ಉತ್ತರಾಪಥ ಅನುಭವ ಯಾತ್ರೆ
Team Udayavani, Mar 1, 2020, 5:23 AM IST
ಪ್ರವಾಸ ಇತ್ತೀಚೆಗೆ ಎಲ್ಲರಿಗೂ ಇಷ್ಟವಾಗುವ ವಿಚಾರ. ಸಾರಿಗೆ-ಸಂಪರ್ಕ ವ್ಯವಸ್ಥೆ ಸುಲಭವಾಗಿರುವ ಕಾಲದಲ್ಲಿ ನಮ್ಮ ನಾಡನ್ನು ನಾವು ತಿಳಿದುಕೊಳ್ಳುವುದು ಕಷ್ಟವಾಗಲಾರದು. ಅದೇ ಉದ್ದೇಶದಿಂದ ಇತ್ತೀಚೆಗೆ ನಾನು ಉತ್ತರ ಭಾರತದ ಪ್ರವಾಸ ಹೊರಟೆ. ಸ್ನೇಹಿತರ ವಲಯವೆಂದರೆ ಪ್ರಯಾಣ ಇನ್ನಷ್ಟು ಗಮ್ಮತ್ತು. ಕರಾವಳಿಯ ಬಿಸಿಲಿನಲ್ಲಿ ಬೆವರು ಸುರಿಸಿ ಅಭ್ಯಾಸವಿದ್ದ ನಮಗೆ ಮೊದಲು ಉತ್ತರ ಪ್ರದೇಶದ ಅಲಹಾಬಾದ್ ಅಂದರೆ ಪ್ರಯಾಗ್‌ರಾಜ್ ಸೇರಿದಾಗಲೇ ಚಳಿಯ ವಿರಾಟ್ ದರ್ಶನವಾದುದು. ಹೀಟರ್ ಹಚ್ಚಿಕೊಂಡು ರಾತ್ರಿ ಕಳೆಯುವ ಪ್ರಸಂಗ ಅಲ್ಲಿ. ಹಾಗೇ ಮುದುರಿಕೊಂಡು ಬಡಾ ಹನುಮಾನ್ ಮತ್ತು ತ್ರಿವೇಣಿ ಸಂಗಮವನ್ನು ನೋಡಿದೆವು. ಪುರಾಣಗಳಲ್ಲಿ ಉಲ್ಲೇಖೀಸಲ್ಪಟ್ಟ ಸಿಂಹಕ್ಷೇತ್ರವೇ ಪ್ರಯಾಗದ ತ್ರಿವೇಣಿ ಸಂಗಮ. ಮರೀಚಿ ಬ್ರಹ್ಮನ ನೇತೃತ್ವದಲ್ಲಿ “ಸತ್ರಯಾಗ’ ನಡೆದುದು ಇಲ್ಲೇ ಇರಬೇಕು. ಇಲ್ಲಿ ಹಸಿರು ಬಣ್ಣದ ನೀರಿನಿಂದ ಕಂಗೊಳಿಸುವ ಯಮುನೆ ಮತ್ತು ನೀಲ ಸಲಿಲದ ಗಂಗೆ ಸಂಗಮಿಸುವ ಜಾಗದಲ್ಲಿ ಬಿಳಿವರ್ಣದ ಸರಸ್ವತೀ ನದಿ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ. ಸಂಗಮ ಸ್ಥಳಕ್ಕೆ ದೋಣಿಯಲ್ಲಿ ಹೋಗುವುದೇ ರೋಮಾಂಚನಗೊಳ್ಳುವ ಒಂದು ಸಾಹಸ ಯಾತ್ರೆ. ಅಲ್ಲಿ ಹೋಗಿ ಅಂಬಿಗರ ಆಸರೆಯಿಂದ ದೋಣಿಗೆ ತಾಗಿಕೊಂಡಂತೆ ಮಾಡಿದ್ದ ಅಟ್ಟಳಿಗೆಯಲ್ಲಿ ನಿಂತು ಗಂಗೆಗೆ ಆರತಿ ಬೆಳಗಿ, ಬಾಗಿನ ಸಮರ್ಪಿಸಿದ ಧನ್ಯತೆಯ ಕ್ಷಣ ನಮ್ಮದಾಗಿತ್ತು. ಆಕಾಶ ತುಂಬಾ ಹಾರಾಡುತ್ತಿದ್ದ ಕಡಲ ಹಕ್ಕಿ (ವೇಲ್ಸ್)ಗಳಿಗೆ ದಡಕ್ಕೆ ಬಂದು ಮಂಡಕ್ಕಿಯ ಪೊಟ್ಟಣ ಕೊಟ್ಟಾಗ ಅವು ಮುತ್ತಿಕೊಂಡು ಕಾಳು ಹೆಕ್ಕಿಕೊಳ್ಳುವದನ್ನು ನೋಡುವುದೇ ಬಲು ಆನಂದ.
ತ್ರಿವೇಣಿ ಸಂಗಮದ ಬಳಿಯಲ್ಲೇ ಅಕ್ಬರ್ ಬಾದಶಹ ನಿರ್ಮಿಸಿದ ಮೈಲುದ್ದದ ಬೃಹತ್ ಕೋಟೆಯೊಂದು ಕಾಣಿಸಿತು. ಅದರ ಉದ್ದಕ್ಕೂ ನಡೆದಾಗ ನೆಲ ಅಂತಸ್ತಿನಲ್ಲಿ ಒಂದೆರಡು ದೇವಸ್ಥಾನಗಳನ್ನು ಕಂಡೆವು. ಕೋಟೆಯ ಇನ್ನೊಂದು ಬದಿಯಲ್ಲಿ ಗಡಿ ಕಾಯುವ ಸೈನಿಕರ ಅಡ್ಡೆ ಗೋಚರಿಸಿತು. ರಾಮಲಕ್ಷ್ಮಣ ಸೀತೆಯರು ವನವಾಸಕ್ಕಾಗಿ ಬಂದ ಭಾರದ್ವಾಜಾಶ್ರಮ ಮತ್ತು ಚಿತ್ರಕೂಟದ ಕುರುಹುಗಳನ್ನು ಅಲ್ಲಿ ಕಂಡೆವು. ಶ್ರೀರಾಮನು ಭರತನನ್ನು ಭೇಟಿಯಾಗಿ ಪಾದುಕಾ ಪ್ರದಾನ ಮಾಡಿದ ನೇರಳೆ ವೃಕ್ಷ ಮೂಲವೂ ಅಲ್ಲಿತ್ತು.
ಅದೇ ದಿನ ಪ್ರಯಾಗರಾಜ್‌ನಲ್ಲಿ ಮೋತೀಲಾಲ ನೆಹರೂ ಅವರ ನಿವಾಸ ಆನಂದ ಭವನವನ್ನು ನಾವು ಸಂದರ್ಶಿಸಿದೆವು. ವಿಶಾಲವಾದ ಆ ಬಂಗಲೆಯ ಒಳ ಹೊರಕ್ಕೆ ಜವಾಹರಲಾಲ ನೆಹರೂ, ಇಂದಿಗಾಂಧಿ ಹಾಗೂ ರಾಜೀವಗಾಂಧಿಯವರ ಜೀವನಕ್ಕೆ ಸಂಬಂಧಪಟ್ಟ ಅನೇಕ ವಸ್ತುಗಳು, ಚಿತ್ರಪಟಗಳು ಇತಿಹಾಸದ ಘಟನೆಗಳನ್ನು ನೆನಪಿಸಿದವು. ಮಹಾತ್ಮಾಗಾಂಧಿಯವರು ಬಂದು ಅಗ್ರ ನಾಯಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದ ಕೊಠಡಿಯೊಂದು ಅಲ್ಲಿತ್ತು.
ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರವನ್ನು ನೋಡಿದಾಗ ಅಚ್ಚರಿಯಾಯಿತು. ಕಲ್ಲಿನ ಕೆಲಸ, ಮರದ ಕುಸುರಿಯನ್ನು ಅಲ್ಲಿ ಸಾಲಾಗಿ ಸಂಗ್ರಹಿಸಲಾಗಿದೆ. ಕಾಶಿಯಲ್ಲಿ ಗಂಗೆಯ ದಡದುದ್ದಕ್ಕೂ ಎದ್ದು ನಿಂತಿರುವ ದೇವಾಲಯ ಹಾಗೂ ಕಟ್ಟಡ ಸಮುಚ್ಚಯ ವಿದ್ಯುದ್ದೀಪದ ಬೆಳಕಿನಲ್ಲಿ ಅತ್ಯಂತ ಸುಂದರವಾಗಿ ಕಾಣಿಸಿತು. ನದಿಯಲ್ಲಿ ನೂರಾರು ಹಾಯಿದೋಣಿಗಳು ಸಾಲಂಕೃತವಾಗಿ ನಿಂತಿದ್ದವು. ಅದರಲ್ಲಿ ಪೂರ್ಣವಾಗಿ ದೇಶ-ವಿದೇಶದ ಪ್ರವಾಸಿಗರು ತುಂಬಿದ್ದರು. ಸಂಜೆ ನದೀ ದಡದಲ್ಲಿ ನಡೆಯುವ ಮಹಾ ಗಂಗಾರತಿಯ ದೃಶ್ಯಕ್ಕಾಗಿ ಸಹಸ್ರಾರು ಜನ ಕಾತರದಿಂದ ಕಾಯುತ್ತಿದ್ದರು. ಸರಿಯಾಗಿ 7 ಗಂಟೆಗೆ ಅದು ಆರಂಭವಾಯಿತು. ಪುಷ್ಪಾಲಂಕೃತ ವೇದಿಕೆಯಲ್ಲಿ ಆರೇಳು ಮಂದಿ ಅರ್ಚಕರು ಬ್ರಹದ್ಗಾತ್ರದ ಪಂಚದೀವಟಿಗೆಳನ್ನು ಬೆಳಗಿ ಗಂಗೆಗೆ ಆರತಿಯೆತ್ತುವ ದೃಶ್ಯ ನಯನ ಮನೋಹರ.
ಬುದ್ಧಗಯಾದಲ್ಲಿ ಅಶೋಕ ಸಾಮ್ರಾಜ್ಯದ ಕುರುಹುಗಳನ್ನು ನೋಡಿದೆವು. ಶಿಲಾ ಶಾಸನಗಳು, ಬೃಹದ್ಗಾತ್ರದ ಗಂಟೆ, ಗೌತಮಬುದ್ಧರು ತನ್ನ ಐವರು ಶಿಷ್ಯರಿಗೆ ಮೊತ್ತಮೊದಲು ಉಪದೇಶ ಮಾಡಿದ “ಧಮ್ಮ ಚಕ್ಕಾ ಪವತ್ತಾನ’ ವಿಗ್ರಹಗಳನ್ನು ಹಾಗೂ ಸಾರನಾಥದ ಐತಿಹಾಸಿಕ ಬೌದ್ಧಸ್ತೂಪವನ್ನು ಕಣ್ತುಂಬಿಕೊಂಡೆವು. ಬುದ್ಧದೇವನು ತಪಸ್ಸಿಗೆ ಕುಳಿತ ಬೋಧಿವೃಕ್ಷವನ್ನು ಕಂಡ ದಿವ್ಯಾನುಭೂತಿಯೂ ನಮ್ಮದಾಯಿತು.
ಬುದ್ಧಗಯಾದಿಂದ ಪ್ರಯಾಣ ಬೆಳೆಸಿದ ನಾವು ಮಧ್ಯಾಹ್ನದ ಹೊತ್ತಿಗೆ ರಾಜಗಿರ್ ತಲುಪಿದೆವು. ಇದು ಮಗಧ ಮಂಡಲಕ್ಕೆ ಸೇರಿದ ಗಿರಿವ್ರಜ. ಪುರಾಣ ಕಾಲದಲ್ಲಿ ಜರಾಸಂಧ ಆಳುತ್ತಿದ್ದ ಪ್ರದೇಶವಂತೆ. ಅದನ್ನೂ ನೋಡಿಕೊಂಡು ಬಸ್ಸಿನಲ್ಲಿ ಹೊರಟ ನಾವು ಆದಿನ ಸಂಜೆ ಪ್ರಾಚೀನ ಮಗಧದ ಮಹಾವಿಹಾರವೆನಿಸಿದ ನಳಂದಾ ಸೇರಿದೆವು. ಪಾಟ್ನಾದಿಂದ 95 ಕಿ.ಮೀ. ಆಗ್ನೇಯಕ್ಕಿರುವ ಪ್ರದೇಶ ನಳಂದಾ. ಈಗ ನಳಂದಾ ಪಾಳು ಬಿದ್ದಿದೆ; ಹಾಳು ಹಂಪೆಯಂತೆ ಕಾಣಿಸುತ್ತಿದೆ. ಆದರೂ ಅದನ್ನು ಒಂದು ಪ್ರವಾಸಿ ತಾಣವಾಗಿ ಮಾಡಲಾಗಿದೆ. ನಮಗಂತೂ ಅಲ್ಲಿ ಸುತ್ತಾಡಿದಾಗ ಕರುಳು ಕಿವುಚಿದ ಅನುಭವವಾಯಿತು. ಅಷ್ಟೊಂದು ವಿಶಾಲವಾದ ಪ್ರದೇಶದಲ್ಲಿ ಸುಟ್ಟು ಕರಕಲಾದ ನಳಂದಾ ವಿಶ್ವವಿದ್ಯಾಲಯದ ಅವಶೇಷಗಳು ಮತಾಂಧ ದಾಳಿಕೋರರ ಪಾಶವೀ ಕೃತ್ಯಕ್ಕೆ ಸಾಕ್ಷಿಯಾಗಿ ನಿಂತಿವೆ.
ಪಾಟ್ನಾದಲ್ಲಿ “ಇಂದಿರಾಗಾಂಧಿ ತಾರಾಲಯ’ದಲ್ಲಿ ಆಕಾಶಯಾನ ಮಾಡಿದೆವು. ಅದಾಗಿ “ಬಿಹಾರ್ ಮ್ಯೂಸಿಯಂ’ ಇತಿಹಾಸದ ಪುಟಗಳನ್ನೇ ತೆರೆದಿಟ್ಟಿತು. ಎಣಿಕೆಗೆ ಮೀರಿದ ಪ್ರಾಚ್ಯವಸ್ತುಗಳು, ಐತಿಹಾಸಿಕ ಮಾದರಿಗಳು, ಶಿಲಾ ಶಾಸ ನಗಳು, ವರ್ಣಚಿತ್ರಗಳು, ಸಿಂಧೂ ಕಣಿವೆಯ ನಾಗರೀಕತೆ, ಮೌರ್ಯರು, ನಂದರು, ಗುಪ್ತರು, ಶಿಶುನಾಳರು, ಪಾಲರು, ಕುಶಾನರು, ವರ್ಧನರು ಮೊದಲಾದ ಉತ್ತರಭಾರತದ ರಾಜವಂಶಗಳಿಗೆ ಸಂಬಂಧಿಸಿದ ಅಮೂಲ್ಯ ವಸ್ತುಗಳು ಅಲ್ಲಿವೆ. ನಮ್ಮ ದೇಶದ ಇತಿಹಾಸವನ್ನು ತಿಳಿಸುವ ಇಂತಹ ಸ್ಥಳಗಳಿಗೆ ಯುವಜನತೆ ಭೇಟಿ ನೀಡಿ ತಿಳಿದುಕೊಳ್ಳಬೇಕಾದ್ದು ಅವಶ್ಯ.
ಭಾಸ್ಕರ ರೈ ಕುಕ್ಕುವಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.