ತುಳಜಾಪುರದಿಂದ ಭಕ್ತಾಪುರದವರೆಗೆ
Team Udayavani, Jun 16, 2019, 5:00 AM IST
ಬೆಂಗಳೂರಿನಿಂದ ದೆಹಲಿ ಅಲ್ಲಿಂದ ಕಾಠ್ಮಂಡು ತ್ರಿಭುವನ್ ವಿಮಾನ ನಿಲ್ದಾಣ ತಲುಪುವಾಗ ಸಂಜೆ ಸುಮಾರು 3 ಗಂಟೆಯಾಗಿತ್ತು. ಐದೇ ನಿಮಿಷದಲ್ಲಿ ಇಮಿಗ್ರೇಶನ್ ಮುಗಿಸಿ ಹೊರಬಂದಾಗ ಕಾಠ್ಮಂಡು ನಗರವಿಡೀ ಧೂಳಿನ ಮುಸುಕು. ಜನರೆಲ್ಲ ಮೂಗಿಗೆ ಬಟ್ಟೆ ಹಿಡಿದುಕೊಂಡು ಬಹಳ ರಹಸ್ಯಮಯವಾಗಿ ಕಾಣುತ್ತಿದ್ದರು. ಇನ್ನು ಕಾಠ್ಮಂಡುವಿನ ಕಟ್ಟಡಗಳ್ಳೋ ಒಂದಕ್ಕೂ ಸಿಮೆಂಟಿನ ಗಿಲಾವಾಗಿರಲಿಲ್ಲ. ಅವೆಲ್ಲ ಬೆತ್ತಲೆಯಾಗಿ ನಾಚಿಕೆ ಇಲ್ಲದೆ ನಿಂತಿದ್ದವು. ಬೀಸತೊಡಗಿದ್ದ ತಣ್ಣನೆಯ ಗಾಳಿಯಲ್ಲಿ ತ್ರಿತುಂಗ ಬಸ್ 8 ಕಿ. ಮೀ ದೂರ ಪ್ರಯಾಣ ಮಾಡಿ ಗೋಕರ್ಣ ಫಾರೆಸ್ಟ್ ರೆಸಾರ್ಟಿಗೆ ತಲುಪಿಸಿತ್ತು. ನಮ್ಮ ತಂಡಕ್ಕೆ ರೂಮು ಕೊಡಿಸಿ ಅರ್ಧಗಂಟೆಯಲ್ಲಿ ಸಿದ್ಧವಾಗಲು ಹೇಳಿದ್ದರು. ಕಾಠ್ಮಂಡು ನಗರದೊಳಗಿನಿಂದ ಭಕ್ತಾಪುರದ ತಲೇಜು ಭವಾನಿಯ ದೇವಾಲಯದ ಕಡೆಗೆ ವಾಹನ ಹೊರಟಿತ್ತು.
ತಲೇಜು ಭವಾನಿ ನೇಪಾಳದ ಜನಪ್ರಿಯ ದೇವತೆಗಳಲ್ಲಿ ಒಬ್ಬಳು. ತಲೇಜು ಭವಾನಿಯ ಮೂಲ ಮಹಾರಾಷ್ಟ್ರದ ತುಳಜಾಪುರ. ಅಲ್ಲಿನ ಭವಾನಿ ನೇಪಾಳದ ಭಕ್ತಾಪುರಕ್ಕೆ ಬಂದು ಸೇರಿದ ಕಥೆಯೇ ರೋಚಕ. ಈ ಕಥೆ ನಮ್ಮನ್ನು ಸಾವಿರ ವರ್ಷ ಹಿಂದಕ್ಕೆ ಕರೆದೊಯ್ಯುತ್ತದೆ. ಇಲ್ಲಿನ ಇನ್ನಿತರ ಶಕ್ತಿದೇವತೆಗಳಾದ ಮನಕಾಮನಾದೇವಿ, ಜೀವಂತ ದೇವತೆಕುಮಾರಿ ದೇವಿಯ ಆರಾಧಕರು ಬಹಳ ಮಂದಿ ಇಲ್ಲಿದ್ದಾರೆ.
ಕನಸಿನಲ್ಲಿ ಕಂಡವಳು
ನೇಪಾಳದ ಮಲ್ಲ ಅರಸರು ಕೊಂಕಣ ದೇಶದ ಕರ್ನಾಟಕಿ ವಂಶದ ನಾನ್ಯದೇವನ (ಕ್ರಿ.ಶ.1096) ವಂಶದವರಾಗಿದ್ದು ಸಿಮರೋಗಂಧವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಒಮ್ಮೆ ಜನಾಂಗದ ಪ್ರಧಾನ ಪೂರ್ವಪುರುಷ ನಾನ್ಯದೇವನ ಕನಸಿನಲ್ಲಿ ಕಂಡ ಭವಾನಿ ದೇವಿ ಯಂತ್ರವೊಂದನ್ನು ಈತನಿಗೆ ಪ್ರಸಾದಿಸಿದಳಂತೆ. ಅಂದಿನಿಂದ ತುಳಜಾಭವಾನಿ ಕರ್ನಾಟಕಿ ವಂಶದ ಕುಲದೇವತೆಯಾಗಿ ಪೂಜಿಸಲ್ಪಡುತ್ತಿದ್ದಳು. ಕ್ರಿ.ಶ. 11 ನೇ ಶತಮಾನದಲ್ಲಿ ಅಂದರೆ ನಾನ್ಯದೇವನ ಕಾಲದಲ್ಲಿ ಕರ್ನಾಟಕದ ಬಾದಾಮಿ ಚಾಲುಕ್ಯರು ಖ್ಯಾತಿಯ ಉತ್ತುಂಗದಲ್ಲಿದ್ದರು. ಇವರ ಸಾಮ್ರಾಜ್ಯ ಬಿಹಾರ, ಬಂಗಾಲದ ಕಡೆಗೂ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ನಾನ್ಯದೇವನ ಮುಖಾಂತರ ತುಳಜಾಭವಾನಿ ನೇಪಾಳ ತಲುಪಿರುವ ಸಾಧ್ಯತೆಗಳಿವೆ.
ಕ್ರಿ. ಶ. 1326 ರಲ್ಲಿ ಯಾಸುದ್ದೀನ್ ತುಘಲಕ್ ಸಿಮರೋಗಂಧದ ಮೇಲೆ ದಾಳಿ ಮಾಡಿ ಅಂದಿನ ರಾಜ ಹರಿಸಿಂಘದೇವನನ್ನು ನೇಪಾಳದ ಪರ್ವತಗಳ ಕಡೆಗೆ ಓಡಿಸಿದ್ದ. ಹರಿಸಿಂಘದೇವ ತಾನು ಅರಮನೆ ಬಿಡುವ ಮುನ್ನ ತನಗೆ ಆನುವಂಶಿಕವಾಗಿ ಬಂದಿದ್ದ ತುಳಜಾಪುರದ ಭವಾನಿಯ ಯಂತ್ರವನ್ನು ತನ್ನೊಂದಿಗೆ ಕೊಂಡೊಯ್ದನಂತೆ. ಆತನ ವಂಶಸ್ಥ ಮಹೇಂದ್ರಮಲ್ಲ ಕ್ರಿ.ಶ.1564 ರಲ್ಲಿ ಕಾಠ್ಮಂಡು ಲಕಾಯು ಮಾರ್ಗ, ಕಾಠ್ಮಂಡು ಗೋಕರ್ಣೇಶ್ವರ, ಭಕ್ತಾಪುರದ ದರ್ಬಾರ್ ಚೌಕಗಳಲ್ಲಿ ತ್ರಿಕೋಣರೇಖೆಗಳಲ್ಲಿ ವಾಸ್ತುಪ್ರಕಾರ ಸ್ಥಾಪಿಸಿದ. ಮತ್ತೂಂದು ದೇವಾಲಯ ಗುಜರಾತಿನ ಪಟಾನ್‌ನಲ್ಲಿದೆ. ಕ್ರಮೇಣ ತುಳಜಾ ಎಂಬ ಹೆಸರು ಅಪಭ್ರಂಶಗೊಂಡು ತಲೇಜುವಾಗಿದೆ ಎನ್ನಲಾಗುತ್ತದೆ. ಮತ್ತೂಂದು ದಂತಕಥೆಯ ಪ್ರಕಾರ ಅರಸನೊಂದಿಗೆ ತಲೇಜು ಭವಾನಿ ಪಗಡೆ ಆಟಕ್ಕೆ ಬರುತ್ತಿದ್ದಳಂತೆ. ಪದೇಪದೇ ಸೋಲುತ್ತಿದ್ದ ದೇವಿ ಅರಸನ ಕೋರಿಕೆಯ ಮೇರೆಗೆ ಇಲ್ಲಿ ನೆಲೆ ನಿಂತಳು.
ಭವಾನಿ ದೇವಾಲಯವು ತಾಂತ್ರಿಕ ಆಚರಣೆಗಳ ರಂಗಸ್ಥಳವಾಗಿ ನಡೆದುಬಂದಿದೆ ಎನ್ನಬಹುದು. ಜನ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ದೇವಿಗೆ ಕುರಿ- ಕೋಳಿಗಳನ್ನು ಬಲಿ ನೀಡುತ್ತಾರೆ. ಅಲ್ಲಿಂದ ಹೊರಡುವಾಗ ನಮ್ಮ ದೇವತೆಯನ್ನು ಕಂಡ ಖುಷಿ ಮನದಲ್ಲಿ ಇತ್ತು.
ಲಿಂಗರಾಜು ಡಿ. ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.