Coffee Love: ಅಪ್ಪನ ಕಾಫಿ ಪ್ರೀತಿ, ಪ್ರತಾಪಗಳು
Team Udayavani, Oct 8, 2023, 1:45 PM IST
ಸಂಸಾರ ಸಾಗರದ ಏರಿಳಿತದಲ್ಲಿ ಅಮ್ಮ ಕಾಲನ ಕರೆಗೆ ಓಗೊಟ್ಟರು. ನಾವು ಮಕ್ಕಳು ಮಂಕಾಗಿಬಿಟ್ಟಿದ್ದೆವು. ದುಃಖ ವಿಚಾರಿಸಿ ಸಾಂತ್ವನ ಹೇಳಲು ಬಂದು ಹೋಗುವ ನೆಂಟರಿಷ್ಟರು. ಅಪ್ಪ ಸ್ಥಿತ ಪ್ರಜ್ಞರು. “ಅವಳಿದ್ದಾಗ ಚೆನ್ನಾಗಿ.ನೋಡಿಕೊಂಡವಿ. ಈಗ ಅತ್ತರೆ ಬರತಾಳಾ? ನೋವಿಂದ ಅವಳಿಗೆ ಮುಕ್ತಿ ದೊರಕಿತು…’ ಕ್ಯಾನ್ಸರ್‌ಗೆ ತುತ್ತಾಗಿದ್ದ ಅಮ್ಮನ ಬಗ್ಗೆ ಅಪ್ಪನ ನುಡಿನಮನ ಇದು.
ಒಮ್ಮೆ ಅಮ್ಮನ ಚಿಕ್ಕಪ್ಪ ಚಾಮರಾಜನಗರದಿಂದ ಬಂದು, ನಮ್ಮಮನೆಯ ಹತ್ತಿರವೇ ಇದ್ದ ಅಜ್ಜಿಮನೆಯಲ್ಲಿ ಉಳಿದುಕೊಂಡಿದ್ದರು. ಆ ತುಂಬು ಕುಟುಂಬಕ್ಕೆ ಒಂದು ಲೆಕ್ಕಕ್ಕೆ ಅಪ್ಪ ಇಡೀ ಸಂಸಾರಕ್ಕೆ ಹಿರಿಯ ಅಳಿಯ. ಅಮ್ಮ ಇದ್ದಾಗ ಮಗಳ ಮನೆಯೆಂಬ ಮಮಕಾರದಿಂದ ಬಂದು ಹೋಗುತ್ತಿದ್ದಂತೆ. ಆ ಸಂಪ್ರದಾಯ ತಪ್ಪಿಸಬಾರದೆಂದು ಆ ಬಾರಿಯೂ ಬಂದರು. ಊರಿಗೆ ಹೊರಡುವ ತರಾತುರಿಯ ಮಧ್ಯೆಯೂ ಅಮ್ಮನ ಗುಣಗಾನ ಮಾಡುತ್ತ ಹೇಳಿದರು: “ಅಳಿಯಂದ್ರೆ, ನಮಗೆಲ್ಲ ಎಂಥಾ ದೊಡ್ಡ ನಷ್ಟ. ದೇವರು ನಿಮಗೆ ಈ ದು:ಖ ತಡಕೊಳ್ಳೋ ಶಕ್ತಿ ಕೊಡಲಿ. ಊರ ಕಡೆ ಮಕ್ಕಳನ್ನು ಕರೆದುಕೊಂಡು ಬನ್ನಿ’
ಹಿಂದೆಯೇ ಬಂತು ಅಪ್ಪನ ಬಿನ್ನಹ: “ಮಾವನವರೇ, ಸ್ವಲ್ಪ ಕಾಫಿ…’
“ಈಗ ತಾನೆ ಅಯಿತು’ ಅಂದ ಅವರಿಗೆ, ಅಪ್ಪನಿಂದ ಮೇಲಿಂದ ಮೇಲೆ ಒತ್ತಾಯ.
ಮಗಳಿಲ್ಲ. ಆ ಕಾರಣಕ್ಕೆ ಕಾಫಿ ಸ್ವೀಕರಿಸುತ್ತಿಲ್ಲ ಎಂದುಕೊಂಡಾರೆಂದು ಚಿಕ್ಕಪ್ಪ ಕಡೆಗೆ ಒಪ್ಪಿಕೊಂಡರು.
ಅಡುಗೆಮನೆಯಲ್ಲಿ ಫಿಲ್ಟರ್ ತೆರೆದು ನೋಡಿದರೆ ಒಬ್ಬರಿಗಾಗುವಷ್ಟು ಡಿಕಾಕ್ಷನ್ ಮಾತ್ರ ಇತ್ತು. ಹಾಲಿನಲ್ಲಿ ಕೂತು ಆದೇಶ ನೀಡಿದ ಅಪ್ಪನಿಗೆ ಈ ಸೂಕ್ಷ್ಮ ತಿಳಿಯಪಡಿಸಲು, ಅಪ್ಪನಿಗೆ ಮಾತ್ರ ಕಾಣುವಂತೆ ಅಡುಗೆ ಕೋಣೆಯ ಬಾಗಿಲಿಂದ ಓರೆಯಾಗಿ ನಿಂತು ಸನ್ನೆ ಮಾಡಿದೆ. ಮೂಕ ಭಾಷೆಯ ಆ ಸಂದೇಶವನ್ನು ಹೀಗೆ ಓದಿಕೊಳ್ಳಬಹುದು: “ಮೊದಲು ಚಿಕ್ಕಪ್ಪನಿಗೆ ಕಾಫಿ ಕೊಟ್ಟು ಕಳಿಸೋಣ. ನಿಮಗೆ ಆಮೇಲೆ ಮಾಡಿಕೊಡ್ತೀನಿ. ಈಗ ಒಬ್ಬರಿಗೆ ಮಾತ್ರ ಡಿಕಾಕ್ಷನ್ ಸಾಕಾಗತ್ತೆ…’
ಅಪ್ಪ ಅಲ್ಲೇ ಅವರೆದುರೇ ಕೂಗಿದರು: “ಕೈ ಬಾಯಿ ತಿರುಗಿಸಿ ಅದೇನು ಹೇಳ್ತೀಯೋ ನಂಗೆ ಅರ್ತವಾಗೋಲ್ಲ. ಇಲ್ಲೇ ಬಂದು ಹೇಳು…’
ಬಂದ ಸಿಟ್ಟು ನುಂಗಿ, ಅಮ್ಮನ ಚಿಕ್ಕಪ್ಪನಿಗೆ ಕಾಫಿ ತಂದಿತ್ತೆ.
ಅವರು- “ಅಳಿಯಂದಿರಿಗೆ…’ ಎಂದರು.
“ಇಲ್ಲ, ಅವರು ಇಷ್ಟು ಹೊತ್ತಲ್ಲಿ ಕಾಫಿ ಕುಡಿಯೋಲ್ಲ. ಅವರಿಗೆ ನಿದ್ರೆ ಬರೋಲ್ಲ. ಹಸಿವು ಆಗೋಲ್ಲ’ -ಎಂದು ನಾನುತ್ತರಿಸಿದೆ.
ಅಪ್ಪ ಕೂಡಲೇ- “ಹಾಗೇನಿಲ್ಲ, ನನಗೆ ಯಾವಾಗ ಕಾಫಿ ಕುಡಿದರೂ ಏನೂ ವ್ಯತ್ಯಾಸ ಅಗೋಲ್ಲ’ ಎನ್ನುತ್ತ ನನ್ನ ಮರ್ಯಾದೆ ಹರಾಜಿಗೆ ಹಾಕಿದರು.
ಆ ಚಿಕ್ಕಪ್ಪ ನಿರ್ಗಮಿಸಿದ ತಕ್ಷಣ ಅಪ್ಪನನ್ನು ತರಾಟೆಗೆ ತೆಗೆದುಕೊಂಡೆ. “ಹೆಂಡತಿ ಸತ್ತ ಮೇಲೆ ಪಾಪ ಅಳಿಯನಿಗೆ ಒಂದು ತೊಟ್ಟು ಕಾಫಿಗೂ ಪರಾಧೀನ ಅಂತಾ ಅವರು ಆಡಿಕೊಳ್ಳಲ್ವಾ? ಇಡೀ ಚಾಮರಾಜನಗರ, ಮೈಸೂರಿನ ಬಳಗಕ್ಕೆಲ್ಲ ಈ ವಿಷಯ ಹಬ್ಬಲ್ವಾ? ಮಕ್ಕಳಾದ ನಮ್ಮ ಬಗ್ಗೆ ಏನಂದುಕೋತಾರೆ? ಸನ್ನೆ ಭಾಷೆ ಅರ್ಥ ಆಗದಿದ್ದರೆ ಇಲ್ಲೇ ಬಂದು ಹೇಳು ಅಂತಾ ಯಾಕೆ ಅನ್ನಬೇಕಿತ್ತು? ಅವರ ಮುಂದೆ ಬಂದು ಒಬ್ಬರಿಗೆ ಮಾತ್ರ ಆಗೋಷ್ಟು ಕಾಫಿ ಅಗತ್ತೆ ಅಂತಾ ಹೇಳ್ಳೋಕೆ ಸಾಧ್ಯಾನಾ?’- ಹೀಗೆ ನನ್ನ ಕೋಪದ ಕಿಡಿ ಮಾತಾಗಿ, ಮತಾಪಾಗಿ ಚಟಪಟ ಸಿಡಿಯುತ್ತ ಸುರುಸುರು ಬಾಣವಾದಾಗ ಅಪ್ಪ ಅಪರಾಧಿಯಂತೆ ಮೌನಕ್ಕೆ ಶರಣಾಗಿದ್ದರು.
ಒಂದು ಕಾಲಕ್ಕೆ ಅಮ್ಮ, ಮನೆಮುಂದೆ ಎಮ್ಮೆಹಾಲು ಕರೆಸಿ ಮಾಡಿಕೊಡುತ್ತಿದ್ದ ನೊರೆ ನೊರೆ ಕಾಫಿಯ ರುಚಿ, ತಾಜಾತನವನ್ನು ಅಪ್ಪ ಜೀವನದುದ್ದಕ್ಕೂ ನೆನಪು ಮಾಡಿಕೊಳ್ಳುತ್ತಿದ್ದರು. ಅಮ್ಮ ಬೆರೆಸುತ್ತಿದ್ದ ಅನುರಾಗ ಆ ನೆನಪಲ್ಲಿ ಇಣುಕುತ್ತಿತ್ತು.
ಅಪ್ಪನ ಮರಣಶಾಸನ ಏನು ಗೊತ್ತೇ?
“ನನ್ನ ತಿಥಿ, ಕರ್ಮಾಂತ ಹೆಚ್ಚು ಹೂಡಿಕೋಬೇಡಿ. ಆ ದಿನ ತೆಂಗಿನಮರಗಳಿಗೆ ನೀರು ಹಾಕಿ. ಬಂದವರಿಗೆ ಒಳ್ಳೇ ಕಾಫಿ ಮಾಡಿಕೊಡಿ. ಸೈಗಾಲ್ ಹಾಡುಗಳ ಕ್ಯಾಸೆಟ್ ದಾನ ಮಾಡಿ…’
-ಸಾಯಿಲಕ್ಷ್ಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.