ಚೈನಾ ಮಾಲು ಮತ್ತು ಇತರ ಕತೆಗಳು
Team Udayavani, Jul 23, 2017, 7:10 AM IST
ಇವತ್ತು ಸಿಕ್ಕಿಂನ ಗಡಿಯಲ್ಲಿ ಚೀನಾ ಮತ್ತು ಭಾರತ ನಡುವಿನ ಮುಖಾಮುಖೀಯಲ್ಲಿ ಕಾವೇರಿದೆ. ಆ ದೇಶಕ್ಕೆ ಪ್ರತೀಕಾರ ನೀಡಬೇಕೆಂಬುದು ಎಲ್ಲರ ಸಾಮಾನ್ಯ ಹೇಳಿಕೆ. ಇವತ್ತು “ಮಾರುಕಟ್ಟೆ’ ಎಂಬುದು ಎಲ್ಲ ದೇಶಗಳ ಬಹಿರಂಗದ ಮತ್ತು ಆಂತರಿಕ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬ್ರಿಟಿಷ್ ಸೇರಿದಂತೆ ಯುರೋಪಿನ ವಸಾಹತುಶಾಹಿಗಳು ಕಳೆದ ಐನೂರು ವರ್ಷಗಳಿಂದ ಮಾಡುತ್ತ ಬಂದಿದ್ದು ಇದನ್ನೇ. ಇಂಗ್ಲೆಂಡ್, ಫ್ರಾನ್ಸ್ , ಪೋರ್ಚುಗಲ್, ಜರ್ಮನಿಯಂಥ ದೇಶಗಳು ಏಷ್ಯಾವೂ ಸೇರಿದಂತೆ ಬೇರೆ ಬೇರೆ ಖಂಡಗಳ ಯಾವೆಲ್ಲ ದೇಶಗಳಲ್ಲಿ ಬಿಡಾರ ಮಾಡಿದ್ದವೋ ಅಲ್ಲಿನ ಸ್ಥಳೀಯ ಸರಕುಗಳ ಉತ್ಪಾದನೆಯನ್ನು ನಿಯಂತ್ರಿಸಿ ತಮ್ಮ ಸರಕುಗಳನ್ನು ಆ ದೇಶಗಳ ಮೇಲೆ ಹೇರತೊಡಗಿದ್ದವು.
ಹತ್ತಿ ಬಟ್ಟೆಯನ್ನು ನಿಷೇಧಿಸಿ ಯಂತ್ರನಿರ್ಮಿತ ಬಟ್ಟೆಯನ್ನು ತೊಡುವಂತೆ ಒತ್ತಾಯ ಹೇರಿದ್ದು, ಅದಕ್ಕೆ ಗಾಂಧೀಜಿ ಚಳುವಳಿಯ ಮೂಲಕ ವಿರೋಧ ವ್ಯಕ್ತಪಡಿಸಿದ್ದು ಎಲ್ಲವೂ ನಮ್ಮ ಸ್ವಾತಂತ್ರ್ಯ ಇತಿಹಾಸದ ಅಚ್ಚಳಿಯದ ಪುಟಗಳು. ಆ ಮಾರುಕಟ್ಟೆಯ ತಂತ್ರವನ್ನು ಇಂದಿಗೂ ಎಲ್ಲ ಕಡೆಗೆ ಅನುಸರಿಸಿ, ಮಾರುಕಟ್ಟೆಯ ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿವೆ. ಒಂದನೆಯದಾಗಿ, ಸ್ಥಳೀಯವಾಗಿ ನಿಗದಿಯಾಗಿರುವ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಒದಗಿಸುವುದು. ಎರಡನೆಯದಾಗಿ, ಸ್ಥಳೀಯವಾದ ವೇತನಕ್ಕಿಂತ ಕಡಿಮೆ ವೇತನದಲ್ಲಿ ನೌಕರರನ್ನು ಒದಗಿಸುವುದು.
ಇವೆರಡು ಮಾರುಕಟ್ಟೆ ಹೆಚ್ಚಿಸುವ ತಂತ್ರಗಳಿಗೆ ಉದಾಹರಣೆಯಾಗಿ ಇತ್ತೀಚೆಗಿನ ಐ.ಟಿ. ಕ್ಷೇತ್ರದ ಬೆಳವಣಿಗೆಯನ್ನೇ ಗಮನಿಸೋಣ. ಅಮೆರಿಕ ದೇಶದ ಆಡಳಿತವು ಭಾರತದ ಸಾಫ್ಟ್ವೇರ್ ಇಂಜಿನಿಯರ್‌ಗಳ ಆಗಮನವನ್ನು ಲಘುವಾಗಿ ನಿಷೇಧಿಸಿದ್ದು ಮೇಲ್ನೋಟಕ್ಕೆ ತಪ್ಪೆಂದು ಅನ್ನಿಸುವುದಿಲ್ಲ. ಇದನ್ನು ಆಳವಾಗಿ ಅರಿತುಕೊಳ್ಳಬೇಕಾದರೆ, ಸಾಫ್ಟ್ವೇರ್ ವ್ಯವಹಾರವನ್ನು ಬುದ್ಧಿಮತ್ತೆಯ ಸಂಗತಿ ಎನ್ನುವುದಕ್ಕಿಂತ ಸರಕು ಮಾರುಕಟ್ಟೆಯ ವಸ್ತುವೆಂದು ಪರಿಗಣಿಸಿದ್ದರ ಬಗ್ಗೆ ಮರುವಿಶ್ಲೇಷಿಸಬೇಕಾಗಿದೆ. ಕಡಿಮೆ ಸಂಬಳಕ್ಕೆ ದುಡಿಯುವ ಉದ್ಯೋಗಿಗಳು, ಕಡಿಮೆ ಹಣಕ್ಕೆ ಕೆಲಸ ಪೂರೈಸಿಕೊಡುವ ಸೌಕರ್ಯವಿದ್ದರೆ ಯಾರು ಬೇಡವೆನ್ನುತ್ತಾರೆ ಹೇಳಿ. ಅಮೆರಿಕ ಮತ್ತು ಭಾರತದ ನಡುವಿನ ಸಾಫ್ಟ್ವೇರ್ ವಿಷಯದಲ್ಲಿಯೂ ಆದದ್ದು ಇದೇ. ಅಮೆರಿಕಕ್ಕಿಂತ ಕಡಿಮೆ ಸಂಬಳದಲ್ಲಿ ಭಾರತದ ಇಂಜಿನಿಯರುಗಳು ಕೆಲಸ ಮಾಡಲು ಸಿದ್ಧರಿರುವಾಗ ಅಮೆರಿಕದವರಿಗೆ ಕೆಲಸ ಏನಿದೆ? ಅಮೆರಿಕನ್ನರಿಗಿಂತ ಕಡಿಮೆ ಎಂದು ಭಾವಿಸಲಾಗುವ ಸಂಬಳ ಭಾರತೀಯರಿಗೆ ದೊಡ್ಡದಾಗಿರುತ್ತದೆ. ಹಾಗಾಗಿ, ಅಮೆರಿಕದ ವ್ಯವಹಾರವನ್ನು ಪೂರೈಸಿಕೊಡುವ ಕಾಲ್‌ಸೆಂಟರ್‌ಗಳು ಮಹಾನಗರಗಳಲ್ಲಿ ನಾಯಿಕೊಡೆಗಳಂತೆ ತಲೆಎತ್ತಿದವು. ಇವತ್ತು ಅಮೆರಿಕದಲ್ಲಿ ಭಾರತೀಯರಿಗೆ ದುಡಿಮೆ ಕೊಡುವ ನಿಷೇಧ ಬಂದರೆ ಇಲ್ಲಿನ ಕಂಪೆನಿಗಳು ಏನು ಮಾಡಲು ಸಾಧ್ಯ? ಮುಚ್ಚಬೇಕು, ಅಷ್ಟೆ !
“ಗ್ಲೋಬಲ್ ಲೇಬರ್ ಆರ್ಬಿಟ್ರೇಜ್’ ಎಂಬ ಜಾಗತಿಕ ಮಟ್ಟದ ಆರ್ಥಿಕ ಪರಿಕಲ್ಪನೆಯೊಂದಿದೆ. ಒಂದು ದೇಶದಲ್ಲಿ ಜೀವನ ವೆಚ್ಚ ಅಧಿಕವಾಗಿರುತ್ತದೆ, ಅಲ್ಲಿನ ಉದ್ಯೋಗಿಗಳ ವೇತನವೂ ಅಧಿಕವಾಗಿರುತ್ತದೆ. ಆಗ ಕಡಿಮೆ ಜೀವನ ವೆಚ್ಚ ಇರುವ ದೇಶದ ಉದ್ಯೋಗಿಗಳನ್ನು ಕಡಿಮೆ ವೇತನಕ್ಕೆ ನಿಯೋಜಿಸಿಕೊಳ್ಳುವುದು. ಇದರ ಪರಿಣಾಮವಾಗಿ ಭಾರತವೂ ಸೇರಿದಂತೆ ಏಷ್ಯಾದ ಅನೇಕ ದೇಶಗಳ ಮಂದಿ ಅಮೆರಿಕ, ಯುರೋಪುಗಳಲ್ಲಿ ಉದ್ಯೋಗ ಪಡೆಯುವಂತಾಯಿತು.
ಮೊದಲ ನೋಟಕ್ಕೆ ಇದು ಉತ್ತಮ ಸೌಲಭ್ಯವೆಂದು ಪರಿಗಣಿತವಾದರೂ ನಿಧಾನವಾಗಿ ಇದಕ್ಕೆ ತೆರಬೇಕಾದ ಬೆಲೆ ದುಬಾರಿಯಾದದ್ದು. “ಪ್ರತಿಭಾ ಪಲಾಯನ’ ವಾಗಲು ಇದೇ ಕಾರಣವಾದದ್ದು ಎಂಬುದನ್ನು ಮರೆಯಬಾರದು.
ಹಾಗಾಗಿ, ಒಂದಂಶವನ್ನು ಗಮನಿಸಬೇಕು, ಸ್ಥಳೀಯವಲ್ಲದೆ, ಪ್ರಾದೇಶಿಕವಲ್ಲದೆ, “ಹೊರ’ ವ್ಯವಹಾರಗಳಲ್ಲಿ ಮಾರುಕಟ್ಟೆಯನ್ನು ಎತ್ತರಿಸಲು ಮಾಡುವ ತಂತ್ರ ತಾತ್ಕಾಲಿಕವಾಗಿರುತ್ತದೆ. ದೀರ್ಘಕಾಲೀನವಾದ ಲಾಭವನ್ನು ಇದರಿಂದ ನಿರೀಕ್ಷಿಸುವ ಹಾಗಿಲ್ಲ. ಇತ್ತೀಚೆಗಿನ ಬೆಳವಣಿಗೆಯಿಂದ ಅದು ನಮಗೆ ಮನದಟ್ಟಾಗಿದೆ.
ಚೈನಾ ಮಾಲುಗಳ ಬಗ್ಗೆಯೂ ಇದೇ ಮಾತು ಅನ್ವಯವಾಗುತ್ತದೆ. ಅದರ ಬಗ್ಗೆ ಅನೇಕ ಜೋಕುಗಳಿವೆ: ಅತ್ಯಂತ ದೀರ್ಘಕಾಲ ಬಾಳ್ವಿಕೆ ಬಂದ ಚೈನಾ ಮಾಲು ಎಂದರೆ “ಮಹಾಗೋಡೆ’ ಮಾತ್ರ, ಚೀನೀಯರ ನಡುವಿನ ಪ್ರೀತಿ ಚೀನಾದ ಮಾಲಿನಷ್ಟೇ ಅಶಾಶ್ವತ- ಇತ್ಯಾದಿ. ಚೈನಾಮಾಲು ಗಟ್ಟಿಮುಟ್ಟಲ್ಲ, ಬಹುಕಾಲ ಉಳಿಯುವುದಿಲ್ಲ ಎಂಬುದು ಜನಜನಿತ ತಿಳುವಳಿಕೆ. ಇದರಲ್ಲಿ ಸತ್ಯವೂ ಇದೆ. ಬಿಕರಿಯಾಗುವ ವಸ್ತುಗಳು ಬಹುಕಾಲ ಬಾಳಿಕೆ ಬಾರದಿದ್ದರೆ ಮತ್ತೆ ಬೇಡಿಕೆ ಹೆಚ್ಚಿ ಉತ್ಪಾದಕರಿಗೆ ಲಾಭವಾಗುವ ಅನುಕೂಲವೂ ಇದರ ಜೊತೆಗಿದೆ.ಹಾಗಿದ್ದರೂ ಚೈನಾ ಮಾಲು ಯಾಕೆ ಇಲ್ಲಿ ಜನಪ್ರಿಯವಾಯಿತು? ಇದಕ್ಕೆ “ಬೆಲೆ ಕಡಿಮೆ’ಯಾಗಿರುವುದೊಂದೇ ಕಾರಣ. ಇಲ್ಲಿಗೆ ಬೇಕಾದ ಸರಕುಗಳನ್ನು ಇಲ್ಲಿಯೇ ಸಿದ್ಧಗೊಳಿಸಬಹುದಾದ ಸಾಧ್ಯತೆಗಳನ್ನು ಹುಡುಕುವುದರ ಬದಲು ಕಡಿಮೆ ದರದಲ್ಲಿ ಸಿಗುವ ಚೈನಾ ಮಾಲುಗಳಿಗೆ ಭಾರತೀಯರು ಮಾರುಹೋದರು. ನಾಳೆ ಯುದ್ಧವಾಗಿ, ಚೀನಾ ಮತ್ತು ಭಾರತದ ವ್ಯವಹಾರ ನಿಂತುಹೋದರೆ (ಹಾಗೇನೂ ಆಗುವುದಿಲ್ಲ) ಚೀನಾದ ಸ್ಥಿತಿ ಏನಾದೀತು? ಅಥವಾ ಅಂಥ ಗೂಡ್ಸ್ ಗಳ ಮೇಲೆಯೇ ಅವಲಂಬಿತವಾದ ಭಾರತದ ಗತಿ ಏನು?
ಕಾಲಕಾಲಕ್ಕೆ ಕಲಿಯಬೇಕಾದ ಪಾಠಗಳಿವೆ. ಆದರೆ ನಾವು ಒಂದೆರಡು ಜೋಕುಗಳಲ್ಲಿ ವಿಷಯವನ್ನು ತೇಲಿಸಿಬಿಡುತ್ತೇವೆ. ಜಾಗತೀಕರಣದಿಂದ ದೇಶ-ದೇಶಗಳು ಹತ್ತಿರವಾದವು ಎಂಬುದೇನೋ ನಿಜ, ಆದರೆ ಹಳ್ಳಿ-ಹಳ್ಳಿಗಳು ದೂರವಾದವು ಎಂಬ ಸತ್ಯವನ್ನು ನಾವೇಕೆ ಅರಿತುಕೊಳ್ಳುವುದಿಲ್ಲ! ಅಮೆರಿಕ ಮತ್ತು ಚೀನಾದ ಜೊತೆಗಿನ ಸಂಬಂಧಗಳ ಬದಲಾವಣೆ ಭಾರತದ ಮೇಲೆ ಎಂಥ ಪರಿಣಾಮ ಬೀರಿತು, ಕಾದು ನೋಡಬೇಕು.
– ಕೆ. ಪಿ. ಇಶಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.