Special Story: ಮೂಗಿಗೆ ನೆಗಡಿ ಭಾರ!
Team Udayavani, Sep 10, 2023, 11:53 AM IST
ಶೀತ, ನೆಗಡಿ ಸೀಜನ್ ಕಾಯಿಲೆಗಳು. ಹಬ್ಬದಲ್ಲಿ ನೆಂಟರು ಬರುವಂತೆ ಮಳೆಗಾಲದಲ್ಲಿ ಇಂಥಾ ಕಾಯಿಲೆಗಳು ಬರುವುದು ಸಹಜ. ಊಟೋಪಚಾರ ಮಾಡಿ ಬಂದ ನೆಂಟರನ್ನು ಕಳಿಸುವಂತೆ, ಔಷಧೋಪಚಾರ ಮಾಡಿ ಕಾಯಿಲೆಗಳನ್ನೂ ಸಾಗ ಹಾಕಬೇಕು…
“ಟೂ ವೀಲ್ಹರ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿರುವಂತೆ ಮಳೆಗಾಲದಲ್ಲಿ ಓಡಾಡುವವರಿಗೆ ರೈನ್‌ಕೋಟ್, ಛತ್ರಿ ಕಡ್ಡಾಯ ಎಂಬ ರೂಲ್ಸ್ ಮಾಡಬೇಕು…’ ಎಂದುಕೊಂಡ ಶಂಕ್ರಿ.
“ಮಳೆಗಾಲದಲ್ಲಿ ಕೊಡೆ ಇಲ್ಲದೆ ಹೊರಗೆ ಹೋಗಬೇಡ’ ಎಂದು ಶಂಕ್ರಿ ಹೇಳಿದರೂ, ಅವನ ಹೆಂಡ್ತಿ ಸುಮಿ ಕೇಳಿರಲಿಲ್ಲ. “ಸಣ್ಣ ಮಳೆ ಅಷ್ಟೇ, ತಲೆ ಮೇಲೆ ಸೆರಗು ಹಾಕ್ಕೊಂಡು ಹೋಗಿರ್ತೀನಿ’ ಅಂತ ಹೋದವಳು ಜೋರು ಮಳೆಯಲ್ಲಿ ನೆನೆದು ಬಂದಿದ್ದಳು. ಪರಿಣಾಮ ಶೀತ, ನೆಗಡಿಯಾಗಿ ಮೂರು ದಿನದಿಂದ ಹಾಸಿಗೆ ಹಿಡಿದಿದ್ದಳು. ವರ್ಷಪೂರ್ತಿ ರಜೆ ಇಲ್ಲದೆ ಮನೆ ಕೆಲಸದಲ್ಲಿ ದುಡಿಯುವ ಸುಮಿ ಹಬ್ಬ-ಹರಿದಿನವಾಗಲೀ, ಕ್ಯಾಲೆಂಡರಿನಲ್ಲಿ ಕೆಂಪು ಡೇಟು ಇರುವ ದಿನಗಳಲ್ಲೂ ರಜೆ ಪಡೆಯದ ಕಾಯಕಜೀವಿ.
ಬಡಿಸಿದ್ದನ್ನು ಉಂಡು ಸಂಸಾರ ನಡೆಸುವ ಶಂಕ್ರಿಗೆ ತಾನೇ ಅಡುಗೆ ಮಾಡಿ ಕುಟುಂಬ ನಿರ್ವಹಣೆ ಮಾಡುವ ಆಸಕ್ತಿ, ಅನುಭವ ಇರಲಿಲ್ಲ. ಹೀಗಾಗಿ ಮೂರು ದಿನದಿಂದ ಹೋಟೆಲ್ ಊಟ, ತಿಂಡಿಯಲ್ಲಿ ಸಂಸಾರ ಸಾಗಿಸಿದ್ದ. ಶೀತ ಬಾಧೆ ಹೆಚ್ಚಾಗಿ “ಆಕ್ಷೀ, ಆಕ್ಷೀ…’ ಅಂತ ರಾತ್ರಿ ನಿದ್ರೆಯಿಲ್ಲದೆ, ಹಗಲು ನೆಮ್ಮದಿಯಿಲ್ಲದೆ ನರಳುತ್ತಿದ್ದಳು ಸುಮಿ. ಅವಳ ಸೀನಿನ ಸಂಕಟ ಕುಟುಂಬದ ಶಾಂತಿ, ನೆಮ್ಮದಿ ಕದಡಿತ್ತು. ಆರಂಭದಲ್ಲಿ ಮೂಗು ಒರೆಸಲು ಒಂದು ಕರ್ಚಿಪು ಸಾಕಾಗುವಷ್ಟಿದ್ದ ನೆಗಡಿ, ಬರುಬರುತ್ತಾ ಟವೆಲ್ ಗಾತ್ರಕ್ಕೆ ಉಲ್ಬಣಿಸಿತ್ತು, ಅದು ಬೆಡ್‌ಶೀಟ್ ಗಾತ್ರಕ್ಕೆ ಹೆಚ್ಚಾಗುವ ಮೊದಲು ಚಿಕಿತ್ಸೆ ಕೊಡಿಸಬೇಕೆಂದು, “ಆಸ್ಪತ್ರೆಗೆ ಹೋಗೋಣ…’ ಎಂದು ಶಂಕ್ರಿ ಬಲವಂತ ಮಾಡಿದ. ಶೀತ, ನೆಗಡಿ ಸಾಧಾರಣ ಕಾಯಿಲೆ. ತೈಲ ಹಚ್ಚಿ, ಕಷಾಯ ಕುಡಿದರೆ ಸಾಕು ವಾಸಿಯಾಗುತ್ತದೆ ಎಂದು ಸುಮಿ ಮಾತು ಮರೆಸಿದ್ದಳು.
ಪಕ್ಕದ ಮನೆಯವಳು ಬಂದು, ಸುಮಿ, ನಿನ್ನ ಸೀನಿನ ಸೌಂಡಿಗೆ ಮಲಗಿದ್ದ ನಮ್ಮ ಮಗು ಬೆಚ್ಚಿಬಿದ್ದು ಎಚ್ಚರಗೊಂಡು ಅಳುತ್ತಿದೆ. “ದಯವಿಟ್ಟು ಸೈಲೆಂಟಾಗಿ ಸೀನು…’ ಎಂದು ಹೇಳಿದ್ದಳು. “ಆಕ್ಷೀ… ಸೌಂಡ್ಲೆಸ್ ಕೆಮ್ಮು, ಸೀನು ಸಾಧ್ಯನಾ? ಆಕ್ಷೀ…’ ಎಂದಳು ಸುಮಿ. “ಕಿಟಕಿ ಬಾಗಿಲು ಹಾಕಿಕೊಂಡು ಸೀನು, ನಿನ್ನ ಸೀನಿನಿಂದ ವೈರಾಣುಗಳು ನಮ್ಮ ಮನೆಗೂ ಹರಡಿ ನಮಗೂ ಕಾಯಿಲೆ ಅಂಟಬಹುದು. ಡಾಕ್ಟರ್ ಹತ್ರ ಹೋಗಿ ಚಿಕಿತ್ಸೆ ತಗೊಳ್ಳಿ, ನೆರೆಹೊರೆಯವರು ಆರೋಗ್ಯವಾಗಿ ಬಾಳಲುಬಿಡಿ…’ ಎಂದು ನೆರೆಮನೆಯಾಕೆ ಎಚ್ಚರಿಕೆ ಕೊಟ್ಟು ಹೋಗಿದ್ದಳು.
ನೆರೆಹೊರೆಯವರು ಬಂದು ಗಲಾಟೆ ಮಾಡಿದರೂ ಹೆಂಡತಿಗೆ ಟ್ರೀಟ್ಮೆಂಟ್ ಕೊಡಿಸಲಿಲ್ಲ ಎಂಬ ಅಪವಾದ ಬರಬಾರದು ಎಂದು ಶಂಕ್ರಿ, ಡಾಕ್ಟರ್ ಬಳಿಗೆ ಹೋಗಲು ಸುಮಿಯನ್ನು ಒಪ್ಪಿಸಿದ. ಇವರ ಫ್ಯಾಮಿಲಿ ಡಾಕ್ಟರ್ ಡಾ. ಸೀನಪ್ಪನವರಿಗೆ ಶಂಕ್ರಿ ಕುಟುಂಬದೊಂದಿಗೆ ಅಪಾರ ಸಲುಗೆ, ಸ್ನೇಹ. ಟ್ರೀಟ್ಮೆಂಟ್ ಫೀಸ್‌ನಲ್ಲಿ ಡಿಸ್ಕೌಂಟ್ ಕೊಡದಿದ್ದರೂ, ಸಾಲ ಹೇಳಿ ಕಂತಿನಲ್ಲಿ ಪಾವತಿಸಲು ಅವಕಾಶವಿರುವಷ್ಟು ಡಾಕ್ಟರ್ ಆತ್ಮೀಯರು.
ಶಂಕ್ರಿ, ಸುಮಿ ಬಂದು ಡಾಕ್ಟರ್ ಸೀನಪ್ಪರ ಮನೆ ಬಾಗಿಲು ಬಡಿದರು. ಡಾಕ್ಟರ್ ಹೆಂಡತಿ ಬಾಗಿಲು ತೆರೆದು- “ನಮ್ಮ ಮೊಮ್ಮಗಳ ನಾಮಕರಣಕ್ಕೆ ಕರೆದಾಗ ಬರಲಿಲ್ಲ, ಬರ್ತ್ ಡೇ ಗೂ ಬರಲಿಲ್ಲ, ಈಗಲಾದರೂ ಬಂದಿರಲ್ಲಾ’ ಎಂದು ಸ್ವಾಗತಿಸಿದರು.
“ಕಾಯಿಲೆ ಕಸಾಲೆ ಬಂದಾಗ ಮಾತ್ರ ಇವರಿಗೆ ಡಾಕ್ಟರ್ ನೆನಪಾಗುತ್ತಾರೆ…’ ಎಂದು ಕಾಫಿ ಹೀರುತ್ತಾ ಕುಳಿತಿದ್ದ ಡಾ. ಸೀನಪ್ಪ ಹುಸಿ ಕೋಪ ತೋರಿದರು. “ಆಸ್ಪತ್ರೆಗೆ, ಪೊಲೀಸ್ ಸ್ಟೇಷನ್ನಿಗೆ ಪದೇಪದೆ ಹೋಗುತ್ತಿದ್ದರೆ ಜನ ತಪ್ಪು ತಿಳಿದುಕೊಳ್ತಾರೆ’ ಎಂದ ಶಂಕ್ರಿ.
“ಏನ್ರೀ ಸುಮಿ, ನಿಮ್ಮ ಮೂಗು ಕೆಂಪಗೆ ಊದಿಕೊಂಡಿದೆ!…’ ಕಾಫಿ ಕೊಡುತ್ತಾ ಡಾಕ್ಟರ್ ಹೆಂಡ್ತಿ ಕೇಳಿದರು. “ಶಂಕ್ರಿ ಮುಖ ನೋಡು, ಸುಟ್ಟ ಬದನೆಕಾಯಿ ಆಗಿದೆ’ ಎಂದು ಡಾಕ್ಟರ್ ಶಂಕ್ರಿಯ ಮುಖಭಾವ ಅಳೆದು ಕಿಚಾಯಿಸಿದರು.
“ಆಕ್ಷೀ… ಮೂದು ದಿನದಿಂದ ಶೀತ, ನೆಗಡಿಯಾಗಿ ಮೂದು ಭಾರ ಆಗಿದೆ ಆಂಟಿ, ಆಕ್ಷೀ…’ ಸುಮಿ ಸಂಕಟ ತೋಡಿಕೊಂಡಳು. “ಉಚ್ಛಾರಣೆ ಅಧ್ವಾನವಾಗುವಷ್ಟು ನೆಗಡಿ ವಿಪರೀತವಾಗಿದೆ, ಇಷ್ಟು ದಿನ ಏನು ಮಾಡ್ತಿದ್ರೀ?’ ಡಾಕ್ಟರ್ ಸಿಟ್ಟಾದರು. “ಆಕ್ಷೀ… ಮೂದಿನ ಸಹವಾಸ ಸಾಕಾಗಿದೆ ಡಾತ್ರೇ, ಯಾರಿಗಾದರೂ ದಾನ ಕೊದೋಣ ಅನಿಸಿಬಿಟ್ಟಿದೆ, ಆಕ್ಷೀ…’
“ಕಣ್ಣು, ಕಿಡ್ನಿ ದಾನ ಪಡೆಯುವವರಿ¨ªಾರೆ, ಮೂಗನ್ನು ಮೂಸಿ ನೋಡುವವರೂ ಇಲ್ಲ’. “ಸುಮಿಯ ಮೂಗಿನಲ್ಲಿ ವಿಪರೀತ ಸೋರಿಕೆಯಾಗುತ್ತಿದೆ. ಹೇಗಾದ್ರೂ ಮಾಡಿ ಸೋರಿಕೆ ನಿಲ್ಲಿಸಿ, ನೆಗಡಿ ನಿವಾರಿಸಿ…’ ಶಂಕ್ರಿ ಕೇಳಿಕೊಂಡ.
“ಎಂತೆಂಥಾ ಶೀತ, ನೆಗಡಿ ನಿವಾರಿಸಿದ್ದೇನೆ ಇದ್ಯಾವ ಮಹಾ…’
“ಮೂಗು ಒರೆಸಲು ದಿನಕ್ಕೆ ಎರಡು ಟವೆಲ್ ಬೇಕಾಗುತ್ತೆ ಡಾಕ್ಟ್ರೇ ಅಂದ ಶಂಕ್ರಿ.
“ದಿನಕ್ಕೆ ಎರಡು ಎಂದರೆ ಮೂರು ದಿನದಲ್ಲಿ ಆರು ಟವೆಲ್ ಬಳಸಿದ್ದೀರಾ?’
“ನಿಮ್ಮ ಲೆಕ್ಕ ಕರೆಕ್ಟಾಗಿದೆ ಸಾರ್’
“ನಿಮ್ಮ ಹೆಂಡತಿ ದಿನಕ್ಕೆ ಎಷ್ಟು ಸೀನು ಸೀನುತ್ತಾರೆ?’
“ಲೆಕ್ಕ ಹಾಕಿಲ್ಲಾ ಸಾರ್. ಇನ್ಮೆàಲೆ ಸೀನುಗಳ ಲೆಕ್ಕ ಇಡುತ್ತೇನೆ ಸರ್’
“ಒಂದು ಗಂಟೆಗೆ ಎಷ್ಟು ಸೀನು ಬರುತ್ತವೆ? ದಿನಕ್ಕೆ ಒಟ್ಟು ಎಷ್ಟು ಸೀನುಗಳಾಗಬಹುದು? ಮೂರು ದಿನದ ಸರಾಸರಿ ಸೀನುಗಳ ಸಂಖ್ಯೆ ಎಷ್ಟು ಎಂದು ಮಗಳ ಜೊತೆ ಸೇರಿ ಸೀನುಗಳನ್ನು ಎಣಿಸಿ, ಗುಣಿಸಿ ಲೆಕ್ಕ ಹಾಕಿದ್ದರೆ ಮಗಳ ಮ್ಯಾಥೆಮೆಟಿಕ್ಸ್ ನಾಲೆಡ್ಜ್ ಮತ್ತಷ್ಟು ಇಂಪೂ›ವ್ ಆಗ್ತಿತ್ತು’ ನಕ್ಕರು ಡಾಕ್ಟರ್.
“ನೀವು ಡಾಕ್ಟರ್, ನಿಮಗೆ
ಕಾಯಿಲೆಗಳು ಹೆದರುತ್ತವೆ, ಕಾಯಿಲೆಗಳು ನಮ್ಮನ್ನು ಹೆದರಿಸ್ತವೆ’ ಶಂಕ್ರಿ ತನ್ನ ಕಷ್ಟ ಹೇಳಿಕೊಂಡ.
“ನಮ್ಮ ಪಕ್ಕದ ಮನೆ ಹುಡುಗ ಪೊಲೀಸ್ ಅಂದರೆ ಹೆದರಲ್ಲ, ಈ ಡಾಕ್ಟರ್ ಹೆಸರು ಹೇಳಿ ಇಂಜೆಕ್ಷನ್ ಕೊಡಿಸ್ತೀವಿ ಅಂದ್ರೆ ಸಾಕು ಹೆದರಿಬಿಡ್ತಾನಂತೆ…’ ಡಾಕ್ಟರ್ ಹೆಂಡ್ತಿ ಗಂಡನ ಸಾಮರ್ಥ್ಯದ ಬಗ್ಗೆ ಬೀಗಿದರು.
“ಶೀತ, ನೆಗಡಿಯವರಿಗೆ ಚಿಕಿತ್ಸೆ ನೀಡುವ ನೀವು ಯಾವತ್ತೂ ಸೀನಿಲ್ಲ, ನಿಮ್ಮಲ್ಲಿ ನೆಗಡಿ ನಿರೋಧಕ ಶಕ್ತಿ ಇದೆಯಾ ಸಾರ್?’ ಶಂಕ್ರಿ ತಮಾಷೆ ಮಾಡಿದ.
“ನನ್ನ ಮುಂದೆ ಡಾಕ್ಟರ್ ಕೆಮ್ಮಂಗಿಲ್ಲ, ಸೀನಂಗಿಲ್ಲ… ಅವರ ಆರೋಗ್ಯವನ್ನು ಹಾಗೆ ಕಾಪಾಡಿದ್ದೇನೆ…’ ಅಂದ್ರು ಡಾಕ್ಟರ್ ಹೆಂಡ್ತಿ.
“ಕೆಮ್ಮು ಬಂದರೂ ಹೆಂಡ್ತಿ ಮುಂದೆ ಕೆಮ್ಮುವುದಿಲ್ಲ, ಅಚೆ ಹೋಗಿ ಕೆಮ್ಮಿ ಬರ್ತೀನಿ’ ಡಾಕ್ಟರ್ ಜೋಕ್ ಹೇಳಿದರು.
“ನಿಮ್ಮಿಬ್ಬರ ಕೆಮಿಸ್ಟ್ರಿ ಅರ್ಥವಾಯ್ತು, ನನ್ನ ಹೆಂಡತಿಯನ್ನು ಶೀತಮುಕ್ತ ಮಾಡಿ’.
“ಡೋಂಟ್ ವರಿ, ಶೀತ, ನೆಗಡಿ ಸೀಜನ್ ಕಾಯಿಲೆ. ಹಬ್ಬದಲ್ಲಿ ನೆಂಟರು ಬರುವಂತೆ ಮಳೆಗಾಲದಲ್ಲಿ ಇಂಥಾ ಕಾಯಿಲೆಗಳು ಬರುವುದು ಸಹಜ. ಊಟೋಪಚಾರ ಮಾಡಿ ಬಂದ ನೆಂಟರನ್ನು ಕಳಿಸುವಂತೆ, ಔಷಧೋಪಚಾರ ಮಾಡಿ ಕಾಯಿಲೆಯನ್ನೂ ಸಾಗಹಾಕಬೇಕು. ಮೂಗಿಗೆ ನೆಗಡಿ ಭಾರ ಆಗಬಾರದು…’ ಎಂದು ಡಾಕ್ಟರ್ ಸುಮಿಗೆ ನೀಡಬೇಕಾದ ಚಿಕಿತ್ಸೆ ನೀಡಿ, ಮಾತ್ರೆ, ಮದ್ದು ಕೊಟ್ಟರು.
ಸುಮಿಗೆ ಕುಂಕುಮ ಕೊಟ್ಟ ಡಾಕ್ಟರ್ ಹೆಂಡ್ತಿ, “ಆಗಿಂದಾಗ್ಲೇ ಮನೆ ಕಡೆ ಬರ್ತಾ ಇರಿ…’ ಎಂದು ಹೇಳಿ ಕಳಿಸಿದರು.
– ಮಣ್ಣೆ ರಾಜು, ತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.