“ಸರ್’ ಎಂದು ಮೊದಲ ಬಾರಿ ಕರೆಸಿಕೊಂಡ ದಿನಗಳು!
Team Udayavani, Sep 16, 2018, 6:00 AM IST
ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಬಿ.ಎಸ್ಸಿ. ಫಿಸಿಕ್ಸ್- ಕೆಮಿಸ್ಟ್ರಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಎರಡನೆಯ ದರ್ಜೆಯಲ್ಲಿ ಪಾಸಾಗಿದ್ದೆ. ವಿಜ್ಞಾನದ ವಿಷಯವನ್ನು ಇಂಗ್ಲಿಶ್‌ನಲ್ಲಿ ಬರೆಯಲು ಸಮರ್ಥವಾದ ಇಂಗ್ಲಿಶ್‌ಜ್ಞಾನ ನನ್ನಲ್ಲಿ ಇರಲಿಲ್ಲ. ಮನೆಯ ಪರಿಸರದಲ್ಲಿ ಇಂಗ್ಲಿಶ್‌ನ ವಾತಾವರಣ ಇರಲಿಲ್ಲ. ಬಿ.ಎಸ್ಸಿ. ಪದವಿ ಪಡೆದದ್ದೇ ನನಗೆ ದೊಡ್ಡ ಸಂಭ್ರಮವಾಗಿತ್ತು.
ಫಿಲೋಮಿನಾ ಕಾಲೇಜಿನಲ್ಲಿ ನಮ್ಮ ಲೆಕ್ಚರರ್‌ಗಳ ಪಾಠದ ಕ್ರಮ, ಶಿಸ್ತು, ಅವರ ಬಗ್ಗೆ ವಿದ್ಯಾರ್ಥಿಗಳಿಗೆ ಇದ್ದ ಅಭಿಮಾನ- ಇವನ್ನೆಲ್ಲ ಗಮನಿಸಿದ ನನಗೆ ನಾನು ಕೂಡ ಕಾಲೇಜಿನಲ್ಲಿ “ಲೆಕ್ಚರರ್’ ಆಗಬೇಕು ಎಂಬ ಬಯಕೆ ಮೂಡಿತು. ಇದ್ದುದರಲ್ಲಿ ಸ್ವಲ್ಪ ಹೆಚ್ಚು ಮಾರ್ಕ್ಸ್ ಇದ್ದ ಫಿಸಿಕ್ಸ್‌ನಲ್ಲಿ ಎಂ.ಎಸ್ಸಿ. ಮಾಡಬೇಕು ಎನ್ನುವುದು ಆ ಕಾಲಕ್ಕೆ ಚಿಗುರಿದ ಕನಸು. ಆದರೆ, ಅದಕ್ಕೆ ಅಡ್ಡಿಗಳು ಇದ್ದುವು. ಎಂ.ಎಸ್ಸಿ. ಮಾಡಲು ಮೈಸೂರಿಗೆ ಹೋಗಲು ಆಗಿನ ನಮ್ಮ ಆರ್ಥಿಕ ಸ್ಥಿತಿಯಲ್ಲಿ ಸಾಧ್ಯ ಇರಲಿಲ್ಲ. ಸೆಕೆಂಡ್ ಕ್ಲಾಸ್ ಮಾರ್ಕ್ಸ್ನಲ್ಲಿ ಫಿಸಿಕ್ಸ್ ಎಂ.ಎಸ್ಸಿ.ಗೆ ಸೀಟ್ ಸಿಗುವ ಭರವಸೆ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಆಗ ಒಂದು ಕೆಲಸ ಬೇಕಾಗಿತ್ತು.
ಸ್ನಾತಕನಾದ ನನಗೆ ಮತ್ತೆ ಬಾಗಿಲು ತೆರೆದದ್ದು ನನ್ನ ಕೊಂಬೆಟ್ಟು ಶಾಲೆ ! ನಾನು ಕಲಿತ ಶಾಲೆಯಲ್ಲಿ ಕಲಿಸುವ ಕಾಯಕಕ್ಕೆ ನಾಂದಿ ಹಾಡಿದ ಅದೃಷ್ಟದ ವಿದ್ಯಮಾನ ಸಂಭವಿಸಿದ್ದು 1967ರ ಜೂನ್‌ನಲ್ಲಿ. ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಪದವೀಧರ ಸಹಾಯಕರಾಗಿ ಅಧ್ಯಾಪಕರನ್ನು ತಾತ್ಕಾಲಿಕ ನೆಲೆಯಲ್ಲಿ ತೆಗೆದುಕೊಳ್ಳುತ್ತಾರೆ ಎಂದು ತಿಳಿದು, ನನ್ನ ಗುರುಗಳಾದ ಹೈಸ್ಕೂಲಿನ ಹೆಡ್‌ಮಾಸ್ಟರ್ ಎಂ. ಅಣ್ಣಪ್ಪ ಅವರನ್ನು ಭೇಟಿಯಾದೆ. ಅವರು ತುಂಬಾ ಪ್ರೀತಿಯಿಂದ ಮಾತನಾಡಿಸಿ, ನಾನು ಕೊಟ್ಟ ಅರ್ಜಿಯನ್ನು ಅಂಗೀಕರಿಸಿ ಆದೇಶ ಕೊಟ್ಟರು. ನನಗೊಂದು ಕಲಿಸುವ ಕೆಲಸ ಸಿಕ್ಕಿತು. ಅದು ಸುಮಾರು ಒಂಬತ್ತು ತಿಂಗಳ ಅವಧಿಯ ತಾತ್ಕಾಲಿಕ ಕೆಲಸ. ಸಂಬಳ ತಿಂಗಳಿಗೆ 150 ರೂಪಾಯಿ. ಇತರ ಭತ್ಯೆ ಎಲ್ಲ ಸೇರಿ ಸುಮಾರು 180 ರೂಪಾಯಿ. ಅಧ್ಯಾಪನ ಕೆಲಸದ ಸಂತೃಪ್ತಿಯ ಸುಖದಲ್ಲಿ ನನಗೆ ಆ ಸಂಬಳ ಸಮೃದ್ಧಿಯ ಸಮುದ್ರವಾಗಿತ್ತು.
ನಾಲ್ಕು ವರ್ಷಗಳ ಬಳಿಕ ಮತ್ತೆ ಬೋರ್ಡ್‌ಹೈಸ್ಕೂಲಿಗೆ ನಾನು ಬಂದಾಗ ನನ್ನ ಕೆಲವು ಅಧ್ಯಾಪಕರು ಇದ್ದರು. ಅನೇಕ ಹೊಸಬರು ಸೇರ್ಪಡೆ ಆಗಿದ್ದರು. ವಿಜ್ಞಾನ (ಗಣಿತ ಸಹಿತ)ಕ್ಕೆ ಅಚ್ಯುತ ರಾವ್, ಈಶ್ವರ ಭಟ್, ನಾರಾಯಣ ಭಟ್, ಉಪಾಧ್ಯಾಯ, ಗೋಪಾಲಕೃಷ್ಣ; ಸಮಾಜವಿಜ್ಞಾನಕ್ಕೆ (ಇಂಗ್ಲಿಷ್ ಸಹಿತ) ಸೀತಾರಾಮ ಸುವರ್ಣ, ಪಿ. ರಂಗನಾಯಕ್, ಸಂಜೀವ ರಾವ್, ಸುಂದರ ಮಾಸ್ಟ್ರೆ, ಲಿಲ್ಲಿ ಡಯಾಸ್; ಕನ್ನಡಕ್ಕೆ ರಾಮಯ್ಯ ಶೆಟ್ಟಿ, ಎಸ್.ಆರ್. ಪಾಡಿ, ಸಂಸ್ಕೃತಕ್ಕೆ ವಿಷ್ಣುಮೂರ್ತಿ ಭಟ್; ಕ್ರೀಡಾ ವಿಭಾಗಕ್ಕೆ ರವಿರಾಜ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಎಸ್.ಕೆ. ಮಂಗಳಾ- ಹೀಗೆ ಅನೇಕ ಅಧ್ಯಾಪಕರು ಇದ್ದರು. ಹಸನ್- ಲೈಬ್ರೇರಿಯನ್/ಲ್ಯಾಬ್ ಅಸಿಸ್ಟೆಂಟ್.
ಈ ಹಿರಿಯ ಅಧ್ಯಾಪಕರ ಜೊತೆಗೆ ಆ ವರ್ಷ ಹೊಸತಾಗಿ ಸೇರ್ಪಡೆ ಆದವರು ನಾವು ನಾಲ್ಕು ಮಂದಿ. ನಾನು, ನನ್ನ ಬಿ.ಎಸ್ಸಿ. ಸಹಪಾಠಿ ಗೆಳೆಯ ವಿ. ಹಸನ್, ಬೋರ್ಡ್ ಹೈಸ್ಕೂಲಿನ ಹಿಂದಿನ ಮುಖ್ಯೋಪಾಧ್ಯಾಯರು ಮಾರಪ್ಪ ಶೆಟ್ಟರ ಮಗ ಪ್ರಭಾಕರ ಶೆಟ್ಟಿ ಮತ್ತು ಬಿ.ಕಾಂ. ಮಾಡಿ ಅಧ್ಯಾಪನಕ್ಕೆ ಬಂದ ಸತೀಶ್. ನಾವು ನಾಲ್ಕು ಮಂದಿ ಯಂಗ್‌ಟರ್ಕ್ ಅಧ್ಯಾಪಕರಾಗಿ ಸದಾ ಒಟ್ಟಿಗೆ ಇದ್ದು, ಹೈಸ್ಕೂಲಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತಿದ್ದೆವು. ನಾವು ಯುವಚತುಷ್ಟಯರು ವಿದ್ಯಾರ್ಥಿಗಳ ಪಾಲಿಗೆ ಪಾಠದ ದೃಷ್ಟಿಯಿಂದ ಒಳ್ಳೆಯ ಅಧ್ಯಾಪಕರು, ಶಿಸ್ತಿನ ದೃಷ್ಟಿಯಿಂದ ಕಠಿಣ ಸಿಪಾಯಿಗಳು.
ನನಗೆ ಪಾಠ ಮಾಡಲು ಕೊಟ್ಟದ್ದು ಎಂಟನೆಯ ಮತ್ತು ಒಂಬತ್ತನೆಯ ತರಗತಿಗಳಿಗೆ ಸಾಮಾನ್ಯವಿಜ್ಞಾನ ಮತ್ತು ಗಣಿತ ವಿಷಯಗಳನ್ನು. ಆಗ ಎಂಟನೆಯ ತರಗತಿಯಲ್ಲಿ ಎ, ಬಿ, ಸಿ, ಡಿ, ಇ, ಎಫ್ ಎಂಬ ಆರು ಸೆಕ್ಷನ್‌ಗಳು ಇದ್ದುವು. ಅವುಗಳಲ್ಲಿ ಐದು ಸೆಕ್ಷನ್‌ಗಳಿಗೆ ನಾನು ಪಾಠ ಮಾಡುತ್ತಿದ್ದೆನು. ಒಂದು ಸೆಕ್ಷನ್‌ಗೆ (8ಇ) ಇಂಗ್ಲಿಷ್, ಎರಡು ಸೆಕ್ಷನ್‌ಗಳಿಗೆ ಸಾಮಾನ್ಯವಿಜ್ಞಾನ (8ಎ ಮತ್ತು ಬಿ), ಇನ್ನು ಎರಡು ಸೆಕ್ಷನ್‌ಗಳಿಗೆ ಗಣಿತ (8ಸಿ ಮತ್ತು ಎಫ್).
ಒಂಬತ್ತನೆಯ “ಬಿ’ ಸೆಕ್ಷನ್‌ಗೆ ವಿಜ್ಞಾನ. ಪ್ರತಿ ತರಗತಿಯಲ್ಲಿ ಸರಾಸರಿ ನಲುವತ್ತು ವಿದ್ಯಾರ್ಥಿಗಳು ಇರುತ್ತಿದ್ದರು.
ಆ ಕಾಲದ ಎಂಟನೆಯ ತರಗತಿಯ ಮಕ್ಕಳನ್ನು ಈಗ ನೆನಪಿಸಿಕೊಂಡಾಗಲೂ ಆ ಮುಗ್ಧತೆಯ ಮುಖಭಾವದ, ಹೊಳೆಯುವ ಕುತೂಹಲದ ಕಣ್ಣುಗಳ ಚಿತ್ರ ನನ್ನ ಕಣ್ಣಮುಂದೆ ಬಂದು ನಿಲ್ಲುತ್ತದೆ. ಹದಿಹರೆಯ ಚಿಗುರುವ ವಯಸ್ಸು, ಏನು ಹೇಳಿದರೂ ಅದನ್ನು ಹಸಿಗೋಡೆಗೆ ಎಸೆದ ಹರಳು ಅಂಟಿಕೊಳ್ಳುವಂತೆ ಸ್ವೀಕರಿಸಿ ಮುಗ್ಧತೆಯಿಂದ ಒಪ್ಪಿಕೊಳ್ಳುವ ಮನಸ್ಸು. ಆ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತವನ್ನು ಬೋಧಿಸಲು ತೊಡಗುವಾಗ ನನ್ನಲ್ಲಿ ಶಿಕ್ಷಣಶಾಸ್ತ್ರದ ಯಾವ ಪರಿಕರಗಳೂ ಇರಲಿಲ್ಲ. ಇದೇ ಶಾಲೆಯಲ್ಲಿ ಇದೇ ತರಗತಿಯಲ್ಲಿ ಇದೇ ಪಾಠಗಳನ್ನು ಮಾಡಿದ ಅಧ್ಯಾಪಕರ ಮಾದರಿ ಒಂದು ಕಡೆ ಇತ್ತು. ಫಿಲೋಮಿನಾ ಕಾಲೇಜಿನಲ್ಲಿ ಕಲಿತ ವಿಜ್ಞಾನ ಮತ್ತು ಗಣಿತದ ಪಾಠಗಳ ದೊಡ್ಡ ಮೊತ್ತದ ಸರಕು ಇನ್ನೊಂದೆಡೆ ಇತ್ತು. ಇವುಗಳ ನಡುವೆ ಆ ಚಿನಕುರುಳಿ ಮಕ್ಕಳ ಕಣ್ಣಿನ ಹೊಳಪು ಇತ್ತು. ಆ ಹೊಳಪಿನ ಬೆಳಕಿನ ಪುಂಜವನ್ನು ನೋಡುತ್ತ ನನ್ನ ವಿಜ್ಞಾನ ಮತ್ತು ಗಣಿತದ ಪಾಠಗಳನ್ನು ಸುರುಮಾಡಿದೆ.
ಕಲಿಸುವುದಕ್ಕೆ ಸೂಕ್ತವಾದ ಭೌತಿಕ ಮತ್ತು ಮಾನಸಿಕ ಆವರಣ ಮುಖ್ಯ ಎನ್ನುವ ಸತ್ಯವನ್ನು ನಾನು ಕಂಡುಕೊಂಡದ್ದು ಆಗಿನ ತರಗತಿಗಳಲ್ಲಿ. ಒಳ್ಳೆಯ ಗಾಳಿ-ಬೆಳಕು ಇರುವ ಪ್ರಶಾಂತವಾದ ಕೋಣೆಯಲ್ಲಿ, ಕಲಿಯುವ ಮಕ್ಕಳು ತೆರೆದ ಮನಸ್ಸಿನಿಂದ ಕುತೂಹಲದಿಂದ ಕೇಳಲು-ನೋಡಲು ಬೇಕಾದ ವಾತಾವರಣದಲ್ಲಿ ಸರಳವಾಗಿ ನಿಧಾನವಾಗಿ ತಿಳಿಸುತ್ತ ಹೋದಾಗ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಒಂದು ಭಾವನಾತ್ಮಕ ಸಂಬಂಧ ಏರ್ಪಡುತ್ತದೆ. ಬೋರ್ಡ್ ಹೈಸ್ಕೂಲಿನ ಎಂಟನೆಯ ತರಗತಿಯ ಕೋಣೆಗಳು ನನಗೆ ಸಂವಹನದ ಪ್ರಾಥಮಿಕ ಪಾಠಗಳನ್ನು ಕಲಿಸಿದವು. ತರಗತಿಯಲ್ಲಿ ಮಕ್ಕಳ ಮುಖ ನೋಡುತ್ತಲೇ ಗೊತ್ತಾಗುತ್ತಿತ್ತು- ನಾನು ಮಾಡಿದ ಪಾಠ ಅವರಿಗೆ ಅರ್ಥವಾಗಿದೆ ಅಥವಾ ಅರ್ಥವಾಗಿಲ್ಲ ಎಂದು. ತರಗತಿಯಲ್ಲಿ ಬ್ಲ್ಯಾಕ್‌ಬೋರ್ಡ್ ಮತ್ತು ಚಾಕ್‌ಗಳ ಬಳಕೆಯ ಹಿಂದಿನ ತತ್ವವನ್ನು ಪ್ರಾಯೋಗಿಕವಾಗಿ ಅಲ್ಲಿ ಕಲಿತೆ.
ಬ್ಲ್ಯಾಕ್‌ಬೋರ್ಡ್‌ನಲ್ಲಿ ಬರೆಯುವುದು ಕಲಿಯುವ ವಿದ್ಯಾರ್ಥಿಗಳಿಗೆ ಎಷ್ಟು ಉಪಯುಕ್ತವೋ ಅಷ್ಟೇ ಮುಖ್ಯ ಕಲಿಸುವ ಅಧ್ಯಾಪಕರಿಗೆ ಕೂಡಾ ಎನ್ನುವ ಸತ್ಯದರ್ಶನವಾದದ್ದು ಆ ಸಂದರ್ಭದಲ್ಲಿ. ವಿದ್ಯಾರ್ಥಿಗಳಿಗೆ ಗ್ರಹಿಕೆಯ ದೃಷ್ಟಿಯಿಂದ ಕಣ್ಣು ಮತ್ತು ಕಿವಿಗಳು ಸೂಕ್ಷ್ಮವಾಗಿ ಸಂವೇದಿಸುವುದು ಆವಶ್ಯಕ. ಮಾತುಗಳನ್ನು ಕಿವಿಯಲ್ಲಿ ಎಷ್ಟೇ ಕೇಳಿದರೂ ಅದರ ಅರ್ಥಗಳನ್ನು ಕಣ್ಣುಗಳ ಮೂಲಕ ಗ್ರಹಿಸುವುದು ಪೂರಕವಾಗುತ್ತದೆ ಮತ್ತು ಸ್ಪಷ್ಟತೆಯನ್ನು ಕೊಡುತ್ತದೆ. ತಾಂತ್ರಿಕ ದೃಶ್ಯಸಾಧನಗಳು ಇಲ್ಲದ ಆ ಕಾಲದಲ್ಲಿ ಬ್ಲ್ಯಾಕ್‌ಬೋರ್ಡ್ ಎಂಬುದು ತರಗತಿ ಕೋಣೆಯ ಎಕ್ಸ್‌ರೇ ಯಂತ್ರವಾಗಿತ್ತು. ಅಧ್ಯಾಪಕನಾಗಿ ಬ್ಲ್ಯಾಕ್‌ಬೋರ್ಡ್ ನಲ್ಲಿ ಬರೆಯುವುದು ನನ್ನ ಪಾಲಿಗೆ ಕಲಿತದ್ದನ್ನು ಗಟ್ಟಿಮಾಡುವ ತರಬೇತಿ. ವಿಷಯಗಳು ಮೊದಲು ಅಧ್ಯಾಪಕರಿಗೆ ಸ್ಫಟಿಕದಂತೆ ಸ್ಪಷ್ಟವಾಗಬೇಕು; ಆಗ ಮಾತ್ರ ವಿದ್ಯಾರ್ಥಿಗಳಿಗೆ ಅದನ್ನು ತಲುಪಿಸಲು ಸಾಧ್ಯ ಆಗುತ್ತದೆ. ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಎಂಟನೆಯ ತರಗತಿಗೆ ಪಾಠಮಾಡಿದ್ದು ಮುಂದಿನ ನನ್ನ ಅಧ್ಯಾಪನ ಜೀವನದಲ್ಲಿ ಬಹಳ ಉಪಯುಕ್ತವಾಯಿತು. ಆಗ ದಿನಕ್ಕೆ 45 ನಿಮಿಷಗಳ ಅವಧಿಯ 4-5 ಪಾಠದ ತರಗತಿಗಳು ಇದ್ದುವು. ಒಂದು ಸೆಕ್ಷನ್‌ನ ಪಾಠ ಮುಗಿಸಿ ಇನ್ನೊಂದು ಸೆಕ್ಷನ್‌ಗೆ ಹೋಗುವ ನಡುವೆ ಬಿಡುವು ಇರುತ್ತಿರಲಿಲ್ಲ. ಎಲ್ಲ ತರಗತಿಗಳಿಗೆ ಸರಿಯಾದ ಸಮಯಕ್ಕೆ ಅಧ್ಯಾಪಕರು ಹೋಗುವ ಶಿಸ್ತು ಬೋರ್ಡ್ ಹೈಸ್ಕೂಲಿನಲ್ಲಿ ಇತ್ತು. ಕೆಲಸದಲ್ಲಿ ಸಮಯಪಾಲನೆಯ ಶಿಸ್ತನ್ನು ಆ ಅವಧಿಯಲ್ಲಿ ಸರಿಯಾಗಿ ರೂಢಿಸಿಕೊಂಡೆ.
ಹೈಸ್ಕೂಲಿನ ಆ ಅಧ್ಯಾಪನದಿಂದ ನಾನು ಪಡೆದ ಇನ್ನೊಂದು ಮಹತ್ವದ ಪ್ರಯೋಜನವೆಂದರೆ ಮಾತನ್ನು ಸತತವಾಗಿ ಬಳಸುವಾಗ ಧ್ವನಿಯನ್ನು ನಿರ್ವಹಿಸುವುದು. ಮುಂದೆ ದೀರ್ಘಕಾಲದ ಅಧ್ಯಾಪನದಲ್ಲಿ ಮತ್ತು ಸುಮಾರು ಐವತ್ತು ವರ್ಷಗಳ ಕಾಲ ಭಾಷಣ/ಉಪನ್ಯಾಸಗಳಲ್ಲಿ ಉಸಿರನ್ನು ನಿಯಂತ್ರಿಸಿಕೊಂಡು, ಧ್ವನಿಯನ್ನು ಕಳೆದುಕೊಳ್ಳದೆ ಮಾತಾಡಲು ಸಾಧ್ಯವಾದುದರ ಹಿಂದೆ ಬೋರ್ಡ್ ಹೈಸ್ಕೂಲಿನ ಅಧ್ಯಾಪನದ ಪಾತ್ರ ಕೂಡ ಇದೆ.
ಅಲ್ಲಿನ ಹೊಸ ಬ್ಲಾಕ್‌ನ ಕೆಳಗಿನ ಭಾಗದಲ್ಲಿ ಪ್ರಯೋಗಾಲಯ ಇತ್ತು. ನಾವು ವಿಜ್ಞಾನದ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಅಲ್ಲಿ ಪ್ರಯೋಗಗಳನ್ನು ತೋರಿಸುತ್ತಿದ್ದೆವು. ಆಮ್ಲಜನಕ-ಜಲಜನಕ-ಸಾರಜನಕಗಳನ್ನು ತಯಾರಿಸುವ ವಿಧಾನಗಳನ್ನು ಕಲಿಸಿಕೊಡು ತ್ತಿದ್ದೆವು. ವಿದ್ಯಾರ್ಥಿಗಳಿಗೆ ಪ್ರಯೋಗಗಳನ್ನು ಮಾಡಿತೋರಿಸುವ ಮೂಲಕ ನಾವೇ ಪ್ರಾಯೋಗಿಕ ಅನುಭವಗಳನ್ನು ಪಡೆಯುತ್ತಿದ್ದೆವು. ಅದು ಸ್ವಾವಲಂಬನೆಯ ಬದುಕಿಗೆ ಗಟ್ಟಿಯಾದ ಬುನಾದಿ.
ಆ ಹೊಸ ಬ್ಲಾಕ್‌ನ ಮೇಲ್ಭಾಗದಲ್ಲಿ ಎಂಟನೆಯ ಬಿ ಸೆಕ್ಷನ್ ಇತ್ತು. ಅದು ಸಂಪೂರ್ಣವಾಗಿ ಹುಡುಗಿಯರ ಕ್ಲಾಸ್. ಅವರಿಗೆ ನಾನು ವಿಜ್ಞಾನ ಪಾಠಮಾಡು ತ್ತಿದ್ದದ್ದು. ಒಂದು ದಿನ ಅವರ ತರಗತಿಯಲ್ಲಿಯೇ ಆಮ್ಲಜನಕ ತಯಾರಿಸುವ ಪ್ರಯೋಗಮಾಡಿ ತೋರಿಸುತ್ತಿದ್ದೆ. ಎತ್ತರವಾದ ಪ್ಲ್ರಾಟ್‌ಫಾರ್ಮಿನ ಮೇಲೆ ಅಧ್ಯಾಪಕರ ಕುರ್ಚಿ ಮತ್ತು ಮೇಜು. ನಾನು ಪ್ಲ್ರಾಟ್‌ಫಾರ್ಮಿನ ಮೇಲೆ ನಿಂತುಕೊಂಡು ಮೇಜಿನ ಮೇಲೆ ಉಪಕರಣಗಳನ್ನು ಇಟ್ಟುಕೊಂಡು, ಆಮ್ಲಜನಕವನ್ನು ತಯಾರಿಸುವ ವಿಧಾನವನ್ನು ವಿವರಿಸುವಾಗ ನನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ, ಸಾಧನಗಳನ್ನು ತೋರಿಸುತ್ತಿದ್ದೆ. ಎತ್ತರವಾದ ಪ್ಲ್ರಾಟ್‌ಫಾರ್ಮ್ನ ಮೇಲೆ ನಿಂತ ನಾನು ಎತ್ತರದ ದೇಹದವನು. ನನ್ನ ತಲೆಗಿಂತ ಎತ್ತರದಲ್ಲಿ ಪ್ರಯೋಗದ ಸಾಧನಗಳನ್ನು ಹಿಡಿದುಕೊಂಡು ವಿವರಿಸುತ್ತಿದ್ದೆ. ಅಷ್ಟರಲ್ಲಿ ಹುಡುಗಿಯರ ಸಾಮೂಹಿಕ ಧ್ವನಿ ಕೇಳಿಸಿತು: “”ಸರ್, ನಮಗೆ ಏನೂ ಕಾಣಿಸುವುದಿಲ್ಲ” ನನಗೆ ಆಶ್ಚರ್ಯವಾಯಿತು. ಎಲ್ಲರ ಎದುರಿಗೆ ಅಷ್ಟು ಎತ್ತರದಲ್ಲಿ ಹಿಡಿದುಕೊಂಡು ತೋರಿಸುತ್ತಿದ್ದೇನೆ; ಈ ಹುಡುಗಿಯರು ಹೇಳುತ್ತಾರೆ “ಕಾಣಿಸುವುದಿಲ್ಲ’ ಎಂದು. ನನಗೆ ಗೊತ್ತಾಗಲಿಲ್ಲ.
ಹುಡುಗಿಯರು ಮತ್ತೆ ಹೇಳಿದರು: “”ಸರ್, ನೀವು ಎತ್ತರದಲ್ಲಿ ಇದ್ದೀರಿ. ನಾವು ಕೆಳಗೆ ತಗ್ಗಿನಲ್ಲಿ ಇದ್ದೇವೆ. ನಮಗೆ ಹೇಗೆ ಕಾಣುವುದು?” ನನ್ನ ಮಿದುಳಿಗೆ ಆಮ್ಲಜನಕ ತಟ್ಟಿತು. ಆ ಹುಡುಗಿಯರು ಆರ್ಕಿಮಿಡಿಸ್‌ನಂತೆ ಕಂಡರು. ನಾನು ಪ್ಲ್ರಾಟ್‌ಫಾರ್ಮ್ ನಿಂದ ಕೆಳಗೆ ಇಳಿದು ಮಕ್ಕಳನ್ನು ಹತ್ತಿರ ಕರೆದು ಪ್ರಯೋಗಮಾಡಿ ತೋರಿಸಿದೆ. ಅಧ್ಯಾಪಕರು ವಿದ್ಯಾರ್ಥಿಗಳ ಮಟ್ಟಕ್ಕೆ ಇಳಿದು ಬೋಧಿಸಬೇಕು, ಸಂವಹನ ಮಾಡಬೇಕು ಎನ್ನುವ ಬದುಕಿನ ದೊಡ್ಡ ಪಾಠವನ್ನು ನನಗೆ ಕಲಿಸಿದವರು ನನ್ನ ಆ ವಿದ್ಯಾರ್ಥಿನಿಯರು.
ನಾವು ನಾಲ್ಕು ಮಂದಿ ಯಂಗ್‌ಟರ್ಕ್ ಅಧ್ಯಾಪಕ ಸ್ನೇಹಿತರು ಮಧ್ಯಾಹ್ನ ಊಟದ ಬಿಡುವಿನಲ್ಲಿ ಹೋಗುತ್ತಿದ್ದದ್ದು ಹತ್ತಿರದ ಬೊಳುವಾರಿಗೆ. ಬೊಳುವಾರಿನಲ್ಲಿ ಕೊಂಬೆಟ್ಟು ರಸ್ತೆ ಸೇರುವ, ಪುತ್ತೂರು-ಉಪ್ಪಿನಂಗಡಿ ರಸ್ತೆಯ ಆಚೆ ಬದಿಯಲ್ಲಿ ಒಂದು ಹೊಟೇಲ್ ಇತ್ತು. ಮುಳಿಹುಲ್ಲಿನ ಮಾಡು, ಮರದ ಹಲಗೆ ರೀಪುಗಳ ಆವರಣದ, ಆ ಹೊಟೇಲ್ ನಮ್ಮ ಕಾಲದಲ್ಲಿ ಜನಪ್ರಿಯ ಆಗಿತ್ತು. ಅದಕ್ಕೆ ಹೆಸರು, ಬೋರ್ಡ್ ಏನೂ ಇರಲಿಲ್ಲ. ಅದನ್ನು ನಡೆಸುತ್ತಿದ್ದವರ ಹೆಸರಿನಲ್ಲಿ “ಬಾಬುರಾಯರ ಹೊಟೇಲ್’ ಎಂದು ಕರೆಯುತ್ತಿದ್ದರು. ಕೆಲವರು ತಮಾಷೆಗೆ “ತಟ್ಟಿ ಹೊಟೇಲ್’, “ವುಡ್‌ಸೈಡ್’ ಎಂದು ಕರೆಯುತ್ತಿದ್ದರು. ನಾವು ಮಧ್ಯಾಹ್ನ ಅಲ್ಲಿಗೆ ದೋಸೆ ತಿನ್ನಲು ಹೋಗುತ್ತಿದ್ದೆವು. ನಾನು ಬನ್ಸ್ ಮತ್ತು ಗೋಳಿಬಜೆ ಎನ್ನುವ ತಿಂಡಿಗಳ ರುಚಿಸುಖವನ್ನು ಮೊದಲು ಅನುಭವಿಸಿದ್ದು ಆ ಹೊಟೇಲ್‌ನಲ್ಲಿ.
ನಾನು ಬೋರ್ಡ್‌ಹೈಸ್ಕೂಲಿನಲ್ಲಿ ಒಂದು ವರ್ಷ ಮಾತ್ರ ಅಧ್ಯಾಪಕನಾಗಿದ್ದೆ. ನನ್ನ ಉಳಿದ ಮೂವರು ಸ್ನೇಹಿತರು ಮತ್ತೆ ಒಂದೆರಡು ವರ್ಷ ಅಲ್ಲಿ ಅಧ್ಯಾಪಕರಾಗಿದ್ದರು. ಹಸನ್ ಎಂ.ಎಸ್ಸಿ. ಮಾಡಿ ಕೆಲವು ಕಾಲ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಇದ್ದು ಆಮೇಲೆ ಸಿಂಡಿಕೇಟ್ ಬ್ಯಾಂಕಿಗೆ ಸೇರಿದರು. ಪ್ರಭಾಕರ ಶೆಟ್ಟಿ ವಿಜಯ ಬ್ಯಾಂಕಿಗೆ
ಹೋದರು. ಸತೀಶ್ ಕೆನರಾ ಬ್ಯಾಂಕಿನ ವೃತ್ತಿ ಹಿಡಿದರು. ಸತೀಶ್‌ರು ತೀರಿಹೋದ ವಿಷಯ ಇತ್ತೀಚೆಗೆ ತಿಳಿಯಿತು.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಶಿಸ್ತಿಗೆ ಆ ಕಾಲದಲ್ಲಿ ಹೆಚ್ಚಿನ ಮಹತ್ವ ಇದ್ದುದರಿಂದ ತರಗತಿಗಳಲ್ಲಿ ತಂಟೆ ಮಾಡುವ ಮಕ್ಕಳಿಗೆ ಅಧ್ಯಾಪಕರು ಹೊಡೆಯುವ ಕ್ರಮ ಇತ್ತು. ನಾನು ಕೂಡ ಕೆಲವು ಸಂದರ್ಭಗಳಲ್ಲಿ ಮರದ ಫೂಟ್‌ರೂಲರ್‌ನಿಂದ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಹೊಡೆದ ಸನ್ನಿವೇಶಗಳು ನೆನಪಾಗುತ್ತವೆ. ಅದನ್ನು ನೆನಪಿಸಿಕೊಂಡಾಗ ಈಗ ಪಶ್ಚಾತ್ತಾಪ ಆಗುತ್ತದೆ. ಆದರೆ, ಆ ಮಕ್ಕಳು ಅದನ್ನು ಬಹಳ ಬೇಗ ಮರೆತುಬಿಟ್ಟಿದ್ದಾರೆ ಎನ್ನುವುದಕ್ಕೆ ಸಾಕ್ಷಿ ನನ್ನ ಕೊನೆಯ ಕ್ಲಾಸಿನಲ್ಲಿ ಸ್ವಲ್ಪ ಭಾವುಕನಾಗಿ ನಾನು ವಿದಾಯದ ಮಾತುಗಳನ್ನು ಹೇಳಿದಾಗ ವಿದ್ಯಾರ್ಥಿಗಳ ಪ್ರತಿಕ್ರಿಯೆ. ಎಲ್ಲ ಕ್ಲಾಸುಗಳಲ್ಲಿ ಮಕ್ಕಳು ಕಣ್ಣೀರು ತುಂಬಿಕೊಂಡು ತಮ್ಮ ಪ್ರೀತಿಯ ಭಾವನೆಯನ್ನು ಮುಖದಲ್ಲಿ ಪ್ರಕಟಿಸಿದ ದೃಶ್ಯಗಳನ್ನು ನಾನು ಎಂದೂ ಮರೆಯಲಾರೆ.
ದೀರ್ಘ ಒಡನಾಟದ ಬಂಧುವನ್ನು ಅಗಲುವ ರೀತಿಯ ಮನ ಕರಗುವ ಆ ಸನ್ನಿವೇಶ ಐವತ್ತು ವರ್ಷಗಳ ಬಳಿಕವೂ ನನ್ನ ಭಾವನಾ ಪ್ರಪಂಚದ ಆದ್ರì ಕೋಣೆಯಲ್ಲಿ ಸ್ಥಾಯಿಯಾಗಿದೆ. ಅವರೆಲ್ಲ ಈಗ ಹಿರಿಯ ನಾಗರಿಕರು. ಸುಮಾರು 63/64 ವರ್ಷಗಳ ಸರಹದ್ದಿನವರು. ಕೃಷಿ, ಶಿಕ್ಷಣ, ಕಲೆ, ವ್ಯಾಪಾರ, ಉದ್ದಿಮೆ, ಸ್ವತಂತ್ರ ವೃತ್ತಿ, ಉದ್ಯೋಗ, ರಾಜಕೀಯ- ಹೀಗೆ ನಾನಾ ರಂಗಗಳಲ್ಲಿ ಬಾಳುತ್ತಿರುವವರು. ನಾನು ಒಂದು ವರ್ಷ ಪಾಠ ಮಾಡಿದ ವಿಜ್ಞಾನ, ಗಣಿತ, ಇಂಗ್ಲಿಷ್ ಅವರ ಬದುಕಿನಲ್ಲಿ ನಗಣ್ಯ. ಆದರೆ, ಆಕಸ್ಮಿಕವಾಗಿ ಸಿಕ್ಕಿದಾಗ ಅವರು ತೋರಿಸುವ ಆದರ ಅನನ್ಯ. ಮೊನ್ನೆ ಶಿಕ್ಷಕರ ದಿನಾಚರಣೆಯಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈಶ್ವರ ಭಟ್ ನನಗೆ ಗುರುಸಂದೇಶ ಕಳುಹಿಸಿದ್ದರು; ಅವರು ಎಂಟನೆಯ ತರಗತಿಯಲ್ಲಿ ವಿಜ್ಞಾನ ವಿದ್ಯಾರ್ಥಿ. ನೇರ ಸಂಪರ್ಕ ಇಲ್ಲದ ಸುಮಾರು ಇನ್ನೂರರಷ್ಟು ಸಂಖ್ಯೆಯ ಆ ವಿದ್ಯಾರ್ಥಿಗಳ ಜೊತೆಗೆ ನನಗೆ ಮಾನಸಿಕ ಬಂಧುತ್ವ ಚಿರಸ್ಥಾಯಿಯಾಗಿದೆ.
ಬ್ಯಾಂಕ್‌ನಲ್ಲಿ ಉದ್ಯೋಗದ ಅವಕಾಶಗಳು ಬಂದಾಗಲೂ ಅದನ್ನು ತಿರಸ್ಕರಿಸಿ, “ಅಧ್ಯಾಪನ ವೃತ್ತಿಯೇ ನನ್ನ ಬದುಕು’ ಎಂದು ಗಟ್ಟಿ ಮನಸ್ಸು ಮಾಡಲು ನನಗೆ ಇಂಬು ದೊರೆತದ್ದು ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ನನ್ನ ಆ ಕಾಲದ ವಿದ್ಯಾರ್ಥಿಗಳ ಸಂಸರ್ಗದಲ್ಲಿ. ನನ್ನ ಬದುಕಿನ ದೋಣಿಯು ಕಲಿಸುವ ಕಡಲಿನಲ್ಲಿ ಸಾಗಲು ಹಾಯಿ ಕಟ್ಟಿದವರು ಆ ಪುಟ್ಟ ನಾವಿಕರು.
– ಬಿ. ಎ. ವಿವೇಕ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.