ಪ್ರಬಂಧ: ಒಂಟೆ ಕವಿಗೋಷ್ಠಿ
Team Udayavani, Jan 19, 2020, 5:00 AM IST
ಗುಂಡಣ್ಣ ನಮ್ಮ ಊರಿನ ಸಾಹಿತ್ಯ ಸಂಘಟನೆಗೆ ಅಧ್ಯಕ್ಷರಾಗಿ ನೇಮಕ ಆಗಿರುವುದು ಹಲವು ಜನರ ಕೆಂಗಣ್ಣಿಗೆ ಗುರಿಯಾಗಿದೆ.ಆದರೂ ಗುಂಡಣ್ಣರ ಅಭಿಮಾನಿಗಳ ಪಾಲಿಗೆ ಇದೊಂದು ಸಂತೋಷದ ವಿಷಯವಾಗಿದೆ. ಸಂಘಟನೆಯಲ್ಲಿ ಅನೇಕ ಅನುಭವಿಗಳು, ಮುತ್ಸದ್ಧಿ ಗಳಿರುವಾಗ ಮೊನ್ನೆ ಮೊನ್ನೆ ಬಂದ ಗುಂಡಣ್ಣನವರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ಸರಿಯಲ್ಲ ಎಂದು ಹಲವು ಹಳೆ ಹುಲಿಗಳು ಮೊದ ಮೊದಲು ಗರ್ಜಿಸಿದವು. ಆದರೆ, ಗುಂಡಣ್ಣರ ಕೈ, ಕೇಂದ್ರ ಸಮಿತಿವರೆಗೆ ಮುಟ್ಟಿರೋದ್ರಿಂದ ಯಾರಿಂದಲೂ ಏನೂ ಮಾಡಲು ಸಾಧ್ಯವಾಗಲಿಲ್ಲ.ಹಳೆಹುಲಿಗಳೆಲ್ಲ ಕ್ಷಣ ಮಾತ್ರದಲ್ಲಿ ಇಲಿಗಳಾದವು. ಈಗ ಅವರ ಪಾಲಿನ ಕೆಲಸ ಒಂದೇ- ಗುಂಡಣ್ಣರಿಗೆ ಜೈಕಾರ ಹಾಕೋದು.
ಹಾಗಾಗಿ, ಗುಂಡಣ್ಣನವರ ಪೀಠಾರೋಹಣ ಅಥವಾ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಎದುರು ಮಾತನಾಡುವ ಎಲ್ಲರನ್ನೂ ವೇದಿಕೆಯಲ್ಲಿ ಕುಳ್ಳಿರಿಸಿ, ಅವರಿಗೆ ಪಕಳೆ ಉದುರಲು ಸಿದ್ಧವಾದ ಒಂದು ಕೆಂಪು ಗುಲಾಬಿ ಹಾಗೂ ಸಾಮಾನ್ಯವಾದ ಒಂದು ಶಾಲು ತೊಡಿಸಿ ಬಾಯಿ ಮುಚ್ಚಿ ಹಾಕಲಾಯಿತು.
ಕಾರ್ಯಕ್ರಮದ ಮೊದಲಲ್ಲಿ ಗುಂಡಣ್ಣನವರಿಂದ ಪ್ರಾಸ್ತಾವಿಕ ಭಾಷಣ ನಡೆಯಿತು. ಗುಂಡಣ್ಣರವರು ಮಾತನಾಡುತ್ತ, “”ಈ ವರ್ಷ ನಾವು ಅನೇಕ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ.ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯದ ಅಭಿರುಚಿ ಎಂಬ ಕಾರ್ಯಕ್ರಮ ಏರ್ಪಡಿಸುವ ಅಗತ್ಯ ನಮಗಿಲ್ಲ. ಅದಕ್ಕಾಗಿ ಶಾಲೆ ಕಾಲೇಜುಗಳಲ್ಲಿ ಅಧ್ಯಾಪಕರಿದ್ದಾರೆ. ನಮ್ಮದೇನಿದ್ದರೂ ವಿನೂತನ ಕಾರ್ಯಕ್ರಮ” ಎಂದರು.
ಸಾಹಿತಿಗಳು ದಂತಗೋಪುರದಲ್ಲಿದ್ದು ಬರೀತಾರೆ ಎಂಬ ಟೀಕೆ ಇದೆ. ಈ ಮಾತನ್ನು ನಾವು ಸುಳ್ಳಾಗಿಸುತ್ತೇವೆ. ಅದಕ್ಕಾಗಿ ನಮ್ಮ ಮುಂದಿನ ಕಾರ್ಯಕ್ರಮ “ಮರುಭೂಮಿಯಲ್ಲಿ ಕವನದ ಓಯಸಿಸ್’ ಎಂಬ ಕಾರ್ಯಕ್ರಮ. ರಾಜಸ್ಥಾನದ ಮರುಭೂಮಿಯಲ್ಲಿ ಈ ಕವಿಗೋಷ್ಠಿ ನಡೆಯಲಿದ್ದು ಪ್ರಯಾಣದ ವೆಚ್ಚವನ್ನು ಕವಿಗಳೇ ಭರಿಸತಕ್ಕದ್ದು. ವೆಚ್ಚ ಸುಮಾರು 3 ಸಾವಿರ ರೂಪಾಯಿ ಆಗುತ್ತದೆ. ಕವಿಗೋಷ್ಠಿಗಾಗಿ ಈಗಾಗಲೇ 10 ಒಂಟೆಗಳನ್ನು ಬುಕ್ ಮಾಡಲಾಗಿದ್ದು , ಒಂದೊಂದು ಒಂಟೆಯ ಮೇಲೆ ಮೂವರು ಕವಿ-ಕವಯತ್ರಿಯರಿಗೆ ಸವಾರಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
“”ಆತ್ಮೀಯರೇ, ನೀವು ಬೆಳದಿಂಗಳ ಕವಿಗೋಷ್ಠಿ ಬಗ್ಗೆ ಕೇಳಿರಬಹುದು. ಚಲಿಸುವ ದೋಣಿಯಲ್ಲಿ ನಡೆದ ಕವಿಗೋಷ್ಠಿ ಬಗ್ಗೆ ಕೇಳಿರಬಹುದು. ಆದರೆ, ಮರುಭೂಮಿಯಲ್ಲಿ, ಒಂಟೆಗಳ ಬೆನ್ನ ಮೇಲೆ ಕುಳಿತು ಕವಿಗೋಷ್ಠಿ ಈವರೆಗೆ ನಡೆದಿಲ್ಲ. “ನ ಭೂತೋ…’ ಎಂಬ ಹಾಗೆ. ಹತ್ತು ಒಂಟೆಗಳನ್ನು ವೃತ್ತಾಕಾರವಾಗಿ ನಿಲ್ಲಿಸಿ ಈ ಕವಿಗೋಷ್ಠಿಯನ್ನು ನಡೆಸಲಾಗುವುದು. ಎಲ್ಲ ಕವಿಗಳು ಒಂಟೆಯ ಮೇಲೆ ಇರುವುದರಿಂದ ಕವನ ಓದಿ ಆದೊಡನೆ ಅವರು ತಮ್ಮ ಜಾಗ ಖಾಲಿ ಮಾಡಲಾಗುವುದಿಲ್ಲ. ಹಾಗಾಗಿ, ಪ್ರತಿಯೊಬ್ಬ ಕವಿಗೂ ತನ್ನ ಕವನವನ್ನು ಆಲಿಸುವ ಸಾಕಷ್ಟು ಕಿವಿಗಳು ಇಲ್ಲಿ ಲಭಿಸುವುದು ಒಂದು ವಿಶೇಷ. ಅನೇಕ ಟೀವಿ ಚಾನಲ್‌ಗಳು ಈ ಕಾರ್ಯಕ್ರಮದ ವರದಿಗಾರಿಕೆಗೆ ಬರುವುದರಿಂದ ನಮಗೆ ಒಳ್ಳೆಯ ಪ್ರಚಾರ ಕೂಡ ಲಭಿಸಲಿದೆ” ಎಂದರು.
ನಮ್ಮ ಮತ್ತೂಂದು ಕಾರ್ಯಕ್ರಮ ಜೈಲಿನಲ್ಲಿ ಕೈದಿಗಳಿಗಾಗಿ ಕವಿಗೋಷ್ಠಿ ಕಾರ್ಯಕ್ರಮ ಎಂದು ಗುಂಡಣ್ಣ ಪ್ರಕಟಿಸಿದಾಗ, ಅವರ ಕಾಫಿ ಅನುಯಾಯಿಗಳು ಕೈ ಚಪ್ಪಾಳೆ ತಟ್ಟಿ, ಸೀಟಿ ಹೊಡೆದರು. ಇವರ ಕವನ ವಾಚನ ಕೇಳುವುದೇ ಕೈದಿಗಳಿಗೆ ದೊಡ್ಡ ಶಿಕ್ಷೆ ಎಂಬ ಭಾವನೆ ನನ್ನ ಮನಸ್ಸಿಗೆ ಬಂದರೂ ಹೇಳಲು ಉಪಾಯವುಂಟೇ?
“”ಇನ್ನೂ ಒಂದು ಕಾರ್ಯಕ್ರಮವಿದೆ. ಅದು ಸ್ಮಶಾನದಲ್ಲಿ ಮಧ್ಯರಾತ್ರಿ ಕವಿಗೋಷ್ಠಿ. ಇಲ್ಲಿ ಕೂಡ ಕವಿಗಳಿಗೆ ತಮ್ಮ ವಾಚನ ಕೇಳಲು ಸಹೃದಯರು ಸಿಗುತ್ತಾರೆ. ಯಾಕೆಂದರೆ ತಮ್ಮ ಕವನವಾಚನ ಮುಗಿದ ಹಾಗೆ ಕವಿಗಳು ಎದ್ದು ಹೋಗಲು ಸಾಧ್ಯವಿಲ್ಲ. ಸಂಚಾರ ವ್ಯವಸ್ಥೆ ಇದ್ದರೆ ತಾನೆ ಅವರು ಜಾಗ ಖಾಲಿ ಮಾಡುವುದು! ಬೆಳಗ್ಗಿನವರೆಗೆ ಅವರು ಇರಲೇಬೇಕು. ಇನ್ನು ಸ್ಮಶಾನದಲ್ಲಿ ನಮ್ಮ ಕವಿಗೋಷ್ಠಿ ನಡೆಸಿದರೆ ಸ್ಮಶಾನದ ಬಗ್ಗೆ ನಮಗಿರುವ ಭೀತಿ, ದುಃಖಗಳನ್ನು ಮಾಯವಾಗಿಸಿ, ಸ್ಮಶಾನವೂ ಇತರ ಜಾಗದಂತೆಯೇ ಎಂಬ ಅಭಿಪ್ರಾಯವನ್ನು ಮೂಡಿಸುತ್ತದೆ” ಎಂದರು.
ಸಭೆ ಮುಗಿಯುತ್ತಿದ್ದಂತೆಯೇ ಗುಂಡಣ್ಣರವರ ಬಳಿ ಹೋಗಿ, “”ನಿಮ್ಮ ಕಾರ್ಯಕ್ರಮದ ವೈಖರಿ ನೋಡಿದರೆ ನೀವು ಜೀವಾವಧಿ ಅಧ್ಯಕ್ಷರಾಗುವಂತೆ ಕಂಡು ಬರುತ್ತದೆ” ಎಂದೆ.
“”ನಿಮ್ಮ ಶಬ್ದ ಪ್ರಯೋಗ ಸರಿಯಲ್ಲ, ಜೀವಾವಧಿ ಅಂದರೆ ಋಣಾತ್ಮಕ ಅರ್ಥ ಬರುತ್ತದೆ ಜೀವಾವಧಿ ಶಿಕ್ಷೆ ಅನ್ನೋ ರೀತಿ.ಅದಕಿಂತ ನೀವು ಆಜೀವ ಅಧ್ಯಕ್ಷ ಎಂದರೆ ಸೂಕ್ತ” ಎಂದು ಗುಂಡಣ್ಣ ನನ್ನ ಮಾತನ್ನು ತಿದ್ದಿದರು.
ನನಗೋ ಈ ಎಲ್ಲ ಕಾರ್ಯಕ್ರಮಗಳ ಹಿಂದಿರುವ ಉದ್ದೇಶ ಒಮ್ಮೆಗೇ ಹೊಳೆದಂತಾಗಿ, ಮೂರ್ಛೆ ಬಂದಂತಾಯಿತು ಅನ್ನಿ. ಎಲ್ಲರೂ ಅಧ್ಯಕ್ಷರಿಗೆ ಜೈಕಾರ ಕೂಗುತ್ತಿರುವಾಗ ನನ್ನ ಪರಿಸ್ಥಿತಿ ಬೇರೆಯವರಿಗೆ ಗೊತ್ತಾಗಲಿಲ್ಲ. ನಾನೂ ಸಾವರಿಸಿ ಜೈಕಾರ ಕೂಗಲು ಶುರು ಮಾಡಿದೆ.
ಕಾಸರಗೋಡು ಅಶೋಕ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.