ಜಗ ಬಸವಳಿದಿದೆ ಬಿಸಿಲಿಗೆ, ದಿನಕರಗೆ ಕರುಣವಿಲ್ಲ


Team Udayavani, May 21, 2017, 9:49 PM IST

darani.jpg

ಎಲ್ಲೆಡೆ ಈಗ ಬಿಸಿಲೇ ಬಿಸಿಲು. ಉತ್ತರಕರ್ನಾಟಕದ‌ ಬಾವಿ-ಕೆರೆಗಳಲ್ಲಿ  ದುರ್ಯೋಧನನಂತೆ ಮುಳುಗಿ ಕುಳಿತರೂ ಬಿಸಿಲಿನ ಧಗೆ ನಿಲ್ಲುವುದಿಲ್ಲ !

ಬಿಸಿಲು ಮನುಷ್ಯನನ್ನು ನಿತ್ರಾಣಗೊಳಿಸುತ್ತದೆ. ಮಾಡದೇ ಮುಟ್ಟದೇ ಸುಸ್ತಾದ ಅನುಭವ ಕೊಡುತ್ತದೆ. ಕ್ರಿಯಾಶೀಲರನ್ನೂ ಆಲಸಿಯಾಗಿಸುತ್ತದೆ. ಅದರ ಝಳದ ತೀವ್ರತೆಗೆ ಜೀವಸೆಲೆಗಳೇ ಬತ್ತುತ್ತವೆ. ಕುಳಿತರೂ ನಿಂತರೂ ಸಮಾಧಾನವಾಗದ ಈ ಬಿಸಿಲಿಗೆ ಚಟಪಡಿಸದ ಜೀವಗಳಿಲ್ಲ. ವರ್ಷದಿಂದ ವರ್ಷಕ್ಕೆ ಬಿಸಿಲಿನ ಪ್ರಮಾಣ ಮತ್ತು ಅದರಿಂದ ಸಂಭವಿಸಬಹುದಾದ ಸಾವು-ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನ್ಯಾಶನಲ್‌ ಕ್ರೈಮ್‌ ರಿಕ್ರಾಡ್ಸ್‌ ಬ್ಯುರೊ ಪ್ರಕಾರ 2004ರಿಂದ 2013ರ ವರೆಗೆ ಈ ಬಿಸಿಲ ಬೇಗೆಯಿಂದ ಸಾವನ್ನು ಅನುಭವಿಸುವವರ ಪ್ರಮಾಣದಲ್ಲಿ  ಗಣನೀಯವಾಗಿ ಏರಿಕೆಯಾಗಿದ್ದು ಅದು 61 ಪ್ರತಿಶತದಷ್ಟು ಹೆಚ್ಚಾಗಿರುವ ಬಗ್ಗೆ ವರದಿಯಾಗಿರುವುದಿದೆ. 2016ರಲ್ಲಿ ಸಂಭವಿಸಿದ ಒಟ್ಟು ನೈಸರ್ಗಿಕ ಪ್ರಕೋಪಗಳಿಂದಾಗಿ ಸಂಭವಿಸಿದ  ಸಾವುಗಳ ಸಂಖ್ಯೆ 1,600. ಅದರಲ್ಲಿ ಸುಮಾರು 40 ಪ್ರತಿಶತ ಸಾವುಗಳು ಈ ಅತಿಯಾದ ಬಿಸಿಲಿನ ತಾಪಮಾನದಿಂದ ಸಂಭವಿಸಿರುವುದಿದೆ. ಕೇವಲ ಭಾರತ ಮಾತ್ರವಲ್ಲ,  ಜಾಗತಿಕ ತಾಪಮಾನದಲ್ಲಿಯ ವೈಪರೀತ್ಯಗಳ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಈ ಬಿಸಿಲಿನ ಬಾಧೆಯನ್ನು ಅನುಭವಿಸುವಂತಾಗಿದೆ.

ಬರಗಾಲದ ವ್ಯಾಪಕತೆ ಮತ್ತು ಮಳೆಯ ಪ್ರಮಾಣದಲ್ಲಿ ಇಳಿಮುಖತೆ ಇವೆರಡೂ ಸಂಗತಿಗಳು ಗ್ಲೋಬ್‌ನ್ನು ಹಾಗೇ ಮುಟ್ಟಿದರೆ ಸಾಕು, “ಚುರ್‌!’ ಎನ್ನುವಂತೆ ಮಾಡುತ್ತಿವೆ. ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ, ಅಭಿವೃದ್ಧಿಯ ಹೆಸರಲ್ಲಿ ಬಯಲಾಗುತ್ತಿರುವ ಅರಣ್ಯ, ಭೂಮಿಯ ಹೊಟ್ಟೆಗಿಳಿದು ಲೂಟಿ ಮಾಡುವ  ಮನುಷ್ಯನ ತರಾವರಿ ದಂಧೆಗಳು, ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪಮಾನವನ್ನು ಹೆಚ್ಚಿಸುವಲ್ಲಿ ಪ್ರಮುಖ ಕಾರಣಗಳಾಗಿವೆ.

ಈ ಬಾರಿಯ ಬಿಸಿಲಿನ ತಾಪಮಾನಕ್ಕೆ ಅನೇಕ ತಂಪು ಪ್ರದೇಶಗಳು ಕೂಡಾ ತತ್ತರಿಸುವಂತಾಗುವಲ್ಲಿ ಈ ನೈಸರ್ಗಿಕ ವೈಪರೀತ್ಯವೇ ಕಾರಣ. ಈಚೆಗಷ್ಟೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ಬಿಸಿಲಿನ ತಾಪಮಾನಕ್ಕೆ ಸಂಬಂಧಿಸಿದಂತೆ ಇಡೀ ಜಗತ್ತೇ ಬೆಚ್ಚಿಬೀಳಬಹುದಾದ ಮಾಹಿತಿಯೊಂದನ್ನು ಹೊರಹಾಕಿರುವದಿದೆ. 2016 ಮತ್ತು 2017 ರ ಎಪ್ರಿಲ್‌ ತಿಂಗಳುಗಳು ಕಳೆದ 137 ವರ್ಷಗಳಲ್ಲಿಯೇ ಅತೀ ಹೆಚ್ಚು ಉಷ್ಣಾಂಶವನ್ನು ಹೊರಹಾಕಿದ ತಿಂಗಳುಗಳು ಎಂದು ಘೋಷಿಸಿದೆ. ಮನುಷ್ಯನ ಹಪಾಹಪಿತನ ಮಿತಿಮೀರಿದೆ. ಆತ ನಿಸರ್ಗದಿಂದ ಪಡೆಯುವದನ್ನು, ದೋಚುವದನ್ನು ಮಾತ್ರ ಕಲಿತಿರುವದಿದೆಯೇ ಹೊರತು ಅದಕ್ಕೆ ಮರಳಿ ಕೊಡುವದನ್ನು ಕಲಿಯಲಿಲ್ಲ. ರಸ್ತೆ ಅಗಲೀಕರಣಕ್ಕಾಗಿ ಅಥವಾ ಇನ್ನಾವುದೋ ಕಾಮಗಾರಿಗಾಗಿ ಸಾವಿರಾರು ಗಿಡಗಳನ್ನು ಕಡಿಯುವ ಮನುಷ್ಯನಿಗೆ ನೆಟ್ಟು ಉಳಿಸುವ, ಬೆಳೆಸುವ‌ ಗಿಡಗಳ ಬಗ್ಗೆ  ಆತ ಗಮನಹರಿಸಲಿಲ್ಲ. ಆ ಕಾರಣದಿಂದಾಗಿಯೇ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುವ ಜೊತೆಗೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತ ನಡೆದಿದೆ. ಭವಿಷ್ಯದಲ್ಲಿ ಎಲ್ಲ ಬಗೆಯ ನೈಸರ್ಗಿಕ ಪ್ರಕೋಪಗಳಿಂದಾಗಿ ಸಾಯುವವರ ಪ್ರಮಾಣದಲ್ಲಿ ಬಿಸಿಲು ಮುಂಚೂಣಿಯಲ್ಲಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇಂದು ಜಗತ್ತಿನ ಅತಿ ಹೆಚ್ಚು ಬಿಸಿಲಿನ ತಾಪಮಾನದ ರಾಷ್ಟ್ರಗಳ ಸಾಲಲ್ಲಿ ನಮ್ಮ ದೇಶವೂ ಸೇರಿದೆ. ಜೊತೆಗೆ ಲಿಬಿಯಾ, ಸುಡಾನ್‌, ಇರಾನ್‌, ಸೋಮಾಲಿಯಾ, ಅಲ್ಜೀರಿಯಾ, ಓಮನ್‌, ಸೌದಿ ಅರೇಬಿಯಾ, ಮೆಕ್ಸಿಕೊದಂತಹ ರಾಷ್ಟಗಳು ಸೇರಿವೆ. ಇವುಗಳ ನಂತರವೂ ಸಾಕಷ್ಟು ರಾಷ್ಟ್ರಗಳು ಈ ಸರದಿಯಲ್ಲಿವೆ.

ಉತ್ತರಕರ್ನಾಟಕವೆಂಬುದು ಬಿಸಿಲತಾಪಕ್ಕೆ ಹತ್ತಿರ
ಬೇಸಿಗೆಯಲ್ಲಿ ಬಿಸಿಲು ಸಾಮಾನ್ಯ ಆದರೆ, ನನ್ನೂರು ವಿಜಯಪುರ ಜಿÇÉೆಯ, ಸಿಂದಗಿಯ ಬಿಸಿಲು ಅಸಾಮಾನ್ಯ. ಅದು ಬಿಸಿಲೇ ಬಿಸಿಲು. ಬಿಸಿಲಕುದುರೆಯ ಬೆನ್ನೇರಿ, ಸುಡುಬಿಸಿಲಿನ ಸಹವಾಸದಲ್ಲಿ ಕುದಿಯುವ ಮನಸುಳ್ಳವರು ನನ್ನೂರಿಗೆ ಬರಬೇಕು. ಈಗೇನೋ ಊರು ತುಸು ಬದಲಾವಣೆಯತ್ತ ಉರುಳಿದೆ. ನಾನು ಕಾಲೇಜು ಹಂತದಲ್ಲಿರುವಾಗ ಹರುಕುಮುರುಕು ರಸ್ತೆ, ಧೂಳು ತೂರುವ ಬಯಲು, ಗಬ್ಬು ನಾರುವ ಗಟಾರು, ಮನೆಯ ಮುಂದಿರುವ ತಿಪ್ಪೆಗಳು, ಮಂದಿಯ ಸಹವಾಸದಲ್ಲಿರೋ ಹಂದಿಗಳು, ಗಲೀಜು ತುಂಬಿಕೊಂಡಿರುವ ಸಂದಿಗಳು. ಆಗ ಅದೊಂದು ತೀರಾ ಹಿಂದುಳಿದ ತಾಲೂಕು ಎನ್ನುವಂತಿತ್ತು. ಈಗ ಅದು ಭಯಂಕರ ಅದ್ಭುತವಾಗಿ ಬೆಳೆದು ನಂದನವನವಾಗಿದೆ ಎಂದರ್ಥವಲ್ಲ. ಈಗಲೂ ಅಷ್ಟೇ.  ಸಿಂದಗಿ  ಅಂಬೋ ಊರು ಭೌತಿಕವಾಗಿ ಬೆಳೆದಿದೆಯಷ್ಟೇ. ನಾಗರಿಕ ಸೌಲಭ್ಯಗಳು ಅಷ್ಟಕ್ಕಷ್ಟೆ. ಆಗ ಇನ್ನೂ ಹದಗೆಟ್ಟ ಸ್ಥಿತಿ, ಬೇಸಿಗೆಯಲ್ಲಂತೂ ಇಡೀ ಊರು ಮಟಮಟ ಮಧ್ಯಾಹ್ನದೊಳಗೆ ಬಟಾಬಯಲಾದಂತಿರುವ‌ ಅನುಭವ. ಅದು ನೆರಳಿಗೆ ಕುಳಿತರೂ… ನೀರಿಗಿಳಿದರೂ ಚುರು ಚುರು ಎಂದು  ರಾಚುವ ರಣಗುಡುವ ಬಿಸಿಲು. ಆ ಸುಡುಬಿಸಿಲಿನ ಅಘೋಷಿತ  ಕರ್ಫ್ಯೂಗೆ ಹೆದರಿ ಸಂಜೆಯವರೆಗೆ ಯಾರೂ ಗೂಡು ಬಿಟ್ಟು ಹೊರಗೆ ಸುಳಿಯುತ್ತಿರಲಿಲ್ಲ. ತುಸು ಗಾಳಿ ಸುಳಿಯುವ ಮನೆಗಳಲ್ಲಿ ಮಹಿಳೆಯರು ಗಗ್ಗರಕಟ್ಟೆಯ ಮೇಲೆ  ಏರುಮುಖ ಮಾಡಿ ಶಾವಿಗೆ ಮಣೆಯನ್ನು ನಿಲ್ಲಿಸಿ, ಅದರ ಕೆಳಬದಿ ಒಂದಷ್ಟು ಹಾಸಿಗೆ, ತಲೆದಿಂಬನ್ನು ಇಟ್ಟು, ಕುದುರೆಯ ಮೇಲೆ ಸವಾರಿ ಮಾಡುವವರು ಹಾರಿ ಕುಳಿತುಕೊಳ್ಳುವಂತೆ ಕುಳಿತು, ಹದವಾಗಿ ಕಲಿಸಿದ ಹಿಟ್ಟಿನ ಉಂಡೆ ಮಾಡಿ ಶಾವಿಗೆ ಹೊಸೆಯಲು ಸುರು ಮಾಡುವದಿತ್ತು. ಮತ್ತೆ ಕೆಲವು ತಾಯಂದಿರು ಸೂರ್ಯ ಸಿಟ್ಟಿಗೇಳುವ ಮೊದಲೇ ಅಂಗಳಲ್ಲಿ ಹೊರಸು ಹಾಕಿ, ಇಲ್ಲವೇ ಮಾಳಿಗೆಯ ಮೇಲೆ ಬಟ್ಟೆ ಹಾಸಿ ಅದರ ಮೇಲೆ ಕುರಡಗಿ, ಸಂಡಗಿ, ಹಪ್ಪಳದಂಥ ದಿನಸುಗಳನ್ನು ಮಾಡಿ ಮುಗಿಸುವದಿತ್ತು. ಮತ್ತೂ ಕೆಲವರು ಹೊತ್ತು ನೆತ್ತಿಗೇರುವ ಮುನ್ನ ಅಡುಗೆ ಕೆಲಸ ಮುಗಿಸಿ, ಲ್ಯಾವಿ ಗಂಟನ್ನು  ಬಿಚ್ಚಿ ಕುಳಿತುಕೊಳ್ಳುವವರು. ಊಟ ಮುಗಿಸಿ ಅದೇ ಲ್ಯಾವಿ ಗಂಟಿನ ಮೇಲೆ ತಲೆಯಿಟ್ಟು ಒಂದೆರಡು ಜೊಂಪು ನಿ¨ªೆ ತೆಗೆದು, ಎದ್ದು ಕುಳಿತರೆ ಮಬ್ಬು ಕವಿಯುವವರೆಗೆ ಕೌದಿ ಹೊಲಿಯುವದಿತ್ತು. ಬೇಸಿಗೆಯಲ್ಲಿ ಮನೆಯೊಳಗಣ ಕೆಲಸಗಳೇ ಜಾಸ್ತಿ. ಹೊಲದÇÉಾದರೂ ಅಷ್ಟೆ. ಸೂರ್ಯ ನೆತ್ತಿಗೆ ಬರುವವರೆಗೆ ಮಾತ್ರ ಕೆಲಸ. ಮಧ್ಯಾಹ್ನದ ಬಿಸಿಲಲ್ಲಿ ಜನ-ದನಗಳೆರಡಕ್ಕೂ ಗಿಡಮರಗಳ ನೆರಳೇ ಆಸರೆ. ಅಂಥ ಆ ಗಿಡದ ನೆರಳೊಳಗೂ ಬಿಸಿಲ ಝಳ, ನೆರಳಲ್ಲಿ ಸುತ್ತಿ ಸುಳಿದು ಹೈರಾಣ ಮಾಡುವದಿತ್ತು. ಬಾವಿಯಲ್ಲಿ ಈಜಲು ಬಿದ್ದ ಮಕ್ಕಳು, ಹೊಲಸು ಬಾವಿಯಲ್ಲಿ ಬಿದ್ದ ಎಮ್ಮೆಗಳು ದಂಡೆಯ ಮೇಲೆ ನಿಂತು ಕÇÉೆಸೆದರೂ  ಮೇಲೇಳುವ ಮಾತೇ ಆಡುತ್ತಿರಲಿಲ್ಲ. ಆ  ಚುರ್‌ಗುಡುವ ಬಿಸಿಲೇ ಹಾಗಿರುತ್ತಿತ್ತು.  

ಬೇಸಿಗೆಯಲ್ಲಿ ಸಂಜೆಯಾಗುತ್ತಿದ್ದಂತೆ ಪುರುಷರು ಊಟ ಮುಗಿಸಿ ಬಗಲಲ್ಲಿ ಹಾಸಿಗೆ ಹಿಡಿದು ಮಾಳಿಗೆ ಏರುವುದು,  ಇಲ್ಲವೇ ಮನೆಯ ಹೊರಗಿನ ಕಟ್ಟೆಗೆ ನಡೆಯುವುದು, ಅಂಗಡಿ-ಮುಂಗಟ್ಟುಗಳ ಜಾಗೆಯಲ್ಲಿ ಮಲಗುವುದು. ಹಾಗೆ ಮಲಗಿದಾಗಲೂ ನಿ¨ªೆ ಬೀಳದಿ¨ªಾಗ ಎದ್ದು ಕುಳಿತು, ಅಕ್ಕಪಕ್ಕದವರೊಂದಿಗೆ ದೇಶಾವರಿ ಹರಟುವುದು. ಹರಟಿ ಹರಟಿ ಹೈರಾಣಾದ ಮೇಲೆ ಹಾಸಿಗೆಯಲ್ಲಿ ಹೊರಳುವುದು. ಹಾಗೆ ಹಾಸಿಗೆಯ ಮೇಲೆ ಮೈ ಚಾಚಿದರೂ  ಬೇಸಿಗೆಯಲ್ಲಿ ಗಾಢನಿ¨ªೆಯೇ ಅಪರೂಪ. ಅದೇನಿದ್ದರೂ ತುಂಡು ಗುತ್ತಿಗೆ ಥರ. ಕಟ್‌ ಕಟ್‌ ಆಗಿ ಬಿಟ್‌ ಬಿಟ್ಟು ಬೀಳೊ ಆ ನಿ¨ªೆಗೆ ಸುಂದರ ಸ್ವಪ್ನಗಳು ಕೂಡ ದುಬಾರಿಯಾಗಿರುತ್ತಿದ್ದವು. ರಾತ್ರಿಯಾಗಿ, ಬಿಸಿಲಳಿದರೂ ಅದರ ಧಗೆ ಕಡಿಮೆಯಾಗುತ್ತಿರಲಿಲ್ಲ. ಆ ಧಗೆ ಸಹಿಸದೇ ಬಯಲಿಗೆ ಬೀಳುವ ಪುರುಷರಂತೆ ಮಹಿಳೆಯರೂ ಮಾಳಿಗೆ ಏರುವದಿತ್ತು.

ವಯಸ್ಸಾದ ಮಹಿಳೆಯರು, ಮಾಳಿಗೆ ಏರಲಾಗದವರು ಅÇÉೇ ಅಂಗಳದಲ್ಲಿ ಮಲಗುವದಿತ್ತು. ಮಲಗುವ ಮುನ್ನ ತಯಾರಿಯದೇ ಒಂದು ಸಣ್ಣ ಸಡಗರ. ನಮ್ಮ ಮನೆಯ ಪಕ್ಕದÇÉೊಂದು ಪುರಸಭೆಯ ಮಾರುಕಟ್ಟೆಯಿತ್ತು. ಅದು ಹಗಲು ಹೊತ್ತು ತರಕಾರಿ ಮಾರುಕಟ್ಟೆ, ರಾತ್ರಿಯಾದರೆ ಆ ಓಣಿಯ ಜನರೆಲ್ಲ ಮಲಗುವ ಬಯಲು ಜಾಗ. ಅಕ್ಕಪಕ್ಕದ ಮನೆಯವರೆÇÉಾ ಸಂಜೆಯಾಗುತ್ತಿರುವಂತೆ ಒಂದು ಕಸಪೊರಕೆಯಿಂದ ತಾವು ಮಲಗುವ ಜಾಗವನ್ನು ಕಸಗುಡಿಸಿ, ನೀರು ಸಿಂಪಡಿಸಿ ರಿಸರ್ವ್‌ ಮಾಡಿಡುವದಿತ್ತು. ದೋಸೆ ಮಾಡುವಾಗ ಕಾದ ಹಂಚಿನ ಮೇಲೆ ನೀರ ಚಿಮಕಿಸಿದಂತೆ, ಗರಂ ಆಗಿರುವ ಜಾಗದ ಮೇಲೆ ನೀರು ಹಾಕಿದ ಮೇಲೆಯೂ ಅದು ನರಮ್‌ ಆಗದೇ ಬುಶ್‌… ಬುಶ್‌… ಎಂದು ಹೊಗೆ ಎಬ್ಬಿಸುತಿತ್ತು.  ಹಾಗೆ ನೀರು ಹೊಡೆದು ಅದರ ಮೇಲೊಂದು ಜಮಖಾನೆ ಇಲ್ಲವೇ ಚಾಪೆ ಹಾಸಿ ಬಂದರೆ ಮುಗಿಯಿತು, ಆ ಜಾಗ ರಿಸರ್ವ್‌ ಆದಂತೆ. ಮಿಕ್ಕ ಅನೇಕರು ಹಾಗೆಯೇ ರಿಸರ್ವ್‌ ಮಾಡುವದಿತ್ತು. ಕೆಲವರು ಮನೆಯ ಹೊರಗಡೆ ಹೊರಸು ಹಾಕಿ ಮಲಗುವವರು. ಈ ಹೊರಸು ಎನ್ನುವುದು ನಾರು ಹಗ್ಗದಿಂದ ಹೆಣೆಯಲಾಗಿರುತ್ತಿದ್ದ ಒಂದು ಮಂಚ.

ಹಾಗೆ ಹೊರಸು ಹೆಣೆಯುವುದು ಕೂಡಾ ಒಂದು ಕಲೆಗಾರಿಕೆ. ಒಂದೊಂದು ಕೇರಿಯಲ್ಲಿ ಒಬ್ಬರೋ ಇಬ್ಬರೋ ಹೊರಸು ಹೆಣೆಯುವವರಿರುತ್ತಿದ್ದ‌ರು. ಅವರ ಬೆನ್ನಿಗೆ ಬಿದ್ದು ಕರೆತಂದು ಹೊರಸು ಹೆಣೆಸುವದಿತ್ತು.

ಹಗಲು ಹೊತ್ತಿನಲ್ಲಿ ಕರ್ಫ್ಯೂ ವಿಧಿಸಿದಂತಿರುವ ಬಿಸಿಲಿನ ಕಾರಣಕ್ಕೆ ತಡರಾತ್ರಿಯವರೆಗೂ ಕೆಲಸಗಳು ಜೋರು. ನೀರು ತರುವ ಕೆಲಸವಂತೂ ನಿತ್ಯ ನಿರಂತರ ಎನ್ನುವಂತಿರುತ್ತಿತ್ತು. ಗಲ್ಲಿಗಳಲ್ಲಿ ಒಂದೇ ಮಾತು “ಆ ಕೇರಿಯ ಬೋರು ಶುರು ಮಾಡಿ¨ªಾರಾ? ಕೊಡಗಳ ಪಹಳಿ ದೊಡ್ಡದಿದೆಯೋ ಹೇಗೆ? ಎಷ್ಟು ಕೊಡ ಸಿಕು¤?’ ನೀರೆಯರ ಬಾಯಲ್ಲಿ ಬರೀ ನೀರಿನದೇ ಮಾತು. ರಾತ್ರಿ ಊಟ ಮುಗಿಸಿ ಮಾಳಿಗೆ ಏರಿದವರ ಮಾತುಗಳು ಅಲೆ ಅಲೆಯಾಗಿ ತೇಲಿ  ಬರುವಂತೆ ಕೆಲವೆಡೆ ಜಗಳಗಳೂ ಬೈಗುಳಗಳೂ ಕೇಳಿಬರುವದಿತ್ತು. ಇವುಗಳ ನಡುವೆ ಎದೆಯ ಗೂಡಲ್ಲಿ  ಕಫ‌ದಿಂದ ಹುತ್ತುಕಟ್ಟಿದ ಕಾರಣಕ್ಕೆ ಬಿಟ್ಟೂ ಬಿಡದೇ ಹಿಂಡುವ ಹಾಳು ಕೆಮ್ಮು ಹಳೆಯ ಕಾಲದ ಹಿಟ್ಟಿನ ಗಿರಣಿಗಳಂತೆ ಕುಹಕ್‌… ಕುಹಕ್‌… ಎಂದು ಸದ್ದು ಮಾಡುತ್ತಿತ್ತು. ಮಾತು-ಬೈಗುಳಗಳು ಹೂತು ಹೋದ ಮೇಲೆಯೂ ಉಳಿದದ್ದು ಕೇವಲ ಈ ಹಾಳು ಕೆಮ್ಮು ಮತ್ತು ಆಗಾಗ ಧಗೆಯ ಉಪಟಳಕ್ಕೆ “ಚಿರ್ರ’ ಎಂದು ಅರಚುವ ಎಳೆಯ ಕಂದಮ್ಮಗಳು. ಇಂತಿಪ್ಪ ಬೇಸಿಗೆಯಲ್ಲಿ ಗಾಢವಾದ ನಿ¨ªೆಯ ಅನುಭವವೇ ಒದಗುತ್ತಿರಲಿಲ್ಲ. ಹಾಗೆ ಮಲಗಿ ಹೀಗೆ ಎಚ್ಚರಾಗುವ ಕೋಳಿ ನಿ¨ªೆಯೇ ಜಾಸ್ತಿ. ಬೇಸಿಗೆಯಲ್ಲಿ ವ್ಯಾಪಾರವೂ ಕಡಿಮೆಯೇ. ಎಲ್ಲಿ ನಿಂತರೂ ಕುಳಿತರೂ ಸಮಾಧಾನವಾಗದೇ ಚಿತ್ರಮಂದಿರಕ್ಕೆ ತೆರಳುವದಿತ್ತು. ಈ ಬಿಸಿಲಿನ ತಾಪಕ್ಕೆ ಕೆಲ ಜೀವಜಂತುಗಳು ಬಿಲದಿಂದ ಬರಬರನೇ ಬಯಲಾಗುವದಿತ್ತು.

ಹಾವು-ಚೇಳು ಬೇಸಿಗೆಯಲ್ಲಿ ಬಯಲಾಗಿ ಅನೇಕರನ್ನು ಕಚ್ಚುವದಿತ್ತು. ನನಗೆ ನೆನಪಿರುವಂತೆ ನನ್ನ ಮನೆಯಲ್ಲಿ ಅತಿ ಹೆಚ್ಚು ಚೇಳು ಕುಟಿಕಿಸಿಕೊಂಡವಳು ನನ್ನವ್ವ. ಆಗ ನನ್ನ ಮನೆಯಲ್ಲಿ ಇನ್ನೂ ವಿದ್ಯುತ್‌ ಸಂಪರ್ಕ ಇರಲಿಲ್ಲ. ಪರಿಣಾಮವಾಗಿ ಮಬ್ಬು ಕವಿದ ಮೇಲೆ ಶುರುವಾಗುವ ಚಟುವಟಿಕೆಗಳಿಗೆ ಚಿಮಣಿ ಮತ್ತು ಕಂದಿಲೇ ಆಸರೆಯಾಗಿರುತ್ತಿದ್ದವು. ಅವ್ವ ನಸುಕಿನ ಜಾವದಲ್ಲೆದ್ದು  ನೀರು ಕಾಯಿಸಲೆಂದು ಒತ್ತಲಕ್ಕೆ  ಚಿಪಾಟಿ ತುರುಕಿ, ಪುಟು ಹಚ್ಚುವ ವೇಳೆಯಲ್ಲಿ ಚೇಳು ಕಡಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಅಕ್ಕಪಕ್ಕದ ಮನೆಯಲ್ಲಿ ಯಾರಾದರೂ ವಿಕಾರವಾಗಿ ಚೀರಿ ಅಳತೊಡಗಿದರೆ ಚೇಳು ಕಡಿದಿರಬಹುದು ಎನ್ನುವುದು ಗ್ಯಾರಂಟಿ. ನಾನೇ ಖು¨ªಾಗಿ ಮೂರ್ನಾಲ್ಕು ಬಾರಿ ಚೇಳು ಕುಟುಕಿಸಿಕೊಂಡದ್ದಿ¨ªೆ. ಅವೆಲ್ಲವೂ ಬಹುತೇಕವಾಗಿ ಕೆಂಪು ಚೇಳುಗಳು. ಕರಿ ಚೇಳು ನಮ್ಮಲ್ಲಿ ಕಡಿಮೆ.

ಒಂದು ಬಾರಿ ಚಪ್ಪಲಿ ಬಿಡುವ ಜಾಗೆಯಲ್ಲಿ ಕಟ್ಟೆಯ ಮೇಲೆ ಕುಳಿತು ಕಾಲು ಕೆಳಗೆ ಇಳಿಬಿಟ್ಟು ಕುಳಿತಿ¨ªೆ. ಆಗ ಬೆರಳತುದಿಯಲ್ಲಿ ಏನೋ ಹರಿದಾಡಿದ ಅನುಭವ. ಕಾಲು ಜಾಡಿಸುವದರೊಳಗೆ ಅದು ಕುಟುಕಿ ನಡೆದಿತ್ತು. 

ರಾತ್ರಿಯಿಡೀ ಅದರ ಹೊಡೆತಕ್ಕೆ ನಿ¨ªೆ ಮಾಡಲಾಗಿರಲಿಲ್ಲ. ಅದರ ನಂತರ ಅದು ಇನ್ನೊಂದು ರಾತ್ರಿ. ಆ ದಿನ ಮತ್ತೂಂದು ಹೊಡೆತ. ಆವತ್ತು  ನನ್ನ ಬಿ.ಎ. ಅಂತಿಮ ವರ್ಷದ ಪರೀಕ್ಷೆ ಮುಗಿದಿತ್ತು. ಗೆಳೆಯರೆಲ್ಲರೂ ಸೆಕೆಂಡ್‌ ಶೋ ಸಿನೆಮಾಗೆ ಹೋಗುವ ಬಗ್ಗೆ ನಿರ್ಧರಿಸಿಯಾಗಿತ್ತು. ಪರೀಕ್ಷೆಯ ಭಾರ ಇಳಿಸಿ ಹಗುರಾಗಿ¨ªೆ. ಅವ್ವ ಹುರಿದುಕೊಟ್ಟ  ಶೇಂಗಾ ಲುಂಗಿಯಲ್ಲಿ ಹಾಕಿಕೊಂಡು ತಿನ್ನುತ್ತ ಮನೆಯ ಹೊರಗಿನ ಕಟ್ಟೆಯ ಮೇಲೆ ಕುಳಿತಿ¨ªೆ. ಆಗ ಸಮಯ ಹೆಚ್ಚಾ ಕಡಿಮೆ ರಾತ್ರಿ ಎಂಟು ಗಂಟೆಯಾಗಿತ್ತು. ಪಕ್ಕದಲ್ಲಿ ಯಾರೂ ಇರಲಿಲ್ಲ. ನಾನೊಬ್ಬನೇ ಹಾಗೆ ಕತ್ತಲಲ್ಲಿ ಕುಳಿತು ಶೇಂಗಾ ತಿನ್ನುತ್ತಿ¨ªೆ. ಮಾಳಿಗೆಯ ಮೇಲಿನ ಕಂಬಿಯಿಂದ ಏನೋ ಜಾರಿ ನನ್ನ ಲುಂಗಿಯಲ್ಲಿದ್ದ ಶೇಂಗಾದಲ್ಲಿ ಬಿದ್ದಂಗಾಯ್ತು. ಕೈ ಹಾಕುವಷ್ಟರಲ್ಲಿ ಚಟಾರನೇ ಹೊಡೆದುಬಿಡು¤. ನಾನು ಆ ಹೊಡೆತಕ್ಕೆ ಕೈ ಝಾಡಿಸುತ್ತ ಜಿಗಿದುಬಿಟ್ಟೆ. ಹಾಗೆ ಕಡಿದದ್ದು ಚೇಳು ಎನ್ನುವುದು ಗೊತ್ತಾಗುವ ಮುನ್ನವೇ ಲುಂಗಿಯಲ್ಲಿದ್ದ ಶೇಂಗಾ ನೆಲದ ಮೇಲೆ ಚೆÇÉಾಪಿಲ್ಲಿಯಾಗಿ ಬಿ¨ªಾಗಿತ್ತು.

ವಿಚಿತ್ರವೆಂದರೆ, ನಮ್ಮ ಅಪ್ಪನೇ ಖು¨ªಾಗಿ ಚೇಳು ಕಡಿದಾಗ ಅದೆಂಥದೋ ಮಂತ್ರ ಹೇಳುತ್ತಿದ್ದ. ಬಹಳಷ್ಟು ಜನ ಬೇಸಿಗೆಯಲ್ಲಿ “ಕಾಕಾ ಅದಾರೇನ್ರಿ’ ಅಂತ ಕೈ ಝಾಡಿಸುತ್ತ ಮುಖ ಕಿವುಚುತ್ತ ಬರುವದನ್ನು ನೋಡಿಯೇ ಯಾವುದೋ ಚೇಳು ಕಡಿಸಿಕೊಂಡ ಗಿರಾಕಿ ಇರಬೇಕು ಎನ್ನುವುದು ಖಾತ್ರಿಯಾಗುತ್ತಿತ್ತು. ಅಪ್ಪ ಅದೇನು ಮಂತ್ರ ಹೇಳುತ್ತಿದ್ದನೋ ಗೊತ್ತಿಲ್ಲ. ಅವ್ವಗೂ ಅವನು ಹಾಗೆ ಮಂತ್ರ ಹಾಕುವುದು ಗೊತ್ತಿರಲಿಲ್ಲ. ಅವನು ಹಾಕುವ ಮಂತ್ರ ಬರೀ ಬೋಗಸ್‌ ಅಂತ ನನಗೆ ಆ ದಿನ ಚೇಳು ಕಡಿದಾಗಲೇ ಗೊತ್ತಾಗಿದ್ದು. ವಿಷ ಮೇಲೇರಿದ್ದು  ಬೇಗ ಇಳಿಯಲೇ ಇಲ್ಲ. ಮಲಗಿದರೆ ನಿ¨ªೆಯಂತೂ ಸಾಧ್ಯವೇ ಇಲ್ಲ . ಹಾಗಿರುವಾಗ ನೆಮ್ಮದಿಯಿಂದ ಸಿನೆಮಾ ನೋಡಲಾಗದಿದ್ದರೂ ಎರಡನೆ ಶೋ ಸಿನೆಮಾ ಬೆಟರ್‌ ಎಂದು ಗೆಳೆಯರೊಂದಿಗೆ ಸಿನೆಮಾ ನೋಡಿದೆ. 

ಹೀಗೆ ಬೇಸಿಗೆ ಅನ್ನೋದು ಹತ್ತಾರು ತಾಪತ್ರಯಗಳಿಗೆ ಕಾರಣವಾಗುವುದಿತ್ತು. ಕೆಲವೊಮ್ಮೆ ಹಳ್ಳಿಗಳಿಗೆ ಹೋದಾಗಂತೂ ದೊಡ್ಡ ಫ‌ಜೀತಿ. ಅಲ್ಲಿ ಮತ್ತೂ ರಣಗುಡುವ ಬಿಸಿಲು. ತೋಟದ ಬಾವಿಗಳಲ್ಲಿ ದುರ್ಯೋಧನನಂತೆ ಮುಳುಗಿ ಕುಳಿತರೂ ಸಮಾಧಾನವಾಗದ ಬಿಸಿಲು. ಬೇಸಿಗೆ ಅನ್ನೋದು ಬಾಳ ರೀತಿಯಲ್ಲಿ  ಬಸವಳಿಯುವಂತೆ ಮಾಡುತ್ತಿತ್ತು.

ಮನಿಯೊಳಗಿನ ಯಾವ ಸಾಮಾನು ಮುಟ್ಟದರೂ ಬಿಸಿ ಬಿಸಿ ಆಗಿರುತಿತ್ತು. ಯಾವುದಾದರೂ ಹೊಟೇಲಿಗೆ ತೆರಳಿ, “ರೀ ಬಿಸಿ ಏನೈತಿ’ ಅಂತ ಕೇಳೂವಂಗೇ ಇರಲಿಲ್ಲ. ಎಲ್ಲವೂ ಬಿಸಿ ಬಿಸಿ. ನಮ್ಮ ಮನೆಯಲ್ಲಿ ಆಗಿನ್ನೂ ಲೈಟ್‌ ಇರಲಿಲ್ಲ. ಅಂಥಾದ್ದರೊಳಗೆ ಫ್ಯಾನ್‌‌ ಎಲ್ಲಿಂದ ಬರಬೇಕು? ನಮ್ಮ ನೋಟ್‌ಬುಕ್‌ ಮ್ಯಾಲಿನ ರಟ್‌ ನನ್ನಂಥ ಹುಲುಮಾನವ ನಿಯಂತ್ರಿತ ಚಲಿಸುವ ಫ್ಯಾನ್‌ ಆಗಿ ಕೆಲಸ ಮಾಡುವದಿತ್ತು. ಮಲಗಿಕೊಂಡವರ ತಲೆದಿಂಬಿನ ಹತ್ತಿರ ಎಲ್ಲರ ಬಳಿ ಒಂದೊಂದು ಅಂಥಾ ಚಲಿಸುವ ರಟ್ಟಿನ ಫ್ಯಾನು ಇದ್ದೇ ಇರುತ್ತಿತ್ತು. ಒಂದು ಕೈಯಲ್ಲಿ ಆ ರಟ್ಟಿನ ಫ್ಯಾನು ಅÇÉಾಡಿಸಿ ಅÇÉಾಡಿಸಿ ಕೈಸೋತು ಸುಸ್ತಾಗಿಯೇ ನಿ¨ªೆ ಹೋಗುವುದಿತ್ತು. ಈ ಬಾರಿಯ ಬಿಸಿಲು ಭಯಂಕರವಾಗಿತ್ತು. ಧಾರವಾಡದಂತಹ ತಂಪು ಪ್ರದೇಶವೂ ಈ ಬಾರಿ ಬೆಂಕಿಯುಂಡೆಯಾಗಿತ್ತು. ಈ ಧಾರವಾಡವೇ ಹೀಗಿರಲು ಇನ್ನು ನನ್ನೂರು ಮೊದಲೇ ಬೆಂಕಿ, ಅದು ಹೇಗಿರಬೇಡ ಎನ್ನುವುದನ್ನು ನೆನಪು ಮಾಡಿಕೊಂಡಾಗ ಈ ಬಿಸಿಲಿನಿಂದ ಬಸವಳಿದ ಆ ದಿನಗಳು ನೆನಪಾದವು.

– ಎಸ್‌. ಬಿ. ಜೋಗುರ

ಟಾಪ್ ನ್ಯೂಸ್

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.