ಉಪನಿಷತ್ತುಗಳ ಹತ್ತಿರದಿಂದ
ಕೇಳುವುದು ಎಂದರೆ ನೋಡುವುದು
Team Udayavani, Jun 1, 2019, 6:00 AM IST
ಉಪನಿಷತ್ತುಗಳನ್ನು ಅನುಭಾವ ಸಾಹಿತ್ಯವೆನ್ನಬಹುದು. “ಅನುಭಾವ’ ಎಂಬ ಪದ ಕನ್ನಡದಲ್ಲಿ ಬಳಕೆಯಲ್ಲಿರುವ ಪದ. ವಚನ ಸಾಹಿತ್ಯ, ದಾಸ ಸಾಹಿತ್ಯಗಳನ್ನು ಅನುಭಾವ ಸಾಹಿತ್ಯ ಎನ್ನುತ್ತಾರೆ. ಪುರಂದರ, ಕನಕರ ಸಾಹಿತ್ಯವನ್ನು ಪುರಂದರೋಪನಿಷತ್, ಕನಕೋಪನಿಷತ್ ಎಂದೇ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಕೃತಿಗಳಲ್ಲಿ ಕರೆದಿದ್ದಾರೆ. ಅನುಭಾವ ಸಾಹಿತ್ಯವೆಂದರೆ ನಡೆ-ನುಡಿ ಒಂದೇ ಆದ ಸಾಹಿತ್ಯ ಎನ್ನಬಹುದು. ನಡೆ-ನುಡಿ ಒಂದಾಗಿರುವುದು ಎಂಬ ಮಾತು ಬಹು ಸರಳವಾಗಿ ಕೇಳಿಸುತ್ತದೆ. ನಿಜ. ಆದರೆ ಇದು ಎಷ್ಟು ಕಷ್ಟ; ಎಷ್ಟು ಸಂಕೀರ್ಣ ಮತ್ತು ಎಷ್ಟು ವಿವಿಧ ಆಯಾಮಗಳುಳ್ಳದ್ದು ಎಂದು ಬಲ್ಲವರೇ ಬಲ್ಲರು! ನಡೆ-ನುಡಿ ಒಂದಾಗುವ ಅನುಭವದಲ್ಲಿ ಬದುಕಿನ ರಹಸ್ಯವೇ ಅಡಗಿದೆ. ಉಪನಿಷತ್ತುಗಳ ಹಿನ್ನೆಲೆಯಲ್ಲಿ ನಡೆ-ನುಡಿ ಒಂದಾಗಿರುವುದು ಎಂದರೇನೆಂದು ಅರ್ಥಮಾಡಿಕೊಳ್ಳುವ ನಮ್ರ ಪ್ರಯತ್ನವನ್ನು ಮಾಡುವೆ.
ಉಪನಿಷತ್ತುಗಳಿಗಿರುವ ಒಂದು ಶ್ರದ್ಧೆ ಎಂದರೆ- ಒಂದು ಅನುಭವವನ್ನು ಹೇಗೆ ಹೇಳಿದ್ದಾರೋ ಹಾಗೆಯೇ ಅದನ್ನು ಕೇಳಿದರೆ, ಹೇಳಿದವರ ಅನುಭವವು ಕೇಳಿದವರಲ್ಲಿ ಸಂಕ್ರಾಂತಗೊಳ್ಳುವುದು ಎಂಬ ಶ್ರದ್ಧೆ ! ತಾನು ಹೇಗೆ ಹೇಳಿದ್ದೇನೋ, ಯಾವ ಭಾವಾವಸ್ಥೆಯಲ್ಲಿ ಹೇಳಿದ್ದೇನೋ ಆ ಭಾವಾವಸ್ಥೆಯು- ತಾನು ಹೇಳಿದ ಮಾತುಗಳಲ್ಲಿ ಜೀವಂತವಾಗಿದೆ! “ಜೀವಂತ’ವಾದುದನ್ನು ಕೇಳಿದರೆ ಕೇಳಿದವರು ಅದರ ಪರಿಣಾಮಕ್ಕೆ ಒಳಗಾಗಲೇಬೇಕು. ಅಂದರೆ ಅವರೂ ಆ ಜೀವಂತಿಕೆಯ ಭಾಗವಾಗುವರು. ಪಾಲುದಾರರಾಗುವರು. ಅನುಭವದ ಮಾತು ಅನುಭವವನ್ನು ಉಂಟುಮಾಡಲೇಬೇಕು. ಹಾಗೆ ಮಾಡದೇ ಇದ್ದರೆ ಅದು ಅನುಭವದ ಮಾತು ಎಂದು ಕಂಡುಕೊಳ್ಳುವುದಾದರೂ ಹೇಗೆ? ಹೇಳುವುದು ಮತ್ತು ಕೇಳುವುದು ಒಂದೇ “ಸತ್ಯ’ದ ಎರಡು ಮುಖಗಳಲ್ಲವೆ? ಇದನ್ನೊಪ್ಪಿದರೆ, ಆ ಎರಡು ಮುಖಗಳೂ ತನ್ನದೇ ಆದುದರಿಂದ, “ಸತ್ಯ’ವು ತನ್ನನ್ನೇ ತಾನು ನೋಡುತ್ತಿದೆ, ತನ್ನನ್ನೇ ತಾನು ಕೇಳುತ್ತಿದೆ ಎನ್ನಬಹುದು. ಉಪನಿಷತ್ತು ಈ ಸ್ಥಿತಿಯನ್ನು “ಪ್ರತ್ಯಕ್‌ದೃಷ್ಟಿ’ ಎಂದು ಕರೆಯುವುದು. ಅಂದರೆ ತನ್ನಲ್ಲೇ ಒಳಮುಖಗೊಂಡ ಇಂದ್ರಿಯಗಳ ಅನುಭವ ಎಂದು. ತನ್ನನ್ನೇ ನೋಡುತ್ತಿದೆ, ತನ್ನನ್ನೇ ಕೇಳುತ್ತಿದೆ ಎಂದಾಗ ಅದು ಇಡಿಯಾದ ಅನುಭವ. ಅಖಂಡವಾದ ಅನುಭವ.
ಲೋಕದಲ್ಲಿ ಅಂದರೆ ನಮ್ಮೆಲ್ಲರಲ್ಲೂ ಈ ಸ್ಥಿತಿಯ ಇನ್ನೊಂದು ಮುಖ ಅನುಭವವಾಗುತ್ತಿದೆ. ಅದೆಂದರೆ, ನಾವು ನಮ್ಮಲ್ಲೇ ರತರು. ಸ್ವ-ರತರು. ನಮ್ಮನ್ನೇ ಮತ್ತೆ ಮತ್ತೆ ನೋಡಬಯಸುವವರು. ನಮ್ಮ ಮಾತನ್ನೇ ಮತ್ತೆ ಮತ್ತೆ ಕೇಳಬಯಸುವವರು. ನಮ್ಮ ಅನುಭವದಲ್ಲಿರುವ ಈ ಸ್ವ-ರತಿಯ ಸ್ಥಿತಿ-ಮೇಲೆ ಸೂಚಿಸಿದ ಇಡಿಯಾದ ಅನುಭವದ ಮೂಲ ಆಧ್ಯಾತ್ಮಿಕ ಸ್ಥಿತಿಯ ವಿಕೃತಗೊಂಡ ಅನುಕರಣೆಯಾಗಿದೆ. ಇಂಗ್ಲಿಶ್‌ನಲ್ಲಿ ಟsಛಿuಛಟ (ಸ್ಯೂಡೋ) ಎನ್ನುತ್ತಾರಲ್ಲ- ಒಂದು ನೆರಳಿನಂಥ, ನಿಜವಲ್ಲದ, ಪೊಳ್ಳಾದ, ಹುಸಿಯಾದ, ಇದು ಸರಿ ಇಲ್ಲ ; ಇಲ್ಲೇನೋ ತಪ್ಪಾಗಿದೆ, ಇದರ ಮೂಲ ಬೇರೆಯೇ ಇರಬಹುದು ಎಂಬುದನ್ನು ಸೂಚಿಸುವ ರೀತಿಯ ವಿಕಾರವಿದು. ವಿಕಾರವೆಂದರೂ ಮೂಲದ ಕಡೆಗೆ ಒಂದು ವಿಲಕ್ಷಣವಾದ ರೀತಿಯಲ್ಲಿ ಸೂಚನೆಯೂ ಹೌದು. ಇದೀಗ ಆಶ್ಚರ್ಯ. ಲೋಕದ ಎಲ್ಲ ವಿಕಾರಗಳೂ ಮೂಲ ಆಧ್ಯಾತ್ಮಿಕ ಸ್ಥಿತಿಯಂತೆಯೇ ಕಾಣಿಸುವ ಆದರೆ, ಅದಲ್ಲದ ವಿಕಾರಗಳಾಗಿರುವುದು! ನಿಜವಾಗಿ ಅದಲ್ಲದೆ, ಅದರಂತೆ ಕಾಣಿಸುವ ಪ್ರಯತ್ನವೇ, ಪ್ರಯತ್ನಪೂರ್ವಕ ಅದರಂತೆ ಕಾಣಿಸುವ ಬಯಕೆಯೇ ಎಲ್ಲ ವಿಕಾರಗಳ ಮೂಲ. ಆದರೆ, ಇಲ್ಲೊಂದು ಅಚ್ಚರಿ ಇದೆ. ಎಲ್ಲರಿಗೆ ತಿಳಿದಿದ್ದು ಎಲ್ಲರ ಮುಂದೆ ಇನ್ನೊಂದರಂತೆ ನಟಿಸಿದರೆ ಅದು ಕಲೆ ! ಅದು ಪ್ರತಿಭೆ ! ತಾನು ದೈವಾಂಶ ಸಂಭೂತನೆಂದೋ- ಇನ್ನೇನೋ- ಇತರರನ್ನು ನಂಬಿಸ ಹೊರಟರೆ ಅದು ವಿಕಾರ! ಈ ಮಾತಿರಲಿ. ಉಪನಿಷತ್ತಿಗೆ- ತನ್ನನ್ನು ಅನುಕರಿಸಿ ಸ್ವ-ರತಿಯಲ್ಲಿ ಈಗಾಗಲೇ ಮುಳುಗಿರುವ ಜೀವ, ನಿಜವಾಗಿಯೂ ತನಗೆ ಸ್ಪಂದಿಸಿ, ತನ್ನ ಅನುಭವವನ್ನೇ ತಾನು ಪಡೆದುಕೊಳ್ಳುವುದು ಎಷ್ಟು ಹೊತ್ತಿನ ಮಾತು! ಎಂದು ಕಾಯುವ ಶ್ರದ್ಧೆ ! ಹುಮ್ಮಸ್ಸು.
ತನ್ನನ್ನೇ ತಾನು ನೋಡುತ್ತಿದೆ; ಕೇಳುತ್ತಿದೆ ಎಂಬ ಎಲ್ಲ ಇಂದ್ರಿಯಗಳಿಂದಲೂ ತನ್ನ ಅನುಭವವನ್ನೇ ತಾನು ಮರಳಿ ಪಡೆದುಕೊಳ್ಳುತ್ತಿದ್ದೇನೆ ಎಂಬ “ಸತ್ಯ’ದ ಈ ಇಡಿಯಾದ ಅನುಭವವೇ ನಡೆ-ನುಡಿಗಳೊಂದಾಗಿ ಇರಬೇಕೆನ್ನುವ ಪರಿಕಲ್ಪನೆಗೆ ಮೂಲವಾಗಿದೆ. ಸತ್ಯದ ಸ್ಥಿತಿಯಲ್ಲಿ ನಡೆ-ನುಡಿಗಳೊಂದಾಗಿಯೇ ಇವೆ. ತನ್ನಲ್ಲಿ ತಾನು ಇಡಿಯಾಗಿರುವಲ್ಲಿ- ಆ ಅರಿವಿನಲ್ಲಿ- ಎಲ್ಲ ಇಂದ್ರಿಯಗಳೂ ತಮ್ಮ ಬೇರೆತನವನ್ನು ಬಿಟ್ಟುಕೊಟ್ಟು , ಲೋಕದಲ್ಲಿ ಕಾಣಿಸುವಂತೆ ತಮ್ಮ ಮಿತಿಯನ್ನು , ಕಟ್ಟುಗಳನ್ನು ದಾಟಿಬಿಡುತ್ತವೆ! ವ್ಯಾಪ್ತಿ ಪ್ರದೇಶದ ಹೊರಗಿದ್ದೂ ಅವು ಗುಣುಗುಣಿಸಬಲ್ಲವು! ಉಪನಿಷತ್ತು ಇಂದ್ರಿಯಗಳ ಈ ಮುಕ್ತ ಸ್ಥಿತಿಯನ್ನು ಇನ್ನೊಂದು ರೀತಿಯಲ್ಲಿ ನಮ್ಮ ಮುಂದಿಡುತ್ತವೆ. ಅದೆಂದರೆ, “ಅವನು ಕಣ್ಣಿಲ್ಲದೆ ನೋಡಬಲ್ಲ , ಕಿವಿ ಇಲ್ಲದೆ ಕೇಳಬಲ್ಲ’ ಇತ್ಯಾದಿಯಾಗಿ ಅದು ಮುಕ್ತ ಸ್ಥಿತಿಯನ್ನು ಬಣ್ಣಿಸುತ್ತದೆ. ಅವನು ಕಣ್ಣಿನಿಂದ ಕೇಳಬಲ್ಲ, ಕಿವಿಯಿಂದ ನೋಡಬಲ್ಲ ಎಂದು ಹೇಳುತ್ತ ನಮ್ಮ ತರ್ಕಬದ್ಧತೆಯನ್ನು ಇಡಿಯಾಗಿ ಕಡೆಗಣಿಸುವಂತೆ ನುಡಿಯುವುದೂ ಅದಕ್ಕೆ ಇಷ್ಟವೇ. ಅದು ಅನುಭಾವ. ತನ್ನಲ್ಲೇ ತಾನಿರುವ ಇಡಿಯಾದ ಸ್ಥಿತಿಯು ಲೋಕ ಜೀವನದಲ್ಲಿ ನಾವು ಮಾಡಿಕೊಂಡ ನಮ್ಮ ಅನುಕೂಲ ತರ್ಕದ ಬೇಲಿಯನ್ನು ಮುರಿಯದೆ ಇರಲಾರದು. ಹಾಗೆ ನೋಡಿದರೆ, ನಮ್ಮ ಸ್ವರತಿಯೆ ಟsಛಿuಛಟ ಸ್ಥಿತಿಯಲ್ಲೂ ಯಾವ ತರ್ಕವೂ ಇಲ್ಲವಲ್ಲ ! ಅಯ್ಯೋ ತರ್ಕದ ಪಾಡೇ!
ಕೇಳ್ಮೆ ಎಂದರೆ ನೋಟದ ಇನ್ನೊಂದು ಬಗೆ
ನೋಡುವುದು-ಕೇಳುವುದು ಎಂಬ ಇಂದ್ರಿಯ ವ್ಯಾಪಾರಗಳು- ಕಂಡಂತೆ ಬದುಕಿಗೆ ಬಹುಮುಖ್ಯವಾದ ವ್ಯಾಪಾರಗಳು- ತಮ್ಮ ವಿಶಿಷ್ಟತೆಯನ್ನು ಬಿಟ್ಟುಕೊಟ್ಟು , ಪರಸ್ಪರ ಕಲಸಿಕೊಂಡು, ಸಾಧಾರಣೀಕರಣಗೊಂಡ ಅನುಭವವೇ ಇಡಿಯಾದ ಅನುಭವ. ಇದೇ ನಡೆ-ನುಡಿಗಳೊಂದಾದ ಸ್ಥಿತಿಯ ಮೂಲ ಹೊಳಹು. ನುಡಿಯುವುದರ ಬಗ್ಗೆ ಬಹು ಕಾಳಜಿಯುಳ್ಳ ಬಸವಣ್ಣ ತಮ್ಮೊಂದು ವಚನದಲ್ಲಿ- ಈ ವಚನ ಬಹು ಪ್ರಸಿದ್ಧ- ನುಡಿದರೆ ಮುತ್ತಿನ ಹಾರದಂತಿರಬೇಕು ಎನ್ನುತ್ತಾನೆ. ಉಪಮಾನಗಳು ಅದ್ಭುತವಾಗಿವೆ. ಆದರೆ, ಎಲ್ಲವೂ ನೋಟಕ್ಕೆ ಸಂಬಂಧಿಸಿದ ಕಣ್ಣು ಕೋರೈಸುವ ಉಪಮಾನಗಳು. ಮುತ್ತಿನ ಹಾರದಿಂದ ಸ್ಫಟಿಕದ ಶಲಾಕೆಯವರೆಗೆ ನೋಟದ ಪ್ರಖರತೆ ಹೆಚ್ಚಾಗುತ್ತ ಹೋಗುತ್ತದೆ. ನುಡಿಯನ್ನು ಕೇಳುವ ಕಿವಿಯ ಅನುಭವವನ್ನು ಬೆಳಗುವ ವಸ್ತುಗಳನ್ನು ನೋಡುವ ಕಣ್ಣಿನ ಅನುಭವದೊಂದಿಗೆ ಹೋಲಿಸುತ್ತ ಕೇಳ್ಮೆ ಎಂದರೆ ನೋಟದ ಇನ್ನೊಂದು ಬಗೆ ಎಂಬ ಎಚ್ಚರವನ್ನು ಈ ವಚನ ಉಂಟುಮಾಡುತ್ತದೆ. ಕೊನೆಯಲ್ಲಿ ಮತ್ತೆ, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು ಎನ್ನುವ ಲಿಂಗದ ಮಾತುಗಳನ್ನು ಕೇಳಲು ಸಾಧ್ಯವಾಗುವ, ಕಿವಿಯ ಸೂಕ್ಷ್ಮದಲ್ಲಿ , ಇಂದ್ರಿಯ ವ್ಯಾಪಾರಗಳೆಲ್ಲ ಸಮರಸಗೊಂಡು ಏಕಾಕಾರವಾಗುವ ಅನುಭವವಿದೆ.
ವಾಕ್ಕನ್ನು ವೈದಿಕರು “ಅಗ್ನಿ’ ಎಂದು ಕರೆದಿದ್ದಾರೆ. ಕಣ್ಣನ್ನು ಹಾಗೆ ಕರೆದಿಲ್ಲವೆಂದಲ್ಲ. ಬೆಳಕನ್ನು ನಿಟ್ಟಿಸಬಲ್ಲ ಕಣ್ಣು ತಾನೊಂದು ಬೆಳಕಿನ ಕಿಡಿಯೇ ಎಂಬುದನ್ನವರು ಹೇಳಿಲ್ಲವೆಂದಲ್ಲ. ಕಣ್ಣು ತೇಜಸ್ಸಿನ ಸಂಬಂಧ ಹೊಂದಿರುವುದನ್ನವರು ಬಲ್ಲವರೇ. ಆದರೆ ಜೊತೆಗೆ ಮಾತನ್ನು “ಅಗ್ನಿ’ ಎಂದು ಸಾಂಕೇತಿಕವಾಗಿ ಹೇಳಿದರು. “ಮಾತೆಂಬುದು ಜ್ಯೋತಿರ್ಲಿಂಗ’ ಎಂದು ವಚನಕಾರರು ಹೇಳಿಲ್ಲವೆ? ಹಾಗೆ. ಮಾತೆಂಬುದು ಇನ್ನೊಂದು ರೀತಿಯ ಬೆಳಕು. ಅಗ್ನಿಯ ಇನ್ನೊಂದು ಬಗೆ. ಕಿವಿ ಅನುಭವಿಸಬಲ್ಲ ಬೆಳಕಾಗಿ ಮಾತು-ಅರ್ಥಗಳ ಪ್ರಪಂಚವಿದೆ. ಇಂದ್ರಿಯಗಳ ನಡುವಿನ ಭಿನ್ನತೆಯನ್ನು ಅನುಭವಿಸುವ ಪಾಡಾಗಿ ಲೌಕಿಕವಾದ ಬದುಕು ನಡೆದಿದ್ದರೆ ಇಂದ್ರಿಯಗಳ ನಡುವಿನ ಏಕತೆಯನ್ನು ಸಮರಸತೆಯನ್ನು ಅನುಭವಿಸುವುದಕ್ಕಾಗಿ, ಆ ಮೂಲಕ ನಮ್ಮನ್ನೇ ನಾವು ಇಡಿಯಾಗಿ ಅನುಭವಿಸುವುದಕ್ಕಾಗಿ, ನಡೆ-ನುಡಿಗಳೊಂದಾಗಿಯೇ ಇರುವುದನ್ನು ಒಳಮುಖವಾದ ಇಂದ್ರಿಯಗಳ ಮೂಲಕ ನಾವೇ ತಿಳಿಯುವುದಕ್ಕಾಗಿ- ಉಪನಿಷತ್ತುಗಳ ಮಾತು ನಡೆದಿದೆ.
ಹೌದು. ಉಪನಿಷದ್ವಾಣಿಯನ್ನು ಅ-ಪೌರುಷೇಯ ಎಂದು ಕರೆದಿದ್ದಾರೆ. ಯಾರೂ ರಚಿಸಿದ್ದಲ್ಲ , ಅದುವರೆಗೆ ಇಲ್ಲದೇ ಇದ್ದುದನ್ನು ಯಾರೋ ಒಂದು ಶುಭ ಮುಹೂರ್ತದಲ್ಲಿ ಉಂಟುಮಾಡಿದ್ದಲ್ಲ, ರಚಿಸುವ ಅಗತ್ಯವೇ ಇಲ್ಲದೆ ತಾನಾಗಿ ಇರುವ ಜ್ಞಾನಕಾಶಿ ಎಂಬರ್ಥದ ಪದ ಅದು- ಅಪೌರುಷೇಯ- ಎಂಬುದು. ಅದಿರಲಿ. ಪ್ರಜ್ಞಾಪೂರ್ವಕವಾಗಿ ರಚಿಸುವ ಸಾಹಿತ್ಯ ಕೃತಿಗಳಿಗೂ ಕೂಡ ಆಳದಲ್ಲಿರುವ ಆಸೆ ಯಾವುದೆಂದರೆ ಆಶ್ಚರ್ಯವಾಗುತ್ತದೆ- ತಾವು ರಚನೆಯಾದ ಸಂದರ್ಭ, ಸಮಕಾಲೀನತೆ-ಪ್ರಭಾವ ಇವುಗಳನ್ನೆಲ್ಲ ಮೀರಿ, ತಾವು ಅದು ಹೇಗೋ ಸಂಭವಿಸಿದೆವು ಎಂಬ ಸದ್ಯೋಜಾತ ಸ್ಥಿತಿಯನ್ನು ಮುಟ್ಟಬೇಕೆಂಬುದೇ. ಆರ್ಚಿಬಾಲ್ಡ್ ಮ್ಯಾಕ್‌ಲೀಕ್ ಎನ್ನುವವನು ಹೀಗೆ ಹೇಳಿದನಂತೆ. ಅವನ ಮಾತನ್ನು ಅನಂತಮೂರ್ತಿಯವರು ಒಂದು ಕವಿತೆ ಮಾಡಿದ್ದಾರೆ. “ಪದ್ಯ ಪದವಿಲ್ಲದಿರಬೇಕು, ಹೆಜ್ಜೆಗುರುತು ಇಲ್ಲದೆ ಪಕ್ಷಿ ಹಾರುವಂತೆೆ. ಕಾಲದಲ್ಲಿ ಸ್ತಬ್ಧ ಎನ್ನಿಸಬೇಕು, ಏರುತ್ತಿರುವ ಚಂದ್ರನಂತೆ. ಹೇಳಕೂಡದು, ಇರಬೇಕು’ ಎಂದು. ಈ ಮನಸ್ಸು ಉಪನಿಷತ್ತಿಗೆ ಹತ್ತಿರ ಇದೆ. “ಇರಬೇಕು’ ಎಂದಾಗ “ಇರಬೇಕು ಮತ್ತು ಇಲ್ಲದಿರಬೇಕು’ ಎಂದಿದ್ದರೆ ಉಪನಿಷತ್ತಿಗೆ ಇನ್ನಷ್ಟು ಹತ್ತಿರವಾದಂತೆ. “ಅಪೌರುಷೇಯ’ ಎನ್ನುವ ಮಾತಿಗೆ, ಮಾಡಿದ್ದಲ್ಲ ಇರುವಂಥದು ಎಂಬರ್ಥದ ಜೊತೆಗೆ ನೀನೂ ಹಾಗೇ ಇದ್ದರೆ ಅಂದರೆ ನನಗೊಂದು ಸ್ವತಂತ್ರ ವ್ಯಕ್ತಿತ್ವವಿದೆ, ಇಂದ್ರಿಯಬದ್ಧವಾದ ಈ ಜೀವನ ನಾನು ಮಾಡುತ್ತಿರುವುದು ನನ್ನದಿದು ಎಂಬ ಪೌರುಷೇಯ ನೆಲೆಯನ್ನು ತುಸು ಸಂದೇಹಿಸಿ ನೀನು ಸ್ಪಂದಿಸುವುದಾದರೆ ಉಪನಿಷತ್ತು ನಿನ್ನದೇ ಆಗಿಬಿಡುತ್ತದೆ, ಯಾರೂ ಮಾಡಿದ್ದಲ್ಲದ್ದು ಯಾರದ್ದೂ ಆಗಿಬಿಡಬಹುದು ಎಂಬ ಅನುಭಾವದ ಅರ್ಥವೂ ಹೊಳೆಯುತ್ತದೆ!
ಯಾರೂ ಮಾಡಿದ್ದಲ್ಲ ಎಂಬರ್ಥದ ಪದವೇ ಅದನ್ನು ಕೇಳಿದವರಲ್ಲಿ ಸ್ವ-ಕತೃìತ್ವ ಭಾವವನ್ನು ಕಳಚಬಲ್ಲುದು. ಅಂದರೆ ತನ್ನಂತೆ ಮಾಡಿಕೊಳ್ಳಬಲ್ಲುದು. ತನ್ನ ಸ-ಹೃದಯರನ್ನು ತಾನೇ ಸೃಷ್ಟಿಸಿಕೊಳ್ಳಬಲ್ಲುದು. ನುಡಿ, ತನಗುಚಿತ-ಅನುರೂಪ-ನಡೆಯನ್ನು ಸೃಷ್ಟಿಸಬಲ್ಲುದು. ಹಾಗೆ ನಡೆಯಬಲ್ಲವರಿಗಾಗಿ “ನುಡಿ’ ತಾನೇ ಮೊದಲು ಇರುವಂತಿದೆ ಎಂದ ಮೇಲೆ ಉಪನಿಷತ್ತಿನ ಶ್ರದ್ಧೆಯನ್ನು ಅದರ ಅನುಭವದ ಫಲ ಎನ್ನಬೇಕು. ತನ್ನೊಳಗೆ ತಾನೇ ಅನುಭವಿಸಿದ ಇಡಿತನದ ಫಲ ಎನ್ನಬೇಕು. ನಡೆ -ನುಡಿಗಳೊಂದಾಗಬೇಕೆನ್ನುವುದು ಅದು ಮೂಲದಲ್ಲಿ ಒಂದಾಗಿಯೇ ಇರುವುದರಿಂದ. ಅಂದ ಹಾಗೆ “ಪದ’ ಎಂಬ ಪದವನ್ನು ಗಮನಿಸಿ. “ಪದ’ ಎಂದರೆ ಶಬ್ದ. ಮಾತು. ನುಡಿ. “ಪದ’ ಎಂದರೆ ಪಾದ, ಕಾಲು, ನಡೆ. ಒಂದೇ ಪದದಲ್ಲಿ ನುಡಿಯೂ ಇದೆ. ನಡೆಯೂ ಇದೆ. ಎರಡು ಅರ್ಥಗಳೂ ಒಂದೇ ಪದದಲ್ಲಿವೆ. ಸೇರಿಕೊಂಡಿವೆ. ಪರಸ್ಪರ ಬಹಳ ಹತ್ತಿರ ಇವೆ. ಹತ್ತಿರ ಇರುವುದು ಎನ್ನುವುದು ಉಪನಿಷತ್ತೇ!
ರೇಖಾಚಿತ್ರ : ಎಂ. ಎಸ್. ಮೂರ್ತಿ
ಲಕ್ಷ್ಮೀಶ ತೋಳ್ಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.