ಇಂಗ್ಲೆಂಡಿನ ಕತೆ ಮಂದಮತಿ
Team Udayavani, Apr 22, 2018, 6:00 AM IST
ಒಬ್ಬ ವೃದ್ಧೆಗೆ ಜಾಕ್ ಎಂಬ ಒಬ್ಬನೇ ಮಗನಿದ್ದ. ತಾಯಿಗೆ ಮಗನ ಮೇಲೆ ತುಂಬ ಮಮತೆ. ಹಾಗಾಗಿ ತಾನೇ ಕಷ್ಟಪಟ್ಟು ದುಡಿಯುತ್ತಿದ್ದಳು. ಬೇರೆಯವರ ಬಟ್ಟೆಗಳನ್ನು ತಂದು ಉಡುಪು ತಯಾರಿಸಿ ಕೊಟ್ಟು ಒಂದಿಷ್ಟು ಹಣ ಸಂಪಾದಿಸುತ್ತಿದ್ದಳು. ಅದರಲ್ಲಿ ಆಹಾರ ಸಾಮಗ್ರಿಗಳನ್ನು ಖರೀದಿಸಿ ತಂದು ಹೊಟ್ಟೆ ತುಂಬ ಮಗನಿಗೇ ಉಣಬಡಿಸುತ್ತಿದ್ದಳು. ಅವನು ತಿಂದು ಮಿಕ್ಕುಳಿದರೆ ತಾನು ತಿನ್ನುವಳು. ಅತಿ ಮುದ್ದಿನಿಂದ ಬೆಳೆದ ಕಾರಣ ತಿನ್ನುವುದು, ಮಲಗಿ ನಿದ್ರಿಸುವುದು ಬಿಟ್ಟರೆ ಜಾಕ್‌ನಿಗೆ ಇನ್ನೇನೂ ಗೊತ್ತಿರಲಿಲ್ಲ. ಶಾಲೆಗೆ ಹೋಗಿ ವಿದ್ಯೆ ಕಲಿಯದ ಅವನಿಗೆ ವ್ಯವಹಾರದ ಚಾತುರ್ಯವೂ ಇರಲಿಲ್ಲ. ಅವನನ್ನು ನೆರೆಹೊರೆಯವರು “ಮಂದಮತಿ ಹುಡುಗ’ ಎಂದೇ ಹೀಯಾಳಿಸುತ್ತಿದ್ದರು.
ಆದರೆ ಒಂದು ದಿನ ವೃದ್ಧೆಗೆ ಚಾಪೆಯಿಂದ ಏಳಲೂ ಸಾಧ್ಯವಾಗದಷ್ಟು ಅಶಕ್ತಿಯುಂಟಾಯಿತು. ಮಗನನ್ನು ಬಳಿಗೆ ಕರೆದು, “”ಇಷ್ಟು ದಿವಸ ನಾನು ದುಡಿದು ನಿನ್ನ ಹೊಟ್ಟೆ ತುಂಬಿಸಿದೆ. ಇನ್ನು ಕೆಲಸ ಮಾಡುವ ಬಲ ನನ್ನ ದೇಹದಲ್ಲಿ ಇಲ್ಲ. ನೀನು ಹೊರಗೆ ಹೋಗಿ ಕೆಲಸ ಮಾಡಿ ಏನಾದರೂ ಸಂಪಾದಿಸಿಕೊಂಡು ಬಂದು ನನ್ನನ್ನು ಸಲಹಬೇಕು” ಎಂದಳು. ಜಾಕ್ ತಾಯಿಯ ಮಾತಿಗೆ ಒಪ್ಪಿಕೊಂಡ. ಯಾರಾದರೂ ಕೆಲಸ ಕೊಡುತ್ತಾರೋ ನೋಡಲು ಊರಿಡೀ ತಿರುಗಾಡಿದ. ಒಬ್ಬ ರೈತನಿಗೆ ಹೊಲದ ಉಳುಮೆಗೆ ಸಹಾಯಕನೊಬ್ಬ ಬೇಕಾಗಿದ್ದ. ಅವನು ತನ್ನೊಂದಿಗೆ ದುಡಿಮೆಗೆ ಸೇರಿಸಿಕೊಂಡ. ಆದರೆ ಜಾಕ್ ಬುದ್ಧಿವಂತನಲ್ಲ, ಯಾವ ಕೆಲಸವನ್ನೂ ಮಾಡಲು ತಿಳಿಯದವನು ಎಂಬುದು ರೈತನಿಗೆ ತಿಳಿಯಿತು. ವೇತನ ಎಂದು ಒಂದು ಪೆನ್ನಿ ತಂದು ಅವನ ಕೈಯಲ್ಲಿಟ್ಟು ಮನೆಗೆ ಹೋಗಲು ಹೇಳಿದ.
ಜಾಕ್ ಪೆನ್ನಿಯೊಂದಿಗೆ ಮನೆಗೆ ಬರುವ ದಾರಿಯಲ್ಲಿ ಒಂದು ಹಳ್ಳ ಇತ್ತು. ಅದನ್ನು ದಾಟುವಾಗ ಕೈಯಲ್ಲಿದ್ದ ಪೆನ್ನಿ ನೀರಿಗೆ ಬಿದ್ದು ಕೈಗೆ ಸಿಗದೆ ಹೋಯಿತು. ಮಗನ ದಾರಿಯನ್ನೇ ಕಾಯುತ್ತ ತಾಯಿ ಮನೆಯಲ್ಲಿ ಕುಳಿತಿದ್ದಳು. ಅವನು ಬಂದು ನಾಣ್ಯ ಕಳೆದುಕೊಂಡ ವಿಷಯವನ್ನು ಹೇಳಿದ. ತಾಯಿ ತಲೆ ಚಚ್ಚಿಕೊಂಡು, “”ಯಾರಾದರೂ ಏನಾದರೂ ಕೊಟ್ಟರೆ ಕೈಯಲ್ಲಿ ಹಿಡಿದುಕೊಂಡು ಬರುವುದುಂಟೆ? ಕಿಸೆಯಲ್ಲಿ ಹಾಕಿಕೊಂಡು ಬರಬೇಕಿತ್ತು” ಎಂದು ನೀತಿ ಹೇಳಿದಳು. “”ಸರಿಯಮ್ಮ, ನಾಳೆ ಬರುವಾಗ ಹಾಗೆಯೇ ಮಾಡುತ್ತೇನೆ’ಎಂದ ಜಾಕ್.
ಮರುದಿನ ಜಾಕ್ ಒಬ್ಬ ಹೈನುಗಾರನ ಕೊಟ್ಟಿಗೆಗೆ ಕೆಲಸ ಮಾಡಲು ಹೋದ. ಸಂಜೆಯವರೆಗೂ ಹಸುಗಳಿಗೆ ಕಲಗಚ್ಚು ಕುಡಿಸುವ ಕೆಲಸ ಮಾಡಿದ. ಪ್ರತಿಯಾಗಿ ಹೈನುಗಾರ ಅವನಿಗೆ ಒಂದು ಪಾತ್ರೆಯ ತುಂಬ ಹಾಲನ್ನು ನೀಡಿದ. ಏನಾದರೂ ಕೊಟ್ಟರೆ ಕಿಸೆಯಲ್ಲಿ ಹಾಕಿಕೊಂಡು ಬರಬೇಕೆಂದು ತಾಯಿ ಹೇಳಿದ ಮಾತು ಅವನಿಗೆ ನೆನಪಾಯಿತು. ಪಾತ್ರೆಯಲ್ಲಿದ್ದ ಹಾಲನ್ನು ಕಿಸೆಗೆ ಸುರುವಿಕೊಂಡ. ಅದು ಸೋರಿ ಖಾಲಿಯಾದ ಬಳಿಕ ಮತ್ತೆ ತುಂಬಿಸಿದ. ಮನೆ ಸೇರಿದಾಗ ಪಾತ್ರೆ ಖಾಲಿಯಾಗಿತ್ತು. ಮಗನ ಅಂಗಿಯಿಡೀ ನೆನೆದಿರುವುದನ್ನು ನೋಡಿದ ತಾಯಿ, “”ಇದೇನೋ ಮಾಡಿದೆ?” ಎಂದು ಕೇಳಿದಳು. “”ಏನಾದರೂ ಕೊಟ್ಟರೆ ಕಿಸೆಯಲ್ಲಿ ತುಂಬಿಸಿ ತರಬೇಕೆಂದು ನೀನು ಹೇಳಿದ್ದೆಯಲ್ಲ ಅಮ್ಮ? ಹೀಗಾಗಿ ಎಲ್ಲವೂ ಖಾಲಿಯಾಯಿತು” ಎಂದು ಜಾಕ್ ನಡೆದುದನ್ನು ಹೇಳಿದ.
“ಅಯ್ಯೋ ಮಂಕೇ, ಇದನ್ನೆಲ್ಲ ಕೊಟ್ಟರೆ ತಲೆಯಲ್ಲಿ ಹೊತ್ತುಕೊಂಡು ಬರಬೇಕಲ್ಲವೆ?” ಎಂದಳು ತಾಯಿ ಬೇಸರದಿಂದ. “”ಮುಂದೆ ಹಾಗೆಯೇ ಮಾಡುತ್ತೇ ನಮ್ಮ” ಎಂದ ಜಾಕ್. ಮರುದಿನ ಅದೇ ಹೈನುಗಾರನ ಕೊಟ್ಟಿಗೆಗೆ ಹೋಗಿ ಕೆಲಸ ಮಾಡಿದ. ಸಂಬಳವೆಂದು ಅವನು ಕೊಟ್ಟ ಬೆಣ್ಣೆ ಮುದ್ದೆಯನ್ನು ತಾಯಿ ಹೇಳಿದ ಹಾಗೆ ತಲೆಯ ಮೇಲಿಟ್ಟುಕೊಂಡು ಬಂದ. ಬೆಣ್ಣೆ ಪೂರ್ತಿ ಕರಗಿಹೋಯಿತು. ಮನೆಗೆ ಬಂದ ಮಗನ ಅವಸ್ಥೆ ಕಂಡು ತಾಯಿ ಬೇಸರಿಸಿಕೊಂಡಳು. “”ಇದನ್ನೆಲ್ಲ ತಲೆಯಲ್ಲಿ ಹೊತ್ತು ತರುವುದುಂಟೆ? ಕೈಯಲ್ಲಿ ಹಿಡಿದು ತರಬೇಕಾಗಿತ್ತು” ಎಂದಳು. “”ಆಗಲಮ್ಮ, ಅದೇ ರೀತಿ ಮಾಡುತ್ತೇನೆ”ಎಂದ ಜಾಕ್.
ಮರುದಿನ ಜಾಕ್ ಒಬ್ಬ ಪ್ರಾಣಿ ಸಂಗ್ರಾಹಕನ ಬಳಿ ಕೆಲಸ ಮಾಡಲು ಹೋದ. ದುಡಿತದ ಕೂಲಿ ಎಂದು ಅವನು ಒಂದು ಮುದ್ದಾದ ಬೆಕ್ಕನ್ನು ನೀಡಿದ. ತಾಯಿಯ ಮಾತು ಮೀರಬಾರದೆಂದು ಬೆಕ್ಕನ್ನು ಕೈಯಲ್ಲಿ ಹಿಡಿದುಕೊಂಡು ಜಾಕ್ ಬರತೊಡಗಿದ. ಬೆಕ್ಕು ಅವನಿಗೆ ಮೈತುಂಬ ಪರಚಿ ಗಾಯ ಮಾಡಿ, ಕೊಸರಾಡಿ ಓಡಿಹೋಯಿತು. ಜಾಕ್ ಮೈಯಿಡೀ ರಕ್ತ ಸುರಿಸಿಕೊಂಡು ಬಂದುದನ್ನು ಕಂಡು ತಾಯಿ, “”ಏನಾಯಿತಪ್ಪಾ?” ಎಂದು ಕೇಳಿದಳು. “”ನಿನ್ನ ಮಾತಿನಂತೆ ಬೆಕ್ಕನ್ನು ಕೈಯಲ್ಲಿ ಹಿಡಿದುಕೊಂಡು ಬಂದೆ” ಎಂದು ಅವನು ನಡೆದ ಸಂಗತಿ ಹೇಳಿದ. ತಾಯಿ ಪಶ್ಚಾತ್ತಾಪದಿಂದ, “”ಇಂಥದ್ದನ್ನೆಲ್ಲ ಹಗ್ಗ ಹಾಕಿ ಎಳೆದುಕೊಂಡು ಬರಬೇಕು, ಕೈಯಲ್ಲಿ ತರುವುದಲ್ಲ” ಎಂದು ಬುದ್ಧಿ ಹೇಳಿದಳು. “”ಮುಂದೆ ಹಾಗೆ ಮಾಡುತ್ತೇನಮ್ಮ” ಎಂದ ಜಾಕ್.
ಮಾರನೆಯ ದಿನ ಜಾಕ್ ಒಬ್ಬ ಕಟುಕನ ಬಳಿ ಕೆಲಸಕ್ಕೆ ಹೋದ. ಅವನ ಕೆಲಸಕ್ಕೆ ಕಟುಕ ಸ್ವಲ್ಪ$ ಕುರಿ ಮಾಂಸವನ್ನು ಪೊಟ್ಟಣ ಕಟ್ಟಿ ನೀಡಿದ. ತಾಯಿಯ ಮಾತು ಅವನಿಗೆ ನೆನಪಾಯಿತು. ಪೊಟ್ಟಣಕ್ಕೆ ಒಂದು ಹಗ್ಗ ಕಟ್ಟಿದ. ಬೀದಿಯಲ್ಲಿ ಎಳೆದುಕೊಂಡು ಮನೆಗೆ ಬಂದ. ಕೈಯಲ್ಲಿ ಹಗ್ಗ ಮಾತ್ರ ಇತ್ತು. ಪೊಟ್ಟಣ ಧೂಳಿನ ಪಾಲಾಗಿತ್ತು. “”ತಾಯಿ ಇದೇಕೋ ಕೈಯಲ್ಲಿ ಹಗ್ಗ ಹಿಡಿದುಕೊಂಡು ಬಂದಿದ್ದೀ?” ಎಂದು ಪ್ರಶ್ನಿಸಿದಳು. “”ನೀನು ಏನಾದರೂ ಕೊಟ್ಟರೆ ಹಗ್ಗ ಹಾಕಿ ಎಳೆದುಕೊಂಡು ಬರಲು ಹೇಳಿದೆ ತಾನೆ? ಹಗ್ಗದ ತುದಿಯಲ್ಲಿ ಮಾಂಸದ ಪೊಟ್ಟಣ ಇತ್ತು. ಈಗ ಇಲ್ಲ” ಎಂದ ಜಾಕ್.
“”ಹೀಗೆ ಎಳೆದು ತಂದರೆ ಉಳಿಯಲು ಸಾಧ್ಯವೆ? ಹೆಗಲಿನಲ್ಲಿ ಹೊತ್ತು ತರಬೇಕಾಗಿತ್ತು” ಎಂದು ಹೇಳಿದಳು ತಾಯಿ. “”ಹಾಗೆಯೇ ಮಾಡುತ್ತೇನೆ” ಎಂದು ಜಾಕ್ ಒಪ್ಪಿದ. ಮರುದಿನ ಒಬ್ಬ ಅಗಸನ ಹತ್ತಿರ ಕೆಲಸ ಮಾಡಲು ಸೇರಿಕೊಂಡ. ಸಂಜೆಯ ವರೆಗೂ ಕೊಳೆ ಬಟ್ಟೆಗಳನ್ನು ಒಗೆದು ಮಡಿ ಮಾಡಿದ ಅವನಿಗೆ ಅಗಸ ಒಂದು ಮುದಿ ಕತ್ತೆಯನ್ನು ಪ್ರತಿಫಲವೆಂದು ಕೊಟ್ಟುಬಿಟ್ಟ. ತಾಯಿ ಹೆಗಲಿನಲ್ಲಿ ಹೊತ್ತು ತರುವಂತೆ ಹೇಳಿದ ಮಾತು ಜಾಕ್ ಮರೆತಿರಲಿಲ್ಲ. ಕತ್ತೆಯನ್ನು ಪ್ರಯಾಸದಿಂದ ಹೊತ್ತುಕೊಂಡ. ಅದು ಕೊಸರಾಡುತ್ತಿದ್ದರೂ ಕೆಳಗಿಳಿಯಲು ಬಿಡದೆ ಪ್ರಯತ್ನದಿಂದ ಅವಚಿ ಹಿಡಿದುಕೊಂಡು ಮನೆಯ ದಾರಿ ಹಿಡಿದ.
ಈ ಅವಸ್ಥೆಯಲ್ಲಿ ಜಾಕ್ ಬೀದಿಯಲ್ಲಿ ಬರುತ್ತಿರುವುದನ್ನು ಒಬ್ಬ ಧನಿಕನ ಒಬ್ಬಳೇ ಮಗಳು ಕಿಟಕಿಯಲ್ಲಿ ನೋಡಿದಳು. ಎಲ್ಲರನ್ನೂ ಕರೆದು ಅವನನ್ನು ತೋರಿಸಿ “”ಎಲ್ಲರೂ ನೋಡಿ, ಎಂತಹ ತಮಾಷೆ ಅಲ್ಲಿದೆ!” ಎಂದು ಹೇಳುತ್ತ ಬಿದ್ದು ಬಿದ್ದು ನಗತೊಡಗಿದಳು. ಧನಿಕನ ಮಗಳು ಹುಟ್ಟಿದ ಮೇಲೆ ನಕ್ಕಿರಲಿಲ್ಲ. ಅದಕ್ಕಾಗಿ ಅವನು ಕೈಗೊಂಡ ಯಾವ ಉಪಾಯವೂ ಫಲಿಸಿರಲಿಲ್ಲ. “”ಅವಳನ್ನು ನಗುವ ಹಾಗೆ ಯಾರೇ ಮಾಡಿದರೂ ಅವರಿಗೆ ನನ್ನ ಮಗಳೊಂದಿಗೆ ಮದುವೆ ಮಾಡಿ ನನ್ನ ಉತ್ತರಾಧಿಕಾರಿಯನ್ನಾಗಿ ಮಾಡುತ್ತೇನೆ” ಎಂದು ಧನಿಕ ಸಾರಿದ್ದ. ಅವನು ಜಾಕ್‌ನನ್ನು ಕರೆದು, “”ನನ್ನ ಚಿಂತೆಯನ್ನು ಪರಿಹರಿಸಿ ನೀನು ನನ್ನ ಮಗಳಿಗಿರುವ ಕೊರತೆಯನ್ನು ನೀಗಿದ್ದೀ. ಅದಕ್ಕಾಗಿ ನನ್ನ ಮಗಳ ಜೊತೆಗೆ ನಿನ್ನ ಮದುವೆ ನಡೆಯುತ್ತದೆ, ನನ್ನ ಎಲ್ಲ ಆಸ್ತಿಯೂ ನಿನಗೇ ಸೇರುತ್ತದೆ” ಎಂದು ಹೇಳಿ ತನ್ನ ಮಾತಿನಂತೆಯೇ ಅಳಿಯನಾಗಿ ಮಾಡಿಕೊಂಡ. ತಾಯಿಯನ್ನು ಕರೆದುಕೊಂಡು ಬಂದು ಜಾಕ್ ಹೆಂಡತಿಯ ಜೊತೆಗೆ ಧನಿಕನ ಮನೆಯಲ್ಲಿ ಸುಖದಿಂದ ಇದ್ದ.
– ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.