ಪ್ರಬಂಧ: ಪರೀಕ್ಷೆ ಬಂತು!
Team Udayavani, Mar 15, 2020, 5:08 AM IST
ಪರೀಕ್ಷೆಯೆಂಬ ದಿಗಿಲು ನಮ್ಮನ್ನು ಆವರಿಸಿಕೊಳ್ಳುವುದು ಸುಮಾರು ಡಿಸೆಂಬರ್ ಕೊನೆಗೆ- ಗೇರು ಮತ್ತು ಮಾವಿನ ಮರಗಳು ಹೂವಿನಿಂದ ತುಂಬಿಹೋಗಿ ಊರೆಲ್ಲ ಪರಿಮಳದಲ್ಲಿ ಮುಳುಗಿ ಹೋದಾಗ. ಅಲ್ಲಿಯ ತನಕವೂ ನಮ್ಮ ಕಾಲೇಜು ಜೀವನ ಬದಲಾಗುವ ಋತುಚಕ್ರಕ್ಕೆ ಅನುಗುಣವಾಗಿ ಮಳ್ಳು ಹರೆಯುವುದರಲ್ಲೇ ಕಳೆದು ಹೋಗುತ್ತಿತ್ತು. ಮೊದಲು, ಅಂದರೆ ಜೂನ್‌ನಿಂದ ಆರಂಭವಾಗಿ ಅಕ್ಟೋಬರ್ ಕೊನೆಯವರೆಗೂ ಕುಮಟಾದಲ್ಲಿ ವಿಪರೀತ ಮಳೆ. ಜೀವನವೆಲ್ಲ ಮಳೆಗಾಲದಲ್ಲಿ ಮುಚ್ಚಿಹೋಗುತ್ತಿತ್ತು. ಕ್ಲಾಸುಗಳಲ್ಲಿ ಪಾಠ ಮಾಡಿದ್ದು ಕೇಳುತ್ತಿರಲಿಲ್ಲ. ಅಬ್ಬರದ ಮಳೆಗೆ ಕಾಲೇಜು ಕಂಗಾಲಾಗಿ ಹೋಗುತ್ತಿತ್ತು. ಅಘನಾಶಿನಿ ನದಿಗೆ ನೆಗಸು. ದೀವಗಿ, ಮಣಕಿ, ಹೆಗಡೆ, ತದಡಿಯ ಪ್ರದೇಶಗಳು ಕೆಂಪು ನೀರಿನಲ್ಲಿರುತ್ತಿದ್ದವು. ಮಳೆಗಾಲದಲ್ಲಿ ಕಾಲೇಜು ಬಸ್ಸುಗಳೂ ಸರಿಯಾಗಿ ಬರುತ್ತಿರಲಿಲ್ಲ. ಬಂದರೂ ಹಳೆಯ ಬಸ್ಸುಗಳಲ್ಲಿ ಸೋರುವ ಸಮಸ್ಯೆ. ಬಸ್ಸಿನೊಳಗೂ ಕೊಡೆ ಹಿಡಿದೇ ಕೂಡಬೇಕು. ನಮ್ಮಲ್ಲಿ ಹೆಚ್ಚು ಮಂದಿಗೆ ಕೊಡೆ ಕಳೆಯುವ ಚಟ. ಜೋರು ಮಳೆಗೆ ತಂದ ಕೊಡೆ, ಚೂರು ಬಿಸಿಲು ಬಿದ್ದ ಕೂಡಲೇ ಮರೆತು ಹೋಗುತ್ತಿತ್ತು. ಒಂದೋ ಎರಡೋ ಕೊಡೆಯ ನಂತರ ಮನೆಯವರು ಕೊಡೆ ಕೊಡಿಸುವುದು ಬಂದ್ ಮಾಡುತ್ತಿದ್ದರು. ಕೆಲವೊಮ್ಮೆ ಗಾಳಿಗೆ ಕೊಡೆಯ ಬಟ್ಟೆ ಮೇಲ್ಮುಖವಾಗಿ ತಿರುಗಿ ನಿಂತು ಕೊಡೆ ಹಕ್ಕಿಯ ಹಾಗೆ ಆಗುತ್ತಿತ್ತು. ಆಗ ಮೈಯೆಲ್ಲ ಒದ್ದೆ. ಒಮ್ಮೆ ಶೋಭನಾ ಕಾಲೇಜಿನ ಬಯಲಿನಲ್ಲಿ ಬರುವಾಗ ಹೀಗೇ ಆಗಿತ್ತು.ಸುಂದರಿ ಅವಳು. ಮಳೆಯಲ್ಲಿ ಅವಸ್ಥೆಪಡುವುದು ನೋಡಿ ನಮಗೆಲ್ಲ ಮಜಾ. ಅವಳು ನಮ್ಮದೇ ಮೇಜರು. ಒಳ ಬಂದವಳೇ ನಾವು ನಗುತ್ತಿದ್ದುದನ್ನು ನೋಡಿ ಬೈದಿದ್ದಳು.
ಕ್ಲಾಸುಗಳಲ್ಲಿ ಬೇರೆ ರೀತಿಯ ಮಜಾ. ಗೆಳೆಯರಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಹಾಸ್ಯಗಾರರು. ಒಂದು ಚೂರೂ ಅಲುಗಾಡದೆ, ಗಂಭೀರವಾಗಿ ಕುಳಿತಂತೆ ಕಾಣುವ ಅವರಿಗೆ ಇಡೀ ಕ್ಲಾಸನ್ನೇ ನಗಿಸುವ ತಾಕತ್ತಿತ್ತು. ಅಘನಾಶಿನಿಯ ಪಂಡಿತ್‌ನದ್ದು ಹೇಳಲೇಬೇಕು. ಆತ ಕ್ಲಾಸಿನ ಹೊರಗಿನ ಕಿಟಕಿ ಏರಿ ಗವಾಕ್ಷದೊಳಗೆ ಮುಖ ತೂರಿಸುತ್ತಿದ್ದ. ಎದುರಿಗೆ ನಿಂತ ಸರ್‌ಗಳಿಗೆ ಆತ ಕಾಣಿಸುತ್ತಿರಲಿಲ್ಲ. ಒಳಗಿರುವ ಹುಡುಗರಿಗೆ ಮಜಾವೋ ಮಜಾ. ಕ್ಲಾಸಿನಲ್ಲಿ ಸಂತೆಯ ವಾತಾವರಣ. ಹುಡುಗಿಯರೇನೂ ಕಡಿಮೆ ಇರಲಿಲ್ಲ. ಗಿರಿಜಾ ಹೆಗಡೆ ಬಿಸಿಲಿಗೆ ಕನ್ನಡಿ ಹಿಡಿದು ಹುಡುಗರ ಮುಖಕ್ಕೆ ಬೆಳಕು ಪ್ರತಿಫಲಿಸುತ್ತಿದ್ದಳು. ಕಾಲೇಜು ಇಲೆಕ್ಷನ್ ಎಂದರೆ ಹೊಡೆದಾಟ. ಎಂ.ಎಸ್. ಹೆಗಡೆ ಒಂದು ದಿನ ಕ್ಲಾಸಿಗೆ ಚೂರಿ ತಂದಿದ್ದ, ಅವನಿಗೆ-ಇವನಿಗೆ ಹಾಕಿಯೇ ಹಾಕುತ್ತೇನೆ ಎಂದು ಹೇಳುತ್ತ ಅಡ್ಡಾಡಿದ. ಆಟಿಕೆ ಚೂರಿ ಅದು. ಯಾರಿಗೂ ಗೊತ್ತಾಗಲೇ ಇಲ್ಲ- ಸ್ವತಃ ಅವನಿಗೂ ! ಮರೆಯಲಾಗದ ಆಸಾಮಿ ಅವನು. ನಾವೆಲ್ಲ ಸೇರಿ ಐದು ರೂಪಾಯಿ ಬೆಟ್ ಕಟ್ಟಿದ್ದಕ್ಕೆ ಒಂದು ದಿನ ಲೇಡೀಸ್ ಟಾಯ್ಲೆಟ್ ಒಳಗೆ ಹೋಗಿ ಬಂದ. ಅದು ದೊಡ್ಡ ಗಲಾಟೆಯೇ ಆಯಿತು. ಓದು ಆರಂಭಿಸಲು ಪುಸ್ತಕಗಳು ಹೇಗೂ ಬರುತ್ತಿರಲಿಲ್ಲ. ಹೇಳಹೆಸರಿಲ್ಲದ ಪುಸ್ತಕಗಳು. ಕೊನೆಗೂ ನಮಗೆ ಜೇಮ್ಸ್ ಬ್ಯಾರಿಯ ಪುಸ್ತಕಗಳು ಸಿಗಲೇ ಇಲ್ಲ. ಕ್ರಿಟಿಸಿಸಂ ಪುಸ್ತಕ ಇದ್ದದ್ದು ನನ್ನ ಬಳಿ ಮಾತ್ರ. ಯಾರಿಗೂ ಗೊತ್ತಾಗದ ಹಾಗೆ ಮುಚ್ಚಿಟ್ಟಿ¨ªೆ. ಥಾಮಸ್ ಹಾರ್ಡಿಯ ಕಾದಂಬರಿಯಲ್ಲಿನ ಅತೀ ವಿವರಣೆಗಳು ಅಸಡ್ಡಾಳ ಅನ್ನಿಸುತ್ತಿದ್ದವು. ಕಥೆ ಮುಂದೆ ಹೋಗುತ್ತಲೇ ಇರಲಿಲ್ಲ. ಸಾಹಿತ್ಯದ ಇತಿಹಾಸ ಕೂಡ ಬೋರಾಗುತ್ತಿತ್ತು.
ನಮ್ಮಲ್ಲಿ ಹೆಚ್ಚು ಜನ ಕ್ಲಾಸ್ ತಪ್ಪಿಸುತ್ತಿರಲಿಲ್ಲ. ಏಕೆಂದರೆ, ಕ್ಲಾಸ್ ಶುದ್ಧ ಮನರಂಜನೆ. ಯಾವುದಾದರೂ ಹುಡುಗಿ ಸೊಂಟಕ್ಕೆ ಕೈಕೊಟ್ಟು ಕುಳಿತಿದ್ದರೆ ಅವಳು ಋತುಚಕ್ರದಲ್ಲಿದ್ದಾಳೆ ಎನ್ನುವುದು ಸತೀಶ ನಾಯ್ಕನ ವಾದವಾಗಿತ್ತು. ಆ ವಿಷಯದ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿದ್ದವು. ಯಾವುದಾದರೂ ಹುಡುಗಿಯ ವಿವಾಹ ನಿಶ್ಚಯವಾದ ಸುದ್ದಿ ಕೂಡ ಬಿಸಿಬಿಸಿ ಆಗಿ ಬರುತ್ತಿತ್ತು. ಅವಳು ಸುಂದರಿಯಿದ್ದರೆ, “ನಾ ಮದ್ವೆ ಮಾಡ್ಕಳ್‌ಬೇಕು ಅಂತಾ ಮಾಡಿದ್ನಾ, ಯಾವುದೋ ಬಡ್ಡೀಮಗ ಹಾರಿಸ್ಕೊಂಡು ಹೋದ’ ಎನ್ನುತ್ತ ಬೇಸರಪಡುತ್ತಿದ್ದರು. “ನೀನು ಕಲಿತು ಓದಿ ಮುಗಿಸಿ ನೌಕರಿ ಹಿಡಿಯುವ ತನಕ ಅವಳ ಮಗಳು ಪ್ರಾಯಕ್ಕೆ ಬರುತ್ತಾಳೆ ಬಿಡು! ಅವಳನ್ನೇ ಮಾಡ್ಕೊà’ ಎಂದು ಬೇರೆಯವರು ಛೇಡಿಸುತ್ತಿದ್ದರು. ನಾಡಕರ್ಣಿಯ ತಂಗಿಗೆ ನಿಶ್ಚಿತಾರ್ಥವಂತೆ ಎಂದು ಹೇಳಿದರೆ ಇಡೀ ಕ್ಲಾಸೇ ಕಿವಿ ಅರಳಿಸುತ್ತಿತ್ತು.
ಚಳಿಗಾಲ ಆರಂಭವಾಯಿತೆಂದರೆ ಕಡತೋಕಾ ಕಡೆಯವರು, ಯಾರು ಯಾವ ಆಟದ ಮೇಳ ಸೇರಿದರು ಇತ್ಯಾದಿ ಸುದ್ದಿ ತರುತ್ತಿದ್ದರು. ಆಟದ ಮೇಳದ ಹೀರೋಗಳಿಗೆ ಎಲ್ಲೆಲ್ಲಿ ಗೆಳತಿಯರು ಇದ್ದಾರೆ ಎನ್ನುವ ಬಣ್ಣ ಬಣ್ಣದ ಸುದ್ದಿ ಅವರಿಗೆ ತಿಳಿದಿರುತ್ತಿತ್ತು.ರಾಜಕೀಯ ಚರ್ಚೆ ಕೂಡ ಜೋರು. ರಾಮಕೃಷ್ಣ ಹೆಗಡೆ, ಬಂಗಾರಪ್ಪ ಹೀಗೆ ಎರಡು ವಿಭಜನೆಗಳಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸುವ ಸನ್ನಿವೇಶ ಸೃಷ್ಟಿಯಾಗುತ್ತಿತ್ತು. ಅಷ್ಟು ಹೊತ್ತಿಗೆ ಅಕ್ಟೋಬರ್ ರಜೆ ಆರಂಭ. ಪಾಸಾಗುತ್ತ ಹೋಗುತ್ತಿದ್ದವರಿಗೆ ಈಗ ಕೆಲಸ ಇಲ್ಲ. ಆಗ ಅಡಿಕೆ ಕೊಯ್ಲಿಗೆ ಸಮಯ. ನೀರು ಬಾರಿ ಕೂಡ ಆರಂಭ. ಆಗ ನಾವು ಭೇಟಿಯಾಗುವುದು ಅಡಿಕೆ ಸೊಸೈಟಿಯಲ್ಲಿ ಅಥವಾ ಎಲೆ ಮಾರಾಟದ ಭಿಕ್ಕುನ ಅಂಗಡಿಯ ಬಳಿ. ಮಾರ್ಕೆಟ್‌ನಲ್ಲಿ ಹುಡುಗಿಯರು ಭೇಟಿಯಾದರೂ ಮಾತನಾಡುತ್ತಿರಲಿಲ್ಲ. ಒಂದು ರೀತಿ ಮೆಲುವಾಗಿ ಕಣ್ಣÇÉೇ ನಕ್ಕು ರೆಪ್ಪೆ ಎರಡು ಬಾರಿ ತೆರೆದು ಮುಚ್ಚಿ ಹೋಗುತ್ತಿದ್ದರು. ಬಹಳ ಮುಂದೆ ಹೋದ ಮೇಲೆ ಒಮ್ಮೆ ಅವರು ತಿರುಗಿ ನೋಡುವುದು ನಮಗೆ ಗೊತ್ತಾಗುತ್ತಿತ್ತು. ಮದುವೆ, ಕ್ರಿಕೆಟ್ಟು, ಇಲೆಕ್ಷನ್, ಪೇಟೆ ತಿರುಗಾಟ, ಇಸ್ಪೀಟು- ಹೀಗೆ ಸಮಯವೇ ಸಾಲುತ್ತಿರಲಿಲ್ಲ.
ಡಿಸೆಂಬರ್ ಕೊನೆ ಅಥವಾ ಜನವರಿ ಒಂದನೆಯ ವಾರ ಬಂತೆಂದರೆ ಪರೀಕ್ಷೆಯ ದಿಗಿಲು ಆರಂಭ. ಜನವರಿ ಒಂದನೆಯ ವಾರ ಹೆಚ್ಚುಕಡಿಮೆ ಎಲ್ಲರೂ ಕಾಲೇಜಿಗೆ ಹೋಗುವುದರ ಮುಕ್ತಾಯ. ಮತ್ತೆ ಕಾಲೇಜಿಗೆ ಹೋಗುವುದು ಹಾಲ್‌ಟಿಕೆಟ್ ತರಲು ಮಾತ್ರ.ಮೂರು ದಿನ ನಡೆಯುತ್ತಿದ್ದ ಗ್ಯಾದರಿಂಗ್‌ಗೂ ಕೇವಲ ಒಂದು ದಿನ ಹೋಗಿ ಅಡ್ಡಾಡಿ ಬರುವುದು. ಈಗ ಪರೀಕ್ಷೆಯ ದಿಗಿಲು ಆರಂಭ. ಪೊಲಿಟಿಕಲ್ ಸೈನ್ಸ್ ಮುಟ್ಟಿಯೇ ಇಲ್ಲ. ಇಕನಾಮಿಕ್ಸ್ ಪುಸ್ತಕವೇ ಇಲ್ಲ. ಆಗ ಜೆರಾಕ್ಸ್ ಇರಲಿಲ್ಲ. ಕೈಯಿಂದ ಬರೆದುಕೊಂಡು ಬರುವುದು. ವಿಜಯ ಗೈಡು ಮಾರ್ಕೆಟ್ಟಿನಲ್ಲಿ ಖಾಲಿ. ಸೈಕಾಲಜಿ ಪುಸ್ತಕ ಲೈಬ್ರರಿಯಲ್ಲಿ ಇಲ್ಲವೇ ಇಲ್ಲ. ಯಾರೋ ಒಯ್ದವರು ವಾಪಸು ಕೊಟ್ಟೇ ಇಲ್ಲ. ಈಗ ನೋಟ್ಸ್ ತೆಗೆಯುವುದು ಆರಂಭ.ಮಧ್ಯದಲ್ಲೇ ಮನೆಯಲ್ಲಿ ಮದುವೆ-ಮುಂಜಿ ಅಥವಾ ವಿಶೇಷ ಕೆಲಸ ಬಂದರಂತೂ ಮುಗಿಯಿತು. ಮನೆಯವರೂ ಓದಲು-ಬರೆಯಲು ಬಿಡುತ್ತಿರಲಿಲ್ಲ. “ಕೆಲಸ ಮೊದಲು ಮುಗಿಸು’ ಎನ್ನುತ್ತಿದ್ದರು. ತೋಟಕ್ಕೆ ನೀರು ಬಾರಿ ವಾರಕ್ಕೆ ಮೂರು ದಿನ. ಓದಲು ಕುಳಿತ ದಿನವೇ ಹೊಸಬು ಕೊನೆ ಕೊಯ್ಯಲು ಬರುವುದು ಅಥವಾ ಎಮ್ಮೆಕರು ಹಾಕಿ ಬಿಡುವುದು. ತಂದೆತಾಯಿಯರಿಗೆ ಖುಷಿ, ನಮ್ಮನೆ ಮಾಣಿ ಎಲ್ಲವನ್ನೂ ನಿಭಾಯಿಸುತ್ತಾನೆ ಎಂದು.
ಓದಲು ಮನೆಗಳಲ್ಲಿ ಈಗಿನ ಹಾಗೆ ಎಲ್ಲಿಯ ಟೇಬಲ್ಲು ಕುರ್ಚಿ? ನೆಲದ ಮೇಲೆ ಕಂಬಳಿ ಹಾಸಿ ಕುಳಿತು ಓದಬೇಕು. ರಾತ್ರಿ ಚಿಮಣಿ ಬುರುಡೆಯ ಬೆಳಕಲ್ಲಿ. ಕರೆಂಟ್ ನಮ್ಮೂರಿಗೆ ಬಂದದ್ದು ಬಹಳ ತಡವಾಗಿ. ಚಿಮಣಿ ಬುರುಡೆಯ ಬೆಳಕು ಬೀಳುವುದು ಪುಸ್ತಕದ ಮೇಲಷ್ಟೇ. ಕೆಲವೊಮ್ಮೆ ಚಿಮಣಿ ಬುರುಡೆ ಉರುಳಿಬಿದ್ದು ಪುಸ್ತಕವೆಲ್ಲ ಸೀಮೆಎಣ್ಣೆಯ ವಾಸನೆ. ನಮ್ಮ ಹಲವು ಗೆಳೆಯರ ಮನೆಗಳಲ್ಲಿ ರಾತ್ರಿ ಓದಲು ಬಿಡುತ್ತಿರಲಿಲ್ಲ. ಏಕೆಂದರೆ, ಆಗ ಚಿಮಣಿ ಎಣ್ಣೆ ಸಿಗುತ್ತಿರಲಿಲ್ಲ. ಸಿಕ್ಕರೆ ರೇಶನ್‌ನಲ್ಲಿ ಮಾತ್ರ. ಚಿಮಣಿ ಎಣ್ಣೆಯನ್ನು ಹಳೆಯ ಬೀರು ಬಾಟಲಿಗಳಲ್ಲಿ ತರುವುದು. ಅವು ಬೀರು ತುಂಬಿ ಖಾಲಿ ಆದ ಬಾಟಲಿಗಳು ಎಂಬುದು ನಮ್ಮ ಅರಿವಿಗೆ ಬಂದಿದ್ದು ತುಂಬ ತಡವಾಗಿ. ಮನೆಯಲ್ಲಿ ಏನಾದರೂ ವಿಶೇಷವಿದ್ದರೆ, “ನೀನು ಗುಡ್ಡ ಹತ್ತು, ಪುಸ್ತಕ ತಗಂಡು’ ಎನ್ನುತ್ತಿದ್ದರು. ಗುಡ್ಡದ ಮೇಲೆ ಮಾವಿನ ಮರದ ಕೆಳಗೆ, ಗೇರುಮರದ ಕೆಳಗೆ ತಂಪಿದ್ದಲ್ಲಿ ಕುಳಿತು ಓದುವುದು. ಅಷ್ಟು ಹೊತ್ತಿಗೆ ಬಿಸಿಲಿನ ಕೋನ ಬದಲಾಗಿ ನಾವು ಕುಳಿತಲ್ಲಿಯೇ ಬಿಸಿಲು ಬರಲು ಆರಂಭವಾಗುತ್ತಿತ್ತು. ಆಗ ಎದ್ದು ಬೇರೆ ಕಡೆ ಹೋಗುವುದು. ಮಾರ್ಚ್ ತಿಂಗಳು. ವಿಪರೀತ ಸೆಕೆ. ಮಾವಿನ ಮರಗಳ ಕೆಳಗೆ ಕುಳಿತು ಓದಿದರೆ ಗಾಳಿಗೆ ನಿದ್ದೆ ಬಿದ್ದು ಹೋಗುತ್ತಿತ್ತು. ಆಗೆಲ್ಲ ಮನೆಯವರಿಂದ ಬೈಸಿಕೊಂಡಿದ್ದಿದೆ. “ಅವನು ಮೇಲೆ ಹೋಗಿ ಮಲಗ್ತಾನೆ, ಅದಕ್ಕಿಂತ ನೀರುಬಾರಿ ಮಾಡೋದು ಚಲೋದು, ಪರೀಕ್ಷೆ ಏನಾದ್ರೂ ಆಗಲಿ’ ಎನ್ನುತ್ತಿದ್ದರು.
ನಾವು ಹುಡುಗರೂ ಕಡಿಮೆ ಇರಲಿಲ್ಲ. ಉದಾಹರಣೆಗೆ, ಗೇರು ಬೆಟ್ಟದಲ್ಲಿ ನಮ್ಮ ದೊಡ್ಡಪ್ಪಯ್ಯ ಕಟ್ಟಿಟ್ಟ ಒಂದು ಬಿಡಾರವಿತ್ತು. ಅದರಲ್ಲಿ ನಾಲ್ಕಾರು ಜನ ಓದಲು ಸೇರುತ್ತಿದ್ದರು. ಕ್ರಮೇಣ ಬೇಜಾರು ಎಂದು ಒಂದು ಇಸ್ಪೀಟು ಪಟ್ಟು ಕೂಡ ಅಲ್ಲಿಗೆ ಬಂತು. ಒಂದು ದಿನ ದೊಡ್ಡಪ್ಪಯ್ಯನ ಕೈಲಿ ಸಿಕ್ಕಿ ಬಿದ್ದು ದೊಡ್ಡ ಗಲಾಟೆಯೇ ಆಗಿ ಹೋಯ್ತು.
ನಮ್ಮಲ್ಲಿ ಹಲವರು ಕವಿತೆ ಬರೆಯುತ್ತಿದ್ದರು. ಪರೀಕ್ಷೆ ಬಂದ ಹಾಗೆ ಅದು ಜೋರು. ಇಂತಹ ಹತ್ತುಹಲವು ಕುಚೋದ್ಯಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ಸಮಯ ಓಡಿ ಹೋಗುತ್ತಿತ್ತು.
ಹೈಸ್ಕೂಲಿನ ತರಗತಿಗಳಲ್ಲಿ ವಿದ್ಯುತ್ ಬಲ್ಬ್ ಇರುವುದು. ನಾವು ಕೆಲವರು ಹುಷಾರಿ ಮಕ್ಕಳಿಗೆ ಆಗ ಹೈಸ್ಕೂಲಿನಲ್ಲಿ ರಾತ್ರಿ ಓದಲು ಪರ್ಮಿಶನ್ ನೀಡಿದ್ದರು. ನಾವು ಕರೆಂಟ್ ಬಿಲ್ ಕೊಡುವುದು ಇಲ್ಲ. ಆದರೆ, ಸಾಧ್ಯವಾದರೆ ಹೈಸ್ಕೂಲಿನ ಗೇರುಬೆಟ್ಟ ಮತ್ತು ಅಡಿಕೆ ತೋಟವನ್ನು ನೋಡಿಕೊಳ್ಳಿ ಎಂದು ಸೂಚನೆ ಇತ್ತು. ನಮಗೂ ಖುಷಿ, ಏಕೆಂದರೆ ಒಂದು ದೊಡ್ಡ ಯಜಮಾನಿಕೆ ನಮ್ಮ ಕೈಗೆ ಬರುತ್ತಿತ್ತು. ರಾತ್ರಿಯೆಲ್ಲ ನಮ್ಮ ಗಮನ ಗೇರು ಬೆಟ್ಟದ ಕಡೆ. ಆಗೀಗ ಒಂದಿಷ್ಟು ಓದು.
ಏಪ್ರಿಲ್ ಬಂತೆಂದರೆ ನಿಜಕ್ಕೂ ದಿಗಿಲು ಮುಗಿಲಿಗೇರುತ್ತಿತ್ತು. ಟೈಮ್‌ಟೇಬಲ್ ಬಂದಿದೆಯಂತೆ. ಮೇ ದಿಂದ ಪರೀಕ್ಷೆ ಆರಂಭ, ಜೂನ್‌ತನಕ. ನಮ್ಮ ಗೆಳೆಯರಲ್ಲಿ ಹಲವರು ಈಗ ಪೂರ್ತಿ ಹಕ್ಕಲು ಬಿದ್ದು ಬಿದ್ದು ಬಿಡುತ್ತಿದ್ದರು. “ಹೇ, ಯಾವುದು ತಯಾರು ಮಾಡುವುದು? ಇಂಗ್ಲೀಷು ಒಂದು ಪದ್ಯ ಗಟ್ಟಿ ಮಾಡಿದ್ರೆ ಸಾಕೇನು? ಗ್ರಾಮರ್-ಗೀಮರ್ ಒಂದೂ ಬರುವುದಿಲ್ಲ. ಅದು ಯೆಂತ ಅcಠಿಜಿvಛಿ ಕಚssಜಿvಛಿ? ಒಂದೊಂದು ವಾಕ್ಯ ಒಂದೊಂದು ತರ. ನನ್ನ ಕಥೆ ಮುಗಿತಾ! ಈ ಸಲನೂ’
ಹೆಣ್ಣು ಮಕ್ಕಳದ್ದೂ ತುಂಬ ನಾಟಕ. ಅವರು ಹೆಚ್ಚು ಅಭ್ಯಾಸ ಮಾಡುತ್ತಿದ್ದರು. ದೋಸೆ ಎರೆಯುವಾಗ ಕೂಡ ಒಂದು ಕಣ್ಣು ಪುಸ್ತಕದ ಮೇಲೆ. ಆದರೆ, ತಲೆಗೆ ಹತ್ತುವುದಿಲ್ಲ ಎಂಬ ದಿಗಿಲು. ದಿನಾಲು ಸಂಜೆ ಅಳುವುದು. “ನನಗೆ ಏನೂ ಬರುವುದೇ ಇಲ್ಲ’ ಅಂತ. ಅಪ್ಪಂದಿರು ಕಂಗಾಲಾಗಿ ಜಾತಕದ ಮೊರೆ ಹೋಗುತ್ತಿದ್ದರು. ಜ್ಯೋತಿಷಿಗಳು ಜಾತಕ ಕೂಲಂಕಶವಾಗಿ ನೋಡಿ, “ಅವಳಿಗೆ ಗುರುಬಲ ಇಲ್ಲ. ಮುಂದಿನ ವರ್ಷ ಗುರು ಬಲ ಬರುತ್ತದೆ. ಹೀಗೇ ಬೇಕಾದರೆ ಒಂದು ಗುರುಶಾಂತಿ ಮಾಡಿಸಿ’ ಎನ್ನುತ್ತಿದ್ದರು. ಇಲ್ಲವಾದರೆ, “ಗಣಪತಿಗೆ ಒಂದು ಕಾಯಿ ವಡೆಸಿ’ ಎನ್ನುತ್ತಿದ್ದರು.
ಸೈಕಾಲಜಿ ಇನ್ನೂ ಮುಟ್ಟೇ ಇಲ್ಲ. ಪೊಲಿಟಿಕಲ್ ಸೈನ್ಸ್ ಏನು ಮಾಡುವುದು? ಇಂಗ್ಲೀಷ್ ಮೇಜರ್ ಪೇಪರ್ ಲಾಸ್ಟ್ ಪ್ರಶ್ನೆಗೆ ನೋಟ್ಸ್ ಇಲ್ಲ. ಇಪ್ಪತ್ತು ಮಾರ್ಕ್ ಹೋಗಬಹುದು, ಹಾಳುಬೀಳಲಿ. ಹಣೆಯಲ್ಲಿ ಬರೆದ ಹಾಗೆ ಆಗುತ್ತದೆ. ಎಲ್ಲರದೂ ಒಂದೇ ಮಾತು. “ಆ ಬಡ್ಡೀಮಗ ಸರ್ ಕೆಲವು ಚಾಪ್ಟರ್ ಕಲಿಸೇ ಇಲ್ಲ’. ದಿಗಿಲೇ ದಿಗಿಲು.
ಪರೀಕ್ಷೆ ಹತ್ತಿರ ಹತ್ತಿರ ಬಂತೆಂದರೆ ಈಗ ತಯಾರಾಗಲೇ ಬೇಕು. ಸೈಕಲ್ ಪಂಕ್ಚರಾಗಿ ಹೋಗಿದೆ, ತೆಗೆಸಬೇಕು. ಸೈಕಲ್‌ಗೆ ಮುಂದಿನ ಬ್ರೇಕ್ ಕೂಡ ಇಲ್ಲ. ಪೆನ್ನಿನ ನಿಬ್ಬು ಕಾರುತ್ತಿದೆ. ಪೆನ್ ತೊಳೆದು ಒಣಗಿಸಬೇಕು. ನಿಬ್ ಮಧ್ಯ ಸೂಕ್ಷ್ಮವಾಗಿ ಬ್ಲೇಡ್ ಹಾಕಿ ಸ್ವಲ್ಪ ದಪ್ಪ ಬರೆಯುವಂತೆ ಅಗಲಿಸಬೇಕು. ಕಾಲೇಜಿಗೆ ಹಾಕುವ ಬಟ್ಟೆ ತೊಳೆಯಲು ಬಾರ್ ಸೋಪ್ ತರಬೇಕು. ಇಸಿŒ ಮಾಡಿಕೊಳ್ಳಬೇಕು. ಹಾಲ್‌ಟಿಕೇಟ್ ತಂದುಕೊಳ್ಳಬೇಕು. ಪೆನ್‌ಎರಡಾದರೂ ಇಟ್ಟುಕೊಳ್ಳಬೇಕು. ಯಾರ¨ªಾದರೂ ವಾಚ್ ಇಸಕೊಳ್ಳಬೇಕು. ಹೀಗೆ ಹಲವುಹತ್ತು ಚಿಂತೆಗಳು. ಹಾಲ್‌ಟಿಕೇಟ್ ತರಲು ಹೋದರೆ ಇಡೀ ಕಾಲೇಜೆಲ್ಲ ಈಗ ಭಣಭಣ. ಹಾಳು ಹಂಪೆಯಂತೆ. ಮೊದಲೆಲ್ಲ ನಲಿದಾಡಿದ ಕಾಲೇಜು ಈಗ ಉಗ್ರಮುಖ ಧರಿಸಿ ಕುಳಿತು ಬಿಡುತ್ತಿತ್ತು. ಹಾಲ್‌ಟಿಕೇಟ್‌ಕೊಡುವ ಕ್ಲರ್ಕ್ ನೂ ಈಗ ಬುಸುಬುಸು. ಫೊಟೊ ನೋಡಿ ನಮ್ಮ ನೋಡಿದರೆ ತಾಳೆಯಾಗುತ್ತಿರಲಿಲ್ಲ. “ತಮ್ಮಾ, ಫೊಟೊ ನಿನ್ನ ಹಾಗೆ ಇಲ್ಲವಲ್ಲ?’ ಎಂದು ಅವನ ಗಲಾಟೆ. ಅಂತೂಇಂತೂ ಅವನಿಗೆ ಸಮಜಾಯಿಷಿ ನೀಡಿ ಹೊರಬೀಳುವ ತನಕ ಸಾಕು ಸಾಕಾಗಿ ಹೋಗುತ್ತಿತ್ತು.
ಮಧ್ಯಾಹ್ನ ಎರಡು ಗಂಟೆಗೆ ಪರೀಕ್ಷೆ. 12 ಗಂಟೆಗೆ ಊಟ ಮಾಡಿ ಕುವåಟೆಗೆ ಬಿರುಬಿಸಿಲಿನಲ್ಲಿ ಸೈಕಲ್‌ನಲ್ಲಿ ಮುಟ್ಟುವ ತನಕ ಮೈಯೆಲ್ಲ ಬೆವರಿನ ಸ್ನಾನ. ಸ್ವಲ್ಪ ಹೊತ್ತು ಆಲದಕಟ್ಟೆಯ ಬಳಿ ಕುಳಿತು ಸುಧಾರಿಸಿಕೊಂಡು, ಚೂರು ನೋಟ್ಸ್ ಮಗುಚಿ ಹಾಕಿ ಪರೀಕ್ಷೆಯ ರಣರಂಗಕ್ಕೆ ಪ್ರವೇಶ.
ಕಾಲೇಜಿಗೆ ಈಗ ತುಂಬ ಗಂಭೀರ ವಾತಾವರಣ.ಮೊದಲು ನಗುಮುಖದಿಂದಿರುತ್ತಿದ್ದ ಅಟೆಂಡರ್‌ಗಳು, ಸರ್‌ಗಳು ಎಲ್ಲರ ಮುಖಗಳೂ ಈಗ ಗಂಭೀರ. ಯಾರೋ ಏನೋ, ಮೊದಲೆಲ್ಲೂ ಕಂಡೇ ಇಲ್ಲದಂತೆ ವ್ಯವಹರಿಸುತ್ತಿದ್ದರು. “ಗೆಟ್‌ಇನ್’ ಎಂಬ ಭಯಾನಕ ಕೂಗು ಸಹ ಕೇಳಿಸುತ್ತಿತ್ತು. “ಟೈ ಯುವರ್ ಸಪ್ಲಿಮೆಂಟ್ ಪೇಪರ್ಸ್’ ಎನ್ನುವ ಎದೆ ನಡುಗಿಸುವ ಮಾತುಗಳು. ಬೆಲ್ ಹೊಡೆದೊಡನೆ ಕದ ಮುಚ್ಚುವ, ನಿರ್ದಾಕ್ಷಿಣ್ಯವಾಗಿ ಪೇಪರ್ ಕಸಿ ಯುವ ಕೈಗಳು. ಕೊನೆಗೂ ಉಳಿದುಬಿಡುವ ರಿಜಿಸ್ಟರ್ ನಂಬರ್ ಬರೆದೆನೋ ಇಲ್ಲವೋ ಎನ್ನುವ ಆತಂಕ.
ದಿಗಿಲು ಮುಗಿಯುವುದಿಲ್ಲ. ಮತ್ತೆ ರಿಸಲ್ಟ್ ಬರಲಿದೆಯಲ್ಲ ! ತೀವ್ರ ಒತ್ತಡದಲ್ಲಿ ಪರೀಕ್ಷೆಗೆ ಓದಿ ಹೈರಾಣಾಗುವ ಈಗಿನ ಮಕ್ಕಳಿಗಿಂತ ನಾವೇ ಸುಖೀಗಳು ಅಂತ ಅನ್ನಿಸುತ್ತಿದೆ. ಏಕೆಂದರೆ, ಕೊನೆಗೆ ನಾವು ಪಾಸೋ-ಫೇಲೋ ಎನ್ನುವುದು ಅಷ್ಟೇನೂ ದೊಡ್ಡ ವಿಷಯವಾಗಿರಲಿಲ್ಲ- ಈಗಿನ ಹಾಗೆ. ಈಗ ಎರಡನೆಯ ಪಿಯುಸಿ ಸೈನ್ಸ್ ಕ್ಲಾಸಿನಲ್ಲಿ ಮಕ್ಕಳಿದ್ದರಂತೂ ಮುಗಿಯಿತು. ಮನೆಯಲ್ಲಿ ಯುದ್ಧದ ವಾತಾವರಣ.
ಆರ್. ಜಿ. ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.