ಆ ಕೆಲಸ ಈ ಕೆಲಸ ಎಂದು ಹೀಗಳೆಯದಿರಿ !
Team Udayavani, Oct 5, 2018, 6:00 AM IST
ಕೃತಿ, ಕನಸು ಕಂಗಳ ಹುಡುಗಿ. ಮೆಲ್ಲನೆ ಶ್ರುತಿ ಮಿಡಿದಂತೆ ಹಾಡುವ ಆಕೆ ದುಡಿಯುತ್ತಿರುವುದು ಯೋಗ ಥೆರಪಿಸ್ಟ್ ಆಗಿ. ಎಂ.ಟೆಕ್ ಕೂಡ ಮುಗಿಸಿದ ಆಕೆಗೆ ಕಂಪೆನಿಯೊಂದರಲ್ಲಿ ಎರಡು ವರ್ಷ ದುಡಿದದ್ದೇ ಸಾಕೋ ಸಾಕಾಗಿ ಹೋಯಿತು. ತನ್ನ ಪ್ರೀತಿಯ ಸಂಗೀತ, ಬರಹ ಇವನ್ನೆಲ್ಲ ಬಿಟ್ಟು ಏಕತಾನದ ಬದುಕಿಗೆ ಆಕೆಯ ಮನ ಕೇಳಲಿಲ್ಲ. ತನ್ನ ಹವ್ಯಾಸಗಳೊಂದಿಗೆ ನಿಗದಿತ ಆದಾಯ ಕೊಡುವ ಪಾರ್ಟ್‌ಟೈಮ್ ಯೋಗ ಥೆರಪಿಸ್ಟ್ ವೃತ್ತಿ ಆಕೆಯದೇ ಆಯ್ಕೆ.
ಗೀತಾಂಜಲಿ ಸೈಕಾಲಜಿಯಲ್ಲಿ ಎಂ.ಎಸ್ಸಿ ಮಾಡಿದ್ದರೂ ಆಕೆಯ ಕೆಲಸ ಕಾಸ್ಮೆಟಾಲಜಿಸ್ಟ್ (ಅಂದರೆ ಹೈ-ಫ‚ೈ ಕ್ಲೈಂಟ್‌ಗಳ ಅಂದ ಹೆಚ್ಚಿಸುವುದು). ಇನ್ನು ಸಹನಾ ಆಂಗ್ಲ ಭಾಷೆಯಲ್ಲಿ ಎಂ.ಎ. ಮಾಡಿ ಲೆಕ್ಚರರ್ ಆಗುತ್ತಾಳೇನೋ ಅಂದುಕೊಂಡರೆ ಆಕೆ ಯಾವುದೋ ಕಂಪೆನಿಯಲ್ಲಿ ಬ್ಲಾಗ್ ಬರೆಯುತ್ತಿರುತ್ತಾಳಂತೆ. ಕ್ಯಾಲ್ಕುಲಸ್, ಲಾಗರಿತಮ್ ಎಂದೆಲ್ಲ ಒದ್ದಾಡುತ್ತಿದ್ದ ವಸುಧಾ ಈಗ ಆರಾಮಕ್ಕೆ ಸೀರಿಯಲ್‌ಗೆ ಸ್ಕ್ರಿಪ್ಟ್ ಬರೆದುಕೊಂಡು ಇದ್ದಾಳೆ.
ಅಷ್ಟು ವರಮಾನ ಬರುವ ಮಲ್ಟಿನ್ಯಾಶನಲ್ ಕಂಪೆನಿಯ ಕೆಲಸವನ್ನು ಸ್ಮಿತಾ ಬಿಟ್ಟಿರುವುದು ಯಾಕೆ ಎಂದು ಎಲ್ಲರೂ ಕೇಳುತ್ತಾರೆ. ಅವಳು ತನ್ನ ಇಷ್ಟದ ಹವ್ಯಾಸಗಳಾದ ಟ್ರೆಕ್ಕಿಂಗ್, ಕವಿತೆ ರಚನೆ ಹೀಗೆಲ್ಲ ಹಚ್ಚಿಕೊಂಡು ಆದಾಯಕ್ಕೋಸ್ಕರ ಸಣ್ಣದಾಗಿ ಶೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಇನ್ನು ಭವ್ಯಾ, ಎಂಎಚ್‌ಆರ್‌ಡಿ ಓದಿದ್ದರೂ ಅವಳಿರುವುದು ಒಂದು ಹಳ್ಳಿಯಲ್ಲಿ. ಅಲ್ಲಿ ಉದ್ಯೋಗಾವಕಾಶಗಳು ಕಡಿಮೆ. ಅವಳೊಂದು ಬ್ಯೂಟಿಪಾರ್ಲರ್ ತೆಗೆದು ಸ್ಕೂಟಿಯಲ್ಲಿ ಓಡಾಡುತ್ತ ಆರಾಮಕ್ಕಿದ್ದಾಳೆ. ಈ ಎಲ್ಲ ವಿಷಯಗಳೂ ಉದ್ಯೋಗದ ಬಗ್ಗೆ ಬದಲಾದ ಮನೋಭೂಮಿಕೆಯನ್ನು, ತಮ್ಮ ಹವ್ಯಾಸಗಳ ಬಗ್ಗೆ ಯುವಜನತೆಗಿರುವ ಸ್ಪಷ್ಟತೆಯನ್ನು ಹೇಳುತ್ತವೆ, ಅಲ್ಲವೆ?
ಎಲ್ಲೆಲ್ಲೂ ಕೆಲಸವಿದೆ !
ಅದೊಂದು ಕಾಲವಿತ್ತು. ಕಾಮರ್ಸ್ ಓದಿದವರು ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಬಿ.ಎ, ಬಿ.ಎಡ್ ಮಾಡಿದವರೆಲ್ಲ ಟೀಚರುಗಳು. ಆ ನಂತರ ಒಂದಷ್ಟು ಕಾಲ ಸಾಯನ್ಸ್ ಕಲಿತವರು ಕಂಪೆನಿಗಳಲ್ಲಿ, ಪಿಯುಸಿ ಇತ್ಯಾದಿ ಕಲಿತವರು ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ… ಹೀಗೆ ಬೆಂಗಳೂರು, ಮುಂಬೈ ಎಂದೆಲ್ಲ ಉದ್ಯೋಗಕ್ಕೆ ಹೊರಟರು. ಗಂಡುಮಕ್ಕಳಂತೆ ಸಿಟಿಗಳಿಗೆ ಹೋಗಲು ಕಷ್ಟವಾಗುತ್ತಿದ್ದ ಕಾರಣ, ಹೆಣ್ಣು ಮಕ್ಕಳು ಬೀಡಿ, ಟೈಲರಿಂಗ್ ಎಂದೆಲ್ಲ ಅಷ್ಟಿಷ್ಟು ಸಂಪಾದಿಸುತ್ತಿದ್ದರು.
ಈ ಬ್ಯಾಂಕು-ಕಾಲೇಜು ಎಂದೆಲ್ಲ ಕೆಲಸ ಹುಡುಕಿ ಹೋದವರ ಮಕ್ಕಳು ಈಗ ಟೀನೇಜರುಗಳು. ವೃತ್ತವೊಂದು ಫುಲ್‌ಸರ್ಕಲ್ ಬಂದ ಹಾಗೆ, ಪರಿಧಿಯೊಂದು ಇದ್ದಕ್ಕಿದ್ದಂತೆ ವಿಸ್ತಾರವಾದ ಹಾಗೆ, ಅನೇಕಾನೇಕ ಅವಕಾಶಗಳು ಈಗ ತೆರೆದುಕೊಳ್ಳುವುದು ಕಾಣಿಸುತ್ತಿದೆ. ಮೊದಲು ಇರಲಿಲ್ಲವೆಂದಲ್ಲ; ಫಿಲ್ಮ್ಗಳಲ್ಲಿ ಕೊರಿಯೋಗ್ರಾಫರ್, ಫೋಟೊಗ್ರಾಫರ್, ಟಿ. ವಿ. ಶೋಗಳಲ್ಲಿ ನಿರೂಪಣೆ… ಹೀಗೆ ಅವಕಾಶಗಳು ಇದ್ದವು; ಆದರೆ ಅವು ದೊಡ್ಡ ಸಿಟಿಗಳಲ್ಲಿ, ಅನೇಕ ವರ್ಷ ಅವಕಾಶಗಳಿಗೆ ಒದ್ದಾಡಿ ಸಿಗುತ್ತಿದ್ದವು. ಅಮಿತಾಭ್ ಬಚ್ಚನ್‌ನಂತಹ ನಟರೇ ತಮ್ಮ ಸಂಘರ್ಷಗಳ ಬಗ್ಗೆ ಬರೆದಿರಬೇಕಿದ್ದರೆ ಸಾಮಾನ್ಯರ ಪಾಡೇನು?
ಇಲ್ಲಿ ನಾನು ಹೇಳ ಬಯಸುತ್ತಿರುವುದು ಓರ್ವ ವ್ಯಕ್ತಿಯ ವಿದ್ಯೆಗೂ ಉದ್ಯೋಗಕ್ಕೂ ಸಂಬಂಧ ಇರಲೇ ಬೇಕೆಂದಿಲ್ಲ ಎಂದು. ಜಾಗತೀಕರಣಗೊಂಡ ಭಾರತದಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿರುವ ಕಾರಣ, ಉತ್ಕೃಷ್ಟತೆಗೆ, ಸಾಧಿಸುವ ಛಲಕ್ಕೆ ಅವಕಾಶಗಳು ತೆರೆದುಕೊಳ್ಳುತ್ತಿರುವ ಕಾರಣ ನಮ್ಮ ವಿದ್ಯಾರ್ಥಿಗಳನ್ನು , ಮಕ್ಕಳನ್ನು ಅವರ ಪಾಡಿಗೆ ವಿಕಾಸವಾಗಲು ಬಿಡಬೇಕೆನ್ನುವುದೇ ಈ ಲೇಖನದ ಆಶಯ. ವೃತ್ತಿಯಲ್ಲಿ ಸಂತೃಪ್ತಿ ಇಲ್ಲದಿದ್ದರೆ ಅದು ಜೀವನವನ್ನು ಬರಡುಗೊಳಿಸುವ ಕಾರಣ, ಅಂತಃಸತ್ವವನ್ನೇ ಕೊಂದುಬಿಡುವ ಕಾರಣ, ವೃತ್ತಿಯಲ್ಲಿನ ಆಯ್ಕೆ ಮಕ್ಕಳದೇ ಆಗಿರಬೇಕು. ಅನೇಕ ಸಲ ಅವರಿಗೆ ಈ ಬಗ್ಗೆ ಗೊಂದಲಗಳಿರುತ್ತವೆ. ಆಯಾ ಕ್ಷೇತ್ರದ ಪರಿಣಿತರಿಂದ ಕೆರೀರ್ ಕೌನ್ಸೆಲಿಂಗ್ ಮೂಲಕ ಅವರಿಗೆ ಸಮಾಧಾನದ ಬೆಳಕು ಸಿಗಬಹುದು.
ಇನ್ನು ವೃತ್ತಿಯಲ್ಲಿ ಯಶಸ್ಸು ಸಾಧಿಸಲು ವಿದ್ಯೆಯೇ ಬೇಕೆನ್ನುವುದು ಎಲ್ಲ ಸಂದರ್ಭಗಳಲ್ಲಿಯೂ ಸರಿಯಲ್ಲ. ಕೇವಲ ಹತ್ತನೆಯ ತರಗತಿ ಓದಿದ ಸ್ಮತಿ ಅತ್ಯಾಧುನಿಕ ಬ್ಯೂಟಿಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಯಾವುದೇ ಡಿಗ್ರಿ, ಪಿಜಿ ಹೋಲ್ಡರ್ ಗೆ ಕಡಿಮೆ ಇಲ್ಲ ಆಕೆಯ ಮಾತು, ಅಲಂಕಾರ. ಇನ್ನು ಉದ್ಯೋಗಕ್ಕೆ ಅತಿ ಅಗತ್ಯವಾಗಿರುವ ಇಂಗ್ಲಿಷ್ ಕೂಡ ಬ್ರಹ್ಮ ವಿದ್ಯೆಯೇನಲ್ಲ. ನನಗೆ ತಿಳಿದಿರುವ ಹೇರ್‌ಸ್ಟೈಲಿಸ್ಟ್ ಒಬ್ಬರು ಕೇವಲ ಎಂಟನೆಯ ತರಗತಿ ಕಲಿತಿದ್ದರೂ ಅತಿ ಮಾಡರ್ನ್ ಕ್ಲೈಂಟ್‌ಗಳೊಂದಿಗೆ ತನ್ನ ದಕ್ಷತೆಯಿಂದಲೇ ಸಂವಹನ ಮಾಡುತ್ತಿರುತ್ತಾರೆ. ಅಚ್ಚ ಕನ್ನಡ ನಿರೂಪಣೆ, ಲೇಖನ, ಸಂಘಸಂಸ್ಥೆಗಳು ಎಂದೆಲ್ಲ ಯಶಸ್ವಿಯಾಗಿರುವವರು, ಕಾಲೇಜಿನಲ್ಲಿ ಪರೀಕ್ಷೆ ಪಾಸಾಗದಿದ್ದರೂ ವ್ಯವಹಾರದಲ್ಲಿ ಸಾಧಿಸಿ ಡಿಗ್ರಿ ಆಗಿರುವವರನ್ನು ಕೆಲಸಕ್ಕೆ ಇಟ್ಟುಕೊಂಡಿರುವವರು. ಹೀಗೆ ಸೋಲೆಂದರೆ ಅದು ಸೋಲಲ್ಲ. ಕುಂದದ ಆತ್ಮವಿಶ್ವಾಸ, ಗೆಲುವಿನತ್ತ ಛಲ ಇದ್ದರೆ ಸಾಧನೆಗೆ ಹಲವು ಮಜಲುಗಳು. ಕೇವಲ ಹತ್ತನೆಯ ಪಾಸು ಮಾಡಿದ ನನ್ನ ಎಳೆಯ ಕ್ಲಾಸಿನ ಸಹಪಾಠಿ ಈಗ ಕೃಷಿ, ಹೈನುಗಾರಿಕೆ, ಊರಿನ ಸ್ವಯಂಸೇವಾ ಸಂಸ್ಥೆಗಳು ಎಂದೆಲ್ಲ ಉತ್ಸಾಹದ ಚಿಲುಮೆ. ಹಾಗೂಹೀಗೂ ಪಾಸಾಗುತ್ತಿದ್ದ ಇನ್ನೊಬ್ಬ ಈಗ ದೊಡ್ಡ ಕಂಟ್ರಾಕ್ಟರ್. ಆತನಿಗಿರುವ ಮಾತುಗಾರಿಕೆ, ಮೋಡಿ ಮಾಡುವ ನಗು ಮುಖ ಹಾಗೂ ಕೆಲಸಗಾರರೊಡಗಿನ ಸಂವಹನ ಯಾವ ಮಾರ್ಕೆಟಿಂಗ್ ಕ್ಲಾಸಿನಿಂದಲೂ ಬಂದುದಲ್ಲ. ತಮ್ಮದೇ ಕಂಪೆನಿ ಹುಟ್ಟು ಹಾಕಿ ಪ್ರಾಡಕ್ಟ್ ಲಾಂಚ್ ಮಾಡುವವರು, ಈವೆಂಟ್ ಮ್ಯಾನೇಜ್‌ಮೆಂಟ್, ಕೊರಿಯೋಗ್ರಫಿ ಎಂದೆಲ್ಲ ಓಡಾಡುವವರು… ಹೀಗೆ ಸಾರ್ಥಕವಾಗಿ ಬದುಕಲು ಹಲವು ದಾರಿ.
ಹಾಗಿದ್ದರೂ ಪದವಿ ಹಂತದ ಕೋರ್ಸ್‌ಗಳ ಬಗೆ ಒಂದಷ್ಟು ಮಾಹಿತಿ. ಕನ್ನಡ, ಇಂಗ್ಲಿಷ್ ಯಾವುದೇ ಮಾಧ್ಯಮ ಇರಲಿ ವಿದ್ಯಾರ್ಥಿಗಳು ಕೊನೆಗೆ ಬಂದು ಸೇರುವುದು ಕಾಲೇಜು ಎನ್ನುವ ಸಂಸ್ಥೆಗೆ. ಅದನ್ನು ಯಶಸ್ಸಿನ ಶಿಖರದ ಮೊದಲ ಮೆಟ್ಟಿಲಾಗಿಸುವ ಜಾಣ್ಮೆ ವಿದ್ಯಾರ್ಥಿಗೆ ಬೇಕು. ಇನ್ನು ಸೈನ್ಸ್ , ಕಾಮರ್ಸ್, ಆರ್ಟ್ಸ್ ಎಂದೆಲ್ಲ ಕಲಿತು ಪದವಿ ಹಂತದಲ್ಲಿ ಅವರ ವೃತ್ತಿ ಜೀವನ ಪಥ ನಿಖರವಾಗಿ ಆರಂಭವಾಗುವುದಲ್ಲವೆ? ಈ ಹಂತದಲ್ಲಿ ತಂದೆ-ತಾಯಿಗಳ ಗೊಂದಲ, ಅಧ್ಯಾಪಕರಲ್ಲೂ ಇರುವ ಸಣ್ಣ ಮಟ್ಟಿನ ಅಸ್ಪಷ್ಟತೆ, ವಿದ್ಯಾರ್ಥಿಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಇರುವ ಅನುಭವದ ಕೊರತೆ… ಹೀಗೆ ಸಮಸ್ಯೆಗಳು. ಹಾಗಿದ್ದರೂ ಉತ್ತಮ “ಸ್ಕಿಲ್’ಗಳಿರುವವರಿಗೆ, ಸಂವಹನ ಸಾಮರ್ಥ್ಯ, ಶ್ರದ್ಧೆ ಇರುವವರಿಗೆ ಈಗಲೂ ಕೆಲಸಗಳಿವೆ. ಈಗಲೂ ಸರಕಾರಿ ಕೆಲಸಗಳನ್ನು ಗಿಟ್ಟಿಸಿಕೊಳ್ಳುವುದು ಅಸಾಧ್ಯವೇನಲ್ಲ. ಇತ್ತೀಚೆಗಷ್ಟೇ ಒಬ್ಟಾತ ಬರೆದ ಒಂಬತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಆಯ್ಕೆಯಾದ ವರದಿಯಾಗಿತ್ತು.
ಎಲ್ಲ ಪದವಿಗಳೂ ಒಂದೇ
ಮೊದಲನೆಯದಾಗಿ ಬಿ ಎ ಪದವಿ. ಒಂದು ಕಾಲದಲ್ಲಿ ಅಂಕ ಕಡಿಮೆಯಾದವರು ಮಾತ್ರ ಆರ್ಟ್ಸ್ ತೆಗೆದುಕೊಳ್ಳುತ್ತಾರೆ ಎನ್ನುವ ಮನೋಭಾವವಿತ್ತು. ಅದು ನಿಧಾನವಾಗಿ ಬದಲಾಗುತ್ತಿದೆ. ದೊಡ್ಡ ದೊಡ್ಡ ಚರಿತ್ರಕಾರರು, ಅಮರ್ತ್ಯಸೇನ್‌ನಂತಹ ನೊಬೆಲ್ ವಿಜೇತ ಇಕನಾಮಿಸ್ಟ್ ಗಳು, ರಾಜಕೀಯ ಶಾಸ್ತ್ರಜ್ಞರು, ಜಾನಪದ, ಪುರಾತತ್ವ ಶಾಸ್ತ್ರಜ್ಞರು, ಸಾಹಿತಿಗಳು, ಭಾಷಾ ಶಾಸ್ತ್ರಜ್ಞರು, ಅದ್ಭುತವಾಗಿ ಫಿಲ್ಮ್ ಗಳಿಗೆ ಸಾಹಿತ್ಯ ಬರೆಯುವವರು- ಇವರೆಲ್ಲ ಆರ್ಟ್ಸ್ ವಿಭಾಗದಿಂದಲೇ ಬಂದವರೆಂದು ನೆನಪಿಸಿಕೊಳ್ಳಬೇಕಾಗಿದೆ. ಇಂಗ್ಲಿಶ್, ಜರ್ನಲಿಸಂ, ಸೈಕಾಲಜಿಯಂತಹ ಕಾಂಬಿನೇಶನ್ ತೆಗೆದುಕೊಂಡಲ್ಲಿ ಸ್ನಾತಕೋತ್ತರ ಪದವಿ ನಂತರ ಲೆಕ್ಚರರ್ ಆಗುವ, ಟಿ.ವಿ, ಪತ್ರಿಕೆಯಂತಹ ಮೀಡಿಯಾದಲ್ಲಿ ಶೈನ್ ಆಗುವ, ಕೌನ್ಸೆಲರ್ ಆಗುವ… ಹೀಗೆ ಹಲವಾರು ಅವಕಾಶಗಳಿವೆ. ಇವುಗಳಿಂದ ದುಡ್ಡನ್ನೂ ಖ್ಯಾತಿಯನ್ನೂ ಏಕಕಾಲದಲ್ಲಿ ದಕ್ಷತೆ ಇದ್ದರೆ ಗಳಿಸಬಹುದು.
ಇನ್ನು ಬಿ.ಎಸ್ಸಿ ಯಂತಹ ಸಬ್ಜೆಕ್ಟ್ ಗಳಲ್ಲೂ ಸ್ನಾತಕೋತ್ತರ ಪದವಿಗಳಿಸಿ ರಿಸರ್ಚ್ ಮಾಡುವ, ಬೇಡವೆಂದಲ್ಲಿ ತಮಗಿಷ್ಟ ಬಂದ ಹೆಚ್ಚುವರಿ ಕೋರ್ಸ್ ಮಾಡಿಕೊಂಡು ಕಂಪೆನಿಗಳಲ್ಲಿ ಉತ್ತಮ ಹುದ್ದೆಗಳಲ್ಲಿರುವವರಿದ್ದಾರೆ. ಇನ್ನು ಫುಡ್ ಅಂಡ್ ನ್ಯೂಟ್ರಿಶನ್‌ನಂತಹ ಕೋರ್ಸ್‌ಗಳನ್ನು ಕಲಿತವರು ಡಯಟಿಶಿಯನ್, ಕ್ಲಿನಿಕ್‌ಗಳಲ್ಲಿ ಸಲಹೆಗಾರರು, ಆಹಾರದ ರಿಸರ್ಚ್ ಸೆಂಟರ್‌ಗಳಲ್ಲಿ… ಹೀಗೆ ಅವಕಾಶಗಳ ಕೊರತೆ ಏನಿಲ್ಲ. ವಿವಿಧ ಚಾಕಲೇಟ್ ಸ್ಯಾಂಪಲ್ ಟೇಸ್ಟ್ ನೋಡುವ, ಕಾಫಿಯ ರುಚಿ ನೋಡುವ… ಹೀಗೆ ವೈವಿಧ್ಯಮಯ ಕೆಲಸಗಳು ಅವರದ್ದು.
ಒಂದು ಕಾಲದಲ್ಲಿ ತಮ್ಮ ಮಕ್ಕಳು ಕೇವಲ ಹಾಡು ಹೇಳಿಕೊಂಡೋ, ಚಿತ್ರ ಬರೆಯುತ್ತಲೋ, ಕ್ರಿಕೆಟ್ ಆಡುತ್ತಲೋ, ನಾಟಕದಲ್ಲಿ ಪಾರ್ಟು ಮಾಡುತ್ತಲೋ ಕಾಲಹರಣ ಮಾಡುತ್ತಾರೆಂದು ತಂದೆತಾಯಿ ಹಳಹಳಿಸುತ್ತಿದ್ದರೆ, ಈಗ ಅದನ್ನೇ ಆದಾಯದ ಮೂಲವಾಗಿಸಿಕೊಂಡವರಿದ್ದಾರೆ. ಬ್ಯಾಚುಲರ್ ಆಫ್ ವಿಜುವಲ್ ಆರ್ಟ್ಸ್ ನಂಥ ಸಬ್ಜೆಕ್ಟ್ ಗಳಂತೂ ಕಮರ್ಶಿಯಲ್ ಆಗಿ ಕೂಡ ಕಲೆಯನ್ನು ಕಲಿತು, ಕಲಿಸುವ, ಅಂತರಂಗದ ಕಲಾವಿದನನ್ನು ಕಾಪಿಡಲು ಬೇಕಾದ ಆರ್ಥಿಕ ಭದ್ರತೆಯನ್ನು ಒದಗಿಸುವ ಕೋರ್ಸ್. ಇಲ್ಲಸ್ಟ್ರೇಶನ್, ಮ್ಯೂರಲ್, ಉಬ್ಬು ಶಿಲ್ಪಗಳು, ಗ್ರಾಫಿಕ್ಸ್ … ಹೀಗೆ ಆಧುನಿಕ ಜಗತ್ತಿನಲ್ಲಿ ಸಿನೆಮಾ ಮಾಧ್ಯಮ ಸಹಿತ ಎಲ್ಲ ಕಡೆ ಸಲ್ಲುತ್ತಿದ್ದಾರೆ. ಇನ್ನು ಕಾಮರ್ಸ್ ಎನ್ನುವುದು ದೇಶದ ಜೀವನಾಡಿಯೇ ಸರಿ. ಬ್ಯಾಂಕಿಂಗ್ ಉದ್ದಿಮೆಯಿಂದ ಹಿಡಿದು ಅಂತಾರಾಷ್ಟ್ರೀಯ ವ್ಯವಹಾರಗಳವರೆಗೆ ಅದರ ಛಾಪು. ಕಾಮರ್ಸ್ ಹಾಗೂ ಎಚ್‌ಆರ್‌ಡಿ ವಿಷಯಗಳನ್ನು ಕಲಿತು ಕಾರ್ಪೊರೇಟ್ ಜಗತ್ತಿನಲ್ಲಿ ಉತಮ ಅವಕಾಶಗಳನ್ನು ಪಡೆಯಲು ಸಾಧ್ಯ.
ಯಾವುದೇ ಕೋರ್ಸ್‌ಗೂ ಅದರದ್ದೇ ಆದ ಮಾನ್ಯತೆ ಇದೆ ಹಾಗೂ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ಕೃಷ್ಟತೆಯನ್ನು, ಶ್ರೇಷ್ಠತೆಯನ್ನು ಕಾಯ್ದುಕೊಂಡರೆ, ಶ್ರದ್ಧೆಯಿಂದ ದುಡಿಯುವ ಮನೋಭಾವ ಇದ್ದರೆ ಈಗಲೂ ನಿರುದ್ಯೋಗ ಎನ್ನುವ ಸಮಸ್ಯೆಯಿಂದ ಪಾರಾಗಬಹುದು. ಒಂದೇ ಸಲ ಯಶಸ್ಸು ಗಳಿಸುವುದು ಎಲ್ಲರಿಗೂ ಸಾಧ್ಯವಾಗಲಾರದು ಹೌದಾದರೂ, ಕೆಚ್ಚು ಮತ್ತು ವಿಶ್ವಾಸಕ್ಕೆ ಅಸಾಧ್ಯವಾದುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ.
ಆನ್‌ಲೈನ್ ಭಾಷಾ ಟ್ಯೂಟರ್‌ಗಳು, ಕ್ಲಿನಿಕಲ್ ಇಂಜಿನಿಯರ್‌ಗಳು… ಎಥಿಕಲ್ ಹ್ಯಾಕರ್‌ಗಳು, ಫುಡ್‌ಸ್ಟೈಲಿಸ್ಟ್ ಗಳು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರೋಗ್ರಾಮರ್‌ಗಳು- ಹೀಗೆ ಅನೇಕ ಕುತೂಹಲಕಾರಿ ಜಾಬ್‌ಗಳು ಹೊಸ ಹೊಸದಾಗಿ ಸೃಷ್ಟಿಯಾಗುತ್ತಿರುತ್ತವೆ. ನಾಣ್ಯಕ್ಕೆ ಎರಡು ಮುಖಗಳಿರುವ ಹಾಗೆ ಉದ್ಯೋಗ-ಪ್ರವೃತ್ತಿ ಎನ್ನುವ ಈ ವಿಷಯಕ್ಕೆ ಇನ್ನೊಂದು ಆಯಾಮವೂ ಇದೆ. ಅನೇಕ ವರ್ಷಗಳಿಂದ ವಿದ್ಯಾರ್ಥಿಗಳೊಂದಿಗೆ ಒಡನಾಡುತ್ತಿರುವ ಕಾರಣ ವಿದಾರ್ಥಿಗಳಲ್ಲಿ ಡೈನಮೈಟ್‌ನಂತೆ ಪುಟಿಯುವ ಎನರ್ಜಿಯಿದೆ ಎಂದು ದೃಢವಾಗಿ ನಂಬಿದ್ದೇನೆ. ಈ ಎಳೆ ಚೈತನ್ಯಕ್ಕೆ ಸಾಮಾಜಿಕ, ಸಾಂಸ್ಕೃತಿಕ ತೊಡಕುಗಳೂ ಇರುತ್ತವೆ. ಸಂಜೆಯವರೆಗೆ ಕ್ಲಾಸು ಕೇಳಿ ಹಣ್ಣಿನಂಗಡಿಯಲ್ಲೋ, ಕೇಟರಿಂಗ್ ಕೆಲಸ ಎಂದೋ ದುಡಿಯುವವರು, ಮುಂಜಾನೆ ಬಲೆಬೀಸಿ ಮೀನು ಹಿಡಿದು ಹೆತ್ತವರಿಗೆ ಸಹಕರಿಸಿ ಬರುವ ಮಕ್ಕಳು, ಮನೆಯಲ್ಲಿ ಹಸುವಿನ ಹಾಲು ಕರೆಯುವ, ಹೊಲ-ಗದ್ದೆಗಳಲ್ಲಿ ಕಳೆ ಕಿತ್ತು ರಾಗಿ-ಸಾಸಿವೆ-ನವಣೆ ಎಂದೆಲ್ಲ ರೈತಾಪಿ ಕನವರಿಕೆಗಳಿರುವ ಹುಡುಗರು, ತನಗೆ ಹದಿನೆಂಟು ವಯಸ್ಸಾಗುವುದನ್ನೇ ಕಾಯುತ್ತ ಮದುವೆ ಮಾಡುತ್ತಾರಲ್ಲ ಮನೆಯಲ್ಲಿ ಎಂದು ಕಳವಳಿಸುವ ಹೆಣ್ಣು ಮಕ್ಕಳು… ಎಂಟನೆಯ, ಒಂಬತ್ತನೆಯ ತರಗತಿಗೆ ಮದುವೆ ಮಾಡಿಸುವ ಪಾಲಕರು ಈಗಲೂ ಇದ್ದಾರೆಂದರೆ ನೀವು ನಂಬಬೇಕು. ಗುಜರಿ ಮಾರುವವನೊಬ್ಬ ಕಷ್ಟಪಟ್ಟು ತನ್ನ ಮಗಳನ್ನು ಪದವಿ ಓದಿಸಿದರೆ, ಸೌದಿಯಲ್ಲಿರುವ ಆಕೆಯ ಗಂಡನಿಗೆ ಆಕೆ ಅಡುಗೆ ಮಾಡುತ್ತ ಮನೆಯಲ್ಲಿದ್ದರೆ ಸಾಕಂತೆ. ಜರ್ನಲಿಸಂ, ಕ್ಯಾಮೆರಾ ಎಂದೆಲ್ಲ ಲವಲವಿಕೆಯಿಂದ ಓಡಾಡಿಕೊಂಡಿದ್ದ ಹುಡುಗಿಗೆ ಪತ್ರಿಕೆಯಲ್ಲಿ ಬರೆಯಲೇಬಾರದೆಂಬ ನಿರ್ಬಂಧ. ನಾಟಕ, ಡ್ಯಾನ್ಸು ಎಂದೆಲ್ಲ ತರಲೆ ಮಾಡಿಕೊಂಡಿದ್ದ ಹುಡುಗನಿಗೆ ದಿಢೀರನೆ ಹೆಗಲೇರುವ ಮನೆಯ ಜವಾಬ್ದಾರಿ. ನಮ್ಮ ವೃತ್ತಿ-ಪ್ರವೃತ್ತಿ ಒಂದೇ ಆಗಬೇಕೆಂದರೆ ತಕ್ಕಮಟ್ಟಿಗೆ ಭಾಗ್ಯಶಾಲಿಗಳೂ ಆಗಬೇಕೇನೋ.
ಹೀಗಾಗಿಯೇ ಪೋಷಕರು, ಪಾಲಕರು, ಶಿಕ್ಷಕರು ಮೊದಲುಗೊಂಡು ಇಡೀ ಸಮಾಜವೇ ಎಳೆಯ ಚಿಗುರುಗಳನ್ನು ಸಹಾನುಭೂತಿಯಿಂದ ನೋಡುವ ಆವಶ್ಯಕತೆ ಇದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ವಿದೇಶಗಳ ಹಾಗೆಯೇ ಅಪರಿಮಿತ ಸುಧಾರಣೆಗಳಾಗಬೇಕಾದರೆ ಇನ್ನೂ ಸುಮಾರು ವರ್ಷಗಳೇ ಬೇಕಾಗಬಹುದು. ಅದಕ್ಕೆ ಬೇಕಾದ ಆರ್ಥಿಕ, ಸಾಮಾಜಿಕ ಸಂಪನ್ಮೂಲಗಳು, ರಾಜಕೀಯ ಇಚ್ಛಾ ಶಕ್ತಿ, ಇಂಟೆಲೆಕುcವಲ್ ವಲಯದ ಸಲಹೆಗಳು… ಹೀಗೆ ಅದೊಂದು ಮಲ್ಟಿ ಲೇಯರ್ ಸಮಸ್ಯೆಯೇ ಸರಿ. ಆವರೆಗೆ ಈ ಎಳೆ ಹರೆಯದ ಯುವಶಕ್ತಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಿ ಅವರಲ್ಲಿ ಚಿಮ್ಮುವ ಉತ್ಸಾಹವನ್ನು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ.
ಜಯಶ್ರೀ ಬಿ. ಕದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.