ಚೀನಾ ದೇಶದ ಕತೆ: ಪೆಡಂಭೂತದ ಮುತ್ತು
Team Udayavani, May 21, 2017, 4:36 PM IST
ಮಿಂಗ್ ಎಂಬ ಚಕ್ರವರ್ತಿ ಇದ್ದ. ಜಗತ್ತಿನಲ್ಲಿ ಏನು ವಿಶೇಷ ವಸ್ತುಗಳಿದ್ದರೂ ಅದೆಲ್ಲವೂ ತನ್ನ ಭಂಡಾರಕ್ಕೆ ಸೇರಬೇಕು ಎಂಬ ಆಶೆ ಅವನಿಗಿತ್ತು. ಹೀಗಾಗಿ ಬೇರೆ ಬೇರೆ ದೇಶಗಳಿಗೆ ಹೋಗಿ ಬರುವ ವ್ಯಾಪಾರಿಗಳು, ಪ್ರವಾಸಿಗರನ್ನು ತನ್ನ ಸಭೆಗೆ ಕರೆಸಿಕೊಳ್ಳುತ್ತಿದ್ದ. “”ಯಾವ ದೇಶದಲ್ಲಿ ಏನು ಅದ್ಭುತವನ್ನು ನೋಡಿ ಬಂದಿರಿ?” ಎಂದು ಪ್ರಶ್ನಿಸುತ್ತಿದ್ದ. ಅವರು ನೋಡಿದ ವಸ್ತು ವಿಶೇಷವಾದುದು ಎಂಬುದು ಅವನ ಮನಸ್ಸಿಗೆ ಹೊಳೆದರೆ ಸಾಕು, ಹೇಗಾದರೂ ಪ್ರಯತ್ನ ಮಾಡಿ ಅದನ್ನು ತಂದು ತನ್ನ ಖಜಾನೆಗೆ ಸೇರಿಸಿಕೊಳ್ಳುತ್ತಿದ್ದ. ಹೀಗೆ ಒಂದು ಸಲ ಬೇರೆ ದೇಶಕ್ಕೆ ಸಮುದ್ರಯಾನ ಕೈಗೊಂಡು ವ್ಯಾಪಾರಿಗಳ ಒಂದು ತಂಡ ಮರಳಿ ಬಂತು. ಅವರು ತಂದ ವರ್ತಮಾನ ದೊರೆಗೆ ಮನ ಸೆಳೆಯುವಂತಿತ್ತು. ಸಮುದ್ರದಲ್ಲಿ ರಾತ್ರೆ ಅವರೆಲ್ಲ ಹಡಗಿನಲ್ಲಿ ಹೋಗುತ್ತಿದಾಗ ಇದ್ದಕ್ಕಿದ್ದಂತೆ ಗುಲಾಬಿ ವರ್ಣದ ದಿವ್ಯ ಪ್ರಭೆಯಿಂದ ಇಡೀ ಕಡಲಿನಲ್ಲಿ ಬೆಳಕು ಮೂಡಿತು. ಇದೇನು ಈಗಲೇ ಮುಂಜಾನೆಯಾಯಿತೇ ಎಂದು ತಿಳಿಯದೆ ವ್ಯಾಪಾರಿಗಳು ಗಲಿಬಿಲಿಗೊಂಡರು. ಹಡಗನ್ನು ದಡಕ್ಕೆ ತಂದು ಲಂಗರು ಹಾಕಿ, ಕೆಲವರು ಸಾಹಸಿಗಳು ಈ ಬೆಳಕು ಎಲ್ಲಿಂದ ಬರುತ್ತಿದೆ ಎಂದು ತಿಳಿಯಲು ಮುಂದೆ ಮುಂದೆ ಹೋದರು.
ಆಗ ಒಂದು ಪರ್ವತದ ನೆತ್ತಿಯಿಂದ ಈ ಬೆಳಕು ಹೊಮ್ಮುತ್ತಿರುವುದು ಗೋಚರಿಸಿತು. ವ್ಯಾಪಾರಿಗಳು ಅಲ್ಲಿಗೆ ಹೋಗಲು ಪ್ರಯತ್ನಿಸಿದರು. ಆದರೆ ಅಲ್ಲಿ ಮಲಗಿದ್ದ ಒಂದು ಪೆಡಂಭೂತದ ಕೊರಳಿನಲ್ಲಿರುವ ಗುಲಾಬಿ ವರ್ಣದ ಮುತ್ತಿನಿಂದ ಇಂತಹ ಬೆಳಕು ಬರುತ್ತಿರುವುದು ಅವರಿಗೆ ತಿಳಿಯಿತು. ಆಗ ಅವರು ಪೆಡಂಭೂತದ ಸನಿಹ ಹೋಗುವಾಗ ಅದು ಬಾಯೆ¤ರೆದು ಜೋರಾಗಿ ವಿಷದ ಗಾಳಿಯನ್ನು ಹೊರಬಿಟ್ಟಿತು. ಇದರಿಂದ ಅವರೆಲ್ಲ ಭಯಭೀತರಾಗಿ ಓಡಿಬಂದು ಹಡಗನ್ನೇರಿದರು. ಈ ಕಥೆಯನ್ನು ವ್ಯಾಪಾರಿಗಳು ಚಕ್ರವರ್ತಿಗೆ ಹೇಳಿದರು. ಆದರೂ ವಿಷವನ್ನುಗುಳುವ ಪೆಡಂಭೂತದ ಕೊರಳಿನಿಂದ ಗುಲಾಬಿ ಮುತ್ತನ್ನು ತರುವುದು ಸುಲಭವಲ್ಲವೆಂದೇ ತಿಳಿಸಿದರು.
ಗುಲಾಬಿ ಮುತ್ತಿನ ಬಗೆಗೆ ಕೇಳಿದ ಮೇಲೆ ಚಕ್ರವರ್ತಿಗೆ ಆಹಾರ ಸೇರಲಿಲ್ಲ, ನಿದ್ರೆ ಬರಲಿಲ್ಲ. ಕತ್ತಲನ್ನು ಕಳೆಯುವ ದಿವ್ಯವಾದ ಮುತ್ತು ತನ್ನ ಖಜಾನೆಗೆ ಸೇರಲೇಬೇಕು ಎಂದು ಅವನ ಆಶೆ. ಈ ಮುತ್ತನ್ನು ತಂದುಕೊಡುವ ಸಾಹಸಿಗೆ ತನ್ನ ಒಬ್ಬಳೇ ಮಗಳನ್ನು ಕೊಟ್ಟು ಮದುವೆ ಮಾಡಿ ಮುಂದೆ ರಾಜ್ಯದ ಅಧಿಕಾರವನ್ನು ನೀಡುವುದಾಗಿ ಡಂಗುರ ಸಾರಿಸಿದ. ಇದನ್ನು ಕೇಳಿ ತುಂಬ ಮಂದಿ ಯುವಕರು ಬಂದರು. ಚಕ್ರವರ್ತಿ ನೀಡಿದ ಹಡಗಿನಲ್ಲಿ ಕುಳಿತು ಪೆಡಂಭೂತ ವಾಸವಿರುವ ಬೆಟ್ಟದ ಬುಡದ ತನಕ ಹೋದರು. ಆದರೆ ಮನುಷ್ಯರ ಆಗಮನವನ್ನು ತಿಳಿದು ಅದು ಹೊರಸೂಸುವ ವಿಷವನ್ನು ಸಹಿಸಿಕೊಳ್ಳಲಾಗದೆ ಜೀವ ಉಳಿದರೆ ಸಾಕೆಂದು ಹಿಂತಿರುಗಿ ಬಂದರು. ಚಕ್ರವರ್ತಿ ತೀರ ನಿರಾಶೆಗೊಂಡ.
ದೇಶದ ಒಂದು ಮೂಲೆಯಲ್ಲಿದ್ದ ಹಳ್ಳಿಯಲ್ಲಿ ವೀವಿಂಗ್ ಮತ್ತು ವೀಸ್ಯಾನ್ ಎಂಬ ಬಡ ಅಣ್ಣ, ತಮ್ಮ ಇದ್ದರು. ಅವರಿಗೆ ಅಂಗೈಯಗಲದ ಹೊಲ ಬಿಟ್ಟರೆ ಇನ್ನೇನೂ ಇರಲಿಲ್ಲ . ಅಣ್ಣ ವೀವಿಂಗ್ ಹಗಲಿಡೀ ಶ್ರಮಪಟ್ಟು ಹೊಲದಲ್ಲಿ ದುಡಿಯುತ್ತಿದ್ದ. ತಮ್ಮ ಮನೆಯಲ್ಲಿ ಕುಳಿತು ಸುಖವಾಗಿ ಉಂಡು, ತಿಂದುಕೊಂಡಿದ್ದ. ಹೀಗಿರಲು ಒಂದು ಸಲ ಮಳೆ ಬರಲಿಲ್ಲ. ಬೆಳೆ ಸಿಗಲಿಲ್ಲ. ಬದುಕುವ ದಾರಿ ತಿಳಿಯದೆ ಕಂಗಾಲಾದ ವೀವಿಂಗ್ ಚಕ್ರವರ್ತಿಯ ಡಂಗುರವನ್ನು ಕೇಳಿದ.
ತಮ್ಮನೊಂದಿಗೆ, “”ನೋಡು, ನಾನು ಹೋಗಿ ಪೆಡಂಭೂತದ ಕೊರಳಿನಿಂದ ಮುತ್ತನ್ನು ತರಲು ಸಾಧ್ಯವಾಗುತ್ತದೋ ನೋಡುತ್ತೇನೆ. ನೀನು ಮನೆಯಲ್ಲಿದ್ದುಕೋ” ಎಂದು ಹೇಳಿದ. ವೀಸ್ಯಾನ್ ಮನೆಯಲ್ಲಿರಲು ಒಪ್ಪಲಿಲ್ಲ. “”ನಾನೂ ನಿನ್ನ ಜೊತೆಗೆ ಮುತ್ತು ತರಲು ಬರುತ್ತೇನೆ” ಎಂದು ಹಟ ಹಿಡಿದ. “”ಹಾಗೆಯೇ ಆಗಲಿ” ಎಂದು ವೀವಿಂಗ್ ತಮ್ಮನ ಜೊತೆಗೂಡಿ ಸಮುದ್ರದಲ್ಲಿ ಹೋಗುತ್ತಿದ್ದ ವ್ಯಾಪಾರಿಗಳ ಹಡಗಿನಲ್ಲಿ ಕುಳಿತು ಪೆಡಂಭೂತವಿದ್ದ ಬೆಟ್ಟದ ಬಳಿಗೆ ತಲಪಿದ.
ಆದರೆ ಆಗ ಪೆಡಂಭೂತ ಜೋರಾಗಿ ವಿಷದುಸಿರು ಹೊರಬಿಡುತ್ತ ಇತ್ತು. ಅದನ್ನು ಕಂಡು ವೀಸ್ಯಾನ್ ಭಯಭೀತನಾಗಿ,
“”ಅಣ್ಣ, ನಮಗೆ ಈ ಮುತ್ತಿನ ಸಹವಾಸ ಬೇಡ. ಇದರ ಸುದ್ದಿಗೆ ಹೋದರೆ ಪ್ರಾಣ ಉಳಿಯುವುದಿಲ್ಲ. ಮರಳಿ ಹೋಗೋಣ” ಎಂದು ಹೇಳಿದ. ಈ ಮಾತಿಗೆ ವೀವಿಂಗ್ ಅವನಿಗೆ ಏನೂ ಹೇಳಲಿಲ್ಲ. ರಾತ್ರೆಯಾಗುವ ವರೆಗೂ ಸುಮ್ಮನೆ ಕುಳಿತ. ಬಳಿಕ ಭಾರೀ ಗಾತ್ರದ ಒಂದು ಗಾಳಿಪಟವನ್ನು ತಯಾರಿಸಿ ಅದಕ್ಕೆ ಉದ್ದನೆಯ ಹಗ್ಗವನ್ನು ಕಟ್ಟಿದ. ತಮ್ಮನೊಂದಿಗೆ ಹಗ್ಗದ ತುದಿಯನ್ನು ಹಿಡಿದುಕೊಳ್ಳಲು ತಿಳಿಸಿದ. ತಾನು ಪಟವನ್ನು ಹಿಡಿದುಕೊಂಡ. ಪಟ ಅವನೊಂದಿಗೆ ಗಾಳಿಯಲ್ಲಿ ಮೇಲೇರುತ್ತ ಬೆಟ್ಟದ ನೆತ್ತಿಯನ್ನು ತಲಪಿತು. ಪೆಡಂಭೂತ ಮಲಗಿ ಗೊರಕೆ ಹೊಡೆಯುತ್ತ ಇತ್ತು. ವೀವಿಂಗ್ ತಕ್ಷಣ ಕೆಳಬಾಗಿ ಅದರ ಕೊರಳಿನಲ್ಲಿದ್ದ ಗುಲಾಬಿ ಮುತ್ತಿನ ಹಾರವನ್ನು ತೆಗೆದುಕೊಂಡ. ಅದೇ ವೇಗದಿಂದ ಮರಳಿ ಕೆಳಗೆ ಬಂದ.
ಅಣ್ಣನ ಕೈಯಲ್ಲಿ ಬೆಳಗುತ್ತಿದ್ದ ಮುತ್ತನ್ನು ನೋಡಿದ ಕೂಡಲೇ ವೀಸ್ಯಾನ್ ಹಗ್ಗವನ್ನು ಕತ್ತರಿಸಿಬಿಟ್ಟ. “”ಅಣ್ಣ, ಹಗ್ಗ ತುಂಡಾಗಿದೆ. ಮುತ್ತು ಕೈಯಲ್ಲಿದ್ದರೆ ಪೆಡಂಭೂತದಿಂದ ಅಪಾಯ ಬರಬಹುದು. ಮುತ್ತನ್ನು ಕೆಳಗೆ ಹಾಕು. ಗಾಳಿ ಕಡಿಮೆಯಾದಾಗ ಪಟ ತಾನಾಗಿ ಕೆಳಗಿಳಿಯಬಹುದು” ಎಂದು ಕೂಗಿದ. ಅವನ ಮಾತು ನಂಬಿ ವೀವಿಂಗ್ ಮುತ್ತನ್ನು ಕೆಳಗೆ ಎಸೆದ. ವೀಸ್ಯಾನ್ ಮುತ್ತನ್ನು ಹೆಕ್ಕಿಕೊಂಡ. ಅಣ್ಣನ ಕಡೆಗೆ ತಿರುಗಿಯೂ ನೋಡದೆ ಯಾವುದೋ ಹಡಗಿನಲ್ಲಿ ಕುಳಿತು ಚಕ್ರವರ್ತಿಯ ಬಳಿಗೆ ಬಂದು ಮುತ್ತನ್ನು ಅವನಿಗೆ ಒಪ್ಪಿಸಿದ.
ಚಕ್ರವರ್ತಿ ತುಂಬ ಸಂತೋಷಗೊಂಡ. ಮಗಳ ಜೊತೆಗೆ ವೀಸ್ಯಾನ್‌ನ ಮದುವೆ ಮಾಡಲು ಸಿದ್ಧನಾದ. ಆದರೆ ಅವನ ಮಗಳು ಕೂಡಲೇ ಅದಕ್ಕೆ ಸಿದ್ಧಳಾಗಲಿಲ್ಲ. “”ಇವನು ಪೆಡಂಭೂತದ ಬಳಿಗೆ ಗಾಳಿಪಟದಲ್ಲಿ ಕುಳಿತು ಸಲೀಸಾಗಿ ಹೋದೆ ಎಂದನಲ್ಲವೆ? ಆಗ ಪಟದ ದಾರ ಹಿಡಿದುಕೊಂಡವರು ಯಾರು? ಇವನು ಒಂದು ಸಲ ಅರಮನೆಯ ಅಂಗಳದಿಂದ ಹೀಗೆಯೇ ಮಹಡಿಯಲ್ಲಿರುವ ನನ್ನ ಅಂತಃಪುರಕ್ಕೆ ಬರಬಹುದೇ?” ಎಂದು ಕೇಳಿದಳು. ಈ ಮಾತು ಕೇಳಿ ವೀಸ್ಯಾನ್ ಮುಖ ಕಪ್ಪಿಟ್ಟಿತು. ಅವನಿಗೆ ಗಾಳಿಪಟದಲ್ಲಿ ಹಾರಲು ಸಾಧ್ಯವೇ ಆಗಲಿಲ್ಲ. ತಲೆತಗ್ಗಿಸಿ ನಿಂತು, ತಾನು ಒಡಹುಟ್ಟಿದ ಅಣ್ಣನಿಗೆ ಮೋಸ ಮಾಡಿ ಬಂದೆನೆಂದು ಒಪ್ಪಿಕೊಂಡ.
ಚಕ್ರವರ್ತಿಯ ಮಗಳು ದೂತರನ್ನು ಮೂಲೆ ಮೂಲೆಗೂ ಅಟ್ಟಿ ವೀವಿಂಗ್ ಎಲ್ಲಿದ್ದರೂ ಹುಡುಕಿ ಕರೆತರಲು ಹೇಳಿದಳು. ತಾನು ದೇಶದಲ್ಲಿದ್ದರೆ ತನ್ನ ತಮ್ಮನ ಮೋಸ ಬಯಲಾಗಿ ಅವನಿಗೆ ತೊಂದರೆಯಾಗಬಹುದೆಂದು ಅವನು ಹಡಗಿನಲ್ಲಿ ಕುಳಿತು ಬೇರೆ ದೇಶದೆಡೆಗೆ ಹೊರಟಿದ್ದ. ಅವನನ್ನು ದೂತರು ಚಕ್ರವರ್ತಿಯ ಬಳಿಗೆ ಕರೆತಂದರು. ವೀವಿಂಗ್ ಕೋರಿಕೆಯಂತೆ ಚಕ್ರವರ್ತಿ ಅವನ ತಮ್ಮನನ್ನು ಕ್ಷಮಿಸಿದ. ತನ್ನ ಮಗಳನ್ನು ವೀವಿಂಗ್‌ನಿಗೆ ಕೊಟ್ಟು ಮದುವೆ ನೆರವೇರಿಸಿದ.
– ಪರಾಶರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.