದುಕಿನ ಬಣ್ಣಗಳು ಗೋಚರಿಸಿ ಉತ್ಸಾಹದಲ್ಲಿ ತಿಂದು ಮುಗಿಸಿದವರು ಇವಳಿಗೆ ಶುಭ ಹಾರೈಸಿದವರು ನಾವು. ಕೇಕು ತಿಂದು ಬಾಯಿ ಒರೆ‌ಸಿಕೊಳ್ಳುವಾಗ ಅವಳ ವಯಸ್ಸಿಗೆ ಬಹಳ ಬೇಗ ಕೆಲಸದಲ್ಲಿ ಭಡ್ತಿ ಸಿಕ್ಕಿತು ಗುಸುಗುಟ್ಟಿದವರು ಕೆಲವರು. ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಾಳೆ, ಇಷ್ಟು ವೇಗವಾಗಿ ಭಡ್ತಿ ಸಿಗದೇ ಇರಲು ಹೇಗೆ ಸಾಧ್ಯ ಎಂದು ಕೊಂಡಾಡಿದರು ಮತ್ತೆ ಕೆಲವರು. ಇನ್ನು ಕೆಲವರು, “ಹೆಣ್ಣಲ್ಲವೆ, ಬೇಗ ಭಡ್ತಿ ಸಿಗಲೇ ಬೇಕಲ್ಲ’ ಎಂದು ಮೂಗು ಮುರಿದರು. ಕೆಲಸದ ಆಗುಹೋಗುಗಳ ಬಗ್ಗೆ ಗಮನವೇ ಕೊಡದ ಮತ್ತೆ ಕೆಲವರು ಇವಳ ಹೊಳೆಯುವ ಚಿನ್ನದ ಕೂದಲ ರಾಶಿಯ ರಹಸ್ಯ ಏನು ಎಂದು ಮಾತಾಡಿಕೊಂಡರು. ಈ ದೇಶದ ಇಂಗ್ಲಿಷಿನಲ್ಲಿ “ಬ್ಲಾನ್‌x’ ಎಂದು ಕರೆಯಲ್ಪಡುವ ಇವಳ ಹೊನ್ನ ಬಣ್ಣದ ಕೂದಲುಗಳನ್ನು ಕಂಡು ಅಸೂಯೆಪಟ್ಟವರೆಷ್ಟೋ. ವಿಮಾನ ಕಚೇರಿಯ ನಮ್ಮ ತಂಡದಲ್ಲಿ ಅಷ್ಟೂ ಜನ ಗಂಡಸರೇ. ಈಕೆಯೊಬ್ಬಳೇ ಮಹಿಳಾ ಸಹೋದ್ಯೋಗಿ. ಪುರುಷರೇ ತುಂಬಿದ ಮನೆಯಲ್ಲಿ ಹರಕೆ ಹೊತ್ತು ಹುಟ್ಟಿ, ಕೆಲವರಿಂದ ಪ್ರೀತಿ, ಕೆಲವರಿಂದ ಅಸೂಯೆಯನ್ನು ಸಂಪಾದಿಸಿಕೊಂಡು ಬೆಳೆಯುವ ಮಗುವಿನಂತೆ ಇವಳು ನಮ್ಮ ನಡುವೆ ಇದ್ದಳು.

ಇವಳ ಬದುಕೂ ಎಲ್ಲರಂತೇ ಸಾಮಾನ್ಯವಾಗಿಯೇ ಆರಂಭವಾಗಿತ್ತು. ಕೆಲಸ ಸಿಕ್ಕಿ ಮನೆಗೂಡಿನಿಂದ ಹಾರುವ ಸಮಯ ಬಂದಾಗ ಬ್ಯಾಂಕಿನಲ್ಲಿ ಸ್ವಲ್ಪ, ತಾಯಿಯ ಬಳಿ ಸ್ವಲ್ಪ ಸಾಲ ತೆಗೆದುಕೊಂಡು ಸ್ವಂತ ಮನೆ ಖರೀದಿ ಮಾಡಿದ್ದಳು. ಆ ಮನೆಯಲ್ಲಿ ಇವಳು ಮತ್ತೆ ಇವಳ ಕುದುರೆ ಇಬ್ಬರೇ. “ನೀವು ಹೇಗಿದ್ದೀರಿ, ನಿಮ್ಮ ಮನೆಯಲ್ಲಿ ಎಲ್ಲ ಸೌಖ್ಯವೇ’ ಎಂದು ಬೇರೆಯವರನ್ನು ವಿಚಾರಿಸುವವರು ಈಕೆಯನ್ನು “ನಿನ್ನ ಕುದುರೆ ಹೇಗಿದೆ’ ಎಂದು ವಿಚಾರಿಸುತ್ತಿದ್ದರು. ಶನಿವಾರ-ಆದಿತ್ಯವಾರಗಳ ರಜೆ ಮುಗಿಸಿ ಸೋಮವಾರ ಕೆಲಸಕ್ಕೆ ಬಂದಾಗ ಅಥವಾ ಶುಕ್ರವಾರ ವಾರಾಂತ್ಯದ ರಜೆ ಶುರು ಆಗುವ ಮುನ್ನ ಇವಳ ಮಾತುಗಳಲ್ಲಿ ಕುದುರೆಯ ಸುದ್ದಿಗಳೇ ತುಂಬಿರುತ್ತಿದ್ದವು. ಕುದುರೆಯ ಕಾಲುಗಂಟು ನೋವು, ಲಸಿಕೆ ಹಾಕಿಸಿದ್ದು, ಸವಾರಿ ಮಾಡಿದ್ದು , ದುಃಸ್ವಪ್ನ ಬಿದ್ದು ಕುದುರೆ ಬೆಚ್ಚಿದ್ದು, ಗುಡುಗು-ಸಿಡಿಲಿಗೆ ಕುದುರೆ ಕೆನೆದದ್ದು- ಇತ್ಯಾದಿ ಅಶ್ವಪುರಾಣ ನಮಗೆ ವರದಿ ಆಗುತ್ತಿದ್ದವು. ಇವಳನ್ನು ವಿಚಾರಿಸಿದವರು ಕುದುರೆಯ ಕುಶಲೋಪರಿ ಕೇಳದಿದ್ದರೆ ತನಗೆ ಮಹಾ ಅವಮಾನ ಆದಂತೆ ಅವಳಿಗೆ ಅನಿಸುತ್ತಿತ್ತು. ಓಟವೊಂದರಲ್ಲಿ ಪೆಟ್ಟು ಮಾಡಿಕೊಂಡು ಕುದುರೆ ರೋಗಿಯಂತೆ ಮಲಗಿದಾಗ ಇವಳು ರಜೆ ಹಾಕಿದ್ದಳು. ಕುದುರೆ ಊಟ ಬಿಟ್ಟಾಗ ಇವಳೂ ಉಪವಾಸ.

ಎಂಟು ತಿಂಗಳ ಹಿಂದಿನ ಕಡುಚಳಿಯ ಒಂದು ದಿನದಿಂದ ಇವಳು ಆಫೀಸಿಗೆ ಬರಲಿಲ್ಲ. ಮೊದಮೊದಲಿಗೆ ಇವಳ ಅನುಪಸ್ಥಿತಿಗೆ ಇವಳನ್ನು ಬಲ್ಲವರೆಲ್ಲರೂ “ಪಾಪ, ಕುದುರೆಗೆ ಏನಾಯಿತೋ’ ಎಂದು ಮಾತನಾಡಿಕೊಂಡರು. ಕೆಮ್ಮು ತೀವ್ರವಾಗಿ ಅವಳು ರಜೆ ತೆಗೆದುಕೊಂಡಳು ಎಂದು ಆಮೇಲೆ ಸುದ್ದಿ ಬಂದದ್ದು. ವೈದ್ಯರು ಮೊದಲು ನ್ಯುಮೋನಿಯ ಎಂದು ಔಷಧ ಕೊಟ್ಟರು. ಆರೈಕೆ ನಡೆಯಿತು; ಬಯಸಿದ ಫ‌ಲ ಸಿಗಲಿಲ್ಲ. ಈ ವರ್ಷದ ಏಪ್ರಿಲಿನಲ್ಲಿ ಈಕೆಯ ಮೂವತ್ತನೆಯ ಹುಟ್ಟುಹಬ್ಬ. ಕಚೇರಿಯಲ್ಲಿ ಕುಳಿತ ನಾವು ಮರೆತರೂ ಹಾಸಿಗೆಯಲ್ಲಿ ಹೋರಾಡುತ್ತಿದ್ದ ಆಕೆ ಮರೆಯಲಿಲ್ಲ. ಹಿಂದಿನಂತೆಯೇ ಕೇಕುಗಳು ಇವಳ ಮೇಜಿನ ಮೇಲೆ ನಮಗೋಸ್ಕರ ಕಾದಿದ್ದವು. ಮೂವತ್ತರ ಹುಟ್ಟುಹಬ್ಬದ ಸಿಹಿಯನ್ನು ನಾವು ಮೆಲ್ಲುತ್ತಿರುವಾಗ ಆಕೆ ಕೀಮೋ ಥೆರಪಿಯ ತೀವ್ರ ವೇದನೆಯನ್ನು ಅನುಭವಿಸುತ್ತಿದ್ದಳು. ನಾವಾದರೂ ಸಹೋದ್ಯೋಗಿಗಳು, ಹುಟ್ಟಾ ಮನುಷ್ಯರು. ಎಂತಹ ಕಹಿಯೇ ಸುತ್ತ ಹರಡಿದ್ದರೂ ಅವನ್ನೆಲ್ಲ ಅಲ್ಲಲ್ಲೇ ಸರಿಸಿ ನಿವಾರಿಸಿ ಸಿಹಿತಿನಿಸುಗಳನ್ನು ಚೂರು ಹಾಳಾಗಲು ಬಿಡದೆ ತಿಂದು ಮುಗಿಸುವವರು. ಇವಳು ಕಳುಹಿಸಿಕೊಟ್ಟ ಹುಟ್ಟುಹಬ್ಬದ ಆತ್ಮೀಯ ಕೇಕುಗಳನ್ನು ಮುಗಿಸುವಲ್ಲಿ ನಾವೆಲ್ಲ ಹೃತೂ³ರ್ವಕವಾಗಿ ಭಾಗಿ ಆದೆವು, ಕಚೇರಿಯ ಮೂಲೆಯಲ್ಲಿ ಇವಳು ಬಿಟ್ಟುಹೋದ ಖಾಲಿಯೊಂದನ್ನು ಬಿಟ್ಟು ಉಳಿದವೆರೆಲ್ಲ ಕೇಕು ತಿಂದು ಸವಿಯನ್ನು ಸ್ಮರಿಸಿದ್ದೆವು.

ಕೀಮೋ ಥೆರಪಿ ನಿರಂತರವಾಗಿ ಸಾಗಿತು. ಶುಶ್ರೂಷೆಯ ಮುಂದಿನ ಹಂತವಾಗಿ ರೇಡಿಯೋ ತೆರಪಿಯೂ ನಡೆಯಿತು.ಅದೃಷ್ಟವೋ ಕಾಯಿಲೆ ಪತ್ತೆಯಾದ ಹಂತವೋ, ವೈದ್ಯರ ಕೌಶಲವೋ ಇವಳ ಇಚ್ಚಾಶಕ್ತಿಯೋ ಕ್ಯಾನ್ಸರ್‌ಗೆ ಸೋಲಾಯಿತು. ಹೊನ್ನ ಮುಡಿಯವಳು ಇನ್ನೆಂದೂ ಬಾರಳೇನೋ ಎಂದುಕೊಂಡಿದ್ದ ಕಚೇರಿಯಲ್ಲಿ ಇವಳ ಮರಳುವಿಕೆಯ ಸಂತಸ ಹಬ್ಬಿದೆ. ಕಚೇರಿಗೆ ಬಾರದೆಯೂ ಕಳೆದ ಎಂಟು ತಿಂಗಳುಗಳ ಕಾಲ ಇವಳು ಚಿತ್ರಿಸಿದ ಖಾಲಿ, ಜೀವಕಳೆಯಲ್ಲಿ ನಕ್ಕುನಲಿದು ಹರಟೆ ಹೊಡೆಯುತ್ತಿದೆ. ಅಶ್ವಪುರಾಣ ಮುಂದುವರೆದಿದೆ.

ಯೋಗೀಂದ್ರ ಮರವಂತೆ

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.