ಇಂಗ್ಲೆಂಡಿನ ಕತೆ: ತೋಳವನ್ನು ಸೋಲಿಸಿದ ಹಂದಿಮರಿ
Team Udayavani, Dec 2, 2018, 6:00 AM IST
ಒಂದು ಹಂದಿ ಬೀದಿಯೊಂದರಲ್ಲಿ ವಾಸವಾಗಿತ್ತು. ಅದಕ್ಕೆ ಮೂರು ಮರಿಗಳಿದ್ದವು. ಕೆಸರಿನಲ್ಲಿ, ತಿಪ್ಪೆಯಲ್ಲಿ ಹುಡುಕಿ ಅದು ಮರಿಗಳಿಗೆ ಆಹಾರ ತಂದುಕೊಟ್ಟು ಜೋಪಾನ ಮಾಡುತ್ತಿತ್ತು. ಹೀಗಿರಲು ಒಂದು ದಿನ ತಾಯಿ ಹಂದಿ ಕಾಯಿಲೆ ಬಿದ್ದಿತು. ಇನ್ನು ತಾನು ಬದುಕುವುದಿಲ್ಲ ಎಂಬುದು ಅದಕ್ಕೆ ಮನವರಿಕೆಯಾಯಿತು. ಮಕ್ಕಳನ್ನು ಬಳಿಗೆ ಕರೆದು ತಲೆ ನೇವರಿಸಿತು. “”ಮಕ್ಕಳೇ, ನಿಮ್ಮನ್ನು ಬೆಳೆಸಿ ನಿಮ್ಮೊಂದಿಗೆ ಬದುಕಲು ನನಗೆ ಅದೃಷ್ಟವಿಲ್ಲ. ಇನ್ನು ಸ್ವಲ್ಪ ಹೊತ್ತಿನಲ್ಲಿ ನಾನು ಸತ್ತು ಹೋಗುತ್ತೇನೆ. ಮುಂದೆ ನಿಮ್ಮ ಆಹಾರವನ್ನು ನೀವೇ ಸಂಪಾದಿಸಿಕೊಂಡು ಜೀವನ ನಡೆಸಬೇಕು. ಒಂದು ಒಳ್ಳೆಯ ಮನೆಯನ್ನು ಕಟ್ಟಿಕೊಳ್ಳಿ. ಮನೆ ಭದ್ರವಾಗಿರದಿದ್ದರೆ ತೋಳಗಳು, ನಾಯಿಗಳು ಯಾವ ಸಮಯದಲ್ಲಿಯೂ ಬಂದು ಆಕ್ರಮಣ ಮಾಡಬಹುದು” ಎಂದು ತಿಳಿಹೇಳಿತು.
ಹಿರಿಯ ಎರಡು ಹಂದಿ ಮರಿಗಳು, “”ನಮಗೆ ಬದುಕಬಲ್ಲೆವು ಎಂಬ ವಿಶ್ವಾಸ ಇದೆಯಮ್ಮ. ಹೀಗಾಗಿ ಭಾರೀ ಭದ್ರವಾದ ಮನೆ ಕಟ್ಟುತ್ತ ಸಮಯ ಕಳೆಯಲು ನಮಗಿಷ್ಟವಿಲ್ಲ. ವಾಸಕ್ಕೆ ಸಾಧಾರಣವಾದ ಮನೆಯೇ ಸಾಕು. ಇನ್ನು ತೋಳವಿರಲಿ, ನರಿಯಿರಲಿ ನಮ್ಮ ದೇಹ ಬಲದಿಂದ ಓಡಿಸಬಲ್ಲೆವು” ಎಂದು ಕೊಚ್ಚಿಕೊಂಡವು. ಆದರೆ, ಕಿರಿಯ ಮರಿ ಮಾತ್ರ ಹಾಗೆ ಹೇಳಲಿಲ್ಲ. “”ಅಮ್ಮ, ನಿನ್ನ ಮಾತಿನಂತೆಯೇ ದೃಢವಾದ ಒಂದು ಮನೆಯನ್ನು ಕಟ್ಟುತ್ತೇನೆ. ಶತ್ರುಗಳ ಕೈಗೆ ಸಿಗದಂತೆ ನನ್ನನ್ನು ನಾನು ರಕ್ಷಿಸಿಕೊಳ್ಳುತ್ತೇನೆ” ಎಂದು ಹೇಳಿತು. ಅದರ ಮಾತು ಕೇಳಿ ತಾಯಿ ಹಂದಿಗೆ ಮನಸ್ಸು ಹಗುರವಾಯಿತು. ಅದು, “”ಪ್ರಪಂಚದಲ್ಲಿ ಬದುಕಬೇಕಿದ್ದರೆ ಶಕ್ತಿ ಮಾತ್ರ ಸಾಲುವುದಿಲ್ಲ. ಜಾಣತನವೂ ಬೇಕು. ಅದು ನನ್ನ ಬಳಿ ಇದೆ. ನಿಮ್ಮಲ್ಲಿ ಯಾರಿಗಾದರೂ ಬೇಕಿದ್ದರೆ ಕೊಟ್ಟುಬಿಡುತ್ತೇನೆ” ಎಂದಿತು.
ಹಿರಿಯ ಮರಿಗಳು ನಕ್ಕುಬಿಟ್ಟವು. “”ಆಹಾರ ಗಳಿಸಲು ಬೇಕಾಗಿರುವುದು ಜಾಣತನವಲ್ಲ. ಬಲವಾದ ದಾಡೆಗಳು ಮತ್ತು ಬಲವಾದ ಕೈಕಾಲುಗಳು. ಇದೆರಡೂ ನಮ್ಮ ಬಳಿಯಿರುವಾಗ ನಿನ್ನ ಜಾಣತನವನ್ನು ಇಟ್ಟುಕೊಂಡು ನಾವೇನು ಮಾಡಲಿ?” ಎಂದು ಕೇಳಿದವು. ಕಿರಿಯ ಮರಿ ಹಾಗೆನ್ನಲಿಲ್ಲ. “”ನಿನ್ನ ಮಾತು ಸರಿಯಮ್ಮ. ಕಷ್ಟಗಳು ಬಂದರೆ ಎದುರಿಸಲು ಜಾಣತನವಿದ್ದರೆ ಮಾತ್ರ ಧೈರ್ಯ ಬರುತ್ತದೆ. ಅವರಿಗೆ ಅದು ಬೇಡವೆಂದಾದರೆ ನನಗೇ ಕೊಟ್ಟುಬಿಡು” ಎಂದು ಕೇಳಿತು. ತಾಯಿ ಹಂದಿ ಮರಿಗೆ ಜಾಣತನವನ್ನು ಕೊಟ್ಟು ಕಣ್ಣುಮುಚ್ಚಿತು.
ಬಳಿಕ ದೊಡ್ಡ ಮರಿ ಕೆಲವು ಕಲ್ಲುಗಳು ಮತ್ತು ಕೋಲುಗಳನ್ನು ತಂದು ಒಂದು ಹಗುರವಾದ ಮನೆ ಕಟ್ಟಿತು. ಎರಡನೆಯ ಮರಿ ಅದರ ಬಳಿಯಲ್ಲಿ ಕೆಸರಿನಿಂದ ಗೋಡೆ ಕಟ್ಟಿ ಹುಲ್ಲು ಹೊದೆಸಿದ ಒಂದು ಮನೆಯನ್ನು ನಿರ್ಮಿಸಿತು. ಆದರೆ ಮೂರನೆಯ ಮರಿ ಹಾಗಲ್ಲ, ಕಲ್ಲುಗಳಿಂದ ಭದ್ರವಾದ ಗೋಡೆ ಕಟ್ಟಿತು. ಮರದ ಕಿಟಕಿಗಳನ್ನು, ಬಾಗಿಲುಗಳನ್ನು ಜೋಡಿಸಿತು. ಛಾವಣಿಗೆ ಹೆಂಚು ಹೊದೆಸಿತು. ಮನೆಯಲ್ಲಿ ವಾಸ ಆರಂಭಿಸಿತು.
ಗಡವ ತೋಳಕ್ಕೆ ಹಂದಿಮರಿಗಳ ವಾಸನೆ ಸಿಕ್ಕಿತು. ಅದು ಮೊದಲ ನೆಯ ಮನೆಗೆ ಬಂದಿತು. “”ಮರಿ, ನಾನು ನಿನ್ನ ಅಜ್ಜಿ ಬಂದಿದ್ದೇನೆ, ಬಾಗಿಲು ತೆರೆ” ಎಂದು ಕೂಗಿತು. “”ನನಗೆ ಅಜ್ಜಿಯೂ ಇಲ್ಲ, ಅತ್ತೆಯೂ ಇಲ್ಲ. ಹೋಗು ಸುಮ್ಮನೆ” ಎಂದು ಹಂದಿಮರಿ ಧೈರ್ಯದಿಂದ ಹೇಳಿತು. “”ಬಾಗಿಲು ತೆರೆಯದಿದ್ದರೆ ಒಳಗೆ ಹೇಗೆ ಬರುತ್ತೇನೋ ನೋಡು” ಎಂದು ತೋಳವು ಬಾಗಿಲನ್ನು ಮೂತಿಯಿಂದ ದೂಡಿತು. ಆಗ ಮನೆಯೇ ಬಿದ್ದುಬಿಟ್ಟಿತು. ಹಂದಿಮರಿ ಹೇಗೋ ಪಾರಾಗಿ ಎರಡನೆಯ ಮರಿಯ ಮನೆಯೊಳಗೆ ನುಸುಳಿತು.
ತೋಳ ಆ ಮನೆಗೂ ಬಂದಿತು. “”ಮರಿ, ಬಾಗಿಲು ತೆರೆ. ನಾನು ನಿನ್ನ ಅತ್ತೆ ಬಂದಿದ್ದೇನೆ” ಎಂದು ಕರೆಯಿತು. ಒಳಗಿದ್ದ ಮರಿ, “”ಅತ್ತೆಯಂತೆ ಅತ್ತೆ! ಸುಮ್ಮನೆ ಹೋಗು. ಬಾಗಿಲು ತೆರೆಯುವುದಿಲ್ಲ” ಎಂದು ಕೋಪದಿಂದ ಹೇಳಿತು. “”ಬಾಗಿಲು ತೆರೆಯದಿದ್ದರೆ ಒಳಗೆ ಹೇಗೆ ಬರುವುದೆಂದು ನನಗೆ ಗೊತ್ತಿಲ್ಲವೆ? ನೋಡು ನನ್ನ ಪರಾಕ್ರಮ” ಎಂದು ತೋಳವು ಮೂತಿಯಿಂದ ಮನೆಯ ಕೆಸರಿನ ಗೋಡೆಯನ್ನು ತಳ್ಳಿತು. ಒಳಗಿದ್ದ ಹಂದಿ ಮರಿಗಳು ಜೀವ ಭಯದಿಂದ ತತ್ತರಿಸಿ ಕಿರಿಯ ಮರಿಯ ಮನೆಯ ಬಳಿಗೆ ಹೋದವು. ತಮ್ಮನ್ನು ಒಳಗೆ ಸೇರಿಸಿಕೊಳ್ಳುವಂತೆ ಬೇಡಿದವು. ಕಿರಿಯ ಮರಿ ಅವುಗಳನ್ನು ಮನೆಯೊಳಗೆ ಕರೆದು, ಒಂದು ಕಡೆ ಮುಚ್ಚಿಟ್ಟು ಬಾಗಿಲು ಹಾಕಿತು.
ತೋಳ ಅಲ್ಲಿಗೇ ಬಿಡಲಿಲ್ಲ. ಭದ್ರವಾಗಿರುವ ಮೂರನೆಯ ಮನೆಗೂ ಬಂದಿತು. ಜೋರಾಗಿ ಬಾಗಿಲು ಬಡಿಯಿತು. ಒಳಗಿರುವ ಮರಿ, “”ಯಾರದು? ಹಳೆಯ ಪಾತ್ರೆಗಳ ವ್ಯಾಪಾರಿಯೆ?” ಎಂದು ಕೇಳಿತು. “”ಅಲ್ಲವಪ್ಪ, ನಿನ್ನ ಮುದಿ ಅಜ್ಜ ಬಂದಿದ್ದೇನೆ. ನಿನಗೆ ನೆನಪಿಲ್ಲವೆ? ವರ್ಷವೂ ಉಡುಗೊರೆಗಳನ್ನು ತಂದು ಕೊಡುತ್ತಿದ್ದೆ. ನಾನೀಗ ಉಡುಗೊರೆ ತಂದಿದ್ದೇನೆ, ಹೊರಗೆ ತುಂಬ ಚಳಿಯಿದೆ. ಒಳಗೆ ಬರುತ್ತೇನೆ” ಎಂದು ತೋಳ ಸವಿಮಾತುಗಳಿಂದ ಕರೆಯಿತು.
“”ನನ್ನ ಅಜ್ಜನೆ? ಓಹೋ ಗೊತ್ತಾಯಿತು. ಆದರೆ ಅವರು ಹೀಗೆ ಬಾಗಿಲು ಬಡಿಯುವುದಿಲ್ಲ. ಕಿಟಕಿಯ ಬಳಿ ನಿಂತು ತನ್ನ ಕೋರೆ ಹಲ್ಲುಗಳನ್ನು ತೋರಿಸುತ್ತಿದ್ದರು. ಆಮೇಲೆ ನಾನು ಬಾಗಿಲು ತೆರೆಯುತ್ತಿದ್ದೆ. ಆದರೆ ನೀನೀಗ ಬಾಗಿಲು ಬಡಿಯಯುವುದು ಕಂಡು ಅನುಮಾನ ಬಂದಿದೆ’ ಎಂದು ಹೇಳಿತು ಹಂದಿಮರಿ. ತೋಳವು, “”ಅಯ್ಯೋ ದೇವರೆ, ವಯಸ್ಸಾಯಿತಲ್ಲ. ಹಾಗೆ ಮಾಡಬೇಕೆಂಬುದನ್ನು ಮರೆತೇಬಿಟ್ಟಿದ್ದೆ ನೋಡು. ಕಿಟಕಿಯ ಬಳಿಗೆ ಬಾ, ನನ್ನ ಕೋರೆಹಲ್ಲುಗಳನ್ನು ನೋಡು” ಎಂದು ತೆರೆದ ಕಿಟಕಿಯ ಬಳಿ ನಿಂತು ಬಾಯಿ ತೆರೆದು ತೋರಿಸಿತು. ಮರಿ ಒಳಗಿನಿಂದ ಒಂದು ಸುತ್ತಿಗೆ ತಂದು, “”ಅಜ್ಜನ ಹಲ್ಲುಗಳು ಅಲುಗಾಡುತ್ತಿದ್ದವು. ನಿನ್ನ ಹಲ್ಲು ಗಟ್ಟಿಯಾಗಿರುವಂತಿದೆ. ಯಾವುದಕ್ಕೂ ಪರೀಕ್ಷೆ ಮಾಡುತ್ತೇನೆ” ಎಂದು ಅದರಿಂದ ಒಂದೇಟು ಬಾರಿಸಿತು. ತೋಳದ ಹಲ್ಲುಗಳು ಮುರಿದುಹೋದವು.
ಆದರೂ ತೋಳ ಹಿಡಿದ ಹಟ ಬಿಡಲಿಲ್ಲ. “”ಪರೀಕ್ಷೆಯಲ್ಲಿ ನಿನ್ನ ಅಜ್ಜನೇ ಎಂಬುದು ತಿಳಿಯಿತಲ್ಲವೆ? ಇನ್ನೇಕೆ ತಡ ಮಾಡುತ್ತೀಯಾ, ಬಾಗಿಲು ತೆರೆ” ಎಂದು ಕೇಳಿತು. “”ಹಲ್ಲು ನೋಡಿದರೆ ನನ್ನ ಅಜ್ಜನೇ ಎಂಬುದರಲ್ಲಿ ಸಂದೇಹವಿಲ್ಲ. ಆದರೂ ಅಜ್ಜ ನಿನ್ನ ಉಗುರುಗಳನ್ನು ಕಿಟಕಿಯಲ್ಲಿ ತೋರಿಸಿದ ಮೇಲೆ ಒಳಗೆ ಬರುತ್ತಿದ್ದಿಯಲ್ಲವೆ? ಈಗ ಯಾಕೆ ಹಾಗೆ ಮಾಡಲಿಲ್ಲ?” ಎಂದು ಕೇಳಿತು ಮರಿ ಹಂದಿ.
“”ಅಯ್ಯೋ ಹಾಳು ಮರೆವು. ಅದನ್ನು ತೋರಿಸಬೇಕೆಂದು ನೆನಪಾ ಗಲಿಲ್ಲ ನೋಡು” ಎಂದು ತೋಳವು ಕಿಟಕಿಯ ಮೂಲಕ ಎರಡೂ ಕೈಗಳನ್ನು ಒಳಗಿಳಿಸಿತು. ಮರಿ, “”ಉಗುರುಗಳು ಅಜ್ಜನ ಉಗುರುಗಳ ಹಾಗೆಯೇ ಇವೆ. ಆದರೆ ಹೌದೋ ಅಲ್ಲವೋ ಅಂತ ಒಂದು ಸಲ ನೋಡಿಬಿಡುತ್ತೇನೆ” ಎನ್ನುತ್ತ ಒಂದು ಕತ್ತರಿ ತಂದು ಉಗುರುಗಳನ್ನು ಕತ್ತರಿಸಿ ಹಾಕಿತು. ಆದರೆ ಬಾಗಿಲು ತೆರೆಯಲಿಲ್ಲ. ತೋಳವು ಕೋಪ ದಿಂದ, “”ಇನ್ನೂ ನಿನ್ನ ಅನುಮಾನ ಹೋಗಲಿಲ್ಲವೆ? ಸುಮ್ಮನೆ ಪ್ರಶ್ನೆಗಳನ್ನು ಕೇಳಿ ಯಾಕೆ ಮುದುಕನನ್ನು ಅವಮಾನಿಸುವೆ? ನನಗೆ ಸಿಟ್ಟು ಬಂದರೆ ಏನಾಗುತ್ತದೆಂದು ಗೊತ್ತಲ್ಲವೆ? ನಿನ್ನನ್ನು ಈ ಮನೆಯೊಂದಿಗೆ ಭಸ್ಮ ಮಾಡಿಬಿಟ್ಟೇನು” ಎಂದು ಗರ್ಜಿಸಿತು.
“”ಎರಡು ಪರೀಕ್ಷೆಗಳಿಂದ ನೀನು ನನ್ನ ಅಜ್ಜನೆಂಬುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ. ದಯವಿಟ್ಟು ಮನೆಯನ್ನು ಸುಟ್ಟು ಹಾಕಬೇಡ. ಆದರೆ ನನ್ನ ಅಜ್ಜ ಯಾವಾಗಲೂ ಒಳಗೆ ಬರುತ್ತಿದ್ದುದು ತೆರೆದ ಬಾಗಿಲಿನಿಂದ ಅಲ್ಲ. ಛಾವಣಿಯ ಮೇಲೆ ಕಾಣಿಸುವ ಹೊಗೆ ನಳಿಗೆಯಲ್ಲಿ ಇಳಿದು ಬರುತ್ತಿದ್ದರು. ನೀನು ಹಾಗೆ ಬಂದರೆ ಮಾತ್ರ ನನಗೆ ನಿನ್ನ ಮೇಲೆ ನಂಬಿಕೆ ಬರುತ್ತದೆ” ಎಂದು ಹಂದಿಮರಿ ಹೇಳಿತು.
ತೋಳಕ್ಕೆ ಸಂತೋಷವಾಯಿತು. ಬೇಟೆ ಬಲೆಗೆ ಬಿದ್ದ ಹಾಗೆಯೇ ಎಂದು ಖುಷಿಪಡುತ್ತ ಮನೆಯ ಛಾವಣಿಯ ಮೇಲೇರಿತು. ಹೊಗೆಗೂಡಿನ ಮೂಲಕ ಒಳಗಿಳಿಯಲು ಮುಂದಾಯಿತು. ಆಗ ಹಂದಿಮರಿ ಒಲೆಗೆ ಕಟ್ಟಿಗೆಯಿಟ್ಟು ಬೆಂಕಿಯುರಿಸಿತು. ಬೆಂಕಿಯ ಮೇಲೆ ಒಂದು ದೊಡ್ಡ ಪಾತ್ರೆಯಲ್ಲಿ ನೀರು ಇಟ್ಟು ಕುದಿಸತೊಡಗಿತು. ಹೊಗೆಗೂಡಿನೊಳಗೆ ಮೂತಿಯಿರಿಸಿದಾಗ ತೋಳಕ್ಕೆ ಉಸಿರುಗಟ್ಟಿತು. ಕಣ್ಣಿಗೆ ಏನೂ ಕಾಣಿಸಲಿಲ್ಲ. ಧೊಪ್ಪನೆ ಬಂದು ಕುದಿಯುತ್ತಿದ್ದ ನೀರಿಗೆ ಬಿದ್ದು ಬೆಂದು ಕರಗಿ ಹೋಯಿತು.
ಮರಿ ಹಂದಿ ತನ್ನ ಅಣ್ಣಂದಿರನ್ನು ಕರೆದು ಬೆಂದ ತೋಳವನ್ನು ಮೂರು ತಟ್ಟೆಗಳಿಗೆ ಬಡಿಸಿ ತಿನ್ನಲು ಕುಳಿತಿತು. ತಿಂದು ಮುಗಿದ ಮೇಲೆ ಹಿರಿಯ ಹಂದಿಗಳು, “”ಈ ತಿಂಡಿ ಯಾವುದರಿಂದ ಮಾಡಿದ್ದು? ತುಂಬ ರುಚಿಯಾಗಿದೆ” ಎಂದು ಕೇಳಿದವು. “”ಅಮ್ಮ ಕೊಟ್ಟಿದ್ದಳಲ್ಲ ಜಾಣತನ! ಅದರಿಂದಲೇ ತಯಾರಾದ ತಿಂಡಿ ಇದು” ಎಂದು ಮರಿ ಹಂದಿ ಗುಟ್ಟು ಬಿಟ್ಟುಕೊಡದೆ ಹೇಳಿತು.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.