ಪ್ರತಿದಿನ ಬೆಳಗ್ಗೆ
Team Udayavani, Apr 22, 2018, 6:00 AM IST
ಬೆಳಗಾಗುತ್ತಿದೆ ಎಂಬ ವಿಚಿತ್ರ ಬೇಸರದ ಸಂಗತಿಯನ್ನು ಅಲಾರಾಂ ತಿಳಿಸಿದಾಗ, ಇನ್ನು ಮಲಗಿದರೆ ಆಗುವುದಿಲ್ಲ ಎನ್ನುತ್ತ ಬಡಬಡ ಏಳುವ ಅವನು ನೀರು ಕುಡಿದು ಮೆತ್ತ¤ಗೆ ಹೋಗಿ ಕವಳ ಹಾಕಿ, ಪ್ರಾತಃವಿಧಿಗೆ ಹೋಗುವ ತೀವ್ರ ಸಂವೇದನೆ ಆಗುವುದನ್ನು ಕಾಯುತ್ತ, ಮೊಬೈಲ್ ತಗೆದು ವಾಟ್ಸಾಪ್‌ನಲ್ಲಿ ಏನು ಬಂದಿದೆ ಎನ್ನುವುದನ್ನು ನೋಡಿ, ಫೇಸ್‌ಬುಕ್ಕಿಗೆ ಹೋಗಿ ಕಂಡ ಕಂಡ ಪೋಸ್ಟಿಗೆಲ್ಲ ಲೈಕ್ ಕೊಟ್ಟು ಬಾತ್‌ರೂಮಿಗೆ ಹೋಗುವುದು.
ಬಾತ್‌ರೂಮಿನಲ್ಲಿ ಕೈ ಕಾಲು ಮುಖ ತೊಳೆದು, ಕೆಳಗೆ ಬಂದು, ಹೆಂಡತಿ ಹೆಚ್ಚಾಗಿ ಇನ್ನೂ ಏಳದಿರುವುದರಿಂದ ದೇವರ ಕೋಣೆ ಒರಸಿ, ರಂಗೋಲಿ ಹಾಕಿ ದೀಪ ಹಚ್ಚಿ, ವಾಕಿಂಗ್ ಪ್ಯಾಂಟು-ಶರ್ಟು ತೊಟ್ಟು ಮನೆ ಬಾಗಿಲು ಹಾಕಿ ಗೇಟಿನ ಬಾಗಿಲು ತೆಗೆದು ಹೊರಡುವುದು. ತಿರುಗಿ ಬರುವಾಗ ಸುಮಾರು ಒಂದು ಗಂಟೆಯಾಗುತ್ತದೆ. ಬಂದವನೇ ಹೂ ಕೊಯ್ದು, ಹಿಂದೆ ತೆಗೆದುಕೊಂಡು ಹೋಗಿ ಇಡುವ ಪಾತ್ರೆ ಇದ್ದರೆ ಇಟ್ಟು, ಮೀಯಲು ಹೋಗುವುದು. ಅವಳು ಅಡುಗೆ ಮಾಡುತ್ತಿರುತ್ತಾಳೆ. ಮಿಂದು ಬಂದ ಅವನು ಪೂಜೆ ಮಾಡಿ ಮುಗಿಯುವಾಗ ಚಪಾತಿಯೋ ದೋಸೆಯೋ ಎರೆಯಲು ಸಿದ್ಧವಾಗುತ್ತದೆ. ಅಷ್ಟರಲ್ಲೇ ಪಾತ್ರೆ ತೊಳೆಯುವವಳು ಬಂದು ಕೊಣಕುಟ್ಟು ಮಾಡುತ್ತಿರುತ್ತಾಳೆ. ಮಗಳು ಹೊರಗಡೆ ಓದಲು ಹೋಗಿದ್ದಳು. ಇದ್ದರೂ ಏಳುವುದು ಲೇಟು. ಒಮ್ಮೆ, ಅವಧಿಗಿಂತ ಮುಂಚೆ ಏಳಿಸಿದರೆ ಬೇರೆ ರಾಮಾಯಣವೇ ಶುರುವಾಗುತ್ತದೆಯೆಂದು ಏಳಿಸಲು ಹೋಗುವುದಿಲ್ಲ.
ನಂತರ ಹೆಂಡತಿ ಸ್ನಾನಕ್ಕೆ ಹೋಗಿ ಬರುತ್ತಿದ್ದಂತೆ ಅವನು ದೋಸೆ ಎರೆಯುವುದನ್ನೊ, ಚಪಾತಿ ಸುಡುವುದನ್ನೊ ಮಾಡುತ್ತ ಚಹಾ ಮಾಡುತ್ತಾನೆ. ಮೊದಲ ಎರಡನ್ನು ಕೆಲಸದವಳಿಗೆ ಕೊಟ್ಟ ಮೇಲೆ ಮುಂದಿನದು ಅವನ ಪ್ಲೇಟಿಗೆ ಬರುತ್ತದೆ. ಆಗ ಹೆಂಡತಿಗೆಂದು ಸುಡಲು ತೊಡಗಿದರೆ ಒಮ್ಮೊಮ್ಮೆ ಅವಳು, “”ನೀವು ನಿಂಗಳದ ತಕಂಡು ಹೋಗಿ ನಂದು ನಾ ಸುಟ್ಕಂಡು ಬತ್ತೆ” ಎಂದು ನಿರ್ಭಾವುಕವಾಗಿ ಹೇಳುತ್ತಾಳೆ. ಅಷ್ಟರಲ್ಲೇ ಅವಳು ಹೊರಡುವ ಸಮಯವಾಗುತ್ತ ಬಂದಿರುತ್ತದೆ. “”ನೀನು ಬೆಂಗಳೂರು ಬಸ್ಸಿನ ಹಾಗೇ, ತಡವಾಗಿ ಹೊರಡಲಿ, ಮುಂಚೆ ಹೊರಡಲಿ ಹೋಗಿ ಮುಟ್ಟುವುದು ಅದೇ ಟೈಮಿಗೆ. ಹಾಗೇ ನೀನು ಎಷ್ಟು ಮುಂಚೆ ಎದ್ದರೂ ಹೊರಡುವುದು ಅದೇ ಟೈಮಿಗೆ !” ಎಂದು ಹಾಸ್ಯ ಮಾಡಬೇಕೆಂದು ಕಾಣುತ್ತದೆ ಅವನಿಗೆ. ಆದರೆ, ಈ ಸಮಯವು ಹಾಸ್ಯವೂ ಗಂಭೀರ ಆಪಾದನೆಯಾಗುವ ಸಮಯವಾದ್ದರಿಂದ ಮನಸಲ್ಲೇ ಹೇಳಿಕೊಳ್ಳುತ್ತಾನೆ. ಅವನಿಗೆ ಒಂಬತ್ತೂವರೆ-ಹತ್ತು ಗಂಟೆಗೆ ಹೊರಡುವುದು. ಆದರೆ, ಗಡಿಬಿಡಿಯ ಹೆಂಡತಿಯನ್ನು ಬಸ್ ಹತ್ತಿಸಿದ ಮೇಲೇ ಅವನು ನಿರಾಳವಾಗುವುದು.
ಹೀಗೆ ಹೀಗೇ ಎದ್ದು ಹೆಂಡತಿಯನ್ನು ನಿಲ್ದಾಣದವರೆಗೆ ಬಿಟ್ಟು ಬರಲು ಸಿದ್ಧವಾಗುವವರೆಗೆ ಸಣ್ಣ ಹಿಡಿದು ಮಳೆ ಶುರುವಾಯಿತು. “ಹತ್ತೇರಿ!’ ಎಂದು ಬೈಕನ್ನು ಬಿಟ್ಟು ಕಾರನ್ನು ಹೊರ ಹಾಕಿದ. ಬಿಡಲು ಬೇಕಾಗುವ ವೇಳೆ ಐದು ನಿಮಿಷವಾದರೂ ಅರ್ಧ ಗಂಟೆ ಬೇಕಾಗುತ್ತಿತ್ತು. ಅವಳು ಕೂದಲು ಬಾಚಿ, ಸೀರೆ ಉಟ್ಟು, ಅದೂ ಉಟ್ಟಿದ್ದು ಹೆಚ್ಚು ಕಡಿಮೆಯಾದರೆ ಪುನಃ ಬುಡದಿಂದ ಶುರುವಾಗಬೇಕು! ಆ ದಿನ ಹಾಗೇನೂ ಆಗಲಿಲ್ಲ. ಅವಳು ರೆಡಿಯಾಗಿ, ಮಗಳು ಇಲ್ಲದ್ದರಿಂದ ಬಾಗಿಲಿಗೆ ಚಾವಿ ಹಾಕಿ, ಗೇಟು ತೆಗೆದು ಕಾರಿನ ಮೇಲೆ ಕುಳಿತಳು. ಹೊಂಡಗಿಂಡ ಎಲ್ಲ ಇರುವ ಸುಂದರವಾದ ಮಣ್ಣು ರಸ್ತೆಯಾದ್ದರಿಂದ ಸೆಕೆಂಡ್ ಗೇರಿನ ಮೇಲೇ ಹೋಗಬೇಕು.
ಈ ರಸ್ತೆ ಮುಗಿದು ಟಾರ್ ರೋಡ್ ಹಿಡಿಯುವಾಗ, ಮುಖ್ಯ ರಸ್ತೆಯಲ್ಲಿ ಅವಳು ಹತ್ತುವ ಬಸ್ಸು ನಿಂತಿದ್ದು ಕಾಣಿಸಿತು. ಆ ಇಕ್ಕಟ್ಟಿನ ರೋಡಿನಲ್ಲಿ ಫಾಸ್ಟ್ ಬಿಡಲು ಅವನ ಹತ್ತಿರ ಆಗಿಲ್ಲ. “”ಹೋದರೆ ಹೋಗ್ಲಿ, ಮತ್ತೂಂದು ಬಸ್ ಇದ್ದು” ಎಂದು ಅವಳು ಹೇಳಿದರೂ, ಸಿಕ್ಕಿದರೆ ಚಲೊ ಆಗಿತ್ತು ಎಂಬುದು ಅವಳ ಮುಖದ ಮೇಲೆ ಇದ್ದುದು ಕಾಣುತ್ತಿತ್ತು. ಇನ್ನೇನು, ಬಸ್ಸಿನ ಹತ್ತಿರ ಬಂದಿದ್ದೇವೆ ಎನ್ನುವಾಗ ಡ್ರೈವರ್ ಸ್ಟಾರ್ಟ್ ಮಾಡಿ ಬಿಟ್ಟಾಗಿತ್ತು. “”ಮುಂದಿನ ಸ್ಟ್ಯಾಂಡಿನಲ್ಲಿ ಹತ್ತುವವರು ಇರುತ್ತಾರೆ, ಅಲ್ಲಿ ನಿಲು¤” ಎಂದಳು. “”ಸರಿ” ಎಂದು ಅವನು ಅದನ್ನು ಫಾಲೋ ಮಾಡಿದ. ಅಲ್ಲಿಯೂ ಹಾಗೆಯೇ ಆಯಿತು, ಕಾರ್ ನಿಲ್ಲಿಸುತ್ತಿರುವಂತೆ ಬಸ್ಸನ್ನು ಬಿಟ್ಟಾಯಿತು. ಆದರೆ, ಆಗ ಅದರ ಹಿಂದಿರುವ ಬೋರ್ಡ್ ಕಂಡಿತು. “”ಹೋ… ಇದು ನಮ್ಮ ಬಸ್ ಅಲ್ಲ, ಬೇರೆ ಬದಿಗೆ ಹೋಗುವುದು!” ಎಂದು ಪುಟ್ಟ ಖುಷಿಯಾಯಿತು.ಅಲ್ಲೇ ಕಾರು ನಿಲ್ಲಿಸಿ, ಅವಳನ್ನು ಇಳಿಸಿ, ದೊಡ್ಡ ನಿಟ್ಟುಸಿರು ಬಿಟ್ಟು ಮನೆ ಕಡೆಗೆ ತಿರುಗಿಸಿದ.
ಗೇಟಿನ ಎದುರು ಕಾರು ನಿಲ್ಲಿಸಿ ಇಳಿಯುವಾಗ ಫಕ್ಕನೆ ನೆನಪಾಯಿತು, ಓ! ಅವಳು ಗಡಿಬಿಡಿಯಲ್ಲಿ ಮನೆ ಛಾವಿ ಕೊಡುವುದನ್ನು ಮರೆತಿದ್ದಾಳೆ, ಅವಳ ಬ್ಯಾಗನಲ್ಲೇ ಹಾಕಿಕೊಂಡಳು ಎಂದು.
ಫೋನು ಮಾಡುವಾ ಎಂದರೆ ಅದೂ ಮನೆಯ ಒಳಗಿದೆ. ದುಡೂx ಇಲ್ಲ, ಅದೆಲ್ಲ ಸಾಯಲಿ! ಪ್ಯಾಂಟೂ ಹಾಕಿಕೊಂಡಿಲ್ಲ, ಬರ್ಮುಡಾ! ಇನ್ನು ಅವಳು ಬರುವುದು ಸಂಜೆ ಆರಕ್ಕೆ, ಅಲ್ಲಿಯವರೆಗೆ ಏನು ಮಾಡುವುದು? ಪಕ್ಕದ ಮನೆಗೆ ಹೋಗಿ ಅವಳ ನಂಬರ್ ನೆನಪು ಮಾಡಿಕೊಂಡು ಹೇಳಿದ. ಅವರು ಟ್ರೈ ಮಾಡಿದರೆ “”ತಾಗುತ್ತಿಲ್ಲ, ಎಂಗೇಜ್ ಬರಿ¤ದೆ” ಎಂದರು. “”ಓಹೊ, ಅವಳು ನನಗೆ ಟ್ರೆç ಮಾಡುತ್ತಿದ್ದಾಳೆ ಬಹುಶಃ” ಎಂದು ಕಂಗಾಲಾದ ಅವನು, “”ಇಲ್ಲ, ಅವಳು ಇನ್ನೂ ಬಸ್ ಹತ್ತಿಲ್ಲದಿರಬಹುದು, ಹೋಗಿ ಬರ್ತೇನೆ” ಎಂದು ಕಾರು ತಿರುಗಿಸಿಕೊಂಡು ಹೊರಟ. ಅದರೆ, ಅವಳು ಹೊರಟು ಹೋಗಿದ್ದಳು. ಅಲ್ಲೇ ಇರುವ ಅಂಗಡಿಯವನನ್ನು ಕೇಳಿದರೆ, “”ಹೋಗಿ ಸುಮಾರು ಹೊತ್ತಾಯಿತು” ಎಂದ. ತನಗಾದ ಪರಿಸ್ಥಿತಿಯನ್ನು ಹೇಳಿದ ಬಳಿಕ ಅವನು ಕಳಕಳಿಯಿಂದ ಫೋನ್ ತೆಗೆದು, ನಂಬರ್ ಪಡೆದು ರಿಂಗ್ ಮಾಡಲು ಯತ್ನಿಸಿದ. “”ನಾಟ್ ರೀಚೆಬಲ್ ಬರಿ¤ದೆ, ಮುಂದೆ ಒಂದು ಕಡೆ ಮಾತ್ರ ಸಿಗ್ನಲ್ ಇದೆ. ಅಲ್ಲಿಗೆ ಹೋದಾಗ ತಾಗಿದರೆ, ಅವರ ಹತ್ತಿರ ಅಲ್ಲೇ ಇಳಿಯಲು ಹೇಳಿ, ನೀವು ಅಲ್ಲಿಗೆ ಹೋಗಿ ತಕಂಡ್ ಬನ್ನಿ” ಎಂದು ಫೋನ್ ಟ್ರೈ ಮಾಡುತ್ತಲೇ ಉಳಿದ.
ಅಷ್ಟರಲ್ಲಾಗಲೇ ಅವನ ಉದ್ವೇಗ ಕಡಿಮೆಯಾದಂತಿತ್ತು. “”ಇದೂ ಒಂದು ನಮೂನೆ ಮಜಾವೆಯಾ” ಎಂದು ಅನಿಸಲು ಹತ್ತಿತ್ತು! ವಿನಾಕಾರಣ ಹಗುರಾಗಿ ಕಾರಿನ ಒಳಗೆ ನಿಧಾನವಾಗಿ ನೋಡಿದ. ಅವಳು ಕೂತ ಸೀಟಿನ ಮೂಲೆಯಲ್ಲಿ ಒಂದು ಬದಿಗೆ, ಛಾವಿ ಮಗಳ ಹಾಗೆ ಮಲಗಿತ್ತು.
– ರಾಜು ಹೆಗಡೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.