Family Doctor: ಕಳೆದುಹೋದ ಕುಟುಂಬ ವೈದ್ಯ
Team Udayavani, Feb 18, 2024, 11:32 AM IST
ಹಿಂದೊಂದು ಕಾಲವಿತ್ತು. ಕುಟುಂಬ ವೈದ್ಯ (Family Doctor) ಎನ್ನುವ “ಆಪದ್ಭಾಂಧವ’ ಇದ್ದ. ನೂರಾರು ಮನೆಗಳಲ್ಲಿ ಯಾರಿಗೇ ಅಜಾರಿಯಾದರೂ ಆತನದೇ ಮಾರ್ಗದರ್ಶನ. ಜನರಿಗೆಲ್ಲ ಅವನ ಮೇಲೆಯೇ ನಂಬಿಕೆ. ನೆಗಡಿಯಿಂದ ಮೆದುಳು ಜ್ವರದವರೆಗೆ, ಹೊಟ್ಟೆನೋವಿನಿಂದ ಹೆರಿಗೆಯವರೆಗೆ, ತಲೆನೋವಿನಿಂದ ಟೈಫಾಯಿಡ್‌ವರೆಗೆ, ಗಾಯಕ್ಕೆ ಹೊಲಿಗೆ ಹಾಕುವುದರಿಂದ ಅರ್ಧಾಂಗವಾಯುವಿನವರೆಗೆ ಎಲ್ಲದಕ್ಕೂ ಆತನದೆ ಆರೈಕೆ. ಆತ ಕಲಿತದ್ದೇನೂ ಬಹಳವಿರಲಿಕ್ಕಿಲ್ಲ, ಆದರೆ ಪರಿಣಾಮ, ಫಲಿತಾಂಶ ಮಾತ್ರ ಅಗಾಧ. ಯಾಕೆಂದರೆ ಆತ ವೈದ್ಯನಷ್ಟೇ ಆಗಿರಲಿಲ್ಲ, ಕುಟುಂಬ ಮಿತ್ರನಾಗಿದ್ದ. ಈಗಿನ ವೈದ್ಯರ ಹಾಗೆ ಆತನ ಆಸ್ಪತ್ರೆ ಬರೀ ಆಫೀಸಾಗಿರಲಿಲ್ಲ, ತಂಗುದಾಣವಾಗಿತ್ತು. ವೈದ್ಯಕೀಯವಲ್ಲದೇ ಬೇರೆ ಜೀವನ್ಮುಖೀ ಚಟುವಟಿಕೆಗಳ ಕೇಂದ್ರವಾಗಿತ್ತು. ಕಾಲ ಆಗ ಸಮಾಧಾನದಿಂದ ಚಲಿಸುತ್ತಿತ್ತು. ಚಡಪಡಿಕೆಗಳಿರಲಿಲ್ಲ, ಅಪನಂಬಿಕೆ ಸಲ್ಲ. ವೈದ್ಯಕೀಯ ಚಿಕಿತ್ಸೆಗೆ ನಂಬಿಕೆ ಮತ್ತು ಭರವಸೆಗಳೇ ಮೂಲಾಧಾರಗಳು. ಜನ ವೈದ್ಯನನ್ನು ನಂಬುತ್ತಿದ್ದರು, ವೈದ್ಯ ಅವರಲ್ಲಿ ಭರವಸೆ ತುಂಬುತ್ತಿದ್ದ.
ಬಲವಾಗಿ ನಂಬಿದ್ದರು…
ಕಾಲ ಬದಲಾಯಿತು. ವೈದ್ಯವಿಜ್ಞಾನ ಅಗಾಧವಾಗಿ ಬೆಳೆಯಿತು. ಮನುಷ್ಯನ ಸಂಶೋಧನಾ ದೃಷ್ಟಿ ಹಾಗೂ ಚಿಕಿತ್ಸಕ ಮನಸ್ಸು ಅಪಾರವಾದ ಜ್ಞಾನವನ್ನು ತನ್ಮೂಲಕ ವಿವಿಧ ರೋಗನಿಧಾನದ ವಿದ್ಯೆ ಹಾಗೂ ಸಲಕರಣೆಗಳನ್ನು, ಆಧುನಿಕ ಚಿಕಿತ್ಸೆಗಳನ್ನು ತಂದು ಹರಡಿಬಿಟ್ಟವು. ಎಲ್ಲವನ್ನೂ ಬಲ್ಲ ಎಂಬಿಬಿಎಸ್ ವೈದ್ಯ, ಕುಟುಂಬ ವೈದ್ಯನ ಸ್ಥಾನಕ್ಕೆ ಪ್ರತಿಷ್ಠಾಪನೆಗೊಂಡ. ಆಗಲೂ ಎಲ್ಲ ಚೆಂದವೇ. ಜನರಿಗೆ ಆಧುನಿಕ ವೈದ್ಯಕೀಯದ ಫಲ ಲಭಿಸತೊಡಗಿತು. “ಇಂಗ್ಲಿಷ್ ಮೆಡಿಸಿನ್’ಗಳ ಪ್ರಭಾವದಿಂದ ಬದುಕಿನ ಧಾವಂತಕ್ಕೊಂದು ಗತಿ ದೊರಕಿತು. ಸಣ್ಣ ಪ್ರಯೋಗಾಲಯಗಳು ಕ್ಲಿನಿಕ್ಕಿನ ಅಲಂಕಾರಕ್ಕೆ ದೊರಕಿದವು. ಎಲ್ಲೋ ಆನಂದವೆ. ಯಾಕೆಂದರೆ ಕುಟುಂಬ ವೈದ್ಯನಿಗೀಗ ಅಸ್ತ್ರಗಳ ಸಹಕಾರ ದೊರಕಿತ್ತು. ಆಗ ಒಂದಿಷ್ಟು ಸುಧಾರಣೆಯ ಗಾಳಿ ಬೀಸಿದರೂ ಕೂಡ, “ಆಪದಾºಂಧವ’ ಕಳೆದು ಹೋಗಿರಲಿಲ್ಲ. ಏನೇ ರೋಗವಿದ್ದರೂ ಜನರು ಈ ವೈದ್ಯನಲ್ಲಿಗೇ ಹೋಗುತ್ತಿದ್ದರು. ಇಡೀ ಊರಿನ ಎಲ್ಲರನ್ನೂ ವೈಯಕ್ತಿಕವಾಗಿ ಬಲ್ಲ ಆತ ಎಲ್ಲರ ಕುಟುಂಬದವನೇ ಆಗಿದ್ದ. ವೈದ್ಯ ಮತ್ತು ರೋಗಿ ಪರಸ್ಪರ ಅವಲಂಬಿತರಾಗಿದ್ದರು. ನಿಧಾನವಾಗಿ ಬೇರೆ ಬೇರೆ ವಿಷಯಗಳ ತಜ್ಞರು ಲಭ್ಯವಾಗತೊಡಗಿದ್ದರೂ, ಯಾವ ತಜ್ಞರ ಕಡೆಗೆ ಹೋಗಬೇಕೆಂಬುದನ್ನು ನಿರ್ಧರಿಸುವವನು ಮಾತ್ರ ಕುಟುಂಬ ವೈದ್ಯನೇ. ಕುಟುಂಬ ವೈದ್ಯನ ಮೇಲೆ ಜನರ ನಂಬಿಕೆ ಹೇಗಿತ್ತೆಂದರೆ ಅವನು ಹೇಳುವವರೆಗೆ ಅವನನ್ನು ಬಿಟ್ಟು ಕದಲುತ್ತಿರಲಿಲ್ಲ. ಅವನು ಊರಲ್ಲಿಲ್ಲದಿದ್ದರೆ ಅವನು ಬರುವವರೆಗೂ ಕಾಯುತ್ತಿದ್ದರು!
ಸ್ಪೆಷಲಿಸ್ಟ್ ಗಳ ಭರಾಟೆ
ಕಾಲ ಮತ್ತೂಂದು ಮಗ್ಗಲು ತೀವ್ರವಾಗಿ ತಿರುಗಿಬಿಟ್ಟಿತು. ವೈದ್ಯಕೀಯ ವಿಜ್ಞಾನ ಊಹಿಸಲಸಾಧ್ಯವಾದಷ್ಟು ತ್ವರಿತವಾಗಿ ಬೆಳೆದುಬಿಟ್ಟಿತು. ಆದರೆ, ಮನುಷ್ಯರಿಗೆ ಸಕಲ ಸವಲತ್ತು, ಸೌಖ್ಯ, ಆರೋಗ್ಯವನ್ನು ಒದಗಿಸಿದ ಈ ಬೆಳವಣಿಗೆಗಳು ಮನುಷ್ಯ, ಮನುಷ್ಯನನ್ನೇ ಕಳೆದುಕೊಳ್ಳುವಂತೆ ಮಾಡಿದ್ದು ಮಾತ್ರ ಕ್ರೂರ ವಿಪರ್ಯಾಸ. ಜನರಲ್ ಸರ್ಜನ್, ಜನರಲ್ ಫಿಜಿಷಿಯನ್ ಇತ್ಯಾದಿ “ಜನರಲ್’ಗಳೆಲ್ಲ ಸ್ಪೆಶಲ್ ಹಾಗೂ ಸೂಪರ್ ಸ್ಪೆಶಲ್‌ಗಳ ಭರಾಟೆಯಲ್ಲಿ ಮಸುಕಾಗ ತೊಡಗಿದರು. ಒಂದೊಂದು ಅಂಗಕ್ಕೂ ಒಬ್ಬೊಬ್ಬ ವೈದ್ಯ ತಯಾರಾದ. ಅಂಥ ವೈದ್ಯರಿಗೆ “ಸಹಕಾರ’ ನೀಡಲು ಕೋಟ್ಯಂತರ ದುಡ್ಡು ಚೆಲ್ಲಿ ಅಮೋಘವಾದ ಆಸ್ಪತ್ರೆಗಳನ್ನು ಕಟ್ಟಿ ವಿಜೃಂಭಿಸುವ ಕಾರ್ಪೊ ರೇಟ್‌ಗಳು ಜೊತೆಯಾದರು. ಶರೀರವನ್ನು ಅಂಗಗಳಲ್ಲಿ ವಿಭಜಿಸಿ ರೋಗಿಯನ್ನು ಒಬ್ಬ “ಇಡಿಯಾದ ಮನುಷ್ಯ’ನನ್ನಾಗಿ ಕಾಣುವ ಕಾಲ ಕಣ್ಮರೆಯಾಯಿತು. ರೋಗಿಗಳನ್ನು ಆರೈಕೆ ಮಾಡುವುದು ಹೋಗಿ ಅಲ್ಟ್ರಾಸೌಂಡ್ ರಿಪೋರ್ಟ್, ಪ್ರಯೋಗಾಲಯ ರಿಪೋರ್ಟನ್ನು “ಟ್ರೀಟ್’ ಮಾಡುವ “ಟ್ರೆಂಡ್’ ಶುರುವಾಯಿತು. ಈಗ ಮತ್ತೆ ಅದರಲ್ಲಿ ವಿಭಜನೆಗಳು, ವಿಘಟನೆಗಳು.
ಕಾಲ ಬದಲಾಯಿತು…
ಒಂದು ಕಾಲದಲ್ಲಿ ವೈದ್ಯಕೀಯ ವೃತ್ತಿಯೆಂದರೆ ಜನಸೇವೆ ಮಾಡುವುದು ಮಾತ್ರ ಆಗಿತ್ತು. ಆದರೆ, ಈ ದಿನಗಳಲ್ಲಿ ಅದು ಕನಸಿನ ಮಾತೇ ಸರಿ. ಯಾವ ದಿನ ಮೊದಲ ವೈದ್ಯಕೀಯ ಸೀಟು ಖಾಸಗಿಯಾಗಿ ಮಾರಾಟಗೊಂಡಿತೋ, ಅಂದೇ ವೈದ್ಯಕೀಯ ವೃತ್ತಿ ವಾಣಿಜ್ಯೀಕರಣಗೊಂಡಿತು. ಯಾವಾಗ ಆಸ್ಪತ್ರೆಯನ್ನು ಕಟ್ಟಿಸುವುದು, ಅವಶ್ಯಕವಾದ ಉಪಕರಣಗಳನ್ನು, ಪರಿಕರಗಳನ್ನು, ಸಿಬ್ಬಂದಿಯನ್ನು ಹೊಂದುವುದು ಮತ್ತು ನಿಭಾಯಿಸುವುದು ವೆಚ್ಚದಾಯಕವಾಯಿತೋ, ಯಾವಾಗ ವೈದ್ಯಕೀಯವೂ ಕೂಡ ಗ್ರಾಹಕ ರಕ್ಷಣಾ ಕಾನೂನಿನ ಅಡಿಯಲ್ಲಿ ಪರಿಗಣಿತವಾಯಿತೋ, ಆಗಲೇ ವೈದ್ಯಕೀಯವೂ ವ್ಯಾಪಾರವಾಗಿ ಬಿಟ್ಟಿತು. ಆಸ್ಪತ್ರೆ ಅಂಗಡಿಯಾಯಿತು, ರೋಗಿ ಗಿರಾಕಿಯಾಗಿಬಿಟ್ಟ! ದುರದೃಷ್ಟಕರ, ಅಷ್ಟೇ.
ಇವತ್ತಿಗೂ ಕೂಡ ಶೇ. 90-95 ರೋಗಗಳನ್ನು ಗುಣಪಡಿಸಲು ಸಾಮಾನ್ಯ ಪರೀಕ್ಷೆಗಳು, ಪ್ರಾಮಾಣಿಕ, ಮಾನವೀಯ, ರೋಗಿಯ ಮಾನಸಿಕ ವ್ಯಥೆಯನ್ನು ತಗ್ಗಿಸಬಲ್ಲ, ಸಾಂತ್ವನ ನೀಡಬಲ್ಲ ಒಬ್ಬ ಕುಟುಂಬ ವೈದ್ಯ ಸಾಕು. ವಿಚಿತ್ರ ಎಂದರೆ ಈಗ “ಕುಟುಂಬ ವೈದ್ಯ’ ಎಂಬ ಬಿರುದಿಗೆ ಪಾತ್ರರಾಗಲು ಇಷ್ಟ ಪಡುವ ವೈದ್ಯರೂ ಇಲ್ಲ, ಅಂತಹ ವೈದ್ಯರನ್ನು ಬಯಸುವ ರೋಗಿಗಳೂ ಇಲ್ಲ. ಹೀಗಾಗಿ ಈಗ ಆಸ್ಪತ್ರೆಗೆ ಹೋಗುವುದೆಂದರೆ ಹೋಟೆಲ್‌ಗೆ ಹೋದ ಹಾಗೆ, ಅಥವಾ ಮಾಲ್‌ಗಳಿಗೆ ಹೋದ ಹಾಗೆ. ತಮ್ಮಲ್ಲಿ ಇರುವ ದುಡ್ಡು, ಅಂತಸ್ತು, “ಇನ್ಸುರೆನ್ಸ್ ಪ್ಯಾಕೇಜ್’ಗಳಿಗೆ ಅನುಗುಣವಾಗಿ ಆಸ್ಪತ್ರೆಗಳನ್ನು ಆಯ್ದುಕೊಳ್ಳುವುದು “ಫ್ಯಾಶನ್’ ಆಗಿದೆ. ಕೆಲವು ಆಸ್ಪತ್ರೆಗಳೂ ಕೂಡ ಅದೇ ಮಾನದಂಡಗಳನ್ನು ಬಳಸಿ ರೋಗಿಗಳನ್ನು ವಿಂಗಡಣೆ ಮಾಡುವ ಕೆಟ್ಟ ಪರಿಪಾಠ ಪ್ರಾರಂಭ ಮಾಡಿಬಿಟ್ಟಿವೆ. ಜನ “ಆಸ್ಪತ್ರೆಗೆ’ ಹೋಗುತ್ತಿದ್ದಾರೆ. “ವೈದ್ಯರೆಡೆಗೆ’ ಅಲ್ಲ.
ನಂಬಿಕೆ ಮತ್ತು ಭರವಸೆ ಮುಖ್ಯ
ಕೊನೆಯದಾಗಿ ಒಂದು ಮಾತು. ನಿಜವಾಗಿಯೂ ಭಾರತದ ಇಂದಿನ ಪರಿಸ್ಥಿತಿಯಲ್ಲಿ ಅತ್ಯವಶ್ಯವಾಗಿ ಬೇಕಾದುದು, ರೋಗಿ ಹಾಗೂ ವೈದ್ಯರ ನಡುವಿನ ನಂಬಿಕೆ ಹಾಗೂ ಭರವಸೆ. ಇದ್ದ ಪರಿಕರಗಳನ್ನು ಸರಿಯಾಗಿ, ಕರಾರುವಾಕ್ಕಾಗಿ ಉಪಯೋಗಿಸುವ ವೈದ್ಯರು, ರೋಗಿಗೆ ಸಾಂತ್ವನ ನೀಡುವ ದಾದಿಯರು, ವೈದ್ಯ-ರೋಗಿಯ ಮಧ್ಯೆ ಪ್ರವಹಿಸುವ ಮಾನವೀಯ ಅನುಕಂಪದ ಅಲೆ ಮತ್ತು ಅಪ್ಯಾಯಮಾನವೆನಿಸುವ ಆರೈಕೆ ಮಾತ್ರ. ರೋಗಿಗಳು ವೈದ್ಯರನ್ನು ನಂಬದೆ ಅವರ ಮೇಲೆ ವೃಥಾ ಆರೋಪ ಹೊರಿಸುವುದೂ, ಅವರ ಮೇಲೆ ಹಲ್ಲೆ ಮಾಡುವುದೂ ಅಲ್ಲ, ಹಾಗೆಯೇ ವೈದ್ಯರೂ ಹತ್ತು ರೂಪಾಯಿಗೆ ಆರಾಮವಾಗುವ ರೋಗಕ್ಕೆ ಸಾವಿರ ರೂಪಾಯಿಯ ತಪಾಸಣೆ ಮಾಡಿಸಿ, ಹತ್ತು ಸಾವಿರದ ಶುಲ್ಕ ವಿಧಿಸುವುದೂ ಅಲ್ಲ…! ಕುಟುಂಬ ವೈದ್ಯರ ಸಂತತಿ ಮತ್ತೆ ಬೆಳೆಯಲಿ.
-ಡಾ|| ಶಿವಾನಂದ ಕುಬಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.