ನಿಮ್ಮಲ್ಲಿ ಆ ಆ್ಯಪ್ ಇದೆಯಾ?
Team Udayavani, Jun 30, 2019, 5:00 AM IST
ಈ ಹಿಂದೆ ಕಲ್ಪಿಸಿಕೊಳ್ಳಲೂ ಕಷ್ಟವಾಗುತ್ತಿದ್ದಂಥ ಅನುಕೂಲಗಳನ್ನು ಮೊಬೈಲ್ ಫೋನ್ ನಮಗೆ ತಂದುಕೊಟ್ಟಿದೆ. ಮನೆಗೆ ದಿನಸಿ ತರಿಸಿಕೊಳ್ಳುವುದರಿಂದ ಪ್ರಾರಂಭಿಸಿ ಹೊಸ ವಿಷಯಗಳ ಕುರಿತು ಅಧ್ಯಯನ ನಡೆಸುವವರೆಗೆ ನಾವು ಯಾವ ಕೆಲಸವನ್ನು ಎಲ್ಲಿ ಯಾವಾಗ ಬೇಕಾದರೂ ಮಾಡಿಕೊಳ್ಳಲು ಸಾಧ್ಯವಾಗಿರುವುದು ಈ ಸಾಧನದಿಂದಾಗಿಯೇ.
ಇಷ್ಟೆಲ್ಲ ಅನುಕೂಲಗಳ ಜೊತೆ ಮೊಬೈಲ್ ಫೋನಿನಿಂದಾಗಿ ಹಲವು ಹೊಸ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ, ಅಂತಹ ಕೆಲ ಸಮಸ್ಯೆಗಳು ನಾವು ನಿರೀಕ್ಷಿಸಿಯೇ ಇರದ ಮಟ್ಟಕ್ಕೂ ಬೆಳೆಯುತ್ತಿವೆ.
ಮಾಧ್ಯಮಗಳಲ್ಲಿ ಈಚೆಗೆ ಕಾಣಿಸಿಕೊಂಡ ಒಂದೆರಡು ಘಟನೆಗಳನ್ನು ಇಲ್ಲಿ ಉದಾಹರಿಸಬಹುದು. ಮೊಬೈಲಿನಲ್ಲಿ ಚಿತ್ರೀಕರಿಸಲೆಂದು ಮೇಲಕ್ಕೆ ನೆಗೆದ ಯುವಕನೊಬ್ಬ ಕತ್ತಿನ ಮೂಳೆ ಮುರಿದುಕೊಂಡು ಮೃತಪಟ್ಟದ್ದು ಒಂದು ಘಟನೆಯಾದರೆ ಯಾವಾಗಲೂ ಮೊಬೈಲಿನಲ್ಲೇ ಮುಳುಗಿರಬೇಡ ಎಂದಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನೊಂದು ಘಟನೆ.
ಈ ಎರಡೂ ಸುದ್ದಿಗಳ ಹಿನ್ನೆಲೆಯಲ್ಲಿರುವುದು ಟಿಕ್‌ಟಾಕ್ ಎಂಬ ಮೊಬೈಲ್ ಆ್ಯಪ್. ಇದರ ಮೂಲ ಉದ್ದೇಶ ಬಹು ಸರಳ: ಮೊಬೈಲ್ ಬಳಸಿ ರೆಕಾರ್ಡ್ ಮಾಡಿದ ನಮ್ಮ ವೀಡಿಯೋವನ್ನು ಇತರ ಬಳಕೆದಾರರೊಡನೆ ಹಂಚಿಕೊಳ್ಳುವುದು. ಆದರೆ, ಅದು ಬಳಕೆಯಾಗುತ್ತಿರುವ ಉದ್ದೇಶಗಳಿಂದಾಗಿ, ಕೆಲ ಬಳಕೆದಾರರು ಅದರಲ್ಲಿ ಕಳೆಯುತ್ತಿರುವ ಸಮಯದಿಂದಾಗಿ ಈ ಆ್ಯಪ್ ಇದೀಗ ಒಂದು ಸಾಮಾಜಿಕ ಪಿಡುಗೇನೋ ಅನ್ನಿಸುವ ಮಟ್ಟಕ್ಕೆ ಬೆಳೆದುನಿಂತಿದೆ. ಒಂದು ಕಡೆ ಸಾರ್ವಜನಿಕವಾಗಿ ಹಂಚಿಕೊಳ್ಳಬಾರದ್ದನ್ನೆಲ್ಲ ಹಂಚಲು ಟಿಕ್‌ಟಾಕ್ ಬಳಕೆಯಾಗುತ್ತಿದ್ದರೆ ಇನ್ನೊಂದೆಡೆ ಅನೇಕ ಬಳಕೆದಾರರಿಗೆ ಟಿಕ್‌ಟಾಕ್ ಒಂದು ವ್ಯಸನದಂತೆ ಆಗಿಬಿಟ್ಟಿದೆ.
ಹಾಗೆ ನೋಡಿದರೆ ಈ ಟಿಕ್‌ಟಾಕ್ ಎನ್ನುವುದು ಇಡೀ ಸಮಸ್ಯೆಯ ಒಂದು ಪ್ರಾತಿನಿಧಿಕ ಉದಾಹರಣೆ ಮಾತ್ರ ಎನ್ನಬೇಕು. ಮೂಲತಃ ಸಮಸ್ಯೆಯಿರುವುದು ತಂತ್ರಜ್ಞಾನದ ದುರ್ಬಳಕೆ ಹಾಗೂ ಅತಿಬಳಕೆಯದು. ಯಾವುದೋ ಕಾನೂನುಬಾಹಿರ ಕೆಲಸಗಳಿಗೆ ತಂತ್ರಜ್ಞಾನ ದುರ್ಬಳಕೆಯಾದರೆ ಅದನ್ನು ನೋಡಿಕೊಳ್ಳಲು ಕಾನೂನುಗಳಾದರೂ ಇವೆ, ಆದರೆ, ಅತಿಬಳಕೆಯನ್ನು ಯಾವ ಕಾನೂನು ತಾನೇ ನಿಯಂತ್ರಿಸಬಲ್ಲದು?
ಮೇಲೆ ಹೇಳಿದ ಎರಡೂ ಘಟನೆಗಳು ಇಂತಹವೇ ಅತಿಬಳಕೆಯ ಉದಾಹರಣೆಗಳು. ಟಿಕ್‌ಟಾಕ್‌ನಂಥ ಆ್ಯಪ್‌ಗ್ಳಿರಲಿ, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳೇ ಇರಲಿ, ಯಾವಾಗಲೂ ಹೊಸತನ್ನೇನಾದರೂ ಹಂಚಿಕೊಳ್ಳುವ- ನಮಗೆ ಪರಿಚಯವೇ ಇಲ್ಲದವರನ್ನು ಮೆಚ್ಚಿಸುವ ಹಪಾಹಪಿಯನ್ನು ಅವು ಅನೇಕ ಬಳಕೆದಾರರಲ್ಲಿ ಬೆಳೆಸುತ್ತಿವೆ. ಬೇರೆಯವರು ನನಗಿಂತ ಭಿನ್ನವಾಗಿ ಏನೋ ಮಾಡುತ್ತಿದ್ದಾರೆ ಹಾಗೂ ಕೊಂಚ ಹೊತ್ತು ನಾನು ಈ ಲೋಕದಿಂದ ದೂರವಿದ್ದರೆ ಅದನ್ನೆಲ್ಲ ತಿಳಿಯುವ ಅವಕಾಶ ಕಳೆದುಕೊಳ್ಳುತ್ತೇನೆ ಎಂಬ ಭೀತಿಯನ್ನೂ ಬಿತ್ತುತ್ತಿವೆ.
ಈ ಭೀತಿಯ ಪರಿಣಾಮವನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಮೀಟಿಂಗಿನಲ್ಲಿ ಕುಳಿತಾಗ, ಊಟಕ್ಕೆ ಹೋದಾಗ, ಕಡೆಗೆ ಟೀವಿ ನೋಡುವಾಗಲೂ ಮೊಬೈಲನ್ನು ಜೊತೆಗಿಟ್ಟುಕೊಳ್ಳುವುದು ಅನೇಕರಿಗೆ ಅಭ್ಯಾಸವಾಗಿಬಿಟ್ಟಿದೆ. ಒಂದೊಮ್ಮೆ ಎತ್ತಿ ಬದಿಗಿಟ್ಟರೂ ಥಟ್ಟನೆ ಬರುವ ಯಾವುದೋ ಒಂದು ನೋಟಿಫಿಕೇಶನ್ ಅದನ್ನು ಮತ್ತೆ ಕೈಗೆತ್ತಿಕೊಳ್ಳುವಂತೆ ಮಾಡುತ್ತದೆ. ಕೆಲಸಮಯ ಯಾವುದೇ ನೋಟಿಫಿಕೇಶನ್ ಬಾರದಿದ್ದರೆ ಯಾಕೋ ಏನೂ ಬರಲೇ ಇಲ್ಲವಲ್ಲ ಎಂದು ನೋಡಲಾದರೂ ಅವರು ಮೊಬೈಲನ್ನು ಮತ್ತೆ ಕೈಗೆತ್ತಿಕೊಳ್ಳುತ್ತಾರೆ. ಇನ್ನು ಅದರ ಬ್ಯಾಟರಿ ಮುಗಿದುಹೋಯಿತು ಅಥವಾ ಮೊಬೈಲ್ ಜಾಲದ ಸಂಪರ್ಕ ತಪ್ಪಿತು ಎಂದರಂತೂ ಚಡಪಡಿಕೆಯೇ ಶುರುವಾಗಿಬಿಡುತ್ತದೆ.
ಈ ಪರಿಸ್ಥಿತಿಯನ್ನು ತಜ್ಞರು ಫಿಯರ್ ಆಫ್ ಮಿಸ್ಸಿಂಗ್ ಔಟ್ (ಫೋಮೋ), ಅರ್ಥಾತ್ ಹೊರಗುಳಿಯುವ ಭೀತಿ ಎಂದು ಗುರುತಿಸುತ್ತಾರೆ. ಈ ಭೀತಿಗೆ ಕಾರಣ- ಕೊಂಚ ಹೊತ್ತು ಮೊಬೈಲು ಕೈಯಲ್ಲಿಲ್ಲದಿದ್ದರೆ, ವಾಟ್ಸಾಪ್‌ನಲ್ಲಿ ಇಣುಕದಿದ್ದರೆ, ಸಮಾಜಜಾಲಗಳಲ್ಲಿ ಅಡ್ಡಾಡದಿದ್ದರೆ ಅಲ್ಲಿನ ವಿದ್ಯಮಾನಗಳು ನಮಗೆ ತಿಳಿಯುವುದಿಲ್ಲ ಎನ್ನುವ ಅನಿಸಿಕೆ. ಎಲ್ಲರೊಡನೆಯೂ ಯಾವಾಗಲೂ ಸಂಪರ್ಕದಲ್ಲಿರಬೇಕು, ಆನ್‌ಲೈನ್ ಲೋಕದಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕು, ಸಂದೇಶ ಕಳಿಸಿದವರಿಗೆ ಥಟ್ಟನೆ ಉತ್ತರಿಸಬೇಕು ಎನ್ನುವ ಬಯಕೆಯೂ ಇದಕ್ಕೆ ಕಾರಣವಾಗಬಹುದು. ಸಮಾಜಜಾಲದಲ್ಲಿ ಹಾಕಿದ ಪೋಸ್ಟಿಗೆ ಏನು ಪ್ರತಿಕ್ರಿಯೆ ಬಂದಿದೆಯೆಂದು ಪದೇಪದೇ ನೋಡುವುದು, ಕೈಗೆ ಸಿಕ್ಕ ಮಾಹಿತಿಯನ್ನು ಅದೇ ಕ್ಷಣದಲ್ಲಿ ಸಿಕ್ಕವರಿಗೆಲ್ಲ ಕಳಿಸಿಬಿಡುವುದು ಕೂಡ ಈ ಭೀತಿಯದೇ ಇನ್ನಿತರ ರೂಪಗಳು.
ಟಿಕ್‌ಟಾಕ್ ದುರಂತಗಳ ಹಿನ್ನೆಲೆಯಲ್ಲಿರುವುದೂ ಇದೇ ಭೀತಿ. ನಾನು ಏನಾದರೂ ಹೊಸತು ಮಾಡದಿದ್ದರೆ ಬೇರೆಯವರು ನನ್ನನ್ನು ಮೆಚ್ಚುವುದಿಲ್ಲ ಎಂದೋ, ಕೊಂಚಹೊತ್ತು ಏನನ್ನೂ ಹಂಚಿಕೊಳ್ಳದಿದ್ದರೆ – ಬೇರೆಯವರು ಹಂಚಿಕೊಂಡಿದ್ದನ್ನು ನೋಡದಿದ್ದರೆ ಏನೋ ಕಳೆದುಕೊಳ್ಳುತ್ತೇನೆ ಎಂದೋ ಭಾವಿಸುವ ಬಳಕೆದಾರರು ಸದಾಕಾಲ ಅದರಲ್ಲೇ ಮುಳುಗಿರಲು ಶುರುಮಾಡಿದ್ದಾರೆ. ಅದರಿಂದ ಅಪಾಯಗಳನ್ನೂ ತಂದುಕೊಳ್ಳುತ್ತಿದ್ದಾರೆ.
ಈ ಸಮಸ್ಯೆಯಿಂದ ಪಾರಾಗುವುದು ಹೇಗೆ? ಮೊಬೈಲಿನ ಬಳಕೆಯನ್ನೇ ನಿಲ್ಲಿಸಿಬಿಡಬೇಕೇ?
ಹಾಗೇನೂ ಇಲ್ಲ. ಮೊಬೈಲ್ ಅತಿಬಳಕೆ ತಂದೊಡ್ಡುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಹಲವು ಮಾರ್ಗಗಳಿವೆ. ಆ ಪೈಕಿ ಮೊದಲನೆಯದು ಸ್ವಯಂನಿಯಂತ್ರಣ. ಅಗತ್ಯಬಿದ್ದಾಗ ಅಗತ್ಯವಿದ್ದಷ್ಟೇ ಹೊತ್ತು ಮೊಬೈಲ್ ಬಳಸುತ್ತೇನೆ ಎಂದು ತೀರ್ಮಾನ ಮಾಡಿ ಅದಕ್ಕೆ ಬದ್ಧರಾಗಿರುವ ಮೂಲಕ ನಾವು ಮೊಬೈಲ್ ಚಟಕ್ಕೆ ದಾಸರಾಗುವುದನ್ನು ತಪ್ಪಿಸಿಕೊಳ್ಳಬಹುದು. ಇದು ಸುಲಭವಲ್ಲ ಎನ್ನುವವರು ಅದೇ ಮೊಬೈಲಿನಲ್ಲಿರುವ ಕೆಲವು ಸಾಧ್ಯತೆಗಳನ್ನು ಬಳಸಿಕೊಳ್ಳಬಹುದು: ಲ್ಯಾಪಾrಪ್-ಮೊಬೈಲ್ ಎರಡೂ ಬಳಸುವವರು ಕನಿಷ್ಟ ಒಂದು ಸಾಧನದಲ್ಲಾದರೂ ಫೇಸ್‌ಬುಕ್ ಬಳಸದಿರುವುದು, ಅತಿರೇಕವೆನಿಸುವಷ್ಟು ಚಟುವಟಿಕೆಯಿರುವ ವಾಟ್ಸಾಪ್ ಗುಂಪುಗಳನ್ನು ಮ್ಯೂಟ್ ಮಾಡಿಟ್ಟು ನಮ್ಮ ಬಿಡುವಿನ ವೇಳೆಯಲ್ಲಷ್ಟೇ ಅವನ್ನು ಗಮನಿಸುವುದು, ಪರೀಕ್ಷೆಯಂತಹ ಮಹತ್ವದ ಸಂದರ್ಭಗಳಲ್ಲಿ ಒಂದಷ್ಟು ದಿನ ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ದೂರವಿರುವುದು – ಇವೆಲ್ಲ ಅವರಿಗೆ ಲಭ್ಯವಿರುವ ಕೆಲ ಆಯ್ಕೆಗಳು. ಮೊಬೈಲಿನ ಅತಿಬಳಕೆಯನ್ನು ಏಕಾಏಕಿ ನಿಲ್ಲಿಸುವ ಬದಲು ಕೆಲದಿನಗಳ ಅವಧಿಯಲ್ಲಿ ಕೊಂಚಕೊಂಚವಾಗಿ ಕಡಿಮೆಮಾಡಿದರೆ ಅದರಿಂದ ಉಂಟಾಗಬಹುದಾದ ಮಾನಸಿಕ ಸಮಸ್ಯೆಗಳಿಂದಲೂ ಪಾರಾಗಬಹುದು.
ಆದರೆ, ಇದನ್ನೆಲ್ಲ ತಾವೇ ಮಾಡುವುದು ಎಲ್ಲರಿಗೂ ಸಾಧ್ಯವಾಗದಿರಬಹುದು. ಟಿಕ್‌ಟಾಕ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ಗಳಂಥ ಆ್ಯಪ್‌ಗ್ಳನ್ನು ತೆರೆದು ನೋಡುತ್ತ ಕುಳಿತರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ ಎನ್ನುವವರು ಅದನ್ನು ಸ್ವತಃ ನಿಯಂತ್ರಿಸಿಕೊಳ್ಳುವುದು ಕಷ್ಟವೇ. ಆದರೆ, ಮೊಬೈಲಿನಾಚೆಗೂ ಜೀವನವಿದೆಯಲ್ಲ!
-ಟಿ.ಜಿ.ಶ್ರೀನಿಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.