ಕೆಜಿಯಿಂದ ಪಿಜಿಯವರೆಗೆ
Team Udayavani, Sep 23, 2018, 6:00 AM IST
ನಮ್ಮ ಹಳ್ಳಿ ಮಲೆನಾಡಿನ ಎಲ್ಲ ಹಳ್ಳಿಗಳಂತೆ ಯುವಶಕ್ತಿಯೆಲ್ಲ ಸೋರಿ ಬೆಂಗಳೂರು ಅಮೆರಿಕಕ್ಕೆ ಹೋಗಿ ದುಡಿತಕ್ಕೆ ಕುಳಿತ ಬಳಿಕದ ಕೈ ಬೆರಳೆಣಿಕೆಯ ಮಕ್ಕಳು ಮತ್ತು ಕೃಷಿಕ ಮುದುಕರ ಸಂಸಾರಗಳು ಉಳಿದಿರುವ ಜಾಳು ಜಾಳು ವಸತಿ ಪ್ರದೇಶವಾಗಿ ಮಾರ್ಪಟ್ಟಿದೆ. ನಮ್ಮ ಶಾಲೆ ಕರ್ನಾಟಕದ ಹೆಚ್ಚಿನ ಸರ್ಕಾರಿ ಪ್ರಾಥಮಿಕ ಶಾಲೆಗಳಂತೆಯೇ ಇನ್ನು ಸಿನೆಮಾಗಳಲ್ಲಿ ಮಾತ್ರ ನೋಡಬಹುದಾದ ಸ್ಥಿತಿ ತಲುಪಿ ಕೆಲ ವರ್ಷಗಳೇ ಸಂದಿವೆ.
ಕಳೆದ ಎರಡು ವಾರಗಳಿಂದ ನನ್ನದು ಒಂದು ಬಗೆಯ ಶೈಕ್ಷಣಿಕ ಪ್ರವಾಸ. ಪ್ರವಾಸವೆಂದರೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಸುತ್ತುವುದಲ್ಲ. ವಿದ್ಯಾರ್ಥಿಗಳಿದ್ದ ಕಡೆಯೇ ಹೋಗಿ ಅಲ್ಲಲ್ಲಿಯ ಸ್ಥಳೀಯ ವೈಶಿಷ್ಟéಗಳ ಜತೆ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ನಡುವೆಯೇ ಇದ್ದು ಬರುವ ಸದವಕಾಶ. ಇದು ಪ್ರಾರಂಭವಾಗಿದ್ದು ನನ್ನ ಹುಟ್ಟೂರು ಕತ್ರಗಾಲೆಂಬ ಪುಟ್ಟ ಹಳ್ಳಿಯಿಂದಲೇ, ಎಲ್ಕೇಜಿ ಕಂದಮ್ಮಗಳ ನಡುವಿನಿಂದಲೇ.
ನಮ್ಮ ಹಳ್ಳಿ ಮಲೆನಾಡಿನ ಎಲ್ಲ ಹಳ್ಳಿಗಳಂತೆ ಯುವಶಕ್ತಿಯೆಲ್ಲ ಸೋರಿ ಬೆಂಗಳೂರು ಅಮೆರಿಕಕ್ಕೆ ಹೋಗಿ ದುಡಿತಕ್ಕೆ ಕುಳಿತ ಬಳಿಕದ ಕೈಬೆರಳೆಣಿಕೆಯ ಮಕ್ಕಳು ಮತ್ತು ಕೃಷಿಕ ಮುದುಕರ ಸಂಸಾರಗಳು ಉಳಿದಿರುವ ಜಾಳು ಜಾಳು ವಸತಿ ಪ್ರದೇಶವಾಗಿ ಮಾರ್ಪಟ್ಟಿದೆ. ಸಮೃದ್ಧ ಅಡಿಕೆ ತೋಟ, ಗದ್ದೆಗಳನ್ನು ನೋಡುವವರಿಲ್ಲದೆ, ಗೆಯೆ ಮಾಡುವವರಿಲ್ಲದೆ, ಅಳಿಮಳಿದ ಬೆಳೆಯನ್ನು ಮಂಗಗಳಿಂದ ರಕ್ಷಣೆ ಮಾಡಿಕೊಳ್ಳಲಾಗದೆ ಹತಾಶೆ ಅಡಿಕೆ ಬೆಳೆಗಾರರ ಗೊಣಗು ತಾಣವಾಗಿ ಕಂಡು ಬರುತ್ತಿವೆ. ಈ ಬಾರಿಯ ಭಾರೀ ಮಳೆಗೆ ಅಡಿಕೆ ತೋಟಗಳು ಕೊಚ್ಚಿ ಹೋಗಿದ್ದು, ಇನ್ನಿಲ್ಲದಂತೆ ಕೊಳೆರೋಗ ಬಾಧಿಸಿ ಅಡಿಕೆಯೆಲ್ಲ ನೆಲಕಚ್ಚಿದ್ದು , ನೆರೆಯ ಅಥವಾ ಬರದ ಅಡಿಯಲ್ಲಿ ಬಾರದ ಈ ಕೊಳೆರೋಗಕ್ಕೆ ಸರಕಾರದ ಪರಿಹಾರವೂ ಸಿಗಲಾರದ ಅಸಹಾಯಕತೆ, ಸಿಕ್ಕರೂ ಕುಟುಂಬಕ್ಕೆ ಐನೂರು ರೂಪಾಯಿ ಪರಿಹಾರವಾಗಿ ಕೊಟ್ಟು ಕೈ ತೊಳೆದುಕೊಳ್ಳುವ ಪರಿಹಾರ (ಸ)ಕ್ರಮ- ಇವೇ ಇವೇ ಸಂಗತಿಗಳೇ ಎಲ್ಲ ಕಡೆ ಮಾತಿಗೆ ಸಿಕ್ಕ ಸಂಗತಿಗಳು.
ನಾನು ಓದಿದ ಹೂವಿನಮನೆ ಶಾಲೆ ಕರ್ನಾಟಕದ ಹೆಚ್ಚಿನ ಸರ್ಕಾರಿ ಪ್ರಾಥಮಿಕ ಶಾಲೆಗಳಂತೆಯೇ ಇನ್ನು ಸಿನೆಮಾಗಳಲ್ಲಿ ಮಾತ್ರ ನೋಡಬಹುದಾದ ಸ್ಥಿತಿ ತಲುಪಿ ಕೆಲ ವರ್ಷಗಳೇ ಸಂದಿವೆ. ಊರಿನಲ್ಲಿ ಇದ್ದ ಏಕಮೇವ ಕನ್ನಡ ಶಾಲೆ ನಮ್ಮ ಇಡೀ ಗ್ರಾಮದ ಸುತ್ತಮುತ್ತಲಿನ ವಿದ್ಯಾರ್ಥಿಗಳ ಕಲಿಕೆಯ ಕೇಂದ್ರವಾಗಿತ್ತು. ಶ್ರದ್ಧೆಯಿಂದ ಕಲಿಸುವುದಷ್ಟೇ ಮಾಷ್ಟ್ರುಗಳ, ಮೇಡಂನವರ ಧ್ಯೇಯವಾಗಿತ್ತು. ಕಲಿಕೆ ಎಂದೂ ಶಿಕ್ಷೆಯಾಗಿರಲಿಲ್ಲ (ತಪ್ಪಿದ್ದರೆ ಮಾಷ್ಟ್ರು ಕೊಡುತ್ತಿದ್ದ ಶಿಕ್ಷೆಯೇ ಶ್ರೀರಕ್ಷೆಯಾಗಿತ್ತು) ನಿರಾಳವಾದ ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ನಡುವೆ ಒಂದು ಸುಂದರ ಬಾಂಧವ್ಯ ಏರ್ಪಡುತ್ತಿತ್ತು. ಈಗಿನಂತೆ ಪಠ್ಯೇತರ ಚಟುವಟಿಕೆಗಳು ಎಂದೂ ಭಾರವಾಗಿರಲಿಲ್ಲ. ಇಲಾಖೆ ಎಂದೂ ಮಾಷ್ಟ್ರುಗಳ ಪ್ರಾಣ ಹಿಂಡುತ್ತಿರಲಿಲ್ಲ.
ಮಕ್ಕಳಿಗೆ ಕಲಿಸುವ ತಿಂಗಳು ಯಾವುದು ಮಾಷ್ಟ್ರೆ?
ನಾನು ಕಲಿತ ನನ್ನ ಶಾಲೆಯ ಮಾಷ್ಟ್ರು ತೋಡಿಕೊಂಡ ದುಃಖದ ಕಥೆ ಇದು. ಶಿಕ್ಷಣ ಇಲಾಖೆ ಫಲವಿಲ್ಲದ ಪ್ರಯೋಗಶಾಲೆಯಾಗುತ್ತಿದೆ. ಪ್ರಾಥಮಿಕ ಶಿಕ್ಷಕರನ್ನು ಕಲಿಸುವುದೊಂದನ್ನು ಬಿಟ್ಟು ಬೇರೆಲ್ಲಾ ಘೋಷಣೆಗಳಲ್ಲಿ ಮಾತ್ರ ಚಂದ ಕಾಣುವ ಕೆಲಸಗಳಿಗೆ ಬಳಸಿಕೊಳ್ಳುವ ಕೆಟ್ಟ ಚಾಳಿಯಿಂದ ಶಿಕ್ಷಣ ಇಲಾಖೆ ಹೊರಬಾರದೆ ಶಿಕ್ಷಕರಿಗೆ ಉಳಿಗಾಲವಿಲ್ಲ , ಮಕ್ಕಳಿಗೆ ನೆಮ್ಮದಿಯಿಲ್ಲ. ನಮ್ಮ ಈ ಬಾರಿಯ ವೇಳಾಪಟ್ಟಿ ನೋಡಿ ಎಂದು ಎದುರಿಗಿಟ್ಟರು.
ಜೂನ್- ದಾಖಲಾತಿ ತಿಂಗಳು
ಜುಲೈ- ಎಸ್‌ಟಿಎಸ್ ತಿಂಗಳು
ಆಗಸ್ಟ್- ಪ್ರತಿಭಾ ಕಾರಂಜಿ, ಕ್ರೀಡಾಕೂಟದ ತಿಂಗಳು
ಸೆಪ್ಟಂಬರ್- ಸ್ಕಾಲರ್‌ಶಿಪ್ ತಿಂಗಳು
ಅಕ್ಟೋಬರ್- ಸಿಎಸ್‌ಏಎಸ್ ತಿಂಗಳು
“ಮಕ್ಕಳಿಗೆ ಕಲಿಸುವ ತಿಂಗಳು ಯಾವುದು ಮಾಷ್ಟ್ರೆ?’ ಎಂದು ಕೇಳಿದೆ. ಮಾಷ್ಟ್ರು ನಕ್ಕ ಹತಾಶ ನಗುವಿನಲ್ಲಿ ಕನಸು ಹೊತ್ತು ಬರುವ ಕಂದಮ್ಮಗಳ ಮನಸ್ಸು ಕರಗುತ್ತಿರುವುದರ ಸ್ಪಷ್ಟ ದುಷ್ಟ ಚಿತ್ರಣ ದೊರಕುವಂತಿತ್ತು. “”ನೇಕಾರರ ಕೆಲಸ ಬರೀ ನೇಯುವುದು, ಬಣ್ಣ ಹಾಕುವುದು ಅಷ್ಟೇ. ಹೊಲಿಗೆ ಕೆಲಸವನ್ನೂ ಹಚ್ಚಿ , ಬಟ್ಟೆ ಅಂಗಡಿಯನ್ನೂ ಹುಡುಕಿ ಮಾರುವ ಕೆಲಸವನ್ನೂ ಹಚ್ಚಿದರೆ ಮಷಿನ್ನಿನ ಕೆಲಸದ ಸದ್ದು ಜೋರಾಗಿ ಮಗ್ಗದ ಸದ್ದು ಕ್ಷೀಣ ಆಗ್ತದೆ ಎಂದೊಬ್ಬರು ಹೇಳಿದ್ದು ಸಂಪೂರ್ಣ ಸತ್ಯವಾಗ್ತಿದೆ” ಎಂದರು, ಸೋತ ಸ್ವರದ ಮಾಷ್ಟ್ರು .
ಕಲಿಸುವುದು ಧ್ಯೇಯವಾಗುಳ್ಳ ಟೀಚರುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಂಬಳಕ್ಕಾಗಿ, ಹೊಟ್ಟೆಪಾಡಿಗಾಗಿ ಕಲಿಸುವ ಉದ್ಯೋಗ ಹಿಡಿಯುವವರಿಂದ ಶಿಕ್ಷಣ ಕ್ಷೇತ್ರ ತುಂಬುತ್ತಿದೆ. ಕೈತುಂಬ ಸಂಬಳದ ಮಾತಿರಲಿ ಹೊಟ್ಟೆಗೆ ಬಟ್ಟೆಗೆ ಸಾಲದ ಎರಡು-ಮೂರು ಸಾವಿರಕ್ಕೆ ದುಡಿಸಿಕೊಳ್ಳುವ ಖಾಸಗಿ ಶಾಲೆಗಳು ಬೇಕಷ್ಟಿವೆ. ಪ್ರಾರಂಭದ ಬುನಾದಿಯ ಕಲ್ಲುಗಳೇ ಶಿಥಿಲವಾಗಿ ಬಿಟ್ಟರೆ ಕಟ್ಟಡದ ಗತಿಯೇನು? ಸದೃಢ ಸಮಾಜದ ಪರಿಕಲ್ಪನೆಯನ್ನೇ ಬುಡಮೇಲು ಮಾಡುವ, ಮಾತೃ ಭಾಷೆಯಲ್ಲಿರಬೇಕಾದ ಆದರೆ, ಇಂಗ್ಲಿಶ್ ಮಾಧ್ಯಮವೊಂದೇ ಸುಖೀ ಭವಿಷ್ಯವನ್ನು ತಂದುಕೊಡುವ ಸಂಜೀವಿನಿ ಎಂದು ಭಾವಿಸುವ ಪಾಲಕರಿಗೆ, “ನಿಲ್ಲಿ ಒಂದ್ನಿಮಿಷ ಕಣ್ಮುಚ್ಚಿ ನಿಮ್ಮ ಮಗುವನ್ನು ನಗರದ ಶಾಲೆಗೆ ಹಾಕುವ ಬದಲು ನಿಮ್ಮೂರ ಶಾಲೆಯನ್ನೇ ಸುಧಾರಿಸುವುದೊಳ್ಳೆಯದು’ ಎಂದು ಹೇಳಿದರೆ ಕೇಳುವ ವ್ಯವಧಾನವಿಲ್ಲ. ಹಳ್ಳಿ ಹಳ್ಳಿಗೂ 15-20 ಕಿ.ಮೀ. ದೂರದ ಪಟ್ಟಣಗಳಿಂದ ಸ್ಕೂಲು ಬಸ್ಸುಗಳು ಬರುತ್ತವೆ. ತೂಕಡಿಸುವ ಎಲ್ಕೇಜಿ ಮಗುವನ್ನು ಬಸ್ಸಿನಲ್ಲಿ ತುರುಕಿ ಕಳಿಸುತ್ತಾರೆ. ಸಂಜೆ ಬಸವಳಿದು ಬರುವ ಮಗುವಿಗೆ ಬಸ್ಸಲ್ಲೇ ನಿದ್ದೆ, ಊಟತಿಂಡಿ, ಆಟ ಏನೂ ಬೇಡ. ಅಳಿದುಳಿದ ಯುವಜನಾಂಗಕ್ಕೆ ಇದು ಅರ್ಥವಾಗದುದಲ್ಲ. ಆದರೆ, ಪ್ರವಾಹದ ವಿರುದ್ಧ ಈಜುವ ಧೈರ್ಯವಿಲ್ಲ.
ನಮ್ಮೂರಿನದೇ ಒಬ್ಬ ಯುವ ಮುತ್ಸದ್ದಿ ತನ್ನ ಕುಟುಂಬದ ಸದಸ್ಯರ ನೆರವಿನಿಂದ ಕತ್ರಗಾಲಿನಲ್ಲೊಂದು “ವಿದ್ಯಾಗಿರಿ’ ಸ್ಥಾಪಿಸಿ ಇಂಗ್ಲಿಶ್ ಮಾಧ್ಯಮ ಶಾಲೆ ಪ್ರಾರಂಭಿಸಿಯೇ ಬಿಟ್ಟ. ಸ್ಥಳಕ್ಕೆ ಬೇಕಾದ ಭೂಮಿಯನ್ನು ನೀಡುವವರು, ದತ್ತಿನಿಧಿ ನೀಡಿ ಪ್ರೋತ್ಸಾಹಿಸುವವರು ಎಲ್ಲರೂ ಹಳ್ಳಿಯಲ್ಲಿ ಸಿದ್ಧ. ಮೊನ್ನೆ ಈ ವಿದ್ಯಾಗಿರಿಗೆ ನನ್ನನ್ನು ಹತ್ತಿಸಿದರು. ಸಾಧಕ-ಬಾಧಕ ಎರಡನ್ನೂ ಮಾತಾಡಬೇಕಲ್ಲ. ನಮ್ಮ ಎಲ್ಕೇಜಿ ಮಗುವನ್ನು 20 ಕಿ.ಮೀ. ದೂರದ ಸಿದ್ದಾಪುರಕ್ಕೆ ಕಳಿಸುವ ಬದಲು ಇಲ್ಲೇ ಹಳ್ಳಿಯ ಚೌಡಿಕೊಡ್ಲಿನ ಗುಡ್ಡ ಹತ್ತಿಸಿ ಬಿಟ್ಟು ಬಂದರಾಯ್ತು. ಮಕ್ಕಳಿಗೆ “ಹೂ ಮುಡಿಯಬೇಡಿ, ಕುಂಕುಮ ಹಚ್ಚಬೇಡಿ’ ಮಾದರಿಯ ಕಾನ್ವೆಂಟ್ ಶಿಕ್ಷಣಕ್ಕಿಂತ ನಮ್ಮ ಹಳ್ಳಿಯ ಗ್ರಾಜುಯೇಟ್‌ಗಳೇ ನಡೆಸುವ ಈ ಶಾಲೆ ಇಷ್ಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದೆ. ಮರ ಕಡಿದು ಬಿಲ್ಡಿಂಗ್ ಎಬ್ಬಿಸುವ ಬದಲು “ಮರಗಿಡಗಳಡಿಯಲ್ಲೇ ಪಾಠ’ದ ಪರಿಕಲ್ಪನೆ ತನ್ನಿ’ ಎಂದು ಹೇಳಿದೆ. ಚೌಡಿಕೊಡ್ಲಿನ ಕಾಡಿನ ಒಂದು ಮರವನ್ನೂ ಕಡಿದಿಲ್ಲ. “ಚೌಡಿಗೆಂದೇ (ಹೆಣ್ಣು ಭೂತ) ಒಂದು ಕಟ್ಟೆ ಮಾಡಿ ಕಾಡಿನ ರಕ್ಷಣೆಗಾಗಿ ನಾವೇ ಮುಂದಾಗಿದ್ದೇವೆ’ ಎಂದು ಯುವಕರು ತಿಳಿಸಿದರು. “ನಿಮ್ಮನ್ನೂ , ಮಕ್ಕಳನ್ನೂ ಚೌಡಮ್ಮ ಸದಾ ರಕ್ಷಿಸಲಿ’ ಎಂದು ಹೇಳಿ ಶಿರಸಿ ಬಸ್ಸು ಹತ್ತಿದೆ.
ಶಿರಸಿ ನಾನು ಕಾಲೇಜು ಓದಿದ ಪಟ್ಟಣ. ಎಪ್ಪತ್ತರ ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಾದರಿ ಶೈಕ್ಷಣಿಕ ಕೇಂದ್ರ. ಆರ್ಟ್ಸ್, ಸೈನ್ಸ್ , ಕಾಮರ್ಸ್ ಮೂರೂ ವಿಭಾಗಗಳಲ್ಲಿ ಉತ್ಕೃಷ್ಟ ಶಿಕ್ಷಣ ನೀಡುವ, ದೈತ್ಯ ಪ್ರತಿಭೆಗಳನ್ನೇ ಉಪನ್ಯಾಸಕರನ್ನಾಗಿ ಹೊಂದಿದ್ದ ಮಲೆನಾಡಿನ ಹೆಮ್ಮೆಯ ಕಾಲೇಜು ಎಂದೇ ಖ್ಯಾತಿ. ಅಲ್ಲಿ ಶಿಕ್ಷಣ ಪಡೆದ ಯುವಕ-ಯುವತಿಯರು ಉಪನ್ಯಾಸಕ ವೃತ್ತಿ, ಬ್ಯಾಂಕು, ಪತ್ರಿಕೋದ್ಯಮ, ಲಾಯರ್, ಕೃಷಿಕ… ಹೀಗೆ ಯಾವುದೇ ಬಗೆಯ ಜೀವನೋಪಾಯವನ್ನೇ ಆರಿಸಿಕೊಂಡೂ ಸುಖದ ಬದುಕು ಕಟ್ಟಿಕೊಳ್ಳಬಲ್ಲಷ್ಟು ಜೀವ ದ್ರವವೊದಗಿಸುವ ತರಬೇತಿ ಸಂಸ್ಥೆ.
ಇಲ್ಲಿಯೂ ಇದೀಗ ವಿದ್ಯಾರ್ಥಿಗಳ ಕೊರತೆ, ಸರ್ಕಾರಿ ಕಾಲೇಜುಗಳ ಸ್ಥಾಪನೆ, ಅರ್ಹ ಉಪನ್ಯಾಸಕರ ನೇಮಕಾತಿ ಸಮಸ್ಯೆ, ಹಣದ ಕೊರತೆಗಳ ಸಮಸ್ಯೆಗಳು ತಲೆ ಎತ್ತಿದ್ದು ಕಾಲೇಜು ಸೊರಗತೊಡಗಿದೆ. ಶಿರಸಿಗೆ ನನ್ನನ್ನು ಆಹ್ವಾನಿಸಿದ್ದು ಲಯನ್ಸ್ ಸಂಸ್ಥೆ ಶಿಕ್ಷಕರ ದಿನಾಚರಣೆಯ ವಿಶೇಷ ಸನ್ಮಾನಕ್ಕಾಗಿ. ಲಯನ್ಸ್ ಶಿಕ್ಷಣ ಸಂಸ್ಥೆ ಈ ಸದ್ಯದ ಭರವಸೆಯ ಶಿಕ್ಷಣ ಕೇಂದ್ರ. ಸುತ್ತಮುತ್ತಲಿನ ಹಳ್ಳಿಗಳಿಂದ ಆಗಮಿಸುವ ಸುಸಂಸ್ಕೃತ ಜಾಣ ಮಕ್ಕಳು, ಸಂಬಳವನ್ನು ಲೆಕ್ಕಿಸದೇ ಪ್ರೀತಿಯಿಂದ ಬೋಧಿಸುತ್ತಿರುವ ಅಧ್ಯಾಪಕ ವರ್ಗ, ವಿದ್ಯಾರ್ಥಿಗಳನ್ನೂ ಶಿಕ್ಷಕರನ್ನೂ ಏಕ ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಲಯನ್-ಲಯನೆಸ್‌ಗಳ ಸಮೂಹ. ಎಲ್ಲ ಶಿಕ್ಷಕರನ್ನೂ ಸನ್ಮಾನಿಸಲಾಯಿತು. ತಂತಮ್ಮ ನೆಚ್ಚಿನ ಶಿಕ್ಷಕ/ಶಿಕ್ಷಕಿಯ ಹೆಸರು ಕರೆದಾಗ “ಹೋ’ ಎಂದು ಅರಚಿ ಸ್ವಾಗತಿಸುವ ವಿದ್ಯಾರ್ಥಿಗಳ ಹುರುಪು… ಸನ್ಮಾನಿಸಲ್ಪಟ್ಟ ಪಿ.ಟಿ. ಮೇಡಂ ನಡುವೆಯೇ ಇಳಿದು ಹೋಗಿ ಸೀಟಿ ಬಾರಿಸಿದಾಗ ನಿಶ್ಶಬ್ದವಾದ ಮಕ್ಕಳ ಸಮೂಹ, ಮುಗ್ಧ ಸಂಭ್ರಮದ ವಾತಾವರಣ ಶಾಲೆಗಳಲ್ಲಿ ಮಾತ್ರ ಕಂಡುಬರುವ ದೃಶ್ಯ.
ನಿಂಗೆ ಈ ಶಾಲೆ ಇಷ್ಟವಾ?
ಆ ಶಾಲೆಯ ಮೂರನೆಯ ಕ್ಲಾಸಿನ ಮಗುವೊಂದನ್ನು ಮಾತಾಡಿಸಿದೆ. “ನಿಂಗೆ ಈ ಶಾಲೆ ಇಷ್ಟವಾ?’ ಎಂದು ಕೇಳಿದೆ. “ಹೌದೂ——’ ಎಂದಿತು ಮುದ್ದಾಗಿ. “ಯಾಕೆ?’ ಎಂದು ಕೇಳಿದೆ. ಕೊಟ್ಟ ಉತ್ತರ ಕೇಳಿ ಖುಷಿಯಾಯ್ತು. “ಮಿಸ್‌ನವರು ನಮ್ಮನ್ನು ಪ್ರೀತಿ ಮಾಡ್ತಾರೆ. ಬರೀ ಪಾಠ ಪಾಠ ಅಂತ ಬೋರ್ ಹೊಡೆಸಲ್ಲ. ಆಟ ಆಡಿಸ್ತಾರೆ, ಡ್ಯಾನ್ಸ್ , ಸಂಗೀತ, ಯಕ್ಷಗಾನ ಯಾವುದೂ ಬೇಕಾದ್ರೂ ಕಲೀಬಹುದು. ಎಲ್ಲರನ್ನೂ ಒಂದೇ ರೀತಿ ನೋಡ್ಕೊತಾರೆ’ ಎಂದೆಲ್ಲ ಹೇಳಿತು. ಮಗುವಿನ ಈ ಯಾರೂ ಕಲಿಸಿಲ್ಲದ ಅಭಿಪ್ರಾಯದ ಸರ್ಟಿಫಿಕೇಟನ್ನು ನನ್ನ ಭಾಷಣದಲ್ಲಿ ನಮೂದಿಸಿದೆ.
ಮರಳಿ ಬಂದವಳು ನನ್ನ ಕಾಲೇಜಿಗೆ ಹೋದೆ. ಓಡೋಡುತ್ತ ಹೋಗಿ ರೂಢಿ. ನಿಧಾನವಾಗಿ ಬೆಲ್ಲು ಆದರೂ ಚೂರು ಗಾಬರಿಯಾಗದೇ ಹೆಜ್ಜೆ ಹಾಕುತ್ತ ಹೋಗಿ ಪ್ರಿನ್ಸಿಪಾಲರಿಗೆ ವಂದಿಸಿದೆ. (ನಿವೃತ್ತ ಠೀವಿಯ ಹೆಜ್ಜೆ ಎಂದು ಇನ್ನೂ ಮೂರು ವರ್ಷ ದುಡಿಯಬೇಕಿರುವ ಸಹೋದ್ಯೋಗಿ ಸ್ನೇಹಿತೆ ಛೇಡಿಸಿದಳು) ಯಾರಿಗೂ ಪುರುಸೊತ್ತಿಲ್ಲ. ಆಂತರಿಕ ಮೌಲ್ಯಮಾಪನ ಪರೀಕ್ಷೆ, ಮೌಲ್ಯಮಾಪನ ಕ್ರಿಯೆ, ವಿದ್ಯಾರ್ಥಿ ಸಂಘದ ಉದ್ಘಾಟನೆ, ಸ್ಥಾಪಕರ ದಿನಾಚರಣೆ, ಶಿಕ್ಷಕ-ರಕ್ಷಕ ಸಂಘದ ಸಭೆ ಎಂದು ವೇಳಾಪಟ್ಟಿ ಎದುರಿಡುತ್ತಿದ್ದಂತೆಯೇ “ಬತೇìನೆ ಸಾರ್’ ಎನ್ನುತ್ತ ಪ್ರಾಂಶುಪಾಲರ ಚೆೇಂಬರಿನಿಂದ ಹೊರಬಂದು ಆಫೀಸಿಗೆ ಹೋಗಿ ವೃತ್ತಿಯುದ್ದಕ್ಕೂ ನನ್ನ ನಗುವಿನಲ್ಲಿ ಭಾಗಿಯಾದ ಬಂಧು ಕೃಷ್ಣ ಶೆಟ್ಟಿಗಾರರ ಹತ್ತಿರ “ಚೆನ್ನಾಗಿದ್ರಾ’ ಎಂದೆ. “ಕಾಂತಿಲ್ಯ? ಮಂಡೆ ಬಿಸಿ ಮಾಡ್ಕೊಳ್ಳದೆ ನನ್ನ ಪಾಡಿಗೆ ನಾ ಕೆಲ್ಸ ಮಾಡ್ಕಂಡಿದ್ದೆ’ ಎಂದು ಅದೇ ನಗುಮಿಶ್ರಿತ ಶೈಲಿಯಲ್ಲಿ ಉತ್ತರಿಸಿದ. ಎದುರಲ್ಲಿ ಅದೆಂಥದೇ ಫೈಲಿರಲಿ, ಅದಕ್ಕೊಂದು ಗತಿ ಕಾಣಿಸಿಯೇ ಮನೆಗೆ ಹೋಪುದು ಎನ್ನುವ ಉತ್ಸಾಹಿ ಕಾಮಗಾರಿ ಆತನದು. ಕೊನೆಯಲ್ಲಿ ಹತ್ತಿದ್ದು ಗೋಲಗುಂಬಜ್ ಎಕ್ಸ್ ಪ್ರಸ್-ಬಿಜಾಪುರದಲ್ಲಿರುವ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಆವರಣಕ್ಕೆ. ಸ್ನೇಹಿತೆ ಸಬೀಹಾ ಕುಲಪತಿಯಾಗಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಹೋಗುತ್ತಿದ್ದಂತೆ ಎದುರಾದವರು ಹೊಸ ಕನಸುಗಳೊಂದಿಗೆ ಹೊಸ ಕೋರ್ಸುಗಳನ್ನು ಆಯ್ದುಕೊಂಡು ಹೊಸದಾಗಿ ಸೇರಿರುವ ವಿದ್ಯಾರ್ಥಿನಿಯರು.
ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳು, ಅವುಗಳ ನಿರ್ಮಾಣ-ನಿರ್ವಹಣೆಯ ವೆಚ್ಚ , ವಿದ್ಯಾರ್ಥಿ ಸಮುದಾಯದ ಉಚ್ಚ ಉನ್ನತ ಶಿಕ್ಷಣಕ್ಕೆ ಸರ್ಕಾರ ವ್ಯಯಿಸುತ್ತಿರುವ ವೆಚ್ಚ , ಯೋಜನೆ, ಆಡಳಿತಾತ್ಮಕ ವ್ಯವಹಾರಗಳು, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮೊದಲಾದ ಸಂಗತಿಗಳನ್ನು ಚರ್ಚಿಸುತ್ತ ಕ್ಯಾಂಪಸ್ ವಾಕ್ ಮಾಡುತ್ತ ಕತ್ತಲೆಯಾಗಿ ರಾತ್ರಿ ಹತ್ತು ಕಳೆದದ್ದೂ ತಿಳಿದಿರಲಿಲ್ಲ. ಕುಲಪತಿಯಾಗಿದ್ದು ಮಹಿಳಾ ವಿಶ್ವವಿದ್ಯಾಲಯಕ್ಕಾದರೂ, ಕುಲಪತಿ ಸಬೀಹಾರದ್ದು ಇಡೀ ಯುವ ಸಮುದಾಯದ ಹಿತದ ಕುರಿತೇ ಯೋಚನೆ-ಯೋಜನೆ. ನಮ್ಮ ಯುವಕರು ಉನ್ನತ ಶಿಕ್ಷಣ ಹಂತಕ್ಕೆ, ಸಂಶೋಧನಾ ಕಾರ್ಯದ ಮಟ್ಟಕ್ಕೆ ಬರುವಷ್ಟರಲ್ಲಿಯೇ ಕುಟುಂಬದ ಜವಾಬ್ದಾರಿಯ ನೊಗಕ್ಕೆ ಹೆಗಲೊಡ್ಡಿ ಬಿಡುತ್ತಾರೆ. ಡಿಪ್ಲೊಮಾ ಮುಗಿಸಿ ಸಿಕ್ಕ ನೌಕರಿ ಸೇರಿ ಕುಟುಂಬಕ್ಕೆ ಆದಾಯ ಮೂಲವೊದಗಿಸುವ ಯುವಕರದ್ದೇ ಒಂದು ಬಗೆಯಲ್ಲಿ ಅವಕಾಶವಂಚಿತ ವರ್ಗ. ಯುವತಿಯರೂ ಅಷ್ಟೆ , ಡಿಗ್ರಿ, ಸ್ನಾತಕೋತ್ತರ ಪದವಿಗಳ ನಂತರವೂ ಸಂಶೋಧನೆಯಲ್ಲಿ ಆಸಕ್ತಿ ತೋರಲಾರದ ಆರ್ಥಿಕ ಸ್ಥಿತಿ. ಕಲಿಕೆಗೂ ಆದಾಯ ಗಳಿಕೆಗೂ ಇರುವ ಸಂಬಂಧವೇ ಇದಕ್ಕೆ ಕಾರಣ. ಉದ್ಯೋಗಕ್ಕಾಗಿ ಓದು, ಆತ್ಮತೃಪ್ತಿಗಾಗಿ ಕಲಿಕೆ-ಪರಿಕಲ್ಪನೆಯ ಕನಸಿದೆ ಎಂದರು. “ಹೊಟ್ಟೆಪಾಡಿಗಾಗಿ ಓದಿ’ನ ಪರಿಕಲ್ಪನೆಯಲ್ಲಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಕಾರಣವಾಗುವ ಸಾಹಿತ್ಯ, ಸಂಗೀತ, ಕಲೆ, ನೃತ್ಯ, ನಾಟಕ, ಯಕ್ಷಗಾನಗಳ ಕಲಿಕೆಗೆ ಸಮಯವೂ ಇಲ್ಲ. ಅವುಗಳು ನಿರರ್ಥಕ ಎಂಬ ಭಾವನೆಯೂ ಬಲವಾಗುತ್ತಿದೆ. ಯುವಕ-ಯುವತಿಯರನ್ನು ಸಮಯ ಮೀರಿ ದುಡಿಸಿಕೊಳ್ಳುವ ಖಾಸಗಿ ಕಂಪೆನಿಗಳೆದುರು ಯುವಶಕ್ತಿಯ ಸದ್ಬಳಕೆ ಇತ್ಯಾದಿ ಪದಪ್ರಯೋಗ ಮಾಡಿದರೆ ಪಕ ಪಕ ನಕ್ಕಾವು. ಅವುಗಳದ್ದೇನಿದ್ದರೂ ಸ್ಫರ್ಧೆ, ಲಾಭ, ಟಾರ್ಗೆಟ್, ಸಮಯ ಮಿತಿಯೊಳಗೆ ಯೋಜನೆ ಮುಗಿಸುವ ಧಾವಂತ, ಕಂಪೆನಿಗಳ ವ್ಯವಹಾರ ವಿಸ್ತರಣೆ… ಎಂಬ ವ್ಯಾವಹಾರಿಕ ಪದಪುಂಜಗಳು ಮಾತ್ರ.
ನಮ್ಮ ದೇಶದ ಯುವಶಕ್ತಿ ಬಸವಳಿಯು ತ್ತಿದೆಯೆ? ಆರ್ಥಿಕವಾಗಿ ಸದೃಢವಾಗಬೇಕೆಂಬ ಏಕಮೇವ ಧಾವಂತದಲ್ಲಿ ಮಾನಸಿಕವಾಗಿ, ಕೌಟುಂಬಿಕವಾಗಿ ಸೊರಗುತ್ತಿದೆಯೆ ಎಂಬ ಸಾಮಾಜಿಕ ಭಯ ಕಾಡುವುದು ಸಹಜವಲ್ಲವೆ?
ಭುವನೇಶ್ವರಿ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.