ಪರಿವರ್ತನೆ ಲೋಕಧರ್ಮ


Team Udayavani, Jul 7, 2019, 5:00 AM IST

m-11

ತಮಿಳಿನ ಖ್ಯಾತ ಕತೆಗಾರರ ಕತೆಯೊಂದರಲ್ಲಿ ಒಂದು ವಿಶೇಷ ದೃಶ್ಯವಿದೆ. ವಿಪರೀತ ಬರದ ಊರಿನ ಚಿತ್ರಣ ಆ ಕತೆಯಲ್ಲಿದೆ. ಜೀವಿಗಳು ನೀರಿಲ್ಲದೆ ಸಾಯುತ್ತಾರೆ. ಹೆಣಗಳು ಉರುಳಿ ಬೀಳುತ್ತವೆ. ಮರಗಳು ಒಣಗಿ ಬಾಡುತ್ತವೆ. ಹುಲ್ಲಿನ ಬಣವೆಗಳು ಸುಟ್ಟು ಉರಿಯುತ್ತವೆ. ಆದರೂ ಎಲ್ಲೋ ಒಂದು ಮನೆಯಲ್ಲಿ ಹೆಣ್ಣೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ. ತಕ್ಷಣ ಸೂಲಗಿತ್ತಿಯು ಹೊಕ್ಕುಳಹುರಿಯನ್ನು ಕಡಿದು, ಗುಲಾಬಿ ಬಣ್ಣದ ರಕ್ತದ ಲೇಪವಿರುವ ಮಗುವನ್ನು ಹೊರಕ್ಕೆ ತಂದು, ಉರಿಉರಿಯುವ ಸೂರ್ಯನಿಗೆ ತೋರಿಸುತ್ತಾಳೆ. ಮನುಷ್ಯ ಜನಾಂಗದ ಅದಮ್ಯ ಚೇತನಕ್ಕೆ ಸೂರ್ಯ ನಾಚಿಕೊಂಡು ಅಂಗೈಯಗಲದ ಮೋಡದಲ್ಲಿ ಮರೆಯಾಗುತ್ತಾನೆ !

ಹಲವು ಬಗೆಯ ಬದಲಾವಣೆಗಳನ್ನು ಜಗತ್ತು ಕಾಣಿಸುತ್ತಲೇ ಹೋಗುತ್ತದೆ. ಅದರಲ್ಲಿ ಮನುಷ್ಯನಿಗೆ ಬಹುಮುಖ್ಯವಾಗಿ ಕಾಡುವುದು ವೈಯಕ್ತಿಕ ಜೀವನದಲ್ಲಿ ಎದುರಿಸಬೇಕಾದ ಬದಲಾವಣೆಗಳೇ ಆಗಿವೆ. ಹೊಸ ಊರು, ಹೊಸ ದೇಶ, ಹೊಸ ಉದ್ಯೋಗ, ಹೊಸ ಸಂಗಾತಿ, ಹೊಸ ರೋಗ, ಹೊಸ ಆದಿ, ಹೊಸ ಅಂತ್ಯ… ಹೊಸತನ್ನು ಉಸಿರಾಡುತ್ತಲೇ ಇರುತ್ತೇವೆ. ಹೊಸತೆನ್ನುವುದು ಒಳಿತು ಮಾಡುತ್ತದೆಯೋ, ಕೆಡುಕು ತರುತ್ತದೆಯೋ ನಮಗೆ ಗೊತ್ತಿಲ್ಲ. ಇಂದು ಒಳಿತೆನ್ನಿಸಿದ್ದು ನಾಳೆ ಕೆಡುಕಾಗುತ್ತದೆಯೋ ಅಥವಾ ಇಂದಿನ ಕೆಡುಕು ಆಳದಲ್ಲಿ ಒಳಿತೇ ಆಗಿದೆಯೋ… ಊಹೂಂ ಯಾವುದೂ ನಮಗೆ ತಿಳಿದಿಲ್ಲ. ಆದದ್ದೆಲ್ಲ ಒಳಿತೇ ಆಯಿತು ಎಂಬ ದಾಸವಾಣಿ ಕೇವಲ ಸತ್ಯದ ಒಂದು ಮುಖ ಮಾತ್ರ. ಘೋರ ಬದುಕನ್ನು ನಿಭಾಯಿಸುವುದಕ್ಕೆ ದಾಸರು ಕೊಟ್ಟ ಕರ್ಮ ಸಿದ್ಧಾಂತದ ಸೂತ್ರವಷ್ಟೇ! ಆದರೆ, ಹೊಸತಕ್ಕೆ ಬೆನ್ನು ತಿರುಗಿಸಿ ಬಾಳುವ ಶಕ್ತಿ ನಮಗೆ ಇಲ್ಲ. ಈ ಕಾರಣಕ್ಕಾಗಿಯೇ ಜೀವನವೆನ್ನುವುದು ಹೋರಾಟವೆಂದು ದಾರ್ಶನಿಕರು ಹೇಳುತ್ತಾರೆ. ಬದಲಾವಣೆಯೆನ್ನುವುದು ಇದೆಯೆನ್ನುವುದರಿಂದಲೇ ಬದುಕಿನ ಹೋರಾಟದಲ್ಲಿ ನಾವು ಭಾಗಿಯಾಗಲು ಸಿದ್ಧರಿದ್ದೇವೆ. ಅದಿಲ್ಲವೆಂದರೆ ಎಂದೋ ಬೇಡದ ಬದುಕನ್ನು ಕೊನೆಗಾಣಿಸಿಕೊಂಡು ಬಿಡುತ್ತಿದ್ದೆವು. ಆ ಕಾರಣದಿಂದಲೇ ಸುಸ್ಥಿತಿಯಲ್ಲಿದ್ದವರಿಗೆ ಇಲ್ಲದ ಭಯ, ಆತಂಕಗಳು ಕಾಡುವುದು.

ಬದಲಾವಣೆಯ ಬಸಿರಿನಲ್ಲಿ ಭಯದ ಬೀಜ
ಬದಲಾವಣೆಯು ತನ್ನ ಬಸಿರಿನಲ್ಲಿ ಭಯದ ಬೀಜವನ್ನು ಸೇರಿಸಿಕೊಂಡಿದೆ. ಕಷ್ಟವೋ ಸುಖವೋ ಮನುಷ್ಯನಿಗೆ ಹೊಂದಾಣಿಕೆಯ ಸ್ವಭಾವ ಅದ್ಭುತವಾಗಿದೆ. ಹೇಗೋ ಕಷ್ಟಪಟ್ಟು “ಸದ್ಯ’ಕ್ಕೆ ಒಗ್ಗಿಕೊಂಡಿರುತ್ತಾನೆ. ಆದರೆ, ನಾಳಿನ ಹೊಸತಿನ ಹೊಂದಾಣಿಕೆಗೆ ಮತ್ತೆ ಕಲಿಕೆಯ ಪಾಠ ಶುರುವಾಗುತ್ತದೆ. ಕಲಿಯುವ ಶಕ್ತಿ ಆರಂಭದಲ್ಲಿ ಇದ್ದಷ್ಟು ಮಧ್ಯವಯಸ್ಸು ಮತ್ತು ಮುಪ್ಪಿನಲ್ಲಿ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ವಿರೋಧ ಶುರುವಾಗುತ್ತದೆ. ಮಕ್ಕಳು ಬದಲಾವಣೆಗೆ ಉತ್ಸಾಹ ತೋರಿದಷ್ಟು ನಾವು ತೋರಿಸುವುದಿಲ್ಲ. ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಇನ್ನಿಲ್ಲದಂತೆ ಶ್ರಮ ಪಡುತ್ತೇವೆ. ಊಹೂಂ, ಅದಾಗದು ಎಂದಾಗ ಸಾಧ್ಯವಾದಷ್ಟು ಹೋರಾಡಲು ಪ್ರಯತ್ನಿಸುತ್ತೇವೆ. ಹೋರಾಟದ ಶಕ್ತಿ ಕ್ಷೀಣಿಸಿದಂತೆಲ್ಲಾ ಶರಣಾಗುತ್ತೇವೆ. ಮೊದಲು ಬದುಕಿಗೆ, ನಿಧಾನಕ್ಕೆ ಸಾವಿಗೆ.

ಪ್ರಕೃತಿಯ ಬದಲಾವಣೆಗಳು ಇಷ್ಟೊಂದು ಘೋರವೆನ್ನಿಸುವುದಿಲ್ಲ. ಯಾಕೆಂದರೆ, ಆ ಬದಲಾವಣೆ ಕೇವಲ ನನ್ನೊಬ್ಬನಿಗೆ ಮಾತ್ರವಲ್ಲದೆ, ಇಡೀ ಸಮುದಾಯಕ್ಕೆ ಸಂಬಂಧಿಸಿದ್ದಾಗಿರುತ್ತದೆ. ವಿಪರೀತ ಚಳಿಯಾದರೆ, ನನ್ನ ಪಕ್ಕದ ಮನೆಯವನಿಗೂ ಅಷ್ಟೇ ಚಳಿಯಾಗುತ್ತದೆ ಎನ್ನುವ ಸಮಾಧಾನವಿರುತ್ತದೆ. ಆದ್ದರಿಂದಲೇ ಸ್ಕೈಲ್ಯಾಬ್‌ ಬೀಳುತ್ತೆ ಎಂಬ ನೀಲಿಸುದ್ದಿ ಹರಡಿದಾಗ ಎಲ್ಲರ ಮನೆಯಲ್ಲಿಯೂ ಹೋಳಿಗೆ ಮಾಡಿಕೊಂಡು ಸಂಭ್ರಮಿಸಲು ಸಾಧ್ಯವಾಗಿದ್ದು! ಮನುಷ್ಯ ಸಂಘಜೀವಿ. ಗುಂಪಿನಲ್ಲಿ ಹೊಸತನ್ನು ಎದುರಿಸುವ ಶಕ್ತಿ ಅವನಿಗಿದೆ. ಆದರೆ, ಒಬ್ಬಂಟಿಯಾದಾಗ ಮಾತ್ರ ಅವನು ಕಂಗಾಲಾಗುವುದು. ಇಡೀ ಭಾರತ ಸಮುದಾಯ ಖುಷಿ-ಖುಷಿಯಿಂದ ಹೊಸ ಸರಕಾರವನ್ನು ತರಲು ಉತ್ಸಾಹ ತೋರಿಸಬಲ್ಲದು. ಆದರೆ, ಕಚೇರಿಯಲ್ಲಿ ಕಂಪ್ಯೂಟರ್‌ ಕಲಿಕೆ ಕಡ್ಡಾಯವೆಂದಾಗ ಮಾತ್ರ ಅವನು ಹೆದರಿಕೊಳ್ಳುವುದು.

ಚೆನ್ನೈನ ಸುನಾಮಿಯ ಘಟನೆಯನ್ನು ನೆನಪಿಸಿಕೊಳ್ಳಿ. ಇಡೀ ಕಡಲ ಜೀವನವನ್ನೇ ಹೊಸಕಿ ಹಾಕಿ ಪ್ರಕೃತಿಯು ಸೊಕ್ಕಿ ಮೆರೆಯಿತು. ಅದೆಷ್ಟು ಜೀವಗಳು ಬಲಿಯಾದವೋ. ಅದೆಷ್ಟು ಕುಟುಂಬಗಳು ಅನಾಥವಾದವೋ. ಆದರೂ ಮನುಷ್ಯ ಹೊಡೆದಾಡಿ ಎದುರಿಸಿದನಲ್ಲ, ಅದು ನನಗೆ ಅಚ್ಚರಿ ಮೂಡಿಸುತ್ತದೆ. ಸುನಾಮಿ ಆರ್ಭಟ ಮುಗಿದು ಸುಮಾರು ಒಂದು ತಿಂಗಳ ನಂತರ ಪ್ರಖ್ಯಾತ ನಟ ಸೂರ್ಯನ ಸಿನಿಮಾವೊಂದು ಬಿಡುಗಡೆಯಾಯ್ತು. ಆಗ ಅಭಿಮಾನಿಗಳೆಲ್ಲರೂ ಸೇರಿ ಅವನ ವಿರಾಟ ಕಟ್‌ಔಟ್‌ಗೆ ಹಾಲಿನ ಅಭಿಷೇಕ ಮಾಡಿದರು. ಪತ್ರಿಕೆಗಳು ಚೆನ್ನೈ ಯಥಾಸ್ಥಿತಿಗೆ ಎಂದು ಆ ಫೋಟೋ ಸಮೇತ ಪ್ರಕಟಿಸಿದವು. ಹೊಸದಾಗಿ ಮತ್ತೆ ಬದುಕು ಪ್ರಾರಂಭಿಸುವ ಶಕ್ತಿಯಿದೆಯಲ್ಲ, ಅದು ಅನುಪಮವಾದದ್ದು. ತಮಿಳಿನ ಖ್ಯಾತ ಕತೆಗಾರರ ಕತೆಯೊಂದರಲ್ಲಿ ಒಂದು ವಿಶೇಷ ದೃಶ್ಯವಿದೆ. ವಿಪರೀತ ಬರದ ಊರಿನ ಚಿತ್ರಣ ಆ ಕತೆಯಲ್ಲಿದೆ. ಜೀವಿಗಳು ನೀರಿಲ್ಲದೆ ಸಾಯುತ್ತಾರೆ. ಹೆಣಗಳು ಉರುಳಿ ಬೀಳುತ್ತವೆ. ಮರಗಳು ಒಣಗಿ ಬಾಡುತ್ತವೆ. ಹುಲ್ಲಿನ ಬಣವೆಗಳು ಸುಟ್ಟು ಉರಿಯುತ್ತವೆ. ಆದರೂ ಎಲ್ಲೋ ಒಂದು ಮನೆಯಲ್ಲಿ ಹೆಣ್ಣೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ. ತಕ್ಷಣ ಸೂಲಗಿತ್ತಿಯು ಹೊಕ್ಕುಳಹುರಿಯನ್ನು ಕಡಿದು, ಗುಲಾಬಿ ಬಣ್ಣದ ರಕ್ತದ ಲೇಪವಿರುವ ಮಗುವನ್ನು ಹೊರಕ್ಕೆ ತಂದು, ಉರಿಉರಿಯುವ ಸೂರ್ಯನಿಗೆ ತೋರಿಸುತ್ತಾಳೆ. ಮನುಷ್ಯ ಜನಾಂಗದ ಅದಮ್ಯ ಚೇತನಕ್ಕೆ ಸೂರ್ಯ ನಾಚಿಕೊಂಡು ಅಂಗೈಯಗಲದ ಮೋಡದಲ್ಲಿ ಮರೆಯಾಗುತ್ತಾನೆ !

ಪ್ರಕೃತಿ ತಾನಾಗಿಯೇ ತರುವ ಬದಲಾವಣೆ ಬೇರೆ, ಮನುಷ್ಯನೇ ಪ್ರಕೃತಿಗೆ ಹಾನಿ ಮಾಡಿ ತರುವ ಬದಲಾವಣೆಗಳು ಬೇರೆ. ನನ್ನೂರು ಬಳ್ಳಾರಿ ಜಿಲ್ಲೆಯಲ್ಲಿದೆ. ಬಾಲ್ಯದಲ್ಲಿ ಅಲ್ಲಿನ ಹಸಿರಲ್ಲಿ ಕುಣಿದಾಡಿ ಸಂಭ್ರಮ ಪಟ್ಟವನು ನಾನು. ಈಗ ಅದೇ ಊರನ್ನು ನೋಡಲು ನನಗೆ ಧೈರ್ಯ ಸಾಕಾಗುವುದಿಲ್ಲ. ಭೂತಾಯಿಯ ಒಡಲನ್ನು ಬಗೆದು ಬಗೆದು ರಕ್ತ ಕಾರಿಸಿರುವುದನ್ನು ಕಂಡಾಗ ದಿಗಿಲಾಗುತ್ತದೆ, ದುಃಖ ಒತ್ತರಿಸಿ ಬರುತ್ತದೆ. ಸುರಕ್ಷೆಯ ಹಸಿರಿಂದು ಹೆದರಿಸುವ ಕೆಂಪಾಗಿದೆ. ಸಹಸ್ರಾರು ವರ್ಷಗಳಿಂದ ಶೇಖರಣೆಗೊಂಡ ಖನಿಜದ ನಿಧಿಯನ್ನು ಕೆಲವೇ ದಿನಗಳಲ್ಲಿ ಖಾಲಿ ಮಾಡಿಬಿಟ್ಟೆವಲ್ಲ! ಸ್ವಾರ್ಥಕ್ಕೊಂದು ಮಿತಿಯಿಲ್ಲವೆ? ಇದು ಸಮುದಾಯದ ಸ್ವಾರ್ಥವೆ ಅಥವಾ ಕೆಲವೇ ಜನರ ಧೂರ್ತತೆಯೆ? ಎಲ್ಲವೂ ಸೇರಿಕೊಂಡೇ ವಿನಾಶವಾಗುತ್ತದೆ ಅನ್ನಿಸುತ್ತದೆ. ಮನುಷ್ಯ ನಿರ್ಮಿತ ಪ್ರಕೃತಿ ವಿಕೋಪಗಳು ಎಂದೂ ಒಳಿತು ಮಾಡಲಾರವು. ಸಮಾಧಾನ ಕೊಡಲಾರವು. ಆದ್ದರಿಂದಲೇ ಕಾಡಿನ ನಾಶದಿಂದಾಗಿ ಈ ಬಾರಿ ನಮ್ಮ ಕೊಡಗು ಅನುಭವಿಸಿದ ಸಂಕಟಗಳು ನನಗೆ ಆತಂಕ ಮೂಡಿಸಿದ್ದು.

ಬದಲಾವಣೆಯು ಜಗದ ನಿಯಮವೆನ್ನುವುದು ಸತ್ಯವಿರಬಹುದು. ಆದರೆ, ಎಲ್ಲಾ ಬದಲಾವಣೆಗಳನ್ನೂ ನಾನು ಒಪ್ಪಿಕೊಳ್ಳಬೇಕು ಎನ್ನುವುದು ಜಗದ ನಿಯಮವೇನೂ ಅಲ್ಲ. ಯಾವುದನ್ನೇ ಆಗಲಿ, ಒಂದಿಷ್ಟು ಪರೀಕ್ಷಿಸದೆ ಸುಮ್ಮನೆ ಜನಮರುಳಿನಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ. ಸ್ವಲ್ಪವಾದರೂ ವಿವೇಚನಾ ಶಕ್ತಿ ಇರದಿದ್ದರೆ ಹೇಗೆ? ಹಾಗಂತ ಬದಲಾವಣೆಯ ಫ‌ಲಾಫ‌ಲಗಳನ್ನು ಅಳತೆಮಾಡುವ ಯಾವ ಸಾರ್ವತ್ರಿಕ ಪ್ರಮಾಣವೂ ನಮ್ಮಲ್ಲಿ ಇಲ್ಲ; ಇದ್ದಿದ್ದರೆ ಒಳ್ಳೆಯದಿತ್ತು. ಆದರೆ ನಾವೇ ನಮಗೆ ತೋಚಿದಂತೆ ಒಂದು ಪ್ರಮಾಣವನ್ನು ಗುರುತಿಸಿಕೊಳ್ಳಬೇಕಲ್ಲವೆ? ಅದಕ್ಕೊಂದು ಪುಟ್ಟ ಉದಾಹರಣೆ ಕೊಡಬಲ್ಲೆ. ಇದ್ದಕ್ಕಿದ್ದಂತೆಯೇ ನಗರ ಜನರ ಮಧ್ಯೆ ಸಿರಿಧಾನ್ಯಗಳ ಮಹತ್ವದ ಮಾತುಕತೆ ಹೆಚ್ಚಾಗಿಬಿಟ್ಟಿದೆ. ಎಲ್ಲರೂ ಈ ವಿಭಿನ್ನ ಧಾನ್ಯಗಳ ಕುರಿತು ಮಾತಾಡುತ್ತಲೇ ಇರುತ್ತಾರೆ. ಅದರ ಮೇಳಗಳು ನಡೆಯುತ್ತವೆ. ಅದಕ್ಕಾಗಿ ವಿಶೇಷ ಅಂಗಡಿಗಳೇ ತೆರೆದು ಹಣಮಾಡಲು ಶುರುವಿಟ್ಟಿವೆ. ವಿಪರೀತ ದುಬಾರಿಯ ಧಾನ್ಯಗಳಾದರೂ ಆರೋಗ್ಯದ ಬಗ್ಗೆ ಕಾಳಜಿ ಇರುವ ಮಂದಿ ಚಿಂತೆಯಿಲ್ಲದೆ ಕೊಳ್ಳುತ್ತಾರೆ. ಇತ್ತೀಚೆಗೆ ಅಂತಹ ಹೊಟೇಲೊಂದಕ್ಕೆ ಊಟಕ್ಕೆ ಹೋಗುವ ಅವಕಾಶ ನನಗೆ ಒದಗಿತು.

ಆ ಹೊಟೇಲಿನ ಮ್ಯಾನೇಜರ್‌ ನನ್ನನ್ನು ವಿಪರೀತ ಕಾಳಜಿಯಿಂದ ನೋಡಿಕೊಂಡ. ಮತ್ತೆ ಮತ್ತೆ ಬಡಿಸುವ ನೆಪದಲ್ಲಿ ನನ್ನ ಬಳಿಗೆ ಬಂದು ಹೇಗೆ ಸಂಪೂರ್ಣವಾಗಿ ತಮ್ಮ ಹೊಟೇಲು ಸಿರಿಧಾನ್ಯಗಳನ್ನು ಮತ್ತು ಸಾವಯವ ಬೆಳೆಗಳನ್ನೇ ಉಪಯೋಗಿಸುತ್ತದೆಂದೂ, ಅದರಿಂದಾಗಿ ಉಂಡ ಆಹಾರ ಅದೆಷ್ಟು ಸುಲಭವಾಗಿ ಜೀರ್ಣವಾಗುತ್ತದೆಂದೂ ವಿವರಿಸಿದ. ತಮ್ಮ ಹೊಟೇಲಿನ ಮಹತ್ವದ ಕುರಿತು ಯಾವೆಲ್ಲ ಪತ್ರಿಕೆಗಳು ಹೊಗಳಿ ಬರೆದಿವೆ ಎಂಬುದರ ಚಾರ್ಟ್‌ ತಂದು ತೋರಿಸಿದ. ಎಲ್ಲದಕ್ಕೂ ಹೂಂಗುಟ್ಟಿದೆ. ಊಟವಂತೂ ರುಚಿಯಾಗಿತ್ತು. ಆದರೆ ಸಿಕ್ಕಾಪಟ್ಟೆ ದುಬಾರಿ. ಊಟ ಮುಗಿದ ಮೇಲೆ ಆತ ಮತ್ತೂಮ್ಮೆ ನನ್ನ ಬಳಿಬಂದು, “ಹೇಗನ್ನಿಸ್ತು ಸಾರ್‌ ನಮ್ಮ ಆ ಆರೋಗ್ಯದ ಕಾಳಜಿ?’ ಎಂದು ವಿಚಾರಿಸಿದ. “ಊಟ ಚೆನ್ನಾಗಿತ್ತು’ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡೆ. “ದಯವಿಟ್ಟು ನಮಗೆ ಫೈವ್‌ಸ್ಟಾರ್‌ ರೇಟಿಂಗ್‌ ಕೊಡಿ ಸಾರ್‌’ ಎಂದು ಗೋಗರೆದ. ನಾವು ಕೊಡುವ ನಕ್ಷತ್ರಗಳು ಅವರ ಭಿಕ್ಷಾ ಪಾತ್ರೆ ತುಂಬಿಸುತ್ತವೆ ಎಂಬುದು ಈಗ ಎಲ್ಲ ಮಾರಾಟಗಾರರಿಗೂ ಅರ್ಥವಾಗಿದೆ. ಆದರೆ, ನಾನು ಯಾವುದೇ ಭಿಡೆಗೆ ನಿಲುಕದೆ “ನೋಡಪ್ಪಾ ನಾಳೆ ಬೆಳಕಾಗಲಿ. ಟಾಯ್ಲೆಟ್‌ಗಂತೂ ಹೋಗ್ಲೆಬೇಕಲ್ಲಾ? ಹಕ್ಕಿಹಿಕ್ಕೆ ಹಾಕಿದಷ್ಟು ಸುಲಭವಾಗಿ ಶೌಚ ಆದ್ರೆ ಫೈವ್‌ ಸ್ಟಾರ್‌ ಕೊಡ್ತೀನಿ. ಗ್ಯಾಸ್‌ ಸ್ಟವ್‌ ತುದಿಗೆ ರಬ್ಬರ್‌ ಕೊಳವೆ ತೂರಿಸೋ ಹಂಗೆ ಆದರೆ ಟು ಸ್ಟಾರ್‌ ಕೊಡ್ತೀನಿ’ ಎಂದು ಹೇಳಿದೆ. ಮಧ್ಯವಯಸ್ಸು ಸಮೀಪಿಸಿರುವ ನನಗೆ ನನ್ನದೇ ಆದ ಕಾಳಜಿಗಳಿವೆಯಲ್ಲವೆ? ಮ್ಯಾನೇಜರ್‌ಗೆ ನಾನು ಸಾಮಾನ್ಯಆಸಾಮಿ ಅಲ್ಲ ಅಂತ ಗೊತ್ತಾಯ್ತು. “ನಿಮ್ಮಿಷ್ಟ ಸಾರ್‌’ ಎಂದು ಹುಳಿನಗೆ ನಕ್ಕ.

ಬದಲಾವಣೆಯನ್ನು ಸ್ವೀಕರಿಸದಿರಲು ಸಾಧ್ಯವೆ !
ಸೂಕ್ತ ಬದಲಾವಣೆಯನ್ನು ಸ್ವೀಕರಿಸುವ ದೊಡ್ಡ ಮನಸ್ಸೂ ನಮಗೆ ಇರಬೇಕು. ಹಳೆಯದಕ್ಕೆ ಪಟ್ಟುಹಿಡಿದು ಕೂತರೆ ಸಿನಿಕರಾಗುತ್ತೇವೆ.  ನನ್ನ ಅಡುಗೆಯವಳು ರಾಜಸ್ಥಾನದವಳು. ಈ ಮೂವತ್ತು ವರ್ಷದ ಹಿಂದೆ ಮದುವೆಯಾದ ತತ್‌ಕ್ಷಣ ಬೆಂಗಳೂರಿಗೆ ಬಂದು ನೆಲೆಸಿದ್ದಾಳೆ. ಮೂವರು ಮಕ್ಕಳು. ಹಿರಿಯ ಮಗಳಿಗೀಗ ಮದುವೆಯ ವಯಸ್ಸು. ವಿಶೇಷವೆಂದರೆ ಈ ಹುಡುಗಿಗೆ ಅಂಗಳದಲ್ಲಿ ರಂಗೋಲಿ ಹಾಕುವ ಹುಮ್ಮಸ್ಸು. ಅಕ್ಕ-ಪಕ್ಕದವರೆಲ್ಲರೂ ಕನ್ನಡ, ತೆಲುಗು, ತಮಿಳು ಮನೆಯವರು. ಆ ಮನೆಯ ಹೆಣ್ಣುಮಕ್ಕಳ ಸ್ನೇಹವಲಯದಲ್ಲಿರುವ ಈ ಹುಡುಗಿ, ಅವರಂತೆಯೇ ದೊಡ್ಡ ದೊಡ್ಡ ರಂಗೋಲಿಗಳನ್ನು ಚುಕ್ಕಿಯಿಟ್ಟು ಹಾಕುತ್ತಾಳೆ. ಸಂಕ್ರಾಂತಿ, ದೀಪಾವಳಿ, ಸ್ವಾತಂತ್ರೋತ್ಸವ ಬಂದರೆ ಬಣ್ಣದ ರಂಗೋಲಿ ರಚಿಸುತ್ತಾಳೆ. ಮಗಳ ಪ್ರತಿಭೆಯ ಬಗ್ಗೆ ಈಕೆಗೆ ಹಿರಿಹಿರಿ ಹಿಗ್ಗು. ಅವುಗಳ ಫೋಟೋಗಳನ್ನು ತನ್ನ ಮೊಬೈಲಿನಲ್ಲಿ ತೆಗೆದುಕೊಂಡುಬಂದು ತೋರಿಸುತ್ತಾಳೆ. ಇಪ್ಪತ್ತು ಚುಕ್ಕಿ, ಇಪ್ಪತ್ತುಸಾಲು ಎಂದು ಪಕ್ಕಾ ನಮ್ಮ ಹಳ್ಳಿಯ ಗೌರಕ್ಕನಂತೆ ಹೇಳುತ್ತಾಳೆ. “ನಿಮ್ಮ ರಾಜಸ್ಥಾನದಾಗೆ ಜನ ರಂಗೋಲಿ ಹಾಕ್ತಾರಾ?’ ಎಂದು ನಾನು ವೈಚಾರಿಕ ಮನೋಭಾವವನ್ನು ಪ್ರದರ್ಶಿಸುತ್ತೇನೆ.

“ಈ ಊರಿಗೆ ಬರೋ ತನಕ ನಂಗೆ ರಂಗೋಲಿ ಅಂದ್ರೆ ಏನು ಅಂತಲೇ ಗೊತ್ತಿರಲಿಲ್ಲ ಅಣ್ಣಾ…’ ಎಂದು ನಗುತ್ತಾಳೆ. “ಮತ್ತೆ?’ ಎಂದು ನಾನು ಕೆದಕುತ್ತೇನೆ.  ಆಕೆ, ನನ್ನ ವ್ಯಂಗ್ಯಕ್ಕೆ ಸೊಪ್ಪು ಹಾಕದೆ, “ನಮ್ಮೂರಾಗೆ ಹಲಸಿನಹಣ್ಣೂ ಬೆಳೆಯಲ್ಲ. ಇಲ್ಲಿ ಇಷ್ಟಪಟ್ಟು ತಿಂತೀನಲ್ಲಣ್ಣಾ… ಅಂಗಳದಾಗೆ ಚಂದನೆ ಚಿತ್ರ ಬರೆದರೆ ಏನು ತಪ್ಪು?’ ಎಂದು ಸೂಕ್ಷ್ಮವಾಗಿ ನನ್ನ ಸಣ್ಣತನವನ್ನು ಅರಿವು ಮಾಡಿಸುತ್ತಾಳೆ.

ವಲಸೆ ಹೋದವರಿಗೆ ತೆರೆದ ಮನಸ್ಸು ಇರುವುದು ಕಡ್ಡಾಯ. ಆಮೆಯಂತೆ ಮನಸ್ಸನ್ನು ಕಠಿಣ ಚಿಪ್ಪಿನೊಳಕ್ಕೆ ಸಂಕುಚಿತಗೊಳಿಸಿದರೆ ಬದುಕುವುದು ಕಷ್ಟ; ಅಂತಹವರು ತಮ್ಮೂರು ಬಿಟ್ಟು ಅತ್ತಿತ್ತ ಅಗಲಲಾರರು. ವಲಸೆಗಾರರಿಗೆ ತಮ್ಮೂರಿನ ಶ್ರೇಷ್ಠತೆಯು ಪರವೂರಿನಲ್ಲಿ ನಿಕೃಷ್ಟವಾಗುವ ಸಂಕಟವನ್ನು ನೀಲಕಂಠನಂತೆ ನುಂಗುವ ಶಕ್ತಿ ಇರಬೇಕು. ಹೊಸ ಶ್ರೇಷ್ಠತೆಯನ್ನು ಒಪ್ಪಿಕೊಳ್ಳುವ ವಿಶಾಲತೆಯನ್ನು ಬೆಳೆಸಿಕೊಳ್ಳಬೇಕು. ನಮಗೆ ಈವರೆಗೆ ಅರಿಯದ ತಪ್ಪುಗಳು ಪರನೆಲದಲ್ಲಿ ಗೋಚರಿಸಬೇಕು. ಹಿಂದಿನ ತಪ್ಪುಗಳು ಕ್ಷಮಾರ್ಹವೆನ್ನಿಸಬೇಕು. ಈ ಹಿಂದೆ ಕಂಡುಕೊಂಡ ನಮ್ಮ ಶಕ್ತಿಗಳು ಕ್ಷುಲ್ಲಕವೆನ್ನಿಸಬೇಕು. ಕಾಣದ ಶಕ್ತಿಗಳ ದಿಗ್ದರ್ಶನವಾಗಬೇಕು. ಬಳೆ ಚೂರಿನ ಮಾಯಾಕೊಳವೆಯನ್ನು ಒಮ್ಮೆ ತಿರುಗಿಸಿದರೆ ಹೊಸಚಿತ್ರವೊಂದು ಮೂಡುತ್ತದಲ್ಲ , ಅದೇ ವಲಸೆ.

ಮಾಯಾ ಕೊಳವೆಯ ಎಲ್ಲ ಚಿತ್ರಗಳೂ ಸುಂದರವೇ! ಅವೇ ಬಳೆಚೂರುಗಳು, ಅವೇ ಕನ್ನಡಿಗಳು ಹಾಗೂ ಮತ್ತದೇ ಸೂರ್ಯನ ಬೆಳಕು. ಬಣ್ಣ ರೂಪ ರಚನೆಗಳು ಬೇರೆಯಷ್ಟೇ ಎನ್ನುವ ಅರಿವು ದಕ್ಕಿದಷ್ಟೂ ಅಹಂಕಾರ ತಗ್ಗುತ್ತದೆ. ದೇಶವನ್ನು ಸುತ್ತಿದವನಿಗೆ ಈ ಸಮಾಜ ಗೌರವ ಕೊಡುವುದು ಈ ಕಾರಣಕ್ಕಾಗಿಯೇ ಆಗಿರುತ್ತದೆ. ತಿರುಗಾಟದ ನಮ್ಮ ಋಷಿಮುನಿಗಳ ಮಾತಿಗೆ ಹಿಂದಿನವರು ಗೌರವ ಕೊಡುತ್ತಿದ್ದುದು ಈ ಕಾರಣಕ್ಕಾಗಿಯೇ ಆಗಿತ್ತು.

ಬದಲಾವಣೆಯ ಹರಿಕಾರ ಎನ್ನುವ ಮಾತು ಸಮಾಜದಲ್ಲಿದೆ. ಇದರಲ್ಲಿ ನನಗೆ ಅಷ್ಟಾಗಿ ನಂಬಿಕೆಯಿಲ್ಲ. ಸಮಾಜ ತನಗೆ ಬೇಕಾದ ಬದಲಾವಣೆಗಳನ್ನು ಚಲಾವಣೆಯಲ್ಲಿ ತಂದುಕೊಳ್ಳಲು ಸೂಕ್ತ ವ್ಯಕ್ತಿಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಆ ವ್ಯಕ್ತಿಗೆ ಸಹಾಯವಾಗುವಂತಹ ಪರಿಸರವನ್ನು ನಿರ್ಮಿಸಿಕೊಡುತ್ತದೆ. ಅವನಿಗೆ ಉಪಯೋಗವಾಗುವಂತಹ ಸಲಕರಣೆಗಳನ್ನು ಮಾಡಿಕೊಡುತ್ತದೆ. ಅವನಿಗೆ ಅಗತ್ಯವಾದ ಆತ್ಮಸ್ಥೆçರ್ಯವನ್ನು ನೀಡುತ್ತದೆ. ಕೊನೆಗೆ ಅವನಿಂದ ಆ ಬದಲಾವಣೆಯನ್ನು ರೂಪಿಸಿಕೊಂಡು “ಹರಿಕಾರ’ ಪಟ್ಟವನ್ನು ನೀಡುತ್ತದೆ. “ನಾನು’ ಎನ್ನುವುದು ಕೇವಲ ನೆಪ ಎನ್ನುವುದು ಆ ವ್ಯಕ್ತಿಗೆ ತಿಳಿದಿರಬೇಕು. ಇಲ್ಲದಿದ್ದರೆ ಅಹಂಕಾರದ ವಿಷಸರ್ಪ ಅವನನ್ನು ತಿಂದು ಮುಗಿಸುತ್ತದೆ. ನಮ್ಮ ಅಣ್ಣಾವ್ರು “ಅಭಿಮಾನಿ ದೇವರು’ ಎಂದು ತನ್ನೆಲ್ಲ ಸಾಧನೆಗಳಿಗೂ ಅಭಿಮಾನಿಗಳಿಗೆ ಕಿರೀಟವಿಡುತ್ತಿದ್ದುದು ಈ ಅನುಭಾವದಿಂದಲೇ ಆಗಿದೆ. “ಬದಲಾವಣೆಯ ಹರಿಕಾರ’ ಎನ್ನುವ ಬಿರುದಿನ ಹಕ್ಕು ಕೇವಲ ಸಮಸ್ತಕ್ಕೆ ಮಾತ್ರ ಇರುತ್ತದೆ, ವೈಯಕ್ತಿಕಕ್ಕೆ ಇರುವುದಿಲ್ಲ.

ನನಗೆ ಕಾಫಿ ತಯಾರಿಸುವುದರಲ್ಲಿ ವಿಶೇಷ ಕಾಳಜಿ. ಯಾವ ಬಗೆಯ ಕಾಫಿ ಪುಡಿ ಕೊಳ್ಳಬೇಕು, ಚಿಕೋರಿ ಶೇಕಡಾ ಎಷ್ಟಿರಬೇಕು, ಎಷ್ಟು ಪುಡಿ ಹಾಕಿ ಡಿಕಾಕ್ಷನ್‌ ಶೋಧಿಸಬೇಕು, ಎಂತಹ ಹಾಲು ಬೇಕು, ಸಕ್ಕರೆ ಮೊದಲು ಹಾಕಬೇಕೋ ಅನಂತರ ಹಾಕಬೇಕೋ- ಇತ್ಯಾದಿಗಳ ಬಗ್ಗೆ ನನಗೆ ವ್ಯಸನವೆನ್ನುವಷ್ಟು ಆಸಕ್ತಿ. ರಾಜಸ್ಥಾನದ ನನ್ನ ಅಡುಗೆಯವಳು ಕಾಫಿ ಮಾಡಿ ಬಲ್ಲವಳಲ್ಲ. ಆದ್ದರಿಂದ ಆರಂಭದಲ್ಲಿ ಪ್ರತಿನಿತ್ಯ ಅವಳಿಗೆ ಪಾಠ ಹೇಳಲು ಶುರುವಿಟ್ಟೆ. ಸುಮಾರು ಒಂದು ತಿಂಗಳ ನಂತರ ಹದ ಗಳಿಸಿಕೊಂಡಳು. ಅನಂತರ ಅವಳು ಚಹಾವನ್ನು “ಹಚಾ’ ಎಂದು ಅಟ್ಟಿ, ಕೇವಲ ಕಾಫಿಯನ್ನು ಮಾತ್ರ ಕುಡಿಯಲು ಶುರುವಿಟ್ಟಳು. ಬರೀ ನಮ್ಮ ಮನೆಯಲ್ಲಿ ಮಾತ್ರವಲ್ಲ, ತನ್ನ ಮನೆಯಲ್ಲಿಯೂ ಕಾಫಿ ಮಾಡಲು ಶುರುವಿಟ್ಟುಕೊಂಡಳು. ನಾನೇ ಉತ್ಸಾಹದಿಂದ ಆಕೆಗೊಂದು ಫಿಲ್ಟರ್‌ ಕೊಡಿಸಿಕೊಟ್ಟೆ. ಅಂತೂ ಆಕೆಯನ್ನು ಚಹಾದಿಂದ ಕಾಫಿಗೆ ಪರಿವರ್ತಿಸಿದೆ ಎಂಬ ಬಿಂಕ ಸದ್ದಿಲ್ಲದೆ ನನ್ನಲ್ಲಿ ಸೇರಿಕೊಂಡಿತ್ತು. ಇದಾದ ಎಷ್ಟೋ ದಿನಗಳ ನಂತರ ಆಕೆ ಹದಿನೈದು ದಿನಗಳ ಕಾಲ ತನ್ನ ರಾಜಸ್ಥಾನದ ತವರುಮನೆಗೆ ಹೊರಟು ಹೋದಳು. ಆ ಹೊತ್ತಿನಲ್ಲಿ ನನಗೆ ಊಟಕ್ಕೆ ಅನನುಕೂಲವಾಗದಿರಲಿ ಎಂದು ತನ್ನ ಅಣ್ಣನ ಮಗಳೊಬ್ಬಳನ್ನು ಅಡುಗೆ ಮಾಡಲು ನಿಯಮಿಸಿ ಹೋದಳು. ಈ ಹುಡುಗಿಗೆ ಯಥಾಪ್ರಕಾರ ಕಾಫಿ ಮಾಡಲು ಬರುತ್ತಿರಲಿಲ್ಲ. ಇನ್ನು ಆಕೆಗೆ ಆದ್ಯಂತವಾಗಿ ಈ ಕಾಫಿಯ ತಯಾರಿಯನ್ನು ಹದಿನೈದು ದಿನದಲ್ಲಿ ಕಲಿಸಿಕೊಡುವುದರಲ್ಲಿ ಯಾವುದೇ ಅರ್ಥ ಕಾಣಲಿಲ್ಲ. ಆದ್ದರಿಂದ ನಾನೇ ಕಾಫಿ ಮಾಡಿಕೊಳ್ಳಲು ಪ್ರಾರಂಭಿಸಿದೆ. ಆಕೆಗೆ ಒಂದು ಕಪ್ಪು ಕುಡಿಯಲು ಕೊಡುತ್ತಿದ್ದೆ. ಆಕೆ ನೆಪ ಹೇಳದೆ ಮಟ್ಟಸವಾಗಿ ಕುಡಿದಳು. ಅನಂತರ ನನ್ನ ಲೋಟವನ್ನೂ, ತನ್ನ ಲೋಟವನ್ನೂ ತೊಳೆಯುತ್ತಾ, “ಭಯ್ನಾ… ನೀವು ನಮ್ಮ ಅತ್ತೆ ಹತ್ತಿರ ಕಾಫಿ ಮಾಡಿಸ್ಕೊಳ್ಳೋದು ಹೇಳಿಸ್ಕೋಬೇಕು… ನಿಮ್ಮ ಮದ್ರಾಸಿ ಜನಕ್ಕಿಂತಲೂ ಚೆನ್ನಾಗಿ ಮಾಡ್ತಾರೆ. ನಮಗೆಲ್ಲ ಅವರು ಆಗಾಗ ಫಿಲ್ಟರ್‌ ಕಾಫಿ ಮಾಡಿ ಕೊಡ್ತಾರೆ’ ಎಂದು ಹೇಳಿದಳು. ಒಳಗಿಂದ ನುಗ್ಗಿ ಬಂದ ಕೋಪವನ್ನು ಹೇಗೋ ಕಷ್ಟಪಟ್ಟು ತಡೆದುಕೊಂಡೆ.

ಬದಲಾವಣೆಯ ಅಹಂಕಾರ ಯಾವತ್ತೂ ಒಳ್ಳೆಯದಲ್ಲ. ಕ್ಷುಲ್ಲಕ ಮಹಣ್ತೀದ್ದಾಗಿ ಮಹಣ್ತೀದ್ದು ಕ್ಷುಲ್ಲಕವಾಗಿ ! ಬದಲಾವಣೆಯ ಗುಣಾವಗುಣಗಳು ಕಾಲದ ಪ್ರವಾಹದಲ್ಲಿ ಬೇರೆಯಾಗುತ್ತಲೇ ಹೋಗುತ್ತವೆ. ಇಂದು ಕ್ಷುಲ್ಲಕವಾಗಿ ಕಂಡಿದ್ದು, ನಾಳೆ ಮಹತ್ವದ್ದಾಗಿ ಕಾಣಬಹುದು; ಮಹತ್ವದ್ದು ಕ್ಷುಲ್ಲಕವಾಗಬಹುದು.

ಬದಲಾವಣೆಯನ್ನು ಎದುರಿಸುವುದು ಹೇಗೆ? ಎನ್ನುವುದು ಮನುಷ್ಯ ಕುಲದ ಯಾವತ್ತಿನ ಸವಾಲು. ಇದಕ್ಕೆ ಪರಿಹಾರವಾಗಿ ವಿಶೇಷ ನಿದರ್ಶನವೊಂದನ್ನು ನಾನು ಓದಿದ್ದೇನೆ. ಆರ್‌. ಗೋಪಾಲಕೃಷ್ಣ ಎನ್ನುವವರು ತಮ್ಮ ಆಂಗ್ಲ ಪುಸ್ತಕ ದಿ ಕೇಸ್‌ ಆಫ್ ದಿ ಬೊನ್ಸಾಯ್‌ ಮ್ಯಾನೇಜರ್‌ನಲ್ಲಿ ಇದನ್ನು ವಿವರಿಸುತ್ತಾರೆ :

ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಇಂಗ್ಲೆಂಡಿನಲ್ಲಿ ಬ್ಲೂ ಟಿಟ್ಸ… ಮತ್ತು ರಾಬಿನ್‌ ಎನ್ನುವ ಎರಡು ಬಗೆಯ ಹಿತ್ತಿಲ ಹಕ್ಕಿಗಳು ಯಥೇಚ್ಚವಾಗಿದ್ದವಂತೆ. ಆ ಕಾಲದಲ್ಲಿ ಹಾಲು ಮಾರುವವರು ಬಾಟಲಿನಲ್ಲಿ ಹಾಲನ್ನು ಶೇಖರಿಸಿ, ಪ್ರತಿಯೊಂದು ಮನೆಯ ಬಾಗಿಲಿನಲ್ಲಿಯೂ ಬೆಳ್ಳಂಬೆಳಿಗ್ಗೆ ಇಟ್ಟು ಹೋಗಿಬಿಡುತ್ತಿದ್ದರು. ಆಗಿನ್ನೂ ಹಾಲಿನ ಬಾಟಲಿಗೆ ಬಣ್ಣದ ಬಿರುಡೆ ಹಾಕುವ ಸಂಪ್ರದಾಯ ಬಂದಿರಲಿಲ್ಲ. ಬಾಟಲಿಯ ಮೇಲು¤ದಿಯಲ್ಲಿ ಹಾಲು ಕೆನೆಗಟ್ಟಿ ಒಂದು ಚಿಕ್ಕ ಪದರವನ್ನು ಮೂಡಿಸಿರುತ್ತಿತ್ತು. ಈ ಕೆನೆಯನ್ನು ತಿನ್ನುವ ಹವ್ಯಾಸವನ್ನು ಈ ಎರಡೂ ಜಾತಿಯ ಹಕ್ಕಿಗಳು ರೂಢಿಸಿಕೊಂಡಿದ್ದವು. ಅತ್ಯಂತ ಸತ್ವಯುತವಾದ ಈ ಕೆನೆ ಅವುಗಳಿಗೆ ಇಷ್ಟವಾಗಿತ್ತು ಮತ್ತು ಅವುಗಳ ಹಸಿವನ್ನು ತಣಿಸುತ್ತಿತ್ತು. ಆದರೆ, ಸುಮಾರು 1940ರ ಹೊತ್ತಿಗೆ ಈ ಬಾಟಲಿಗೆ ಅಲ್ಯೂಮಿನಿಯಂ ಬಿರಡೆ ಹಾಕುವ ತಂತ್ರಜ್ಞಾನ ಜಾರಿಗೆ ಬಂತು. ಇದು ಎರಡು ಪಕ್ಷಿಸಂಕುಲಕ್ಕೆ ವಿನಾಶವನ್ನು ತರುವಷ್ಟು ಅಪಾಯಕಾರಿಯಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಬ್ಲೂ ಟಿಟ್‌ ಹಕ್ಕಿಗಳು ತಮ್ಮ ಕೊಕ್ಕಿನಿಂದ ಈ ಅಲ್ಯೂಮಿನಿಯಂ ಬಿರಡೆಯನ್ನು ಒಡೆದು ಹಾಲಿನ ಕೆನೆ ತಿನ್ನುವುದನ್ನು ಕಲಿತುಕೊಂಡು ಬಿಟ್ಟವು. ಆದರೆ, ರಾಬಿನ್‌ಗಳಿಗೆ ಈ ಶಕ್ತಿ ಬರಲೇ ಇಲ್ಲ. ಆದರೆ ಅಲ್ಲೊಂದು ಇಲ್ಲೊಂದು ರಾಬಿನ್‌ ಹಕ್ಕಿ ಬಿರಡೆ ಒಡೆಯುವುದು ಕಣ್ಣಿಗೆ ಕಾಣಿಸುತ್ತಿತ್ತು. ಆದರೆ, ಎಲ್ಲಾ ರಾಬಿನ್‌ಗಳಿಗೆ ಇದು ಸಾಧ್ಯವಾಗಲಿಲ್ಲ. ಆದ್ದರಿಂದಾಗಿ ರಾಬಿನ್‌ಗಳ ಸಂಖ್ಯೆ ಬಹುವಾಗಿ ಕ್ಷೀಣಿಸಿತು. ಬ್ಲೂ ಟಿಟ್ಸ್‌ಗಳ ಸಂಖ್ಯೆ ವೃದ್ಧಿಸಿತು.

ಜಗದ ಬದಲಾವಣೆಯನ್ನು ಎದುರಿಸುವಲ್ಲಿ ಈ ಎರಡು ಪಕ್ಷಿಸಂಕುಲಗಳಲ್ಲಿ ಒಂದು ಯಶಸ್ವಿಯಾಗಿದ್ದೂ ಮತ್ತೂಂದು ಸೋತಿದ್ದು ಹೇಗೆ? ಇದಕ್ಕೆ ವಿಜ್ಞಾನಿಗಳು ಸಮಂಜಸವಾದ ವಿವರಣೆಯನ್ನು ಕೊಡುತ್ತಾರೆ. ಬ್ಲೂ ಟಿಟ್‌ ಹಕ್ಕಿಗಳು ಸಂಘಜೀವಿಗಳು. ಗುಂಪು ಗುಂಪಾಗಿ ಜೀವಿಸುತ್ತವೆ. ಆದ್ದರಿಂದ, ಬಿರುಡೆ ಒಡೆಯುವ ಉಪಾಯವನ್ನು ಕಂಡುಕೊಂಡು ಒಂದು ಹಕ್ಕಿ ಸುಲಭವಾಗಿ ಮತ್ತೂಂದು ಹಕ್ಕಿಗೆ ಆ ವಿದ್ಯೆಯನ್ನು ಕಲಿಸಿಕೊಟ್ಟಿತ್ತು. ಆದರೆ, ರಾಬಿನ್‌ಗಳು ಏಕಾಂಗಿ ಸಂಸಾರವನ್ನು ನಡೆಸುತ್ತವೆ. ತಮ್ಮ ಸಂಸಾರದ ವಲಯದೊಳಕ್ಕೆ ಮತ್ತೂಂದು ರಾಬಿನ್‌ ಹಕ್ಕಿ ಬರದಂತೆ ಸರಹದ್ದನ್ನು ಕಾಪಾಡಿಕೊಳ್ಳುತ್ತವೆ. ಈ ಕಾರಣದಿಂದಾಗಿಯೇ ರಾಬಿನ್‌ ಹಕ್ಕಿಗಳಿಗೆ ವಿದ್ಯೆಯನ್ನು ಪ್ರಸರಣ ಮಾಡಿಕೊಡಲು ಸಾಧ್ಯವಾಗಲಿಲ್ಲ. ಅದು ಅವುಗಳ ಅವನತಿಗೆ ಕಾರಣವಾಯ್ತು.

ಮನುಷ್ಯ ಸಂಘಜೀವಿ ನಿಜ. ಆದರೆ, ಪಳಗಿಸಿಕೊಂಡ ವಿದ್ಯೆಯನ್ನು ಹಂಚದೆ ಉಳಿದು ಬಿಟ್ಟರೆ ಅದು ಮಾನವ ಕುಲದ ನಾಶಕ್ಕೆ ಕಾರಣವಾಗುತ್ತದೆ. ವಿದ್ಯೆಯನ್ನು ಹಂಚುತ್ತ ಹೋದಂತೆಲ್ಲ ಅವನ ಉಳಿವು ಹೆಚ್ಚು ಸಹನೀಯವೂ, ಸುದೀರ್ಘ‌ವೂ ಆಗುತ್ತದೆ. ನಮಗೆ ಕರಗತವಾದ ವಿದ್ಯೆಯನ್ನು ಮತ್ತೂಬ್ಬರಿಗೆ ಕೊಡಲು ನಾವೇಕೆ ಅಂಜುತ್ತೇವೆ? ಅದಕ್ಕೆ ಉತ್ತರ ತುಂಬಾ ಸುಲಭ. ಅದು ಮತ್ತೂಂದು ಬದಲಾವಣೆಯ ಸವಾಲನ್ನು ನಮ್ಮ ಮುಂದೆ ಒಡ್ಡುತ್ತದೆ. ಅಂದರೆ ನಮಗೆ ಈವರೆಗೆ ಇರದ ಪ್ರತಿಸ್ಪರ್ಧಿಯನ್ನು ನಾವು ಸೃಷ್ಟಿಸಿಕೊಂಡು ಹೊಸ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡಿರುತ್ತೇವೆ. ಈಗ ಮತ್ತೆ ಜ್ಞಾನದಲ್ಲಿ ಮೇಲುಗೈ ಪಡೆಯಲು ನಾವು ಮತ್ತಿಷ್ಟು ಸಾಧನೆ ಮಾಡಿ ಕಲಿಯಬೇಕಾಗುತ್ತದೆ. ಆ ಹೊಸ ಕಲಿಕೆಯ ಹಿಂಜರಿಕೆಯೇ ನಮಗೆ ವಿದ್ಯಾದಾನ ಮಾಡದಂತೆ ತಡೆಯುತ್ತದೆ.

ಕೊನೆಗೂ ಇವೆಲ್ಲವೂ ಒಟ್ಟಾರೆಯಾಗಿ ನಿರಂತರ ಜ್ಞಾನಾರ್ಜನೆಯೇ ಬದಲಾವಣೆಯನ್ನು ಎದುರಿಸುವ ಸೂತ್ರವೆಂಬುದನ್ನು ಸಾಬೀತು ಪಡಿಸುತ್ತವೆ. ತಮಾಷೆಯೆಂದರೆ ಇದೇನೂ ಹೊಸ ಆವಿಷ್ಕಾರವಲ್ಲ. ಶತಮಾನಗಳ ಹಿಂದೆಯೇ ಶ್ರೀಕೃಷ್ಣ ತನ್ನ ಭಗವದ್ಗೀತೆಯಲ್ಲಿ ಜ್ಞಾನಮಾರ್ಗವೇ ಅತ್ಯಂತ ಶ್ರೇಷ್ಠ ಮಾರ್ಗ ಎಂದು ಹೇಳಿಯಾಗಿದೆ. ಹೊಸತೆನ್ನುವುದು ಏನೂ ಇಲ್ಲ.

ವಸುಧೇಂದ್ರ

ಟಾಪ್ ನ್ಯೂಸ್

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

11

Mangaluru: ಗಾಂಜಾ ಮಾರಾಟ; ಇಬ್ಬರ ಬಂಧನ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

police

Kasaragod; ಬಂದೂಕು ತೋರಿಸಿ ಹಲ್ಲೆ : ನಾಲ್ವರ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.