ಪ್ರಬಂಧ: ಮಹಾಸ್ಫೋಟ
Team Udayavani, Dec 8, 2019, 5:00 AM IST
ಕಾರ್ಪೊರೇಟ್ ಪ್ರಪಂಚದಲ್ಲಿ ಬಿಜಿಯಾಗಿರುವ ಮಗ ಮೊನ್ನೆ ಕಾಲ್ ಮಾಡಿದ್ದ , “”ಈ ವೀಕ್ ಎಂಡ್‌ನಲ್ಲಿ ಬರ್ತಾ ಇದೀನಿ. ಹುರುಳಿಕಾಳಿನ ಬಸ್ಸಾರು ಮಾಡಿರಿ” ಎಂದು. ಪಿಜ್ಜಾ , ಬರ್ಗರ್, ಫ್ರೆಂಚ್ ಫ್ರೈಸ್, ಸ್ಯಾಂಡ್‌ವಿಚ್‌ಗಳನ್ನು ತಿಂದು ಬೆಂಡಾಗಿರುವ ನಾಲಿಗೆಗೆ ಈಗೀಗ ಈ ನಾಟಿ ಸ್ಟೈಲಿನ ಖಾದ್ಯಗಳು ರುಚಿಸುತ್ತಿರುವುದು ಸಹಜ. ಸರಿ, ನಾನೂ ಮಾತ್ರ ಸಹಜ ಸಂಭ್ರಮದಿಂದ ಹಿಂದಿನ ದಿನವೇ ನೆನೆಸಿ ಶುಚಿಗೊಳಿಸಿದ ಹುರುಳಿಕಾಳನ್ನು ಕುಕ್ಕರಿನಲ್ಲಿ ಸಾಕಷ್ಟು ನೀರಿನೊಂದಿಗೆ ಬೇಯಲು ಇರಿಸಿದೆ. ವಿಸಿಲ್ ಬಂದ ನಂತರ ಹದಿನೈದು ನಿಮಿಷಗಳವರೆಗೆ ಬೇಯಿಸಿದರೆ ಕಾಳೂ ಬೆಂದು ಅದರ ಕಟ್ಟೂ ಗಟ್ಟಿಯಾಗಿ ಸಾರಿಗೆ ಒಳ್ಳೆಯ ಸ್ವಾದ ಬರುವುದರಿಂದ ಟೈಮ್ ನೋಟ್ ಮಾಡಿಕೊಂಡೆ. ಈ ಹದಿನೈದು ನಿಮಿಷದ ಬಿಡುವಿನಲ್ಲಿ ವಾಟ್ಸಾಪ್, ಫೇಸ್‌ಬುಕ್ ಚೆಕ್ ಮಾಡಬಹುದೆಂಬ ಖುಷಿಯಲ್ಲಿ ಹಾಲ್‌ಗೆ ಬಂದು ಕುಳಿತೆ.
ಕೆಲಸಮಯದ ನಂತರ ಭೂಕಂಪವೇ ಆದಂತೆ ಅಡುಗೆ ಮನೆಯಿಂದ “ಧಡಾರ್’ ಎಂಬ ಶಬ್ದ ಬಂದಾಗ ಬೆಚ್ಚಿ ಬಿದ್ದೆ. ಬೆಕ್ಕು ಏನಾದರೂ ಬಂದು ಹಾಲಿನ ಪಾತ್ರೆ ಉರುಳಿಸಿತಾ ಎನಿಸಿತು. ಇಲ್ಲ. ಸಿಡಿಮದ್ದಿನ ಸಿಡಿತಕ್ಕಿಂತ ತೀವ್ರವಾಗಿದ್ದ ಆ ಶಬ್ದ ಬೆಕ್ಕಿನಂತಹ ಯಕಶ್ಚಿತ್ ಜೀವಿಯಿಂದ ಸಾಧ್ಯವಿಲ್ಲವೆನಿಸಿತು. ಕಾತರದಿಂದ ಅಡುಗೆ ಮನೆಯೆಡೆಗೆ ಧಾವಿಸಿದೆ.
ವಾಸ್ತವದ ಅರಿವಾಗಲು ಕೆಲ ಸಮಯವೇ ಹಿಡಿಯಿತು. ಅಡುಗೆ ಕೋಣೆಯ ನೆಲದಲ್ಲೆಲ್ಲ ಬೆಂದ ಹುರುಳಿಯದೇ ಚಿತ್ತಾರ. ಕುಕ್ಕರ್ ಸಿಡಿದ ರಭಸಕ್ಕೆ ಚಿಮಣಿ ಮುರಿದು ನೇತಾಡುತ್ತಿತ್ತು. ಗ್ರ್ಯಾನೈಟ್ ಕತ್ತರಿಸಿ ಅದರ ಒಳಭಾಗದಿಂದ ಅಳವಡಿಸಿದ್ದ ನಾಲ್ಕು ಒಲೆಯ ಇನಿºಲ್ಟ… ಗ್ಯಾಸ್‌ಸ್ಟವ್ ಸೊಂಟ ಮುರಿದುಕೊಂಡು ನರಳುತ್ತಿದ್ದರೆ, ಅದರ ಬರ್ನಲ್‌ಗಳು ಒಂದಕ್ಕೊಂದು ಮುಖಾಮುಖೀಯಾಗಿದ್ದವು. ಕುಕ್ಕರ್ ಸಿಡಿದ ರಭಸಕ್ಕೆ ಅದರಿಂದ ಬೇರೆಯಾದ ವೆಯ ಹಾಗೂ ಹ್ಯಾಂಡಲ್‌ಗಳು ಚೂರಾಗಿ ಮೇಲಿನ ರಾಕಿನ ಡೋರ್‌ಗಳಿಗೆ ಬಡಿದು, ಅದಕ್ಕೆ ಅಂಟಿಸಿದ್ದ ದುಬಾರಿ ಬೆಲೆಯ ಮ್ಯಾಚಿಂಗ್ ಶೀಟ್‌ಗಳು ಘಾಸಿಗೊಂಡು ಸೀತಾಳೆ ಸಿಡುಬೆದ್ದು ಉಳಿಸಿ ಹೋದ ಕುಳಿಗಳಂತೆ ಗೋಚರಿಸುತ್ತಿದ್ದವು. ಮುಚ್ಚಳದಿಂದ ಕಳಚಿಕೊಂಡ ಗ್ಯಾಸ್‌ಕೆಟ್, ವಿಚ್ಛೇದನ ಪಡೆದ ಪತ್ನಿಯಂತೆ ಅಕ್ವಾಗಾರ್ಡ್‌ನ ನಲ್ಲಿಯ ಮೇಲೆ ಸೆಟೆದು ನಿಂತ ರಭಸಕ್ಕೆ ಅದು ತೆರೆದುಕೊಂಡು ಕಣ್ಣೀರ್ಗರೆಯುತ್ತಿತ್ತು. ನೆಲದಲ್ಲಿ ಕಾಲಿರಿಸಲೂ ಜಾಗವಿಲ್ಲ . ಚೆನ್ನಾಗಿ ಬೆಂದು ಚೆಲ್ಲಾಡಿದ್ದ ಹುರುಳಿಯಿಂದ ನೆಲವೆಲ್ಲ ಕೆರೆ ಏರಿಯನ್ನು ನೆನಪಿಸುವಂತಿತ್ತು. ಹುಶ್ ! ಎಂಬ ನಿಟ್ಟುಸಿರಿನೊಂದಿಗೆ ತಲೆ ಎತ್ತಿದವಳಿಗೆ ಅಲ್ಲೊಂದು ಆಘಾತ ಕಾದಿತ್ತು. ಸೀಲಿಂಗ್ ಪೂರಾ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ಸಿನಿಂದ ರಚಿಸಿದ ನೂತನ ವಿನ್ಯಾಸದಂತೆ ಕಂಗೊಳಿಸುತ್ತಿತ್ತು.
ಹುರುಳಿಯ ಅಪಾರ ಶಕ್ತಿಯ ಬಗ್ಗೆ ಕೇಳಿದ್ದೆ. ಅದನ್ನು ತಿಂದು ಕೆನೆಯುವ ಕುದುರೆಗಳ ಬಗ್ಗೆ ಅರಿವಿತ್ತು. ಆದರೆ, ಹುರುಳಿಕಾಳನ್ನು ಒಡಲಿನಲ್ಲಿರಿಸಿಕೊಂಡ ಕುಕ್ಕರ್ ಈ ರೀತಿ ಸಿಡಿಯುವುದು ನಿಜಕ್ಕೂ ಸೋಜಿಗವೆನಿಸಿತು.
“”ಅಯ್ಯೋ ! ಇದೇನ್ರಕ್ಕಾ ಇದು” ಎಂದು ಗಾಬರಿಯಿಂದ ಒಳಬಂದ ನಿಂಗಿಗೆ ಬ್ರಿಫ್ ಆಗಿ ಎಲ್ಲ ವಿವರಿಸಿ ಆ ಕುಕ್ಕರಿನ ಪಳೆಯುಳಿಕೆಗಳನ್ನು ಆರಿಸಿ ಕೊಡಲು ಹೇಳಿದೆ. ಡೀಲರ್ ಬಳಿ ಹೋಗಿ ದಬಾಯಿಸಿ ಕಾಂಪನ್ಸೇಶನ್ ಪಡೆಯುವ ದೂರಾಲೋಚನೆ ಆ ತುರ್ತು ಪರಿಸ್ಥಿತಿಯಲ್ಲೂ ಜಾಗೃತವಾಯಿತು. ಬಾಂಬ್ ಬ್ಲಾಸ್ಟ್ ನಲ್ಲಿ ಛಿದ್ರವಾದ ವಸ್ತುಗಳನ್ನು ಹುಡುಕಿ ಜೋಡಿಸಿದಂತೆ ನಿಂಗಿ ಕುಕ್ಕರಿನ ಚೂರಾದ ಭಾಗಗಳನ್ನೆಲ್ಲ ಹೊಂದಿಸಿ, ಕೂಡಿಸಿ ಬ್ಯಾಗಿಗೆ ತುರುಕಿ ನನ್ನ ಕೈಗಿರಿಸಿದಳು. “”ಇದನ್ನೆಲ್ಲ ಕ್ಲೀನ್ ಮಾಡ್ತಿರು ನಿಂಗಿ, ಈಗ ಬಂದೆ” ಎನ್ನುತ್ತ ಡೀಲರ್‌ಗೆ ರಣವೀಳ್ಯ ಕೊಡಲು ಛಿದ್ರಗೊಂಡ ಪರಿಕರಗಳೊಂದಿಗೆ ಹೊರಟೆ.
ಕುಕ್ಕರಿನ ಎಲ್ಲಾ ಭಾಗಗಳನ್ನೂ ಕೂಲಂಕಷವಾಗಿ ಪರಿಶೀಲಿಸಿದ ಡೀಲರ್, “”ಮೇಡಮ್, ಇದುನ್ನ ತಗೊಂಡು ಎರಡು ವರ್ಷ ಆಯ್ತು?” ಎಂದ. “”ಮೂರು ವರ್ಷ” ಎಂದೆ. ಗ್ಯಾರೆಂಟಿ ಕಾರ್ಡಿನ ಬಗ್ಗೆ ಕೇಳಿದಾಗ “”ಮನೇಲಿ ಹುಡ್ಕಿದ್ರೆ ಸಿಗುತ್ತೆ. ಸಂಜೆ ತರ್ತೀನಿ” ಎಂದು ಸಬೂಬು ನೀಡಿದೆ.
ಅಷ್ಟರಲ್ಲಿಯೇ ಕುಕ್ಕರಿನ ತಳಭಾಗವನ್ನು ಪರಿಶೀಲಿಸಿ “”ಮೇಡಮ್ , ನೋಡಿ ಇದುನ್ನ ತಗೊಂಡು ಟೆನ್ ಇಯರ್ಸ್ ಆಗಿದೆ, ಇದ್ರಲ್ಲೇ ಇಸ್ವಿ ನಮೂದಾಗಿದೆ. ಮೂರು ವರ್ಷ ಇಲ್ಲ, ಮ್ಯಾಕ್ಸಿಮಮ್ ಅಂದ್ರೆ ಐದು ವರ್ಷ ಗ್ಯಾರೆಂಟಿ ಕೊಡ್ಬದು ಅಷ್ಟೇ, ಇದು ತುಂಬಾ ಹಳೇದು, ಏನೂ ಮಾಡೋಕಾಗೊಲ್ಲ” ಅಂದ.
“”ಇದು ಮ್ಯಾನುಫ್ಯಾಕ್ಚರ್ ಆಗಿ ಹತ್ತು ವರ್ಷ ಆಗಿಬೋìದು. ಆದರೆ ನೀವು ನನ್ಗೆ ಸೇಲ್ ಮಾಡಿ ಮೂರೇ ವರ್ಷ ಆಗಿರೋದು. ನಮ್ಮನೇಲಿ ಇಪ್ಪತ್ತೆರಡು ವರ್ಷದ ಕುಕ್ಕರ್‌ನ ಇನ್ನೂ ಬಳುಸ್ತಾ ಇದೀವಿ. ಇದು ಮೂರೇ ವರ್ಷಕ್ಕೆ ನೆಗೆದು ಬಿತ್ತಲ್ಲಪ್ಪಾ” ಎಂದೆ ಕೋಪದಿಂದ. “”ಮೇಡಮ್, ನೀವು ನಿಮ್ಮ ಅಜ್ಜಿಯಷ್ಟೇ ಗಟ್ಟಿ ಇದೀರಾ ಹೇಳಿ. ಹೊಸ ಮಾಡೆಲ್‌ಗಳು ತುಂಬಾ ನಾಜೂಕು” ಎಂದು ನಾಜೂಕಾಗಿ ಸಮಜಾಯಿಷಿ ನೀಡಿದ.
“”ಅದೆಲ್ಲಾ ಸರೀನಪ್ಪಾ , ಈ ಎರಡು ಸಾವಿರದ ಕುಕ್ಕರ್ ಹೋದ್ರೆ ಹೋಗ್ಲಿ. ಇದ್ರಿಂದ ನಮ್ಮ ಚಿಮಣಿ , ಗ್ಯಾಸ್ ಸ್ಟವ್, ಫ್ರಿಜ್ಜು , ಅಕ್ವಾಗಾರ್ಡ್… ಎಲ್ಲಾ ಹೋಗಿ ಒಂದೂವರೆ ಲಕ್ಷ ಲಾಸ್ ಆಗಿದೆ. ನೀವು ಕುಕ್ಕರ್ ಕಂಪೆನಿಯವ್ರಿಗೆ ಒಂದು ಲೆಟರ್ ಬರ್ಧು ಹಾಕಿ. ನಾನು ಕನ್ಸೂಮರ್ ಕೋರ್ಟಿಗೆ ಹೋಗ್ತಿನಿ. ಕಾಂಪನ್ಸೇಷನ್ ಕ್ಲೈಮ್ ಮಾಡ್ತೀನಿ, ನೋಡಿ” ಧಮಕಿ ಹಾಕಿದೆ. ಸ್ವಲ್ಪವೂ ವಿಚಲಿತನಾಗದ ಅವನು, “”ನೋಡಿ ಮೇಡಂ, ನೀವು ಗ್ರಾಹಕರ ವೇದಿಕೆಗೆ ಹೋದ್ರೆ ಕಂಪೆನಿಯವರು ಈಸಿಯಾಗಿ ಬಚಾವ್ ಅಗ್ತಾರೆ” ಎಂದ. “”ಹೇಗೆ ನುಣುಚಿಕೊಳ್ತಾರಪ್ಪಾ ! ನಮ್ಮನೆ ಕಿಚನ್‌ದು ಫೋಟೋ ತೆಗ್ದು ಇಟ್ಕೊಂಡಿದೀನಿ, ನನ್ ಹತ್ರ ಎಲ್ಲಾ ಪ್ರೂಫುಗಳು ಇವೆ” ಎಂದೆ.
“”ನೋಡಿ ಮೇಡಮ್, ಕುಕ್ಕರ್ ಬಳಸುವಾಗ ನೀವು ಸುಮಾರು ವಿಧಾನಗಳನ್ನು ಅನುಸರಿಸ್ಬೇಕು. ವೆಯ… ಹಾಕುವ ಮೊದಲು ಸ್ವಲ್ಪ ಸ್ಟೀಮ್ ಹೋಗಲು ಬಿಡ್ಬೇಕು. ನೀವು ಬಿಡದೆ ಹಾಗೇ ಹಾಕಿರೋದ್ರಿಂದ ಹುರುಳಿ ಕಾಳಿನ ಸಿಪ್ಪೆ ಹೋಗಿ ಅಲ್ಲಿ ಕುಳಿತಿದೆ. ಗ್ಯಾಸ್ ರಿಲೀಸ್ ಅಗ್ದೆ ಬ್ಲ್ಯಾಕ್ ಆಗಿದೆ” ಎಂದ.
“”ಆದ್ರೆ ಗ್ಯಾಸ್ ರಿಲೀಸ್ ಆಗ್ದೆ ಇದ್ದಾಗ ಸೇಫ್ಟಿ ವಾಲ್ವ… ಓಪನ್ ಆಗ್ಬೇಕಿತ್ತು ತಾನೆ?” ನಾನೂ ಜಾಡಿಸಿದೆ.
“”ನೋಡಿ ಮೇಡಮ್ , ಸೇಫ್ಟಿವಾಲ್ವ…ನ ಪ್ರತೀ ಮೂರು ತಿಂಗಳಿಗೊಮ್ಮೆ , ಗ್ಯಾಸ್ಕೆಟ್‌ನ ಪ್ರತೀ ಆರು ತಿಂಗಳಿಗೊಮ್ಮೆ ಬದಲಾಯಿಸಬೇಕು. ಕುಕ್ಕರನ್ನು ಬಳಸಿದ ಕೂಡಲೆ ಬಿಸಿ ಗ್ಯಾಸ್ಕೆಟ್‌ನ ತಣ್ಣೀರಿನಲ್ಲಿ ಹಾಕ್ಬೇಕು. ಪ್ರತೀ ಐದು ವರ್ಷಕ್ಕೊಮ್ಮೆ ಕುಕ್ಕರ್‌ನ ಎಕ್ಸ್‌ಚೇಂಜ್ ಆಫರ್‌ನಲ್ಲಿ ಬದಲಾಯಿಸಬೇಕು. ಇದನ್ನೆಲ್ಲ ನೀವು ಫಾಲೋ ಮಾಡಿದೀರಾ?” ಪ್ರಶ್ನಾರ್ಥಕವಾಗಿ ನನ್ನೆಡೆಗೆ ನೋಡಿದ.
“”ನೀವು ನಿಮ್ಮ ಮನೇಲಿ ಇದುನ್ನೆಲ್ಲ ಫಾಲೋ ಮಾಡ್ತಾ ಇದೀರಾ?” ಎಂದು ಕೇಳಬೇಕೆನಿಸಿತಾದರೂ ನನ್ನ ಬಯಕೆಯನ್ನು ಕಷ್ಟಪಟ್ಟು ಹತ್ತಿಕ್ಕಿಕೊಂಡೆ.
“”ಇದುನ್ನೆಲ್ಲಾ ನೀವು ಕರೆಕ್ಟಾಗಿ ಫಾಲೋ ಮಾಡಿದ್ದು ಅದು ಪ್ರೂವ್ ಆದ್ರೆ ನಿಮ್ಗೆ ಹೆಚ್ಚು ಅಂದ್ರೆ ಒಂದು ಕುಕ್ಕರ್ ಕೊಡ್ಬದು. ಅಷ್ಟೇ” ಡೀಲರ್ ತೀರ್ಪು ನೀಡಿದ. ಅದನ್ನೆಲ್ಲ ಪ್ರೂವ್ ಮಾಡಲು ಹೊರಟರೆ ಕುಕ್ಕರಿನ ಬೆಲೆಗಿಂತ ಹೆಚ್ಚು ಖರ್ಚಾಗುವುದು ಖಚಿತವೆನಿಸಿತು. ಇನ್ನು ವಾದಕ್ಕೆ ಯಾವ ಸಾಮಗ್ರಿಯೂ ಇರಲಿಲ್ಲ. ವಿರೂಪಗೊಂಡ ನನ್ನ ಇಟ್ಯಾಲಿಯನ್ ಕಿಚನ್ ನೆನಪಾಗಿ ನಿಟ್ಟುಸಿರಾದೆ.
ಸುಮಾ ರಮೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.