“ಬನ್ನಿ’ ಎನ್ನುತ್ತದೆ ಚಿಕಾಗೊ!
Team Udayavani, Nov 12, 2017, 6:20 AM IST
ಚಿಕಾಗೊ: ಇದು ಅಮೆರಿಕದ ಮೂರನೆಯ ಅತೀ ದೊಡ್ಡನಗರ, ಜನಸಂಖ್ಯೆಯಲ್ಲೂ ಮೂರನೆಯ ಸ್ಥಾನ. ಆದರೆ, ಸಂಪತ್ತು ಮತ್ತು ಆರ್ಥಿಕತೆಗೆ ಸಂಬಂಧಿಸಿ ಇದು ಜಗತ್ತಿನ ಮುಂಚೂಣಿಯ ವ್ಯವಹಾರೋದ್ಯಮ ನಗರಗಳಲ್ಲೊಂದು.
ನಾವು ಕಳೆದ ಜುಲೈನಲ್ಲಿ ಚಿಕಾಗೊ ನಗರಕ್ಕೆ ಬಂದಿಳಿದಾಗ ಸಮಯ ಅಲ್ಲಿನ ಸಂಜೆ 6.20. ನಾವು ನಯಾಗರ ವೀಕ್ಷಿಸಿ, ಅಲ್ಲಿನ ವಿಮಾನ ನಿಲ್ದಾಣದಿಂದ ಒಂದು ತಾಸು 30 ನಿಮಿಷ ಪ್ರಯಾಣಿಸಿದ್ದೆವು. ನಯಾಗರ ಎಂಬ ವಿಶ್ವದ ಅದ್ಭುತ ಜಲಪಾತ ವೀಕ್ಷಣೆಯ ಗುಂಗಿನಲ್ಲೇ ಇದ್ದ ನಮಗೆ ಚಿಕಾಗೊ ನಗರದ ಸೌಂದರ್ಯ ಮತ್ತಷ್ಟು ರೋಮಾಂಚನ ನೀಡಿತು. ಮಂಗಳೂರಿನಿಂದ ಬೆಂಗಳೂರು- ದಿಲ್ಲಿ- ನ್ಯೂಜೆರ್ಸಿ- ನ್ಯಾಯಾರ್ಕ್-ವಾಶಿಂಗ್ಟನ್-ನಯಾಗರ ನಮ್ಮ ಆವರೆಗಿನ ವೈಮಾನಿಕ ಪ್ರಯಾಣವಾಗಿತ್ತು.
ಚಿಕಾಗೊ ಎಂಬುದು ಪ್ರಾಚೀನ-ಆಧುನಿಕತೆಯ ಸಂಗಮ. ಕನ್ನಡಿಗರ ಸಹಿತ ಭಾರತೀಯರು ಇಲ್ಲಿ ಮಹತ್ವದ ಸ್ಥಾನ ಹೊಂದಿದ್ದಾರೆ. ಸುಮಾರು 28 ಲಕ್ಷ ಜನಸಂಖ್ಯೆ. ಚಿಕಾಗೊ ಮೆಟ್ರೊ ಪಾಲಿಟನ್ ಪ್ರದೇಶ ಸುಮಾರು 10 ಲಕ್ಷ ಜನಸಂಖ್ಯೆ ಹೊಂದಿದೆ.
ಮಿಚಿಗನ್ ಸರೋವರದ ದಡ
ಚಿಕಾಗೊ ನಗರ ಮಿಚಿಗನ್ ಸರೋವರದ ವ್ಯಾಪ್ತಿಯಲ್ಲಿದೆ. ಪ್ರಮುಖವಾಗಿ ಆರ್ಥಿಕ, ವಾಣಿಜ್ಯ, ಕೈಗಾರಿಕೆ, ತಂತ್ರಜ್ಞಾನ, ಟೆಲಿಸಂಪರ್ಕ, ಸಾರಿಗೆಯ ಮೂಲಕ ಅಂತಾರಾಷ್ಟ್ರೀಯ ಪ್ರಸಿದ್ಧಿಯನ್ನು ಪಡೆದಿದೆ.
ಆದರೆ, ಈಗ ಚಿಕಾಗೊ ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡಿರುವುದನ್ನು ನಮ್ಮ ಪ್ರವಾಸದ ಅವಧಿಯಲ್ಲಿ ಗಮನಿಸಿದೆವು. ಅಲ್ಲಿ ದೊರೆತ ಅಂಕಿಅಂಶದ ಪ್ರಕಾರ ಕಳೆದ ವರ್ಷ ಈ ಮಹಾನಗರವು 5.4 ಕೋಟಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ನಿರ್ವಹಿಸಿದೆ. ಈ ಮೂಲಕ, ಅಮೆರಿಕದಲ್ಲೇ ಅತೀ ಹೆಚ್ಚು ಪ್ರವಾಸಿಗರು ಸಂದರ್ಶಿಸಿದ ನಗರವೆಂಬ ಮನ್ನಣೆಗೆ ಪಾತ್ರವಾಗಿದೆ. ಸಂಜೆಯ ನಂತರ 360 ಡಿಗ್ರಿ ಚಿಕಾಗೊ ನಿರೀಕ್ಷಣಾ ಧಕ್ಕೆಯ ಮೇಲೇರಿ ಸಮಗ್ರ ಚಿಕಾಗೊ ನಗರದ ಸೌಂದರ್ಯ ವೀಕ್ಷಿಸುವುದು ಚೇತೋಹಾರಿ ಅನುಭವ.
ಇದಕ್ಕೆ ಮೊದಲು ನಮ್ಮ ತಂಡ ಅಂತಾರಾಷ್ಟ್ರೀಯ ಲಯನ್ಸ್ ಸಮಾವೇಶದಲ್ಲಿ ಭಾಗವಹಿಸಿತು. ಮೊದಲ ದಿನ ಲಯನ್ಸ್ ಕಾನ್ಫರೆನ್ಸ್ ಪೆರೇಡ್‌ನಲ್ಲಿ 190 ದೇಶಗಳ ಲಯನ್ಸ್ ಪ್ರತಿನಿಧಿಗಳು ಪಥ ಸಂಚಲನ ನಡೆಸಿದೆವು. ಮರುದಿನ ಸಮ್ಮೇಳನ.
ಬೆಂಕಿಯಲ್ಲಿ ಅರಳಿದ ಹೂ
ಚಿಕಾಗೊ ನಗರವಾಗಿ 1837ರಲ್ಲಿ ರೂಪುಗೊಂಡಿತು. ಗ್ರೇಟ್‌ಲೆàಕ್ಸ್ ಮತ್ತು ಮಿನ್ಸಿಸಿಪ್ಪಿ ರಿವರ್ ವಾಟರ್‌ಶೆಡ್‌ನ ನಡುವಣ ವಿಸ್ತಾರ. ಕ್ಷಿಪ್ರವಾಗಿ ನಗರ ಬೆಳೆಯಿತು. ಆದರೆ, 1871ರಲ್ಲಿ ಅತೀ ಭಯಂಕರವಾದ ಅಗ್ನಿದುರಂತ ಇಲ್ಲಿ ಸಂಭವಿಸಿತು. ಲಕ್ಷ ಮಂದಿ ಮನೆ ಕಳೆದುಕೊಂಡರು. ಆದರೆ, ಆಡಳಿತದ ಕ್ಷಿಪ್ರಸ್ಪಂದನೆ ಈ ನಗರವನ್ನು ಮತ್ತೆ ಕಟ್ಟಿತು. ಈಗ ಚಿಕಾಗೊ ಅನೇಕಾನೇಕ ಗಗನಚುಂಬಿ ಕಟ್ಟಡಗಳ ನಗರ.
ನಗರದ ಪ್ರೇಕ್ಷಣೀಯ ಸ್ಥಳಗಳ ಸ್ಥೂಲ ಪರಿಚಯ:
ಮಿಲೇನಿಯಂ ಪಾರ್ಕ್, ನೇವಿ ಪಯರ್, ಮ್ಯಾಗ್ನಿಫಿಶೆಂಟ್ ಮೈಲ್, ಆರ್ಟ್ ಇನ್‌ಸ್ಟಿಟ್ಯೂಟ್ ಆಫ್ ಚಿಕಾಗೊ, ಮ್ಯೂಸಿಯಂ ಕ್ಯಾಂಪಸ್, ವಿಲ್ಲಿಸ್ ಟವರ್, ಸೈನ್ಸ್ ಪಾರ್ಕ್, ಝೂ, ಸಂಗೀತಭವನಗಳು, ಶಿಕ್ಷಣ ಕೇಂದ್ರಗಳು.
ಭಾರತೀಯ ಆಹಾರ ವೈವಿಧ್ಯಗಳ ಸಾಕಷ್ಟು ಹೊಟೇಲ್‌ಗಳು ಚಿಕಾಗೊ ನಗರದಾದ್ಯಂತ ಇವೆ. ಆದ್ದರಿಂದ, ಭಾರತೀಯ ಪ್ರವಾಸಿಗರಿಗೆ ಆಹಾರಕ್ಕೆ ಸಂಬಂಧಿಸಿ ಯಾವುದೇ ಸಮಸ್ಯೆ ಇಲ್ಲ. ಸ್ಥಳೀಯವಾದ ಶಿಕಾಕ್ವ ಎಂಬ ಅಮೆರಿಕನ್ ಉಚ್ಚಾರದ ಫ್ರೆಂಟ್ ಅವತರಣಿಕೆಯು ಚಿಕಿಗೊ ಎಂದಾಯಿತೆಂದು ಸಂಗ್ರಹಿತ ಮೂಲಗಳಿಂದ ತಿಳಿದುಬರುತ್ತದೆ. ಚಿಕಾಗೊ ಈಗ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುತ್ತಿರುವುದರಿಂದ ಪ್ರವಾಸಿಗರಿಗೆ ಗರಿಷ್ಟ ಸೌಲಭ್ಯ ದೊರೆಯುತ್ತಿದೆ. ಟ್ಯಾಕ್ಸಿಯಿಂದ ವಿಮಾನದವರೆಗೆ ಸುಲಭ ಸಂಪರ್ಕ. ಉತ್ತಮ ವಸತಿಗೃಹಗಳು, ಮಾರ್ಗದರ್ಶಿಗಳು, ಆಯಾ ದೇಶದ ಆಹಾರ ವೈವಿಧ್ಯ.. ಹೀಗೆ ಇಲ್ಲಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಲೇ ಇದೆ.
ಭಾರತೀಯರ ಪಾಲಿಗೆ ಚಿಕಾಗೊ ಜತೆ ಭಾವನಾತ್ಮಕ ನಂಟಿದೆ. ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಭಾಷಣವಿತ್ತು ಭಾರತದ ಹಿರಿಮೆಯನ್ನು ಜಗತ್ತಿನಾದ್ಯಂತ ಸಾರಿದ ಘಟನೆ ಒಂದೂ ಕಾಲು ಶತಮಾನದ ಹಿಂದೆ ನಡೆದದ್ದು ಇದೇ ಚಿಕಾಗೋದಲ್ಲಿ.
– ತಾರಾನಾಥ ಶೆಟ್ಟಿ ಬೋಳಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.