ಕತೆ: ಡೆಂಟಲ್ ಕ್ಲಿನಿಕ್
Team Udayavani, Jul 7, 2019, 5:00 AM IST
ಈ ಮನೆಯ ಅಳಿಯ ನಾನು, ನನ್ನ ಮಾತಿಗೆ ಕಿಂಚಿತ್ತು ಬೆಲೆಯೂ ಇಲ್ಲ. ಓದುವುದೇ ಬೇಡ ಎಂದಿದ್ದೆ ನಾನು. ನೀವು ಕೇಳಿಲ್ಲ. ಶಾಲೆಗೆ ಕಳುಹಿಸಿದ್ರಿ. ಪಾಪ ಅಂತ ಸುಮ್ಮನಿದ್ದೆ. ಈಗ ಎಲ್ಲಾ ಬಿಟ್ಟು ಕೆಲಸಕ್ಕೆ ಹೋಗಲು ಬಿಟ್ರೆ ನನ್ನ ಮರ್ಯಾದೆ ಏನಾದೀತು?”
ಡೆಂಟಲ್ ಕ್ಲಿನಿಕ್ಕಿನ ಈಸೀ ಚೇರಿನಲ್ಲಿ ಕೂತು ಒಮ್ಮೆ ಕ್ಲಿನಿಕಿನ ಮೇಲ್ಛಾವಣಿಯನ್ನೂ ಮತ್ತೂಮ್ಮೆ ಸೆಲ್ಫ್ನಲ್ಲಿ ಪೇರಿಸಿಟ್ಟ ದಂತ ಚಿಕಿತ್ಸೆಯ ವಿವಿಧ ಹತ್ಯಾರಗಳನ್ನೂ ದಿಟ್ಟಿಸುತ್ತ ಗೋಡೆಗೆ ಅಂಟಿಕೊಂಡಂತಿರುವ ಗಡಿಯಾರವನ್ನು ಆಗಾಗ ನೋಡಿಕೊಳ್ಳುತ್ತ ತನ್ನ ಸರದಿಗಾಗಿ ಕಾಯುತ್ತಿದ್ದ ಅವಳ ಕಿವಿಯೊಳಗೆ ಹಿರಿ ಭಾವನ ಚೀರಾಟ ಮತ್ತೂಮ್ಮೆ ಪ್ರತಿಧ್ವನಿಸಿತ್ತು. ಕ್ಲಿನಿಕ್ಕಿನ ಹೊರಗೆ ವರಾಂಡದಲ್ಲಿ ಕೂತ ಅಕ್ಕ ಇವಳನ್ನು ಒಳಗೆ ಕಳುಹಿಸುವ ಮುನ್ನ “ಇದೊಂದು ಬಾರಿ ಸಹಕರಿಸಿಬಿಡು’ ಎಂದು ಕೇಳಿಕೊಳ್ಳದೇ ಇದ್ದಿದ್ದರೆ ಇವಳು ಐದು ನಿಮಿಷಕ್ಕೆಲ್ಲ ಸೀಟಿನಿಂದ ಎದ್ದು ಬಂದಾಗಿಬಿಡುತ್ತಿತ್ತು.
ಪದೇ ಪದೇ ಸಮಯ ನೋಡಿಕೊಳ್ಳುತ್ತ ಚಡಪಡಿಸುತ್ತಿದ್ದ ಅವಳಿಗೆ ಮದುವೆ ಬ್ರೋಕರ್‌ನ ಮೇಲೆ ಸಕಾರಣ ಸಿಟ್ಟು. ಇವೆಲ್ಲ ಶುರುವಾದದ್ದು ಅವನಿಂದಲೇ ಎನ್ನುವುದು ಅವಳ ನಂಬಿಕೆ. ಮೊನ್ನೆ ಡಿಗ್ರಿ ಪರೀಕ್ಷೆಯ ರಿಸಲ್ಟ… ಬಂದ ಕೂಡಲೇ ಇಂಟರ್‌ನೆಟ್‌ನಿಂದ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಂಡು ಊರಿಗೆ ಮಂಜೂರಾಗಿದ್ದ ಹೊಸ ಹೈಸ್ಕೂಲಿನಲ್ಲಿ ಸಹಾಯಕಿ ಶಿಕ್ಷಕಿ ಸ್ಥಾನಕ್ಕೆ ಅರ್ಜಿ ಹಾಕಿ ಬಂದಿದ್ದಳು. ಬರುವಾಗ ದಾರಿಯಲ್ಲಿ ಸಿಗುವ ಹರಕೆ ಡಬ್ಬಿಗೆ ಹನ್ನೊಂದು ರೂಪಾಯಿ ಹಾಕಿ “ನನ್ನ ದೇವರೇ, ಈ ಕೆಲಸ ನನಗೆ ಸಿಗುವಂತೆ ಮಾಡು’ ಎಂದು ಪ್ರಾರ್ಥಿಸಿ ಪಕ್ಕದಲ್ಲೇ ಇರುವ ಸುಬ್ರಾಯ ಭಟ್ಟರ ಅಂಗಡಿಯಲ್ಲಿ ಎರಡು ಕೆ. ಜಿ. ಲಾಡು ಕಟ್ಟಿಸಿಕೊಂಡಿದ್ದಳು.
ಮನೆಗೆ ಬಂದವಳು ಅದರಿಂದ ನಾಲ್ಕು ಲಡ್ಡುಗಳನ್ನು ಅಮ್ಮನಿಗೂ, ಅಕ್ಕನ ಮಕ್ಕಳಿಗೂ ಹಂಚಿ ಉಳಿದಿರುವುದನ್ನು ಮತ್ತೆ ಕಟ್ಟಿ ಅಮ್ಮನ ಕೈಯಲ್ಲಿ ಕೊಟ್ಟು, “ನಾಳೆ ಮಕ್ಕಳಿಗೆ ಹಂಚಬೇಕು, ಜೋಪಾನವಾಗಿ ತೆಗೆದಿಡು’ ಎಂದು, ಕೈ ಬಾಯಿಗೆಲ್ಲ ಲಡ್ಡು ಮೆತ್ತಿ ಸಂಭ್ರಮ ಪಡುತ್ತಿದ್ದ ಪ್ಯಾಂಪರ್ಸ್ ಹಾಕಿ ಗೊತ್ತೇ ಇಲ್ಲದ ಮಗುವನ್ನು ಎತ್ತಿಕೊಂಡು, “ನಂಗೆ ಕೆಲಸ ಸಿಕ್ಕಿದ್ರೆ ನಿಂಗೆ ದಿನಾ ಚಾಕಲೇಟ್ ಕೊಡಿಸ್ತೇನೆ’ ಎಂದು ಲಲ್ಲೆಗೆರೆಯುತ್ತ ಬಚ್ಚಲು ಮನೆಗೆ ನಡೆದಳು.
ಬಚ್ಚಲು ಮನೆಯಿಂದ ಹೊರಬರುತ್ತಿದ್ದಂತೆ ಹೊರಗೆ ಚಾವಡಿಯಲ್ಲಿ ಭಾವನ ಅಪರೂಪದ ಧ್ವನಿಯೂ, ಅಡುಗೆ ಮನೆಯಲ್ಲಿ ಅಮ್ಮ ಮತ್ತು ಅಕ್ಕನ ಪಿಸಪಿಸ ಮಾತೂ, ಪಾತ್ರೆಗಳ ಭರಭರ ಸದ್ದೂ ಕೇಳುತಿತ್ತು. “ವರ್ಷಕ್ಕೊಮ್ಮೆ ಬಂದು ಮುಖ ತೋರಿಸಿ ಹೋಗುವ ಈ ಭಾವನಿಗೆ ಇಷ್ಟು ಸನ್ಮಾನವೇಕೋ?’ ಎಂದು ಮನಸ್ಸಲ್ಲೇ ಕಟಕಿಯಾಡಿದಳು. ಆದರೆ, ಜೋರು ಜೋರು ಕೇಳುತ್ತಿರುವ ಮತ್ತೂಂದು ಧ್ವನಿ ಯಾರದ್ದು? ಗೊತ್ತಾಗಲಿಲ್ಲ ಅವಳಿಗೆ.
ಅದನ್ನೇ ಕೇಳಲೆಂದು ಅಡುಗೆ ಮನೆಗೆ ನುಗ್ಗಿದರೆ, ಅಮ್ಮ, “”ಶ್Ï! ಮೆಲ್ಲ ಮಾತಾಡು. ಬ್ರೋಕರ್ ಬಂದಿದ್ದಾನೆ. ನಿನಗೊಂದು ಒಳ್ಳೆಯ ಪೊದು ನೋಡಿದ್ದಾನಂತೆ. ಹುಡುಗ ಸೌದಿಯಲ್ಲಿರುವುದು, ತಿಂಗಳಿಗೆ ಐವತ್ತು ಸಾವಿರ ರೂಪಾಯಿ ದುಡೀತಾನಂತೆ. ನಿಂದೊಂದು ಫೊಟೋ ಕೇಳ್ತಿದ್ದಾನೆ” ಅಂದಳು. ಮೊನ್ನೆಯಷ್ಟೇ ಸೌದಿ ಕ್ರೈಸಿಸ್ ಬಗ್ಗೆ ಪೇಪರ್‌ನಲ್ಲಿ ಓದಿದ್ದ ಅವಳಿಗೆ ಎಲ್ಲಾ ಸುಳ್ಳು ಅಂತ ಹೇಳಬೇಕೆನಿಸಿತು. ಅದಕ್ಕಿಂತ ಮುಖ್ಯವಾಗಿ ಕೆಲಸ ಸಿಗುವವರೆಗೂ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿಕೊಂಡವಳಿಗೆ ಅಚಾನಕ್ಕಾಗಿ ಮದುವೆ ಪ್ರಸ್ತಾಪವೊಂದು ಬಂದು ನಿಂತಾಗ ಏನು ಮಾಡಬೇಕೆಂದೇ ತೋಚಲಿಲ್ಲ.
ಕಲ್ಲಿನಂತೆ ನಿಂತಿದ್ದ ಅವಳನ್ನು ದಾಟಿ ಹೋದ ಅಮ್ಮ ದಲ್ಲಾಳಿಯ ಕೈಗೆ ಕಾಫಿ ಕಪ್ ಕೊಟ್ಟು, “ಫೋಟೋ ನಾಳೆ ಕಳುಹಿಸುತ್ತೇನೆ’ ಅಂದಳು. ಆ ಹುಡುಗಿಯನ್ನು ಹೊರಗೆ ಚಾವಡಿಗೆ ಕರೆಸಿಕೊಂಡ ದಲ್ಲಾಳಿ ಅವಳನ್ನು ನೋಡಿ ಒಮ್ಮೆ ದೇಶಾವರಿಯಾಗಿ ನಕ್ಕು ಬಂದ ಕೆಲಸ ಮುಗಿಯಿತೆಂಬಂತೆ ಮನೆಯಿಂದ ಹೊರಗಡಿಯಿಟ್ಟ. ಅಂತರಾಳದಲ್ಲಿ ಚಳ್ಳನೆ ಎದ್ದ ಮುಳ್ಳನ್ನು ಹೇಗೆ ಸುಮ್ಮನಾಗಿಸಬೇಕೆಂದು ಅರ್ಥವಾಗದ ಆಕೆ, “ಫೊಟೋ ತಾನೆ, ಕೊಟ್ಟರಾಯಿತು, ಮದುವೆ ಮಾತ್ರ ಕೆಲಸ ಸಿಕ್ಕ ಮೇಲೆಯೇ’ ಅಂದುಕೊಂಡಳು.
ಮರುದಿನ ಮದುವೆ, ದಲ್ಲಾಳಿ, ಭಾವ ಎಲ್ಲರನ್ನೂ ಮರೆತ ಆಕೆ ಹೈಸ್ಕೂಲಿನಲ್ಲಿ ಕೆಲಸ ಖಾತ್ರಿಪಡಿಸಿಕೊಂಡಳು. ಪಾಠದ ತಯಾರಿಗೆಂದು ನೋಟ್ ಪುಸ್ತಕ ಕೊಳ್ಳಲು ಹೋದವಳ ಮನದಲ್ಲಿ ನೂರು ಆಸೆಯ ಬಲೂನು. ಮೊದಲ ಸಂಬಳದಲ್ಲಿ, ಮುರಿದು ಹೋಗಿರುವ ಅಮ್ಮನ ಅಲೀಖತ್ತು ಸರಿಪಡಿಸಬೇಕು, ಅಕ್ಕನ ಪುಟ್ಟ ಮಗುವಿಗೊಂದು ಪ್ರಿನ್ಸೆಸ್ ಫ್ರಾಕ್, ಎಸ್‌ಎಸ್‌ಎಲ…ಸಿ ಓದುತ್ತಿರುವ ಪಕ್ಕದ ಮನೆ ಹುಡುಗಿಗೆ ಒಂದು ಚಂದದ ಕಂಪಾಸ್ ಬಾಕ್ಸ್, ಮತ್ತೂ ಹಣ ಮಿಕ್ಕಿದರೆ ತನಗಾಗಿ ಒಂದು ಮೊಬೈಲ್ ಕೊಳ್ಳಬೇಕು ಎಂದೆಲ್ಲ ಲೆಕ್ಕಾಚಾರ ಹಾಕಿಕೊಂಡೇ ಮನೆ ತಲುಪಿದಳು.
ಆದರೆ, ಮನೆ ಬಾಗಿಲಲ್ಲಿ ಭಾವ ರೌರವ ನರಕವನ್ನೇ ಸೃಷ್ಟಿಸಿದ್ದ. ದಿನ ಪೂರ್ತಿ ಆಟ ಆಡಿಕೊಳ್ಳುತ್ತಿದ್ದ ಮಕ್ಕಳು ಯಾವುದೋ ಭೀತಿಗೆ ಸಿಕ್ಕಂತೆ ಮೂಲೆ ಸೇರಿದ್ದರು, ಅಕ್ಕ ಅಡುಗೆ ಮನೆಯಲ್ಲಿ ಒಬ್ಬಂಟಿಯಾಗಿ ಕೂತು ಕಣ್ಣೀರಿಡುತ್ತಿದ್ದಳು. “ಇವೆಲ್ಲ ಏನು’ ಎಂಬಂತೆ ಆಕೆ ಅಮ್ಮನ ಮುಖ ನೋಡಿದರೆ ಆಕೆ ಅಸಹಾಯಕತೆಯಿಂದ ನಿಂತಿದ್ದಳು.
“”ಏನಾಯ್ತಮ್ಮಾ?” ಆಕೆ ಕೇಳಿದಳು. “”ಇನ್ನೇನಾಗಬೇಕು? ಈ ಮನೆಯ ಅಳಿಯ ನಾನು, ಮನೆಗಿರುವ ಒಬ್ಬನೇ ಗಂಡು ದಿಕ್ಕು ಎನ್ನುವ ಕನಿಷ್ಠ ಗೌರವವಿಲ್ಲ, ನನ್ನ ಮಾತಿಗೆ ಕಿಂಚಿತ್ತು ಬೆಲೆಯೂ ಇಲ್ಲ. ಓದುವುದೇ ಬೇಡ ಎಂದೆ, ನನ್ನ ಮಾತೂ ಯಾರೂ ಕೇಳಿಲ್ಲ. ಹೋಗ್ಲಿ ಪಾಪ ಅಂತ ಸುಮ್ಮನಾದರೆ ಈಗ ಎಲ್ಲಾ ಬಿಟ್ಟು ಕೆಲಸಕ್ಕೆ ಹೋಗುತ್ತೇನೆಂದರೆ ನನ್ನ ಮರ್ಯಾದೆ ಏನಾಗಬೇಡ? ಈಗ್ಲೆ ಗಂಡುಬೀರಿ ಅಂತ ಊರಿಡೀ ಮಾತಿದೆ. ಇನ್ನು ನಿನ್ನ ಮದುವೆ ಆದಂತೆಯೇ. ಎಲ್ಲಾ ಬಿಟ್ಟು ಮನೆಯಲ್ಲಿದ್ದರೆ ಸರಿ, ಇಲ್ಲಾ ನಾನೇ ಮನೆ ಬಿಟ್ಟು ಹೋಗುತ್ತೇನೆ” ಭಾವ ಆರ್ಭಟಿಸಿದ.
“”ದುಡಿಯದೆ ಇನ್ನೇನು ನಿಮ್ಮಂತೆ ಭಂಡ ಬಾಳು ಬಾಳಬೇಕೆ? ಅಪ್ಪನ ಮುಖ ಪರಿಚಯವೇ ಇಲ್ಲದ ಮಕ್ಕಳು, ಹೆಂಡತಿಯನ್ನು ಒಂದೇ ಒಂದು ದಿನಕ್ಕೂ ನೆಟ್ಟಗೆ ನೋಡಿಕೊಳ್ಳಲಾಗದ ನಿಮ್ಮದೂ ಒಂದು ಬದುಕೇ? ಇಷ್ಟು ವರ್ಷಗಳ ಕಾಲ ನಮ್ಮ ಹೊಟ್ಟೆ ತುಂಬಿಸಿದ್ದು ಅಮ್ಮನ ಬೀಡಿ ಸೊಪ್ಪು, ನಿಮ್ಮ ಒಣ ಅಹಂಕಾರವಲ್ಲ. ಹೋಗುವುದಾದರೆ ಹೋಗಿಬಿಡಿ. ನೀವಿದ್ದರೂ ಹೋದರೂ ನಮ್ಮ ಬದುಕಲ್ಲೇನೂ ದೊಡ್ಡ ವ್ಯತ್ಯಾಸವಾಗುವುದಿಲ್ಲ” ಆಕೆ ಮುಂದುವರಿಸುತ್ತಿದ್ದಳ್ಳೋ ಏನೋ, ಆದರೆ, ತಾನು ಮಾಡದ ತಪ್ಪಿಗೆ ಗಂಡ ಬಿಟ್ಟವಳು ಅನ್ನಿಸಿಕೊಂಡು ಊರವರಿಂದಲೂ, ಕುಟುಂಬದಿಂದಲೂ ತಿರಸ್ಕೃತಳಾದದ್ದು, ಅದರಿಂದಾಗಿ ತನ್ನ ಮಕ್ಕಳು ಪಡಬಾರದ ಪಾಡು ಪಟ್ಟದ್ದು ಅಮ್ಮನ ಕಣ್ಣ ಮುಂದೆ ತಣ್ಣಗೆ ಕದಲಿದಂತಾಯಿತು. ಅಳಿಯ ಮನೆಗೆ ಬರುತ್ತಾನೋ ಇಲ್ಲವೋ, ಆದರೆ, ಮಗಳಿಗೆ ಗಂಡ ಅಂತ ಒಬ್ಬನಿರಲಿ, ಮೊಮ್ಮಕ್ಕಳಿಗೆ ಗುರುತಿಗಾಗಿಯಾದರೂ ಅಪ್ಪ ಅಂತ ಒಬ್ಬನಿರಲಿ, ತನ್ನ ಮಕ್ಕಳು ಅನುಭವಿಸಿದ್ದನ್ನು ದೊಡ್ಡ ಮಗಳ ಮಕ್ಕಳು ಅನುಭವಿಸುವುದು ಬೇಡ ಅಂದುಕೊಂದು ಆಕೆಯ ಬಾಯಿ ಮುಚ್ಚಿಸಿ ಒಳಗೆ ಕಳುಹಿಸಿದ ಅವಳು ಅಳಿಯನ ಮುಂದೆ ನಿಂತು, “”ಅವಳದಿನ್ನೂ ಹುಡುಗು ಬುದ್ಧಿ. ಅವಳ ಮಾತಿಗೆಲ್ಲ ತಲೆಕೆಡಿಸಿಕೊಳ್ಳಬೇಡಿ. ಅವಳಿಗೆ ನಾನು ಬುದ್ಧಿ ಹೇಳುತ್ತೇನೆ” ಎಂದರು. ಅವನು ಧಾಷ್ಟ್ರದಿಂದ, “”ಮದುವೆ ಆಗಿದ್ದಿದ್ದರೆ ಇಷ್ಟು ಹೊತ್ತಿಗಾಗುವಾಗ ನಾಲ್ಕು ಮಕ್ಕಳ ತಾಯಿಯಾಗುತ್ತಿದ್ದಳು. ಎಲ್ಲಾ ನಿಮ್ಮ ಸದರ. ಗಾದೆಯೇ ಇದೆಯಲ್ವಾ ತಾಯಿಯಂತೆ ಮಗಳು ಅಂತ” ಎಂದು ವ್ಯಂಗ್ಯವಾಡಿದ.
ಅಮ್ಮನ ಜೀವ ಒಳಗೊಳಗೇ ವಿಲವಿಲ ಒದ್ದಾಡುತ್ತಿತ್ತು. ಆಕೆಯ ಜೀವನ ತನ್ನಂತೆ, ಅವಳ ಅಕ್ಕನಂತೆ ಆಗಬಾರದೆಂದು ಹೊಟ್ಟೆ ಬಟ್ಟೆ ಕಟ್ಟಿ ಓದಿಸಿದರೆ ಈಗ ಈ ಕಷ್ಟ. ಅವಳ ಬೆನ್ನಿಗೆ ನಿಲ್ಲಬೇಕು, ಹಾಗೆ ನಿಲ್ಲುವುದೇ ನ್ಯಾಯ ಅಂತ ಅನ್ನಿಸಿದರೂ, ಇಲ್ಲಿ ಅವಳೇ ಸರಿ ಅನ್ನುವುದು ಗೊತ್ತಿದ್ದರೂ ಅವಳಿಗೆ ಬೆಂಬಲವಾಗಿ ನಿಲ್ಲಲಾಗುವುದಿಲ್ಲ. ಹಾಗೆ ನಿಲ್ಲುತ್ತೇನೆಂದು ಹೋದರೆ ಈಗಾಗಲೇ ಬೆಂದು ಬಸವಳಿದಿರುವ ಅಕ್ಕ ಮತ್ತವಳ ಮಕ್ಕಳ ಬದುಕು ಮಕಾಡೆ ಮಲಗಿಬಿಡುತ್ತದೆ. ಇತ್ತ ಕೈಗೆ ಸಿಕ್ಕ ಕೆಲಸವನ್ನು ಬಿಡಲಾರೆ ಎಂಬ ಅವಳ ಹಠವನ್ನು ಕರಗಿಸಿದ್ದು ಅಮ್ಮನ ಈ ಅಸಹಾಯಕತೆಯೇ. ಒಂದು ನಿರ್ಧಾರಕ್ಕೆ ಬರಲಾಗದೆ ಅಮ್ಮ ಒದ್ದಾಡುತ್ತಾಳೆ ಅನ್ನುವುದು ಗೊತ್ತಿರುವುದಕ್ಕೇ ಅವಳು ಸದ್ಯಕ್ಕೆ ಕೆಲಸದ ಆಸೆ ಕೈ ಬಿಟ್ಟು ಮದುವೆ ಆದ್ಮೇಲೆ ನೋಡೋಣ ಎಂಬ ನಿರ್ಧಾರಕ್ಕೆ ಬಂದು ನಿರಾಳವಾದದ್ದು, ಆದರೆ, ಮನೆಯ ವಾತಾವರಣವೇನೂ ತಿಳಿಯಾಗಿರಲಿಲ್ಲ.
ಒಳಗೊಳಗೇ ಕೊರಗುತ್ತಿರುವ ಆಕೆ, ಏನೂ ಆಗಿಲ್ಲವೆಂಬಂತೆ ನಟಿಸುವ ಅಮ್ಮ, ಈಗೀಗ ದಿನಾ ಬಂದು ಹಾಜರಿ ಹಾಕುವಂತೆ ಹಕ್ಕು ಚಲಾಯಿಸುವ ಭಾವ, ಯಾವುದೋ ಕೀಳರಿಮೆಯನ್ನು ಮುಚ್ಚಿ ಹಾಕಲು ಆಗಾಗ ಅವನು ಹಾಕಿಕೊಳ್ಳುವ ಠೇಂಕಾರದ ಮುಖವಾಡ… ಮನೆ ಒಂದು ರೀತಿಯ ಬಿಗುವಿನ ವಾತಾವರಣದಲ್ಲಿರುವಾಗಲೇ ದಲ್ಲಾಳಿ ಮತ್ತೆ ಮನೆಗೆ ಬಂದಿದ್ದ.
“”ನಿಮ್ಮ ಹುಡುಗಿಯನ್ನು ಹುಡುಗ ಇಷ್ಟಪಟ್ಟಿದ್ದಾನೆ, ಪುಣ್ಯಕ್ಕೆ ವರದಕ್ಷಿಣೆ ವರೋಪಚಾರ ಏನೂ ಬೇಡವಂತೆ. ಆದರೆ, ತುಸು ಉಬ್ಬಿ ದಂತಿರುವ ಅವಳ ಹಲ್ಲಿಗೆ ಕ್ಲಿಪ್ ಹಾಕಿಸಿಬಿಡಿ. ಆರು ತಿಂಗಳಲ್ಲಿ ಅವನು ಊರಿಗೆ ಬರುತ್ತಾನೆ” ಎಂದು ಉಪಕಾರ ಮಾಡುತ್ತಿರುವ ಧ್ವನಿಯಲ್ಲಿ ಹೇಳಿ ಕಮಿಷನ್‌ಗಾಗಿ ಕೈ ಚಾಚಿದ. ವಿಚಿತ್ರ ಗಲಿಬಿಲಿಯೊಂದು ಅಮ್ಮನನ್ನು ಮುತ್ತಿಕೊಂಡಿತು. ಮರುಕ್ಷಣ ಮಗಳು ಮದುವೆಯಾದ ಮೇಲಾದ್ರೂ ಸುಖವಾಗಿರುತ್ತಾಳೇನೋ ಎಂಬ ದೂರದ ಆಸೆಯೊಂದು ಮೂಡಿ ಮರೆಯಾಯಿತು.
ಆದರೆ, ಅವಳಿಗೆ ಮತ್ತೆ ಧರ್ಮ ಸಂಕಟ. ತಮಗಾಗಿ ಇಡೀ ಜೀವನ ವನ್ನು ಮುಡಿಪಿಟ್ಟ ಅಮ್ಮನಿಗೂ ನಿರಾಶೆ ಮಾಡಲಾಗದೆ, ಬದುಕಿನಲ್ಲಿ ಒಮ್ಮೆಯೂ ಭೇಟಿಯಾಗದ ವ್ಯಕ್ತಿಗಾಗಿ ಇಷ್ಟೂ ವರ್ಷಗಳ ಕಾಲ ಜೊತೆಗಿದ್ದ ಚಹರೆಯನ್ನು ಬದಲಿಸಲೂ ಆಗದೆ ಒಂದು ಬೇಗುದಿಯಲ್ಲೇ ಅಕ್ಕನನ್ನೂ ಕರೆದುಕೊಂಡು ಕ್ಲಿನಿಕ್‌ಗೆ ಬಂದಿದ್ದಳು.
ಅಲ್ಲಿನ ವಿಪರೀತ ರಶು, ಎದ್ದು ಕಾಣುವ ನಿರ್ಲಕ್ಷ್ಯ ಅವಳ ತಾಳ್ಮೆ ಯನ್ನೂ, ಅಸಹಾಯಕತೆಯನ್ನೂ ಆಡಿಕೊಂಡು ನಗುತ್ತಿರುವಂತೆ ಅನ್ನಿಸುತ್ತಿತ್ತು. ಸಣ್ಣದೊಂದು ಪರಿಚಯವೂ ಇಲ್ಲದ ವ್ಯಕ್ತಿಯೊಬ್ಬ ಬದುಕನ್ನು ಪ್ರವೇಶಿಸುತ್ತಾನೆ ಎಂದರೆ ಇಷ್ಟೊಂದು ತಯಾರಿ ಮಾಡಿಕೊಳ್ಳಲೇಬೇಕಾ? ತನ್ನ ಸ್ವಾಭಿಮಾನವನ್ನೂ, ಕನಸುಗಳನ್ನೂ ಕೊಂದುಕೊಂಡ ಬದುಕು ಎಷ್ಟೇ ಸುಂದರವಾಗಿದ್ದರೂ ಅದು ನೆಮ್ಮದಿಯನ್ನೂ, ತೃಪ್ತಿಯನ್ನೂ ಕೊಡಬಲ್ಲುದೆ? ಅಂಥ ಬದುಕು ನನ್ನಿಡೀ ಅಸ್ತಿತ್ವವನ್ನೇ ನುಂಗಿ ಹಾಕಲಾರದೆ? ಪ್ರಶ್ನೆಗಳು ಬೆಳೆಯುತ್ತಿದ್ದಂತೆ ಬಿಳಿ ಕೋಟ್ ಧರಿಸಿದ ಡಾಕ್ಟರ್ ಇವಳ ಹಲ್ಲು ಪರೀಕ್ಷಿಸಿ ನೋಡಿ, ಕ್ಲಿಪ್ ಹಾಕಬೇಕೆಂದರೆ ನಾಲ್ಕು ಹಲ್ಲು ಕೀಳಬೇಕಾಗುತ್ತದೆ. “ಈಗಲೇ ಕೀಳಿಸುತ್ತಿಯಾ ಇಲ್ಲ ಇನ್ನೊಮ್ಮೆ ಬರುತ್ತೀಯಾ?’ ಕೇಳಿದರು. “ಏನು! ಜೀವ ಇರುವ, ಚೆನ್ನಾಗಿರುವ ಹಲ್ಲುಗಳನ್ನು ಕೀಳುವುದೇ? ಅದೂ ವಿನಾಕಾರಣ? ಹಾಗೆ ಕೀಳುವುದೆಂದರೆ ನನ್ನ ಭಾವನೆಗಳನ್ನೂ, ಸ್ವಾಭಿಮಾನವನ್ನೂ ಮತ್ತೆಂದೂ ಬೆಳೆಯದಂತೆ ಕಿತ್ತು ಬಿಸಾಕಿದಂತೆ ಅಲ್ಲವೇ? ಬೇರನ್ನೇ ಕಳೆದುಕೊಂಡ ಮೇಲೆ ಯಾಕಾದರೂ ಬದುಕಬೇಕು?’ ಅವಳಿಗೇ ಗೊತ್ತಾಗದಷ್ಟು ವೇಗವಾಗಿ ಒಂದು ಸ್ಪಷ್ಟ ಗುರಿ ರೂಪುಗೊಳ್ಳುತ್ತಿದ್ದಂತೆ ಅವಳ ಜಗತ್ತಿನಲ್ಲಿ ಕಳೆಯಂತೆ ಬೇರು ಬಿಟ್ಟಿದ್ದ ಭಾವ, ದಲ್ಲಾಳಿ ಮತ್ತು ನೋಡೇ ಇಲ್ಲದ ಸೌದಿಯ ಹುಡುಗ ಎಲ್ಲಾ ಮುಸುಕು ಮುಸುಕಾಗುತ್ತ ಹೋದರು. ನಿರ್ಧಾರ ಸಾಂದ್ರವಾಗುತ್ತಿದ್ದಂತೆ ಅವಳು, ಅಕ್ಕನನ್ನೂ ಕರೆದುಕೊಂಡು ಕ್ಲಿನಿಕ್‌ನಿಂದ ಹೊರಗಡಿಯಿಟ್ಟಳು.
ಎಲ್ಲ ಅರ್ಥವಾದಂತಿದ್ದ ಅಕ್ಕ ಪುಟ್ಟ ಭರವಸೆ ಎಂಬಂತೆ ಅವಳ ಹೆಗಲು ಬಳಸಿದಳು. ಕ್ಲಿನಿಕ್ಕೂ, ಅದರಾಚೆಗಿನ ಜಗತ್ತೂ ನೋಡುತ್ತಿರುವಂತೆಯೇ ಅಕ್ಕ-ತಂಗಿಯರಿಬ್ಬರೂ ಅವಳು ಕೆಲಸ ಗಿಟ್ಟಿಸಿಕೊಂಡಿದ್ದ ಹೈಸ್ಕೂಲಿನ ಕಾಲು ದಾರಿ ಹಿಡಿದರು.
ಫಾತಿಮಾ ರಲಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.