ಯಾರಿಗಾಗಿ ಬರೆಯುತ್ತೀರಿ?


Team Udayavani, Aug 11, 2019, 5:04 AM IST

d-15

ಓದುಗರೂ ಪತ್ರಕರ್ತರೂ ಕಳೆದ ಮೂವತ್ತು ವರ್ಷಗಳಲ್ಲಿ ಈ ಪ್ರಶ್ನೆಯನ್ನು ನನ್ನನ್ನು ಅನೇಕ ಬಾರಿ ಕೇಳಿದ್ದಾರೆ. ಯಾವ ಸ್ಥಳ, ಯಾವ ಹೊತ್ತಿನಲ್ಲಿ ಈ ಪ್ರಶ್ನೆ ಕೇಳುತ್ತಾರೆ, ಬರವಣಿಗೆಯ ಬಗ್ಗೆ ಅವರಿಗೆ ಆಸಕ್ತಿ ಎಷ್ಟು ಅನ್ನುವುದು ಈ ಪ್ರಶ್ನೆಯ ಉದ್ದೇಶವನ್ನು ನಿಯಂತ್ರಿಸುತ್ತದೆ. ಅದೇನೇ ಇದ್ದರೂ ಅವರ ದನಿಯಲ್ಲಿ ಸಂಶಯ, ಏನು ಉತ್ತರ ಹೇಳಿಯಾನು ಎಂಬ ಉದ್ಧಟತನ ಇವು ಮಾತ್ರ ಹಾಗೇ ಇರುತ್ತವೆ.

ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಈ ಪ್ರಶ್ನೆ ಕೇಳಿದಾಗ ಕಲೆ ಮತ್ತು ಸಾಹಿತ್ಯ ಇವು ಬಡ ದೇಶದಲ್ಲಿ ಅನುಪಯುಕ್ತ, ವ್ಯರ್ಥ; ಆಧುನಿಕ ಯುಗಕ್ಕೆ ಸೇರ್ಪಡೆಗೊಳ್ಳಲು ಹೋರಾಟ ನಡೆಸುತ್ತಿರುವ ಪಾಶ್ಚಾತ್ಯವಲ್ಲದ ದೇಶಕ್ಕಂತೂ ವ್ಯರ್ಥವಾದ ಲಕುರಿ ಇದು ಎಂಬ ಧೋರಣೆ ಇರುತ್ತಿತ್ತು. ವಿದ್ಯಾವಂತನಾದವನು ಡಾಕ್ಟರೋ, ಎಂಜಿನಿಯರೋ ಆಗಿ ರೋಗವಾಸಿ ಮಾಡುತ್ತ, ಸೇತುವೆ ಕಟ್ಟುವ ಕೆಲಸದಲ್ಲಿ ತೊಡಗಿದರೆ ದೇಶಕ್ಕೆ ಒಳ್ಳೆಯದಲ್ಲವೇ ಅನ್ನುವ ಸೂಚನೆ ಈ ಮಾತಿನಲ್ಲಿ ಇರುತ್ತಿತ್ತು. ಜೀನ್‌ ಪಾಲ್‌ ಸಾತ್ರೆ ಎಪ್ಪತ್ತರ ದಶಕದಲ್ಲಿ ಹೇಳಿದ ಮಾತು ಇಂಥ ಧೋರಣೆಗೆ ಬಲ ತಂದಿತ್ತು. ತಾನೇನಾದರೂ ಆಫ್ರಿಕದ ಅತ್ಯಂತ ಬಡತನದ, ಹಿಂದುಳಿದ ಪುಟ್ಟ ದೇಶ ಬಯಾಫ‌ದ ಬುದ್ಧಿಜೀವಿಯಾಗಿದ್ದಿದ್ದರೆ ಕಾದಂಬರಿ ಬರೆಯುವ ಕೆಲಸಕ್ಕೇ ಕೈ ಇಕ್ಕುತ್ತಿರಲಿಲ್ಲ ಎಂದಿದ್ದ.

ಮುಂದಿನ ವರ್ಷಗಳಲ್ಲಿ ಈ ಪ್ರಶ್ನೆಯ ಹಿಂದೆ ಸಮಾಜದ ಯಾವ ವರ್ಗ ನನ್ನ ಬರವಣಿಗೆಯನ್ನು ಓದಿ ಮೆಚ್ಚುತ್ತದೆ ಅನ್ನುವ ಕುತೂಹಲ ಇರುತ್ತಿತ್ತು. ನನ್ನನ್ನು ಸಿಕ್ಕಿಸಿಹಾಕುವ ಪ್ರಶ್ನೆ ಇದು. ಸಮಾಜದ ಅತ್ಯಂತ ಬಡ, ಹಿಂದುಳಿದ, ತುಳಿತಕ್ಕೆ ಒಳಗಾದ ಜನರ ಪರವಾಗಿ ಬರೆಯುತ್ತಿದ್ದೇನೆ, ಎಂಬ ಉತ್ತರ ಹೇಳದಿದ್ದರೆ ನಾನು ಟರ್ಕಿಯ ಜಮೀನುದಾರರ, ಮಧ್ಯಮವರ್ಗದ ಪರವಾಗಿ ಇರುವವನು ಅನ್ನುವ ಆಪಾದನೆ ಹುಟ್ಟಿಕೊಳ್ಳುತ್ತಿತ್ತು. ಪರಿಶುದ್ಧ ಮನಸ್ಸಿನ, ಒಳಿತಿನ ಪರವಾಗಿರುವ ಯಾವನೇ ಲೇಖಕ ಬಹುಪಾಲು ಅನಕ್ಷರಸ್ಥರಾಗಿರುವ ಲೇಖಕ ರೈತರು, ಕಾರ್ಮಿಕರ, ದೇಸೀಯರ ಪರವಾಗಿಯೇ ಬರೆಯಬೇಕು ಎಂಬ ಎಚ್ಚರಿಕೆಯೂ ಅದರಲ್ಲಿ ಇರುತ್ತಿತ್ತು. ನನ್ನ ತಾಯಿ ಅದೇ ಎಪ್ಪತ್ತರ ದಶಕದಲ್ಲಿ ಯಾರಿಗಾಗಿ ಬರೆಯುತ್ತೀಯಪ್ಪಾ ಎಂದು ಕೇಳಿದಾಗ ಅವಳ ಮಾತಿನಲ್ಲಿ ನನ್ನ ಜೀವನೋಪಾಯ ಹೇಗೋ ಏನೋ ಎಂಬ ಆತಂಕ ಕೇಳಿಸುತ್ತಿತ್ತು. ಯಾರಿಗಾಗಿ ಬರೆಯುತ್ತೀಯ ಎಂದು ಗೆಳೆಯರು ಕೇಳಿದಾಗ ಅವರ ಮಾತಿನಲ್ಲಿ ನನ್ನಂಥವನೊಬ್ಬ ಬರೆದದ್ದನ್ನು ಯಾರು ತಾನೇ ಓದುತ್ತಾರೆ ಅನ್ನುವ ಅಣಕ ಕೇಳಿಸುತ್ತಿತ್ತು. ಮೂವತ್ತು ವರ್ಷಗಳ ನಂತರ ಈ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತಿದೆ. ನನ್ನ ಕಾದಂಬರಿಗಳು ನಲವತ್ತು ಭಾಷೆಗಳಿಗೆ ಅನುವಾದಗೊಂಡಿರುವುದು ಇಂಥ ಪ್ರಶ್ನೆಗೆ ಕಾರಣ. ಅದರಲ್ಲೂ ಕಳೆದ ಹತ್ತು ವರ್ಷಗಳಲ್ಲಿ ಅನೇಕ ಸಂದರ್ಶನಗಳಲ್ಲಿ ಈ ಪ್ರಶ್ನೆ ಎದುರಾಗುತ್ತಿದೆ. ಪ್ರಶ್ನೆಯನ್ನು ನಾನು ತಪ್ಪಾಗಿ ತಿಳಿದೇನು ಅನ್ನುವ ಆತಂಕದಲ್ಲಿ ಇನ್ನೊಂದು ಮಾತು ಸೇರಿಸುತ್ತಾರೆ. ನೀವು ಟರ್ಕಿಶ್‌ ಭಾಷೆಯಲ್ಲಿ ಬರೆಯುತ್ತೀರಿ. ಅಂದರೆ ನೀವು ಕೇವಲ ಟರ್ಕಿಯ ಜನಕ್ಕಾಗಿ ಬರೆಯುತ್ತೀರೋ ಅಥವಾ ನಿಮ್ಮ ಅನುವಾದಗಳ ಮೂಲಕ ಹೆಚ್ಚು ವಿಸ್ತಾರವಾದ ಓದುಗರ ವಲಯಕ್ಕೆ ತಲುಪುವ ಉದ್ದೇಶವಿದೆಯೋ? ಎನ್ನುತ್ತಾರೆ. ಈ ಪ್ರಶ್ನೆ ಟರ್ಕಿಯಲ್ಲೇ ಕೇಳಲಿ, ಟರ್ಕಿಯ ಆಚೆಯೇ ಕೇಳಲಿ, ಧ್ವನಿ ಒಂದೇ: ನನ್ನ ಕೃತಿಗಳು ಪ್ರಾಮಾಣಿಕ ಅಧಿಕೃತ ಎಂದು ಪರಿಗಣಿತವಾಗಬೇಕಾದರೆ ನಾನು ಕೇವಲ ಟರ್ಕಿಯವರಿಗಾಗಿ ಬರೆಯುತ್ತೇನೆ, ಎಂಬ ಉತ್ತರವನ್ನೇ ನೀಡಬೇಕು.

ಈ ಪ್ರಶ್ನೆಯಲ್ಲಿ ಪ್ರಾಮಾಣಿಕತೆಯೂ ಇಲ್ಲ, ಮರುಕವೂ ಇಲ್ಲ. ಈ ಪ್ರಶ್ನೆಯನ್ನು ಪರಿಶೀಲಿಸುವ ಮೊದಲು ನೆನಪಿನಲ್ಲಿಡಬೇಕಾದ ಸಂಗತಿಯೊಂದಿದೆ: ಕಾದಂಬರಿಯ ಉಗಮ ಮತ್ತು ಬೆಳವಣಿಗೆ ರಾಷ್ಟ್ರಪ್ರಭುತ್ವಗಳ ಹುಟ್ಟು ಬೆಳವಣಿಗೆಯ ಜೊತೆಜೊತೆಗೇ ಆಯಿತು.

ಹತ್ತೂಂಬತ್ತನೆಯ ಶತಮಾನದ ಮಹಾನ್‌ ಕಾದಂಬರಿಗಳು ಸಂಪೂರ್ಣ ಅರ್ಥದಲ್ಲಿ ರಾಷ್ಟ್ರೀಯ ಕಲೆಯ ಉದಾಹರಣೆಗಳಾಗಿದ್ದವು. ಡಿಕಿನ್ಸ್‌, ದಾಸ್ತಯೇವ್ಸ್‌ಕಿ, ಟಾಲ್ಸ್‌ಟಾಯ್‌ ಇವರೆಲ್ಲ ಆಗತಾನೇ ತಲೆ ಎತ್ತುತಿದ್ದ ಮಧ್ಯಮವರ್ಗಕ್ಕಾಗಿ ಬರೆದರು. ಅವರ ಓದುಗರ ವರ್ಗ ತಮ್ಮ ರಾಷ್ಟ್ರೀಯ ಲೇಖಕನ ಬರಹದಲ್ಲಿ ತಾವು ದಿನನಿತ್ಯದ ನಿಜಬದುಕಿನಲ್ಲಿ ಕಾಣುತ್ತಿದ್ದ ಅದೇ ನಗರ, ಬೀದಿ, ಮನೆ, ಕೋಣೆ, ಕುರ್ಚಿ, ತಾವು ಅನುಭವಿಸುತ್ತಿದ್ದಂಥದೇ ಸಂತೋಷ, ತಾವು ಚರ್ಚಿಸುತ್ತಿದ್ದಂಥದೇ ಪ್ರಶ್ನೆಗಳನ್ನೂ ಕಾಣುತ್ತಿದ್ದರು. ಹತ್ತೂಂಬತ್ತನೆಯ ಶತಮಾನದ ಪ್ರಮುಖ ಲೇಖಕರ ಕಾದಂಬರಿಗಳು ಮೊದಲ ಬಾರಿಗೆ ಪ್ರಕಟವಾದದ್ದು ರಾಷ್ಟ್ರೀಯ ಪತ್ರಿಕೆಗಳ ಕಲೆ ಮತ್ತು ಸಂಸ್ಕೃತಿಯ ಪುರವಣಿಗಳಲ್ಲಿ. ಯಾಕೆಂದರೆ ಈ ಲೇಖಕರು ತಮ್ಮ ರಾಷ್ಟ್ರಕ್ಕಾಗಿ ಬರೆಯುತ್ತಿದ್ದರು. ತಮ್ಮ ದೇಶ ಏಳಿಗೆ ಹೊಂದಬೇಕು ಎಂಬ ಚಡಪಡಿಕೆ ಇದ್ದ ರಾಷ್ಟ್ರಭಕ್ತನ ದನಿ ಅವರ ಕಾದಂಬರಿಗಳ ನಿರೂಪಣೆಯಲ್ಲಿ ಕೇಳಿಸುತ್ತಿತ್ತು. ಹತ್ತೂಂಬತ್ತನೆಯ ಶತಮಾನದ ಕೊನೆಯ ಹೊತ್ತಿಗೆ ಕಾದಂಬರಿ ಓದುವುದು ಮತ್ತೆ ಬರೆಯುವುದು ಎಂದರೆ ರಾಷ್ಟ್ರೀಯ ಪ್ರಾಮುಖ್ಯವುಳ್ಳ ಸಂಗತಿಗಳ ಚರ್ಚೆಯಲ್ಲಿ ಭಾಗವಹಿಸುವುದು ಎಂದೇ ಅರ್ಥವಾಗುತ್ತಿತ್ತು.

ಕಾದಂಬರಿ ಲೋಕದಲ್ಲಾದ ಬದಲಾವಣೆ
ಇವತ್ತು ಕಾದಂಬರಿ ಬರೆಯುವುದಕ್ಕೂ ಓದುವುದಕ್ಕೂ ತೀರ ಬೇರೆಯದೇ ಅರ್ಥ ಬಂದಿದೆ. ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಇಂಥ ಬದಲಾವಣೆ ಮೊದಲು ಸಂಭವಿಸಿತು. ಸಾಹಿತ್ಯಕ ಕಾದಂಬರಿಯು ಆಧುನೀಕತೆಯ ಪ್ರಶ್ನೆಗೆ ಮುಖಾಮುಖಿಯಾಯಿತು, ಆ ಮೂಲಕ ಕಾದಂಬರಿಗೆ “ಉನ್ನತವಾದ ಕಲೆ’ ಎಂಬ ಸ್ಥಾನ ದೊರೆಯಿತು. ಕಳೆದ ಮೂವತ್ತು ವರ್ಷಗಳಲ್ಲಿ ಆಗಿರುವ ಸಂವಹನ ಕ್ಷೇತ್ರದ ಬದಲಾವಣೆಗಳೂ ಮುಖ್ಯವಾಗಿವೆ. ಈಗಿನ ವರ್ತಮಾನ ವಿಶ್ವವ್ಯಾಪಿಯಾಗಿರುವ ಮಾಧ್ಯಮದ ಕಾಲ. ಈಗಿನ ಸಾಹಿತಿಗಳು ತಮ್ಮ ತಮ್ಮ ದೇಶದ ಮಧ್ಯಮವರ್ಗವನ್ನಷ್ಟೇ ಉದ್ದೇಶಿಸಿ ಮಾತನಾಡುವವರಲ್ಲ; ಬದಲಾಗಿ ಜಗತ್ತಿನಾದ್ಯಂತ ಇರುವ ಸಾಹಿತ್ಯಕ ಕಾದಂಬರಿಗಳ ಓದುಗರೊಂದಿಗೆ ಮಾತಾಡಬಲ್ಲವರು, ತತ್‌ಕ್ಷಣದಲ್ಲೇ ಮಾತಾಡಬಲ್ಲವರು. ಇಂದಿನ ಸಾಹಿತ್ಯಕ ಓದುಗರು ಗಾರ್ಸಿಯ ಮಾಕ್ವೆಜ್‌, ಕೋಟ್ಸೆ ಅಥವಾ ಪಾಲ್‌ ಆಸ್ಟರ್‌ ಕೃತಿಗಳಿಗಾಗಿ ಕಾಯುತ್ತಾರೆ-ಹಿಂದಿನ ಕಾಲದ ಜನ ಡಿಕಿನ್ಸ್‌ನ ಹೊಸ ಕಾದಂಬರಿಗೆ ಕಾಯುತ್ತಿದ್ದ ಹಾಗೆಯೇ. ಇಂಥ “ವಾಚಕ ದಳ’ದ ಸಂಖ್ಯೆ ಲೇಖಕರ ತಾಯಿನಾಡಿನ ಒಟ್ಟು ಓದುಗರ ಸಂಖ್ಯೆಗಿಂತ ಮಿಗಿಲಾಗಿರುತ್ತದೆ.

ಲೇಖಕರು ಯಾರಿಗಾಗಿ ಬರೆಯುತ್ತಾರೆ ಎಂದು ಈ ಪ್ರಶ್ನೆಯನ್ನು ತೀರ ಸರಳ, ವ್ಯಾಪಕ ಅರ್ಥದಲ್ಲಿ ತೆಗೆದುಕೊಂಡರೆ-ಆದರ್ಶ ಓದುಗನಿಗಾಗಿ, ತಮ್ಮ ಆಪ್ತ, ಪ್ರೀತಿಪಾತ್ರರಿಗಾಗಿ, ತಮಗಾಗಿ, ಯಾರಿಗಾಗಿಯೂ ಅಲ್ಲ ಎಂಬ ಉತ್ತರಗಳನ್ನು ಕೊಡಬಹುದು. ಇದು ಸತ್ಯ, ಆದರೆ ಪೂರ್ಣ ಸತ್ಯವಲ್ಲ. ಇಂದಿನ ಸಾಹಿತಿಗಳು ತಮ್ಮನ್ನು ಯಾರು ಓದುತ್ತಾರೋ ಅವರಿಗಾಗಿ ಬರೆಯುತ್ತಾರೆ. ಅಂದರೆ ಇಂದಿನ ಸಾಹಿತ್ಯಕ ಲೇಖಕರು ಏನನ್ನೂ ಓದದ ತಮ್ಮ ಬಹುಸಂಖ್ಯಾತ ರಾಷ್ಟ್ರೀಯರಿಗಾಗಿ ಬರೆಯುವ ಬದಲಾಗಿ ಜಗತ್ತಿನಲ್ಲಿರುವ ಅಲ್ಪಸಂಖ್ಯಾತ ಸಾಹಿತ್ಯಕ ಓದುಗರಿಗಾಗಿ ಬರೆಯುತ್ತಾರೆ. ಅಂದರೆ ಈ ಸಾಮಾನ್ಯರೂಪದ ಪ್ರಶ್ನೆಗೆ ವಿವರಣೆ ಇದು: ಲೇಖಕರ ಉದ್ದೇಶದ ಬಗ್ಗೆ ತೋರುವ ಸಂಶಯವು ಕಳೆದ ಹತ್ತು ವರ್ಷಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸಾಂಸ್ಕೃತಿಕ ವ್ಯವಸ್ಥೆಯನ್ನು ಕುರಿತ ಕಸಿವಿಸಿಯೇ ಆಗಿದೆ.

ಅಧಿಕೃತವಾಗಿರಬೇಕು, ಅಥೆಂಟಿಕ್‌ ಆಗಿರಬೇಕು ಎಂಬ ಆಸೆ ಎಲ್ಲ ಲೇಖಕರಿಗೂ ಇರುತ್ತದೆ. ಹಾಗಾಗಿ ಇಷ್ಟೆಲ್ಲ ವರ್ಷ ಕಳೆದ ಮೇಲು ನಾನು ಯಾರಿಗಾಗಿ ಬರೆಯುತ್ತೇನೆ ಅನ್ನುವ ಪ್ರಶ್ನೆಗೆ ಎದುರಾಗುವುದು ನನಗೆ ಇಷ್ಟ. ತಾನು ಬದುಕಿರುವ ಲೋಕಕ್ಕೆ ಮುಖಾಮುಖೀಯಾಗುವ ಸಾಮರ್ಥ್ಯವನ್ನು ಅವಲಂಬಿಸಿ ಲೇಖಕನ ಅಧಿಕೃತತೆ ನಿರ್ಧಾರವಾಗುತ್ತದೆ. ಹಾಗೆಯೇ ಜಗತ್ತಿನಲ್ಲಿ ಬದಲಾಗುತ್ತಿರುವ ತನ್ನ ಸ್ಥಾನ ಕುರಿತ ತಿಳಿವಳಿಕೆಯೂ ಅಧಿಕೃತತೆಗೆ ಅಗತ್ಯವಾದ ಇನ್ನೊಂದು ಅಂಶ. ಸಾಮಾಜಿಕ ವಿಧಿನಿಷೇಧ-ಗಳಿಂದ, ರಾಷ್ಟ್ರೀಯ “ಪುರಾಣ’ಗಳಿಂದ ಬಾಧಿತನಾಗದ ಆದರ್ಶ ಓದುಗನೆಂಬಾತ ಇಲ್ಲ. ಹಾಗೆಯೇ ರಾಷ್ಟ್ರೀಯವಾಗಿರಲಿ, ಅಂತಾರಾಷ್ಟ್ರೀಯವಾಗಿರಲಿ ಆದರ್ಶ ಕಾದಂಬರಿಕಾರನೂ ಇಲ್ಲ. ಆದರೂ ಎಲ್ಲ ಕಾದಂಬರಿಕಾರರೂ ಆದರ್ಶ ಓದುಗನನ್ನು ಉದ್ದೇಶಿಸಿಯೇ ಬರೆಯುತ್ತಾನೆ-ಮೊದಲು ಅವನನ್ನು ಕಲ್ಪಿಸಿಕೊಳ್ಳುತ್ತಾರೆ, ಆನಂತರ ಅವನನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯುತ್ತಾರೆ.

(ಒರ್ಹಾನ್‌ ಪಮುಕ್‌ ಟರ್ಕಿಯ ಇಸ್ತಾಂಬುಲ್‌ ನಗರದಲ್ಲಿ ಹುಟ್ಟಿದವರು. ಮೈ ನೇಮ್‌ ಈಸ್‌ ರೆಡ್‌ (1998) ಕಾದಂಬರಿಯಿಂದ ಪಮುಕ್‌ಗೆ ಅಂತರರಾಷ್ಟ್ರೀಯ ಖ್ಯಾತಿ ದೊರೆಯಿತು. 2006ರಲ್ಲಿ ನೊಬೆಲ್‌ ಪ್ರಶಸ್ತಿ ಪಡೆ ದ ರು. ಇಂಗ್ಲಿಷಿನಲ್ಲಿ ಲಭ್ಯವಿರುವ ಪಮುಕ್‌ ಅವರ ಕೆಲವು ಕೃತಿಗಳು: ದಿ ವೈಟ್‌ ಕ್ಯಾಸಲ್‌ (1991), ದಿ ಬ್ಲಾಕ್‌ ಬುಕ್‌ (1994) ದಿ ನ್ಯೂ ಲೈಫ್ (1997), ಮೈ ನೇಮ್‌ ಈಸ್‌ ರೆಡ್‌ (2001), ಸ್ನೋ (2004), ಇಸ್ತಾಂಬುಲ್‌: ಮೆಮೊರೀಸ್‌ ಅಂಡ್‌ ದಿ ಸಿಟಿ (2005), ಓ. ಎಲ್‌. ನಾಗಭೂಷಣಸ್ವಾಮಿ ಅವರು ಅನುವಾದಿಸಿರುವ ನೊಬೆಲ್‌ ಪಡೆದ ಲೇಖಕ ಒರ್ಹಾನ್‌ ಪಮುಕ್‌ನ ಮುಗ್ಧ ಪ್ರಬುದ್ಧ : ಕಾದಂಬರಿ ಬರೆಯುವಾಗ ಮತ್ತು ಓದುವಾಗ ನಮಗೇನಾಗುತ್ತದೆ ಕೃತಿಯನ್ನು ಬೆಂಗ ಳೂ ರಿನ ಅಭಿನವ ಪ್ರಕಾ ಶನ ತನ್ನ 25ರ ಸಂಭ್ರಮದ ನೆನಪಿಗೆ ಪ್ರಕಟಿಸುತ್ತಿದೆ)

ಮೂಲ : ಒರ್ಹಾನ್‌ ಪಮುಕ್‌ ನೊಬೆಲ್‌ ಪುರಸ್ಕೃತ ಲೇಖಕ
ಅನುವಾದ : ಓ. ಎಲ್‌. ನಾಗಭೂಷಣಸ್ವಾಮಿ

ಟಾಪ್ ನ್ಯೂಸ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

12-hunsur

Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.