ಸಿಟಿ ಲೈಫ್: ಯಾಕೆ ಮಂದಿ ಹಳ್ಳಿಯಿಂದ ಪಟ್ಟಣಕ್ಕೆ ಬರುತ್ತಾರೆ?
Team Udayavani, Feb 25, 2018, 8:15 AM IST
ಟೊಮಾಟೋ, ಪಾಲ್ಕಾ, ಹಶೀ ಮೆಣಸಿನ್ ಕಾಯ್, ಕೊತ್ತಂಬ್ರಿ’- ಇದು ನಾನು ಈಗ ಇರುವ ಜಾಗದಲ್ಲಿ ಹೆಚ್ಚು ಕಡಿಮೆ ದಿನಾ ಕೇಳುವ ಸ್ವರ. ಜಂಕ್ಷನ್‌ನಲ್ಲಿ ಕಡ್ಲಿ ಗಿಡ, ಹೂವ, ಬೋಂಡಾ ಎಂದೆಲ್ಲ ಮಾರುವವರು, “ಕಲಾಯಿ, ಚೂರಿ, ಮಿಕ್ಸಿ ರಿಪೇರಿ’- ಎಂದೆಲ್ಲ ರಸ್ತೆಯಲ್ಲಿ ಕೂಗುತ್ತ ಹೋಗುವವರು, ಹೀಗೆ ದೈನಂದಿನ ಜೀವನವೇ ಹೋರಾಟವಾಗಿರುವವರ ಬದುಕು ನನ್ನಲ್ಲಿ ಕುತೂಹಲವನ್ನೂ ಬೆರಗನ್ನೂ ಏಕ ಕಾಲದಲ್ಲಿ ಹುಟ್ಟಿಸುತ್ತಿರುತ್ತದೆ. ತಿಂಗಳಿಗೆ ನಿಶ್ಚಿತ ಆದಾಯ, ವರಮಾನವಿರುವ ವರ್ಗದವರ ಬದುಕು ಒಂದು ಸ್ತರದಲ್ಲಿ ಇದ್ದರೆ ಸೀಮಿತ ವರಮಾನವಿರುವ, ಅಸಲಿಗೆ ನಷ್ಟಗಳೇ ಜಾಸ್ತಿ ಇರುವ ಕೃಷಿ ಆಧಾರಿತ ಆರ್ಥಿಕತೆಯ ಸಂಕಷ್ಟಗಳೇ ಬೇರೆ. ನನ್ನ ಸಹೋದ್ಯೋಗಿಗಳು ಕೆಲವರು ತಮ್ಮ ಹೊಲದಲ್ಲಿ ಬೆಳೆದ ಟೊಮೆಟೋವನ್ನು ಯಾರಿಗೆ ಬೇಕಾದರೂ ಹಾಗೆಯೇ ಕೊಡುತ್ತಾರಂತೆ. ಬೆಳೆದುದನ್ನು ಕೆಜಿಗೆ ಒಂದು ರೂಪಾಯಿಯಂತೆ ಮಾರಲು ಯಾರಿಗಾದರೂ ಹೇಗೆ ಮನಸ್ಸು ಬರುತ್ತದೆ? ಅದೂ ಅಲ್ಲದೆ ದೊಡ್ಡ ಸಿಟಿಗಳಿಗೆ ತಮ್ಮ ಉತ್ಪನ್ನಗಳನ್ನು ಸಾಗಿಸಲೂ ಖರ್ಚು. ಸಂತೆಯಲ್ಲಿ ದಿನದ ಕೊನೆಗೆ ಹತ್ತು ಕಟ್ಟು ಕೊತ್ತಂಬರಿ ಸೊಪ್ಪನ್ನು ಹತ್ತು ರೂಪಾಯಿಗೆ ಕೊಡುವ ಬಡ ರೈತನ ದೈನ್ಯ, ಜೀವನಕ್ಕೋಸ್ಕರ ಹೋರಾಟ ಇವೆಲ್ಲ ನಮ್ಮ ಕಣ್ಣು ತುಂಬದಿರದು. ಮಾರು ಮಲ್ಲಿಗೆ ಹೂವಿಗೆ, ಒಂದು ಪಾವು ಕಡ್ಲೆ ಕಾಯಿಗೆ ಚೌಕಾಸಿ ಮಾಡುವ ನಾವು ದೊಡ್ಡ ಮಾಲ್‌ಗಳು, ಕೆಫ‚ೆ, ಕಾಫಿ ಡೇಗಳಲ್ಲಿ, ಹೆಚ್ಚೇಕೆ ಚಪ್ಪಲಿ ಅಂಗಡಿಗಳಲ್ಲಿ ತೆಪ್ಪಗೆ ಕೇಳಿದಷ್ಟು ಬಿಲ್ ತೆತ್ತು ಬರುತ್ತೇವೆ.
ಇವಿಷ್ಟು ರೈತರ ಸಮಸ್ಯೆಗಳಾದರೆ ಹಳ್ಳಿಗಾಡಿನ ವಿದ್ಯಾರ್ಥಿಗಳ ಸಮಸ್ಯೆಗಳೇ ಬೇರೆ. ಕಾಲೇಜಿಗೆ ಹೋಗಲು ಅವರಿಗೆ ಸರಿಯಾದ ವ್ಯವಸ್ಥೆಗಳಿಲ್ಲ. ಟೆಂಪೋ, ಬಸ್ಸು, ರಿಕ್ಷಾಗಳಲಿ ತುಂಬಿಕೊಂಡೋ, ಮೈಲಿಗಟ್ಟಲೆ ಸೈಕಲ್ ತುಳಿದುಕೊಂಡೋ ಬರಬೇಕಾದ ಪರಿಸ್ಥಿತಿ. ಹೀಗಿದ್ದರೂ ಅನೇಕ ಹೆಣ್ಣುಮಕ್ಕಳು ಸೈಕಲ್ ಮೇಲೆ, ವಿರಳವಾದ ವಾಹನಗಳಿರುವ ರಸ್ತೆಯ ಮೇಲೆ ಸಾಲಾಗಿ ಸೈಕಲ್ ತುಳಿಯುತ್ತ, ಸ್ವತ್ಛ ಯೂನಿಫಾರಮ್ ಧರಿಸಿ ಪಾಠ, ಪುಸ್ತಕ ಎಂದೆಲ್ಲ ಚರ್ಚಿಸುತ್ತ ಮುಂದುವರಿಯುತ್ತಿರುವುದು ಮಹಿಳಾ ಸಬಲೀಕರಣದ ಸಂಕೇತದಂತೆಯೇ ಭಾಸವಾಗುತ್ತದೆ. ಸಿಟಿಯಲ್ಲಿನ ವಿದ್ಯಾರ್ಥಿಗಳಂತೆ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ “ಓದು ಓದು’ ಎಂದು ತಲೆ ತಿನ್ನುವವರಿಲ್ಲ. ಅಸಲಿಗೆ ಹೊಲದ ಕೆಲಸ, ರಾಗಿ ಕಣ ಎಂದೆಲ್ಲ ಅವರು ರಜೆ ಮುಗಿಸಿ ಕಾಲೇಜಿಗೆ ಬರುವುದೇ ನಿಧಾನವಾಗಿ. ಹೀಗಾಗಿಯೇ ಸ್ಕೂಲು-ಕಾಲೇಜುಗಳಲ್ಲಿ ಅರ್ಧಕ್ಕೇ ವಿದ್ಯಾಭ್ಯಾಸ ನಿಲ್ಲಿಸುವವರು, ಓದುತ್ತಿರುವಾಗಲೇ ಮದುವೆಯಾಗಿ ಎಳೆ ತಾಯಂದಿರಾಗುವವರು- ಹೀಗೆ ಅದೊಂದು ವರ್ತುಲ, ಅವಕಾಶ ವಂಚಿತ ಗ್ರಾಮ್ಯ ಬದುಕು. ಅರೆಹೊಟ್ಟೆಯಲ್ಲಿ ಏಳೆಂಟು ಮೈಲಿ ಸೈಕಲ್ ತುಳಿದುಕೊಂಡು, ಹಸು-ಕರು, ಕುರಿ-ರೊಪ್ಪ ಎಂದೆಲ್ಲ ಕೃಷಿ ಚಟುವಟಿಕೆಗೆ ಸಹಾಯ ಮಾಡುತ್ತ, ಪಠ್ಯಪುಸ್ತಕ, ಜೆರಾಕ್ಸ್ ಇತ್ಯಾದಿ ಅವಶ್ಯ ವಸ್ತುಗಳಿಗೂ ಹಣವಿಲ್ಲದೆ ಒದ್ದಾಡುತ್ತ, ಅದೊಂದು ಛಲದ, ಜೀವನ್ಮುಖೀ ಹೋರಾಟದ ಕತೆಯೂ ಹೌದು.
ವೈಟ್ ಕಾಲರ್ ಹುದ್ದೆಗಳಿಗೋಸ್ಕರ ಹಂಬಲಿಸುವ ಈ ಜಮಾನದಲ್ಲಿ ಹೆಚ್ಚು ಓದಲಾಗದವರು, ಪರೀಕ್ಷೆಯಲ್ಲಿ ಫೇಲಾದವರು ಮಾತ್ರ ಹಳ್ಳಿಯಲ್ಲಿ ಉಳಿಯುತ್ತಿರುವುದು ಕಹಿಸತ್ಯ. ಹಿರಿಯರ ಆಸ್ತಿ ಇದೆಯೆಂದೋ, ಆದರ್ಶಗಳಿಗೋಸ್ಕರವೋ, ಪ್ರಗತಿಪರ ಕೃಷಿಯನ್ನು ನೆಚ್ಚಿಕೊಂಡು ಛಲದಿಂದ ಮುಂದುವರಿಯುತ್ತಿರುವವರೂ ವಿರಳವಾಗಿ ಇ¨ªಾರೆನ್ನಿ. ಹಾಗಿದ್ದರೂ ಸಿಟಿಯ ವ್ಯಾಮೋಹ, ಅವಲಂಬನೆ ಯಾರನ್ನೂ ಬಿಟ್ಟಿಲ್ಲ. ಇನ್ನು ಹಳ್ಳಿಯ ಹೆಣ್ಣುಮಕ್ಕಳ ಕಷ್ಟಗಳು ಬೇರೆ ರೀತಿಯದ್ದು. ಹಟ್ಟಿ ಕೆಲಸದಿಂದ ಒಡೆಯುವ ಹಿಮ್ಮಡಿ, ಕಾಲು ಉಗುರುಗಳಲ್ಲಿ
ತುಂಬಿಕೊಳ್ಳುವ ಕೊಳೆ, ಬಾವಿಯ ನೀರು ಸೇದಿಯೋ, ಪಾತ್ರೆಗಳನ್ನು ಬೆಳಗಿಯೋ ಒರಟಾಗುವ ಕೈ, ಬೆವರಿಗೆ ಅಂಟಿಕೊಳ್ಳುವ ಕಮಟು ವಾಸನೆಯ ಕೂದಲು, ಲಘುವಾಗಿ ಮೈಯಿಂದ ಸೂಸುವ ಗಂಜಲದ ವಾಸನೆ… ಹೀಗೆ. ಸೌಂದರ್ಯ ಪ್ರಜ್ಞೆಯಿರುವ ಹೆಣ್ಣು ಮಕ್ಕಳು ತಮ್ಮ ದೈನಂದಿನ ಜೀವನದ ಅನಿವಾರ್ಯತೆಗೆ ಒಗ್ಗಿಕೊಳ್ಳಲಾಗದೆ ಕುಗ್ಗಿ ಹೋಗುವುದಿದೆ. ಅದೂ ಅಲ್ಲದೆ ಮುಟ್ಟು-ಮೈಲಿಗೆ, ಮಡಿ, ಸಂಪ್ರದಾಯ, ಜಾತ್ರೆ. ದೇವರು, ವ್ರತ ಎಂದೆಲ್ಲ ಜವಾಬ್ದಾರಿಗಳು ಅವರನ್ನು ಬಿಡಲೊಲ್ಲವು. ಹಳ್ಳಿಯಿಂದ ಸಿಟಿಗಳಿಗೆ ವರ್ಗಾವಣೆಗೊಳ್ಳುವುದು ಒಂದು ಸಹಜ ಕ್ರಿಯೆಯೆಂದೇ ಹೇಳಬೇಕು. ಒಮ್ಮೆ ವಿದ್ಯಾಭ್ಯಾಸಕ್ಕೆಂದೋ ಉದ್ಯೋಗಕ್ಕೆಂದೋ ಸಿಟಿಗೆ ಬಂದ ಹಳ್ಳಿಯ ಮಕ್ಕಳು ಹಳ್ಳಿಗೆ ಹೋಗಬಯಸುವುದು ವಿರಳ. ಸ್ವತ್ಛ ಗಾಳಿ, ಸಮೃದ್ಧಿಯುಳ್ಳ ಹೊಲಗದ್ದೆ ಎಲ್ಲ ಇದ್ದರೂ ಸಿಟಿಯಲ್ಲಿನ ಅನಾಮಿಕತನ, ತಮಗೆ ಬೇಕಾದ ಹಾಗೆ ಇರಬಲ್ಲ ಸ್ವಾತಂತ್ರ್ಯ ಇವೆಲ್ಲ ಹೆಚ್ಚಿನವರಿಗೂ ಆಕರ್ಷಣೀಯ. ಹೀಗಿದ್ದರೂ ಇದೀಗ ಒಂದು ಹೊಸ ಟ್ರೆಂಡ್ ಗಮನಿಸಬಹುದು. ಅದು ಒಂದೊಮ್ಮೆ ಕೃಷಿಕ ಕುಟುಂಬದವರಾಗಿದ್ದು, ಸಿಟಿಗೆ ವಲಸೆ ಹೋದವರ ಕೃಷಿಪ್ರೀತಿ ಸಿಟಿಯಲ್ಲೇ ಇದ್ದುಕೊಂಡರೂ ಅವರಿಗೆ ಹಳ್ಳಿಯ ನಂಟು ಬಿಡಲೊಲ್ಲದು. ತಮ್ಮ ಉದ್ಯೋಗ ನಿವೃತ್ತಿ ಸನಿಹ ಬಂದಂತೆ ಅವರು ತಮ್ಮ ಹಳ್ಳಿಯ ಬೇರುಗಳನ್ನು, ಕೃಷಿಪ್ರೀತಿಯನ್ನು ಮರಳಿ ಕಂಡುಕೊಳ್ಳಲೆತ್ನಿಸುತ್ತಿರುತ್ತಾರೆ. ಸಿಟಿಯ ಹೊರ ವಲಯದಲ್ಲೊಂದಷ್ಟು ಭೂಮಿ ಕೊಂಡು ಅಲ್ಲಿ ಸಮಾನಮನಸ್ಕರು ಒಂದಷ್ಟು ಜನ ಕೃಷಿಯ ಚಟುವಟಿಕೆಯನ್ನು ಪ್ರಯೋಗದಂತೆ ಕೈಗೆತ್ತಿಕೊಳ್ಳುವುದು, ಆರೋಗ್ಯ, ಸಾವಯವ ಕೃಷಿ , ತಾರಸಿ ತೋಟ ದಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳುವುದು ಹೀಗೆಲ್ಲ.
ತಿಂಗಳಿಗೆ ನಿಗದಿತ ವರಮಾನವಿರುವ, ತಮ್ಮ ಮಕ್ಕಳು ಮಧ್ಯಾಹ್ನ ಟಿಫಿನ್ ಬಾಕ್ಸ್ ಖಾಲಿ ಮಾಡದಿರುವುದೇ ಕ್ರೆçಸಿಸ್ ಎಂದು ತಿಳಿದುಕೊಂಡಿರುವವರು ಬಡ ರೈತರ ಪರಿತಾಪಕ್ಕೆ, ಘನತೆಯುಳ್ಳ ಬಾಳಿಗೋಸ್ಕರ ಅವರು ಪಡುವ ಬವಣೆಗೆ ಪ್ರತಿಸ್ಪಂದಿಸಬೇಕಲ್ಲವೆ?
ಜಯಶ್ರೀ ಬಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.