ನೆರೆ
Team Udayavani, Aug 18, 2019, 5:05 AM IST
ಮಲಗಿದ ಮಂಚದ ಮೇಲಿನಿಂದ ಕೆಳಗೆ ಎಳೆದು ಹಾಕಿದಂತಾಗಿ ಕೂಸಜ್ಜಿ ಎದ್ದು ಕುಳಿತಳು. ಕವಿದ ಕತ್ತಲಲ್ಲಿ ಮಗ ಅಸ್ಪಷ್ಟವಾಗಿ ಕಂಡುಬಂದು ತನ್ನ ಕಿವಿಗೆ ಬಾಯಿ ಇಟ್ಟವನಂತೆ ಬಗ್ಗಿ ಆತ ಕೂಗುತ್ತಲಿದ್ದ.
“”ಅಮ್ಮ, ಓ ಅಮ್ಮ, ಎದ್ದೇಳು ಕಾಂಬ”
“”ಏನಾತು ಮಗ, ಹಾಂಗೆ ಯಾಕೋ ಕೂಗ್ತಿರೋದು”
“”ನೆರೆ ಬರೋ ಸಂಭವ ಇದೆ ಅಂಬ್ರು… ನಾವೀಗ ಇಲ್ಲಿಂದ ಮ್ಯಾಲೆ ಹೋಗದಿದ್ರೆ ಮುಳುಗಡೆ ಆಗೋದೇ”
“”ಸೈ… ಮೊದಲು ಏಳು ಕಾಂಬ”
“”ಮುಳುಗಡೆ ಎಲ್ಲ ಆತಲ್ಲ ಮಗಾ……ಮತ್ತೆಂಥ ಮುಳುಗಡೆ?”
“”ಇದು ಕತೆ ಹೇಳ್ಳೋ ಸಂದರ್ಭ ಅÇÉೆ… ಮೊದಲು ಮಂಚ ಇಳಿ ಕಾಂಬ”
ಸೊಸೆ ಗಡಿಬಿಡಿಯಲ್ಲಿ ಓಡಾಡುತ್ತಿದ್ದಳು. ಹುಡುಗರಲ್ಲಿ ದೊಡ್ಡವ ಅರೆ ನಿ¨ªೆಯಲ್ಲಿ ಬಾಗಿಲ ಬಳಿ ನಿಂತಿದ್ದ.
ಎರಡನೆಯವ ಕೋಣೆಯ ಬಾಗಿಲಲ್ಲಿ ತೂಕಡಿಸುತ್ತ ಕುಳಿತಿದ್ದ. ಇದೆಲ್ಲ ನೋಡಿದ ಮೇಲೆ ಕೂಸಜ್ಜಿಗೆ ತಾನು ಮಂಚದ ಮೇಲೆ ಕೂತಿರುವುದು ಸರಿ ಅಲ್ಲ ಅನಿಸಿ ಆಕೆ ಕಂಬಳಿ ಅತ್ತ ನೂಕಿ ಎದ್ದಳು. ಹೊರಗೆ ಮೊನ್ನೆ ಸುರಿಯಲು ಪ್ರಾರಂಭವಾದ ಮಳೆ ನಿಂತಿರಲಿಲ್ಲ. ದೂರದ ಡೇಮಿನಿಂದ ಹೊರಗೆ ಧುಮುಕುತ್ತಿದ್ದ ನೀರಿನ ಸದ್ದು ಮತ್ತೂ ಹೆಚ್ಚಾಗಿ ಕಿವಿಗೆ ಬೀಳುತ್ತಲಿತ್ತು. ಈ ಸದ್ದು ಸಾಲದೆಂದು ಮನೆ ಹಿಂದಿನ ಮುಂದಿನ ಹತ್ತಿರದ ಹಳ್ಳ ಝರಿಗಳೆಲ್ಲ ತುಂಬಿ ನೀರು ನುಗ್ಗುತ್ತಲಿತ್ತು. ಈಗ ನಾಲ್ಕು ಐದು ದಿನಗಳಿಂದ ಆಶ್ಲೇಷ ಯಾವಾಗ ಹಿಡಿಯಿತೋ ಅಲ್ಲಿಂದ ನೀರು ಹೀಗೆಯೇ ಸಿಕ್ಕÇÉೆಲ್ಲ ನುಗ್ಗಿ ಸದ್ದು ಮಾಡುತ್ತಲೇ ಇತ್ತು. ದನಕರು ಕೊಟ್ಟಿಗೆ ಬಾಗಿಲಲ್ಲಿ ನಿಂತು ಕತ್ತು ಉದ್ದ ಮಾಡಿ ಹೊರಗೆ ನೋಡಿ ನೋಡಿ ದಣಿದಿದ್ದವು.
“”ದೇವರೇ ಈ ಮಳೆ ಅದು ಯಾರನ್ನ ಒಯ್ಯಲಿಕ್ಕೆ ಹೀಗೆ ಸುರೀತಿದೆಯೋ” ಎಂದು ಸೊಸೆ ದಿನದಲ್ಲಿ ಹಲವು ಬಾರಿ ಬಚ್ಚಲೊಲೆಯಲ್ಲಿ ಹಾಕಿದ ಕರಟದ ಹಾಗೆ ಫುರಗುಡುತ್ತಲೇ ಇದ್ದಳು.
ಅವಳ ಬಾಯಿಂದ ಇಂಥ ಮಾತು ಹೊರ ಬಂದಾಗಲೆಲ್ಲ ಕೂಸಜ್ಜಿ ಒಳಗೇನೆ ತಣ್ಣಗೆ ಕಂಪಿಸುತ್ತಿದ್ದಳು.
ಇತ್ತೀಚಿನ ವರ್ಷಗಳಲ್ಲಿ ಅವಳು ಬಹಳಷ್ಟನ್ನು ಕಳೆದುಕೊಂಡಿದ್ದಳು. ಡ್ಯಾಮಿನ ಕೆಳ ಭಾಗದಲ್ಲಿದ್ದ ಅಡಕೆ ತೋಟ, ಒಂದು ಎಕರೆ ಭತ್ತದ ಗ¨ªೆ, ಕೊಟ್ಟಿಗೆಯಲ್ಲಿದ್ದ ಏಳೆಂಟು ಗಂಟಿಗಳು, ಅರಮನೆಯಂಥ ಎರಡು ಅಂಕಣದ ಮನೆ, ಎಲ್ಲಕ್ಕಿಂತ ಮಿಗಿಲಾಗಿ ಕುಟುಂಬಕ್ಕಾಗಿ ದುಡಿಯುತ್ತ ಬಂದ ಈ ಮನೆಯ ಆಧಾರಸ್ತಂಭ ತನ್ನ ಗಂಡ, ಮತ್ತೂ ಮುಖ್ಯವಾಗಿ ತಾಯಿಮನೆಯಿಂದ ಮದುವೆಯಾಗಿ ಬಂದು ಸೇರಿಕೊಂಡ ಬಂಗಾರದಂಥ ಈ ಪ್ರದೇಶ. ಇದೆಲ್ಲವನ್ನ ಅವಳು ಕಳೆದುಕೊಂಡಿದ್ದಳು. ಇನ್ನು ಕಳೆದುಕೊಳ್ಳುವುದು ಏನೂ ಇರಲಿಕ್ಕಿಲ್ಲ ಎಂಬುದು ಅವಳು ತನ್ನ ಮನಸ್ಸಿಗೆ ತಾನೇ ಹೇಳಿಕೊಂಡ ಸಮಾಧಾನವಾಗಿತ್ತು ಕೂಡ.
ಇದಕ್ಕಾಗಿಯೆ ಸೊಸೆ ಅಂಥ ಮಾತನ್ನು ಹೇಳಿದಾಗೆ ಕೂಸಜ್ಜಿ, “”ಹುಡುಗಿ ಹಂಗೆಲ್ಲ ಹೇಳಬ್ಯಾಡ” ಎಂದು ಹೇಳಬೇಕೆಂದು ಬಯಸಿದರೂ ಎಲ್ಲಿ ಸೊಸೆಯ ಮನಸ್ಸಿಗೆ ಬೇಸರವಾಗುತ್ತದೊ ಎಂದು ಸುಮ್ಮನಿರುತ್ತಿದ್ದಳು.
ಅಲ್ಲದೆ, ಈಗ ಐದಾರು ದಿನಗಳಿಂದ ಸುರಿಯುತ್ತಿದ್ದ ಮಳೆ ಅಂಥ ಒಂದು ಭೀತಿಯನ್ನು ಅವಳ ಮನಸ್ಸಿನಲ್ಲಿ ಹುಟ್ಟಿಸಿತ್ತು ಅನ್ನುವುದು ನಿಜವೇ.
ಬಿರುಸಾಗಿ ಬೀಳುತ್ತಿದ್ದ ಮಳೆಗೆ ಕಾಡು ತನ್ನ ಮೈ ಒಡ್ಡಿ ನಿಂತಿತ್ತು. ಮರಗಳು, ಗಿಡ, ಪೊದೆ, ಬಳ್ಳಿ, ಬೀಸುವ ಗಾಳಿಗೆ ಹಾಗೊಮ್ಮೆ ಹೀಗೊಮ್ಮೆ ಬಾಗಿ ಬಳುಕಿ ಮೇಲಿನಿಂದ ರಭಸದಿಂದ ಹೊಡೆಯುವ ಮಳೆಯ ಅಪ್ಪಳಿಸುವಿಕೆಗೆ ನೆಲದತ್ತ ವಾಲಿ ನೆಟ್ಟಗೆ ನಿಲ್ಲುವ ಯತ್ನ ಮಾಡಿ ಮೈಮೇಲೆ ಸುರಿಯುತ್ತಿರುವ ಮಳೆಯ ನೀರನ್ನು ತೊಡೆದುಕೊಂಡು ಸೆಟೆದು ನಿಲ್ಲಲಾಗದೆ ಪಾಡು ಪಡುತ್ತಿರಲು ಕಳಗೆ ದಂಡಿಯಾಗಿ ಹರಿಯುವ ನೀರು ಅವುಗಳ ಬೇರನ್ನು ಸಡಿಲಗೊಳಿಸಿದ ಹಾಗೆ ಅವು ನೆಲಕ್ಕೆ ರಾಚಿ ಮತ್ತೆ ನಿಲ್ಲುವ ಯತ್ನ ಮಾಡುತ್ತಿದ್ದವು. ಕಾಡು “ಹೋ’ ಎಂದು ಬೊಬ್ಬಿಡುತ್ತಲಿತ್ತು. ಇದೆಲ್ಲವನ್ನು ಕಲ್ಪಿಸಿಕೊಳ್ಳುತ್ತ ಕೂಸಜ್ಜಿ, “”ಮಗಾ, ಈಗ ಎಂತಾ ಮಾಡೋದೋ” ಎಂದು ಕೇಳುತ್ತಿರಲು ಸೊಸೆ ಒಳಗಿನಿಂದ ಹೊರಬಂದು, “”ಅತ್ತೆ, ನಾವೀಗ ಮನೆ ಖಾಲಿ ಮಾಡೋದೇ ಸೈ. ನೀವು ಒಂದು ಕಂಬಳಿ ಕೊಪ್ಪೆ ಸೂಡಿ ಕೊಂಡು ತಮ್ಮನ್ನ ಕರ ಕೊಳ್ಳಿ, ಮನೆ ಬಿಟ್ಟು ಹೋಗೋ ಟೇಮು.
ಸುಮ್ನೆ ನಿಂತ್ರೆ ಆಗೋಲ್ಲ, ನೀರು ನಮ್ಮನ್ನ ಮುಳುಗಿಸೋದಕ್ಕಿಂತ ಮುಂಚೆ ನಾವು ಇಲ್ಲಿಂದ ಹೋಗಬೇಕು”
“”ಎಂತಾ ಮಾತು ಅಂತ ಆಡ್ತಿಯಾ ಭಾಗೀರತಿ… ನಾವು ಗಡಿಗ¨ªೆ ಬಿಟ್ಟು ಬಂದದ್ದು ಈಗ ಹತ್ತು ವರ್ಷದ ಹಿಂದೆ ಅಲ್ವೇನೆ… ಅಷ್ಟ್ರಾಗೆ ಮತ್ತೂಂದು ಮುಳುಗಡೆಯಾ?’ ’
ಮಾತನಾಡುತ್ತ ಗಂಟಲಲ್ಲಿ ಗಾಳಿ ಗುಳ್ಳೆ ಬಂದು ನಿಂತು ಮತ್ತೆ ಮಾತನಾಡಲಿಕ್ಕೆ ಆಗೋಲ್ಲ ಎಂಬಂತೆ ಆಕೆ ಬಿಕ್ಕಿದಾಗ ಮಗ, “”ಈಗ ಅದೆಲ್ಲ ಆಡಲಿಕ್ಕೆ ಆಗ… ಮೇಲೆ ಭಾರೀ ಮಳೆ ಬೀಳ್ತಿದೆ ಅಂತ ಸಮಾಚಾರ ಬಂದದೆ”
“”ಡೇಮಿನ ನೀರು ಕ್ಷಣಕ್ಷಣಕ್ಕೆ ಏರಿ¤ದೆ. ಯಾವಾಗ ಬೇಕಾದ್ರೂ ನೀರು ಮತ್ತೂ ಏರಬಹುದು. ಅಣೆಕಟ್ಟಿನ ಗೇಟನ್ನು ಎತ್ತಿ 10,000 ಕ್ಯೂಸೆ ಕ್ಸ್Õ ನೀರನ್ನು ಬಿಡಿ ಅಂತ ಆದೇಶ ಬಂದದಂತೆ… 10,000 ಕ್ಯೂಸೆಕ್ಸ್ ಅಂದ್ರೆ… ಕಾಳಮಂಜಿ, ಅರಲಗೋಡು, ಮುಪ್ಪಾನೆ, ಕೊರಲಗುಂಡಿ, ಭೀಮನೇರಿ, ಗಡಿಗ¨ªೆ, ಕೆಮ್ಮಣ್ಣಗಾರು ಎಲ್ಲ ಕಡೆ ನೀರು ನುಗ್ಗುತ್ತೆ. ನಮ್ಮ ಮನೆ ಮುಳುಗುತ್ತೆ”
“”ಅಲ್ದಾ… ಗಡಿಗ¨ªೆ ಮುಳುಗಿಸಿ ಇಲ್ಲಿ ನಮಗೆ ಮನೆ ತೋಟಕ್ಕೆ ಜಾಗ ಕೊಟ್ಟದಲ್ದಾ… ಈಗ ಮತ್ತೂ ಮುಳುಗಡೆ ಅಂದ್ರೆ ಏನು? ಆ ಇಂಜಿನಿಯರ್‌ಗಳು ಸರಿಯಾಗಿ ಲೆಕ್ಕ ಹಾಕಲಿಲ್ವ ಹಾಗಾದ್ರೆ?”
“”ಅದನ್ನೆಲ್ಲ ಕೇಳಲಿಕ್ಕೆ ನಾವು ಯಾರು? ಆವತ್ತು ಈ ಜಾಗ ಬಿಟ್ಟು ಹೊರಡ್ರಿ ಅಂದ್ರು. ಹೊರಟ್ವಿ. ಈಗ ಮತ್ತೆ ಹೊರಡಿ ಅಂತಿದಾರೆ, ಹೊರಡಬೇಕು” ಅಂದ ಮಗ.
ಕೂಸಜ್ಜಿ ಬಾಯಿ ಹಾಕಿದಳು. “”ಅಯ್ಯೋ ದೇವರೇ, ಎಂಥ ಗತಿ ನಮುª… ನಾವು ಬೆಕ್ಕಿನ ಬಿಡಾರದಂಗೆ ಅಲ್ಲಿಂದ ಇಲ್ಲಿಗೆ… ಇಲ್ಲಿಂದ”
“”ಅಲ್ಲಿಗೆ ತಿರುಗಾಡೋದೇ ಆತಲ್ಲ…”
ಕೂಸಜ್ಜಿ ಕಣ್ಣೋರೆಸಿಕೊಂಡಳು.
ಹೊರಗಿನ ಕತ್ತಲೆ, ನೀರಿನ ಸದ್ದು, ಮಧ್ಯರಾತ್ರಿಯ ಸಮಯ, ಮೊಮ್ಮಕ್ಕಳು, ಸೊಸೆ, ಮಗ ಕಂಗಾಲಾಗಿ ನಿಂತಿರುವ ಈ ಸಂದರ್ಭ ಅವಳನ್ನು ದಿಕ್ಕೆಡಿಸಿರಲು ಹಿಂದಿನದೆಲ್ಲ ಅವಳ ನೆನಪಿಗೆ ಬಂದಿತು.
ನಾಡಿನಲ್ಲಿ ತಯಾರಿಸುತ್ತಿರುವ ವಿದ್ಯುತ್ ಸಾಲದು ಅನ್ನುವ ಸಮಸ್ಯೆ ಎದುರು ಬಂದಾಗ ಇಲ್ಲಿ ಈ ಅಣೆಕಟ್ಟೆ ಕಟ್ಟಿ ಇಲ್ಲಿ ನೀರನ್ನು ನಿಲ್ಲಿಸಿ ಹೊಸದಾಗಿ ಇಲ್ಲಿ ವಿದ್ಯುತ್ ಶಕ್ತಿಯನ್ನು ತಯಾರಿಸುತ್ತಾರೆ ಎಂದರು. ಈ ಕಾಮಗಾರಿಗಾಗಿ ಸುಮಾರಷ್ಟು ಹಳ್ಳಿಗಳು ಮುಳುಗುತ್ತವೆ. ಅವುಗಳಲ್ಲಿ ತಮ್ಮ ಗಡಿಗ¨ªೆಯೂ ಒಂದು ಅನ್ನುವ ಮಾತು ಕೇಳಿ ಬಂದಿತು. ಗಡಿಗ¨ªೆಯಲ್ಲಿ ತಮ್ಮ ಅಡಿಕೆ ತೋಟ, ಅಂಗೈಅಗಲದ ಗ¨ªೆ, ಕೊಟ್ಟಿಗೆ ಎಲ್ಲ ಇತ್ತು. ಈ ಅಣೆಕಟ್ಟೆಯನ್ನು ಕಟ್ಟುವ ಸಮಯ ಬಂದರೆ ಮೊದಲು ಮುಳುಗುವುದು ಇದೇನೆ ಎಂದರು.
ಕಾಮಗಾರಿ ಪ್ರಾರಂಭವಾದಾಗ ಆಗಿದ್ದು ಕೂಡ ಹಾಗೇನೆ. ಇವರು, “ಜಾನಕೀ ಈ ಪ್ರದೇಶ ತಲೆ ತಲಾಂತರದಿಂದ ನಮಗೆ ವದಗಿ ಬಂದದ್ದು, ಈಗ ನಮಗೆ ಅದೆÇÉೋ ಶಿವಮೊಗ್ಗ, ಕೊಪ್ಪ, ಅಂತೆಲ್ಲ ದೂರ ಜಮೀನು ಕೊಡತಾರಂತೆ ನಾನು ಇÇÉೇ ಹತ್ತಿರ ನೋಡ್ತಾ ಇದೀನಿ’ ಎಂದು ಬಿಡುವಿಲ್ಲದ ಹಾಗೆ ತಿರುಗಾಡಿ ಅವರು-ಇವರನ್ನ ಕಂಡು ಹೇಳಿಸಿ ಮಾಡಿಸಿ ಈ ಜಾಗ ಪಡೆದುಕೊಂಡರು. ಇಲ್ಲಿ ಒಂದು ಮುಜುಬೂತಾದ ಮನೆ, ಒಂದು ಅಡಿಕೆ ತೋಟ, ಒಂದಿಷ್ಟು ಗ¨ªೆ, ಕೊಟ್ಟಿಗೆ ಎಲ್ಲ ಮಾಡಿದರು. ಹಳೆಯದು ಹೋಯಿತು ಎಂಬ ವ್ಯಥೆಯ ಹಿಂದೆಯೇ ಹೊಸದಾಗಿ ಸಿಕ್ಕಿದ್ದು ಚೆನ್ನಾಗಿದೆ, ಉತ್ತಮ ನೆಲ, ಸುತ್ತ ಸುಂದರವಾದ ಪರಿಸರ, ಬಸ್ಸು ಇತ್ಯಾದಿಗಳ ಸೌಲಭ್ಯವಿದೆ ಎಂದು ಇವರೂ ಸಂತಸ ಪಟ್ಟರು. ಮಗನ ಮದುವೆಯೂ ಆಯಿತು.
ಸೊಸೆಯೂ ಮನೆಗೆ ಬಂದಳು. ಮೊಮ್ಮಕ್ಕಳೂ ಆದರು. ಇಲ್ಲಿ ಎದ್ದು ನಿಂತ ಅಣೆಕಟ್ಟು ಮನೆ ಬಾಗಿಲಲ್ಲಿ ಕುಳಿತರೆ ಕಾಣುತ್ತದೆ ಅನ್ನುವುದು ಒಂದು ವಿಶೇಷ ಅನಿಸಿತು. ರಾತ್ರಿಯ ಹೊತ್ತು ಅದರ ಮೇಲಿನ ಸಾಲು ದೀಪಗಳು ಇಲ್ಲಿಗೂ ಕಂಡುಬಂದು ಮಕ್ಕಳು ಸಂಭ್ರಮಿಸಿದರು.
ಆದರೆ ಇಲ್ಲಿ ಮನೆ ಕಟ್ಟುವುದು ಸುಲಭವಾಗಲಿಲ್ಲ. ಸರಕಾರ ಕೊಟ್ಟ ಪರಿಹಾರದ ಧನ ಸಾಲಲಿಲ್ಲ. ತನ್ನ ಕುತ್ತಿಗೆಯಲ್ಲಿನ ಸರ, ಕಿವಿಯಲ್ಲಿನ ಆಭರಣ ತೆಗೆದು ಕೊಟ್ಟೆ, ಮುಂಡಿಗೆ ಭಟ್ಟರ ಕೈಲಿ ಗಂಡ ಸಾಲ ತೆಗೆದುಕೊಂಡ, ಅಲ್ಲಿ ಡೇಮು ಎದ್ದುನಿಂತ ಹಾಗೆ ಇಲ್ಲಿ ಮನೆ ಎದ್ದು ನಿಂತದ್ದು ತಮಾಷೆಯ ವಿಷಯವಾಯಿತು. ಅತ್ತ ಡೇಮಿನ ಕೆಲಸ ಮುಗಿದು ಮನೆ ಕೆಲಸ ಆಯಿತು ಅನ್ನುವಾಗ ಇವರು ಹಾಸಿಗೆ ಹಿಡಿದರು. ಮೊದಲಿನಿಂದಲೂ ಇದ್ದ ಉಬ್ಬಸ ವಿಪರೀತಕ್ಕೆ ಹೋಗಿ ಅದು ಉಲ್ಬಣಿಸಿತು. ಒಂದು ದಿನ ಇವರು ಉಸಿರಾಡಲು ಆಗದೆ ಮಲಗಿದ್ದಲ್ಲಿಯೇ ಕೊನೆಯ ಉಸಿರನ್ನ ಬಿಟ್ಟರು.
“”ಜಾನಕೀ, ನಿನಗೆ ಏನೂ ಕಡಿಮೆ ಮಾಡಿಲ್ಲ ನಾನು. ಅಡಕೆ ತೋಟ, ಗ¨ªೆ, ಮನೆ, ಕೊಟ್ಟಿಗೇಲಿ ಹದಿನೈದು ಕರಾವು ಎಲ್ಲ ಅದೆ. ಇನ್ನು ಮುಳುಗಡೆ ಇತ್ಯಾದಿ ತೊಂದರೆ ಇಲ್ಲ. ನಾನಿಲ್ಲ ಅನ್ನುವ ಕೊರತೇನ ಸಹಿಸಿಕೋ. ಮಗ ಇದಾನೆ ಮೊಮ್ಮಕ್ಕಳಿದಾರೆ” ಎಂದೆಲ್ಲ ಹೇಳುತ್ತಲೇ ಅವರು ತೀರಿಕೊಂಡರು. ಮುಳುಗಡೆ ಎಂದೆಲ್ಲ ಒಂದಿಷ್ಟು ತಿರುಗಾಟ, ಸರಕಾರಿ ಕಚೇರಿಗಳ ಅಲೆದಾಟ, ಅವರಿವರಲ್ಲಿ ಸಾಲ ಮಾಡು, ಇಂಥ ಕೆಲಕಷ್ಟಗಳಿಂದ ಅವರು ಸಾಕಷ್ಟು ಬಳಲಿದ್ದರು. ಈ ಕಷ್ಟಗಳೆಲ್ಲ ಮನೆಯವರಿಗೆ ಅರಿವಾಗದೆ ಮನೆಯವರು ಮಾತ್ರ ನೆಮ್ಮದಿಯಿಂದಲೇ ಇದ್ದರು. ಅದರ ನಂತರ ಕೂಡ ಈ ಮನೆ ಸುಖ-ಶಾಂತಿಯ ಬೀಡಾಗಿಯೇ ಇತ್ತು. ಇದ್ದ ಒಂದು ಕೊರತೆಯೆಂದರೆ ಮಳೆಗಾಲದಲ್ಲಿ ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ಬಿಡುವ ನೀರು ಕೆಲ ಬಾರಿ ತೋಟ ಗ¨ªೆ ಮನೆಯವರೆಗೂ ಬರುತ್ತಿತ್ತು. ಹೀಗೆ ಬಂದದ್ದು ಎರಡು ದಿನವಿದ್ದು ಇಳಿದು ಹೋಗುತ್ತಿತ್ತು. ಆದರೆ, ಇಂದು ಇದೇನು ಸುದ್ದಿ ! ಡೇಮಿನಿಂದ ಅದೆಷ್ಟೋ ನೀರನ್ನ ಬಿಡುವ ಸುದ್ದಿ ! ಮನೆ ಬಿಡಬೇಕೆನ್ನುವ ಸುದ್ದಿ !
ಸೊಸೆ ಕಂಬಳಿಯೊಂದನ್ನು ತಂದು ಕೂಸಜ್ಜಿಯ ಕೈಗೆ ಕೊಟ್ಟಳು.
“”ಭಾಗೀರತೀ ಇದು ನಂಗೆ ಎಂತಕ್ಕೆ?”
“”ಹೊದಕೊಳ್ಳಿ, ಮಳೆ-ಗಾಳಿ ನಾವು ಈಗ ಅರಲಗೋಡು ಗುಡ್ಡೆ ಹತ್ತಿ ಕುಳಿತುಕೊಳ್ಳಲಿಲ್ಲ ಅಂದ್ರೆ ನಮ್ ಕತಿ ಮುಗೀತು ಅಂತ ಲೆಕ್ಕ…ಹೊಂಡ್ರಿ…”
“”ಮನಿ ಬಿಟ್ಟು ಹೊಂಡು ಅಂತೀಯ… ಇದು ನನ್ನ ಗಂಡ ಕಟ್ಟಿದ ಮನಿ. ಸರಕಾರ ಕೊಟ್ಟ ಪರಿಹಾರದ ಜೊತೀಗೆ ನನ್ನ ಚಿನ್ನದ ಚೈನು ಮಾರಿ ಹಣ ತಂದು ಕಟ್ಟಿದ ಮನಿ”
ಆಕೆ ಮಾತನಾಡುತ್ತಿರಲು ಮುಂದಿನ ಬಾಗಿಲನ್ನ ಯಾರೋ ಗಲಗಲನೆ ಅಲುಗಾಡಿಸಿದರು. ಮಗನ ಹೆಸರು ಹಿಡಿದು ಕೂಗಿದರು. ಮಗ ಹೋಗಿ ಬಾಗಿಲು ತೆರೆದ.
“”ಯಾರು?”
“”ನಾವು ಸೆಕ್ಯೂರಿಟಿ. ಡ್ಯಾಮಿನಿಂದ 10,000 ಕ್ಯುಸೆಕ್ಸ್ ನೀರನ್ನು ಬಿಟ್ಟಿದಾರೆ. ಮತ್ತೂ ಮಳೆ ಆಗತಿದೆ. ಮತ್ತೂ ನೀರನ್ನ ಬಿಡಬಹುದು. ನೀವೆಲ್ಲ ಕೂಡಲೇ ಮನೆ ಖಾಲಿ ಮಾಡಬೇಕು. ಅರಲಗೋಡು ಗುಡ್ಡ ಮಾತ್ರ ಈಗ ಸದ್ಯಕ್ಕೆ ನಿಮಗೆಲ್ಲ ಸುರಕ್ಷಿತವಾದ ಜಾಗ. ಹೊರಡಿ ಬೇಗ. ಹುಂ… ಅಜ್ಜಿ ನೀನು ಮೊದಲು ಹೊರಬೀಳಬೇಕು”
“”ಇಲ್ಲ… ಇಲ್ಲ… ಇದು ನನ್ನ ಗಂಡ ಕಟ್ಟಿದ ಮನೆ’ ’
“”ಛೆ ! ಈ ಮುದುಕ-ಮುದುಕಿಯರದ್ದು ಇದೇ ಕತೆ. ನೀರು ಬಂದು ನುಗ್ಗೊàವಾಗ ಗಂಡ ಕಟ್ಟಿದ್ದು , ಮಗ ಕಟ್ಟಿದ್ದು ಅಂತ ರಗಳೆ. ಸೋಮಣ್ಣ ಅಜ್ಜಿ ರಟ್ಟೆಗೆ ಕೈ ಹಾಕು. ನಾನೂ ಹಿಡೀತೀನಿ. ಅನಾಮತ್ತಾಗಿ ಎತ್ತಿ ಲಾರಿಗೆ ಹಾಕೋಣ. ಹುಂ ಹಿಡಿ”
ಕೂಸಜ್ಜಿ ಕೂಗಾಡಿದಳು, ಕೊಸರಾಡಿದಳು, ನನ್ನ ಗಂಡ ಕಟ್ಟಿಸಿದ ಮನೆ ಎಂದು ಬೊಬ್ಬೆ ಹೊಡೆದಳು. ಆದರೆ ಆ ಸೆಕ್ಯೂರಿಟಿಯವರ ಎದಿರು ಅವಳ ಕೂಗಾಟ ನಡೆಯಲಿಲ್ಲ. ಅವರು ಒರಟೊರಟಾಗಿ ಅವಳನ್ನು ಹೊರಗೆ ಎತ್ತಿಕೊಂಡು ಹೋದರು.
ಆ ಕತ್ತಲೆಯಲ್ಲೂ ಡ್ಯಾಮಿನ ಗೇಟುಗಳು ಮತ್ತೂ ಎತ್ತರಕ್ಕೆ ತೆರೆದುಕೊಂಡು ನೊರೆ ನೊರೆ ನೀರು ಹೊರ ನುಗ್ಗಿತು. ನೀರು ನುಗ್ಗುವ ರಭಸಕ್ಕೆ ಅದರ ಸದ್ದು ಎÇÉೆಲ್ಲೂ ಕೇಳಿಸಿತು. ಕತ್ತಲು, ಕಾಡು, ಅಣೆಕಟ್ಟಿನ ಕಲ್ಲಿನ ಗೋಡೆ ಮೌನವಾಗಿ ಈ ಸದ್ದನ್ನ ಕೇಳುತ್ತಲಿದ್ದವು.
- ನಾ. ಡಿಸೋಜಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.