ಮಕ್ಕಳ ಕತೆ: ಆಮೆಯ ಸೊಕ್ಕು
Team Udayavani, Mar 15, 2020, 5:45 AM IST
ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಆಮೆಯೊಂದು ಕೊಳದ ಬಳಿಯಲ್ಲಿ ವಾಸಿಸುತ್ತಿತ್ತು. ಅದು ತನ್ನ ಆಹಾರ ಹುಡುಕುತ್ತ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುತ್ತ ಇರುವಾಗ ಅಲ್ಲಲ್ಲಿ ನಿಂತು ವಿಶ್ರಾಂತಿ ಪಡೆಯುತ್ತಿತ್ತು. ಆಮೆಗೆ ಬಹಳ ಬೇಗ ಚಲಿಸಲು ಸಾಧ್ಯವಾಗುವುದಿಲ್ಲ ಅಲ್ಲವೇ. ಹಾಗಾಗಿ ಪ್ರತೀ ಬಾರಿ ಕವಲುದಾರಿಯಲ್ಲಿರುವ ಒಂದು ಮರದ ಬಳಿಯಲ್ಲಿ ಅದು ಮಲಗಿ ನಿದ್ರೆ ಮಾಡುತ್ತಿತ್ತು.
ಹೀಗೆ ನಿದ್ರೆ ಮಾಡಲು ಮರದ ಬಳಿ ಮಲಗಿದ್ದಾಗ, ಅದಕ್ಕೆ ಮರದ ಮೇಲಿರುವ ಹಕ್ಕಿಯೊಂದು ಪರಿಚಯವಾಯಿತು. ಹಕ್ಕಿಯು ಆ ಮರದಲ್ಲಿ ಗೂಡು ಕಟ್ಟಲು ತಯಾರಿ ಮಾಡುತ್ತಿತ್ತು. ಹಾಗಾಗಿ ಪುರ್ರನೆ ಹಾರಿ ಹೋಗುವುದು ಮತ್ತು ಕಡ್ಡಿಗಳನ್ನು ತಂದು ಮನೆಕಟ್ಟುವ ಕೆಲಸ ಮಾಡುತ್ತಿತ್ತು. ಹಕ್ಕಿಯೊಡನೆ ಸ್ವಲ್ಪ ಹೊತ್ತು ಪಟ್ಟಾಂಗ ಮಾಡೋಣ ಎಂದು ಆಮೆ ಆಗಾಗ ಪ್ರಯತ್ನಿಸುತ್ತಿತ್ತು. ಆದರೆ, ಹಕ್ಕಿ ಒಂದರೆಡು ಮಾತುಗಳನ್ನಾಡಿ ಮತ್ತೆ ಕಡ್ಡಿ ಹೆಕ್ಕಲು ಓಡಿ ಹೋಗುತ್ತಿತ್ತು.
ಹಾಗೆ ಕೆಲವು ದಿನಗಳಲ್ಲಿ ಹಕ್ಕಿಯ ಗೂಡು ತಯಾರಾಯಿತು. ಆಮೆಗೆ ಹಕ್ಕಿಯ ಗೋಜಲು ಗೋಜಲು ಗೂಡಿ ನೋಡಿ ನಗು ಬಂತು. “ಅಲ್ಲ ಮಾರಾಯ, ಅಷ್ಟು ದಿನಗಳಿಂದ ಗೂಡು ಕಟ್ಟುತ್ತಾ ಇದ್ದಿ. ಎಷ್ಟೊಂದು ಓಡಾಟ ಮಾಡಿದ್ದಿ. ಆದರೆ ಈ ಗೂಡೋ, ಗೋಜಲು ಗೋಜಲಾಗಿದೆ. ಅದರಲ್ಲಿ ನಯ, ನಾಜೂಕು ಇಲ್ಲವೇ ಇಲ್ಲವಲ್ಲ. ಇದರಲ್ಲಿ ಇನ್ನು ಮೊಟ್ಟೆ ಇಡುವುದಕ್ಕೆ ಆಗುತ್ತದೆಯೇ?’ ಎಂದು ಕೇಳಿತು.
ತನ್ನ ಗೂಡಿನ ಮೇಲೆ ಕುಳಿತುಕೊಳ್ಳುತ್ತ, ಮತ್ತೆ ಕೊಂಬೆ ಮೇಲೆ ಕುಳಿತುಕೊಳ್ಳುತ್ತ ಹಕ್ಕಿ ತನ್ನ ಗೂಡು ಸರಿಯಿದೆಯೇ ಎಂದು ಪರಿಶೀಲಿಸುತ್ತಿತ್ತು. ಆಮೆಯ ಮಾತುಗಳನ್ನು ಕೇಳಿ ಹಕ್ಕಿಗೆ ನಗು ಬಂತು.
“ನೋಡು ಆಮೆರಾಯ, ದೇವರು ಬುದ್ಧಿ ಕೊಟ್ಟ ರೀತಿಯಲ್ಲಿಯೇ ನಾನು ನನ್ನ ಗೂಡನ್ನು ಕಟ್ಟಿಕೊಂಡಿದ್ದೇನೆ. ಮನುಷ್ಯರಂತೆ ಈ ಗೂಡಿನಲ್ಲಿ ನನ್ನ ಮಕ್ಕಳು ಕೂಡ ಇದೇ ಗೂಡಿನಲ್ಲಿ ಜೀವನ ಮಾಡುವುದಿಲ್ಲ. ಮೊಟ್ಟೆ ಇಟ್ಟು ಅವುಗಳಿಗೆ ರೆಕ್ಕೆ ಬಲಿಯುವವರೆಗೆ ಮಾತ್ರ ಈ ಗೂಡು. ಇಷ್ಟು ಸಾಕಲ್ಲ’ ಎಂದು ಹಕ್ಕಿ ಹೇಳಿತು.
ಆಮೆ ಮತ್ತಷ್ಟು ನಗುತ್ತ ಹೇಳಿತು. “ಗೂಡು ಎಷ್ಟು ಬಾಳಿಕೆಯೇ ಬರಲಿ. ಅದನ್ನು ಸ್ವಲ್ಪ ಸುಂದರವಾಗಿ ಕಟ್ಟಬಾರದಾ ಅಂತ ನಾನು ಕೇಳಿದ್ದು’ ಎಂದು ಮತ್ತಷ್ಟು ಹಾಸ್ಯ ಮಾಡಿತು.
ಹಕ್ಕಿಗೋ ಗೂಡು ಕಟ್ಟಲು ಕಡ್ಡಿ ಹೆಕ್ಕಿ ಹೆಕ್ಕಿ ಸುಸ್ತಾಗಿತ್ತು. ಈ ಆಮೆರಾಯ ಅರಾಮವಾಗಿ ಮರದ ಕೆಳಗೆ ಮಲಗಿ, ತಾನು ಶ್ರಮಪಟ್ಟು ಕಟ್ಟಿದ ಗೂಡನ್ನು ನೋಡಿ ಯಾಕೆ ಅಪಹಾಸ್ಯ ಮಾಡುತ್ತಾನೆ ಎಂದು ಬೇಜಾರು ಆಯಿತು.
“ಅಲ್ಲ ಮಾರಾಯ, ಮತ್ತೆ ಹೇಗೆ ಗೂಡು ಕಟ್ಟಬೇಕು. ನೀನೇ ಬಂದು ಮರದ ಮೇಲೆ ಹತ್ತಿ ಹೇಳಿಕೊಡು’ ಎಂದು ಸಿಡುಕಿತು. ಆಮೆ ಹೇಳಿತು, “ಅಯ್ಯೋ ನನಗೆ ಮರ ಹತ್ತಲಿಕ್ಕೆ ಆಗುವುದಿಲ್ಲ. ಆದರೆ ನನ್ನ ಗೂಡು ನೋಡು. ಎಷ್ಟು ಗಟ್ಟಿಯಾಗಿದೆ. ನನ್ನ ಬೆನ್ನ ಮೇಲೆ ಹೊತ್ತುಕೊಂಡೇ ಹೋಗುತ್ತೇನೆ. ಎಲ್ಲಿ ಬೇಕೋ ಅಲ್ಲಿಯೇ ಈ ಚಿಪ್ಪಿನೊಳಗೆ ಹುದುಗಿಕೊಂಡು ಮಲಗಿಬಿಡುತ್ತೇನೆ. ನನ್ನ ಚಿಪ್ಪಿನ ಮೇಲೆ ಚಿತ್ತಾರವೂ ಇದೆ. ಮಳೆ ಬರಲಿ, ಗಾಳಿ ಬೀಸಲಿ, ಈ ಚಿಪ್ಪಿಗೆ ಏನೂ ಆಗುವುದಿಲ್ಲ ಗೊತ್ತಾ ?’ ಎಂದು ಹಂಗಿಸಿತು.
ಹಕ್ಕಿಗೇ ಸಿಟ್ಟು ಬಂತು. “ಓಹೋ… ಈ ನಿನ್ನ ಚಿಪ್ಪುಮನೆ ಬಹಳ ಚೆನ್ನಾಗಿದೆ. ಆದರೆ ಅದರಲ್ಲಿ ನೀನೊಬ್ಬನೇ ಹುದುಗಿಕೊಳ್ಳಬಹುದು. ನಾನು ಕಟ್ಟಿದ ಗೂಡಿನಲ್ಲಿ ನನ್ನ ಹೆಂಡತಿ-ಮಕ್ಕಳು ವಾಸಿಸುತ್ತಾರೆ. ಎಲ್ಲರೂ ಒಟ್ಟಾಗಿದ್ದರೆ ಮಾತ್ರ ಆ ಮನೆಯಲ್ಲಿ ಖುಷಿ ಇರುತ್ತದೆ. ನಿನಗೆ ಅದೆಲ್ಲ ಎಲ್ಲಿ. ಹುಟ್ಟುವಾಗಲೇ ಇದ್ದ ಚಿಪ್ಪನ್ನು ತೋರಿಸಿ ಮನೆ ಎಂದು ಕೊಚ್ಚಿಕೊಳ್ಳಬೇಡ’ ಎಂದು ದಬಾಯಿಸಿತು.
ಆಮೆ ಅಲ್ಲಿಂದ ಕಾಲ್ಕಿತ್ತಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.