ಕಾಂಕ್ರೀಟ್‌ ಸಂದಿಗ್ಧ 


Team Udayavani, Nov 24, 2019, 6:00 AM IST

mm-10

ಸಿಮೆಂಟು ಕೂಡ ಪ್ಲಾಸ್ಟಿಕ್‌ನಂತೆ ಅಪಾಯಕಾರಿಯಾಗುವ ದಿನ ಸಮೀಪಿಸುತ್ತಿದೆ. ಕಾಂಕ್ರೀಟ್‌ ಕಟ್ಟಡಗಳಿಂದ ಭೂಮಿಯ ತಾಪಮಾನ ಏರುತ್ತಿರುವ ಸುದ್ದಿ ಕೇಳಿಬರುತ್ತಿದೆ. ಸಿಮೆಂಟ್‌ನ್ನು ನಿಷೇಧಿಸಬೇಕೆಂಬ ಕೂಗು ನಿಧಾನವಾಗಿ ಕೇಳಿ ಬರುತ್ತಿದೆ.

ಈ ಜಗತ್ತಿನಲ್ಲಿ ನಾವು ಮನುಷ್ಯರು ನೀರಿಗೆ ಸರಿಸಮವಾಗಿ ಬಳಸುವ ವಸ್ತುವಿದ್ದಲ್ಲಿ, ಅದು ಕಾಂಕ್ರೀಟ್‌ ಎಂದು, ಈಗಿತ್ತಲಾಗಿ ಬಲು ನಿಸ್ಸಂದೇಹವಾಗಿ ಅಂದಾಜಿಸಲಾಗಿದೆ. ಅಂದಾಜಿಸುವುದೇನು, ಈಗಾಗಲೇ ಈ ಕುರಿತೊಂದು ಅಂಕಿಅಂಶಗಳ ನಿಗದಿಯನ್ನೂ ಹಚ್ಚಲಾಗಿದೆ!

ನೀವು, ಬರೇ ಈ ಎರಡು ಸಾಲುಗಳನ್ನು ಮತ್ತೆ ಮತ್ತೆ ಓದಿ ಅರಗಿಸಿಕೊಳ್ಳುವ ಹೊತ್ತಿಗೆಲ್ಲ, ನಮ್ಮ ಇಡೀ ವಿಶ್ವದಲ್ಲಿನ ಎಲ್ಲೆಲ್ಲಿನ ಒಟ್ಟಾರೆ ಲೆಕ್ಕದಲ್ಲಿ, ಸರಿಸುಮಾರು ಇಪ್ಪತ್ತು ಸಾವಿರ ಲಾರಿ-ಲೋಡಿನ ಕಾಂಕ್ರೀಟನ್ನು- ದುರುಳ ದುರ್ಗಮವಾದ ಕಾಡಿನಲ್ಲೋ, ಸುನಾಮಿಯುಕ್ಕಿಸುವ ಕಡಲಂಚಿನಲ್ಲೋ, ಮಂಜಿನ ಪ್ರಪಾತದ ಕಣಿವೆಗಳಲ್ಲೋ, ಬಲು ಭೀಷಣವಾದ ಬೆಟ್ಟಗಳ ನೆತ್ತಿಯಲ್ಲೋ, ಧರೆ ಜರೆಯಿಸಿ ಧುಮ್ಮಿಕ್ಕುವ ಭೀಕರ ನೀರುಗಳ ಅದಿಬದಿಯಲ್ಲೋ ಸುರುವಿರಲಾಗುತ್ತದೆ. ನೀವು ಈ ಓದನ್ನು ಮುಂದುವರೆಸಿ ನಿಜವಾದ ವಿಷಯಕ್ಕಿಳಿಯುವಷ್ಟು ಗಡುವಿನಲ್ಲಿ- ಜಗತ್ತಿನ ಒಂದಲ್ಲೊಂದು ಎಡೆಯಲ್ಲಿ ನಮ್ಮ ವಿಧಾನಸೌಧದಷ್ಟು ಘನಗಾತ್ರದ ಕಾಂಕ್ರೀಟು ಚೆಲ್ಲಿಕೊಂಡು, ಮಗ್ಗುಲಿನ ಕಬ್ಬನ್‌ ಪಾರ್ಕಿನ ಹರಹಿನಷ್ಟು ನೆಲವೆಲ್ಲ ಮರೆಮಾಚುವ ಹಾಗೆ ಹೊಮ್ಮಿ, ಗಟ್ಟಿಮುಟ್ಟಾಗಿ ಘನೀಭವಿಸಿರುತ್ತದೆ. ಇನ್ನು, ಒಂದು ದಿವಸ ಪೂರ್ತಿಯ ಲೆಕ್ಕ ಕೈಕೊಂಡು ನೋಡಿದರೆ ನಾಲ್ಕಾರು ಕನ್ನಂಬಾಡಿ-ಆಲಮಟ್ಟಿಗಳ ಒಟ್ಟು ನೀರಿನಷ್ಟು ಕಾಂಕ್ರೀಟುಕಟ್ಟೆ ಹುಟ್ಟಿರಲು ಸಾಕೇನೋ!

ಈ ಮಾತುಗಳನ್ನಾದರೂ ನಾನು, ಸದರಿ ಸಂಗತಿಯ ಸೋಜಿಗದ ಸಲುವಿನಲ್ಲಿ ಬರೆದ ಉತ್ಪ್ರೇಕ್ಷೆಯೇನಲ್ಲ ಅಥವಾ ಉತ್ಪ್ರೇಕ್ಷೆಯೇ ಆದರೂ ತಪ್ಪೇನಿಲ್ಲ. ಯಾಕೆಂದರೆ, ಕಳೆದ ನೂರು ವರ್ಷಗಳಿಂದೀಚೆಗೆ ಸರ್ವವ್ಯಾಪಿಯೆಂಬಷ್ಟು ವಿಪುಲವಾಗಿ ಬಳಸಲ್ಪಡುತ್ತಿರುವ ಪ್ಲಾಸ್ಟಿಕ್‌ ಎಂಬ ಪ್ಲಾಸ್ಟಿಕ್‌ಗೂ ಮಿಗಿಲಾದ “ಅಂತರ್ಯಾಮಿ’ತ್ವವನ್ನು ಕಾಂಕ್ರೀಟು ಹೊಂದಿದೆಯೆಂದರೆ ನಂಬಲಾದೀತೆ!

ಪ್ಲಾಸ್ಟಿಕ್‌-ಕಾಂಕ್ರೀಟುಗಳಾದರೂ ಕಣ್ಣೆದುರೇ ಸಂದುಹೋದ ಇಪ್ಪತ್ತನೆಯ ಶತಮಾನವು ಮನುಷ್ಯ-ಜಗತ್ತಿಗಿತ್ತ ಹೆಗ್ಗಳಿಕೆಗಳೇ ಸೈ! ಬಹುಶಃ ಹೆಗ್ಗೊಡುಗೆಯೆಂದರೂ ತಪ್ಪಾಗಲಿಕ್ಕಿಲ್ಲ. ಯೋಚಿಸಿ ನೋಡಿ: ಇವೆರಡೂ “ಮಾರೀಚ’ ವಸ್ತುಗಳೇ. ರಾಮಾಯಣದಲ್ಲಿ ಬರುವ ಮಾಯಾವಿ ಮಾರೀಚನ ಹಾಗೆ ಇಚ್ಛಾರೂಪಿಗಳೇ. ಅಂದರೆ ಅಂದುಕೊಂಡಿದ್ದೆಲ್ಲ ಅಂದುಕೊಂಡಂತೆಯೇ ಆಗಿ ಆಗಿಬಿಡುವ ಸಂಗತಿಗಳು! ನಿಮಗಾದರೂ ಗೊತ್ತೇ ಇದೆ- ಪ್ಲಾಸ್ಟಿಕ್‌ ಎಂಬುದರ ಅರ್ಥವೇ ಇದು: ಸುಲಭವಾಗಿ ಬೇಕಾದ ಆಕಾರಕ್ಕೆ ಎರೆಯಬಲ್ಲಂಥದ್ದು! ಈ ಅರ್ಥದಲ್ಲಿ ನೋಡಿದರೆ ಕಾಂಕ್ರೀಟು ಕೂಡ ತಕ್ಕಮಟ್ಟಿಗೆ “ಪ್ಲಾಸ್ಟಿಕ್ಕೇ’. ಯಾಕೆಂದರೆ, ಅದರ ದ್ರವರೂಪಿ-ಬೆರಕೆಯನ್ನು ಅಚ್ಚಿನೊಳಕ್ಕೆ ಎರೆದು ಬೇಕುಬೇಕಾದ ಆಕಾರವನ್ನು ತೆಗೆಯಬಲ್ಲೆವಷ್ಟೆ? ಇನ್ನು ಕಾಂಕ್ರೀಟ್‌ ಎಂಬುದರ ಮೂಲಾರ್ಥವಾದರೂ- ವಸ್ತುವೊಂದರ “ಭೌತರೂಪ’ವೆಂತಲೇ ಆಗಿದೆ. ಅಂದರೆ ಅದು ನಿರಾಕಾರಿ (ಅಬ್‌ಸ್ಟ್ರಾಕ್ಟ್) ಆದುದಲ್ಲ ಅನ್ನುವ ಇಂಗಿತ!

ಮಣ್ಣೊಡನೆ ಬೆರೆತು ಮಣ್ಣಾಗುವುದಿಲ್ಲ. ನೀರೊಳಗೆ ಕದಡಿ ನೀರಾಗುವುದಿಲ್ಲ.

ಇರಲಿ. ಇವೊತ್ತು ಜಾಗತಿಕವಾಗಿ ಪ್ಲಾಸ್ಟಿಕ್‌-ಕುರಿತಾಗಿ, ಅದು ಪರಿಸರದ ಸ್ಥಿರತೆಗೆ ಮಾರಕ ಎಂಬ ನವನವೀನವಾದ ಜಾಗೃತಿಯುಂಟಾಗಿದೆಯಷ್ಟೆ? ಪುನರ್‌ಸಂಸ್ಕರಿಸಲಾಗದ ಪ್ಲಾಸ್ಟಿಕ್‌ನ ಬಳಕೆಯನ್ನು, ಕ್ರಮಕ್ರಮೇಣವಾಗಿ, ಜಗತ್ತಿನ ಎಲ್ಲ ನಾಡುಗಳೂ ಸರಕಾರಗಳೂ ನಿಷೇಧಿಸುತ್ತಿವೆ. ಯಾಕೆಂದರೆ, ಒಮ್ಮೆಯುಂಟಾಗಿ ಮೈವಡೆದ ಪ್ಲಾಸ್ಟಿಕು- ಎಂದೆಂದೂ ನಶಿಸುವುದೇ ಇಲ್ಲ! ಕುಟ್ಟಿ ಜಪ್ಪಿ ಹಿಗ್ಗಾಮುಗ್ಗ ಎಳೆದಾಡಿದರೂ ಇಲ್ಲ’ವಾಗುವುದಿಲ್ಲ! ಮಣ್ಣೊಡನೆ ಬೆರೆತು ಮಣ್ಣಾಗುವುದಿಲ್ಲ. ನೀರೊಳಗೆ ಕದಡಿ ನೀರಾಗುವುದಿಲ್ಲ. ಗಾಳಿಯೊಡಗೂಡಿ ಗಾಳಿಯಾಗುವುದಿಲ್ಲ. ಇಂತಹ “ಸದಾವ್ಯಕ್ತ’ವಾದ ಪ್ಲಾಸ್ಟಿಕ್ಕನ್ನು ಭೂಮಿಯ ಮೇಲಿನಿಂದ ಇಲ್ಲವಾಗಿಸುವುದೆಂದರೆ ಸುಡುವುದೊಂದೇ ದಾರಿಯೆಂದು ನಮಗೆ ಗೊತ್ತು. ಹೀಗೆ ಸುಟ್ಟಾಗ ಹುಟ್ಟುವ ವಿಷಾನಿಲಗಳು ಉಂಟುಮಾಡುವ ಪರಿಪಾಟಲೂ ನಮಗೆ ಗೊತ್ತು. ಹೀಗಾಗಿಯೇ ಪರಿಸರವನ್ನು ಕುರಿತಾಡುವ ಜನವೆಲ್ಲ ಪ್ಲಾಸ್ಟಿಕ್‌ ಬಳಕೆಯನ್ನು ಅತ್ಯುಗ್ರವಾಗಿ ವಿರೋಧಿಸುವುದು!

ಇನ್ನು ಕಾಂಕ್ರೀಟು ಕೂಡ ಇಂಥದೇ ಒಂದು ವಸ್ತು. ಸುಟ್ಟರೂ ಹುಟ್ಟಡಗಲೊಲ್ಲದ ಸಾಮಗ್ರಿ!

ಕಾಂಕ್ರೀಟಿದ್ದಲ್ಲಿ ಹುಲ್ಲು ಸಹ ಹುಟ್ಟದೆಂದು ನಮಗೆ ಗೊತ್ತು. ಅದನ್ನು ನಾವು ಹುಟ್ಟಿಸಿದ್ದೇ ಈ ಕಾರಣಕ್ಕೆ: ಜಗತ್ತಿನ ಸಹಜ ಪ್ರಕೃತಿಯನ್ನು ಮಣಿಸಲಿಕ್ಕೆ. ವಾತಾವರಣದ ಶೀತೋಷ್ಣವನ್ನು ನಮ್ಮ ಸುತ್ತಮುತ್ತಲಿನಿಂದ ಹತ್ತಿಕ್ಕಿಕೊಳ್ಳಲಿಕ್ಕೆ. ಪ್ರಾಕೃತಿಕ ವಿಕೋಪಗಳನ್ನು ವಿರೋಧಿಸುವ ಒಡ್ಡಾಗಾಲಿಕ್ಕೆ, ಕಾಲಡಿಯ ಮಣ್ಣನ್ನು ಹೊರತಾಗಿಸಲಿಕ್ಕೆ. ಒದ್ದೆ ನೆಲವು ಕೆಸರಾಗದಂತೆ ತಡೆಯಲಿಕ್ಕೆ. ಅಣುವಿಕಿರಣದಲ್ಲಿ ಹುಟ್ಟುವ ಕೇಡಿನ ಕಿರಣಗಳು ಯಾವುದೇ ಜೀವದ ಮೈಮುಟ್ಟದಂತೆ ಕಾಯಲಿಕ್ಕೆ… ನಮ್ಮಗಳ ತಲೆತಲೆಯ ಮೇಲೂ ಸಿಡಿಲಿಗೂ ಬೆಚ್ಚದ ಸೂರಾಗಲಿಕ್ಕೆ!

ಹಾಗೆ ನೋಡಿದರೆ ಕಾಂಕ್ರೀಟು, ಅದರ ಅವಳಿ ಪ್ಲಾಸ್ಟಿಕ್‌ನಷ್ಟೇ (ಅಥವಾ ಇನ್ನೂ ಹೆಚ್ಚು) ಅಪಾಯಕಾರಿ. ಯಾಕೆಂದರೆ, ಅದು ಇದ್ದುಬಿದ್ದಲ್ಲೆಲ್ಲ ಭೂಮಿಯ ಫ‌ಲವಂತಿಕೆಯನ್ನೇ ಸಾಯಿಸಿ ಗೋರಿಗಳನ್ನು ಕಟ್ಟಿದೆ. ಮಣ್ಣಿನ ಸಹಜ-ಸಾರದೊಳಕ್ಕೆ ಕಡುಮರಣದ ಮದ್ದನ್ನು ಹೂಡಿದೆ. ಹೊಳೆಗಳನ್ನು ಇಕ್ಕಟ್ಟಾಗಿಸಿ ಉಸಿರುಗಟ್ಟಿಸಿದೆ. ನೀರೊಳಗಿನ ಮತ್ತು ಆಚೀಚಿನ ದಂಡೆಗಳಲ್ಲಿನ ಜೀವಚರಗಳ ಕೊರಳು ಹಿಸುಕಿದೆ. ಸಾಲದುದಕ್ಕೆ ಅದು ನದೀತಟದ ಮರಳಿನಿಂದಲೇ (ಮರಳನ್ನೇ ಹೊಂದಿ) ಉಂಟಾಗಿಯೂ, ನದಿಗಳ ಮತ್ತು ನದಿಯ ಮರಳಿನ ಕಳೇವರವೇ ಆಗಿಬಿಟ್ಟಿದೆ. ಇನ್ನು, ಇದೇ ಕಾಂಕ್ರೀಟನ್ನು ಮನುಷ್ಯಸಂಬಂಧಿತವಾದ ಇನ್ನೂ ಒಂದು ಕೋನದಲ್ಲಿ ನೋಡಿದರೆ- ಅದು ನಮ್ಮಲ್ಲಿನ ಒಬ್ಬೊಬ್ಬರನ್ನೂ ತನ್ನೊಳಗೆ ನೆಟ್ಟಿಟ್ಟುಕೊಂಡು, ಅದರಾಚೆಗಿನ ನಿಸರ್ಗವನ್ನು ಕುರಿತು ಏನೂ ಅನ್ನಿಸದಷ್ಟು ನಿಸ್ಸಂವೇದಿಗಳನ್ನಾಗಿಸಿಬಿಟ್ಟಿದೆ!

ಯೋಚಿಸಿ ನೋಡಿ : ಪ್ಲಾಸ್ಟಿಕ್‌ ಎಂಬ ಪ್ಲಾಸ್ಟಿಕ್‌ ಈ ಭೂಮಿಯಲ್ಲಿನ ಜೀವಾವರಣದೊಳಕ್ಕೆ ತಂದಿಟ್ಟಿರುವ ಹಲಸ ಕಲಕುತ್ತನ್ನೆಲ್ಲ ಕಾಂಕ್ರೀಟೂ ಉಂಟುಮಾಡಿದೆ. ಪ್ಲಾಸ್ಟಿಕ್ಕಿನಷ್ಟೇ ಜೀವಜಗತ್ತಿನ ಕತ್ತು ಕತ್ತರಿಸಿದೆ! ಆದಾಗ್ಯೂ, ಮರುಳ ನಾವು- ಈಗಿತ್ತಲಾಗಿ ಹೊಂದಿರುವ ಮತ್ತು ಹೊಂದಹೊಂಚುವ ಪ್ಲಾಸ್ಟಿಕ್‌-ವಿರೋಧಿ ಧೋರಣೆಯಂಥದೇ ಅಭಿಪ್ರಾಯವನ್ನು ಈ ಕಾಂಕ್ರೀಟಿನ ಮೇಲೆ ಹೊರೆಸಿಲ್ಲ. ಹೊರೆಸುತ್ತಿಲ್ಲ, ಅಷ್ಟೆ !

ಇದು ವಿಚಿತ್ರ ತಾನೇ?
ಈ ನಿಟ್ಟಿನಲ್ಲೇ ಮುಂದುವರೆದು ಹೇಳುವುದಾದರೆ, ಜಗತ್ತು ಕಳೆದೊಂದು ಶತಮಾನದಲ್ಲಿ ಉತ್ಪಾದಿಸಿರುವ ಪ್ಲಾಸ್ಟಿಕ್‌ನ ಒಟ್ಟು ಸಗಟು ಎಂಟುನೂರು ಟನ್‌ ಎಂದು ಅಂದಾಜಿಸಲಾಗಿದೆ. ಕಾಂಕ್ರೀಟಿನೊಳಗಿರುವ ನಿಜವಾದ ಮಾರಕ-ಸಾಮಗ್ರಿಯಾದ ಸಿಮೆಂಟನ್ನು, ಇದೇ ಅಳತೆಯಲ್ಲಿ, ನಾವು ಐದು ವರ್ಷಗಳಿಗೊಂದಾವರ್ತಿ ಹುಟ್ಟಿಸಿದ್ದೇವೆ! ಈ ಸಿಮೆಂಟ್‌ ಎಂಬುದು ಮರಳು ಮತ್ತು ಜಲ್ಲಿಕಲ್ಲಿನೊಡಗೂಡಿ ಉಂಟಾಗುವ ಕಾಂಕ್ರೀಟು- ಸಲಸಲವೂ ಇದೇ ಸಿಮೆಂಟಿಗಿಂತ ಎರಡು-ಮೂರು ಪಟ್ಟು ಹೆಚ್ಚು ದ್ರವ್ಯವನ್ನು ಸಂಪಾದಿಸಿಕೊಳ್ಳುತ್ತದೆ.

ಕಾಂಕ್ರೀಟನ್ನು ಪ್ಲಾಸ್ಟಿಕ್‌ನೊ ಡ‌ನೆ ಸ್ಥೂಲವಾಗಿ ಹೋಲಿಸಬಹುದಾದರೂ ಎರಡರ ನಡುವೆ ವ್ಯತ್ಯಾಸವಿಲ್ಲವೆಂದೇನಲ್ಲ. ಎರಡರ ಹುಟ್ಟಿನಲ್ಲೇ ಭೇದವಿದ್ದೇ ಇದೆ. ಅಲ್ಲದೆ, ಈ ವ್ಯತ್ಯಾಸದಲ್ಲೊಂದು ಸೋಜಿಗವೂ ಇದೆ. ಪ್ಲಾಸ್ಟಿಕ್‌ನ ಮೂಲಧಾತುವಿರುವುದು ಪೆಟ್ರೋಲಿಯಮ್‌ನಲ್ಲಿಯಷ್ಟೆ? ಅಂದರೆ, ನಾವು ನೆಲಕ್ಕೆ ಕನ್ನವಿಕ್ಕಿ ಎತ್ತುವ ಇಂಧನವನ್ನು ಬೇರೆ ಬೇರೆ ಉಷ್ಣತೆಗೀಡಾಗಿಸಿ ಸಂಸ್ಕರಿಸುವಾಗ, ನಡುವಿನದ್ದೊಂದು ತಾಪಮಾನದಲ್ಲಿ ಪ್ಲಾಸ್ಟಿಕ್‌ ಹುಟ್ಟಿಕೊಳ್ಳುತ್ತದೆ. ಆದರೆ, ಕಾಂಕ್ರೀಟು ಹಾಗಲ್ಲ. ಅದು ನೆಲದ ಮೇಲ್ಮೆ„ಯಲ್ಲಿರುವ ವಸ್ತುಗಳಿಂದಲೇ ಆಗಿರುವಂಥಾದ್ದು. ಬೆಟ್ಟಗಳ ಮೈಹೆರೆದ ಕಲ್ಲುಗಳಿಂದಲೂ, ಹೊಳೆದಂಡೆಯನ್ನೆಲ್ಲ ಎಬ್ಬಿ ಎಬ್ಬಿ ಎತ್ತಲ್ಪಟ್ಟ ಮರಳಿನಿಂದಲೂ ಆದಂಥದ್ದು. ಅಂದರೆ ಪ್ಲಾಸ್ಟಿಕ್‌ ನೆಲ ಬಗಿದುಕೊಂಡು ಹುಟ್ಟಿದ್ದು. ಕಾಂಕ್ರೀಟು ಅದೇ ನೆಲದ ಮೈಯನ್ನೆಲ್ಲ ತರಿತರಿಯುತ್ತ ಉಂಟಾಗಿದ್ದು! ಹೇಗಿದೆ ವರಸೆ?

ಅಸಲಿನಲ್ಲಿ ವರಸೆಯೇ ಹೀಗಿರುವಾಗ ಕಾಂಕ್ರೀಟು ಪ್ಲಾಸ್ಟಿಕ್‌ನಷ್ಟು ಹಾನಿಕಾರಕವಲ್ಲವೆಂದು ಬಗೆಯುವುದು ಎಷ್ಟು ಸರಿ? ತಲೆ ತೆಗೆದರೇನು ಎದೆ ಬಗಿದರೇನು- ಸಾವು ಸಾವೇ ತಾನೆ !

ಇಷ್ಟಿದ್ದೂ, ಆಧುನಿಕ ಜಗತ್ತಿನ ಬಹುತೇಕ ನಾಡುಗಳಲ್ಲಿನ ಎಲ್ಲ ಸರಕಾರಗಳೂ ಬಲು ಸ್ವಾಭಾವಿಕವಾಗಿ ಪಿಟಿಪಿಟಿಸುವ ಅಭಿವೃದ್ಧಿಯ ಮಂತ್ರದ ಮೇರೆಗೆ, ಕಾಂಕ್ರೀಟು- ತಾನಲ್ಲದೆ ಜನೋದ್ಧಾರವೇ ಇಲ್ಲವೆಂಬಷ್ಟು ಮಟ್ಟಿಗೆ ಎಲ್ಲೆಲ್ಲೂ ಅನಿವಾರ್ಯವಾಗಿಬಿಟ್ಟಿದೆ. ಜಗದುತ್ಥಾನದ ಕಾಯಕಲ್ಪವೇ ತಾನೆಂಬಷ್ಟು ಜಗದ್ವ್ಯಾಪಿಯಾಗಿದೆ!

ಹೀಗಾಗಿಯೇ ಯಾವ ಪರಿಸರತಜ್ಞನು ಎಷ್ಟೇ ಗಟ್ಟಿಯಾಗಿ ಬೊಂಬಡ ಹೊಡೆದರೂ, ಯಾರೇ ಪರಿಪರಿಯಾಗಿ ಗಂಟಲು ಹರಿಯಗೊಟ್ಟರೂ- ಯಾವ ಪ್ರಜಾಸತ್ತೆಯೂ ಕ್ಯಾರೇ ಅನ್ನುವುದಿಲ್ಲ. “ಸ್ಸಾರೀ’ ಹೇಳಿ ಓಲೈಕೆಗೆ ತೊಡಗುವುದಿಲ್ಲ. ತಪ್ಪಾಯಿತೆಂದು ಪಶ್ಚಾತ್ತಾಪಿಸಿ ಮರುಗುವುದಿಲ್ಲ! ಯಾಕೆಂದರೆ ಕಾಂಕ್ರೀಟಿನ ಯಾವ ತುಣುಕು ತುಂಡೂ ಪ್ಲಾಸ್ಟಿಕ್ಕಿನ ಹಾಗೆ ದನಗಳ ಗಂಟಲಿನಲ್ಲಿ ಸಿಕ್ಕಿ ಸಾವು ತರುವುದಿಲ್ಲ. ತಿಮಿಂಗಿಲಗಳ ಕರುಳು ಕಿವುಚಿ ರಕ್ತ ಕಾರಿಸುವುದಿಲ್ಲ. ನಮ್ಮ ನೆತ್ತರೊಳಗಿನ ಕಣದಲ್ಲಾದರೂ, ಈವರೆಗೆಲ್ಲೂ ಕಾಂಕ್ರೀಟಿನ ಅಂಶ ಪತ್ತೆಯಾಗಲಿಕ್ಕಿಲ್ಲ. ಹೀಗಿರುವಾಗ, ಯಾರೋ ನನ್ನಂಥವನೊಬ್ಬ ಕಾಂಕ್ರೀಟು ನಿಜಕ್ಕೂ ಅಪಾಯಕಾರಿಯೆಂದು ಹೇಳಿ ದರೆ ನಂಬುವವರುಂಟೆ? ನೆಚ್ಚುವವರುಂಟೆ? ಬ್ರಾಂತು ತಾನೆ !

ಕಾಂಕ್ರೀಟನ್ನು ಎಲ್ಲೆಡೆಯ ಜನವೂ ಜನದಷ್ಟೇ ಜಗವೂ ಮೆಚ್ಚಿ ನೆಚ್ಚಿ ಹಚ್ಚಿಕೊಂಡಿರುವುದು ಅದರ ಇನ್ನಿಲ್ಲದ ಸಬಲತೆಯ ಮೇರೆಗೆ. ನಾವು ಸತ್ತರೂ ಸೂರು ಮುರಿಯಬಾರದೆನ್ನುವ ನಂಬಿಕೆಯ ಮೇರೆಗೆ. ಹೌದು! ಕಾಂಕ್ರೀಟು ಶಕ್ತಿಶಾಲಿಯೆಂಬಷ್ಟೇ ಸಹಿಷ್ಣುವೂ ಹೌದು! ಎಂತೆಂಥ ಪ್ರಾಕೃತಿಕ ಕೋಪಾಟೋಪ- ತಾಪದಲ್ಲೂ ಅದರ ಸಹನೆಯ ಕಟ್ಟೆಯೊಡೆಯದು.

ತನ್ನ ಶಕ್ತಿ-ಸಹಿಷ್ಣುತೆಗಳ ಮೇರೆಗಷ್ಟೇ ಕಾಂಕ್ರೀಟು- ಆಧುನಿಕತೆ ಮತ್ತು ಆಧುನಿಕ ಬದುಕುಗಳ ಅಡಿಪಾಯವಾಗಿರುವುದು. ಅದರಿಂದ ಕಟ್ಟಿದ ಯಾವುದೂ ವಯಸ್ಸನ್ನೇ ಸೆಣಸಿ ಚಿರಾಯುವಾಗಿರುವುದು. ಹೀಗೆ ಕಾಲ-ಪ್ರಕೃತಿಗಳ ಮೇಲೆ ಏಕತ್ರವಾಗಿ ಹಕ್ಕು-ಹದ್ದುಬಸ್ತು ಸಾಧಿಸುವುದೇನು ಸುಮ್ಮಗೆಯೆ? ಇಂತಹ ಕಾಂಕ್ರೀಟಿನೊಳಕ್ಕೆ ಉಕ್ಕಿನ ಕಂಬಿಗಳನ್ನು ಹೂಡಿ ಹತೋಟಿ ಹಚ್ಚುವುದೇನು ಸಾಮಾನ್ಯವೆ? ಉಕ್ಕನ್ನು ಒಳವುಡಿಯಲ್ಲಿಟ್ಟುಕೊಂಡ ಕಾಂಕ್ರೀಟು ಯಾವ ಪ್ರಳಯವನ್ನೂ ತಡೆಯಬಲ್ಲ ಅಣೆಕಟ್ಟಾಗುವುದು. ಕಡಲನ್ನೇ ದಾಟಿಸಬಲ್ಲ ಸೇತುವೆಯಾಗುವುದು. ಆಕಾಶವನ್ನೇ ಮುಟ್ಟಹೊಂಚುವ ಗೋಪುರಗಳಾಗುವುದು.

ಘನತೆ ಮತ್ತು ಗಟ್ಟಿತನಗಳೇ ಸಿಮೆಂಟಿನ ಬಹೂಪಯೋಗಿ ಗುಣಧರ್ಮ
ಇಷ್ಟು ಘನಗಟ್ಟಿಯಾದ ಕಾಂಕ್ರೀಟನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ. ಅಸಲಿನಲ್ಲಿ ಈ “ಘನ’ತೆ ಮತ್ತು ಗಟ್ಟಿತನಗಳೇ ಅದರ ಬಹೂಪಯೋಗಿ ಗುಣಧರ್ಮವೆನ್ನಬಹುದು. ಕಂಡುಕೇಳಿದ್ದಕ್ಕೆಲ್ಲ ಬಳಕೆಗೆ ಬರುವ ಸದರಿ ಕಾಂಕ್ರೀಟಿನ ವಿಪುಲತೆಯೇ ವಿಫ‌ಲತೆಯೆನ್ನಬಹುದಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಬಹುಶಃ ಪರಿಹಾರವೇ ಸಮಸ್ಯೆಯೆಂದೆನಿಸುವ ಹೊಸ್ತಿಲಿನಲ್ಲಿ ಈ ಇಪ್ಪತ್ತೂಂದನೆಯ ಶತಮಾನವೇ ಖುದ್ದು ಬಂದುನಿಂತಿದೆ !

ಇವತ್ತಿನ ಜಗತ್ತು ತನ್ನ ಒಟ್ಟು ಉಷ್ಣತೆಯಲ್ಲಿನ ಏರುಪೇರನ್ನು ಜಾಗತಿಕ ತಾಪಮಾನದ ಅಡಿಯಲ್ಲಿ ಗುರುತಿಸುತ್ತಿರುವಾಗ, ಇದಕ್ಕೆ ಕಾಂಕ್ರೀಟಿನ ಕೊಡುಗೆಯೇನೂ ಕಡಿಮೆಯಿದ್ದಂತಿಲ್ಲ. ಕಾಂಕ್ರೀಟನ್ನು ಇನ್ನೆಂದೂ ಇದ್ದಿರದಷ್ಟು ಗಟ್ಟಿಯಾದ ಬೆರಕೆಯಾಗಿಸುವ ಸಿಮೆಂಟಿನ ಉತ್ಪಾದನೆಯಾದರೂ ಒಂದರ್ಥದಲ್ಲಿ ಇಂಗಾಲದ ಡೈಆಕ್ಸೆ„ಡಿನ ಉತ್ಪತ್ತಿಯೂ ಆಗಿದೆ.

ಸಿಮೆಂಟು ತಯಾರಿಕೆಯ ಕೆಲವಾರು ಹಂತಗಳಲ್ಲಿ ಈ ವಿಷಾನಿಲವು ಹೊಮ್ಮಿ ವಾತಾವರಣವನ್ನು ಸೇರುತ್ತದೆ. ಇವೊತ್ತು ನಮ್ಮ ವಾಯುಮಂಡಲವನ್ನು ಕಲುಷಿತಗೊಳಿಸುವಲ್ಲಿ ಈ ದುರುಳಾನಿಲದ ಪಾತ್ರವೇನೆಂದು ನಮಗೆ ಗೊತ್ತೇ ಇದೆ. ಸೌದೆಯಿಂದ ಮೊದಲುಗೊಂಡು ಪೆಟ್ರೋಲು ಡೀಸಲು ಇತ್ಯಾದಿಯನ್ನೂ ಒಳಗೊಂಡು ಯಾವುದೇ ಪ್ರಾಣಿಯ ಹೆಣವನ್ನು ಸುಟ್ಟಾಗಲೂ ಇಂಗಾಲದ ಡೈಆಕ್ಸೆ„ಡು ಹುಟ್ಟುತ್ತದಷ್ಟೆ? ಸಸ್ಯಜಗತ್ತಿನಲ್ಲಿನ ಪ್ರತಿಯೊಂದು ಭಾಗವು ಶೇ. ಐವತ್ತಕ್ಕೂ ಹೆಚ್ಚು ಪಾಲು ಇಂಗಾಲದಿಂದಲೇ ಆಗಿದೆ. ಇದರ ನಿಗದಿಯನ್ನು ಕಾರ್ಬನ್‌-ಮಾಸ್‌ ಅಂದರೆ ಇಂಗಾಲದ್ರವ್ಯವೆಂದು ಗುರುತಿಸಲಾಗುತ್ತದೆ. ನಾವು ಸ್ವಾನುಕೂಲಕ್ಕೆಂದು ಸಸ್ಯಜನ್ಯ ವಸ್ತುಗಳನ್ನು ಸುಟ್ಟಾಗಲೆಲ್ಲ ಇಂಗಾಲದ ಡೈಆಕ್ಸೆ„ಡ್‌ ಹುಟ್ಟಿ ಹೊಗೆಯೊಟ್ಟಿಗೆ ಆಕಾಶದಲ್ಲಿ ಕದಡಿಕೊಳ್ಳುತ್ತದೆ. ಇದಕ್ಕೆ ಪೆಟ್ರೋಲಿಯಮ್ಮು ಸಹ ಹೊರತಾದುದಲ್ಲ.

ಸದ್ಯದ ಲೆಕ್ಕಾಚಾರದ ಪ್ರಕಾರ- ಕಾಂಕ್ರೀಟಿನಲ್ಲಿರುವ “ಇಂಗಾಲದ್ರವ್ಯ’ವು, ಸರಿಸುಮಾರಾಗಿ ಜಗತ್ತಿನಲ್ಲಿರುವ ಒಟ್ಟು ಸಸ್ಯರಾಶಿಯಲ್ಲಿ ಇರುವುದಕ್ಕೂ ಹೆಚ್ಚೆಂದು ಅಂದಾಜಿಸಲಾಗಿದೆ. ಗಿಡಮರಗಳು ತಮ್ಮೊಡಲಿನಲ್ಲಿ ಇಂಗಾಲವನ್ನು ಕಟ್ಟಿಕೊಂಡಿದ್ದರೂ, ಅವುಗಳೆಲ್ಲ ತಮ್ಮ ಬೆಳವಣಿಗೆಯ ಸಲುವಾಗಿ ಸೂರ್ಯದ ಬೆಳಕೆರೆದುಕೊಂಡು ದ್ಯುತಿಸಂಶ್ಲೇಷಣೆ ಕೈಕೊಳ್ಳುವಾಗ ಆಮ್ಲಜನಕವನ್ನು ಉತ್ಪಾದಿಸುತ್ತವೆ. ಆದರೆ, ಈ ಕಾಂಕ್ರೀಟು ಮಾತ್ರ, ಯಾವ ಮುಲಾಜೂ ಇಲ್ಲದೆ ಈ ಸಸ್ಯಗಳನ್ನು ಹತ್ತಿಕ್ಕಿ, ಅವಕ್ಕೂ ಹೆಚ್ಚು ಇಂಗಾಲವನ್ನು ಹೊತ್ತುಕೊಂಡು ಉಂಟಾಗಿಬಿಟ್ಟಿದೆ.

ಇನ್ನು ಕಾಂಕ್ರೀಟಿಗೆ ನೀರಿನ ದಾಹವೂ ಇದೆ. ಅದರ ಜಲತೃಷೆಯಾದರೂ ನೀರನ್ನೇ ನೆಚ್ಚಿ ಬದುಕುತ್ತಿರುವ ಜೀವಲೋಕಕ್ಕೂ ಹೆಚ್ಚಾಗಿದೆ. ಜಗತ್ತಿನ ಸಮಸ್ತ ಕೈಗಾರಿಕೆಗಳು ಒಟ್ಟಾರೆ ಬಳಸುವ ನೀರಿನ ಅಳತೆಯಲ್ಲಿ ಶೇಕಡ ಇಪ್ಪತ್ತು ಪಾಲನ್ನು ಕಾಂಕ್ರೀಟು ಗಟಗಟಿಸಿ ಕುಡಿಯುತ್ತದೆ. ಸಾಲದುದಕ್ಕೆ ನಾವು ಇವೊತ್ತಿನ ನಾಗರಿಕತೆಗಳನ್ನು ಕಟ್ಟಿರುವುದೇ ನೀರನ್ನು ನೆಚ್ಚಿ. ಎಲ್ಲಿಯದೋ ನೀರನ್ನು ದೈತ್ಯಗಾತ್ರದ ಕೊಳಾಯಿಗಳಲ್ಲಿ ಇನ್ನೆಲ್ಲಿಗೋ ಹರಿಯಗೊಟ್ಟು. ನಾವು ನೇರ ಕುಡಿಯುವುದಕ್ಕೂ ಹೆಚ್ಚು ನೀರನ್ನು ಕಾಂಕ್ರೀಟ್‌ ಎಂಬ ಕಾಂಕ್ರೀಟೇ ಒಳಗೊಳಗೇ ಕುದ್ದು ಕುದ್ದು ಬಾಯಾರಿ ಖುದ್ದು ಕುಡಿದುಬಿಡುತ್ತದಾದರೆ ಏನನ್ನುವುದು? ಏನು ಮಾಡುವುದು? ಬೆಂಗಳೂರಿಗೆ ತರಲಾಗುವ ಅರ್ಧಕ್ಕೂ ಹೆಚ್ಚು ಕಾವೇರಿಯನ್ನು ಕಟ್ಟಡ ಕಾಮಗಾರಿಯೇ ಪೋಲು ಮಾಡುವಲ್ಲಿನ ಸತ್ಯದ ಲೆಕ್ಕವೇನು? ಜಮೆಯೇನು?

ನಿಮಗೆ ಗೊತ್ತಿದೆಯೋ ಕಾಣೆ, “ಸಿಲಿಕೋಸಿಸ್‌’ ಎಂದೊಂದು ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಿದೆ. ಇದು ಧೂಳು-ಮರಳಿನಲ್ಲಿರುವ ಸಿಲಿಕಾನು ನಮ್ಮ ಶ್ವಾಸಕೋಶಗಳನ್ನು ಹೊಕ್ಕು ಕುಳಿತು ಉಸಿರಿಗೇ ಕುತ್ತುಂಟುಮಾಡುವ ರೋಗ. ಕಾಂಕ್ರೀಟ್‌ನಲ್ಲಿನ ಸಿಮೆಂಟು ಮತ್ತು ಮರಳುಗಳ ಧೂಳು-ಗಾಳಿಯೊಡನೆ ಬೆರೆತು ನಮ್ಮ ಸಿಟಿಗಳಲ್ಲಿನ “ಪ್ರಾಣ’ವನ್ನೇ ಮಲಿನಗೊಳಿಸುವುದರ ಬಗ್ಗೆ ಯಾರೂ ಹೆಚ್ಚಾಗಿ ಆಡುವುದಿಲ್ಲ. ಅಷ್ಟೇ ಕೇಳಗೊಡುವುದೂ ಇಲ್ಲ. ದೇಶದ ರಾಜಧಾನಿ ದೆಹಲಿಯಲ್ಲಿನ ವಾಯುಮಾಲಿನ್ಯಕ್ಕಾದರೂ- ಮುಟ್ಟಿತಟ್ಟಿದರೆ ಸಾಕು ಧೂಳು ಹೊಮ್ಮುವ ಸಿಮೆಂಟು ಮೂಟೆಗಳು ನೂರರಲ್ಲಿ ಹತ್ತು ಪಾಲಿನ ಕಾರಣವಾಗುತ್ತಿವೆಯೆಂದರೆ ನಂಬಲಾಗುವುದಿಲ್ಲ. ಈ ಪರಿ ಕೊಳೆಗಾಳಿಯನ್ನು ಉಂಟುಮಾಡುವ ಕಾರಣಗಳಲ್ಲಿ ನಮ್ಮ ನಗರಗಳ ಸುತ್ತಮುತ್ತಲಿರುವ ಸುಣ್ಣದ ಕ್ವಾರಿಗಳ ಮತ್ತು ಸಿಮೆಂಟು-ಫ್ಯಾಕ್ಟರಿಗಳ ಗಾತ್ರಪಾತ್ರಗಳನ್ನು ಎಷ್ಟು ಆಡಿದರೂ ಕಡಿಮೆಯೇ.

ಇನ್ನು, ಜಗತ್ತಿನ ಎಲ್ಲೆಡೆಯಲ್ಲೂ ಈಗಿತ್ತಲಾಗಿ ಕೇಳಸಿಗುವ ಪ್ರವಾಹ-ಸಮಸ್ಯೆಯ ಕಾರಣವಾದರೂ, ನಮ್ಮ ನಗರಗಳೊಳಗಿನ ನೆಲಗಳು ಕಂಡಕಂಡಲ್ಲೆಲ್ಲ ಕಾಂಕ್ರೀಟು ಹೊದ್ದುಕೊಂಡಿರುವ ಮೇರೆಗೆಂದೂ ಬಗೆಯಲಾಗಿದೆ. ನೀರನ್ನು ಒಳಗಿಳಿಸಿಕೊಂಡು ಇಂಗಗೊಡುವ ಭೂಮಿಯ ಸಹಜ ಸ್ವಭಾವವನ್ನೇ ಬಗ್ಗುಬಡಿಯುವ ಕಾಂಕ್ರೀಟಿನ ಕೇಡಿನ ಮಗ್ಗುಲಾದರೂ- ಈ ಪರಿಯ ವಿಕೋಪಗಳಲ್ಲಿ ಎದ್ದುಕಾಣುತ್ತದೆ. ದುಬೈಯಂತಹ ಅರಬ್ಬೀ ನೆಲದಲ್ಲೂ ಧಾರಾಕಾರ ಮಳೆ ಸುರಿದು ನೆರೆ ಬರುತ್ತದೆಂದರೆ ಸೋಜಿಗವೇ ತಾನೆ? ಈ ಸೋಜಿಗದ ಮೂಲವಿರುವುದು ಕಾಂಕ್ರೀಟ್‌ನಲ್ಲೆಂಬುದೂ ಸೋಜಿಗವೇ ಹೌದಷ್ಟೆ?

ಕೊಲ್ಲಿ ದೇಶಗಳ ನೆತ್ತಿಯೇ ತಾನೆಂದು ಬೀಗುವ ಬುರ್ಜಾಖಲೀಫಾದ ನೂರರವತ್ತಕ್ಕೂ ಹೆಚ್ಚು ಮಹಡಿಯ ಎತ್ತರಕ್ಕೆ ಮನುಷ್ಯ-ನಾಗರಿಕತೆಯ ತೊಟ್ಟಿಲು ತೂಗುವ ಕಾಂಕ್ರೀಟು, ಅದೇ ನಾಗರಿಕತೆಯ ಮುಳುವನ್ನೂ ಸಾಧಿಸಬಲ್ಲುದೆಂದರೆ ನಂಬಲಾದೀತೇನು? ಶತಮಾನದಿಂದೀಚೆಗಿನ ನಗರಗಳನ್ನು ಕಟ್ಟಿರುವ ಕಾಂಕ್ರೀಟು- ಅವವೇ ನಗರಗಳೊಳಗಿನ ನಮ್ಮನ್ನೇ ನುಂಗಿ ನೊಣೆಯಬಲ್ಲ ಸಾಧ್ಯತೆಯನ್ನೂ ಹೊಂದಿವೆಯೆಂಬುದು ಸತ್ಯವೇ ಹೌದು!

ಇಂದು ಜಗತ್ತಿನೆಲ್ಲೆಡೆಯ ಸೂಕ್ಷ್ಮಸಂವೇದನೆಗಳೆಲ್ಲ ಒಂದುಗೂಡಿ- “ಸಸ್ಟೇನ್‌ಬಿಲಿಟಿ’ ಅಂದರೆ ಪರಿಸರದ ಸ್ಥಿರತೆ ಮತ್ತು ಸಂಗೋಪನೆಯ ಬಗ್ಗೆ ಚಿಂತಿಸುತ್ತಿರುವ ನಡುವೆ, ಹೀಗೊಂದು ಸತ್ಯವೂ ಈಗಿತ್ತಲಾಗಿ ಬಯಲಾಗಿದೆ. ಕ್ಲೆ çಮೇಟ್‌ಛೇಂಜ್‌ ಅಂದರೆ ಕಳೆದ ಐವತ್ತು ವರ್ಷಗಳಲ್ಲಿ ಬದಲಾಗಿರುವ ವಾತಾವರಣವೇ ಸದ್ಯಕ್ಕೊಂದು ತುರ್ತಿನ ಸಂದಿಗ್ಧವಾಗಿದ್ದಲ್ಲಿ- ಇದರಲ್ಲಿ ಕಾಂಕ್ರೀಟಿನ ಕೊಡುಗೆ ಬಹಳಷ್ಟಿದೆ. ಈ ಕಾರಣಕ್ಕಾಗಿ ಯೇ ವಿಶ್ವದಾದ್ಯಂತ ಮುಂಚೂಣಿಯಲ್ಲಿರುವ ತಜ್ಞರು ಸಿಮೆಂಟು ಮತ್ತು ಕಾಂಕ್ರೀಟನ್ನು ಈಗಿಂದೀಗಲೇ ನಿಷೇಧಿಸುವುದೆಂಬ ಹುಕುಮ್ಮತನ್ನು ಮಂಡಿಸತೊಡಗಿದ್ದಾರೆ. ಇಲ್ಲದಿದ್ದಲ್ಲಿ ನಾವು ಮನುಷ್ಯರಿಗಿರಲಿ, ಭೂಮಿಗೆ ಭೂಮಿಗೇ ಸಂಚಕಾರವೆಂದು ಎಚ್ಚರಿಸುತ್ತಿದ್ದಾರೆ.

ಇವ ತ್ತು¤ ನಮ್ಮ ನಡುವಿರುವ ಕೋಟಿ ಕೋಟಿ ದುಡ್ಡಿಗೂ ಹೆಚ್ಚು ಮೊತ್ತದ ಪ್ರಶ್ನೆಯೆಂದರೆ ಕಾಂಕ್ರೀಟಿನ ನಿಷೇಧ ಸಾಧ್ಯವೆ? ಸಿಂಧುವೆ? ಎಲ್ಲಕ್ಕಿಂತ ಸಿಮೆಂಟು ಕಾಂಕ್ರೀಟಿಲ್ಲದ ಮನುಷ್ಯಾಸ್ತಿತ್ವವೊಂದರ ಊಹೆಯಾದರೂ ಉಂಟೆ?

ನಾಗರಾಜ ವಸ್ತಾರೆ

ಟಾಪ್ ನ್ಯೂಸ್

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

1-urmila

Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು

Yadgiri: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

Qatar: ಕತಾರ್‌ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ

Qatar: ಕತಾರ್‌ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

4

Malpe: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

1-geeta

Udupi; ಬೃಹತ್ ಗೀತೋತ್ಸವ: ಭಗವದ್ಗೀತಾ ಯಜ್ಞ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.