ಮಡಿಕೇರಿಗೆ ಕವಿದ ಮಂಜು ಕರಗಿದೆ !
Team Udayavani, Dec 23, 2018, 6:00 AM IST
ಕೂರ್ಗ್ ಅಥವಾ ಮಡಿಕೇರಿ ಹೆಸರು ಕೇಳಿದ ತತ್‌ಕ್ಷಣ ಮೈನವಿರೇ ಳುವುದು ಸಹಜ. ಅದರ ಮೋಡಿಯೇ ಅಂತಹುದು. ವರ್ಷದ ಹನ್ನೆರಡು ತಿಂಗಳೂ ಜನ ಮುಗಿಬಿದ್ದು ಕೂರ್ಗ್ ಎಂಬ ಪ್ರಕೃತಿ ಸಹಜ ಸೌಂದರ್ಯದ ಮಡಿಲಿಗೆ ಲಗ್ಗೆ ಹಾಕುತ್ತಿದ್ದರು. ತಲಕಾವೇರಿ, ಭಾಗಮಂಡಲ, ಅಬ್ಬಿಫಾಲ್ಸ್, ಮಂಡಾಲಪಟ್ಟಿ (ಮುಗಿಲು ಪೇಟೆ), ಚಕ್ಲಿ ಹೊಳೆ, ದುಬಾರೆ, ಕಾವೇರಿ ನಿಸರ್ಗಧಾಮ, ಟಿಬೇಟಿಯನ್ ಗೋಲ್ಡನ್ ಟೆಂಪಲ್- ಹೀಗೆ ಹತ್ತುಹಲವು ಪ್ರವಾಸೀ ತಾಣಗಳಿಗೆ ಪ್ರವಾಸಿಗರು ಹರಿದು ಬರುತ್ತಿದ್ದರು. ವಾರಾಂತ್ಯದ ರಜೆಗಳಲ್ಲಿ ಎರಡು ದಿನಗಳ ಯಾನಕ್ಕೆ ಹೇಳಿದ ಪ್ರಶಸ್ತ ಸ್ಥಳವಾಗಿತ್ತು.
ಹೌದು ಸ್ಥಳವಾಗಿತ್ತು! ಒಂದು ಮಹಾ ಮಳೆ ಅಲ್ಲಿನ ಜನರ ಬದುಕನ್ನೇ ಮೂರಾಬಟ್ಟೆ ಮಾಡಿ ಬಿಟ್ಟಿತ್ತು. ಮೊದಲೇ ಬರೀ ಬೆಟ್ಟಗುಡ್ಡಗಳ ಪ್ರದೇಶವಾದ ಕೊಡಗು ನಾಗರೀಕತೆಯ ಹೊಡೆತಕ್ಕೆ ಸಿಕ್ಕಿತ್ತು. ಅಲ್ಲಿಯ ಮಂದಿ ಪ್ರವಾಸಿಗರನ್ನು ಆಕರ್ಷಿಸಲು, ಹೋಮ್‌ಸ್ಟೇ, ರೆಸಾರ್ಟ್, ಪ್ರವಾಸೀಮಂದಿರಗಳನ್ನು ಗುಡ್ಡಗಳ ತಳಭಾಗ ಅಗೆದು ನಾಯಿಕೊಡೆಗಳಂತೆ ಎಬ್ಬಿಸಿಬಿಟ್ಟಿದ್ದರು. ಪ್ರಕೃತಿಮಾತೆ ಸಿಡಿದೆದ್ದು ಹಾಗೆ ಮೇಘಸ್ಫೋಟ ಮಾಡಿಯೇ ಬಿಟ್ಟಳು. ಮಹಾ ಮಳೆಗೆ, ಇರುವ ನದಿ-ತೊರೆಗಳು ಸಾಕಾಗಲಿಲ್ಲ, ಎಲ್ಲೆಲ್ಲಿ ಜಾಗವಿದೆಯೋ ಅಲ್ಲಲ್ಲಿ ಕೆಂಪು ನೀರು ಹರಿಯಲಾರಂಭಿಸಿತು, ಗುಡ್ಡಗಳು ಕುಸಿಯಲಾರಂಭಿಸಿದವು, ಮನೆಮಠ-ಬೇಸಾಯದ ಗದ್ದೆಗಳು ಧರಾಶಾಯಿಯಾಗಿ ಮಣ್ಣಿನಡಿ ಸಮಾಧಿಯಾದವು.
ಈ ಮಹಾಮಳೆಗೆ ಜರ್ಝರಿತವಾದ ಕೊಡಗಿಗೆ ಇಡೀ ದೇಶವೇ ಮಮ್ಮುಲ ಮರುಗಿತು. ಪರಿಹಾರ ಸಾಮಗ್ರಿಗಳು ಹರಿದುಬಂದವು. ಸಹಸ್ರಾರು ಮಂದಿ ಸ್ವಯಂಸೇವಕರು ಕೊಡಗಿಗಿಳಿದರು, ಕಷ್ಟದಲ್ಲಿದ್ದವರನ್ನು ಮೇಲಕ್ಕೆತ್ತಿದರು. ಮಾಧ್ಯಮಗಳಿಗೆ ಬಿಸಿ ಬಿಸಿ ಸುದ್ದಿಯಾಯಿತು. ದಿನದ ತುಂಬೆಲ್ಲ ಬ್ರೇಕಿಂಗ್ ನ್ಯೂಸ್! ಯಾರುಯಾರನ್ನೋ ಕರೆದು ಚರ್ಚೆ ಮಾಡಿಸಿದರು, ಜೋತಿಷಿಗಳನ್ನು ಕೂರಿಸಿ ಭವಿಷ್ಯ ಕೇಳಿದರು, ಇದೇ ಅಂತಿಮಪ್ರಳಯಕ್ಕೆ ಮುನ್ನುಡಿ ಎಂಬ ಪ್ರಚಾರವೂ ಹಬ್ಬಿತು. ಒಬ್ಬರು ಹೇಳುವ ಪ್ರಕಾರ ಮಡಿಕೇರಿಗೆ ಮಳೆಯಷ್ಟೇ ಮಾಧ್ಯಮಗಳಿಂದಲೂ ಹಾನಿಯಾಗಿದೆಯಂತೆ!
ಈಗ ಎಲ್ಲವೂ ಶಾಂತ
ಮನೆ-ಮಠ ಕಳೆದುಕೊಂಡವರು ಮತ್ತೆ ಆಶ್ರಯಕ್ಕಾಗಿ, ಸರಕಾರದ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಇಲ್ಲಿನ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ಹೋಮ್‌ಸ್ಟೇ, ರೆಸಾರ್ಟುಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದವು. ಸಂತೋಷದ ವಿಷಯವೋ ದುಃಖದ ಸಂಗತಿಯೋ ಗೊತ್ತಿಲ್ಲ, ಪ್ರತೀವರ್ಷ ಮದ್ಯ ಮಾರಾಟದಲ್ಲಿ ಮೊದಲನೆಯ ಸ್ಥಾನದಲ್ಲಿರುವ ಕೊಡಗು ಮಹಾಮಳೆಯ ನಂತರ ಆರನೆಯ ಸ್ಥಾನಕ್ಕೆ ಕುಸಿದಿದೆ. ಬಹುತೇಕ ಸ್ಥಳಗಳಲ್ಲಿ ಉತ್ತರಭಾರತದ ಪ್ರವಾಸಿಗರೇ ಇದ್ದಾರೆ, ಕನ್ನಡಿಗರ ಸಂಖ್ಯೆ ವಿರಳ.
ಮಾಧ್ಯಮದವರು ತೋರಿಸಿದ ಹಾಗೆ ಇಡೀ ಕೊಡಗೇನು ಮಳೆಗಾಹುತಿಯಾಗಿಲ್ಲ. ಪ್ರವಾಸಿಗರನ್ನು ಆಕರ್ಷಿಸುವ ಹೆಚ್ಚಿನ ತಾಣಗಳು ಮಳೆಯಿಂದ ಯಾವುದೇ ತೊಂದರೆಯಾಗದೆ ಸಹಜ ಸ್ಥಿತಿಯಲ್ಲೇ ಇವೆ. ಅತ್ಯಾಕರ್ಷಣೆಯ ಮಂಡಾಲಪಟ್ಟಿ (ಮುಗಿಲುಪೇಟೆ)ಗೆ ಹೋಗುವ ಹಾದಿ ಸ್ವಲ್ಪಮಟ್ಟಿಗೆ ಹಾಳಾಗಿದೆ ಅನ್ನುವುದನ್ನು ಬಿಟ್ಟರೆ ಮತಾöವ ಹಾನಿ ಪ್ರವಾಸಿ ತಾಣಗಳಿಗೆ ಆಗಿಲ್ಲ.
ಮಡಿಕೇರಿಗೆ ಕವಿದ ಸಂಕಷ್ಟದ ಮಂಜು ಕರಗಿದೆ. ಮತ್ತೆ ಬದುಕು ಯಥಾಸ್ಥಿತಿಗೆ ಮರಳಿದೆ. ಕೂರ್ಗ್‌ಗೆ ಹೋಗಬೇಕೆನ್ನುವ ಆಕಾಂಕ್ಷಿಗಳು ಯಾವುದೇ ಭಯವಿಲ್ಲದೆ ಹೋಗಬಹುದಾದಂಥ ಸ್ಥಿತಿ ಉಂಟಾಗಿದೆ. ಆದರೆ, ಮಾಧ್ಯಮದವರಿಂದ ಹಾಗೂ ಸರಕಾರದವರಿಂದ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವ ಕಾರ್ಯ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕಿದೆ.
ಪ್ರವೀಣ ಶೆಟ್ಟಿ ಕುಪ್ಕೊಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.