ಗ್ರೆಗೇರಿಯನ್‌ ಕ್ಯಾಲೆಂಡರಿನ ಕತೆ


Team Udayavani, Jan 19, 2020, 5:24 AM IST

meg-5

ಮತ್ತೆ ಹೊಸ ವರ್ಷದ ಆಗಮನವಾಗಿದೆ. ಮಾಡಬೇಕಾದ ಒಂದು ಮುಖ್ಯ ಕೆಲಸವೆಂದರೆ ಹೊಸ ವರ್ಷದ ಕ್ಯಾಲೆಂಡರನ್ನು ಮನೆಗೆ ತಂದು ಗೋಡೆಗೆ ಏರಿಸುವುದು. ಹೆಚ್ಚಿನ ಮಂದಿ ತಮಗೆ ರೂಢಿಯಾಗಿರುವ ಕ್ಯಾಲೆಂಡರನ್ನು ಕಾಡಿ ಬೇಡಿ ಪಡೆದರೆ, ಒಂದು ರೀತಿಯ ನಿರುಮ್ಮಳರಾಗಿ ಮನೆಗೆ ಮರಳುವಾಗ ಹೆಮ್ಮೆ ಪಡುವುದಿದೆ. ಹಾಲಿನ ಪ್ಯಾಕೇಟ್‌ ಹಾಕಿದವನ ಲೆಕ್ಕ ಬರೆಯಲೋ, ಕೆಲಸದವಳಿಗೆ ಕೊಟ್ಟ ಮುಂಗಡ ಸಂಬಳದ ಲೆಕ್ಕ ಬರೆಯಲೋ, ಮದುವೆ ಮುಂಜಿ ಮುಂತಾದ ಸಮಾರಂಭಗಳ ಆಹ್ವಾನ ಪತ್ರಿಕೆ ತಿಂಗಳ ಮೊದಲೇ ಬಂದರೆ ನೆನಪಿನಿಂದ ಜಾರಿ ಹೋಗದಂತೆ ಬರೆದಿಡಲೋ ಕ್ಯಾಲೆಂಡರ್‌ ಬೇಕೇ ಬೇಕಾಗುತ್ತದೆ. ಅದನ್ನು ತರುವ ತನಕ ಮನೆಯ ಯಜಮಾನಿಯ ವರಾತವೂ ನಿಲ್ಲುವುದಿಲ್ಲ. ಅವರಿಗೆ ಮಾತ್ರ ತಾರೀಕಿನ ಸಂಖ್ಯೆ ದೊಡ್ಡದಾಗಿ ಇರಬೇಕು.

ಅನೇಕ ಕಂಪೆನಿಯವರು, ಸಂಸ್ಥೆಯವರು, ತಮ್ಮದೇ ಆದ ಕ್ಯಾಲೆಂಡರನ್ನು ಛಾಪಿಸುತ್ತಾರೆ. ಅವನ್ನು ಪುಕ್ಕಟೆಯಾಗಿ ತಮ್ಮ ಗಿರಾಕಿಗಳಿಗೆ ಹಂಚುತ್ತಾರೆ. ಇಂಥ ಕ್ಯಾಲೆಂಡರ್‌ಗಳು ಸಾಕಷ್ಟು ದೊಡ್ಡದಾಗಿ ಇರುವುದೂ ಉಂಟು. ಆಕರ್ಷಕವಾಗಿ ಕಾಣಲಿ ಎಂಬ ಉದ್ದೇಶದಿಂದ ಪ್ರತೀ ಪುಟದ ಮೇಲೆ ತರಹೇವಾರಿ ಚಿತ್ರಗಳನ್ನು ಹಾಕುವುದೂ ಉಂಟು. ಇಡಿಯ ವರ್ಷ ಅದು ತಮ್ಮ ಗೋಡೆಗಳ ಮೇಲೆ ವಿರಾಜಿಸುತ್ತಿರುವುದರಿಂದ ಅವರಿಗೆ ಯಾವುದೇ ಖರ್ಚಿಲ್ಲದೆ ತಮ್ಮ ಸಂಸ್ಥೆಯ ಜಾಹೀರಾತಿನ ಫ‌ಲ ದೊರೆಯುತ್ತದೆ. ಕೆಲವರು ತಮ್ಮ ಭಾವಚಿತ್ರಗಳನ್ನೇ ದೊಡ್ಡದಾಗಿ ಛಾಪಿಸಿ, ಒಂದೇ ಹಾಳೆಯ ಮೇಲೆ ಸಣ್ಣದಾಗಿ ಇಡೀ ವರ್ಷದ ತಾರೀಕು ಪಟ್ಟಿಯನ್ನು ಕೆಳಗೆ ಮುದ್ರಿಸಿ ವಿತರಿಸುವುದಿದೆ. ಅವರಿಗೆ ಸಾರ್ವಜನಿಕವಾಗಿ ತಮ್ಮನ್ನು ತಾವು ಪ್ರೊಜೆಕ್ಟ್ ಮಾಡುವ ಉತ್ಸಾಹ.

ಸಿನೆಮಾ ನಟನಟಿಯರ ಚಿತ್ರಗಳುಳ್ಳ ಕ್ಯಾಲೆಂಡರ್‌ಗಳು ಸಾಕಷ್ಟು ಜನಪ್ರಿಯ. ಸಿನೆಮಾ ಮಂದಿರವೇ ಇಲ್ಲದ ನನ್ನ ಊರಿನ ಮನೆಯಲ್ಲಿ ನಾನು ಸಣ್ಣವನಿರುವಾಗ ಅಂಥ ಒಂದು ಕ್ಯಾಲೆಂಡರ್‌ ಇತ್ತು. ದೊಡ್ಡ ಕ್ಯಾಲೆಂಡರ್‌. ಅದಕ್ಕೆ ಮೇಲೆ-ಕೆಳಗೆ ತಂತಿಯಂಥ ಬಾರ್ಡರ್‌. ಕೆಳಗೆ ತಾರೀಕುಪಟ್ಟಿ ಇತ್ತೋ ಇಲ್ಲವೋ ನೆನಪಿಲ್ಲ. ಆದರೆ, ಬಣ್ಣದಲ್ಲಿ ಸೊಂಟದ ತನಕ ತೆಗೆದ ಮೋಹಕ ತಾರೆಯೊಬ್ಬಳ ಚಿತ್ರವಿತ್ತು. ಫೋಟೋ ತೆಗೆಯುವಾಗ ಆಕೆ ಕ್ಯಾಮರಾಕಣ್ಣನ್ನೇ ನೋಡುತ್ತಿದ್ದುದರಿಂದ ಯಾವ ಕಡೆಯಿಂದ ನೋಡಿದರೂ ನಮ್ಮನ್ನೇ ನೋಡುತ್ತಿದ್ದ ಹಾಗೆ ಭ್ರಮೆ ಮೂಡಿಸುತ್ತಿತ್ತು. ಅದನ್ನು ನಮಗೆ ಯಾರು ಕೊಟ್ಟರೋ ತಿಳಿಯದು. ಅಂಥದನ್ನು ಯಾರಾದರೂ ಪುಕ್ಕಟೆಯಾಗಿ ಕೊಡುತ್ತಾರೆ ಎನ್ನುವ ಹಾಗಿಲ್ಲ. ಎಷ್ಟೋ ಸಮಯದ ಬಳಿಕ ಅದು ಆಗಿನ ಕಾಲದ ಪ್ರಸಿದ್ಧ ಸಿನೆಮಾ ತಾರೆಯಾದ ಪದ್ಮಿನಿಯ ಚಿತ್ರ ಎಂದು ನನಗೆ ತಿಳಿದದ್ದು. ಎಲ್ಲಿಯ ತಮಿಳುತಾರೆ, ಎಲ್ಲಿಯ ನನ್ನ ಕುಗ್ರಾಮ! ಕೆಲವು ಸಮಯದ ಹಿಂದಿನ ತನಕವೂ ಒಂದು ಸಂಸ್ಥೆ ನಗ್ನ ರೂಪದರ್ಶಿಗಳ ದುಬಾರಿ ಬೆಲೆಯ ಕ್ಯಾಲೆಂಡರ್‌ಗಳನ್ನು ಪ್ರಕಟಿಸುತ್ತಿತ್ತು. ಈಗ ಆ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿ ಇದ್ದುದರಿಂದ ಅವು ಕಾಣುತ್ತಿಲ್ಲ.

ದೇವರುಗಳ ಚಿತ್ರಗಳೂ ಕ್ಯಾಲೆಂಡರ್‌ಗಳಲ್ಲಿ ಕಾಣುವುದು ಸಾಧ್ಯ. ಮೊದಲು ಗುರಿಯಾಗುವುದು ಮೂಷಿಕವಾಹನ ಗಣಪತಿ. ನನ್ನವ್ವ ಲಕ್ಷ್ಮಿಯ ಚಿತ್ರಕ್ಕೆ ದಿನಾ ಕುಂಕುಮ ಹಚ್ಚುತ್ತಿದ್ದಳು. ಕ್ಯಾಲೆಂಡರ್‌ ಆದರೂ ಅವಳಿಗೆ ಅದು ದೇವತೆಯೇ! ಸಚಿತ್ರ ಕ್ಯಾಲೆಂಡರ್‌ಗಳು ತಂದ ಹೊಸತರಲ್ಲಿ ಬಿಟ್ಟರೆ ವರ್ಷ ಪೂರ್ತಿ ಆಸಕ್ತಿ ಉಳಿಯುವುದಿಲ್ಲ.

ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುವ ಕಾಲನಿರ್ಣಯ ಮಹಾರಾಷ್ಟ್ರದಲ್ಲಿ 1973ರಲ್ಲಿ ಜಯಂತ್‌ ಸಾಲಗಾಂವಕರ್‌ ಎಂಬವರು ಕಾಲನಿರ್ಣಯ ಎಂಬ ಒಂದು ಹನ್ನೆರಡು ಹಾಳೆಗಳ ಕ್ಯಾಲೆಂಡರ್‌ ಹೊರಡಿಸಿದರು. ಎದುರಿಗೆ ತಾರೀಕುಪಟ್ಟಿ ಇರುವ ಈ ಕ್ಯಾಲೆಂಡರ್‌ ತನ್ನ ಹಿಂದಿನ ಪುಟಗಳಲ್ಲಿ ಹಿಂದು, ಮುಸ್ಲಿಂ, ಕ್ರಿಸಿcಯನ್‌, ಸಿಖ್‌, ಬೌದ್ಧ, ಜೈನ, ಪಾರ್ಸಿ ಮತ್ತು ಯಹೂದ್ಯರ ಹಬ್ಬಗಳ, ಸುಮುಹೂರ್ತಗಳ, ಸೆಲೆಬ್ರೇಶನ್ಸ್‌ಗಳ ಪಟ್ಟಿಯಲ್ಲದೆ, ಸೂರ್ಯ ಚಂದ್ರೋದಯಗಳ ಸಮಯವನ್ನೂ ಆಯಾಯ ತಿಂಗಳಲ್ಲಿ ದೊರಕುವ ಯೋಗ್ಯ ತರಕಾರಿಗಳನ್ನೂ ತಿಳಿಸುತ್ತದೆ. ಪ್ರತೀ ರಾಶಿಯವರ ತಿಂಗಳ ಭವಿಷ್ಯವನ್ನೂ ಹೇಳುತ್ತದೆ. ಆರೋಗ್ಯ, ಆಹಾರ ಮತ್ತು ಸೌಂದರ್ಯ ಕಾಪಾಡುವ ಒಂದೊಂದು ಚಿಕ್ಕ ಲೇಖನವೂ ಇರುತ್ತದೆ. ಕನ್ನಡವೂ ಸೇರಿ ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುವ ಕಾಲನಿರ್ಣಯ ಮೊದಲ ವರ್ಷದಲ್ಲಿಯೇ ಹತ್ತು ಸಾವಿರ ಪ್ರತಿಗಳ ಮಾರಾಟ ಮಾಡಿದ್ದು ಈಗ ಅದು ಎರಡು ಕೋಟಿ ಪ್ರತಿಗಳನ್ನು ಮಾರಿದ ದಾಖಲೆ ಮಾಡಿ ಪ್ರಪಂಚದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ನಮ್ಮ ಜೀವನದಲ್ಲಿ ಇಷ್ಟು ಮಹತ್ವ ಪಡೆದ ಈ ಕ್ಯಾಲೆಂಡರ್‌ಗಳ ಹುಟ್ಟು ಹೇಗಾಯಿತು? ಅದಕ್ಕೆ ಅದರ ಮೂಲಕ್ಕೆ ಹೋಗಬೇಕು. ಸುಮಾರು ಹತ್ತುಸಾವಿರ ವರ್ಷಗಳ ಹಿಂದೆಯೇ ಕ್ಯಾಲೆಂಡರ್‌ ಇತ್ತೆಂದು ಸ್ಕಾಟ್‌ಲ್ಯಾಂಡಿನಲ್ಲಿ ಉತ್ಖನನ ಮಾಡುವಾಗ ಸಿಕ್ಕಿದ ಕಂಚಿನ ಫ‌ಲಕವೊಂದರಿಂದ ತಿಳಿಯುತ್ತದೆ. ಅದರಲ್ಲಿ ಹನ್ನೆರಡು ಗುಳಿಗಳಿದ್ದು ಮೇಲೆ ವೃತ್ತಾಕಾರವಾದ ಒಂದು ಚಿತ್ರವಿದೆ. ಗುಳಿಗಳು ತಿಂಗಳನ್ನೂ , ವೃತ್ತ ಸೂರ್ಯಚಂದ್ರರನ್ನೂ ಸಂಕೇತಿಸುತ್ತದೆ ಎನ್ನುತ್ತಾರೆ. ಬಹುಶಃ ಇದೇ ಮೊತ್ತಮೊದಲ ದಾಖಲೆಯೆಂದು ಖಗೋಳಶಾಸ್ತ್ರಜ್ಞರು ಭಾವಿಸುತ್ತಾರೆ.

ಮೆಸಪೊಟೇಮಿಯಾ, ಬ್ಯಾಬಿಲೋನಿಯಾ ದೇಶಗಳಲ್ಲಿ ವ್ಯಾಪಾರ ಉತ್ಕರ್ಷ ಸ್ಥಿತಿಯಲ್ಲಿ ಇದ್ದಾಗ ತಾವು ಕೊಟ್ಟ ಸಾಲದ ಲೆಕ್ಕ ಇಡಲು ಅವರು ದಿನವನ್ನು ನಿರ್ಧರಿಸುವ ಅಗತ್ಯ ಬಿದ್ದಿತ್ತು. ಆಗ ಅಲ್ಲಿ ದಿನ, ವಾರ, ತಿಂಗಳು, ವರ್ಷಗಳಿಗಾಗಿ ಹಲವು ತರದ ತಾರೀಕು ಪಟ್ಟಿಯನ್ನು ಬಳಸುತ್ತಿದ್ದರಂತೆ. ಕ್ರಮೇಣ ಸುಮೇರಿಯನ್‌ ದ್ವೀಪ, ಈಜಿಪ್ಟ್, ಅಸ್ಸೀರಿಯಾದಿಂದ ಹಿಡಿದು ಪರ್ಶಿಯಾ, ಬಾಲಿ, ಇಂಡೋನೇಶ್ಯಾ ಇತ್ಯಾದಿ ದೇಶದ ಜನರು ಕ್ಯಾಲೆಂಡರ್‌ನ ಅಗತ್ಯವನ್ನು ಕಂಡುಕೊಂಡರು. ಚೀನಾ, ಜಪಾನ್‌ ಮುಂತಾದ ದೇಶಗಳು ಈಗಲೂ ತಮ್ಮ ಪಾರಂಪರಿಕ ಪಂಚಾಂಗಗಳದ್ದೇ ಕ್ಯಾಲೆಂಡರ್‌ ಬಳಸುತ್ತಾರೆ.

ಈ ಎಲ್ಲ ಕ್ಯಾಲೆಂಡರ್‌ಗಳ ಬುನಾದಿ ಇದ್ದದ್ದು ಹಗಲು ಮತ್ತು ರಾತ್ರಿಗಳ ಮೇಲೆ. ಅದನ್ನು ಸೂರ್ಯಮಾನ, ಚಾಂದ್ರಮಾನ ಎಂದು ಬಳಸುತ್ತಿದ್ದರು. ಅವುಗಳ ನಿಖರ ಲೆಕ್ಕಾಚಾರಕ್ಕಾಗಿ ಖಗೋಳಶಾಸ್ತ್ರಜ್ಞರ ಸಹಾಯ ತೆಗೆದುಕೊಳ್ಳುವುದು ಅನಿವಾರ್ಯವಾಯಿತು. ತಮ್ಮ ಅವಿರತ ಸಂಶೋಧನೆಗಳಿಂದ, ಶ್ರಮದಿಂದ ಈ ಖಗೋಳಶಾಸ್ತ್ರಜ್ಞರು ವರ್ಷಕ್ಕೆ 365 ದಿನಗಳಿರುತ್ತಾವೆಂದು ಕಂಡುಹಿಡಿದರು. ಅದನ್ನು ಮಳೆಬೆಳೆಯ ಆಧಾರದ ಮೇಲೆ ಮಳೆಗಾಲ, ಚಳಿಗಾಲ, ವಸಂತಕಾಲ, ಬೇಸಿಗೆ ಕಾಲ ಎಂದು ವಿಭಜಿಸಿದರು. ಅವರು ಕಂಡುಹಿಡಿದಂತೆ ಚಂದ್ರನ ಒಂದು ಪರಿಗ್ರಹಣ ಒಂದು ತಿಂಗಳೆಂದೂ ಅಮಾವಾಸ್ಯೆಯ ಮರುದಿನ ಹೊಸಚಂದ್ರನ ಉದಯವಾಗುವುದರಿಂದ ಮತ್ತೂಂದು ತಿಂಗಳೆಂದೂ ಲೆಕ್ಕಹಾಕಿದರು. ಕೆಲವು ದೇಶದವರು ಆಗ ಒಂದು ತಿಂಗಳಿಗೆ ಮೂವತ್ತು ದಿನಗಳಿದ್ದು ಅದನ್ನು ಹತ್ತು ದಿನಗಳ ಒಂದು ವಾರವೆಂದು ಮೂರು ವಾರಗಳು ಮಾತ್ರವೇ ನಿಗದಿಮಾಡಿದ್ದರಂತೆ. ಅಂದರೆ ಒಂದು ವರ್ಷಕ್ಕೆ ಮೂವತ್ತಾರು ವಾರಗಳಿದ್ದು 360 ದಿನಗಳು ಮಾತ್ರ ಆದುವು. ವರ್ಷಕ್ಕೆ ಮಿಗುವ ಐದು ಚಿಲ್ಲರೆ ದಿನಗಳನ್ನು ಕೈಬಿಟ್ಟದ್ದೂ ಇದೆ. ಅನೇಕ ದೇಶದವರು ತಮ್ಮ ಕ್ಯಾಲೆಂಡರಿನಲ್ಲಿ ಬಳಸಿದ ದಿನಗಳು ಹೆಚ್ಚುಕಮ್ಮಿಯಾದದ್ದೂ ಇದೆ. ಕೆಲವು ದೇಶಗಳಲ್ಲಿ ಎಂಟರಿಂದ ಹದಿನೈದು ದಿನಗಳು ಕಮ್ಮಿಯಾಗಿದ್ದುವು. ಅಂದರೆ ಒಂದನೆಯ ತಾರೀಕಿಗೆ ರಾತ್ರಿ ಮಲಗಿದ್ದ ವ್ಯಕ್ತಿ ಹದಿನಾಲ್ಕನೆಯ ತಾರೀಕಿನಂದು ಏಳುತ್ತಾನೆ! ಕೆಲವು ದೇಶದವರು ಜನವರಿಯಿಂದ ಆರಂಭ ಮಾಡದೇ ಮುಂದೆಂದೋ ಹೊಸವರ್ಷವನ್ನು ಆರಂಭಿಸಿದ್ದಿದೆ. ಹೆಚ್ಚಾಗಿ ರೋಮನ್‌ ಕ್ಯಾಥೊಲಿಕ್‌ ದೇಶದವರು ಈಸ್ಟರ್‌ ಔತಣಕೂಟದಿಂದ ಹೊಸವರ್ಷವನ್ನು ಆರಂಭಿಸಿದ್ದಿದೆ. ಇವೆಲ್ಲ ಅನೇಕ ಸಮಸ್ಯೆಗಳಿಗೆ ಕಾರಣವಾದುವು. ಖಗೋಳಶಾಸ್ತ್ರ ಅಭಿವೃದ್ಧಿಗೊಂಡಂತೆ ಒಂದು ವರ್ಷಕ್ಕೆ 360 ಅಲ್ಲ, 365 ದಿನಗಳು ಇದ್ದಾವೆಂದು ದೃಢೀಕರಿಸಿದಾಗ ಒಪ್ಪಿಕೊಂಡ ನಿಯಮಗಳನ್ನು ಖಂಡಿಸಿದ್ದಕ್ಕೆ ಕೆಲವು ಖಗೋಳಶಾಸ್ತ್ರಜ್ಞರು ಗಲ್ಲಿಗೇರಿಸಿದ್ದೂ ಇದೆ. ಆದರೆ, ಅವರ ವಾದವನ್ನೇ ಪುರಸ್ಕರಿಸಬೇಕಾಗಿ ಬಂದಾಗ, ಕ್ಯಾಲೆಂಡರ್‌ನ ಸ್ವರೂಪದಲ್ಲಿ ಬದಲಾವಣೆಯಾಯಿತು. ಸೂರ್ಯ ಭೂಮಿಗೆ ಒಂದು ಸಂಪೂರ್ಣ ಸುತ್ತು ಬರಲು 365 ದಿನ ಕೂಡಾ ಅಲ್ಲ, ಮತ್ತೂ ಕಾಲು ದಿನ ಬೇಕಾಗುತ್ತವೆ ಎಂದು ಕಂಡುಕೊಂಡಾಗ ನಾಲ್ಕು ವರ್ಷಗಳಿಗೊಮ್ಮೆ ಒಂದು ದಿನ ಸೇರಿಸಿ ಅಧಿಕವರ್ಷವೆಂದು ನಿಯಮಿಸಿದರು. ಕಾಲು ದಿನ ಎಂದು ಸರಳವಾಗಿ ಹೇಳಿದೆ. ಒಂದು ವರ್ಷದ ನಿಖರವಾದ ದಿನಗಳೆಷ್ಟು ಗೊತ್ತೇ? 365.24219858156 ದಿನಗಳು.

ಖಗೋಳಶಾಸ್ತ್ರಜ್ಞರಿಗೆ ತಾವು ಮಂಡಿಸುವ ವಾದಗಳಿಗೆ ಪ್ರಭುತ್ವದ ಮೊಹರಿನ ಅಗತ್ಯವಿತ್ತು. ರೋಮಿನಲ್ಲಿ ಜೂಲಿಯಸ್‌ ಸೀಜರಿನ ಆಡಳಿತವಿರುವಾಗ ಕ್ರಿಸ್ತಪೂರ್ವ 48ರಲ್ಲಿ ಅದೂ ಒದಗಿತು. ಆಗ ಬಂದ ಜೂಲಿಯನ್‌ ಕ್ಯಾಲೆಂಡರ್‌ ಮುಂದೆ ಬಹಳ ವಿಕಾಸಗೊಂಡಿತು. ಸುಮಾರು ಐನೂರು ವರ್ಷಗಳ ತನಕ ಜೂಲಿಯನ್‌ ಕ್ಯಾಲೆಂಡರನ್ನೇ ಅಧಿಕೃತವಾಗಿ ಎಲ್ಲ ಕಡೆಯೂ ಸ್ವೀಕರಿಸಲಾಗಿತ್ತು.

ಯಾವಾಗ ಗೆಲಿಲಿಯೋ ಎಂಬ ಖಗೋಳಶಾಸ್ತ್ರಜ್ಞ, ಸೂರ್ಯ ಭೂಮಿಯ ಸುತ್ತ ತಿರುಗುವುದಲ್ಲ, ಭೂಮಿಯೇ ಸೂರ್ಯನ ಸುತ್ತ ತಿರುಗುತ್ತಿದೆ ಎಂದು ಸಾಧಿಸಿದನೋ, ಅವನನ್ನು ರೋಮನ್‌ ಚರ್ಚ್‌ ಕ್ಷಮೆ ಕೇಳಲು ಆಗ್ರಹಿಸಿ, ಕೊನೆಗೆ ವಧೆ ಮಾಡಿತು. ಆದರೂ ಅವನ ವಾದವನ್ನು ಅಂಗೀಕರಿಸಬೇಕಾದ ಅನಿವಾರ್ಯತೆಗೆ ಬಿತ್ತು. 1,582ರಲ್ಲಿ ಹದಿಮೂರನೆಯ ಪೋಪ್‌, ಗ್ರೆಗರಿ ಎಂಬವರು ಹೊಸ ಕ್ಯಾಲೆಂಡರ್‌ ಒಂದನ್ನು ಸಿದ್ಧಪಡಿಸಿದರು. ಅದು ಗ್ರೆಗೇರಿಯನ್‌ ಕ್ಯಾಲೆಂಡರ್‌ ಎಂದು ಜನಪ್ರಿಯವಾಗಿ ಈಗ ಅದನ್ನೇ ಹೆಚ್ಚಿನ ದೇಶದವರು ಬಳಸುತ್ತಿದ್ದಾರೆ. ಈಗ ನಮ್ಮಲ್ಲಿ ಇರುವುದೂ ಅದೇ ಕ್ಯಾಲೆಂಡರ್‌. ದಿನಾಂಕ, ವಾರ, ತಿಂಗಳು, ವರ್ಷ ಇವುಗಳು ನೇಮಿತವಾಗಿರುವುದಲ್ಲದೇ ನಾಲ್ಕು ವರ್ಷಗಳಿಗೊಮ್ಮೆ ಅಧಿಕವರ್ಷ ಬರುವುದೂ ಅಲ್ಲಿ ಉಲ್ಲೇಖೀತವಾಗಿದೆ.

ಪ್ರತಿಯೊಂದು ದೇಶದ ಸರಕಾರ ಏನನ್ನಾದರೂ ಅನುಷ್ಠಾನಕ್ಕೆ ತರಬೇಕಾದರೆ ಅದನ್ನು ಅವರವರ ಸಂಸತ್‌ನಲ್ಲಿ ಮಸೂದೆಯನ್ನು ಮಂಡಿಸಿ ಅಂಗೀಕರಿಸಬೇಕು. ಫ್ರಾನ್ಸ್‌, ಜರ್ಮನಿ, ಇಟಲಿ, ಎಲ್ಲ ಬಹಳ ಮೊದಲೇ ಗ್ರೆಗೇರಿಯನ್‌ ಕ್ಯಾಲೆಂಡರ್‌ನ್ನು ಅಂಗೀಕರಿಸಿದರೂ ಇಂಗ್ಲೆಂಡ್‌ ಅದನ್ನು ಅಂಗೀಕರಿಸಿದ್ದು 1,752ರಲ್ಲಿ. ಯುರೋಪಿನ ಹೆಚ್ಚಿನ ದೇಶದವರು ಅಂಗೀಕರಿಸಿದ ಕಾರಣ ಇಂಗ್ಲೆಂಡ್‌ ಕೂಡ ಅದನ್ನು ಬಳಸಬೇಕಾಯಿತಾದರೂ ಅವರು ಅದನ್ನು ಗ್ರೆಗೇರಿಯನ್‌ ಕ್ಯಾಲೆಂಡರ್‌ ಎಂದು ಕರೆಯಲಿಲ್ಲ.

ಇಂಗ್ಲೆಂಡ್‌ ಈ ಗ್ರೆಗೇರಿಯನ್‌ ಕ್ಯಾಲೆಂಡರ್‌ನ್ನು ಅಂಗೀಕರಿಸಿದ ಮೇಲೆ ತನ್ನ ವಸಾಹತುಗಳಲ್ಲೂ ಅದನ್ನು ರೂಢಿಸಲು ಅಪ್ಪಣೆ ಮಾಡಿತು. ಅದರಿಂದಾಗಿ ಅವರ ಆಧೀನದಲ್ಲಿದ್ದ ಅಮೆರಿಕೆಯ ಭಾಗ ಅದನ್ನೇ ಬಳಸಿತು. ಆದರೆ, ರಷ್ಯಾದ ಅಧೀನದಲ್ಲಿದ್ದ ಅಮೆರಿಕದ ಪ್ರದೇಶಗಳು ಆ ಕ್ಯಾಲೆಂಡರ್‌ನ್ನು ಸ್ವೀಕರಿಸಬೇಕಾದರೆ 115 ವರ್ಷಗಳೇ ಕಾಯಬೇಕಾಯಿತು. ಬ್ರಿಟಿಷರ ವಸಾಹತಾಗಿದ್ದ ಇಂಡಿಯಾ ಕೂಡಾ 1,752ರಲ್ಲಿಯೇ ಗ್ರೆಗೇರಿಯನ್‌ ಕ್ಯಾಲೆಂಡರನ್ನು ಬಳಸಿಕೊಳ್ಳುವುದು ಅನಿವಾರ್ಯವಾಯಿತು.

ಆದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ನಮಗೆ ನಮ್ಮದೇ ಕ್ಯಾಲೆಂಡರ್‌ ಬೇಕಾಗಿತ್ತಲ್ಲವೆ? ಅದಕ್ಕಾಗಿ ಗ್ರೆಗೇರಿಯನ್‌ ಕ್ಯಾಲೆಂಡರ್‌ನ್ನು ಅಧಿಕೃತವಾಗಿ ಸ್ವೀಕರಿಸಲು ನಮ್ಮ ಸಂಸತ್ತಿನಲ್ಲಿ ಮಸೂದೆಯೊಂದರ ಮಂಡನೆ ಮಾಡಿದರು. ಆದರೆ, ನಮ್ಮ ಪಂಚಾಂಗಗಳು ಇರುವಾಗ ಈ ಕ್ಯಾಲೆಂಡರ್‌ ಯಾಕೆ, ನಮ್ಮದೇ ಮಾಡಬಹುದಲ್ಲ ಎಂಬ ಚರ್ಚೆ ನಡೆಯಿತು. 1,957ರಲ್ಲಿ ಗ್ರೆಗೇರಿಯನ್‌ ಕ್ಯಾಲೆಂಡರಿನ ಇಂಗ್ಲಿಷ್‌ ತಾರೀಕುಗಳ ಕೆಳಗೆ ಸಣ್ಣ ಅಕ್ಷರಗಳಲ್ಲಿ ಚೈತ್ರ , ವೈಶಾಖ ಎಂದು ಮುಂತಾಗಿ ತಿಂಗಳುಗಳನ್ನೂ ಬರೆಯಬೇಕೆಂದೂ, ನಕ್ಷತ್ರಗಳನ್ನೂ ಅವುಗಳ ಪಾದಗಳನ್ನೂ ಬರೆಯಬೇಕೆಂದೂ ಪರಿಷ್ಕರಿಸಿ ಮಸೂದೆಯನ್ನು ಅಂಗೀಕರಿಸಲಾಯಿತು. ಖಗೋಳಶಾಸ್ತ್ರಜ್ಞ ಮೇಘನಾದ ಸಹಾ ಅವರ ನೇತೃತ್ವದಲ್ಲಿ ಆರು ಮಂದಿ ವಿದ್ವಾಂಸರ ತಂಡವೊಂದನ್ನು ನಿರ್ಮಿಸಿ, ವೈಜ್ಞಾನಿಕವಾಗಿ ಭಾರತದ ಅಧಿಕೃತ ಕ್ಯಾಲೆಂಡರ್‌ ರಚನೆಯಾಯಿತು. ಹೀಗೆ ಬಂತು ನಮ್ಮ ಇಂದಿನ ಸುಧಾರಿತ ಕ್ಯಾಲೆಂಡರ್‌.

ಗೋಪಾಲಕೃಷ್ಣ ಪೈ

ಟಾಪ್ ನ್ಯೂಸ್

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.