ಕೊನೆಯೇ ಇಲ್ಲದ ಉಪಸಂಹಾರವು
Team Udayavani, Dec 22, 2019, 4:49 AM IST
ಕೊಡಗಿನ ಕಾಡನಡುವೆ ಬದುಕುತ್ತಿರುವಾಗ ಕಣ್ಣುಮುಚ್ಚಿದ್ದರೂ ಮೆದುಳಿನ ತುಂಬ ಬೆಳದಿಂಗಳ ಹಾಲ್ಗಡಲ ಮೇಲೆ ಪವಡಿಸಿರುವ ಸಿಂಹಗಳಂಥ ಪರ್ವತ ಕೋಡುಗಳು ರಾರಾಜಿಸುತ್ತಿದ್ದವು. ಕಾನನದ ನಡುವೆ ಮರವೊಂದಕ್ಕೆ ಇನ್ನೊಂದು ಮರ ಉಜ್ಜುವ ಮರ್ಮರ ಕನಸಿನಲ್ಲೂ ಕೇಳಿಸುತ್ತಿದ್ದವು. ಕಿವಿ ಮುಚ್ಚಿದರೂ ತೀರಿಹೋದ ಆತ್ಮಗಳು ಚೀರುತ್ತಿರುವಂತೆ ಜೀರುಂಡೆಗಳ ಸದ್ದು ಹೋದಲ್ಲೆಲ್ಲ ಹಿಂಬಾಲಿಸುತ್ತಿದ್ದವು. ಗಂಟೆಗಟ್ಟಲೆ ರೈಲುಪ್ರಯಾಣ ಮುಗಿಸಿ ಬಂದವನ ಕಿವಿಯೊಳಗೆ ಇನ್ನೂ ಹಲವು ದಿನಗಳ ಕಾಲ ಗಡಚಿಕ್ಕುವ ಹಳಿಯ ಸದ್ದು ಕೇಳಿಸುವ ಹಾಗೆ ಕೊಡಗಿನಿಂದ ಬೇರೆಲ್ಲಿ ಹೋದರೂ ಕಣ್ಣಪಾಪೆಯ ಮೇಲೆ ಹಸಿರು ಬಣ್ಣ ಶಾಶ್ವತವಾಗಿ ಬಳಿದಿರುವಂತೆ ಅನಿಸುತ್ತಿತ್ತು. ಈಗ ಇಲ್ಲಿಯಾದರೋ ಬರಿಯ ಕಡಲಿನ ಬಣ್ಣಗಳು ಮತ್ತು ಸಣ್ಣಗೆ ದಡಕ್ಕೆ ಬಡಿಯುವ ಗಂಧರ್ವ ಸಂಗೀತದಂತಹ ತೆರೆಗಳ ಸದ್ದು. ಕಣ್ಣ ಕೊನೆಯಲ್ಲಿ ಸದಾ ವಿರಮಿಸಿರುವ ಅರೆ ಚಂದ್ರಾರ್ಕದಂತಹ ದಿಗಂತದ ಗೆರೆ. “ಸಾರೇ, ನೀವು ಊರಿಗೆ ಹೋಗುವುದಿಲ್ಲವೆ?’ ಎಂದು ನನ್ನ ಬಗ್ಗೆ ನನಗಿಂತ ಕಳವಳಕ್ಕೀಡಾದವರಂತೆ ಕಾಣುವ ದ್ವೀಪವಾಸಿಗಳು ಆತಂಕದಿಂದ ಕೇಳುತ್ತಾರೆ. ಈ ಇಷ್ಟು ದೊಡ್ಡ ಕಡಲನ್ನು ದಾಟಿ ಹೋಗುವುದಾದರೂ ಹೇಗೆ? ಎಂದು ನಾನು ಅವರನ್ನೇ ತಿರುಗಿ ಕೇಳುತ್ತೇನೆ. ಅವರಿಗೆ ನಗು ಬರುತ್ತದೆ. “ಸಾರೇ, ಹೋಗಲು ನೂರು ಮಾರ್ಗಗಳಿವೆ; ಆಕಾಶದಲ್ಲಿ ವಿಮಾನಗಳಿವೆ. ಕಡಲಿನಲ್ಲಿ ಹಡಗುಗಳೂ, ದೋಣಿಗಳೂ, ಮಂಜಿಗಳೂ, ಓಡಗಳೂ ಓಡಾಡುತ್ತಿವೆ.ಆದರೆ ನಿಮಗೆ ಮನಸ್ಸಿಲ್ಲ. ಹಾಗಾಗಿ ಇಲ್ಲೇ ಮೀನು ತಿಂದುಕೊಂಡು, ಕವಳ ಜಗಿದುಕೊಂಡು ಓಡಾಡುತ್ತಿರುವಿರಿ’ ಎಂದು ಮತ್ತೆ ನಗುತ್ತಾರೆ. ಹೌದು, ನನಗೆ ಯಾಕೆ ಇಲ್ಲಿಂದ ತೆರಳಲು ಮನಸ್ಸಾಗುತ್ತಿಲ್ಲ? ಎಂದು ನಾನೂ ಅಂದುಕೊಳ್ಳುತ್ತೇನೆ. ಆಳ ಕಡಲೊಳಗೆ ನಿಮಿಷಗಟ್ಟಲೆ ಮುಳುಗಿಕೊಂಡು ಸಾಗರ ಸಂಚಾರ ಕೈಗೊಳ್ಳುವಾಗಲೂ ಇದನ್ನೇ ಸ್ವಲ್ಪ ಯೋಚಿಸುತ್ತೇನೆ. ಆದರೆ, ಹೋಗುವುದಾದರೂ ಎಲ್ಲಿಗೆ? ಎಲ್ಲಿಂದ ಬಂದೆ ಎಂಬುದೂ ಮರೆತು ಹೋಗಿದೆ!
ಆಳ ಕಡಲೊಳಗೂ ಪರ್ವತಗಳಿವೆ. ಸಾಗರಜೀವಿಗಳ ವಸಾಹತುಗಳಿವೆ. ಅವುಗಳ ನಾಗರಿಕತೆಗಳಿವೆ. ಕಣಿವೆಗಳೂ, ಕೊಳ್ಳಗಳೂ, ಕೊರಕುಗಳೂ, ಗುಹೆಗಳೂ, ಗೋಡೆಗಳೂ ಇಳಿಜಾರುಗಳೂ ಇವೆ. ನಮ್ಮ ಹಾಗೆಯೇ ಭಾವಿಸುವ, ಮಹಾತ್ವಾಕಾಂಕ್ಷೆಗಳಿರುವ, ಸಾಮ್ರಾಜ್ಯಗಳನ್ನು ಸ್ಥಾಪಿಸಲು ಬಯಸುವ ಜಲಚರಗಳಿವೆ. ಕಡಲೊಳಗೇ ಖಂಡಾಂತರ ವಲಸೆ ಹೊರಡುವ ಮತ್ಸ್ಯ ಸಮೂಹಗಳಿವೆ. ನಾಚುಗೆ ಸ್ವಭಾವದ, ರೋಷದ, ಆಕ್ರಮಿಸಿ ಕೊಲ್ಲುವ, ವಿಷಪ್ರಾಶನಗೊಳಿಸಿ, ವಿದ್ಯುತ್ ಹರಿಸಿ ಸಾಯಿಸುವ ವಿವಿಧ ಗುಣಗಳ ಮತ್ಸ್ಯ ಕುಲಗಳಿವೆ. ಇನ್ನೊಂದು ಮತ್ಸ್ಯದ ಆಹಾರವಾಗದೇ ಉಳಿದರೆ ಮನುಷ್ಯರಿಗಿಂತಲೂ ಹೆಚ್ಚು ಆಯಷ್ಯ ಬದುಕಬಲ್ಲ ಮೀನು ತಳಿಗಳೂ ಇವೆ. ಬಹುಶಃ ಇವರಲ್ಲೇ ಕವಿಗಳೂ, ವಿಜ್ಞಾನಿಗಳೂ, ಹಾಡುಗಾರರೂ, ರಾಜಕಾರಣಿಗಳೂ ಸರ್ವಾಧಿಕಾರಿಗಳೂ, ಬಂಡುಕೋರರೂ ಮತ್ತು ಇದು ಯಾವುದೂ ಅಲ್ಲದ ಜನಸಾಮಾನ್ಯ ಅಮಾಯಕ ಮತ್ಸ್ಯಗಳೂ ಇರಬಹುದು. ಅವುಗಳಿಗೆ ಕಡಲೊಳಗೆ ಇಳಿದ ನಮ್ಮ ಕಾಲುಗಳು ವಾಮನನ ಬಲಿಪಾದಗಳಂತೆ ಭಯ ಹುಟ್ಟಿಸುತ್ತಿರಬಹುದು. ಕಡಲ ಬಿಟ್ಟು ಮೇಲೆ ಭೂಮಿಗೆ ಬರುವುದೆಂದರೆ ಅಂತಿಮ ತೀರ್ಪಿನ ಮೊದಲು ಕಳೆಯಬೇಕಾದ ಮರಣಾನಂತರದ ಪ್ರಾಯಶ್ಚಿತ್ತ ಸ್ಥಳಕ್ಕೆ ತೆರಳುವುದು ಎಂಬ ಧಾರ್ಮಿಕ ನಂಬಿಕೆ ಇರುವ ಮೀನುಗಳೂ ಇಲ್ಲಿ ಓಡಾಡುತ್ತಿರಬಹುದು ಎಂದು ಅಂದುಕೊಂಡೇ ಅವುಗಳ ನಡುವೆ ತೇಲುತ್ತಿರುತ್ತೇನೆ. ಹೊರಬಂದರೂ ಕಿವಿಯೊಳಗೆ ಕಡಲೊಳಗಿನ ನೀರು ಸರಿಯುವ ಸದ್ದು. ನೀರಿಂದ ಹೊರಬಂದ ಮೀನಂತೆ ಚಡಪಡಿಸುತ್ತೇನೆ. ನಾನು ಎಲ್ಲಿಂದ ಬಂದೆ? ಯಾಕೆ ಇಲ್ಲಿರುವೆ? ಮುಂದೆಲ್ಲಿ ಎಂಬ ಯಾವುದೂ ತಲೆಯೊಳಗೆ ಸುಳಿಯುವುದಿಲ್ಲ. ಸುಮ್ಮನೇ ತಲೆತಗ್ಗಿಸಿ ನಡೆಯುತ್ತಿರುತ್ತೇನೆ.
ನಾನು ಕಳೆದ ವಾರ ಬರೆದ ತಿಪಟೂರಿನ ಬಳಿಯ ಹೋಬಳಿ ಕೇಂದ್ರವೊಂದರಿಂದ ಬಂದ ಅಬ್ದುಲ್ ರಜಾಕನ ಜೀವನ ವೃತ್ತಾಂತವೂ ಇಂತಹದೇ ಆಗಿದೆ. ನಾನಿರುವ ದ್ವೀಪದಿಂದ ಸುಮಾರು ಮೂರು ತಾಸಿನ ಕಡಲ ಪಯಣದ ನಂತರ ಸಿಗುವ ಇನ್ನೊಂದು ದ್ವೀಪದಲ್ಲಿ ಈತ ಕಳೆದ ಹತ್ತು ವರ್ಷಗಳಿಂದ ಸೈಕಲ್ಲು ರಿಪೇರಿಯ ಅಂಗಡಿಯೊಂದರಲ್ಲಿ ಆರಿಹೋದ ಮೋಟುಬೀಡಿಯೊಂದನ್ನು ತುಟಿಗಳ ನಡುವೆ ಇಟ್ಟುಕೊಂಡು ತಲೆತಗ್ಗಿಸಿ ಕೆಲಸ ಮಾಡುತ್ತಿರುತ್ತಾನೆ. ಸುತ್ತಲೂ ತುಕ್ಕು ಹಿಡಿಸಿಕೊಂಡು ದಿಕ್ಕಾಪಾಲಾಗಿ ಬಿದ್ದಿರುವ ಹತ್ತು-ಹದಿನಾರು ಪುರಾತನ ಸೈಕಲ್ಲುಗಳ ಕಳೇಬರಗಳಂತಹ ಜೀರ್ಣಿಸಿದ ದೇಹಗಳು, ಅಲ್ಲಲ್ಲಿ ರಿಪೇರಿಗಾಗಿ ಬಂದಿರುವ ಅಷ್ಟೇನೂ ಹಳೆಯದಲ್ಲದ ಸೈಕಲ್ಲುಗಳು, ನಡುನಡುವೆ ಮಿಂಚುತ್ತಿರುವ ಬಣ್ಣಗಳ ಪಂಕ್ಚರಿಗಾಗಿ ಬಂದಿರುವ ಹೊಸ ಸೈಕಲ್ಲುಗಳು, ಮಕ್ಕಳ ಆಟಿಕೆ ಸೈಕಲ್ಲುಗಳು, ಶಾಲಾಮಕ್ಕಳ ಸ್ಟೈಲುಸ್ಟೈಲಾದ ಸೈಕಲ್ಲುಗಳು. ಯಾರೊಡನೆಯೂ ಹೆಚ್ಚು ಮಾತಾಡದೆ, ಯಾರ ಹೆಚ್ಚುವರಿ ಪ್ರಶ್ನೆಗಳಿಗೂ ಕಿವಿಗೊಡದೆ ಒಂದರ ನಂತರ ಇನ್ನೊಂದು ಸೈಕಲ್ಲಿನ ಇಲಾಜು ಮಾಡುತ್ತ, ದರ ಹೇಳುತ್ತ, ಕಾಸು ಇಸಕೊಳ್ಳುತ್ತ ಓರ್ವ ಪರಿಣಿತ ಯಂತ್ರ ವಿಜ್ಞಾನಿಯಂತೆ ಈತ ತನ್ಮಯನಾಗಿರುತ್ತಾನೆ. ತೆಂಗಿನ ಮಡಲುಗಳು ಹೊದ್ದ ಪುಟ್ಟ ಆತನ ಗುಡಿಸಲು. ಗುಡಿಸಲಿನೊಳಗೂ ಇಲಾಜಾಗದ ಹಲವು ಸೈಕಲ್ಲುಗಳು, ಗಾಲಿಗಳು, ಟ್ಯೂಬುಗಳು, ಕೀಲೆಣ್ಣೆಯ ಡಬ್ಬಗಳು. ಗುಡಿಸಲೊಳಗೇ ತಡಿಕೆ ಬಾಗಿಲು ಹಾಕಿದ ಅವನ ಶಯ್ನಾಗೃಹ. ಅದರೊಳಗೇ ಅಡುಗೆಯ ಕೋಣೆ, ಅಡುಗೆ ಕೋಣೆಯೊಳಗೂ ಒಂದು ತಡಿಕೆಯ ಬಾಗಿಲು, ಅದು ತೆರೆದರೆ ಶೌಚಗೃಹ. ಅಲ್ಲಿ ತಲೆಯೆತ್ತಿದರೆ ಕಾಣಿಸುವ ಆಕಾಶ. ಆ ಆಕಾಶವನ್ನು ಕೊಂಚ ಮರೆಮಾಚುವ ಒಂದು ತೆಂಗಿನ ಮರ. ಅದರಿಂದ ಆಗಾಗ ಕೀಂಗುಡುತ್ತಾ ದೊಪ್ಪನೆ ಬೀಳುವ ಮೂಷಿಕ ಮರಿಗಳು. ಯಾವಾಗಲೋ ಒಮ್ಮೊಮ್ಮೆ ಬೀಳುವ ನಾರೀಕೇಳದ ಸದ್ದು. ಇವಾವುದರ ಪರಿವೆಯೇ ಇಲ್ಲದೆ ಕೀಲೆಣ್ಣೆ ಸವರಿದ ಒಂದು ಮನುಷ್ಯ ಗಾಲಿಯಂತೆ ಈತ ಚಲಿಸುತ್ತಲೇ ಇರುತ್ತಾನೆ. ಮುಂಗಾರು ಮುಗಿದು ಹಡಗು ಸಂಚಾರ ಶುರುವಾದಾಗ ಮಂಗಳೂರಿಗೆ ತೆರಳುವ ಪ್ರಯಾಣಿಕರ ಹಡಗೊಂದನ್ನು ಹತ್ತಿ ವರ್ಷಕ್ಕೆ ಒಂದು ಬಾರಿ ಊರಿಗೆ ಹೊರಡುತ್ತಾನೆ.
ಹಡಗು ಹತ್ತಿ ಕುಳಿತ ತಕ್ಷಣ ಈತನ ಚೈತನ್ಯವೇ ಉಡುಗಿ ಹೋದಂತಾಗುತ್ತದೆ. ಕಳೆದ ಜನ್ಮಗಳ ನೆನಪುಗಳೆಲ್ಲವೂ ಈತನ ಹೊಟ್ಟೆಯೊಳಗೆ ಮೇಳೈಸಿ ಮೆರವಣಿಗೆ ನಡೆಸಿದಂತೆ ಅಸ್ವಸ್ಥನಾಗುತ್ತಾನೆ. ಹಡಗಿನ ಕತ್ತಲ ಮೂಲೆಯೊಂದರಲ್ಲಿ ಜಾಗ ಹುಡುಕಿ ಹೆಂಗಸರು ಧರಿಸುವ ಹಳೆಯ ದುಪ್ಪಟವೊಂದನ್ನು ಮೈತುಂಬ ಹೊದ್ದು ಒಂದು ಗೋಣಿಚೀಲದಂತೆ ಮುದುಡಿ ಮಲಗುತ್ತಾನೆ. ಮುಂದಿನ ಹದಿನಾರು ಗಂಟೆಗಳ ಕಾಲ ಹಡಗು ಮಂಗಳೂರಿನ ಹಳೆಬಂದರಿನ ಉಪ್ಪುಂದಕ್ಕೆ ತಲುಪುವ ತನಕ ಆತ ಅಲ್ಲಾಡುವುದಿಲ್ಲ.
ನಾನಾದರೋ ಹುಣ್ಣಿಮೆ ಇರುಳಿನ ತಿಯದಿಯಂದು ಮಂಗಳೂರಿಗೆ ಹೊರಡುವ ಹಡಗಲ್ಲಿ ಪ್ರಯಾಣದ ಟಿಕೇಟು ಕೊಂಡುಕೊಂಡು ಹಡಗಿನ ದಕ್ಕೆಯಲ್ಲಿ ಆಕಾಶನೋಡುತ್ತ ಅಂಗಾತ ಮಲಗಿದ್ದೆ. ಬೆಳದಿಂಗಳಿನ ಸಣ್ಣಗಿನ ಬೆಳಕು ದುಪ್ಪಟ ಹೊದ್ದ ಈತನ ಮುಖದ ಮೇಲೂ ಬೀಳುತ್ತಿತ್ತು. ಮಧ್ಯಾಹ್ನದಿಂದಲೂ ಈತನನ್ನು ನೋಡುತ್ತಲೇ ಇದ್ದೆ. ಹಡಗಿನ ಓಟಕ್ಕೆ ಸಣ್ಣಗೆ ಅಲುಗುತ್ತಿದ್ದರೂ, ಒಳಗೊಳಗೆ ಸಣ್ಣಗೆ ಕೆಮ್ಮುತ್ತಿದ್ದರೂ ಹಳೆಯ ದುಪ್ಪಟವೊಂದನ್ನು ಸುತ್ತಿಕೊಂಡು ಮಲಗಿರುವ ಕೃಶ ಶರೀರ. ಪಶ್ಚಿಮದಲ್ಲಿ ಸೂರ್ಯನು ಮುಳುಗಿ ಕತ್ತಲಾಗಿ, ಪೂರ್ಣಿಮೆಯ ಚಂದ್ರನೂ ಪೂರ್ವದಿಂದೆದ್ದು ಆಕಾಶದ ನಡುನೆತ್ತಿಗೆ ತಲುಪಿ, ಸಣ್ಣಗೆ ಕಡಲ ಗಾಳಿಯೂ ಬೀಸಲು ತೊಡಗಿ, ಚಳಿಯಾಗಿದ್ದರೂ ಹಾಗೇ ಬಿದ್ದಿರುವ ದೇಹ. ಈ ಮನುಷ್ಯನಿಗೆ ಹಸಿವು ನೀರಡಿಕೆಯಾಗುತ್ತಿಲ್ಲವೆ? ಈ ಬೆಳದಿಂಗಳಲ್ಲೂ ಹಾಗೇ ಬಿದ್ದುಕೊಂಡಿರುವ ಈತನಿಗೆ ಅಸೌಖ್ಯವೇನಾದರೂ ಇರಬಹುದೆ? ಇವನು ಹೀಗೆ ಬಿದ್ದಿರುವಾಗ ಕಡಲ ಮೇಲೆ ಲಾಸ್ಯವಾಡುತ್ತಿರುವ ಚಂದ್ರಿಕೆಯ ಮನೋಹರತೆಯನ್ನು ಆಸ್ವಾದಿಸುವುದಾದರೂ ಹೇಗೆ ಎಂದು ಆತನ ದುಪ್ಪಟವನ್ನು ಕೊಂಚ ಎಳೆದು ಎಬ್ಬಿಸಿದೆ. ನರಳುತ್ತ ಎದ್ದ ಆತ ನನ್ನನ್ನು ಗದರಿಸುವಂತೆ ನೋಡಿದ. ಆತನ ಬಳಿ, “”ಒಂದು ಬೆಂಕಿಕಡ್ಡಿ ಇದೆಯಾ?” ಎಂದು ಕೇಳಿದೆ. ಆತ ಪಂಚೆಯೊಳಗಿನ ನಿಕ್ಕರಿನ ಜೇಬಿನಿಂದ ಒಂದು ಹಳೆಯ ಲೈಟರನ್ನು ಹೊರಗೆಳೆದು ಕೈಗಿತ್ತು, “”ನೀವೇ ಇಟ್ಟುಕೊಳ್ಳಿ. ಪುನಃ ಎಬ್ಬಿಸಬೇಡಿ. ನನಗೆ ಕಡಲು ಪಯಣ ಆಗುವುದಿಲ್ಲ. ಅದಕ್ಕೇ ಹೀಗೆ ಬಿದ್ದುಕೊಂಡಿರುವೆ” ಎಂದು ಮಲಯಾಳದಲ್ಲಿ ಅಂದು ಪುನಃ ದುಪ್ಪಟದೊಳಗೆ ಸೇರಿಕೊಂಡ. ಬೆಳಗಾಗಿ ಇನ್ನೇನು ಎರಡು ತಾಸಿನಲ್ಲಿ ಹಡಗು ಮಂಗಳೂರು ತಲುಪುವುದು ಅನ್ನುವ ಹೊತ್ತಿಗೆ ಆತ ಎದ್ದು ಕೂತಿದ್ದ. ಲೈಟರು ಹಿಂತಿರುಗಿಸಲು ಹೋದವನು ಆತನ ಪೂರ್ವಾಪರವನ್ನು ವಿಚಾರಿಸಿದೆ. ಆಗ ಅವನು ಕನ್ನಡದಲ್ಲಿ ಹೇಳಿದ ಕಥೆಯನ್ನು ಚುಟುಕಾಗಿ ಇಲ್ಲಿ ವಿವರಿಸುವೆ.
ಆತನ ಪೂರ್ವಜರು ಟಿಪ್ಪು ಸುಲ್ತಾನನ ಕಾಲಕ್ಕೂ ಬಹಳ ಹಿಂದೆ ಅಫಘಾನಿಸ್ತಾನದ ಕಂದಹಾರದ ಕಡೆಯಿಂದ ಒಂದಿಷ್ಟು ಕುದುರೆಗಳನ್ನು ಹೊಡೆದುಕೊಂಡು ಮೈಸೂರಿನ ಮಹಾರಾಜರ ಬಳಿ ಕುದುರೆ ವ್ಯಾಪಾರಕ್ಕೆ ಬಂದ ಮುಸಲ್ಮಾನ ಪಠಾಣ ಕುಲದವರು. ಟಿಪ್ಪುವಿನ ಹೊಡೆತದಿಂದ ಮೈಸೂರು ಸಂಸ್ಥಾನ ಕಂಗಾಲಾದಾಗ ಇನ್ನು ಇಲ್ಲಿರುವುದು ಸೂಕ್ತವಲ್ಲ ಎಂದು ಮಧುಗಿರಿಯ ಕಡೆ ಹೊರಟವರು ತಿಪಟೂರಿನ ಬಳಿ ಕೆರೆಯ ದಡದಲ್ಲಿ ತೆಂಗಿನ ತೋಪೊಂದನ್ನು ಜಹಗೀರಿಗೆ ಪಡೆದುಕೊಂಡು ಅಲ್ಲೇ ಉಳಿದು ಬಿಟ್ಟರಂತೆ. ಆ ವಂಶಕ್ಕೆ ಸೇರಿದವನು ಈತ. ಈತನ ತಾತ ಮುತ್ತಾತಂದಿರು ಜಹಗೀರುದಾರರಾಗಿ ದಿಲ್‌ದಾರರಾಗಿ ಬದುಕಿದ್ದವರು. ಆದರೆ, ಈತನಿಗೆ ನೆನಪಿರುವ ಕಾಲದಿಂದ ಬಹಳ ಬಡವರಾಗಿ ಅವರಿವರ ತೋಟಗಳನ್ನು ಭೋಗ್ಯಕ್ಕೆ ಪಡೆದು, ರಾಗಿ-ನವಣೆ ತರಕಾರಿ ಬೆಳೆದು, ಅದೂ ಸಾಲದಾದಾಗ ಜಾನುವಾರುಗಳ ಪಾದಗಳಿಗೆ ಲಾಳ ಹಾಕುವುದು, ಕತ್ತಿ, ಕೊಡಲಿ, ಹಾರೆ, ಪಿಕ್ಕಾಸು ಇತ್ಯಾದಿಗಳನ್ನು ತಯಾರಿಸುವುದು, ಸೈಕಲ್ ಪಂಕ್ಚರ್, ಹಳೇ ಪ್ಲಾಸ್ಟಿಕ್ ಪೇಪರ್ ಇತ್ಯಾದಿ ಕಸುಬುಗಳನ್ನು ಮಾಡಿಕೊಂಡು ದಟ್ಟ ದರಿದ್ರರಾಗಿಬಿಟ್ಟಿದ್ದರು. ಈತನಿಗೆ ಸಣ್ಣದಿನಿಂದಲೂ ಸೈಕಲ್ ಸವಾರಿಯ ಹುಚ್ಚು. ಸೈಕಲ್ ಹತ್ತಿ ಲಂಗುಲಗಾಮಿಲ್ಲದೆ ಊರೂರು ತಿರುಗುವುದು, ಹೋದಲ್ಲಿ ಅಲ್ಲಲ್ಲಿ ತೋಟದ ಕೆಲಸ, ಕೊಟ್ಟಿಗೆಯ ಕೆಲಸ ಮಾಡಿಕೊಂಡು ಒಂದಿಷ್ಟು ಕಾಸು ಮಾಡಿಕೊಂಡು ಮುಂದಿನ ಊರಿಗೆ ತೆರಳುವುದು ಹೀಗೆ ಬದುಕುತ್ತಿದ್ದವನು. ಹಿಂದೂಗಳ ಮನೆಯಲ್ಲಿ ಊಳಿಗ ಮಾಡುವಾಗ ಅವರಿಗೆ ಬೇಕಾಗಿ, “ಶಂಕರ’ ಎಂಬ ಹೆಸರಿಟ್ಟುಕೊಂಡಿದ್ದನಂತೆ. ಮುಸಲ್ಮಾನರ ಮನೆಯಲ್ಲಿ ಅಬ್ದುಲ್ ರಜಾಕ್, ಕ್ರಿಸ್ತರಾದರೆ ಜೋಸೆಫ್ ಹೀಗೆ ನಾನಾ ನಾಮಗಳಿಂದ ಬದುಕುತ್ತಿದ್ದ.
ಆದರೆ, ವಿಧಿಯಾಟ ಎಂಬುದು ಹೇಗಿರುತ್ತದೆ ನೋಡಿ. ಒಮ್ಮೆ ಈತ ಸೈಕಲ್ಲು ಹತ್ತಿ ಧರ್ಮಸ್ಥಳಕ್ಕೆ ತಲುಪಿ ಅಲ್ಲಿಂದ ವಾಪಸು ಬರುವಾಗ ಕೊಟ್ಟಿಗೆಹಾರದ ಬಳಿ ಕತ್ತಲೂ ಆಗಿತ್ತು. ಈತನ ಸೈಕಲ್ಲೂ ಪಂಕ್ಚರಾಗಿತ್ತು. ಹಾಗೇ ಕತ್ತಲಲ್ಲಿ ಏನು ಮಾಡುವುದೆಂದು ತೋಚದೆ ನಿಂತಿದ್ದಾಗ ಕೈಯಲ್ಲೊಂದು ಕತ್ತಿ ಹಿಡಿದು ಅದರ ತುದಿಗೊಂದು ಒಣಗಿದ ತೆಂಗಿನಕಾಯಿಯನ್ನು ಸಿಕ್ಕಿಸಿಕೊಂಡು ಮುಸಲ್ಮಾನರಾದ ಬ್ಯಾರಿಗಳೊಬ್ಬರು ಬರುತ್ತಾರೆ. ನದಿಯಲ್ಲಿ ತೇಲಿಬಂದ ಯಾರದೋ ತೋಟದ ತೆಂಗಿನಕಾಯಿ ಅದು. ಬಂದವರು ಈತನ ಪೂರ್ವಾಪರಗಳನ್ನು ವಿಚಾರಿಸುತ್ತಾರೆ.ವಿಚಾರಿಸಿಕೊಂಡವರು ಈತನನ್ನು ತಮ್ಮ ಮನೆಗೆ ಕರೆದೊಯ್ದು ತಮ್ಮ ತೆಂಗಿನ ತೋಟದಲ್ಲಿ ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆ. ಈತನಿಗೆ ಮದುವೆಯೂ ಆಗಿಲ್ಲ ಎಂದು ಅರಿತು ತನ್ನ ತಮ್ಮನ ಹೆಂಡತಿಯ ಅಕ್ಕನ ಅನಾಥ ಮಗಳೊಡನೆ ನಿಖಾವನ್ನೂ ಮಾಡಿಸುತ್ತಾರೆ. ನಿಖಾ ಆದರೆ ಪಾಸ್‌ಪೋರ್ಟ್ ಮಾಡಿಸಿ ದುಬೈಯಲ್ಲಿ ಒಂದು ಒಳ್ಳೆಯ ಕೆಲಸ ಹುಡುಕಿಕೊಟ್ಟು ವಿಮಾನದಲ್ಲಿ ಕಳಿಸುವುದಾಗಿ ಆಸೆಯನ್ನೂ ಹುಟ್ಟಿಸಿದ್ದರಂತೆ. ಆದರೆ, ಮದುವೆಯಾಗಿ ನಾಲ್ಕು ವರ್ಷಕ್ಕೆ ಒಂದರ ನಂತರ ಒಂದು ಮೂರು ಮಕ್ಕಳಾದರೂ ದುಬೈಗೆ ಕಳಿಸುವ ವಿಷಯವನ್ನು ಆ ಬ್ಯಾರಿಗಳು ಮರೆತೇಬಿಟ್ಟರಂತೆ. ಕೈಗೂಡದ ದುಬಾಯಿಯ ವಿಮಾನಯಾತ್ರೆ, ಮನೆಯಲ್ಲಿ ಒಂದರ ನಂತರ ಆಗುತ್ತಿರುವ ಮಕ್ಕಳು, ಕಾಲು ಕೆದರಿ ಜಗಳವಾಡುವ ಹೆಂಡತಿ. ನೀವು ಮಾತುಕೊಟ್ಟಂತೆ ದುಬೈಯಿಗೆ ಕಳಿಸದಿದ್ದರೆ ನಿಮ್ಮನ್ನು ಈ ಕತ್ತಿಯಿಂದ ಕಡಿದೇ ಬಿಡುವೆ ಎಂದು ಹೆದರಿಸಿ ಬಿಟ್ಟನಂತೆ.
ಹೆದರಿದ ಬ್ಯಾರಿಗಳು ಇವನು ಹೇಗಾದರೂ ತೊಲಗಿದರೆ ಸಾಕು ಎಂದು ಯಾರೋ ದ್ವೀಪವಾಸಿಗಳನ್ನು ಸಂಪರ್ಕಿಸಿ, ಈತನಿಗೆ ದ್ವೀಪಕ್ಕೆ ತೆರಳುವ ಪರ್ಮಿಟ್ಟನ್ನೂ ಕೊಡಿಸಿ, “”ಮೊದಲು ನೀನು ದ್ವೀಪಕ್ಕೆ ಹೋಗು. ಅಲ್ಲಿಂದ ದುಬಾಯಿ ಬಹಳ ಹತ್ತಿರ. ಅವರು ನಿನ್ನನ್ನು ಇನ್ನೊಂದು ಹಡಗಿನಲ್ಲಿ ದುಬೈಗೆ ಹತ್ತಿಸುತ್ತಾರೆ” ಎಂದು ಯಾಮಾರಿಸಿಬಿಟ್ಟಿದ್ದರು. ಹಾಗೆ ಯಾಮಾರಿದವನು ಈಗ ಅತ್ತ ದುಬೈಯೂ ಇಲ್ಲದೆ, ಇತ್ತ ಕೊಟ್ಟಿಗೆಹಾರವೂ ಇಲ್ಲದೆ, ತಿಪಟೂರಿಗೂ ಹೋಗಲಾರದೆ ಕಳೆದ ಹತ್ತು ವರ್ಷಗಳಿಂದ ದ್ವೀಪವೊಂದರಲ್ಲಿ ಅನಾಥ ಪ್ರೇತದಂತೆ ಸೈಕಲ್ಲು ರಿಪೇರಿ ಮಾಡುತ್ತ ಬದುಕುತ್ತಿ¨ªಾನೆ. ಗಳಿಸಿದ್ದನ್ನೆಲ್ಲ ಉಳಿಸಿ ವರ್ಷಕ್ಕೆ ಒಂದು ಬಾರಿ ಹೆಂಡತಿಯ ಕೈಗಿತ್ತು ವಾಪಸಾಗುತ್ತಾನೆ. ಆಕೆ ಆದಷ್ಟು ಬೇಗ ಈತನನ್ನು ವಾಪಸು ದ್ವೀಪಕ್ಕೆ ಕಳಿಸುತ್ತಾಳೆ. ಸಮುದ್ರ ಪ್ರಯಾಣದ ದೈಹಿಕ ಕ್ಲೇಶವೊಂದನ್ನು ಬಿಟ್ಟರೆ ಈತ ದ್ವೀಪದಲ್ಲಿ ಯಾವ ತಲೆಬಿಸಿಯೂ ಇಲ್ಲದೆ ಖುಷಿಯಲ್ಲೇ ಇದ್ದಾನೆ. ಬೇಸರವಾದಾಗ ಹೆಂಡತಿಯ ಹಳೆಯ ದುಪ್ಪಟ್ಟವನ್ನು ಮೈತುಂಬ ಹೊದ್ದುಕೊಂಡು ಗಂಟೆಗಟ್ಟಲೆ ನಿದ್ದೆ ಹೋಗುತ್ತಾನೆ!
ಇದು ತಿಪಟೂರಿನ ಅಬ್ದುಲ್ ರಜಾಕನ ಕಥೆ. ಈ ಹಡಗಿನಲ್ಲಿ ಚಲಿಸುವ ಒಬ್ಬೊಬ್ಬನದೂ ಒಂದೊಂದು ಕಥೆ. ನನ್ನ ಕಥೆಯೂ ಇದಕ್ಕಿಂತ ಕೆಟ್ಟದಾಗೇನೂ ಇಲ್ಲ. ಒಂದು ರೀತಿಯಲ್ಲಿ ಬಹಳ ಮಜಾವಾಗಿದೆ. ಪಿಂಗಾಣಿ ತಟ್ಟೆಯ ಮಹಾನುಭಾವರದೂ, ಆಡುಮಾಂಸ ಮಾರುವ ಹಾಡುಗಾರ ಮುದುಕನ ಕಥೆಯೂ ಹೀಗೆಯೇ. ಯಾಕೋ ನನಗೆ ಮನುಷ್ಯರ ಮೂಲಗಳನ್ನು ಹುಡುಕುವುದು ಇದ್ದಕ್ಕಿದ್ದಂತೆ ಬೇಸರವಾಗಿದೆ. ಮೂಲ ಹುಡುಕುವ ವ್ಯಾಧಿ ಹತ್ತಿಸಿಕೊಂಡಿರುವ ಭೂಮಿಯ ಮೇಲೆ ಇರುವ ಮನುಷ್ಯರ ಭವಿಷ್ಯದ ಕುರಿತು ಬಹಳ ಆಸೆಗಳೂ ಉಳಿದಿಲ್ಲ. ಕಡಲ ಒಳಗಿರುವ ಮತ್ಸ್ಯಗಳ ಇತಿಹಾಸ, ನಾಗರೀಕತೆ, ಅವುಗಳ ಮನಸ್ಸು ಮತ್ತು ಮನೋಕ್ಲೇಶಗಳ ಕುರಿತು ಆಳವಾಗಿ ತಿಳಿಯುವಷ್ಟು ಆಯಸ್ಸೂ ಇನ್ನು ಉಳಿದಿಲ್ಲ. ಬಹಳ ಸಣ್ಣ ವಯಸಿನಲ್ಲೇ ತೀರಿಹೋದ ನನ್ನ ಆತ್ಮಗುರುವಿನ ಹುಟ್ಟಿದ ದಿನ ಇಂದು. ಮನಸಿನಲ್ಲಿಯೇ ಆಕೆಯ ಪಾದಗಳಿಗೆ ವಂದಿಸಿ ಈ ಅಂಕಣವನ್ನು ಇಲ್ಲಿಗೆ ನಿಲ್ಲಿಸುವೆ. ಆದರೆ, ಮತ್ತೆ ಯಾವತ್ತಾದರೂ ಬರೆಯುವೆ.
(ಅಂಕಣ ಮುಕ್ತಾಯ)
ಅಬ್ದುಲ್ ರಶೀದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.