ನವಭಾರತದ ಉದ್ಯೋಗ ಪರ್ವ


Team Udayavani, Aug 20, 2017, 7:30 AM IST

lead.jpg

ಉದ್ಯೋಗಂ ಪುರುಷ ಲಕ್ಷಣಂ. 
ಪುರುಷ ಉದ್ಯೋಗಕ್ಕೆ ಹೋಗುವ ಹಿಂದೆ ಅದೊಂದೇ ಕಾರಣವಿರಬಹುದು. 
ಆದರೆ, ಹೆಣ್ಣು ಕೆಲಸಕ್ಕೆ ಹೋಗುವ ಹಿಂದೆ ಎಷ್ಟೊಂದು ಕಾರಣಗಳಿವೆ !

ಸಾಮಾನ್ಯವಾಗಿ ಪ್ರಖ್ಯಾತ ಬರಹಗಾರರು ನಾನೇಕೆ ಬರೆಯುತ್ತೇನೆ? ಅಂತ ಒಂದು ಕೃತಿ ಬರೆಯುತ್ತಾರೆ. ಹಾಗೆಯೇ, ನಾನೇಕೆ ಕೆಲಸ ಮಾಡ್ತೇನೆ ಎಂಬ ವಿಷಯ ನನ್ನನ್ನು ಬಹಳ ದಿನದಿಂದ ಕಾಡುತ್ತಿತ್ತು.  ಇಲ್ಲಿ “ನಾನು’ ಎಂದರೆ ಕೇವಲ ನಾನಲ್ಲ … ನನ್ನ ಸುತ್ತಮುತ್ತ ಇರುವ ಹೆಂಗಳೆಯರು ಎಲ್ಲ! ನನ್ನ ಮನದಲ್ಲಿ ಬಹಳ ದಿನದಿಂದ ಹರಳುಗಟ್ಟಿದ ಸಂಗತಿಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ಕೆಲವು ಪ್ರಸಂಗಗಳನ್ನು ಯಥಾಪ್ರಕಾರ ನಿರೂಪಿಸಿದ್ದೇನೆಯೇ ಹೊರತು ನನ್ನ ವೈಯಕ್ತಿಕ ಅಭಿಪ್ರಾಯ ಮಂಡಿಸುವ ಪ್ರಯತ್ನವನ್ನು ಮಾಡಿಲ್ಲ. 

ಕತೆ ಒಂದು 
ನಾನೇಕೆ ಕೆಲಸಕ್ಕೆ ಬರ್ತೀನೋ ನಂಗೇ ಗೊತ್ತಿಲ್ಲ. ಹಣದ ಆವಶ್ಯಕತೆ ನಂಗಿಲ್ಲ. ಆದರೆ ನನ್ನ ಮಗಳು ಬೆಳೆದು ದೊಡ್ಡವಳಾದ ಮೇಲೆ, “ಮಮ್ಮಿ ನೀನು ಇಷ್ಟು ಕ್ವಾಲಿಫೈಡ್‌ ಆಗಿ ಕೆಲಸಕ್ಕೆ ಹೋಗದೆ ಮನೇಲಿ ಯಾಕೆ ಉಳಿದೆ?’ ಅಂತ ಒಂದೊಮ್ಮೆ ಕೇಳಿದರೆ…’ ಅಂತ ನಗ್ತಾಳೆ ಉಷಾ.  ಕೆಲಸದ ವೇಳೆ ಬಿಡುವು ಸಿಕ್ಕಾಗಲೆಲ್ಲ ಆನ್‌ಲೈನ್‌ ಶಾಪಿಂಗ್‌ನಲ್ಲಿ ತೊಡಗಿಸಿಕೊಳ್ಳುವಾಗ, ಅವಳ ಐದು ವರ್ಷದ ಮಗಳು ಕರೆ ಮಾಡಿ, “ಗುಡ್‌ ಟೈಮ್‌ ಟು ಟಾಕ್‌?’ ಅಂತ ಕಾರ್ಪೊರೇಟ್‌ ಸ್ಟೈಲ್‌ನಲ್ಲಿ  ಕೇಳುತ್ತಾಳೆ. “ಎಸ್‌ ಗೋ ಅಹೆಡ್‌’ ಅಂತ ಹೇಳುತ್ತಾಳೆ ಇವಳು. ಖುದ್ದು ತನ್ನ ಜೀವನವನ್ನೇ ಸೀರಿಯಸ್‌ ಆಗಿ ತೆಗೆದುಕೊಳ್ಳದ, ಚಂಚಲ ಮನಸ್ಸಿನ ಇವಳು ಕೆಲಸದ ಬಗ್ಗೆ ಇನ್ನು ಎಂಥ ನಿಲುವು ತಾಳಲು ಸಾಧ್ಯ?  

ಕತೆ ಎರಡು
ಐರನ್ನಮ್ಮ –  ಒಂದು ಕಾಲದಲ್ಲಿ ಹಗಲು ರಾತ್ರಿ ಲೆಕ್ಕಿಸದೆ ಐರನ್‌ ಮಾಡ್ತಿದ್ದಳು. ಮೂರು ಲಕ್ಷದ ಚೀಟಿ ಹಾಕಿ, ಅದನ್ನು  ಅವಳ ಪರಿಚಯಸ್ಥರೇ ಲಪಟಾಯಿಸಿ ನುಂಗಿ ಹಾಕಿದಾಗ ಆದ ಆಘಾತದಿಂದ ಮೂಲೆ ಸೇರಿದಳು. ಎರಡನೆಯ ಮದುವೆ ಮಾಡಿಕೊಂಡು ಬೇರೆ ವಸತಿ ಹೂಡಿದ್ದರೂ ಪ್ರತಿದಿನ ಕುಡಿಯಲು ಹಣ ಬೇಡಲು ಬರ್ತಿದ್ದ ಗಂಡ, ಖರ್ಚಿಗೆ ದುಡ್ಡು ಪೀಕುತ್ತಿದ್ದ ಮಕ್ಕಳು- ಯಾರೂ ಅವಳತ್ತ ತಿರುಗಿ ನೋಡಲಿಲ್ಲ.  ಐರನ್ನಮ್ಮ ಚೇತರಿಸಿಕೊಂಡು ಎದ್ದಳು. ಈಗ ತನ್ನ ಊಟಕ್ಕೆ, ವಸತಿಗೆ ಎಷ್ಟು ಬೇಕೋ ಅಷ್ಟು ದುಡೀತಾಳೆ. ದಿನಾಲೂ ಐರನ್‌ ಬಾಕ್ಸ್‌ ಗೆ ಇದ್ದಲು ಹಾಕಿ ಕೆಂಡ ಮಾಡಲೇಬೇಕೆಂಬ ಕ್ರಮ ಇಟ್ಟುಕೊಂಡಿಲ್ಲ.  ಹೇಳಿಕೇಳಿ, ಒಬ್ಬಳಿಗೆ ಎಷ್ಟು ಬೇಕು? ಆರು ತಿಂಗಳಿಗೊಮ್ಮೆ ಮೂರ್ನಾಲ್ಕು ಸಾವಿರ ರೂಪಾಯಿ ಒಟ್ಟು ಮಾಡಿ ಮೊಮ್ಮಕ್ಕಳಿಗೆ ಹೊಸ ಅಂಗಿ, ಫ್ರಾಕು, ಮಿಠಾಯಿ, ಆಟದ ಸಾಮಾನು ಖರೀದಿಸಿ, ಹಳ್ಳಿಗೆ ಹೋಗಿ ಅವರೊಂದಿಗೆ ನಾಲ್ಕು ದಿನ ಖುಷಿಯಾಗಿ ಕಳೆದು ಬರ್ತಾಳೆ.  ಗಂಡ- ಮಕ್ಕಳು ಈಗ ಗದರಿಸಿದರೂ ಗೋಗರೆದರೂ ಅವಳ ಬಳಿ ಹಣವಿಲ್ಲ. ಆವಶ್ಯಕತೆಗಿಂತ ಹೆಚ್ಚು ಹಣ ದುಡಿಯಲು ಹೋದಾಗ ಆದ ಒತ್ತಡವನ್ನು ಅವಳು ಮರೆಯಲಾರಳು. ಐರನ್‌ ಮಾಡದ ದಿನ ಅಂಗೈಯಗಲದ ಮೆಟ್ಟಿಲ ಕೆಳಗಿನ ಮನೆಯಲ್ಲಿ ಟಿವಿ ನೋಡ್ಕೊಂಡು ಆರಾಮವಾಗಿರ್ತಾಳೆ. 

ಕತೆ ಮೂರು
ಅನಾರೋಗ್ಯದ ನಿಮಿತ್ತ ಅಡುಗೆಯವಳ‌ನ್ನು ಇಟ್ಟುಕೊಂಡಳು ರೇಖಾ. ಅಡುಗೆಯಾಕೆ ಇವಳು ಕೊಡೋ ಸಂಬಳದÇÉೇ ತನ್ನ ಹಾಗೂ ಮಗಳ ಜೀವನ ನಡೀಬೇಕು ಎಂದಳು. ಆರು ತಿಂಗಳು ಕಳೆಯಿತು. ರೇಖಾಳಿಗೂ ಸ್ವಲ್ಪ ನಿರಾಳ ಅನ್ನಿಸಿತು. ಒಂದೇ ಉಸುರಿಗೆ ಅಡುಗೆ ಮಾಡಿ ಆಫೀಸಿಗೆ ಹೋಗೋ ಧಾವಂತ ತಪ್ಪಿತು. ಅಷ್ಟರಲ್ಲಿ ಒಂದು ರಾತ್ರಿ ಆಕೆ ಕೆಲಸ ಬಿಟ್ಟಳು. ರೇಖಾ ಗೊಂದಲಕ್ಕೆ ಬಿದ್ದಳು. ಅರೆ, ಆ ಅಡುಗೆ ಕೆಲಸದವಳು ಜೀವನಕ್ಕೆ ಏನು ಮಾಡ್ತಾಳೆ? ಆದರೆ, ಅದಕ್ಕೂ ಮೀರಿ ಇನ್ನೊಂದು ವಿಚಾರ ಅವಳನ್ನು ಕಾಡತೊಡಗಿತು. ಎಷ್ಟು ಸುಲಭವಾಗಿ ಕೆಲಸ ಬಿಟ್ಟುಬಿಟ್ಟಳು! ನಾನೇಕೆ ಹಾಗೆ ಮಾಡಲಾಗುತ್ತಿಲ್ಲ? ಕೆಲಸ ಬಿಡಲು ಮನಸ್ಸಿಲ್ಲವೆ? ಭಯವೆ? ಆತಂಕವೆ? ಒಂದು ಮಟ್ಟದ ಉನ್ನತ ಜೀವನ ಶೈಲಿಗೆ ಹೊಂದಿಕೊಂಡಿರುವ ದೇಹ-ಮನ ಅದಕ್ಕಿಂತ ಕಡಿಮೆಗೆ ಇಳಿಯಲು ಸಹಕರಿಸದೆ?

ಮನೆ ಕೆಲಸದವಳ ಮುಂದೆ ತನ್ನ ಆತ್ಮನಿವೇದನೆ ಮಾಡಿಕೊಂಡಳು. “”ಅಯ್ಯೋ ಹೌದಕ್ಕಾ…. ಅಡಿಗೆಯವರು  ಇದ್ದಿದ್ರೆ ನಿಮ್ಗೆ ಸುಲಭವಾಗಿ ರೋದು” ಎಂದು ಪ್ರತಿಕ್ರಿಯಿಸಿದ ಮನೆಗೆಲಸದಾಕೆ ಮುಂದುವರಿಸಿ, “”ತಾಯಮ್ಮ, ಈವಕ್ಕಂಗೇನು ಕಮ್ಮಿ ಐತೆ ಅಂತ ಕೆಲ್ಸಕ್ಕೆ ಓಗ್ಬೇಕು. ಅಣ್ಣ ಕೈ ತುಂಬಾ ಸಂಪಾದಿಸ್ತಾರೆ. ಈಗ ಮಗ ಬೇರೆ ದುಡೀತಾನೆ. ಈವಕ್ಕ ದುಡಿಯೋ ಅರ್ಧ ಸಂಬಳ ಮನ್ಯಾಗೆ ಆಳು- ಕಾಳು, ಆಟೋ ಕ್ಯಾಬು. ಬಟ್ಟೆ-ಬರೆ ಅಂತ ಖರ್ಚಾಗ್ತದೆ. ಮ್ಯಾಕೆ ಕಾಯಿಲೆಗೆ ಔಷಧಿ ಖರ್ಚು ಬ್ಯಾರೆ. ಸುಮೆR ಮನೇಲಿ ಶಿವಾ ಅಂತ ಇರಾಕಾಗಕಿಲ್ವಾ ? ನಮಗಾದ್ರೆ ಗೇಯೊRಂಡು ತಿನ್ನದೇ ವಿಧಿ ಇಲ್ಲ …”

ಕತೆ ನಾಲ್ಕು 
“ಇಂಥ ಕಾಯಿಲೆ ಇದೆ ಅಂತ ಗೊತ್ತೆ ಇರಲಿಲ್ಲ.  ಅದು ಎಲ್ಲರನ್ನು ಬಿಟ್ಟು ನಂಗೆ ಆಗ್ಬೇಕಾ?’ ಈ ಮಾತು ಮಾನಸಿ ತನಗೆ ತಾನೇ ಅದೆಷ್ಟು ಸಲ ಹೇಳಿಕೊಂಡಿ¨ªಾಳ್ಳೋ.  ಎಲ್ಲವೂ ಚೆನ್ನಾಗಿಯೇ ನಡೀತಿತ್ತು. ಸಿ. ಎ. ಪರೀಕ್ಷೆ ಮುಗಿದೊಡನೆ ಬಹುರಾಷ್ಟೀಯ ಕಂಪೆನಿಯಲ್ಲಿ ಕೆಲಸ ಕೂಡ ಸಿಕ್ಕಿತು. ಒಂದೆರಡು ವರ್ಷದÇÉೇ ತನ್ನದೇ ಅಪಾರ್ಟ್‌ಮೆಂಟ್‌, ಕಾರು  ಎಲ್ಲ ಆಯಿತು. ಅಷ್ಟರಲ್ಲಿ ವಿಕಾಸ್‌ನ ಪರಿಚಯವೂ ಆಯಿತು. ಮನೆಯವರ ಒಪ್ಪಿಗೆ ಪಡೆದು ಮದುವೆಯೂ ಆಯಿತು.

ಎಲ್ಲ ಕನಸಿನಲ್ಲಿ ನಡೆದಂತೆ ನಡೆದುಹೋಯಿತು. ವಿಕಾಸ್‌ ಈಗಾಗಲೇ ಕೊಂಡಿದ್ದ ಲೇಕ್‌ವ್ಯೂ ಅಪಾರ್ಟ್‌ ಮೆಂಟ್‌ ಅವಳದ್ದಕ್ಕಿಂತ ಉತ್ತಮವಾಗಿತ್ತು. ಲಿಫ್ಟ್ , ಸೆಕ್ಯೂರಿಟಿ ಎಲ್ಲ ಸೌಕರ್ಯ ಇತ್ತು.  ಹೀಗಾಗಿ, ಇವಳ ಮನೆ ಬಾಡಿಗೆಗೆ ಕೊಟ್ಟು ವಿಕಾಸ್‌ನ ಜೊತೆಗೆೆ ಬಾಳ್ವೆ  ಶುರು ಮಾಡಿದಳು. ಸಣ್ಣದಾಗಿ ಕಾಡುತ್ತಿದ್ದ ಹೊಟ್ಟೆನೋವು ಮೊದಮೊದಲು ನಿರ್ಲಕ್ಷ್ಯ ಮಾಡಿದಳು.  ಒಂದು ದಿನ ಇನ್ನೇನು ಸತ್ತೇ ಹೋಗ್ತಿàನಿ ಅನ್ನೋ ನೋವು ಬಂದು ಡಾಕ್ಟರರ ಬಳಿ ಹೋಗೋದರಲ್ಲಿ ತಡವಾಗಿತ್ತು. ಲಿವರ್‌ ಕಾಯಿಲೆಗೆ ತುತ್ತಾಗಿತ್ತು.  ಹೇಗೆ ಏನು ಎಂಬ ಅಂದಾಜಿಲ್ಲ. “”ಯಾರಾದರೂ ನಿಮ್ಮ ದೇಹಕ್ಕೆ ಹೊಂದುವಂಥ ಲಿವರ್‌ ಡೊನೇಟ್‌ ಮಾಡಿದ್ರೆ, ಶಸ್ತ್ರಚಿಕಿತ್ಸೆ ಮೂಲಕ ಅದನ್ನು  ಅಳವಡಿಸಬಹುದು” ಎಂದರು ಡಾಕ್ಟರ್‌.

“”ಹಾØಂ…  ಇಡೀ ಲಿವರ್‌ ಕೊಡುವ ಆವಶ್ಯಕತೆ ಇಲ್ಲ . ಒಂದು ಭಾಗ ಕೊಟ್ಟರೆ ಸಾಕು.  ಕಾಲಕ್ರಮೇಣ ಅದು ದಾನಿ ಹಾಗೂ ಅವಳ  ದೇಹದಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಳೆಯುತ್ತೆ” ಎಂಬ ಆಶ್ವಾಸನೆ  ಕೊಟ್ಟರು. ಅಬ್ಟಾ ! ಎಂತ ಅದ್ಭುತ ! ವಿಜ್ಞಾನ- ತಂತ್ರಜ್ಞಾನ ಇಷ್ಟು ಮುಂದುವರೆದಿದೆಯಾ?  ಆದರೆ ಲಿವರ್‌ ದಾನ ಮಾಡೋರು ಯಾರು? ನಡುಪ್ರಾಯದ ಅವರ ದೂರದ ಬಳಗದಲ್ಲಿ ಒಬ್ಟಾಕೆ ಮುಂದೆ ಬಂದರು. ಅಂಗಾಂಗ ಕಸಿಗೆ ಸಂಬಂಧಿಸಿದ ಕಾಯಿದೆಯ ಎಡರು- ತೊಡರು ಎದುರಿಸುವಷ್ಟರಲ್ಲಿ ಮಾನಸಿ ಅಪ್ರಜ್ಞಾವಸ್ಥೆಗೆ ಜಾರಿಹೋದಳು. ಏರ್‌ ಆಂಬುಲೆನ್ಸ್‌ನಲ್ಲಿ ಅವಳನ್ನು ಕೇರಳಕ್ಕೆ ವರ್ಗಾಯಿಸಿದ ವಿಕಾಸ ಅಂತೂ ಇಂತೂ ಅವಳನ್ನು ಉಳಿಸಿಕೊಂಡ. ಇಷ್ಟರಲ್ಲಿ ಅವರ ಇನ್ಶೂರೆನ್ಸ್‌ ಹಣ, ಉಳಿತಾಯ ಎಲ್ಲ ಕರಗಿ ಹೋಯಿತು. ವಿಕಾಸ್‌ ಅವಳ ಅಪಾರ್ಟ್‌ಮೆಂಟ್‌ ಮಾರಿಬಿಡೋಣ ಅಂತ ಪ್ರಯತ್ನಿಸಿದ. ಆಧುನಿಕ ಸೌಕರ್ಯಗಳಿಲ್ಲದ್ದರಿಂದ ಅದನ್ನು ಕೇಳುವವರೇ ಇಲ್ಲ. ಅಡ್ಡ ಪರಿಣಾಮವಾಗಿ ಬಿಪಿ, ಶುಗರ್‌ ಬಂತು. ಇದೆಲ್ಲದರ ಹೊರತಾಗಿಯೂ ಮಾನಸಿ ನಿಧಾನವಾಗಿ ಚೇತರಿಸಿಕೊಂಡಳು. ಮತ್ತೆ ಕೆಲಸಕ್ಕೆ ಹೋಗಲು ಅಣಿಯಾದಳು. ಜೀವಕ್ಕೆ ಜೀವ ಕೊಟ್ಟು ತನ್ನನ್ನು ಉಳಿಸಿಕೊಂಡ ವಿಕಾಸನಿಗೆ ಹೆಗಲು ಕೊಡಲು ನಿರ್ಧರಿಸಿದಳು. ಹಾಗೆ ಅವಳ ಉದ್ಯೋಗ ಪರ್ವ ಮುಂದುವರಿಯಿತು.

ಕತೆ ಐದು 
ಮು¨ªಾದ ಅವಳಿ ಮಕ್ಕಳ ತಾಯಿ ಆಶಾ. ಮನೆಯಲ್ಲಿ ಕೆಲಸಕ್ಕೆ ಹೋಗಲೇಬೇಕೆಂಬ ಒತ್ತಾಯವಿಲ್ಲ . ಆದರೆ ತುಂಬು ಕುಟುಂಬ. ಅತ್ತೆ- ಮಾವ, ಸರಿಯಾದ ಕೆಲಸವಿಲ್ಲದ ಭಾವನವರು, ಕೆಲಸಕ್ಕೆ ಹೋಗದ ಓರಗಿತ್ತಿ. ಮಕ್ಕಳಿಗೆ ಒಳ್ಳೊಳ್ಳೆಯ ಉಡುಗೆ- ತೊಡುಗೆ ಹಾಕಬೇಕು, ಇಂಟರ್‌ನ್ಯಾಷನಲ್‌ ಸ್ಕೂಲಿಗೆ ಸೇರಿಸಬೇಕೆಂಬ ಹಂಬಲ ಆಶಾಳಿಗೆ. ಅಂಬೇಡ್ಕರ್‌ ಯಾವ ಶಾಲೆಯಲ್ಲಿ ಓದಿದ್ರು?  ಈ ವಯಸ್ಸಿಗೆ ಮಕ್ಕಳಿಗೆ ಶೂ ಯಾಕೆ? ನಾವು ಚಪ್ಪಲಿ ಹಾಕಿಕೊಂಡೇ ಬೆಳೆಯಲಿಲ್ಲವಾ… ಹೀಗೆಲ್ಲ ಗಂಡನ ವಾದ. ತಾನೇ ಕೆಲಸ ಮಾಡಿ ಮಕ್ಕಳಿಗೆ ಈ ಎಲ್ಲ ಸೌಕರ್ಯ ನೀಡಲು ಆಶಾ ಮುಂದಾದಳು. ಇದನ್ನು  ಪರೋಕ್ಷವಾಗಿ ವಿರೋಧಿಸಿದ ಮನೆಯವರು ಮಕ್ಕಳ ಆರೈಕೆಗೆ ವಿಶೇಷ ಕಾಳಜಿ ವಹಿಸಲಿಲ್ಲ.  ಹೀಗಾಗಿ, ಮಕ್ಕಳನ್ನು ನೋಡಿಕೊಳ್ಳಲು ಆಯಾ ಬಂದಳು. ಅವಳಿ ಮಕ್ಕಳಲ್ಲಿ ಮಗಳು ಚೂಟಿ. ಮಗ ಸ್ವಲ್ಪ ಆರೋಗ್ಯದಲ್ಲಿ ಹಿಂದು. ಮೃದು ಸ್ವಭಾವ. ಅಂದು ತಿಂಗಳ ಕೊನೆಯ ದಿನ. ಆಫೀಸಿನಲ್ಲಿ ಕೆಲಸ ಹೆಚ್ಚು. ಮನೆ ತಲುಪೋದು ತಡ ಆಗುತ್ತಿತ್ತು. ಮಗ ಅವಳ ಮೊಬೈಲಿಗೆ ಕರೆ ಮಾಡಿ ಖುಷಿಯಾಗಿ, “”ಮಮ್ಮ ನಾನು ಈ ಸಲ ಕ್ಲಾಸಿನಲ್ಲಿ  ಸ್ಟಾರ್‌ ಆಫ್ ದ ವೀಕ್‌ ! ಬರ್ತಾ ಚಾಕೊಲೇಟ್‌  ತಗೊಂಬಾ.  ಮ್ಯಾಮ್‌ ಹೇಳಿ¨ªಾರೆ.  ಕ್ಲಾಸಿನಲ್ಲಿ  ಎಲ್ಲರಿಗೂ ಕೊಡ್ಬೇಕು ಅಂತ. ಇವತ್ತು ಬೇಗ ಬರ್ತಿಯಾ? ನಂಗೆ ಮಮ್ಮ  ಒಂದಿನ ಬೆಳಕಿರೋವಾಗಲೇ  ಬರ್ಬೇಕು. ತುಂಬಾ ಆಟ ಆಡ್ಬೇಕು ಅಂತ ಅನಿಸ್ತಾ ಇದೆ” ಎಂದು ಇನ್ನು ಟೈಮ್‌ ನೋಡಲು ಬಾರದ ಪುಟ್ಟ ಪೋರ, ಬೆಳಕು- ಕತ್ತಲೆಯ ಅಂದಾಜಿನÇÉೇ ಹೇಳಿದಾಗ ಆಶಾಳಿಗೆ ಅಪರಾಧಿಭಾವ ಕಾಡುತ್ತದೆ.  

ಜೊತೆಜೊತೆಗೆ ಇಂದು ತನ್ನ ಮಕ್ಕಳ ಬೇಡಿಕೆಗಳು ಸಣ್ಣವು.  ಚಾಕೊಲೇಟ್‌ ಕೊಡಿಸಿದರೆ  ತೀರುತ್ತೆ. ಆದರೆ  ಮುಂದೆ? ಅವರ ಆಶಯಗಳನ್ನು ತೀರಿಸಲು ತನ್ನ ಬಳಿ ಹಣ ಬೇಡವೇ ಎಂದು ನಿಡುಸುಯ್ತಾಳೆ.  

ಕತೆ ಆರು 
ತನಗೆ ಮದುವೆ ಆಗೋದೇ ಇಲ್ಲ ಅಂತ  ಶ್ವೇತಾ ನಿರ್ಧರಿಸಿಬಿಟ್ಟಿದ್ದಳು. ಮೂರು ಹೆಣ್ಣು ಮಕ್ಕಳ ಪೈಕಿ ಇವಳೇ ಚಿಕ್ಕೊಳು. ವಯಸ್ಸಾದ ತಂದೆ-ತಾಯಿ. ಅಂತೂ ಒಳ್ಳೆಯ ಕಡೆ ಸಂಬಂಧ ಕುದುರಿ ಮದುವೆ ಆಯ್ತು.  ವಯಸ್ಸು ಹೆಚ್ಚಾದ್ದರಿಂದ ಮಗು ಆಗೋದು ಕಷ್ಟ ಆಯಿತು. ಮೊದಲಿನಿಂದ ಮಕ್ಕಳೆಂದರೆ ಅವಳಿಗೆ ಹುಚ್ಚು ಪ್ರೀತಿ. ಅಕ್ಕಂದಿರ ಮಕ್ಕಳನ್ನು ತನ್ನ ಮಕ್ಕಳಿಗಿಂತ ಹೆಚ್ಚಾಗಿ ಸಾಕಿದ ತಾಯಿಯವಳು. ಮಗು ಬೇಕೇಬೇಕೆಂದು ಅವಳು ಹಠಕ್ಕೆ ಬಿದ್ದು  ಕೆಲಸಕ್ಕೆ ದೀರ್ಘ‌ ರಜೆ ಹಾಕಿದಳು. ತೂಕ ಇಳಿಸಿಕೊಂಡಳು. ಕಡೆಗೂ ಮು¨ªಾದ ಹೆಣ್ಣು ಮಗು ಹುಟ್ಟಿತು. ಅಷ್ಟರಲ್ಲಿ ತಾಯಿ ತೀರಿಕೊಂಡರು. ತಂದೆಯನ್ನು ತನ್ನ ಮನೆಯಲ್ಲಿಯೇ ಇಟ್ಟುಕೊಂಡಳು. ಈಗಾಗಲೇ ಅವಿಭಕ್ತ ಕುಟುಂಬದಲ್ಲಿ ಮನೆ, ತುಂಬ ಜನ. ಜಾಗ ಸಾಲದು ಅನ್ನೋದಕ್ಕಿಂತ ಹೊಂದಾಣಿಕೆ ಸಾಲದು ಅನ್ನಬಹುದು. ಮದುವೆಗೆ ಮುಂಚೆ ಕೊಂಡಿದ್ದ ಸೈಟಿನಲ್ಲಿ ಶ್ವೇತಾ ಮನೆ ಕಟ್ಟಿಸಿದಳು- ತನ್ನದೇ ಮನೆಯಾದರೆ ಅಪ್ಪನನ್ನು ಇಟ್ಟುಕೊಳ್ಳಲು ಅಡ್ಡಿಯಿಲ್ಲ ಅಂತ. ಅಷ್ಟರಲ್ಲಿ ಅಪ್ಪನಿಗೆ ಪಾರ್ಶ್ವವಾಯು ಆಯಿತು. ಅವರನ್ನು ನೋಡಿಕೊಳ್ಳಲು ಎರಡು ಪಾಳಿಯಲ್ಲಿ ಮೇಲ್‌ನರ್ಸ್‌ಗಳ ನೇಮಕವಾಯಿತು. ಖರ್ಚಿನ ಮೇಲೆ ಖರ್ಚು, ಇದರ ಮೇಲೆ ಮನೆ ಸಾಲ. ಆಫೀಸಿನಲ್ಲಿ “ವರ್ಕ್‌ ಫ‌Åಮ್‌ ಹೋಂ ಆಪ್ಷನ್‌’ ಕೇಳಿದಳು.

ಹೇಗೋ ಕೆಲಸ ನಡೆಯುತ್ತಿದೆ. ನಿಧಾನವಾಗಿ ಸಂಸ್ಥೆಯಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಇನ್ನು ಮುಂದೆ ಎಲ್ಲರೂ ಆಫೀಸಿಗೆ ಬರಲೇ ಬೇಕು ಎಂಬ ನಿಯಮ ಬರುವುದಕ್ಕಿದೆ ಎಂಬ ವದಂತಿ ಹಬ್ಬುತ್ತದೆ. ಪ್ರೀತಿಯಿಂದ ಹಡೆದ ಕೂಸು. ಆ ಕೂಸಿನಷ್ಟೇ ಅಸಹಾಯಕ ಅಪ್ಪ !  ತನ್ನ ಸ್ವಾಭಿಮಾನಕ್ಕಾದರೂ ಕೆಲಸಕ್ಕೆ  ಹೋಗಲೇಬೇಕಾದ ಪರಿಸ್ಥಿತಿ ಏರ್ಪಡುತ್ತದೆ. ಇನ್ನೊಂದೆರಡು ವರ್ಷ ಹೀಗೆ ಮನೆಯಿಂದ ಕೆಲಸ ಮಾಡುವಂತಾದರೆ ಅಷ್ಟರಲ್ಲಿ ಮಗಳು ಸ್ಕೂಲಿಗೆ ಹೋಗುತ್ತಾಳೆ. ಅಪ್ಪನೂ ಚೇತರಿಸಿಕೊಳ್ಳಬಹುದು. ತನ್ನ ಹೊಸ ಮ್ಯಾನೇಜರ್‌, “ವರ್ಕ್‌ ಫ‌Åಮ್‌ ಹೋಂ’ ಮಾಡಲು ಅವಕಾಶ ಕೊಡಬಹುದೇ ಎಂಬ ಆಶಾಭಾವ ಶ್ವೇತಾಳದ್ದು.  

ಕತೆ ಏಳು 
ಈ ಹೌಸ್‌ ಕೀಪಿಂಗ್‌ ಲೇಡೀಸ್‌ ನೋಡಿದ್ರೆ ಅಯ್ಯೋ ಪಾಪ ಅನ್ನಿಸುತ್ತೆ. ಅವರ ಪರಿಸ್ಥಿತಿ ಹೇಗೆಂದರೆ, ಅರಮನೆಯ ಅಂತಃಪುರದಲ್ಲಿ ಕೆಲಸ ಮಾಡುತ್ತಿದ್ದ ಚೇಟಿಯರ ಅಥವಾ ಸೇವಕಿಯರ ತರಹ. ರಾಣಿಯೋ ಯುವರಾಣಿಯೋ ಆಜ್ಞೆ ಮಾಡಿದರೆ ಅದು ಕೇಳುವಷ್ಟು , ಅದನ್ನು ಗ್ರಹಿಸಿ ಶಿರಸಾವಹಿಸಿ ನೆರವೇರಿಸುವಷ್ಟು ಸಮೀಪದಲ್ಲಿ ಇರಬೇಕು. ಆದರೂ ಅವರಿಗೆ ಕಂಡೂ ಕಾಣದಂತೆ ಇರಬೇಕು. ಇವರಾದರೂ ಹಾಗೆ. ನೆಲದ ಮೇಲೆÇÉಾ ನೀರು ಚೆಲ್ಲಿ, ಕೂದಲಿನ ರಾಶಿ ಹಾಕಿ, ಟಿಶ್ಯೂ  ರೋಲ್‌ಗ‌ಳನ್ನು ಉಂಡೆ ಮಾಡಿ ಬಿನ್‌ ಇದ್ದರೂ ಅದರೊಳಗೆ ಬಿಸಾಡದೆ ಇಡೀ ರೆಸ್ಟ್‌ ರೂಮ್‌ ಕಲಸುಮೇಲೋಗರ ಮಾಡಿ “ವಿದ್ಯಾವಂತ’ರೆನಿಸಿಕೊಂಡ ಒಂದು ತಂಡ ಜಾಗ ಖಾಲಿ ಮಾಡಿ ಇನ್ನೊಂದು ತಂಡ ಬಂದು ಮುಖ ಕಿವುಚುವ ಮುನ್ನ, ಆ ಸಣ್ಣ ಅಂತರದಲ್ಲಿ, ಯಾವುದೋ ಮಾಯಾ ದಂಡ ಹಿಡಿದವರಂತೆ ಸ್ವತ್ಛ ಮಾಡಬೇಕು. ಆಗಷ್ಟೇ  ರೆಸ್ಟ್‌ರೂಮನ್ನು ಒಂದು ಹಂತಕ್ಕೆ ತಂದು, “ನಾನೇಕೆ ಈ ಕೆಲಸ ಮಾಡ್ತೇನೆ?’ ಎಂದು ವಿಚಾರ ಮಾಡಲು ವ್ಯವಧಾನವಿರದ ಪಾರ್ವತಮ್ಮ ಮತ್ತೂಂದು ರೆಸ್ಟ್‌ ರೂಮ್‌ ಸ್ವತ್ಛ ಮಾಡಲು ಹೆಜ್ಜೆ ಹಾಕುತ್ತಾಳೆ.   

ಕತೆ ಎಂಟು 
ಬೆಳಗ್ಗೆ ಏಳು ಗಂಟೆಗೆ ಬಗಲಿಗೆ ಒಂದು ವ್ಯಾನಿಟಿ ಬ್ಯಾಗ್‌ ನೇತುಹಾಕಿಕೊಂಡು ಓಡು ನಡಿಗೆಯಲ್ಲಿ ಗಾರ್ಮೆಂಟ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಧಾವಿಸುವ ಹೆಂಗೆಳೆಯರ ಗುಂಪು. ಅವರಿಗೆ  ಕೆಲಸಕ್ಕೆ ಹೋಗೋದು ಉಸಿರಾಟದಷ್ಟೇ ಆವಶ್ಯಕ, ಅನಿವಾರ್ಯ, ಸ್ವಾಭಾವಿಕ. ಕೆಲಸವಿಲ್ಲದಿದ್ದರೆ ಬದುಕೂ ಇಲ್ಲ ಎಂಬಂಥ ಸ್ಥಿತಿ ! 

“ಉದ್ಯೋಗಂ ಪುರುಷ ಲಕ್ಷಣಂ’ ಎಂಬುದು ಸೀಮಿತ ಅರ್ಥ ಬರುವ ವಾಕ್ಯ. ಪುರುಷ ಉದ್ಯೋಗಕ್ಕೆ ಹೋಗುವುದು ಸಹಜವಾದ ಕ್ರಿಯೆ. ಪುರುಷ ಕೆಲಸಕ್ಕೆ ಹೋಗ್ತಾನೆ ಅನ್ನೋದಷ್ಟೇ ಪ್ರಮುಖ. ಉಳಿದ¨ªೆಲ್ಲ ಗೌಣ. ಎಲ್ಲಿ ಕೆಲಸ, ಎಂಥ ಕೆಲಸ ಎಂಬುದೆಲ್ಲ ಮುಖ್ಯವಲ್ಲ. 

ಆದರೆ ಹೆಣ್ಣು ? ಅವಳ ಸ್ಥಿತಿಯೇ ಬೇರೆ.
ಮೇಲೆ ವ್ಯಾಖ್ಯಾನ ಮಾಡಿದ್ದು ಕೆಲವು ಪ್ರಸಂಗಗಳಷ್ಟೇ.  ಇಂಥ ಎಷ್ಟೋ ಕೊಂಡಿಗಳಿಗೆ ಸಿಲುಕಿ ಅವಳು ಮನೆಯ ಒಳಗೂ- ಹೊರಗೂ ಕೆಲಸ ಮಾಡುತ್ತಲೇ ಇ¨ªಾಳೆ.

– ಎಂ.ಎನ್‌.ರಮಾ

ಟಾಪ್ ನ್ಯೂಸ್

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

1-bhatru

Subrahmanya: ಅರ್ಚಕರ ಮನೆಯಿಂದ ನಗ-ನಗದು ಕಳವು

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.