ಪ್ರಬಂಧ: ಸಂಶಯಾಸುರನ ವಧೆ
Team Udayavani, Mar 18, 2018, 7:30 AM IST
ಎಲ್ಲವೂ ಮುಗಿದಿತ್ತು. ಮಹಾಯುದ್ಧ ಮುಗಿದು ರಾವಣಾಸುರನ ವಧೆಯಾಗಿತ್ತು. ಲಂಕೆಯ ಪಟ್ಟ ವಿಭೀಷಣನಿಗೆ ಸಿಕ್ಕಿತ್ತು. ಶ್ರೀರಾಮಚಂದ್ರನಿಗೆ ಅಯೋಧ್ಯೆಯಲ್ಲಿ ಪಟ್ಟಾಭಿಷೇಕವಾಗಿತ್ತು. ಎಲ್ಲವೂ ಸುಖಾಂತ್ಯವಾಯಿತು ಎನ್ನುತ್ತಿರುವಾಗಲೇ ಶ್ರೀಸಾಮಾನ್ಯನೊಬ್ಬನಿಗೆ ಸಂಶಯದ ಪಿಶಾಚಿ ಒಳಹೊಕ್ಕಿ ಪಿಸುಮಾತನಾಡಿಸಿತೆ- “ಇಷ್ಟು ದಿನ ಪರಪುರುಷನ ರಾಜ್ಯದಲ್ಲಿದ್ದ ಸೀತೆ ಪತಿವ್ರತಳಾಗಿರುವುದು ಹೇಗೆ ಸಾಧ್ಯ. ಅಸಂಭವ ಇದು’ ಶ್ರೀರಾಮನಿಗೆ, ಪ್ರಜಾಪ್ರಭುತ್ವದ ಗೌರವವಿರುವವರೆಗೆ ಸತ್ಯವನ್ನು ಸಾಬೀತು ಮಾಡುವ ಅನಿವಾರ್ಯತೆಗಾಗಿ ಸೀತೆ ಅಗ್ನಿದಿವ್ಯಕ್ಕೆ ಒಳಗಾಗಬೇಕಾಯಿತು.
ಸಂಶಯವೆನ್ನುವುದು ಮನುಷ್ಯನ ಪೈಶಾಚಿಕ ವರ್ತನೆಗೆ ಇಂಬು ಕೊಡುತ್ತದೆ. ಅವನಲ್ಲಿರುವ ಸಾತ್ವಿಕ ದೈವಗುಣವನ್ನು ಹಿಮ್ಮೆಟ್ಟಿಸಿ ಪಾಶವಿ ಗುಣವನ್ನು ಉತ್ತೇಜಿಸುವ ಆತನಲ್ಲಿ ಸುಪ್ತವಾಗಿರುವ ತಾಮಸ ಪ್ರವೃತ್ತಿ ಉದ್ರೇಕಗೊಳಿಸುವ ಒಂದು ರಾಕ್ಷಸೀ ಶಕ್ತಿ ಅದು. ಅದಕ್ಕೆ ಬಲಿಯಾಗದಿರುವುದು ಬಹಳ ಕಡಿಮೆ ಜನ. ಜನಸಾಮಾನ್ಯರಿಂದ ಹಿಡಿದು ರಾಜಮಹಾರಾಜರನ್ನು ಈ ಸಂಶಯ ಪಿಶಾಚಿ ಬಿಟ್ಟಿದ್ದಿಲ್ಲ. ಅದರ ಕರಾಳಹಸ್ತ ಎಲ್ಲ ಕಡೆ ಚಾಚಿದೆ.
ಅಮೃತದ ಹಾಲನ್ನು ಮನೆಗೆ ಕೊಟ್ಟು ಬರಬೇಕು. ಆದರೆ ವಿಷದ ಆಲ್ಕೋಹಾಲನ್ನು ಜನರೇ ಮುಗಿಬಿದ್ದು ಕೊಂಡು ಹೋಗುತ್ತಾರೆ. ಕಳೆ ತನ್ನಿಂದ ತಾನಾಗಿಯೇ ಬೆಳೆದು ಫಸಲಿಗೆ ಅಡ್ಡ ಬರುತ್ತದೆ. ಆದರೆ ಒಂದು ಬೆಳೆ ಬೆಳೆಯಲು ನೀರು, ಗೊಬ್ಬರ ಹಾಕಿದರೂ ಕೈಗೆ ಉತ್ಕೃಷ್ಟ ಫಸಲು ಸಿಗುವುದು ಕಷ್ಟಸಾಧ್ಯ. ಅದೇ ರೀತಿ ಸಂಶಯ ಪಿಶಾಚಿ ಎಲ್ಲರನ್ನು ಒಳಹೊಕ್ಕು ಕುಲಗೆಡಿಸಿ, ಮನಸ್ಸಿನ ಸ್ವಾಸ್ಥ್ಯವನ್ನು ಹಾಳುಮಾಡಿ ಸರ್ವನಾಶ ಮಾಡುತ್ತಾ ಬಂದಿದೆ. ಸದ್ಗುಣಗಳನ್ನು ನಾಶಮಾಡಿ ದುರ್ಗುಣಗಳನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ.
ಇದು ನಿನ್ನೆ-ಮೊನ್ನೆಯ ಕಥೆ ಮಾತ್ರವಲ್ಲ.
ಬಹು ಪ್ರಾಚೀನವಾದ ಮಾತು ಇದೆ. ಭಾರ್ಯಾ ರೂಪವತೀ ಶತ್ರುಃ -ಸುಂದರ ಹೆಂಡತಿ ಗಂಡನಿಗೆ ಶತ್ರುವಾಗುತ್ತಾಳೆ. ಆಕೆ ಎಷ್ಟೇ ಸದ್ಗಹಸ್ಥೆಯಾಗಿದ್ದರೂ ಗಂಡ ಸಂಶಯ ಪಡುತ್ತಾನೆ. ಆಕೆ ಸಿಂಗರಿಸಿದರೆ ಸಂಶಯ, ಹೊರಗಡೆ ಹೋದರೆ ಸಂಶಯ, ಬರುವುದು ತಡವಾದರೆ ಸಾಕು, “”ಎಲ್ಲಿಗೆ ಹೋಗಿದ್ದೆ? ದೇವಸ್ಥಾನಕ್ಕೆ ಹೋಗಿಬರೋಕೆ ಇಷ್ಟು ತಡ ಯಾಕೆ? ಆ ಪೂಜಾರಿ ಜೊತೆ ಪಟ್ಟಾಂಗ ಹೊಡಿತಿದ್ಯಾ? ಪಕ್ಕದ ಮನೆ ಬಜಾರಿ ಜೊತೆಗೆ ಯಾಕೆ ಹೋಗಿದ್ದೆ?” ಒಂದು ಪ್ರಶ್ನೆಯೇ! ನೂರಾರು ಯಕ್ಷಪ್ರಶ್ನೆಗಳು. ಉತ್ತರಿಸಲು ನಾಲ್ಕು ಜನ ಪಾಂಡವರು ಸಾಲದು-ಬೇಕೇ ಬೇಕು ಧರ್ಮರಾಯ. ಸಂಶಯ ಬಂದರೆ ಧರ್ಮರಾಯನು ಕಕ್ಕಾಬಿಕ್ಕಿಯಾಗಬೇಕು. ಉತ್ತರಕ್ಕೆ ತಡವರಿಸಿದರೆ, ಒಂದು ಸುಳ್ಳು ಅಂತ ಗೊತ್ತಾದರೆ, ಮುಗಿಯಿತು ಕಥೆ. ಸಂಶಯ ಪೆಡಂಭೂತವಾಗಿ ಇಡೀ ಕುಟುಂಬವನ್ನು ಸರ್ವನಾಶ ಮಾಡಿಬಿಡುತ್ತದೆ.
ಶೇಕ್ಸ್‌ಪಿಯರ್‌ನ ಒಥೆಲೋ ಕಥೆ ಇದೆ ಅಲ್ಲವೇ. ಬರಿಯ ಕರವಸ್ತ್ರದಾಟದ ಕಥೆ. ಐಯಾಗೋ ವಿಜೃಂಭಿಸಿಬಿಟ್ಟ. ಒಥೆಲೋ ಸಂಶಯದ ಸುಳಿಯಲ್ಲಿ ಸಿಕ್ಕಿಬಿಟ್ಟ. ಕಟ್ಟುಕಥೆಗಳನ್ನು ನಂಬಿಬಿಟ್ಟ. ಸೌಂದರ್ಯವತಿ ಡೆಸ್ಟಿಮೋನಾಳನ್ನು ತಾನೇ ಪ್ರೀತಿಸಿದ ಶಯನಗೃಹದಲ್ಲಿ ಕುತ್ತಿಗೆ ಹಿಸುಕಿ ಸಾಯಿಸಿಬಿಟ್ಟ. ಬೆಳಕು ಆರಿಸಿಬಿಟ್ಟ- ಶಯನದ ಕೊಠಡಿಯದು ಮತ್ತು ನಿರಪರಾಧಿ ಪ್ರೀತಿಯ ಡೆಸ್ಟಿಮೋನಾಳ ಬದುಕಿನ ದೀಪವನ್ನು. putout the light and… ಎಂಥಾ ಭೀಭತ್ಸ ಸಾವು ಅದು.
ರಾಜಮಹಾರಾಜರ ಕಥಾನಕವಂತು ಸಂಶಯದ ಗೂಡಿನದು. ರಾಜನಿಗೆ ತಮ್ಮನ ಮೇಲೆ ಸಂಶಯ, ತಮ್ಮನಿಗೆ ಮಂತ್ರಿಯ ಮೇಲೆ ಸಂಶಯ, ಮಂತ್ರಿಗೆ ದಳವಾಯಿಗಳ ಮೇಲೆ ಸಂಶಯ. ಚಿತ್ರದುರ್ಗದ ಇನ್ನಿತರ ಪಾಳೆಯಗಾರರ ಐತಿಹಾಸಿಕ ಘಟನೆಗಳಂತೂ ರಾಜ ಮತ್ತು ದಳವಾಯಿಗಳ ಸಂಶಯದ ಹೋರಾಟದ ಕಥೆಗಳು.
ಮನೆಮಾತಾಗಿರುವ ಕಥೆ ಗೊತ್ತಲ್ಲ. ರಾಜ-ರಾಣಿ ಸಣ್ಣ ಮಗುವಿನೊಂದಿಗೆ ಬೇಟೆಗೆ ದಟ್ಟ ಕಾಡಿಗೆ ಹೋದರು. ಹೋಗುತ್ತಾ ಹೋಗುತ್ತಾ ಇರುವಾಗ ಇವರ ಬೇಟೆಯ ಮೋಜಿನಲ್ಲಿ ಮಗು ತಪ್ಪಿಹೋಯಿತು. ದಟ್ಟವಾದ ಕಾಡು. ರಾತ್ರಿ ಮುಸುಕಿತು. ಎಲ್ಲಿ ಹುಡುಕಿದರೂ ಮಗು ಇಲ್ಲ. ನಿರಾಶರಾಗಿ ದುಃಖದಿಂದ ಅರಮನೆಗೆ ಹಿಂತಿರುಗಿದರು. ಮರುದಿನ, ಆ ಮರುದಿನ ಹುಡುಕಾಡಿದರು. ಕಳೆದುಹೋದ ಮಗು ಎಲ್ಲಿ ಸಿಗುತ್ತದೆ. ಆದರೆ, ಅತ್ತಕಡೆ ಮರುದಿನ ಇನ್ನೊಬ್ಬ-ನೆರೆಯರಾಜ ಬೇಟೆಗೆ ಬಂದವನಿಗೆ ಮಗುವಿನ ಆಕ್ರಂದನ ಕೇಳಿ- ಮಕ್ಕಳೇ ಇಲ್ಲದ ರಾಜನಿಗೆ ನಿಧಿ ಸಿಕ್ಕಂತಾಯಿತು. ಎತ್ತಿಕೊಂಡ. ತನ್ನ ಅರಮನೆಯಲ್ಲಿ ಪ್ರೀತಿಯಿಂದ ಸಾಕಿಕೊಂಡ. ಕಾಲ ಕಳೆಯಿತು. ಮಗು ಬೆಳೆಯಿತು. ಪ್ರವರ್ಧಮಾನಕ್ಕೆ ಬಂದ. ಆತ ಒಂದು ದಿನ ಬೇಟೆಗೆ ಮತ್ತೆ ಅದೇ ಕಾಡಿಗೆ ಬಂದ. ವಿಧಿ ನೋಡಿ, ವಿಧಿಲಿಖೀತ ಬದಲಿಸುವವರಾರು? ಆತನಿಗೆ ದಾರಿ ತಪ್ಪಿತು. ದಾರಿ ಹುಡುಕುತ್ತಾ ಹುಡುಕುತ್ತಾ ಹೆತ್ತ ತಂದೆಯ ರಾಜ್ಯಕ್ಕೇ ಬಂದ. ಆದರೆ ಆಗ ಆತನ ನಿಜವಾದ ತಂದೆ ಇನ್ನೊಂದು ರಾಜ್ಯದ ಮೇಲೆ ಯುದ್ಧಕ್ಕೆ ಹೋಗಿದ್ದ. ರಾಣಿ- ಇವನ ನಿಜವಾದ ತಾಯಿಗೆ ಮಗನ ಗುರುತು ಹಿಡಿಯಿತು. ಅತೀವ ಆನಂದವಾಯಿತು. ಆತನನ್ನೂ ಪ್ರೀತಿಯಿಂದ ಬರಮಾಡಿಕೊಂಡಳು. ಆತಿಥ್ಯ ಮಾಡಿದಳು. ರಾಜ ಯುದ್ಧಕ್ಕೆ ಹೋದವನು ಇನ್ನೂ ಬಂದಿರಲಿಲ್ಲ. ತಾಯಿ-ಮಗ ಇಬ್ಬರೂ ಅತೀವ ಆನಂದದಿಂದ ಅಂತಃಪುರದಲ್ಲಿ ರಾಜನಿಗಾಗಿ ಕಾದರು. ರಾತ್ರಿ ಮುಸುಕಿತು. ಕಣ್ಣು ಎಳೆಯಲು ಶುರುವಾಯಿತು. ನಿದ್ರೆಯನ್ನು, ಕೆಮ್ಮನ್ನು, ಉಸಿರನ್ನು ತಡೆಯುವುದಾದರೂ ಹೇಗೆ? ಇಬ್ಬರೂ ಅಕ್ಕಪಕ್ಕ ಪಲ್ಲಂಗದ ಮೇಲೆ ಮಲಗಿದರು. ತಡರಾತ್ರಿ. ಯುದ್ಧದಲ್ಲಿ ಹೋರಾಡಿ ದಣಿದು ರಾಜ ಅರಮನೆಯೊಳಗೆ ಬಂದ. ಅಂತಃಪುರದಲ್ಲಿ ಬಂದು ನೋಡಿದರೆ ರಾಣಿಯ ಪಕ್ಕದಲ್ಲಿ ಪರಪುರುಷ ಮಲಗಿದ್ದಾನೆ. ಅಕಟಕಟ, ಏನಿದು… ತನ್ನ ಮುದ್ದಿನ ರಾಣಿ ಇನ್ನೊಬ್ಬ ಗಂಡಸಿನ ಜೊತೆ ಹಾಸಿಗೆ ಹಂಚಿಕೊಂಡಿದ್ದಾಳೆ. ಸಂಶಯದ ಪಿಶಾಚಿ ನೃತ್ಯ ಮಾಡತೊಡಗಿತು. ಕೇಕೆ ಹಾಕಿತು. ವಿವೇಕ ಹಾರಿ ಹೋಯಿತು. ಕತ್ತಿ ಹೊರಬಂತು. ಆ ಪುರಪುರುಷ(?)… ಆತನ ಮಗನ ರುಂಡ-ಮುಂಡವನ್ನು ಚೆಂಡಾಡಿತು. ಈ ಗಲಾಟೆಯಿಂದ ರಾಣಿ ಕಣ್ಣುಬಿಟ್ಟು ನೋಡಿದರೆ ರಕ್ತದೋಕುಳಿ. ವಿಷಯ ತಿಳಿದು ರಾಜ ತತ್ತರಿಸಿಬಿಟ್ಟ. ಕಾಲ ಮಿಂಚಿತ್ತು. ಸಂಶಯದ ಪಿಶಾಚಿ ತನ್ನ ಕೇಕೆ ಮುಗಿಸಿತು. “ಎಂದು ಕೊನೆ? ಹಾØ ! ಎಂದು ಕೊನೆ…’
ತವರಿಗೆ ಹೋದ ನಾಲ್ಕು ದಿನ ಬಿಟ್ಟು ಮನೆಗೆ ಬಂದಳು. ಮಕ್ಕಳೆಲ್ಲ ಹೊರಗಡೆ-ಪರವೂರಲ್ಲಿ ಕೆಲಸ. ನಗುತ್ತ ಬಂದವಳು ಮಾಸ್ಟರ್ ಬೆಡ್‌ರೂಮಿಗೆ ಹೋಗಿ ಬಂದವಳೇ ಮುಖವಿವರ್ಣವಾಗಿ ಹೊರಗೆ ಬಂದವಳೇ ಶುರುಮಾಡಿದಳು. “ಕೋರ್ಟ್ ಮಾರ್ಷಲ್, ಮನೆಗೆ ಯಾರೆಲ್ಲ ಬಂದಿದ್ದರು, ಯಾಕೆ ಬಂದಿದ್ದರು, ಎಷ್ಟು ಹೊತ್ತು ಇದ್ದರು, ನಾನಿಲ್ಲದಾಗಲೇ ಅವಳು ಯಾಕೆ ಬಂದಿದ್ದಳು. ನಾನಿಲ್ಲ ಅಂತ ಅವಳಿಗೆ ಗೊತ್ತಾಗಿದ್ದು ಹೇಗೆ, ಅವಳಿಗೇನು ಅಂಜನ ಹಾಕಿ ನೋಡೋಕೆ ಬರುತ್ತಾ, ನೀವು ಸಾಹಿತಿಗಳು ನಿಮ್ಮನ್ನು ನಂಬಲಿಕ್ಕೆ ಆಗೋಲ್ಲ’. ನಾನು ಮೌನಿ. ನನಗೆ ಗೊತ್ತಾಯಿತು, ಸಂಶಯ ಪಿಶಾಚಿ ಪ್ರವೇಶವಾಗಿದೆ. ಈ ಸಂಶಯ ದರ್ಶನ ಮುಗಿಯುವವರೆಗೆ ನಾವೇನೇ ಹೇಳಿದರೂ ಅವಳು ಕೇಳಿಸಿಕೊಳ್ಳುವುದಿಲ್ಲ. ಸಂಶಯ ಅವಳ ಬಾಯಿ ತೆರೆಸಿದೆ; ಕಿವಿಯನ್ನು ಮುಚ್ಚಿಸಿದೆ; ವಿವೇಕ ನಿದ್ರಿಸಿದೆ, ಮಾತು ಮಧಿಸಬೇಕು. ಬಿರುಗಾಳಿ ನಿಲ್ಲಲೇ ಬೇಕಲ್ಲ. ನಿಂತಿತು. ಆಗ ನಾನು ಹೇಳಬೇಕು ಎನ್ನುವುದರೊಳಗೆ ಮತ್ತೆ ಬುಸುಗುಟ್ಟಿತು. ಪಕ್ಕದ ಮನೆಯವಳು ಗರ್ಭಿಣಿಯಂತೆ! ನಾನು ಸುಮ್ಮನಿರಲಾಗದೇ, “ಹೌದೇ’ ಎಂದೆ. “ಹೌದೇ’ ಅಂತ ಬಾಯಿಬಿಡಬೇಡಿ ಗುಮ್ಮನ ಗುಸುಕನ ತರ.
ಈಗ ನಾನು ಬಾಯಿಬಿಟ್ಟೆ- “ಅಲ್ಲಾ, ಏನು ಅನಾಹುತ ಆಯಿತು ಅಂತ ಇಷ್ಟು ಕೂಗಾಡುತ್ತಿ’. ಅಷ್ಟು ಹೇಳಿದ್ದೇ ತಡ ನನ್ನನ್ನು ಅಪರಾಧಿ ಎಂಬಂತೆ ಕೈ ಹಿಡಕ್ಕಂಡು ಎಳೆದುಕೊಂಡು ಬೆಡ್‌ರೂಮಿಗೆ ಹೋಗಿ, “ಇಲ್ನೋಡಿ, ಇಲ್ಲಿ ಹಾಸಿಗೆಯ ಮೇಲೆ ಮಲ್ಲಿಗೆಯ ಹೂವು ಹೇಗೆ ಬಂತು?’ ಎಂದು ನನ್ನ ಹಾಸಿಗೆ ತೋರಿಸಿದಳು. ನಾನು ನಗು ತಡೆಯಲಾರದೇ “ಅದಾ’ ಎಂದೆ. “ಅದೇ ಈಗ ಗೊತ್ತಾಯ್ತಲ್ಲ ನಿಮ್ಮ ನಿಜಬಣ್ಣ. ಈಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರಲ್ಲ’ ಎಂದಳು. ನನಗೆ ನಗು ತಡೆಯಲಾಗಲಿಲ್ಲ. ನಾನು ನಗುತ್ತಾ, “ಇಷ್ಟು ದಿವಸ ಒಟ್ಟಿಗೆ ಇದ್ದರೂ ನಿನಗಿನ್ನೂ ನಾನು ಅರ್ಥವಾಗಲೇ ಇಲ್ಲವಲ್ಲೇ’ ಎಂದು ಕವಿಯವಾಣಿ ಉದ್ಧರಿಸುತ್ತಾ, “ಅಮ್ಮಾ ಸಂಗಾತಿ ಕೇಳು, ಅದೇನಾಯ್ತು ಎಂದರೆ ನಿನ್ನೆ ಕ್ಲಾಸ್ ಸೋಶಿಯಲ್ಸ್ ಇತ್ತು. ಅಲ್ಲಿ ಎಲ್ಲಾ ಅಧ್ಯಾಪಕರಿಗೂ ಹಾರ ತುರಾಯಿ ಕೊಟ್ಟರು. ಮಲ್ಲಿಗೆ ಹೂವಿನ ಪಕಳೆಗಳು ಅಂಗಿಯ ಮೇಲೆಲ್ಲಾ ಹರಡಿ ಅದು ಮಲಗುವಾಗ ರಾತ್ರಿ ಹಾಸಿಗೆಯ ಮೇಲೆ ಬಿದ್ದಿರಬೇಕು. ಅಯ್ಯೋ ಶಿವನೇ, ಅಷ್ಟಕ್ಕೆ ಇಷ್ಟು ರಾದ್ಧಾಂತ ಮಾಡುತ್ತೀಯಲ್ಲೇ’. ಅಷ್ಟರಲ್ಲಿ ಬಾಗಿಲು ಬಡಿದ ಶಬ್ದ. ನೋಡಿದರೆ ಪಕ್ಕದ ಮನೆಯವಳು ಬಂದು ನಿಂತಿದ್ದಳು. “”ಈಗ ಬಂದ್ರಾ, ಬಸಿರು ಇಲ್ಲ, ಏನೂ ಇಲ್ಲ, ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿತ್ತಂತೆ. ಮೊನ್ನೆ ಆಪರೇಷನ್ ಮಾಡಿ ತೆಗೆದ್ರು. ನೀವು ಇವತ್ತು ಬಂದ್ರಲ್ಲ, ಹೇಳ್ಳೋಣ ಎಂದೆನಿಸ್ತು ಬಂದೆ. ತೊಂದರೆಯಾಯಿತೇನೋ’ ಎಂದು ಹೊರಟಳು ಪುಣ್ಯಾತ್‌ಗಿತ್ತಿ! ಈಗ ಅವಳ ಮುಖವನ್ನು ನೋಡಬೇಕು! ನೋಡು ಜನಪದ ಗೀತೆಯಲ್ಲಿ ಒಂದು ಸೊಲ್ಲಿದೆ “ನನ್ನ ಸರದಾರನನ್ನು ಬೇರೆ ಹೆಣ್ಣುಗಳು ಬಯಸಿದರೆ ಹೆಮ್ಮೆ ಎನಗೆ’ ಎನ್ನುತ್ತ ಅವಳನ್ನು ಅಮಾನತ್ತು ಎತ್ತಿಕೊಂಡು ಹೋದೆ- ಎಲ್ಲಿಗೆ? ಇನ್ನೆಲ್ಲಿಗೆ… ಶಯನಕ್ಕೆ. ಸಂಶಯಾಸುರ ಸಾಯುವವರೆಗೂ. “ರಸವೇ ಜನನ… ವಿರಸವೇ ಮರಣ. ಸಮರಸವೇ ಜೀವನ’ ನೆನಪಾಯಿತು ಕವಿವಾಣಿ.
ಜಯಪ್ರಕಾಶ ಮಾವಿನಕುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.